‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ

ಬರಹಗಾರರಾದ ಗಣಪತಿ ಹಾಸಪುರ ಅವರ ಬರಹಗಳು ಎಲ್ಲವೂ ಮಲೆನಾಡಿನ ಕೃಷಿ ಪರಿಸರ ಹಾಗೂ ಕೃಷಿಕರ ಪರಿಕರ ಸಲಕರಣೆ, ಜನಜೀವನ ವಿಷಯದ ಕುರಿತಾಗಿದ್ದು, ಅವರು ಬರೆದ ಲೇಖಕಿ ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಕೃಷಿ ಬದುಕಿನ ಹೆಜ್ಜೆ ಸಾಲು.
ಲೇಖಕರು: ಗಣಪತಿ ಹಾಸಪುರ.
ಲಾಜಿಕ್ಸ್ ಇಂಟರ್ ನ್ಯಾಷನಲ್ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೨೦೧೫.
ಪುಟಗಳು: ೧೮೪.
ಬೆಲೆ: ರೂ. ೧೦೦.

೨೦೦೯ ರಿಂದ ಅನೇಕ ಪತ್ರಿಕೆಗಳಲ್ಲಿ ಪೋಟೋದೊಡನೆ ‘ನುಡಿ ಚಿತ್ರ’ ಎಂದು ಪುಟ್ಟ ಲೇಖನಗಳ ಮೂಲಕ ಗುರ್ತಿಸಿ ಕೊಂಡವರು. ವಿಶೇಷವೆಂದರೆ ಇಲ್ಲಿನ ಬರಹಗಳು ಎಲ್ಲವೂ ಮಲೆನಾಡಿನ ಕೃಷಿ ಪರಿಸರ ಹಾಗೂ ಕೃಷಿಕರ ಪರಿಕರ ಸಲಕರಣೆ ಜನಜೀವನ ವಿಷಯದ ಕುರಿತಾಗಿರುವುದು!.

ನಾನು ಇವರ ಬಿಡಿ ಲೇಖನಗಳನ್ನು ಅಲ್ಲಲ್ಲಿ ಓದಿದ್ದೆ. ಇದೀಗ ಅವೆಲ್ಲಾ ಪುಸ್ತಕ ರೂಪದಲ್ಲಿ ಪ್ರಕಟವಾಗಿದ್ದು ಕಂಡು ಸಂತೋಷವಾಯಿತು.ಇಲ್ಲಿ ಒಟ್ಟೂ 75 ಪುಟ್ಟ ಪುಟ್ಟ ಲೇಖನಗಳು ಹಾಗೂ ಅದಕ್ಕೆ ಪೂರಕವಾದ ಚೆಂದದ ಶೀರ್ಷಿಕೆಯ ಚಿತ್ರಗಳಿವೆ.

  • ಮೌನ ಕ್ರಾಂತಿ ಕೃಷಿ ಬದುಕಿನ ಸಂಕ್ರಾಂತಿ ಎಂಬ ಲೇಖನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಹುಳಗೋಳ ಸೇವಾ ಸಹಕಾರಿ ಸಂಘವು ೨೦೦೨ ರಿಂದ ಏರ್ಪಡಿಸುವ ‘ಮೌನ ಕ್ರಾಂತಿ’ ಎಂಬ ವಿಶಿಷ್ಟವಾದ ಕಾರ್ಯಕ್ರಮದ ಪರಿಚಯವಿದೆ. ಕೃಷಿಕ ತನ್ನ ಕೃಷಿ ಕ್ಷೇತ್ರದಲ್ಲಿ ಅಧಿಕ ಉತ್ಪನ್ನ ತೆಗೆದು ಕೊಳ್ಳಲು ಪರಿಶ್ರಮ ಪಡಬೇಕು. ದಿನಕ್ಕೆ ಕನಿಷ್ಟ ಆರು ತಾಸು ಶ್ರದ್ಧೆಯಿಂದ ತಮ್ಮ ಕ್ಷೇತ್ರದಲ್ಲಿ ದುಡಿಯ ಬೇಕು. ಅಲ್ಲಿ ಒಬ್ಬ ಸದಸ್ಯ ಎಲ್ಲಾ ರೈತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಿಶೀಲಿಸಿ, ಸೂಕ್ತ ಮಾರ್ಗದರ್ಶನವನ್ನೂ ನೀಡಿ ಅವರನ್ನು ಹುರಿದುಂಬಿಸುತ್ತಾನೆ. ಇದು ನಿರಂತರವಾಗಿ ಸಾಗುತ್ತಾ ಎಲ್ಲರಿಗೂ ಮಾದರಿಯಾಗಿದೆ.
  • ಮಲೆನಾಡಿನ ಕೃಷಿಕರು ತಮಗೆ ಬೇಕಾದ ಹಗ್ಗ ಇತ್ಯಾದಿ ಕೃಷಿ ಪರಿಕರವನ್ನು ತಾವೇ ಹೇಗೆ ಸಿದ್ಧ ಪಡಿಸಿಕೊಳ್ಳುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿ ಪ್ರಗತಿಪರ ರೈತರಾದ ತ್ರಯಂಬಕ ಹೆಗಡೆ ಅವರನ್ನು ಗುರ್ತಿಸಿದ್ದಾರೆ. ೮೫ ರ ಇಳಿ ವಯಸ್ಸಿನ ಇವರ ಉತ್ಸಾಹ ಇನ್ನೂ ಬತ್ತಿಲ್ಲ. ಹಾಗಾಗಿ ಬಿಡುವಿನಲ್ಲಿ ಎಲ್ಲಾ ಬಗೆಯ ಪ್ಲಾಸ್ಟಿಕ್ ಚೀಲದ ಎಳೆಗಳನ್ನು ಬಿಡಿಸಿಕೊಂಡು ಗಟ್ಟಿಯಾದ ಹಗ್ಗವನ್ನು ಹೇಗೆ ತಯಾರಿಸುತ್ತಾರೆ ಎನ್ನುವುದನ್ನು ವಿವರಿಸಿದ್ದಾರೆ.
  • ಯಲ್ಲಾಪುರ ತಾಲ್ಲೂಕಿನ ಶಿವರಾಮ ಹೆಗಡೆ ಎಂಬುವವರು ಕೃಷಿಯನ್ನೇ ಉಸಿರಾಗಿಸಿಕೊಂಡು ಬಂದವರು. ಪ್ರಯೋಗ ಶೀಲರಾದ ಇವರು ಕಡಿಮೆ ಖರ್ಚು ಮಾಡಿ ಅಧಿಕ ಉತ್ಪನ್ನ ಗಳಿಸುವ ನಿಟ್ಟಿನಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆದು ಸಾಧನೆ ಮಾಡಿದ್ದಾರೆ. ತನ್ನ ಎಲ್ಲಾ ಖರ್ಚಿನ ಆಯವ್ಯಯದ ದಾಖಲೆ ಇಡುವ ಅಪರೂಪದ ಕೃಷಿಕ ಇವರು ಎಂದಿದ್ದಾರೆ. ದೀಪದ ಬುಡಕ್ಕೆ ಕತ್ತಲೆ ಎಂಬಂತೆ ನಾಡಿಗೇ ವಿದ್ಯುತ್ ನೀಡಿದ ಉತ್ತರ ಕನ್ನಡ ಜಿಲ್ಲೆಯ ಅದೆಷ್ಟೋ ಹಳ್ಳಿಗಳಿಗೆ ಇನ್ನೂ ವಿದ್ಯುತ್ ಸಂಪರ್ಕವೇ ಇಲ್ಲ.! ಆದರೆ ಪರ್ಯಾಯ ವ್ಯವಸ್ಥೆಯಿಂದ ಗುಂಜಾನಜಡ್ಡಿ ಎಂಬ ಕುಗ್ರಾಮದಲ್ಲಿ ಮನೆಯ ಸನಿಹದಲ್ಲಿ ಹರಿವ ಝರಿ ನೀರಿನಿಂದ ವಿದ್ಯುತ್ ಉತ್ಪಾದಿಸಿ ಕೊಂಡ ಮಾಬ್ಲೇಶ್ವರ ಭಟ್ ಎಂಬುವರ ಛಲದ ಬಗ್ಗೆ ಹೇಳಿದ್ದಾರೆ.
  • ಕಾಡಿನಲ್ಲಿ ಬೆಳೆವ ಕೂಗಲಬಳ್ಳಿಯನ್ನು ಬಳಸಿ ನಾನಾ ತರದ ಆಕರ್ಷಕ ಅಲಂಕಾರಿಕ ವಸ್ತುಗಳನ್ನು ನೇಯುವ ಕೆಲಸದಲ್ಲಿ ತೊಡಗಿಸಿ ಕೊಂಡ ಕೃಷಿಕ ಚಂದ್ರಶೇಖರ ಹೆಗಡೆಯವರನ್ನು ಪರಿಚಯ ಮಾಡಿದ್ದಾರೆ.
  • ಮಾವಿನಕಾಯಿಗಳನ್ನು ಬೇಯಿಸಿ ಉಪ್ಪಲ್ಲಿ ಸಂರಕ್ಷಿಸಿ ‘ಕೋಸ್ಗಾಯಿ’ ಮಾಡಿ ಮಳೆಗಾಲದಲ್ಲಿ ಬಳಸಲು ಅನುಕೂಲವಾಗುವಂತೆ ಕಾದಿಟ್ಟು ಕೊಳ್ಳುವ ಬಗ್ಗೆ ಒಂದು ಲೇಖನವಿಲ್ಲಿದೆ.
  • ಅಡಿಕೆ ಕೊಯ್ಲು ಸಮಯದಲ್ಲಿ ಗೋಟಡಿಕೆ ಒಣಗಿಸಲು ಜಾಗದ ಅಭಾವವಿದ್ದಾಗ, ಕಂಬಗಳನ್ನು ಹುಗಿದು ಅದಕ್ಕೆ ಅಡ್ಡ ಪಟ್ಟಿ ಕಟ್ಟಿ ಕೊನೆಗಳನ್ನು ನೇತುಹಾಕಿ ಮಾಡಿಕೊಂಡ ಸರಳ ವಿಧಾನವನ್ನು ಅದರ ಉಪಯೋಗವನ್ನೂ ತಿಳಿಸಿದ್ದಾರೆ.
  • ಬಾಳೆ ರೆಂಬೆಗಳನ್ನು ಬಳಸಿ ಮದುವೆ ಕಾರ್ಯಗಳಲ್ಲಿ ಸುಂದರ ಮಂಟಪ ತಯಾರಿಸುವ ಕೃಷಿಕರ ತಂಡ, ಹೈನುಗಾರಿಕೆ ಉದ್ಯಮ, ಗೋಬರ್ ಗ್ಯಾಸ್, ತರಕಾರಿ-ಹೂವಿನ ಬೆಳೆಯಿಂದ ಗಳಿಸಿದ ಗಳಿಕೆ, ಉಪ ಬೆಳೆ ಕಾಳು ಮೆಣಸು, ವೆನಿಲ್ಲಾ,ಮೊಗೆಕಾಯಿ, ಬಾಳೆ ಕೃಷಿ, ಅನಾನಸ್ ಬೆಳೆ, ಪುನರ್ಪುಳಿಗಳ ಬಗ್ಗೆ,ಹಲಸಿನ ಹಪ್ಪಳ ಹಚ್ಚಲು ಗೃಹಿಣಿಯರು ತಾವೇ ಮಾಡಿಕೊಂಡ ಸುಲಭ ಪರಿಕರ, ಅಣಬೇ ಕೃಷಿ ಹೀಗೆ ಈ ಪುಸ್ತಕದಲ್ಲಿ ಬಹಳಷ್ಟು ಮಾಹಿತಿ ಇದೆ.

ಇಲ್ಲಿನ ಎಲ್ಲಾ ನುಡಿ ಚಿತ್ರಗಳು ಲೇಖಕರ ಬರಹದ ಕೌಶಲ್ಯ- ಕಲಾವಂತಿಕೆಯನ್ನು ತೋರುತ್ತದೆ.ನಮ್ಮ ಸಂಸ್ಕ್ರತಿಯ ವಿವರಗಳ ಬಿಂಬವೇ ಇಲ್ಲಿದೆ. ಅವರ ಲೇಖನಿಯಲ್ಲಿ ವಿವಿಧ ಕೃಷಿಗಳ ಹೊಸ ತಳಿಗಳ ಹೊಸ ಹೊಸ ಹೆಜ್ಜೆಗಳು ಸಾಲಾಗಿ ಮೂಡಿದೆ. ಇಲ್ಲಿ ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಗುವ ಚಿಕ್ಕ ಲೇಖನಗಳು ಚೊಕ್ಕದಾಗಿದೆ. ಇಂತಹ ಇನ್ನಷ್ಟು ಕೃತಿಗಳು ಶ್ರೀ ಗಣಪತಿ ಹಾಸಪುರ ಅವರಿಂದ ಓದುಗರಿಗೆ ದಕ್ಕಲಿ ಎಂಬ ಆಶಯ ನನ್ನದು.
ನೀವೂ ಓದಿ ನೋಡಿ…

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW