ನೀಲಿಯ ಬಾನಿನ ಮೋಡದೊಳಾಡುತ ಹುಣ್ಣಿಮೆ ಚಂದಿರ …ಕವಿಯತ್ರಿ ಭುವನೇಶ್ವರಿ ಪ್ರೇಮ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ತಿಂಗಳ ಬೆಳಕಿನ ಚಂದಿರ ಮೂಡಲು
ಅಂಗನೆ ಮೊಗಸಿರಿ ಗಿರಿನವಿಲು
ತುಂಗೆಯ ದಡದಲಿ ಸಂಪಿಗೆ ಅರಳಲು
ಕಂಗಳು ಹಾಡಿವೆ ಒಲುಮೆಯೊಳು
ನಭದಲಿ ಚಪ್ಪರ ಮಲ್ಲಿಗೆ ಅರಳಲು
ನಿಬಿಡ ಸುಗಂಧವೆ ಎಲರಿನೊಳು
ಸೊಬಗಿನ ಪಾದರಿ ನಗೆಯನು ಸೂಸಲು
ಸುಭಗನೆ ಸೋತನೆ ಅಮಲಿನೊಳು !!
ನೀಲಿಯ ಬಾನಿನ ಮೋಡದೊಳಾಡುತ
ತೇಲುವ ಚಂದಿರ ನಗುತಿಹನೆ
ಬಾಲನು ಕೂಗಲು ಬೆಳ್ಳಿಯ ಚಂದಿರ
ಸೋಲುತ ಬಾನಲಿ ಬೆಳಗಿದನೆ !!
ಹುಣ್ಣಿಮೆ ಚಂದಿರ ಕರಗುತ ಸೊರಗುವ
ಬನ್ನವ ಪಡುತಲಿ ದಿನದಿನವು
ಬನ್ನಣೆ ಬಗೆಯಲಿ ಅಂದವ ಪಡೆಯುತ
ಮನ್ನಣೆ ಪಡೆದನು ಅನುದಿನವು
- ಭುವನೇಶ್ವರಿ ಪ್ರೇಮ
