ಅಬ್ದುಲ್ ರಶೀದರ ಅದ್ಭುತ ಕಥೆಗಳು

ಕತೆಗಾರ ಅಬ್ದುಲ್ ರಶೀದ್ ಅವರ ‘ಅಂತರಾಷ್ಟ್ರೀಯ ಕುಂಬಳಕಾಯಿ ಕಥೆಗಳು’ ಕೃತಿಯಲ್ಲಿ ಸಾಕಷ್ಟು ಜೀವಂತಿಕೆ ತುಂಬಿದ್ದು ವಾಸ್ತವ ಜೀವನಕ್ಕೆ ತುಂಬಾ ಹತ್ತಿರವಾದ ಕೆಲವು ಪ್ರಸಂಗಗಳು ಕಾಣಸಿಗುತ್ತವೆ. ಲೇಖಕಿ, ಶಿಕ್ಷಕಿ ಸರ್ವ ಮಂಗಳ ಜಯರಾಮ್ ಅವರು ಕೃತಿಯ ವಿಮರ್ಶೆ ಓದುಗರ ಮುಂದೆ ತಂದಿಟ್ಟಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಅಂತರಾಷ್ಟ್ರೀಯ ಕುಂಬಳಕಾಯಿ ಕಥೆಗಳು
ಲೇಖಕರು : ಅಬ್ದುಲ್ ರಶೀದ್
ಪ್ರಕಾಶಕರು : ವೀರಲೋಕ ಬುಕ್ಸ್, ಬೆಂಗಳೂರು.

ಐದು ಸಣ್ಣ ಕಥೆಗಳಿರುವ ಈ ಕೃತಿಯ ಲೇಖಕರಾದ ಶ್ರೀಯುತ ಅಬ್ದುಲ್ ರಶೀದ್ ರವರು ವಿವೇಕ್ ಶಾನಭಾಗರ ಸ್ಟೋರಿ ಚಾಲೆಂಜ್ ಗಾಗಿ ಕೇವಲ ಮೂರೇ ವಾರಗಳಲ್ಲಿ ಬರೆದು ಮುಗಿಸಿದರಂತೆ. ಕೃತಿಯನ್ನು ಕೈಗೆತ್ತಿಕೊಂಡ ಕೂಡಲೇ ನನ್ನ ಗಮನ ಸೆಳೆದಿದ್ದು ಅದರ ಶೀರ್ಷಿಕೆ. ” ಅಂತಾರಾಷ್ಟ್ರೀಯ ಕುಂಬಳ ಕಾಯಿ” ಎಂಬ ಪುಸ್ತಕದಲ್ಲಿರುವ ಕೊನೆಯ ಕಥೆಯನ್ನೇ ನಾನು ಮೊದಲು ಓದಲು ಆಯ್ಕೆ ಮಾಡಿಕೊಂಡಿದ್ದು.

ಭೂತಾನ್ ಮೂಲದ ಮೂವರು ಹಸುಳೆಗಳ ಅಪಹರಣ ಹಾಗೂ ಅವರ ಮೇಲಿನ ಧಾರ್ಮಿಕ ದಬ್ಬಾಳಿಕೆಯ ಪ್ರಸಂಗವೊಂದು ಅಂತಾರಾಷ್ಟ್ರೀಯ ಕುಂಬಳಕಾಯಿಯಂತೆ ಬೃಹದಾಕಾರವಾಗಿ ಬೆಳೆದು ವೇಗವಾಗಿ ಹಬ್ಬುವ ಲಕ್ಷಣಗಳನ್ನಿಲ್ಲಿ ವ್ಯಂಗ್ಯವಾಗಿಯೂ, ವಿನೋದವಾಗಿಯೂ ಚಿತ್ರಿಸಿದ್ದಾರೆ.ಈ ಕಥೆಯ ನಿರೂಪಕ ಫೋಟೋಗ್ರಾಫರ್ ಹೇಳುವಂತೆ ಇವನ ಸ್ಟುಡಿಯೋ ಪೊಲೀಸ್ ಸ್ಟುಡಿಯೋ ಎಂದೇ ಹೆಸರಾಗಿರುತ್ತದೆ. ಕಾರಣ ಪೊಲೀಸ್ ಠಾಣೆಯ ಹಲವಾರು ಪ್ರಕರಣಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ತೆಗೆಯುವ ಫೋಟೋಗ್ರಾಫರ್ ಇವನೇ ಆಗಿರುತ್ತಾನೆ. ಈ ಕಥೆಯಲ್ಲಿ ಬರುವ ಪ್ರತಿಯೊಂದು ಘಟನೆಯನ್ನು ಸೂಕ್ಷ್ಮ ಗ್ರಾಹೀ ಫೋಟೋಗ್ರಾಫರ್ ಬಹು ಜಾಣತನದಿಂದ ದಾಖಲಿಸುತ್ತಾನೆ.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಯಾಗಿದ್ದ ಶಹನಾಜಳ ವೈಯಾರದ ನಡೆ, ಅವಳ ಉಡುಗೆ ತೊಡುಗೆಗಳು, ಅವಳು ಬಳಸುತ್ತಿದ್ದ ಅತ್ತರ್ ನ ಘಮಲು, ಮೂಗಿನಲ್ಲಿದ್ದ ಅಲೀಕತ್ತಿನ ಹೊಳಪಿನಲ್ಲೇ ತೂರಿ ಬರುತ್ತಿದ್ದ ಕಾಮ ಕಸ್ತೂರಿಯ ಕಿರಣಗಳು ಮುಂತಾದ ವಿವರಗಳು ಓದುಗರಿಗೆ ಕಚಗುಳಿ ಇಡುತ್ತವೆ.

ಮಹಿಳೆಯರ ಹಕ್ಕು, ಮಕ್ಕಳ ಹಕ್ಕು ಎಂದೆಲ್ಲಾ ಓಡಾಡಿಕೊಂಡಿದ್ದ ಶಹನಾಜ್ ಳ ಮೇಲಿನ ಏ. ಎಸ್. ಐ. ಮಾಲಿಂಗಭಟ್ಟರ ವ್ಯಾಮೋಹ ಹಾಗೂ ರೊಟೇರಿಯನ್ ಮುತ್ತಪ್ಪನವರ ಕಲ್ಪನೆಯ ಕನವರಿಕೆಗಳು, ಅವರಿಬ್ಬರೂ ಸೇರಿ ಬೆಳದಿಂಗಳ ಇರುಳಲ್ಲಿ ಶಹನಾಜ್ ಳ ನಶೆ ಏರಿಸಿಕೊಂಡು ನಡೆಸುತ್ತಿದ್ದ ಗಾನ (ಪಾನ) ಗೋಷ್ಠಿ , ಪೊಲೀಸ್ ಇಲಾಖೆಯ ಏ. ಎಸ್.ಐ.ಮಾಲಿಂಗಭಟ್ಟರ ಹವ್ಯಾಸ, ಸ್ವಭಾವ, ಅಭಿರುಚಿ, ದೌರ್ಬಲ್ಯಗಳ ಬಗ್ಗೆ ತಿಳಿಸುತ್ತಾ ಟಿಬೆಟಿಯನ್ ಕ್ಯಾಂಪ್ ನ ಮೂವರು ಹಸುಳೆಗಳ ಅಪಹರಣ ಪ್ರಸಂಗ ಹಾಗೂ ಅವರು ನೆಲೆ ಕಂಡುಕೊಂಡ ಮಾಜಿ ಸೈನಿಕನ ಹೆಂಡತಿ…ಕಾಡಿನಲ್ಲಿದ್ದ ಬಿಡಾರದ ಒಡತಿಯ ಬಗ್ಗೆ ಕೂಲಂಕುಷವಾಗಿ ಹೇಳುತ್ತಾ ಸಾಗುತ್ತಾನೆ. ತನ್ನ ಹೆಸರಿಗೆ ಸೇರಿಕೊಂಡ ಉಪ ನಾಮಧೇಯ “ಡಿ ಸಿಲ್ವಾ” ಪೋರ್ಚುಗೀಸರ ಕೊಡುಗೆ ಎಂದು ಹೇಳುವುದನ್ನು ಮರೆಯುವುದಿಲ್ಲ. ಕುತೂಹಲಭರಿತವಾದ ಕಥೆ ನಿಲುಗಡೆಯೇ ಇಲ್ಲದಂತೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.ಮಹಾ ಕುಡುಕನಾದ ಮಾಜಿ ಸೈನಿಕ ಇತ್ತ ಸಂಬಳವೂ ಇಲ್ಲದೆ ಅತ್ತ ಪಿಂಚಣಿಯು ಇಲ್ಲದೆ ತನ್ನ ಹೆಂಡತಿಯ ದುಡಿಮೆಯಲ್ಲಿ ಕಾಲ ಕಳೆಯುತ್ತಾ ರಾತ್ರಿ ಕುಡಿದು ಬಂದು ಹೆಂಡತಿಯ ಮೇಲೆ ಎಸಗುತ್ತಿದ್ದ ಕ್ರೌರ್ಯ ವಿಲ್ಲಿ ಕಂಡೂ ಕಾಣದಂತೆ ಅನಾವರಣಗೊಂಡಿದೆ.

ಭೂತಾನ್ ನಿಂದ ಬಂಧಿಸಿ ತಂದ ಹಸುಳೆಗಳ ಮೇಲಿನ ಲಾಮಾನ ಕ್ರೌರ್ಯ, ಮಾಜಿ ಸೈನಿಕ ತನ್ನ ಹೆಂಡತಿಯ ಮೇಲಿನ ಕ್ರೌರ್ಯದ ಮುಂದೆ ಆ ಮಹಿಳೆ ಮೂವರು ಹಸುಳೆಗಳ ಆರೈಕೆ ಮಾಡಿ, ಆಹಾರ ನೀಡಿ, ಮಾನವೀಯತೆಯನ್ನು ಮೆರೆದ ರೀತಿ ಅನನ್ಯವಾದದ್ದು. ತನ್ನ ಗಂಡನ ದುಡಿಮೆ ಏನೂ ಇಲ್ಲದಿದ್ದರೂ ಕಾಫಿ ತೋಟದಲ್ಲಿ ಕೂಲಿ ಮಾಡಿ ಅವನನ್ನು ಸಾಕುತ್ತಿದ್ದ ಮಾತೃ ಹೃದಯಿ ಅವಳಾಗಿದ್ದಳು. ಆದಾಗಿಯೂ ಅವನು ಪ್ರತಿ ರಾತ್ರಿ ಕುಡಿದು ಬಂದು ನೀಡುತ್ತಿದ್ದ ಹಿಂಸೆಯ ಗುರುತಾಗಿ ಉಳಿದಿದ್ದ ಬೆನ್ನ ಮೇಲಿನ ಬಾಸುಂಡೆಗಳು, ನೆತ್ತರು ಹೆಪ್ಪುಗಟ್ಟಿದ ಗೀರು ಗಾಯಗಳು, ಅವಳ ಎದೆ ಸೀಳಿನ ಮೇಲಿದ್ದ ಕೆಟ್ಟ ಗುರುತುಗಳು ಅವಳ ಮೇಲಿನ ಕ್ರೌರ್ಯಕ್ಕೆ ಸಾಕ್ಷಿಯಾಗಿದ್ದವು.ಪೋಲೀಸ್ ವಿಚಾರಣೆಯ ವೇಳೆ ಅವಳ ತೆರೆದೆದೆಯೂ ರಾಬಿನ್ ನ ಕ್ಯಾಮರಾದಲ್ಲಿ ಸೆರೆಯಾಗಿತ್ತು. ವ್ಯವಸ್ಥೆಯ ನಿರ್ಲಕ್ಷತನ, ತಣ್ಣಗಿನ ಕ್ರೌರ್ಯ, ಅಸಹಾಯಕತೆ ಮೂಕ ಸಾಕ್ಷಿಯಂತಿದ್ದವು.

ಮತ್ತೊಂದು ಗಮನಸೆಳೆದ ಕಥೆಯೆಂದರೆ ಕಾಮ್ರೆಡ್ ಆಲಿ ರೈಟರ ಕೆಂಪು ಕಾರಿಡಾರ್. ಯಾವುದೋ ಒಂದು ಸಿದ್ಧಾಂತಕ್ಕೆ ಕಟ್ಟು ಬಿದ್ದು ಹಲವಾರು ನೋವು, ನಿಂದೆ, ನಿರಾಸೆ, ಅಪಮಾನ, ಸೋಲಿನ ಭೀತಿ ಕಾಡುತ್ತಿದ್ದರೂ ಜೀವನದ ಕೊನೆಯವರೆಗೂ ಭರವಸೆಯ ಕಿಡಿಗಳನ್ನು ಕಣ್ಣಲ್ಲೇ ಹೊತ್ತು ಸಾಗುವ ಕಾಮ್ರೆಡ್ ಆಲಿ ರೈಟರು ಈ ಕಥೆಯಲ್ಲಿ ಬರುವ ಪ್ರಮುಖ ಪಾತ್ರಧಾರಿ. ಸರ್ಕಾರಿ ನೌಕರಿಯಲ್ಲಿರುವ ದೂರದ ಸಂಬಂಧಿ ತರುಣ ಕಥೆಗಾರನಿಗೆ ತನ್ನ ಮಗಳು ಖತೀಜಳನ್ನು ಮದುವೆ ಮಾಡಿಕೊಡಬೇಕೆಂಬ ಹಂಬಲ ಹೊತ್ತ ಕಾಮ್ರೆಡ್ ಆಲಿ ಮಗಳು ಖತೀಜ ಕಾಫಿ ತೋಟದ ವಲಸೆ ಕಾರ್ಮಿಕ ಅಸ್ಸಾಂ ನ ದಲಿತನೊಂದಿಗೆ ಓಡಿ ಹೋದಾಗ ಅವಳ ದುರವಸ್ಥೆಯನ್ನು ಕಂಡು ನಿರಾಶನಾಗುತ್ತಾನೆ. ಇದೇ ನೋವಿನಲ್ಲಿ ತನ್ನ ಹೆಂಡತಿ ಅಮ್ಮಾಯಿ ಮರುಗುತ್ತಿದ್ದಾಗ ಅವಳ ದುಃಖ ಕಂಡು ಹತಾಶನಾಗುತ್ತಾನೆ. ಆದರೆ ತಾಳ್ಮೆ ಹಾಗೂ ಆಶಾ ಭಾವನೆಯನ್ನು ಮಾತ್ರ ಕಳೆದುಕೊಳ್ಳುವುದಿಲ್ಲ. ಹೃದಯದಲ್ಲಿ ಬೆಟ್ಟದಷ್ಟು ನೋವಿದ್ದರೂ, ಮಡುಗಟ್ಟಿದ ದುಃಖವಿದ್ದರೂ, ಅಳಿಯನಾಗಬೇಕಿದ್ದ ದೂರದ ಸಂಬಂಧಿ ತರುಣನಿಗೆ ಪ್ರತಿ ಶುಕ್ರವಾರ ವಿವಿಧ ಬಗೆಯ ಭಕ್ಷ್ಯ ಭೋಜನಗಳನ್ನು ತಲುಪಿಸುತ್ತಿದ್ದ ಕಾಮ್ರೇಡ್ ಆಲಿ ದಂಪತಿಯ ಹೃದಯವಂತಿಕೆ ಎದ್ದು ಕಾಣುತ್ತದೆ. ಹಲವಾರು ಒತ್ತಡ ,ಸೋಲು ಹಾಗೂ ನಿರಾಶೆಯ ಕಾರ್ಮೋಡಗಳು ಎದೆಯಲ್ಲಿ ದಟ್ಟೈಸಿದ್ದರೂ ಮುಂಬರುವ ಒಳ್ಳೆಯ ದಿನಗಳಿಗಾಗಿ ಕಾಯುತ್ತಾ ಕಾಮ್ರೆಡ್ ಆಲಿ ಬದುಕಿನ ಜೊತೆಗೆ ಹೆಜ್ಜೆ ಹಾಕುತ್ತಾನೆ.

ರಶೀದ್ ರ ಇಲ್ಲಿನ ಕಥೆಗಳಲ್ಲಿ ಸಾಕಷ್ಟು ಜೀವಂತಿಕೆ ತುಂಬಿದ್ದು ವಾಸ್ತವ ಜೀವನಕ್ಕೆ ತುಂಬಾ ಹತ್ತಿರವಾದ ಕೆಲವು ಪ್ರಸಂಗಗಳು ಕಾಣಸಿಗುತ್ತವೆ. ನಮ್ಮ ನಿಮ್ಮ ಜೀವನದ ನಡುವೆ ಇಂತಹ ಅದ್ಭುತ ಕಥೆಗಳಿವೆ ಎಂದು ಆಶ್ಚರ್ಯವೆನಿಸುವ ರೀತಿಯಲ್ಲಿ ಕಥೆಗಳನ್ನು ಕಟ್ಟಿರುವ ಅಬ್ದುಲ್ ರಶೀದ್ ಒಬ್ಬ ಅದ್ಭುತ ಕಥೆಗಾರನೆಂದೇ ಹೇಳಬಹುದು. ಇಲ್ಲಿನ ಕಥೆಗಳು ಒಂದು ಪ್ರದೇಶಕ್ಕೆ, ಒಂದು ನಾಡಿಗೆ, ಒಂದು ಕಾಲಕ್ಕೆ ಸೀಮಿತವಾಗದೆ ಜಾಗತಿಕ ವಿದ್ಯಮಾನಗಳನ್ನು ಒಳಗೊಂಡ ಕಥೆಗಳು ಓದುಗರಿಗೆ ಆಪ್ತ ಅನುಭೂತಿಯನ್ನು ನೀಡುತ್ತವೆ. ಇಲ್ಲಿನ ಕಥೆಗಳನ್ನು ಓದುತ್ತಾ ಒಂದು ವಿಭಿನ್ನ ಕಥಾ ಹಂದರಕ್ಕೆ ಪಯಣಿಸಿದಂತೆ ಹಾಗೂ ಅಲ್ಲಿಂದ ಮತ್ತೊಂದು ಕತೆಗೆ ಹೋದಾಗ ಮತ್ತೊಂದು ಕಥಾ ಪ್ರಪಂಚಕ್ಕೆ ಪ್ರವೇಶಿಸಿದಂತಹ ಅನುಭವ ವೇದ್ಯವಾಗುತ್ತದೆ.

ಇಲ್ಲಿನ ಕಥೆಗಳಲ್ಲಿ ಮನೋಹರವಾದ ಅರಬ್ ಕಡಲಿನ ದ್ವೀಪಗಳ ಸೊಗಸಾದ ವರ್ಣನೆ ಇದೆ. ಯುರೋಪಿನ ಮಾಂಟೆನಿಗ್ರೋದ ಸುಂದರಿ ಅನುಪಮ ರೂಪದರ್ಶಿ ಇದ್ದಾಳೆ ,ಅವಳ ಅವಳಿ ಸಹೋದರನ ನಾಪತ್ತೆಯ ವಿಚಾರವಾಗಿ ರೂಪದರ್ಶಿಯ ದುಃಖ ಸಂಕಟಗಳಿವೆ, ಕಚ್ಚಾ ತೈಲ ಸಾಗಿಸುವ ಅಂತರಾಷ್ಟ್ರೀಯ ಹಡಗುಗಳಿವೆ, ಮುತ್ತುಕೋಯಾನ ಅಮಾಯಕತ್ವ, ನುರಿತ ಇತಿಹಾಸಕಾರ ಮುಕ್ತಿಯಾರರ ಸಲಹೆ, ಸಂದೇಶಗಳಿವೆ. ಪೋರ್ಚುಗೀಸಿನ ಡಿ ಸಿಲ್ವಾ ಇದ್ದಾನೆ, ಜರ್ಮನ್ ಗೆಳತಿ ಕ್ರಿಸ್ಟಿನಾಳೊಂದಿಗಿನ ಅಂಗಮರ್ಧಕಿ ಕಾರ್ತ್ಯಾಯಿನಿಯ ಸಲಿಂಗ ಕಾಮದ ಉತ್ಕಟಾವಸ್ಥೆಯ ಅಭೀಪ್ಸೆಯಿದೆ, ಕ್ರಿಸ್ಟಿನಾ ಕೊನೆಯ ಬಾರಿ ರೈಲು ಹತ್ತಿ ಹೋಗುವಾಗ ಕಾರ್ತ್ಯಾಯಿನಿಗೆ ಕೊಟ್ಟ ಕೈಚೀಲ, ಅದರಲ್ಲಿದ್ದ ಪುರುಷ ಜನನಾಂಗದ ಲೈಂಗಿಕ ಆಟಿಕೆಯನ್ನು ಸಾಕು ನಾಯಿ ಹೊತ್ತೊಯ್ದು ಅಪಹಾಸ್ಯಕ್ಕೀಡು ಮಾಡುವ ನವಿರು ಹಾಸ್ಯ ಪ್ರಸಂಗವಿದೆ. ಕವಿ ಸಾಮ್ರಾಟ ಕಥೆಯಲ್ಲಿ ಸಾಹಿತ್ಯ ಕೃತಿಯೊಂದು ಓದುಗನನ್ನು ಯಾವ ರೀತಿ ಆವರಿಸಿಕೊಂಡು, ಭ್ರಮೆಯ ಲೋಕ ಸೃಷ್ಟಿಸಿ, ವಾಸ್ತವ ಜಗತ್ತಿನ ಇರುವನ್ನು ಮರೆಮಾಚಿಸಿ ಅಲೌಕಿಕ, ಅತಾರ್ಕಿಕ ಅನುಭವವನ್ನು ಉಂಟು ಮಾಡುವ ಸಂದರ್ಭ ಕುತೂಹಲಕಾರಿಯಾಗಿ ಮೂಡಿಬಂದಿದೆ.

ಒಟ್ಟಾರೆ ಇಲ್ಲಿರುವ ಐದೂ ಕಥೆಗಳು ವಿಭಿನ್ನ ನೆಲೆಗಟ್ಟಿನಿಂದ ಮೂಡಿಬಂದಿದ್ದು, ಪ್ರತಿಯೊಂದು ಕಥೆಯೂ ಪ್ರತ್ಯೇಕ ಆಯಾಮದೊಂದಿಗೆ ಓದುಗನೊಂದಿಗೆ ಮುಖಾಮುಖಿಯಾಗಿ ತೆರೆದುಕೊಳ್ಳುತ್ತದೆ. ಇಂತಹ ಅದ್ಭುತ ಕಥೆಗಳನ್ನು ಕೇವಲ ಮೂರು ವಾರಗಳಲ್ಲಿ ಕಲಾತ್ಮಕವಾಗಿ ಹೆಣೆದು ಸಾಹಿತ್ಯ ಲೋಕಕ್ಕೆ ಅರ್ಪಿಸಿರುವ ಲೇಖಕರಾದ ಶ್ರೀಯುತ ಅಬ್ದುಲ್ ರಶೀದ್ ರವರು ಅಭಿನಂದನಾರ್ಹರು. ಇವರ ಲೇಖನಿಯಿಂದ ಮತ್ತಷ್ಟು ಕಥೆ ಕಾದಂಬರಿಗಳು ಮೂಡಿಬರಲಿ ಎಂಬುದು ನನ್ನ ಶುಭ ಹಾರೈಕೆ. ಹಾಗೆಯೇ ಈ ಕಥಾ ಸಂಕಲನವನ್ನು ಪ್ರಕಟಿಸಿದ ವೀರಲೋಕ ಪಬ್ಲಿಕೇಶನ್ಸ್ ನ ಪ್ರಕಾಶಕರಾದ ವೀರಕಪುತ್ರ ಶ್ರೀನಿವಾಸ್ ರವರಿಗೂ ಹೃತ್ಪೂರ್ವಕ ನಮನಗಳು.


  • ಸರ್ವ ಮಂಗಳ ಜಯರಾಮ್ – ಶಿಕ್ಷಕಿ, ಗೌರಿಬಿದನೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW