ಕ್ಯಾಮರಾ ಹಿಡಿದು ಮಾಕಳಿ ಬೆಟ್ಟಕ್ಕೆ ಹೋದ ಪರಿಸರವಾದಿ ಚಿದು ಯುವ ಸಂಚಲನ ಅವರ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದ ಚಂದದ ಫೋಟೋ ಮತ್ತು ಬರಹವನ್ನು ತಪ್ಪದೆ ಮುಂದೆ ಓದಿ…
ಮಾರ್ಚ್ ಮೂರರಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವನ್ಯಜೀವಿ ಸಪ್ತಾಹದಲ್ಲಿ ಭಾಗವಹಿಸಿ ಹಿಂತಿರುಗುವಾಗ ತುಂಬಾ ವರ್ಷಗಳ ನಂತರ ಮುದ್ದೇನಹಳ್ಳಿಯಿಂದ ಮಳೆಕೋಟೆ ರಸ್ತೆಗೆ ಸಂಚರಿಸುವ ಮನಸಾಯಿತು.
ಏಳೆಂಟು ವರ್ಷಗಳ ಹಿಂದೆ ಆ ಭಾಗದಲ್ಲಿ ಹೆಚ್ಚಾಗಿ ಸಂಚರಿಸುತ್ತಿದ್ದು ಚೆನ್ನಾಗಿರಿ ಬೆಟ್ಟಕ್ಕಾಗಿ. ಚಿಕ್ಕರಾಯಪ್ಪನಹಳ್ಳಿ ಭಾಗದಿಂದ ಬೆಟ್ಟವನ್ನು ಹತ್ತಿ ಇಳಿಯುವಾಗ ಸಾಧು ಮಠದ ಭಾಗವಾಗಿ ಇಳಿದು ಬಸ್ಸಿಗೆ ಹಿಂತಿರುಗುತ್ತಿದ್ದೆವು. ಇದು ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮುಖ್ಯ ಕಾರಣ. ಮಿಕ್ಕಂತೆ ಆ ರಸ್ತೆಯನ್ನು ನಾನು ಕಾಣುತ್ತಿದ್ದದ್ದು ನಂದಿ ಬೆಟ್ಟದಿಂದ ಗಣಿಗಾರಿಕೆಯ ಸಲುವಾಗಿ. ತದನಂತರ ಬಹುಷಃ ಆರು ವರ್ಷಗಳು ಕಳೆದಿರಬಹುದು ಅನಿಸುತ್ತೆ ಚೆನ್ನಗಿರಿ ಬೆಟ್ಟದಲ್ಲಿ ಕಾಲೇಜು ವಿದ್ಯಾರ್ಥಿಯ ಸಾವಂದು ಸಂಭವಿಸಿತ್ತು. ತದನಂತರ ನಾವು ನಮ್ಮ ತಂಡದ ಮೂಲಕ ಅರಣ್ಯ ಇಲಾಖೆಗೆ ಅಕ್ರಮ ಪ್ರವೇಶವನ್ನು ನಿಷೇಧಿಸುವ ಸಲುವಾಗಿ ಮನವಿ ನೀಡಲಾಯಿತು. ತದನಂತರ ನಾನು ಸಹ ಆ ಭಾಗದಲ್ಲಿ ಹೆಚ್ಚು ಹೊಡಾಡುವುದನ್ನು ಬಿಟ್ಟೆ. ಸಾವಿನ ಜೊತೆ ಮಳೆ ಬಿದ್ದ ಸಂದರ್ಭದಲ್ಲಿ ಹೆಚ್ಚು ಯುವಜನರು ಅಲ್ಲಿ ಸೇರುತ್ತಿದ್ದರು. ಅಲ್ಲಿನ ಸಹಜತೆಯನ್ನೇ ಹಾಳು ಮಾಡಿ ಬೆಟ್ಟಕ್ಕೆ ಅನೇಕ ತೊಂದರೆಯನ್ನು ಉಂಟು ಮಾಡಿದ್ದರು.
ಇದನ್ನೆಲ್ಲ ನೋಡಿ ಸಹಿಸಲಾಗದೆ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಲೇ ಬೇಕಾಗಿತ್ತು ಮನವಿ ಏನೋ ಕೊಟ್ಟೆವು. ಆದರೆ ಕೆಲವರು ವಾಚರ್ ಗಳ ಕಣ್ಣು ತಪ್ಪಿಸಿ, ಅವರಿಗೆ ಹಣ ನೀಡಿ ಮತ್ತೆ ಆದೆ ಚಾಳಿಯನ್ನು ಪ್ರಾರಂಭಿಸಿದರು. ತದನಂತರ ಮತ್ತೆ ನಾವು ಅರಣ್ಯ ಇಲಾಖೆಗೆ ದೂರು ನೀಡಿದೆವು ಇದೇ ರೀತಿ ಕೆಲದಿನಗಳು ನಡೆಯುತ್ತಲೇ ಇತ್ತು ಮತ್ತು ಕೆಲಸದ ಒತ್ತಡದಲ್ಲಿ ಬೇರೆ ವಿಚಾರಗಳ ಕಡೆ ಗಮನ ಹರಿಸಿದ ಕಾರಣ ಇದರ ಬಗ್ಗೆ ಹೆಚ್ಚು ಗಮನವಹಿಸಲು ಆಗಲಿಲ್ಲ.

ಆದರೆ ಮಾರ್ಚ್ ಮೂರರಂದು ಈ ಎಲ್ಲಾ ನೆನಪುಗಳನ್ನು ಮೆಲುಕು ಹಾಕುತ್ತಾ ಸಂಚಾರ ಮಾಡುತ್ತಿದ್ದ ನನಗೆ ಆ ಭಾಗದ ಗಣಿಗಾರಿಕೆ ತುಂಬಾ ಮನಸ್ಸಿಗೆ ನೋವುಂಟು ಮಾಡಿತು. ಈಗಲೂ ಪಂಚಗಿರಿಗಳ ಮಡಿಲಲ್ಲಿ ತಡೆಯುತ್ತಿರುವ ಈ ಪ್ರಕೃತಿಯ ಮೇಲಿನ ದೌರ್ಜನ್ಯ ಸಹಿಸಲಾಗುವುದಿಲ್ಲ.
ಇದೇ ಬೇಸರದಲ್ಲಿ ಬರುತ್ತಿದ್ದ ನನಗೆ ಜಾಲರಿಯ ಸುಗಂಧವು ಮನಸೆಳೆಯಿತು. ಬೆಟ್ಟದಿಂದ ಗಾಳಿ ಬೀಸಿದೊಡನೆ ಅದರ ಸುವಾಸನೆ ಮನಸನ್ನು ಆವರಿಸಿ ಬಿಟ್ಟಿತು. ಪ್ರತಿ ವರ್ಷವೂ ಹೂ ಬಿಡುವ ಸಮಯಕ್ಕೆ ನಾನು ಬೆಟ್ಟದಲ್ಲಿ ಹಾಜರಾಗುತ್ತೇನೆ. ಈ ಬಾರಿ ಮರೆತುಬಿಟ್ಟಿದ್ದೆ ನಾನು ಮರೆತರೂ ನನ್ನನ್ನು ಸೆಳೆಯುವುದನ್ನು ಜಾಲರಿ ಮರೆಯಲಿಲ್ಲ.
ಸಂಚಾರದಲ್ಲಿದ್ದ ನಾನು ಹಾಗೆ ಗಾಡಿ ನಿಲ್ಲಿಸಿ ಬೆಟ್ಟ ಹತ್ತಿ ಕಣ್ತುಂಬಿ ಕೊಳ್ಳೋಣ ಎಂಬುವ ಆಸೆ ಆದರೆ ಕೆಲಸದ ಒತ್ತಡ ಬೇಗ ಊರಿಗೆ ತಲುಪಲೇ ಬೇಕಾದ ಅನಿವಾರ್ಯತೆ. ಹಾಗೆ ಕಂಡಷ್ಟು ದೂರ ಕಣ್ಣು ಆಡಿಸುತ್ತಾ ದೂರದಿಂದಲೇ ಕಣ್ತುಂಬಿಕೊಂಡು ಬೇಸರವಾದರೂ ಮತ್ತೆ ಆದಷ್ಟು ಬೇಗ ನೋಡೋಣ ಎಂಬ ಭರವಸೆಯೊಂದಿಗೆ ಹಿಂತಿರುಗಿದೆ.
ಬಂದಮೇಲೆ ಮರೆತು ಸುಮ್ಮನಾಗುವುದುಂಟೆ , ನಮ್ಮ ಭಾಗದಲ್ಲಿ ಜಾಲರಿ ಕಂಡುಬರುವುದು ಎರಡು ಬೆಟ್ಟಗಳಲ್ಲಿ ಮಾತ್ರ ಅದು ಚೆನ್ನಾಗಿರಿ ಒಂದಾದರೆ ಇನ್ನೊಂದು ಮಾಕಳಿ ಬೆಟ್ಟ. ಮತ್ತೆ ಬಿಡುವು ಮಾಡಿಕೊಂಡು ಕ್ಯಾಮರಾ ಹಿಡಿದು ಮಾಕಳಿ ಬೆಟ್ಟಕ್ಕೆ ಹೋಗಿ ಮನಸಾರ ಆನಂದಿಸಿ ಕೈ ತುಂಬಾ ಹಿಡಿದು ಮನಸ್ಸಿನ ತುಂಬಾ ಇದನ್ನು ತುಂಬಿಕೊಂಡು ಬಿಟ್ಟೆ. ಅಲ್ಲಿಂದ ಬಂದ ನಂತರವೂ ಅದರ ಆವರಿಸುವಿಕೆ ಎಷ್ಟಿತೆಂದರೆ ಯಾವುದೇ ವಾಸನೆ ಕಂಡರೂ ಜಾಲಾರಿಯೇ ಭಾಸವಾಗುವವರೆಗೂ. ಬಹುಶಃ ಮೂರ್ನಾಲ್ಕು ದಿನ ಇದೆ ಅಮಲಿನಲ್ಲಿದ್ದೆ ಎನಿಸುತ್ತದೆ ನನಗೆ. ಬಹುಶಹ ಜಾಲರಿಯ ಅನುಭವ ಎಷ್ಟು ಹಂಚಿಕೊಂಡರು ಕಮ್ಮಿ ಎನಿಸುತ್ತದೆ ನನಗೆ ಫೋಟೋಗಳನ್ನು ಹಾಕುವಾಗ ಯಾಕೋ ಒಂಚೂರು ಬರೆದು ಹಾಕುವ ಅನಿಸಿತು ಹಾಗಾಗಿ ಬರೆದೆ ಅಷ್ಟೇ.
- ಚಿದು ಯುವ ಸಂಚಲನ – ಪರಿಸರವಾದಿ, ಲೇಖಕರು, ದೊಡ್ಡಬಳ್ಳಾಪುರ.
