ದುರ್ಗವೆಂದರೆ ಮದಕರಿ….ಚಿನ್ಮೂಲಾದ್ರಿ ಸಿರಿ..!

ವೀರಮದಕರಿ ಹಾಗೂ ಅವರ ವಂಶಸ್ಥರ ಇತಿಹಾಸ ಕುರಿತು ಪೆನ್ನು‌ ಹಿಡಿದರೆ ಅದು ತಾನೇ‌ತಾನಾಗಿ‌ ಬರೆಸಿಕೊಂಡು ಹೋಗುತ್ತದೆ ಎನ್ನುವಷ್ಟರಮಟ್ಟಿಗೆ ದುರ್ಗ- ಮದಕರಿ ಡಾ. ಬಿ.ಎಲ್.ವೇಣುರವರ ಆತ್ಮದಲ್ಲಿ ಇಂದಿಗೂ ಭದ್ರವಾಗಿ ಮನೆ ಮಾಡಿವೆ. ಡಾ. ಬಿ.ಎಲ್.ವೇಣು ಅವರ ಗಂಡುಗಲಿ ಮದಕರಿನಾಯಕ ಕೃತಿಯ ಕುರಿತು ಹಿರಿಯೂರು ಪ್ರಕಾಶ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಗಂಡುಗಲಿ ಮದಕರಿನಾಯಕ
ಲೇಖಕರು : ಡಾ. ಬಿ.ಎಲ್.ವೇಣು
ಪುಟಗಳು : ೨೬೩
ಪ್ರಕಾರ : ಕಾದಂಬರಿ 

ಗಂಡುಮೆಟ್ಟಿನ‌ ನಾಡು‌, ಸಿದ್ಧರು ಹರಸಿದ ಚಿನ್ಮೂಲಾದ್ರಿ ನಾಡು ಚಿತ್ರದುರ್ಗವನ್ನಾಳಿದ ವೀರ ಪಾಳೆಯಗಾರರ ಪೌರುಷದ ಇತಿಹಾಸ, ಅದರಲ್ಲೂ ದುರ್ಗದ ಅಸ್ಮಿತೆ ಗಂಡುಗಲಿ ಮದಕರಿನಾಯಕರ ಕುರಿತಾಗಿ ಬರೆಯುವಾಗ ದುರ್ಗದ ಒಂಟಿಸಲಗ ಡಾ.‌ಬಿ.ಎಲ್‌. ವೇಣುರವರಿಗೆ ಸಾಕ್ಷಾತ್ ಆ ಏಕನಾಥೇಶ್ವರಿಯೇ ಅದಮ್ಯ ಚೈತನ್ಯ ತುಂಬಲಿಕ್ಕೆ ಅವರ ಕೈಬೆರಳುಗಳಲ್ಲಿ‌ ಕೂತಿರುತ್ತಾಳೇನೋ ಎಂಬಂತೆ ಅನಿಸಿದಲ್ಲಿ ಅತಿಶಯವಾಗದು. ವೀರಮದಕರಿ ಹಾಗೂ ಅವರ ವಂಶಸ್ಥರ ಇತಿಹಾಸ ಕುರಿತು ಪೆನ್ನು‌ ಹಿಡಿದರೆ ಅದು ತಾನೇ‌ತಾನಾಗಿ‌ ಬರೆಸಿಕೊಂಡು ಹೋಗುತ್ತದೆ ಎನ್ನುವಷ್ಟರಮಟ್ಟಿಗೆ ದುರ್ಗ- ಮದಕರಿ ವೇಣುರವರ ಆತ್ಮದಲ್ಲಿ ಇಂದಿಗೂ ಭದ್ರವಾಗಿ ಮನೆ ಮಾಡಿವೆ.

ಚಿತ್ರದುರ್ಗದ ಗಂಡುಭೂಮಿಯಲ್ಲಿ ಜನಿಸಿದವರಿಂದಲೇ ಆ ನೆಲವನ್ನಾಳಿದ ದೊರೆ ಗಂಡುಗಲಿ ಮದಕರಿನಾಯಕನ ಕುರಿತಾಗಿ ಬರೆದಾಗ ಅದು ನೈಜತೆಗೆ , ಭಾವನಾತ್ಮಕತೆಗೆ ಹತ್ತಿರವಾಗುವುದಷ್ಟೇ ಅಲ್ಲ ಬದಲಿಗೆ ಆ ಪಾತ್ರಕ್ಕೆ‌ ನ್ಯಾಯ ಒದಗಿಸಲು ಸಾಧ್ಯ. ಹೀಗಾಗಿಯೇ ಪುಣ್ಯಭೂಮಿಯನ್ನಾಳಿದ ವೀರ ಧೀರ ಶೂರ ಪಾಳೆಯಗಾರರ ರಣರೋಚಕ ಇತಿಹಾಸ ಎಂದಾಕ್ಷಣ ಧುತ್ತನೆ ನಮ್ಮ‌ ಕಣ್ಣೆದುರು ಮೂಡುವ ದುರ್ಗದ ನೆಲದ ಇಬ್ಬರು ಮಹಾನ್ ಕಾದಂಬರಿಕಾರರೆಂದರೆ ಒಬ್ಬರು ದಿವಂಗತ ತರಾಸು ರವರಾದರೆ ಮತ್ತೊಬ್ಬರು ಡಾ. ಬಿ.ಎಲ್.ವೇಣುರವರು.

ಈಗಾಗಲೇ ಮದಕರಿಯ ಕುರಿತು ತರಾಸುರವರ ಮಹೋನ್ನತ ಕಾದಂಬರಿ “ದುರ್ಗಾಸ್ತಮಾನ” ವನ್ನು ಓದಿ ಮದಕರಿಯ ವ್ಯಕ್ತಿತ್ವದ ಬಗೆಗೆ ಕೆಚ್ಚೆದೆಯ ಅಭಿಮಾನ‌, ಗೌರವ ಹಾಗೂ ಹೆಮ್ಮೆಯ‌ ಕೋಡುಗಳನ್ನು‌ ಮೂಡಿಸಿಕೊಂಡಿದ್ದ ನನಗೆ ಇಂದು ಡಾ. ವೇಣುರವರ ಮದಕರಿಯನ್ನು ಒಂದೇ ಗುಕ್ಕಿಗೆ ಓದಿದ ನಂತರ ಆ‌ ಕೋಡುಗಳು‌ ಮತ್ತಷ್ಟು‌ ಬಲಿಷ್ಠವಾಗಿ ಎತ್ತರದಲ್ಲಿರುವಂತೆ ಅನಿಸಿದೆ. ವಾಹ್…..!

ಸ್ವತಃ ದುರ್ಗದ ಮಣ್ಣಿನವರೇ ಆದ ವೇಣುರವರ ಲೇಖನಿಯಲ್ಲಿ ದುರ್ಗದ ಪಾಳೆಯಗಾರರ ಬಗೆಗೆ ಮೂಡಿಬಂದಿರುವ ಅನೇಕ ಕಾದಂಬರಿಗಳಲ್ಲಿ “ಗಂಡುಗಲಿ‌ ಮದಕರಿನಾಯಕ” ಅನೇಕ ಕಾರಣಗಳಿಗಾಗಿ ವಿಶೇಷವಾದದ್ದು. ಸಾಮಾನ್ಯವಾಗಿ ಒಂದು ಮಹೋನ್ನತ ಕಾದಂಬರಿ ಮತ್ತು‌ ಧೀರೋದಾತ್ತ ಪಾತ್ರವೊಂದನ್ನು ನಾಡಿನ ಪ್ರಖ್ಯಾತ ಲೇಖಕರೊಬ್ಬರು ಅದಾಗಲೇ ಕಟ್ಟಿಕೊಟ್ಟು ಅದು ಅತ್ಯಂತ ಜನಪ್ರಿಯವಾಗಿದ್ದ ಕಾಲಘಟ್ಟದಲ್ಲಿ ಅದೇ ಪಾತ್ರದ ಮರುಸೃಷ್ಟಿಗೆ, ಅದೇ ಇತಿಹಾಸಕ್ಕೆ ಕೈ‌ಹಾಕಲು ಮತ್ತೊಬ್ಬ ಕಾದಂಬರಿಕಾರನಿಗೆ ಎಂಟೆದೆ ಇರಬೇಕು, ಆತ್ಮವಿಶ್ವಾಸ ಬೇಕು, ಮುಖ್ಯವಾಗಿ ಈಗಾಗಲೇ ಜನಪ್ರಿಯವಾಗಿರುವ ಕಾದಂಬರಿಗಿಂತ ಭಿನ್ನವಾದ ಕಥೆ ಹೇಳುವಾಗ ಓದುಗದೊರೆ ಅದನ್ನು ಒಪ್ಪುತ್ತಾನೆಂಬ ಅದಮ್ಯ ಭರವಸೆಯಿರಬೇಕು. ತಾನು ಹೇಳುವ ಇತಿಹಾಸದ ಕಥೆ, ಶೈಲಿ ಮತ್ತು ನಿರೂಪಣೆಯ‌ ಭಿನ್ನತೆ ಬಗ್ಗೆ ತುಂಬು‌ವಿಶ್ವಾಸ , ಸಮರ್ಪಣಾ ಭಾವ ಹಾಗೂ ಪ್ರಾಮಾಣಿಕತೆಯಿರಬೇಕು. ಏಕೆಂದರೆ ದುರ್ಗಾಸ್ತಮಾನ ಓದಿದ ಸಾವಿರಾರು ಮಂದಿಗೆ ಅದೇ‌ ದುರ್ಗದ ಇತಿಹಾಸ ಅದೇ ಮದಕರಿಯ ವ್ಯಕ್ತಿತ್ವ, ಅದೇ ನೈಜವಾದದ್ದು ಎಂಬ ಅಭಿಪ್ರಾಯ ಆಳವಾಗಿ ಬೇರೂರಿದ್ದು ಅದಕ್ಕೆ ಭಿನ್ನವಾದ ಯಾವುದೇ ಕಥಾನಕಗಳ ಹಾದಿಯನ್ನು ಸುಲಭಕ್ಕೆ ಒಪ್ಪಲು ಓದುಗರ ಮನಸ್ಸು ಅಷ್ಟು ಸಲೀಸಾಗಿ ಒಪ್ಪದು. ಅದರಲ್ಲೂ ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯಬಲ್ಲ ಸಾಮರ್ಥ್ಯವಿರುವ ತರಾಸುರವರಂತಹ ಲೇಖಕರು ಅದಾಗಲೇ ರಚಿಸಿದ್ದ ಕೃತಿ ಮತ್ತು ಪಾತ್ರಗಳನ್ನು ಪುನಃ ಕಟ್ಟಿಕೊಡಬೇಕಾದರೆ ನಿಜಕ್ಕೂ ಅದಕ್ಕೆ ಧೃಡ ಸಂಕಲ್ಪ ಬೇಕು. ಅಂತಹ ಕಠಿಣ ಸವಾಲನ್ನು ಸುಮಾರು ನಲವತ್ತಾರು ವರ್ಷಗಳ‌ ಹಿಂದೆಯೇ ಸ್ವೀಕರಿಸಿ ಅದರಲ್ಲಿ ಯಶಸ್ವಿಯಾಗಿ ಗೆದ್ದು‌ ಬೀಗಿದ್ದು ಡಾ. ಬಿ.ಎಲ್.ವೇಣುರವರು.

ಬಹುಶಃ ಅದಕ್ಕೆ ದುರ್ಗದ ಇತಿಹಾಸ ಮತ್ತು ‌ಮದಕರಿ ಬಗೆಗೆ ವೇಣುರವರಲ್ಲಿದ್ದ ಆತ್ಮವಿಶ್ವಾಸ, ಛಲ, ತಾನು ಕೈಗೊಂಡ ಐತಿಹಾಸಿಕ ಸಂಶೋಧನೆಗಳ ಅಸಲೀಯತ್ತು ಹಾಗೂ ತಾನು‌ ಬಲವಾಗಿ ನಂಬಿರುವ ದುರ್ಗದ ನೈಜ ಇತಿಹಾಸ… ಇವೆಲ್ಲದರ ಬಗೆಗಿನ ಪ್ರಾಮಾಣಿಕ ಬದ್ದತೆ ಮತ್ತು ತನ್ನ ಪ್ರಯತ್ನದ ಮೇಲೆ ತನಗಿರುವ ಅದಮ್ಯ ಆತ್ಮವಿಶ್ವಾಸವಿದ್ದುದರಿಂದಲೇ ನಾನಾ‌ ಅಡೆತಡೆಗಳನ್ನು‌ ಎದುರಿಸಿ ಮದಕರಿಯ ಕಾದಂಬರಿಗೆ ಕೈ‌ಹಾಕಿ ಅದನ್ನು ವಿಶಿಷ್ಟವಾಗಿ ಕಟ್ಟಿಕೊಟ್ಟು ತಮ್ಮೊಳಗಿನ ದೈತ್ಯ ಪ್ರತಿಭೆಯನ್ನು ತನ್ಮೂಲಕ ಅನಾವರಣಗೊಳಿಸಿ ಅದರಲ್ಲಿ ವೇಣು ಗೆದ್ದಿದ್ದಾರೆ. ಅಷ್ಟೇ ಅಲ್ಲ, ವರ್ತಮಾನದ ಸಾಮಾಜಿಕ ಸಮಸ್ಯೆ, ಸಂಕಟಗಳನ್ನು ಇತಿಹಾಸದ ಸಂಧರ್ಭಕ್ಕೆ ಸೂಕ್ಷ್ಮವಾಗಿ ಬಳಸಿ ಆಯಾ ಪಾತ್ರಗಳ ಮೂಲಕ ಸಾಕ್ಷೀಕರಿಸುವ ಜಾಣ್ಮೆ ತೋರಿದ್ದಾರೆ.

263 ಪುಟಗಳುಳ್ಳ ಇಡೀ ಕಾದಂಬರಿಯ ಪ್ರತೀ ಸಾಲಿನಲ್ಲೂ ಗಂಡುಗಲಿ ಮದಕರಿಯ ವ್ಯಕ್ತಿತ್ವದ ನವರಸಗಳೂ ಅದ್ಭುತವಾಗಿ ಪ್ರತಿಧ್ವನಿಸಿವೆ. ಮದಕರಿನಾಯಕನ‌ ಸಾಹಸ, ಶೌರ್ಯ, ಶತ್ರುಗಳನ್ನು ಸದೆಬಡಿಯುವ ಧೀರೋದಾತ್ತ ಪೌರುಷ, ರಾಜನೀತಿ, ಪ್ರಜಾಪಾಲನೆ, ಮಾನವೀಯ ಅಂತಃಕರಣ, ಧರ್ಮಾತೀತತೆ, ಹಿರಿಯರಲ್ಲಿ ಗೌರವ, ಕೊಟ್ಟಮಾತಿಗೆ ತಪ್ಪದ ಗುಣ, ಪ್ರೀತಿ, ಪ್ರೇಮ, ಪ್ರಣಯ ಎಲ್ಲವೂ ಸಂಧರ್ಭಕ್ಕೆ ತಕ್ಕಂತೆ ಹದವಾಗಿ ಮೇಳೈಸಿವೆ.. ಮದಕರಿಯ ದಕ್ಷ ಆಳ್ವಿಕೆಯ ಹಂತಹಂತವನ್ನೂ ಸಂಕ್ಷಿಪ್ತವಾಗಿ ಚಿತ್ರಿಸಿರುವ ಲೇಖಕರು,‌ ಆರಂಭದಲ್ಲೇ ಮದಕರಿಯ ವೀರ ಪೌರುಷದ ಪರಿಚಯ ಮಾಡಿಕೊಡುವ ಸಾಹಸಗಳನ್ನು ಕಣ್ಣಿಗೆ ಕಟ್ಟುವಂತೆ‌ ವಿವರಿಸಿದ್ದಾರೆ. ಮೈಸೂರಿನ ಚಾಮುಂಡಿ ದೇವಾಲಯದಲ್ಲಿ ಮದಕರಿನಾಯಕ ಮದಿಸಿದ ಆನೆಯ ಮದವಡಗಿಸಿದ್ದು, ಗುಡಿಕೋಟೆಯ ಜಟ್ಟಂಗಿನಾಯಕನ ಸಂಸ್ಥಾನದಲ್ಲಿ ರಣಹದ್ದುಗಳು ಮತ್ತು ಸಿಂಹದೊಡನೆ‌ ಹೋರಾಡಿದ್ದು, ನಿಡಗಲ್ ಯುದ್ಧದಲ್ಲಿನ‌ ರಣತಂತ್ರ, ಹರಪನಹಳ್ಳಿ ರಾಯದುರ್ಗದ ಪಾಳೆಯಗಾರರನ್ನು ಹೈದರಾಲಿಗಾಗಿ ಸದೆ ಬಡಿದದ್ದು, ಕೊನೆಗೆ ಸೆರೆಸಿಕ್ಕ‌ ಶತ್ರುವನ್ನು‌ ನಡೆಸಿಕೊಳ್ಳುವ‌ ವಿಚಾರದಲ್ಲಿ ಮಾತಿಗೆ ತಪ್ಪಿದ ಹೈದರಾಲಿಯ ವಿರುದ್ಧವೇ ಮದಕರಿ ತಿರುಗಿ ಬಿದ್ದಿದ್ದು ಇವೆಲ್ಲವೂ ಅವನ ಪೌರುಷ ಸಾಹಸಗಳ ಚಿತ್ರಣವಾಗಿ ಓದುಗರನ್ನು ಅತ್ತಿತ್ತ ಅಲುಗದಂತೆ ಮಾಡುತ್ತವೆ.

ಹಾಗೆಯೇ, ಪದ್ಮವ್ವ ನಾಗತಿಯ ಮೇಲಿನ ಪತ್ನಿ ಪ್ರೇಮ, ಅತ್ತಿಗೆ ರತ್ನವ್ವ ನಾಗತಿ, ಅಜ್ಜಿ ಓಬವ್ವ ನಾಗತಿ, ಅಣ್ಣ ದೊಡ್ಡಮದಕರಿ ಮೇಲಿನ ಗೌರವ, ತನ್ನ ಪ್ರಜೆಗಳ ಸೈನಿಕರ ಮೇಲಿನ‌ ಪ್ರೀತಿ ಹಾಗೂ ವೀರವನಿತೆ ಓಬವ್ವೆ , ಪ್ರಧಾನಿ ನರಸಪ್ಪನ ಮಗಳಾದ ಗಾಯತ್ರಿಯನ್ನು ತನ್ನ ಸ್ವಂತ ತಂಗಿ ಹಾಗೂ ‌ಮಗಳಂತೆ ಪರಿಭಾವಿಸುವ ಮದಕರಿಯ ಹೃದಯ ವೈಶಾಲ್ಯತೆ ಆತನ ಆದರ್ಶ ವ್ಯಕ್ತಿತ್ವವನ್ನು ದಿಗಂತದ ಎತ್ತರಕ್ಕೆ ನಿಲ್ಲಿಸುತ್ತವೆ.

ಐತಿಹಾಸಿಕ ಕಾದಂಬರಿ ರಚನೆಗೆ ತೊಡಗುವವರು ಇತಿಹಾಸಕ್ಕೆ ನೂರಕ್ಕೆ‌ನೂರು‌ ನ್ಯಾಯ ಒದಗಿಸಲು ಕಷ್ಟ ಸಾಧ್ಯವಾದರೂ ಅದಕ್ಕೆ‌ಅಪಚಾರವೆಸಗದ ರೀತಿಯಲ್ಲಿ ಘಟನೆಗಳನ್ನು ಕಟ್ಟಿಕೊಡುವ ಚಾಕಚಕ್ಯತೆ‌ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ವೇಣುರವರ ಮದಕರಿಯ ಪಾತ್ರದಲ್ಲಿ ಕೇವಲ‌ ಪೌರುಷವನ್ನಷ್ಟೇ ಅಲ್ಲ, ಸಮಕಾಲೀನ‌ ಸಾಮಾಜಿಕ‌ ಒಳನೋಟಗಳನ್ನೂ ಸಮರ್ಥವಾಗಿ ಬಿಂಬಿಸಿವೆ. ಅದು ಮದಕರಿಯ ಧರ್ಮ ಸಹಿಷ್ಣುತೆ, ದೈವ ಭಕ್ತಿ,‌ ಗುರುಭಕ್ತಿ, ಕ್ಷಮಾಗುಣ, ಅಂತರ್ಜಾತಿ‌ ವಿವಾಹ ಹಾಗೂ ದುರ್ಗದ ರಕ್ಷಣೆ‌ ಮುಂದೆ‌ ಮಿಕ್ಕೆಲ್ಲವೂ ಶೂನ್ಯ ಎಂಬ‌ ಧೃಢಭಾವ……ಹೀಗೆ ಯಾವುದೇ ಆಗಿರಬಹುದು.

ಯಾವ ಕಾರಣಕ್ಕೂ ದುರ್ಗದ ಸ್ವಾಭಿಮಾನವನ್ನು‌ ಬಲಿಗೊಡದ, ಮತ್ತೊಬ್ಬರ‌ ಮುಂದೆ ತಲೆ ತಗ್ಗಿಸದ ಹಾಗೂ ಕಾದಂಬರಿಯ ಅಂತ್ಯದಲ್ಲಿ ಶತ್ರು ಹೈದರಾಲಿಯ ಕತ್ತಿಗೆ ಬಲಿಯಾಗದೇ, ಸೆರೆ ಸಿಗದೇ , ತನ್ನ‌ ದೇಹ ದುರ್ಗದ ಮಣ್ಣಲ್ಲೇ‌ ವೀರಾಂತ್ಯವಾಗಬೇಕೆಂಬ‌ ಛಲದಿಂದ ತನ್ನ ರುಂಡವನ್ನೇ ದುರ್ಗದ ನೆಲದಲ್ಲಿಯೇ ಬೀಳುವಂತೆ ಕತ್ತರಿಸಿಕೊಂಡ ಮದಕರಿ ಅಕ್ಷರಶಃ ಗಂಡುಗಲಿಯಾಗಿ‌ ವೀರಮರಣವನ್ನಪ್ಪುವ ದೃಶ್ಯಗಳನ್ನು ಕಟ್ಟಿಕೊಡುವಾಗ ವೇಣುರವರು ಅಕ್ಷರಶಃ ಮದಕರಿಯ ಕಾಲಘಟ್ಟಕ್ಕೇ ಓದುಗರನ್ನು ಕೊಂಡೊಯ್ಯುತ್ತಾರೆ.

ಕಳ್ಳಿನರಸಪ್ಪನ‌ ಕುತಂತ್ರ, ಸಹೋದರ ಜಂಪಣ್ಣ ನಾಯಕನ ಅಧಿಕಾರ ದಾಹ , ನಿಯತ್ತಿಲ್ಲದ ನಾಯಿ ಅಧಿಕಾರ ದಾಹಿ ಹೈದರನ ಅಡ್ಡದಾರಿಗಳ ರಾಜತಂತ್ರ, ತಿಂದುಂಡ ಮನೆಗೇ ದ್ರೋಹವೆಸಗುವ ಬೆನ್ನಿಗೆ ಚೂರಿ‌ ಹಾಕುವ ಸ್ವಂತದವರು….ಇದಾವುವೂ‌ ಇಲ್ಲವಾಗಿದ್ದಲ್ಲಿ ಚಿತ್ರದುರ್ಗದ ಏಳುಸುತ್ತಿನ‌ ಕೋಟೆಯನ್ನು ಬೇಧಿಸುವುದಿರಲಿ, ಅದರತ್ತ ತಲೆ ಹಾಕಿ ಮಲಗುವ ಧೈರ್ಯ ಹೈದರಾಲಿಗಾಗಲೀ ಅವರಪ್ಪನಿಗಾಗಲೀ ಇರುತ್ತಿರಲಿಲ್ಲ.

ಕೇವಲ ತಂತ್ರ ಕುತಂತ್ರ‌,ಒಡೆದಾಳುವ‌ ನೀತಿಗಳಿಂದ ಹೈದರ್ ಗೆ ಅದೂ‌ ವರ್ಷಗಟ್ಟಲೆ‌‌ ನಡೆದ ಯುದ್ಧದಲ್ಲಿ ಗೆಲುವು ಸಿಕ್ಕಿತೇ ವಿನಃ ವೀರ ಪೌರುಷದಿಂದ ನೇರಾನೇರಾ ಕಾದಾಡಿ ಸಿಕ್ಕ‌ ಗೆಲುವಲ್ಲ. ಹಾಗೆ‌ ನೋಡಿದರೆ ಅಂದು ಮದಕರಿಯಲ್ಲಿದ್ದ ವೀರ ಪೌರುಷ , ದುರ್ಗದ ಕೋಟೆಗಳ ರಚನಾ‌ ವ್ಯೂಹ, ದುರ್ಗದ ಜನರಲ್ಲಿದ್ದ ಸ್ವಾಭಿಮಾನ‌, ಇವುಗಳ ವಿರುದ್ಧ ಸೆಣಸಾಡಿ ಗೆಲ್ಲುವುದು ನೂರು ಹೈದರಾಲಿಯಂತಹ ನಿರ್ವೀರ್ಯ ಕುನ್ನಿಗಳಿಗೆ ಕನಸಿನ‌ ಮಾತಾಗಿತ್ತು.

ಮದಕರಿಯ ವ್ಯಕ್ತಿತ್ವ, ಸಾಹಸ, ಶೌರ್ಯ ಸ್ವಾಭಿಮಾನಗಳನ್ನು ದುರ್ಗದ ಇತಿಹಾಸವನ್ನೂ ತಮ್ಮದೇ ಆದ ಗಂಡುಭಾಷೆಯಲ್ಲಿ ಆದರೆ ಅಷ್ಟೇ ಸರಳವಾಗಿ ರೋಚಕವಾಗಿ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿರುವ ಡಾ. ಬಿ.ಎಲ್.ವೇಣುರವರ “ಗಂಡುಗಲಿ‌ ಮದಕರಿನಾಯಕ‌” ಸುಲಲಿತವಾಗಿ ಕೌತುಕದಿಂದ ಓದಿಸಿಕೊಂಡು ಹೋಗುವ‌ ಒಂದು ಅಪರೂಪದ ಐತಿಹಾಸಿಕ ಕೃತಿ.
ಚಿತ್ರದುರ್ಗದವರ ಮನದಲ್ಲಿ ದುರ್ಗ‌ದ ಕೋಟೆ ಬಂಡೆಗಳು ಇರುವವರೆಗೂ‌ ಮದಕರಿ ಇರುತ್ತಾರೆ, ಸಾಹಿತ್ಯ ಇರುವವರೆಗೂ‌ ವೇಣು ಇರುತ್ತಾರೆ.

** ಮರೆಯುವ ಮುನ್ನ **

ತರಾಸು ಹಾಗೂ ವೇಣು ಈ ಸಾಹಿತ್ಯ ದಿಗ್ಗಜರು

ತಮ್ಮ‌ ಕಥಾನಾಯಕ ಮದಕರಿನಾಯಕನನ್ನು ಹಾಗೂ ನವರಸಗಳನ್ನೂ ತುಂಬಿರುವ ಅವನ ವರ್ಣರಂಜಿತ ವೀರಪೌರುಷದ ವ್ಯಕ್ತಿತ್ವವನ್ನೂ ತಮ್ಮದೇ ಆದ ಶೈಲಿಗಳಲ್ಲಿ ಓದುಗರ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಮದಕರಿಯ ಆಡಳಿತ, ಅಂತಃಕರಣ, ಸಾಹಸ , ಪೌರುಷ, ತಂತ್ರ, ಅಸೀಮ ಧೈರ್ಯ, ರಾಜನೀತಿ, ಯುದ್ಧ ನೈಪುಣ್ಯತೆ, ರಸಿಕತನ, ದೈವಭಕ್ತಿ , ಯಾರಿಗೂ ತಲೆಬಾಗದ ಧೀರೋದಾತ್ತ ವ್ಯಕ್ತಿತ್ವ ಇವೆಲ್ಲದರ ಬಗೆಗೆ ಇಬ್ಬರು ಕಾದಂಬರಿಕಾರರಲ್ಲೂ ಭಿನ್ನತೆಯಿಲ್ಲ. ಆದರೆ ಪ್ರಧಾನಿ ಕಳ್ಳಿನರಸಪ್ಪನ ಪಾತ್ರ ಸೃಷ್ಟಿಯಲ್ಲಿ ತರಾಸು ಹಾಗೂ ವೇಣುರವರದ್ದು‌ ಭಿನ್ನ ಹಾದಿ.

ತರಾಸುರವರ ಕಳ್ಳಿನರಸಪ್ಪ ದುರ್ಗಕ್ಕೆ ಅತ್ಯಂತ ರಾಜನಿಷ್ಠೆಯಿಂದ ಇದ್ದವನಾಗಿದ್ದು ಹೈದರಾಲಿಗೆ ದಿವಾನ್‌ಪೂರ್ಣಯ್ಯ ಹೇಗೋ ಅದಕ್ಕಿಂತಲೂ ಹೆಚ್ಚಿನ ನಿಷ್ಠೆಯಿಟ್ಟುಕೊಂಡ , ಸದಾ ದುರ್ಗದ ಹಿತವನ್ನೇ ಬಯಸುತ್ತಿದ್ದ ಪ್ರಧಾನಿಯನ್ನಾಗಿ ಚಿತ್ರಿಸಿದ್ದರೆ, ವೇಣುರವರ ಕಾದಂಬರಿಯಲ್ಲಿ ಇಡೀ ದುರ್ಗದ ಮಹಾಪತನಕ್ಕೆ ಸಂಚು‌ರೂಪಿಸಿ ಮದಕರಿಯ ಅವಸಾನವನ್ನೇ ಪ್ರತಿಜ್ಞೆಯನ್ನಾಗಿಸಿಕೊಂಡು , ತಾನು ಉಪ್ಪುಂಡ ದುರ್ಗಕ್ಕೇ ದ್ರೋಹ ಬಗೆವ, ಹೈದರಾಲಿಯೊಡನೆ ಸಂಚು ನಡೆಸಿ ದುರ್ಗದ ಪತನಕ್ಕೆ‌ ಕಾರಣವಾಗುವ ಕೊನೆಗೆ ಹೈದರಾಲಿಯಿಂದಲೇ ಹತನಾಗುವ ಒಬ್ಬ ರಾಜದ್ರೋಹಿಯನ್ನಾಗಿ ಚಿತ್ರಿಸಲಾಗಿದೆ. ಪ್ರಧಾನಿ ಕಳ್ಳಿ‌ನರಸಪ್ಪನ‌ ಪಾತ್ರದಲ್ಲಿರುವ ಈ ಭಿನ್ನತೆಯೊಂದನ್ನು‌‌ ಬಿಟ್ಟರೆ ದುರ್ಗದ ಇತಿಹಾಸವನ್ನು ನೋಡುವ ತರಾಸು ಮತ್ತು ವೇಣುರವರ ಐತಿಹಾಸಿಕ ದೃಷ್ಟಿಕೋನಗಳಲ್ಲಿ ಅಂತಹಾ‌ ವ್ಯತ್ಯಾಸ ಕಂಡುಬಾರದು. ತರಾಸುರವರದ್ದು ಘಟನಾವಳಿಗಳ ಲಾಲಿತ್ಯವನ್ನು ಎಳೆ ಎಳೆಯಾಗಿ ವಿವರಿಸಿ ಆಳಕ್ಕಿಳಿಯುವ ವರ್ಣನೆಯ ಸೊಬಗಾದರೆ ವೇಣುರವರದ್ದು , ಪದಲಾಲಿತ್ಯದ ಜೊತೆಗೆ ಅಖಂಡ ಇತಿಹಾಸವನ್ನು ಅವರ ವ್ಯಕ್ತಿತ್ವದಂತೆ ಗುಂಡುಹೊಡೆದಂತೆ ನೇರವಾಗಿ ಹೇಳುವ ಶೈಲಿ !

ಬಹುಶಃ ಐತಿಹಾಸಿಕ ಕಾದಂಬರಿಗಳನ್ನು ರಚಿಸುವ ಕಾದಂಬರಿಕಾರನ‌ ಒಳನೋಟ, ತನ್ನ ಐತಿಹಾಸಿಕ ನಂಬಿಕೆ ಹಾಗೂ ಸ್ವಾತಂತ್ರ್ಯಗಳಲ್ಲಿನ‌ ವ್ಯತ್ಯಾಸ ಇದಕ್ಕೆ ಕಾರಣವಿದ್ದಿರಬಹುದು.
ಚಿತ್ರದುರ್ಗವೆಂದರೆ ವೇಣುರವರಿಗೆ ಇನ್ನಿಲ್ಲದ ಅಭಿಮಾನ. ಈ ಉತ್ಖಟಾಭಿಮಾನ ಅವರು ದುರ್ಗದವರೆಂಬ ಕಾರಣಕ್ಕೆ ಮಾತ್ರವಲ್ಲ ಬದಲಿಗೆ ಅದು ದುರ್ಗವನ್ನಾಳಿದ ಪಾಳೆಯಗಾರರ ಮೇಲಿನ ಪ್ರೀತಿ ಅಭಿಮಾನಗಳ ಅಂತಃಸತ್ವದ ಪರಾಕಾಷ್ಠೆಯ ಪ್ರತೀಕ. ಹೀಗಾಗಿಯೇ ಈ ಗಂಡುಮೆಟ್ಟಿನ ಮಣ್ಣಲ್ಲಿ ಜನಿಸಿರುವ ಅವರಿಗೆ ದುರ್ಗವೆಂದರೆ ಬರೀ ಕೋಟೆ ಕೊತ್ತಲುಗಳಲ್ಲ, ಬೆಟ್ಟ ಗುಡ್ಡಗಳಲ್ಲ ಅಥವಾ ಬುರುಜು ಬತೇರಿಗಳಷ್ಟೇ ಅಲ್ಲ, ಗತಿಸಿದ ಇತಿಹಾಸವಷ್ಟೇ ಅಲ್ಲ. ಅದೊಂದು ಕರುಳು ಬಳ್ಳಿಯ ಸಂಬಂಧ , ಅಂತರಂಗದ ಅನುಬಂಧ. ದುರ್ಗದ ತಾಯಿಯ ಎದೆ ಹಾಲು ಕುಡಿದು ಬೆಳೆದ ತಾಯಿ ಮಕ್ಕಳ ಋಣಾನುಬಂಧ. ಮದಕರಿಯೆಂದರೆ ಕೇವಲ ಅರಸು ಮಾತ್ರವಲ್ಲ ದುರ್ಗದ ಸ್ವಾಭಿಮಾನದ ದಿವ್ಯ‌, ಭವ್ಯ ಸಂಕೇತ.

ಡಾ. ವೇಣುರವರ “ಗಂಡುಗಲಿ ಮದಕರಿನಾಯಕ” ಕೃತಿಯನ್ನು ಒಮ್ಮೆ ಮನದುಂಬಿ ಆಸ್ವಾದಿಸಿ ನೋಡಿ!ಅದು ನಿಮ್ಮನ್ನು ಎರಡು- ಮೂರು ಶತಮಾನಗಳ ಹಿಂದಿನ ದುರ್ಗಕ್ಕೆ ಕರೆದೊಯ್ದು ದುರ್ಗದ ಇತಿಹಾಸದ‌ ಎಂದೂ ಅಳಿಯದ ಬೆಚ್ಚನೆಯ ಭಾವದಲ್ಲಿ ನಿಮ್ಮನ್ನು ಮುಳುಗೇಳಿಸುತ್ತದೆ.

ಥ್ಯಾಂಕ್ಯೂ ವೇಣು ಸರ್..
ಪ್ರೀತಿಯಿಂದ…..


  • ಹಿರಿಯೂರು ಪ್ರಕಾಶ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW