ಗರ್ಭಕಂಠದ ಸಮಸ್ಯೆ ಎಂದರೇನು?

ಗರ್ಭಕಂಠ ಎಂದರೆ ಹೆಣ್ಣಿನ ಗರ್ಭಕೋಶದ ಪ್ರವೇಶದ್ವಾರ. ವೀರ್ಯಾಣು ಒಳ ಹೋಗಲು ಮತ್ತು ಶಿಶು ಹೊರಬರಲು ಬಾಗಿಲಿನಂತಿರುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು Cervical Incompetence ಎಂಬ ಹೆಸರಿನಿಂದ ಕರೆಯುತ್ತಾರೆ.ಇನ್ನಷ್ಟು ವಿಷಯಗಳನ್ನ ಸುದರ್ಶನ್ ಪ್ರಸಾದ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ತಾಯಿ ಮತ್ತು ತಾಯ್ತನದ ಕುರಿತಾದ ಬರವಣಿಗೆ ದಿನೇ ದಿನೇ ಅಕ್ಷಯವಾಗುತ್ತಲೇ ಇದೆ. ತಾಯ್ತನದ ಮಹತ್ವವೇ ಅಂತದ್ದು. ಪ್ರತೀ ಹೆಣ್ಣಿಗೂ ತಾಯ್ತನ ಎನ್ನುವುದು ದೈವದತ್ತ ಉಡುಗೊರೆ. ಆದರೆ ಸಣ್ಣ ಪುಟ್ಟ ದೈಹಿಕ ಕಾರಣಗಳಿಂದಾಗಿ ತಾಯ್ತನದಿಂದ ವಂಚಿತರಾಗುವ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಅಂತಹ ಅನೇಕರಲ್ಲಿ ಸಮಸ್ಯೆಯ ಕಾರಣ ಚಿಕ್ಕದಾದರೂ ಪರಿಣಾಮ ದೊಡ್ಡದೇ ಆಗಿರುವುದು ಬೇಸರದ ಸಂಗತಿ. ಅದರಂತೆ ಸಣ್ಣ ಸಮಸ್ಯೆಗಳ ಪಟ್ಟಿಯಲ್ಲೇ ಬರುವ ಗರ್ಭಕಂಠದ ಸಮಸ್ಯೆ ಇಂದಿನ ಬರಹದ ವಿಷಯ.

ಗರ್ಭಕಂಠ ಹೆಣ್ಣಿನ ಗರ್ಭಕೋಶದ ಪ್ರವೇಶದ್ವಾರ. ವೀರ್ಯಾಣು ಒಳಹೋಗಲು ಮತ್ತು ಶಿಶು ಹೊರಬರಲು ಬಾಗಿಲಿನಂತಿರುವ ಅದಕ್ಕೆ ಗರ್ಭವನ್ನು ಸುರಕ್ಷಿತವಾಗಿ ಕಾಪಿಡುವ ಕರ್ತವ್ಯವೂ ಇದೆ.‌ ಇದು ಮೃದುವಾದ, ಹಿಗ್ಗುವ ಮಾಂಸಖಂಡಗಳಿಂದ ಮಾಡಲ್ಪಟ್ಟಿದ್ದು ಅಗತ್ಯಕ್ಕೆ ತಕ್ಕಂತೆ ತೆರೆದುಕೊಳ್ಳುವ ಮತ್ತು ಮುಚ್ಚಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಮುಖ್ಯವಾಗಿ ಗರ್ಭಾವಸ್ಥೆಯ ಸಂದರ್ಭದಲ್ಲಿ ಯಾವುದೇ ಬಾಹ್ಯ ವಸ್ತುಗಳು ಗರ್ಭಕೋಶದ ಒಳಗೆ ಪ್ರವೇಶಿಸಿದಂತೆ ತಡೆಯುವ ಮತ್ತು ಗರ್ಭ ದ್ರವಗಳು ಹೊರಗೆ ಸ್ರವಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಈ ಗರ್ಭಕಂಠದ್ದು. ಇಂತಹ ಗರ್ಭಕಂಠ ತನ್ನ ಸಾಮರ್ಥ್ಯದಲ್ಲಿ ಕುಗ್ಗಿ, ಸರಿಯಾಗಿ ಕಾರ್ಯ ನಿರ್ವಹಿಸಲು ವಿಫಲವಾಗುವುದನ್ನು Weak cervix ಅಥವಾ ವೈದ್ಯಕೀಯ ಭಾಷೆಯಲ್ಲಿ Cervical Incompetence ಎಂಬ ಹೆಸರಿನಿಂದ ಕರೆಯುತ್ತಾರೆ. ಇದು ಹೆಚ್ಚಾಗಿ ಗರ್ಭಾವಸ್ಥೆಯ ಎರಡನೇ ತ್ರೈಮಾಸಿಕ ಅಥವಾ ಮೂರನೇ ತ್ರೈಮಾಸಿಕದ ಆರಂಭದಲ್ಲಿ ಕಂಡುಬರುತ್ತದೆ.

ಫೋಟೋ ಕೃಪೆ :google

ಈ ಸಮಸ್ಯೆ ಉಂಟಾಗಲು ಯಾವುದೇ ನಿರ್ದಿಷ್ಟ ಕಾರಣಗಳಿಲ್ಲ. ಅನೇಕರಲ್ಲಿ ಇದು ಜನ್ಮಜಾತವಾಗಿದ್ದು Mullerian duct ಹಂತದಲ್ಲೇ ಅಸಮರ್ಪಕ ಬೆಳವಣಿಗೆಯಿಂದಾಗಿ ಉಂಟಾಗಿರುತ್ತದೆ. ಉಳಿದಂತೆ ಪದೇ ಪದೇ ಗರ್ಭಪಾತಕ್ಕೆ ಒಳಗಾದವರಲ್ಲಿ, ಎರಡು ಅಥವಾ ಎರಡಕ್ಕಿಂತ ಹೆಚ್ಚು ಸ್ವಾಭಾವಿಕ ಪ್ರಸವ ನಡೆದವರಲ್ಲಿ, ಅವಧಿ ಪೂರ್ವ ಮಗುವಿನ ಜನನವಾಗಿದ್ದಲ್ಲಿ, ಅಥವಾ ಗರ್ಭಕಂಠದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಲ್ಲಿ ಇದು ಕಂಡುಬರುತ್ತದೆ. ಇನ್ನು ಕೆಲವರಲ್ಲಿ Pap smear test, ultrasound test, intrauterine insemination, ಗರ್ಭಕೋಶವನ್ನು ಶುಚಿಗೊಳಿಸುವ D&C ಚಿಕಿತ್ಸೆ ಅಥವಾ ಗರ್ಭನಿರೋಧಕಗಳ ಅಳವಡಿಕೆ/ತೆಗೆಯುವಿಕೆ ಸಂದರ್ಭದಲ್ಲಿ ಉಂಟಾದ ಗಾಯಗಳಿಂದಾಗಿ ಸಹಾ ಈ ಸಮಸ್ಯೆ ಕಾಣಿಸಿಕೊಳ್ಳಬಹುದಾಗಿದ್ದು ಈ ಸಾಧ್ಯತೆಗಳು ಅತಿವಿರಳ ಎನ್ನಬಹುದು.

ಈ ಸಮಸ್ಯೆಯನ್ನು ಗರ್ಭ ಧರಿಸುವ ಮೊದಲು ಗುರುತಿಸುವುದು ಕಷ್ಟವಾಗಿದ್ದು ಗರ್ಭಾವಸ್ಥೆಯ ಸಂದರ್ಭದಲ್ಲಿ ತೋರುವ ಒಂದಿಷ್ಟು ಲಕ್ಷಣಗಳಿಂದ ಪತ್ತೆ ಹಚ್ಚಲು ಸಾಧ್ಯವಿದೆ. ಮುಖ್ಯವಾಗಿ..

1. ಅಸ್ವಾಭಾವಿಕ ಯೋನಿಸ್ರಾವ,
2. ಕೆಳಹೊಟ್ಟೆಯ ನೋವು,
3. ವಿಪರೀತವಾಗಿ ಕಾಡುವ ಸೊಂಟನೋವು,
4. ಗರ್ಭದ ಸುತ್ತಲೂ ಒತ್ತಡದ ಅನುಭವ,
5. ಯೋನಿಯಿಂದ ರಕ್ತಸ್ರಾವ

ಮುಂತಾದವು ಕಂಡುಬಂದಲ್ಲಿ ನಿರ್ಲಕ್ಷ್ಯಿಸದೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಲಕ್ಷಣಗಳನ್ನು ಆಧಾರವಾಗಿಟ್ಟುಕೊಂಡು ಅಲ್ಟ್ರಾಸೌಂಡ್ ಪರೀಕ್ಷೆ ನಡೆಸುವ ವೈದ್ಯಕೀಯ ತಂಡ ಗರ್ಭಕಂಠದ ಸಾಮರ್ಥ್ಯವನ್ನು ನಿಖರವಾಗಿ ಗುರುತಿಸಿ ಚಿಕಿತ್ಸೆ ನೀಡಲು ಮುಂದಾಗುತ್ತದೆ.

Pap smear test

ಒಂದುವೇಳೆ ಈ ಸಮಸ್ಯೆ ಎರಡನೇ ತ್ರೈಮಾಸಿಕದ ಕೊನೆಯವರೆಗೂ ಮುನ್ನೆಲೆಗೆ ಬಾರದಿದ್ದರೆ ಗರ್ಭಪಾತ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆರಂಭಿಕ ಲಕ್ಷಣಗಳು ಮತ್ತು ವೈದ್ಯಕೀಯ ಪರೀಕ್ಷೆಗಳ ಮೇಲೆ ಗಮನವಿಡುವುದು ಮುಖ್ಯ. ಪತ್ತೆ ಹಚ್ಚಿದ ನಂತರದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಿದ್ದು ತೀರಾ ಕೆಲವು ಸಂದರ್ಭಗಳಲ್ಲಿ ಮಾತ್ರವೇ ಅವಧಿಪೂರ್ವ ಜನನ ಉಂಟಾಗುತ್ತದೆ.

ಹೆಚ್ಚಿನವರಲ್ಲಿ ಈ ಸಮಸ್ಯೆ ಸಣ್ಣ ಪ್ರಮಾಣದಲ್ಲಿದ್ದು ಔಷಧೀಯ ಚಿಕಿತ್ಸೆಯ ಮುಖಾಂತರವೇ ಗುಣಪಡಿಸಬಹುದು. ಗರ್ಭಾವಸ್ಥೆಯಲ್ಲಿ ವಿಟಮಿನ್, ಕ್ಯಾಲ್ಸಿಯಂ, ಐರನ್ ಅಥವಾ ಅಗತ್ಯವಿದ್ದರೆ ಪ್ರೊಜೆಸ್ಟರಾನ್ ತೆಗೆದುಕೊಳ್ಳುವುದರಿಂದ ಈ ಸಮಸ್ಯೆ ನಿವಾರಿಸಬಹುದು. ಇನ್ನು ಕೆಲವರಲ್ಲಿ Pessary ಎಂದು ಕರೆಯುವ ರಿಂಗ್ ರೀತಿಯ ಸಾಧನವನ್ನು ಅಳವಡಿಸಿ ಗರ್ಭಕಂಠ ಬಾಯ್ತೆರೆಯದಂತೆ ಮಾಡಲಾಗುತ್ತದೆ. ತೀರಾ ಅಗತ್ಯ ಸಂದರ್ಭದಲ್ಲಿ cervical cerclage ಎಂಬ ವಿಧಾನದಿಂದ ಗರ್ಭಕಂಠದ ದ್ವಾರವನ್ನು ಹೊಲಿದು ಸಮಸ್ಯೆಯನ್ನು ನಿವಾರಿಸಲಾಗುತ್ತದೆ. ಹಿಂದಿನ ಗರ್ಭಾವಸ್ಥೆಯಲ್ಲಿ ಈ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದರೆ, ಅವಧಿಪೂರ್ವವಾಗಿ water breakage ಉಂಟಾದರೆ ಅಥವಾ ಗರ್ಭಕಂಠ ಅಗತ್ಯಕ್ಕಿಂತ ಹೆಚ್ಚು ಹಿಗ್ಗಿದರೆ ಮಾತ್ರವೇ ಈ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎನ್ನಬಹುದು. ಪ್ರಸವದ ಸಂದರ್ಭದಲ್ಲಿ ಮತ್ತೊಮ್ಮೆ ಪರೀಕ್ಷಿಸಿ ಹೊಲಿಗೆಯನ್ನು ತೆಗೆದು ಸ್ವಾಭಾವಿಕ ಪ್ರಸವಕ್ಕೆ ಅನುವು ಮಾಡಿಕೊಡುವ ಅಥವಾ ಸಿಸೇರಿಯನ್ ಹೆರಿಗೆಯ ಮುಖಾಂತರ ಮಗು ಜನಿಸುವಂತೆ ಮಾಡುವ ನಿರ್ಧಾರ ಕೈಗೊಳ್ಳಲಾಗುತ್ತದೆ.

ಸರ್ವಿಕಲ್ ಇನ್ಕಾಂಪಿಟೆನ್ಸ್ ಉಂಟಾಗದಂತೆ ತಡೆಯಲು.

* ಅಗತ್ಯವಾದ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡುವುದು.

* ವೈದ್ಯರು ಸೂಚಿಸುವ Folic acid, Calcium, Iron ಮತ್ತು ಇತರ ಪೋಷಕಾಂಶಗಳನ್ನು ಅಗತ್ಯವಾಗಿ ತೆಗೆದುಕೊಳ್ಳುವುದು.

* ಗರ್ಭ ಧರಿಸುವ ಮೊದಲಿನಿಂದಲೂ ಆರೋಗ್ಯಕರ ಆಹಾರ ಕ್ರಮಗಳನ್ನು ಅನುಸರಿಸುವುದು.

* ಗರ್ಭಾವಸ್ಥೆಯಲ್ಲಿ ಭಾರ ಎತ್ತುವುದನ್ನು ಮತ್ತು ಕಠಿಣ ವ್ಯಾಯಾಮಗಳನ್ನು ನಿಲ್ಲಿಸುವುದು.

* ತೀರಾ ಕಡಿಮೆ ತೂಕ ಹೊಂದಿರುವವರು ಆರೋಗ್ಯಕರ ವಿಧಾನದಿಂದ ತೂಕ ಹೆಚ್ಚಿಸಿಕೊಳ್ಳುವುದು.

* ಮದ್ಯಪಾನ, ಧೂಮಪಾನದಂತಹಾ ಅಭ್ಯಾಸಗಳನ್ನು ದೂರವಿಡುವುದು.

* ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು.

* ವೈದ್ಯಕೀಯ ‌ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದು… ಮುಂತಾದ ಕ್ರಮಗಳು ಸಹಕಾರಿಯಾಗಿವೆ.

ಒಟ್ಟಿನಲ್ಲಿ ಇದೊಂದು ಸಣ್ಣ ಪ್ರಮಾಣದ ಸಮಸ್ಯೆಯಾಗಿದ್ದು ತೀರಾ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಗರ್ಭ ಧರಿಸುವ ಮೊದಲೇ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು, ಗರ್ಭಾವಸ್ಥೆಯ ಸಮಯದಲ್ಲಿ ಆರೋಗ್ಯವನ್ನು ಜೋಪಾನವಾಗಿಟ್ಟುಕೊಳ್ಳುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಸರ್ವರಿಗೂ ಒಳಿತಾಗಲಿ ಎಂಬ ಆಶಯದೊಂದಿಗೆ..
ಧನ್ಯವಾದಗಳು.


  • ಸುದರ್ಶನ್ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW