ಚಿ.ನ.ಮಂಗಳಾ (ಸಿ ಎನ್ ಎಂ ಮೇಡಂ) ಬದುಕಿದ್ದರೆ ಇಂದು ೮೦ ವರ್ಷವಾಗುತ್ತಿತ್ತು. ಅವರ ಕರ್ಮಭೂಮಿ ಆಗಿದ್ದ ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿ ರಾಘವನ್ ಚಕ್ರವರ್ತಿ ಅವರು ಸಂದರ್ಶಿಸಿಯೇ ಸರಿಸುಮಾರು ಮೂರು ದಶಕಗಳಾದವು. ಅವರನ್ನು ನೆನಪಿಸಿಕೊಳ್ಳುವ, ಅವರ ಕೃತಿಗಳನ್ನು ಪರಿಚಯಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ, ತಪ್ಪದೆ ಮುಂದೆ ಓದಿ…
ಮಂಗಳಾ ಕೃತಿಗಳು:
- ಹೆಲೆನ್ ಕೆಲರ್
- ತೋರುದತ್
- ಕಾವ್ಯ ಕಲ್ಪನೆ
- ಎಲಾರೂ ನಮ್ಮವರೇ
- ಮಾರ್ಗದರ್ಶಿ
- ಅಧ್ಯಾಪಕಿಯಾಗಿ ೨೫ ವರ್ಷ
- ಪ್ರಾಂಶುಪಾಲೆಯಾಗಿ ೨೦ ವರ್ಷ
- ಎಚ್ಚೆತ್ತಹಾದಿಯಲ್ಲಿ ಮಹಿಳೆ
- ತಿರುಮಲಾಂಬಾ
- ಸ್ನೇಹಸಿಂಧು
- ಮಾತೃಪೂಜೆ
ಪರಿಮಳಾಬಾಯಿಯವರೊಂದಿಗೆ ಸಂಪಾದಿತ ಕೃತಿಗಳು:
- ಕರ್ನಾಟಕ ಲೇಖಕಿಯರು
- ರಾಜರತ್ನಂರ ರತ್ನನ ಪದಗಳು
೧೯೮೮ ಬೆಂಗಳೂರಿನ ಆಕಾಶವಾಣಿಯಲ್ಲಿ ಒಂದು ತಾತ್ಕಾಲಿಕ ಹುದ್ದೆ. ‘Casual Announcer’ ಎಂಬ ಇಂಗ್ಲೀಷ್ ಹೆಸರಿನ ಹುದ್ದೆಯನ್ನು ‘ತಾತ್ಕಾಲಿಕ ಉದ್ಘೋಷಕ’ ಎಂದು ಸಂಸ್ಕೃತ-ಕನ್ನಡಕ್ಕೆ ’ಡಬ್’ (ರೀಮೇಕ್??) ಮಾಡಲಾಗಿತ್ತು. ಬೆಂಗಳೂರಿನ ದೂ.ದ ಇನ್ನೂ ಶೈಶವಾವಸ್ಥೆಯಲ್ಲಿತ್ತು. ಹಳೆಯ ಹುಲಿಯಾಗಿದ್ದ ಆಕಾಶವಾಣಿ ಮಾಧ್ಯಮಲೋಕದ ಸಾಮ್ರಾಟನಂತಿದ್ದ ದಿನಗಳವು.
ಈ ತಾತ್ಕಾಲಿಕ ಹುದ್ದೆಗಾಗಿ, ಒಂದು ’ಧ್ವನಿ ಪರೀಕ್ಷೆ’ (ವಾಯ್ಸ್ ಟೆಸ್ಟ್) ಹಾಗೂ ಒಂದು ಸಂದರ್ಶನಕ್ಕೆ ಹಾಜರಾಗಬೇಕಿತ್ತು. ೮೮ ರ ಅಕ್ಟೋಬರ್ ನ ಒಂದು ದಿನ ಧ್ವನಿ ಪರೀಕ್ಷೆ ನಡೆಯಿತು. ಧ್ವನಿ ಪರೀಕ್ಷೆ ತೇರ್ಗಡೆಯಾಗಿದ್ದ ಸುದ್ದಿ ಬಂತು. ಕೇಂದ್ರದ ನಿರ್ದೇಶಕರ ನಂತರದ ಪದವಿಯಲ್ಲಿ ವಿರಾಜಮಾನರಾಗಿದ್ದ ’ದೊಡ್ಡಾಕೆ’ (ಅವರನ್ನು ಹೀಗೆಯೇ ಸಂಬೋಧಿಸಲಾಗುವುದು) ಯೊಬ್ಬರು, ನನ್ನ ’ತಮಿಳು’ ಹೆಸರನ್ನು ಗಮನಿಸಿ “ಇವರು ವಾಯ್ಸ್ ಟೆಸ್ಟ್ ನಲ್ಲಿ ಪಾಸ್ ಆಗಿದ್ದಾರಾ?…ಕನ್ನಡ ತಾನೇ ಓದಕ್ಕೆ ಕೊಟ್ರಿ?” ಎಂಬ ಪ್ರಶ್ನೆ ಕೇಳಿದ್ದರೆಂದು ನಂತರ ತಿಳಿದು ಬಂತು . ಕೆಲಸ ಆರಂಭಕ್ಕೆ ಮುಂಚೆಯೇ ನನ್ನ ಬಗ್ಗೆ ಮೂಡಿದ ’ಸಂದೇಹ’ದ ಬಗ್ಗೆ ಹೆಮ್ಮೆಯಷ್ಟೇ ಗಾಬರಿಯೂ ಆಯಿತು. ಎಷ್ಟಾದರೂ ’ಟೆಂಪೊರರಿ’ ಹುದ್ದೆ. ತಲೆ ಕೆಡೆಸಿಕೊಳ್ಳುವುದು ಬೇಡವೆಂದು ಕೊಂಡೆ. ’ಸಂದರ್ಶನ’ ವೂ ಆಯಿತು. ಸಂದರ್ಶನಕಾರ (ಒಬ್ಬರು ಅಬ್ದುಲ್ ರಹಮಾನ್ ಪಾಷಾ..ಮತ್ತೊಬ್ಬರು ಇಂಗ್ಲೀಷಿನಲ್ಲೇ ಸಂಭಾಷಿಸುತ್ತಿದ್ದರು. ಯಾರೆಂದು ತಿಳಿಯಲಿಲ್ಲ) ಈ ತಾತ್ಕಾಲಿಕ ಹುದ್ದೆಯ ಬಗ್ಗೆ ತಿಳಿಸಿದರು. ಮತ್ತೆರಡೇ ದಿನಗಳಲ್ಲಿ ’ತಮ್ಮನ್ನು ತಾತ್ಕಾಲಿಕ ಉದ್ಘೋಷಕರಾಗಿ ಆಯ್ಕೆಮಾಡಿಕೊಳ್ಳಲಾಗಿದೆ’ ಯೆಂಬ, ಆ ದೊಡ್ಡಾಕೆಯ ದೊಡ್ಡ ಸಹಿಯಿದ್ದ ಪತ್ರವೊಂದು ತಲುಪಿತು. ’ಸೆಷನ್’ ಒಂದಕ್ಕೆ ೬೦ ರೂಪಾಯಿಯ ಪಗಾರ. ಅದಕ್ಕಿಂತ ’ಆಕಾಶವಾಣಿ’ಯಲ್ಲಿ ನನ್ನ ಮಾತು ಕರ್ನಾಟಕದಾದ್ಯಂತ ತಲುಪುವ ರೋಮಾಂಚನ !!
ಅಲ್ಲಿಯವರೆಗೂ, ಕೃಷಿರಂಗದ ಎಂ.ಟಿ.ಜಯಣ್ಣ, ’ಪ್ರದೇಶ ಸಮಾಚಾರ’ದ ಕೆ.ಎಸ್.ಪುರುಷೊತ್ತಮ್, ನಾಗಮಣಿ ಎಸ್ ರಾವ್, ಹೊನ್ನಿನ ಕಂಠದ ಎಚ್.ಕೆ.ನಾರಾಯಣ, ಮುಂತಾದವರ ಬರಿಯ ’ಧ್ವನಿ’ಯನ್ನು ಮಾತ್ರ ಕೇಳಿ ಖುಷಿ ಪಡುತ್ತಿದ್ದ ನನಗೆ, ಅವರನ್ನು ಪ್ರತ್ಯಕ್ಷವಾಗಿ ನೋಡುವ ಪುಳಕ. ನಮ್ಮ ಊರಿನ (ಹೊಸೂರು) ಶಾಲೆಯಲ್ಲಿ ಕಲಿತ, ನನ್ನ ತಂದೆಯ ವಿದ್ಯಾರ್ಥಿಯೂ ಆಗಿದ್ದ ಎಸ್.ಪರಶಿವಮೂರ್ತಿ, ಆಗಾಗಲೇ ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತೆ ಓದುತ್ತಿದ್ದ ಹೆಮ್ಮೆ ನನಗಿತ್ತು. ಮೈಸೂರಿನ ಹುಡುಗ ರಾಂಗೋಪಾಲ್ ಪರಿಚಯವಾದ. ’ಗುರುಹಿರಿಯ’ರ ವಿಚಾರದಲ್ಲಿ ನನಗಿಂತ ಹೆಚ್ಚು ವಿನಯಶಾಲಿ.

(ಫೋಟೋ ಕೃಪೆ : ಅಂತರ್ಜಾಲ) ಚಿ.ನ.ಮಂಗಳಾ
ಹೊಸದಾಗಿ ಆಯ್ಕೆಯಾದ ’ತಾತ್ಕಾಲಿಕ ಉದ್ಘೋಷಕ/ಕಿ ಯರನ್ನೆಲ್ಲಾ ದೊಡ್ಡಾಕೆ ಒಂದುದಿನ ಸುತ್ತಾ ಕುಳ್ಳರಿಸಿಕೊಂಡು ’ಶುಭಾಶಯ’ ತಿಳಿಸಿದರು. ತಮ್ಮ ಹಿನ್ನಲೆ, ಅನುಭವಗಳ ಬಗ್ಗೆ ಹೇಳಿಕೊಂಡರು. ಅವರ ಮಾತಿನಲ್ಲಿ ಕನ್ನಡ ’ಅತಿಥಿ ನಟ’ನಾಗಿ ಬಂದು ಹೋಗುತ್ತಿತ್ತು. ಇಂಗ್ಲೀಷ್ ಹಾರಾಟವೇ ಹೆಚ್ಚಿತ್ತು. ನಮ್ಮನ್ನೆಲ್ಲ ಒಮ್ಮೆ ಪರಿಚಯಿಸಿಕೊಂಡ ದೊಡ್ಡಾಕೆ ಕೇಳಿದ ಒಂದು ಸಾಮಾನ್ಯ ಪ್ರಶ್ನೆ: “ಹಿಂದಿ ಯಾರಿಗೂ ತೊಂದರೆ ಇಲ್ಲಾ ತಾನೆ?”… ಆಗ ತಾನೆ ಹಿಂದಿಯ ’ವಿಶಾರದ’ ಮುಗಿಸಿ ಬಂದಿದ್ದ ಧಾರಾವಾಡ ಮೂಲದ ಹುಡುಗಿ ಈ ಪ್ರಶ್ನೆಯಿಂದ ಸ್ಪೂರ್ತಿಗೊಂಡು ದೊಡ್ಡಾಕೆಯೊಂದಿಗೆ ಹಿಂದಿಯಲ್ಲೇ ಮಾತುಕತೆ ಆರಂಭಿಸಿಬಿಟ್ಟಳು. ದೊಡ್ಡಾಕೆಯ ಮುಖ ಮೊರದಗಲ. ಎಲ್ಲರೂ ತಮಗೆ ಹಿಂದಿ ತೊಂದರೆ ಇಲ್ಲವೆಂದೇ ಹೇಳಿಕೊಂಡರು. ನನ್ನ ಸರದಿ ಬಂತು..ನಾನು ಸ್ಪಷ್ಟವಾಗಿ ಹೇಳಿದೆ. “ಹಿಂದಿ ಬರೋದಿಲ್ಲ. ಯಾವುದೋ ಒಂದೆರಡು ಪದ ಅರ್ಥವಾಗುತ್ತದೆ. ಮೊದಲಿನಿಂದಲೂ ಹಿಂದಿಯನ್ನು ’ಸೀರಿಯಸ್’ ಆಗಿ ಪರಿಗಣಿಸಲಿಲ್ಲ. ನಾನು ಬೆಳೆದಿದ್ದು, ಓದಿದ್ದು ಕರ್ನಾಟಕ-ಆಂಧ್ರದ ಗಡಿಭಾಗದ ಹಳ್ಳಿಯಲ್ಲಿ. ಟೆಂಟ್ ಗಳಲ್ಲಿ ಕನ್ನಡ-ತೆಲುಗು ಸಿನಿಮಾ ನೋಡಿದ್ದು ಬಿಟ್ಟರೆ, ಹಿಂದಿಯ ಯಾವುದೋ ಒಂದೆರಡು ಸಿನಿಮಾ ದೂ.ದ ದಲ್ಲಿ ನೋಡಿದ್ದೇನೆ. ಅದು ಬಿಟ್ಟರೆ ಹಿಂದಿ ಅಷ್ಟಕ್ಕಷ್ಟೇ.”
ನವನವೀನ ಉದ್ಘೋಷಕ/ಕಿ ಯರಿಗೆಲ್ಲಾ ಇದೊಂದು ತಮಾಷೆಯಂತೆ ಕಾಣತೊಡಗಿತು. ಆ ಹಿಂದಿ’ವಿಶಾರದೆ’ಯಂತೂ ’ಇವನಾರವ’ ಎಂಬಂತೆ ನನ್ನನ್ನು ನೋಡಿದಳು.
“ಯು ಕುಡ್ ಹ್ಯಾವ್ ಟೇಕನ್ ಸಮ್ ಹಿಂದಿ ಕೋರ್ಸಸ್.” ಎಂಬ ಪ್ರತ್ಯುತ್ತರಾಸ್ತ್ರವೊಂದು ಬಂದೆರಗಿತು.
“ಅದನ್ನೂ ಮಾಡಿದೆ…ಪ್ರಚಾರ ಸಮಿತಿಯ ’ಪ್ರಥಮಾ’ ಹೇಗೋ ಮುಗಿಸಿದೆ. ನಂತರ ಆಸಕ್ತಿ ಬರಲಿಲ್ಲ. ಅದೇಕೋ ಹಿಂದಿ ಕಲಿಯಬೇಕು ಅಂತ ಅನಿಸಲೇ ಇಲ್ಲ.”
ನನ್ನ ಮಾತಿನಲ್ಲಿ ’ವಿತಂಡವಾದ’ ಮತ್ತು ’ಅವಿಧೇಯತನ’ಗಳ ದುರ್ವಾಸನೆಯೊಂದನ್ನು ದೊಡ್ಡಾಕೆ ಗುರುತಿಸಿದರೇನೋ. ಮುಖದಲ್ಲೊಂದು ಅಸಹನೆಯ ಭಾವ ಹಾದು ಹೋಯಿತು. ಆ ಅಸಹನೆ ನಾನು ಆಕಾಶವಾಣಿಯಲ್ಲಿದಷ್ಟು ದಿನವೂ ಹಾಗೆಯೇ ಉಳಿದುಕೊಂಡಿತು.
’ಕ್ಯಾಶುಯಲ್ ಅನೌನ್ಸರ್’ ಪ್ರತಿನಿತ್ಯದ ಕೆಲಸವೇನೂ ಅಲ್ಲ. ವಾರದಲ್ಲಿ ೨ ದಿನ ಇಲ್ಲವೇ ೩ ದಿನ. ಅಥವಾ ವಾರಕ್ಕೆ ಕನಿಷ್ಟ ಒಮ್ಮೆಯಾದರೂ ಆಕಾಶವಾಣಿಗೆ ಒಂದು ಭೇಟಿ ಇರುತ್ತಿತ್ತು. ಅನೌನ್ಸ್ಮೆಂಟ್ (ಉದ್ಘೋಷಣೆ ) ಇಲ್ಲದ ದಿನ ’ಸಂದರ್ಶನ’ ಕಲೆಯಲ್ಲಿ ’ತರಪೇತು’ ಗೊಳಿಸಲಾಗುತ್ತಿತ್ತು. ಯಾವುದಾದರೂ ಜಿಲ್ಲಾ ವಾರ್ತೆ ಅಥವಾ ಪೋಲೀಸ್ ವಾರ್ತೆ ಯನ್ನು ಓದಿಸಲಾಗುತ್ತಿತ್ತು. ’ವಾರ್ತೆ’ಯನ್ನು ’ವಾತ್ರೆ’ ಎಂದು ಆಕಸ್ಮಿಕವಾಗಿ ಓದಿದ್ದ (ಪಾಪದ) ವ್ಯಕ್ತಿಯನ್ನು ತಮ್ಮ ಚೇಂಬರ್ ಗೆ ಆಹ್ವಾನಿಸಿದ ದೊಡ್ಡಾಕೆ, ’ಉಚ್ಛಾರಣೆ’ಯ ಬಗ್ಗೆ ’ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ’ ಶೈಲಿಯಲ್ಲಿಯೇ ಒಂದು ತಾಸು ಕೊರೆದಿದ್ದರು. ಆತ ’ಅಂಚೆ-ತೆರಪಿ’ನ ಶಿಕ್ಷಣದ ಮೂಲಕ ಕನ್ನಡದ ಎಂ.ಎ ಮಾಡುತ್ತಿದ್ದಾನೆ ಎಂದು ತಿಳಿದಮೇಲಂತೂ, ಭಾಷಣ ಮತ್ತಷ್ಟು ಕಳೆಗಟ್ಟಿತ್ತು. ಭಾಷಣಗಂಗೆಯಲ್ಲಿ ಮಿಂದೆದ್ದು ಮುಖ ಒರಿಸಿಕೊಳ್ಳುತ್ತಾ ಹೊರಬಂದ ಸ್ನೇಹಿತನನ್ನು “ಇನ್ಮೇಲ್ ಲೈಫ಼್ ನಲ್ಲೇ ಹಾಗೆಲ್ಲಾ ತಪ್ಪಾಗಿ ಮಾತಾಡ್ಬೇಡಿ” ಎಂದು ಕಿಚಾಯಿಸಿ ಬರುತ್ತಿದ್ದಂತೆ, ಎ.ಆರ್.ಪಾಟೀಲ್ (ಕಾರ್ಯಕ್ರಮಗಳ ಅಧಿಕಾರಿ/ಪ್ರೋಗ್ರಾಮ್ ಎಕ್ಸೆಕ್ಯುಟಿವ್ ಯಾಗಿದ್ದರು) ’ಬರ್ರಪ್ಪಾ ಇಲ್ಲಿ’ ಎಂದು ಆಹ್ವಾನಿಸಿದರು. ಪಾಟೀಲ್, ’ಯುವವಾಣಿ’ ಕಾರ್ಯಕ್ರಮದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ಸರಳ ಮಾತು, ಸೌಜನ್ಯದ ವ್ಯಕ್ತಿ ಪಾಟೀಲ್, ’ಯುವವಾಣಿ’ಯ ಬಗ್ಗೆ ವಿಶದವಾಗಿ ಮಾತನಾಡಿ ಮುಂದೆ ತರಲಿಚ್ಚಿಸುತ್ತಿದ್ದ ’ಕ್ಯಾಂಪಸ್ ನೋಟ್ಸ್’ ಎಂಬ, ’ಯುವವಾಣಿ’ ಯಲ್ಲಿಯೇ ಮೂಡಿಬರಬೇಕಾದ ಹೊಸ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಅದರ ಮುಖ್ಯ ಉದ್ದೇಶ್ಯ, ನಗರದ ಆಯ್ದ ಕಾಲೇಜುಗಳಿಗೆ ಭೇಟಿಯಿತ್ತು, ಅಲ್ಲಿನ ವಿದ್ಯಾರ್ಥಿ/ನಿ ಯರನ್ನು, ಶಿಕ್ಷಕ/ಕಿ(ಯ)ರನ್ನು ಆಯಾ ಶೈಕ್ಷಣಿಕ/ಸಾಹಿತ್ಯಕ/ಕ್ರೀಡಾ ಚಟುವಟಿಕೆಗಳ ಬಗ್ಗೆ ಸಂದರ್ಶಿಸುವುದು, ಅವರ ಸಮಸ್ಯೆಗಳನ್ನು ಆಲಿಸುವುದು, ಎಲ್ಲಾ ಚಟುವಟಿಕೆಗಳಿಗೂ ಸಿಗುವ ಪ್ರೋತ್ಸಾಹ, ಅದರ ಸದುಪಯೋಗದ ಬಗ್ಗೆ ವಿಚಾರಿಸುವುದು ಇತ್ಯಾದಿ..
ಅಂತೆಯೇ ಜಯನಗರದ ನಂದಾ ಟಾಕೀಸಿನ ಪಕ್ಕದಲ್ಲೇ ಇದ್ದ ಪ್ರತಿಷ್ಟಿತ ಎನ್ ಎಮ್ ಕೆ ಆರ್ ವಿ ಕಾಲೇಜನ್ನು ಮೊದಲ ಭೇಟಿಗೆ ಆಯ್ಕೆ ಮಾಡಲಾಯಿತು. ಪಾಟೀಲ್ ಮತ್ತು ದೊಡ್ಡಾಕೆಯೊಂದಿಗೆ ನಡೆದ ಮಾತುಕತೆಯಲ್ಲಿ ಸಂದರ್ಶನದ ರೂಪು-ರೇಷೆಗಳನ್ನು ಗುರುತಿಸಲಾಯಿತು. ಗೋಪಾಲ್ ಕಡೆ ಅದೃಷ್ಟ ಇರುವಂತಿತ್ತು. ಮಾತುಕತೆಯ ಕೊನೆಯ ಹಂತದಲ್ಲಿ ದೊಡ್ಡಾಕೆ ’ಗೋಪಾಲ್ ಗೆ ಈಗ ಎಷ್ಟು ವಯಸ್ಸು?’ ಎಂಬ ಅಕಾಲ ಪ್ರಶ್ನೆಗೆ ಅವನನ್ನು ತುತ್ತಾಗಿಸಿದರು. ’೨೮ ಮೇಡಮ್’ ಎಂದು ಸುಲಲಿತವಾಗಿ, ಸವಿನಯವಾಗಿ ಆತ ಹೇಳಿದ್ದೇ ತಡ….’ಯು ಆರ್ ಟೂ ಓಲ್ಡ್ ಟು ಕಂಡಕ್ಟ್ ಎ ಪ್ರೊಗ್ರಾಂ ಆನ್ ಯೂಥ್….’ ಎಂಬ ಉದ್ಗಾರ ದೊಡ್ಡಾಕೆಯಿಂದ ಹೊರಟಿತು . ಗೋಪಾಲ್ ಖಿನ್ನನಾದ..
ಆಗ ಬುದ್ಧಿಜೀವಿಗಳ ಚೀಲವೊಂದನ್ನು ಭುಜಕ್ಕೆ ನೇತಾಕಿಕೊಂಡು ಹೋಗುತ್ತಿದ್ದೆ. ’ಲಂಕೇಶ್ ಪತ್ರಿಕೆ’ ಓದುವ ಅಭ್ಯಾಸ. ಹೈಸ್ಕೂಲ್ ನಲ್ಲಿಯೇ ಆರಂಭವಾಗಿತ್ತು. ಕೆ ಆರ್ ಸರ್ಕಲ್ ಬಳಿ ’ಪತ್ರಿಕೆ’ ಕೊಂಡು ಬ್ಯಾಗಿನಲ್ಲಿ ತುರುಕಿಕೊಂಡು ಬಂದಿದ್ದೆ. ಮಾತುಕತೆಯ ಸಂದರ್ಭದಲ್ಲಿ ಚೀಲವನ್ನು ಕುರ್ಚಿಯ ಪಕ್ಕ ಇಟ್ಟುಕೊಂಡಿದ್ದೆ. ಚೀಲದಿಂದ ಇಣುಕುತ್ತಿದ್ದ ’ಪತ್ರಿಕೆ’ಯನ್ನು ದೊಡ್ಡಾಕೆ ಗಮನಿಸಿದ್ದು ನನಗೆ ತಿಳಿಯಲು ತಡವಾಗಲಿಲ್ಲ. ಸ್ವಲ್ಪ ಸಮಯ ಮೌನದ ನಂತರ, ’ಭಾಷಾ ಶುದ್ಧಿ’ ಯ ಬಗ್ಗೆ, ಪತ್ರಿಕೆಗಳಲ್ಲಿ ಬರುವ ಲೇಖನ ಅಥವಾ ಸಂಪಾದಕೀಯದ ಧಾಟಿಗೂ, ’ಆಕಾಶವಾಣಿ’ ಸುದ್ದಿ ತಲುಪಿಸುವ ಪರಿಗೂ ಇರುವ ವ್ಯತ್ಯಾಸದ ಬಗ್ಗೆ ದೊಡ್ಡಾಕೆ ವಿವರಿಸಲಾರಂಭಿಸಿದರು. ’ವಿ ಕಾಂಟ್ ಬಿ ಟೂ ಅಗ್ರೆಸ್ಸಿವ್…ನಾರ್ ಇರ್ರಿಟೇಟಿಂಗ್…’ ಇತ್ಯಾದಿ…ನನ್ನ ಚೀಲವನ್ನೊಮ್ಮೆ ಗಮನಿಸುತ್ತಾ ’ನಾಕೈದು ಜನ ಮೆಚ್ಚಿದ್ರೆ ಸಾಲದು..ಅಟ್ಟಹಾಸವಾಗಿ ಮಾತನಾಡೋದು, ಬರೆಯೋದು. ಇದೆಲ್ಲಾ ತಪ್ಪು.. ಸುದ್ದಿಯನ್ನು ನೇರವಾಗಿ ಸ್ಪಷ್ಟವಾಗಿ ತಲುಪಿಸುವುದರಲ್ಲಿ ಆಕಾಶವಾಣಿಯದ್ದೇ ಒಂದು ದಾರಿಯಿದೆ. ವಿ ಹ್ಯಾವ್ ಅವರ್ ಓನ್ ಪ್ರಿನ್ಸಿಪಲ್ಸ್’ ಇತ್ಯಾದಿ… ಅರ್ಥವಾಗಲು ಹೆಚ್ಚು ಸಮಯವೇನೂ ಆಗಲಿಲ್ಲ. ಮಾತುಕತೆ ಮುಗಿಸಿ ನಾನು-ಗೋಪಾಲ್ ಹೊರಬಿದ್ದೆವು. ’ನೀನ್ಯಾಕೆ ಆ ಪೇಪರ್ ಕಾಣೋ ತರ ಇಟ್ಟಿದ್ದೆ??’ ಎಂಬ ಅನುಚಿತ ಪ್ರಶ್ನೆಯೊಂದನ್ನು ಗೋಪಾಲ್ ಕೇಳಿದಾಗ ನನಗೆ ರೇಗಿತು. ’ಅದನ್ನೆಲ್ಲಾ ಆಕ್ಷೇಪ ಮಾಡುವಂತಿಲ್ಲ…ಕಾಣಿಸಿದ್ದನ್ನೆಲ್ಲಾ ನೋಡಬೇಕೆಂತೇನೂ ಇಲ್ಲ..ಅಲ್ಲದೇ ಯಾವ ಪತ್ರಿಕೆ ಓದಬೇಕು ಅನ್ನೋದು ನಮ್ಮ ಆಯ್ಕೆ’ ಎಂದು ನಾನು ಸಂವಿಧಾನಾತ್ಮಕವಾಗಿ ಮಾತನಾಡಿದಾಗ ಗೋಪಾಲ್ ಗೆ ರುಚಿಸಲಿಲ್ಲ. ಸುಮ್ಮನಾದೆ. ಅಲ್ಲಿಗೆ ಎನ್ ಎಮ್ ಕೆ ಆರ್ ವಿ ಕಡೆಗೆ ಪ್ರವಾಸ ಇಬ್ಬರದೂ ಇಲ್ಲ…ಮತ್ತೊಬ್ಬ ’ವಾತ್ರೆ’ (ಕು)ಖ್ಯಾತಿಯ ವ್ಯಕ್ತಿಗೆ ಅವಕಾಶ ಸಿಗಲಾರದು. ’ವಿಶಾರದೆ’ಯನ್ನು ಹಿಂದಿ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದಕ್ಕೆ ನಿಯೋಜಿಸಲಾಗಿತ್ತು… ಹಾಗಾದರೆ ಇನ್ನ್ಯಾರಿರಬಹುದು ಎಂಬ ಕಾತರ ಆರಂಭವಾಯಿತು.

(ಫೋಟೋ ಕೃಪೆ : ಅಂತರ್ಜಾಲ) ನಂಜನಗೂಡು ತಿರುಮಲಾಂಬ
ಮಾರನೆಯ ದಿನ ಪಾಟೀಲ್ ನನ್ನನ್ನು ಕರೆದರು. ಸಂದರ್ಶನಕ್ಕೆ ನಾನೇ ಹೋಗಬೇಕೆಂದೂ, ಅದಕ್ಕೆ ಬೇಕಾದ ಸಿದ್ಧತೆಗಳನ್ನು ಕೂಡಲೇ ಆರಂಭಿಸಬೇಕೆಂದು ಹೇಳಿದರು. ’ಥ್ಯಾಂಕ್ಸ್ ಸರ್…ಆದರೆ ಮೇಡಂಗೆ ನನ್ನ ವಯಸ್ಸು ಹೇಳಬೇಡವಾ?” ಎಂದೆ. ಪಾಟೀಲ್ ಖೊಳ್ಳನೆ ನಕ್ಕರು. ’ಪರ್ವಾಗಿಲ್ಲ ಬಿಡಪ್ಪಾ..ಯು ಆರ್ ರಿಯಲಿ ಯಂಗ್ ಐ ಸೇ’ ಎಂದರು…ಮೊಟ್ಟಮೊದಲ ಬಾರಿ ಸಂದರ್ಶಿಸುವ ಅವಕಾಶ ದೊರೆತಿತ್ತು. ಕಾಲೇಜಿನ ಬಗ್ಗೆ ಮಾಹಿತಿ ಸಂಗ್ರಹಿಸಲು ಆರಂಭಿಸಿದೆ. ಪ್ರಾಂಶುಪಾಲಕಿಯಾಗಿದ್ದ ಚಿ.ನ.ಮಂಗಳಾ ರ ಬಗ್ಗೆ ಕೇಳಿದ್ದೆ. ಫ಼್ಲಾರೆನ್ಸ್ ನೈಟಿಂಗೇಲ್ ರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಅವರಾಗಲೇ ಪ್ರಕಟಿಸಿದ್ದರು. ಶುಕಭಾಷೆಯ ಹೊಗಳಿಕೆಗಳಿಲ್ಲದೇ, ನೇರವಾಗಿ ಸರಳವಾಗಿ ಫ಼್ಲಾರೆನ್ಸ್ ಳ ಜೀವನಗಾಥೆಯನ್ನು ಕಟ್ಟಿಕೊಟ್ಟಿದ್ದರು. ಅವರ ಇತರ ಕೃತಿಗಳ ಬಗ್ಗೆ ಸಂಪೂರ್ಣ ಪರಿಚಯ ಇರಲಿಲ್ಲ.
ಸಂದರ್ಶನ ಕಲೆಯ ಪರಿಚಯ ಮಾಡಿಸಿದ ದಿನಗಳವು. ಸಂದರ್ಶನಕಾರನಿಗಿರಬೇಕಾದ ಮೂಲ ಓದಿನ ಅವಶ್ಯಕತೆ, ಸಂದರ್ಶಿಸಬೇಕಾದ ವ್ಯಕ್ತಿ ಅಥವಾ ಸಂಸ್ಥೆಯ ಬಗೆಗಿನ ವಿವರ, ಸಂಬಂಧಿಸಿದ ಪ್ರಮುಖ ಘಟನೆಗಳು/ಸ್ಮರಣೀಯ ಪ್ರಸಂಗಗಳು, ಯಾವುದಾದರೂ ಕಪ್ಪುಚುಕ್ಕೆಗಳು…ಇವೆಲ್ಲವನ್ನೂ ಹೆಕ್ಕಿ ತೆಗೆಯಲು ಬೇಕಾದ ಸಂಯಮ ಮತ್ತು ಸೂಕ್ಷ್ಮತೆ, ವಿಷಯ ಸಂಗ್ರಹಣೆ-ಕ್ರೋಢೀಕರಣಗಳನ್ನು ಕರಾರುವಾಕ್ಕಾಗಿ ಮಾಡಲು ಬೇಕಾದ ಎಚ್ಚರ, ಇದೆಲ್ಲವನ್ನು ಕಲಿಯುವ, ತೋರುವ ಅವಕಾಶ. ಕಾರ್ಯಕ್ರಮದ ಅವಧಿ ಐದಾರು ನಿಮಿಷಗಳೇ ಆದರೂ, ವಿಷಯಮಂಡನೆಯಲ್ಲಿ ಎಲ್ಲಿಯೂ ಚ್ಯುತಿ ಬರುವಂತಿಲ್ಲ. ಪಾಟೀಲ್ ಒತ್ತಾಸೆಯಾಗಿ ನಿಂತರು. ಕಾಲೇಜಿನ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿದೆ. ಮಂಗಳಾ ತಮ್ಮ ಅಧ್ಯಾಪಕಿ ವೃತ್ತಿ ಕುರಿತಾದ ಅಂಕಣವನ್ನು ಕನ್ನಡಪ್ರಭದಲ್ಲಿ ಬರೆಯುತ್ತಿದ್ದರು. ಆ ಅಂಕಣ ನಿಂತು ನಾಲ್ಕೈದು ವರ್ಷವಾಗಿತ್ತು. ಕಾಲೇಜು ಓದುತ್ತಿದ್ದಾಗ ಎಂದೂ ತೋರದ ಶ್ರದ್ಧೆಯಿಂದ ಸಂದರ್ಶನದ ಪೂರ್ವತಯಾರಿ ಸಾಗಿತು. ಮಂಗಳಾ ಸ್ಥಾಪಿಸಿದ ಶಾಶ್ವತಿ ಸಂಸ್ಥೆ ಯ ಬಗ್ಗೆ ವಿವರವಾಗಿ ತಿಳಿದುಕೊಂಡೆ. ಶಾಶ್ವತಿ ಬಗ್ಗೆ ಯೋಜಿತವಾದ ಪ್ರಶ್ನೆಗಳನ್ನೊಮ್ಮೆ ಪಾಟೀಲರ ಬಳಿ ಚರ್ಚಿಸಿದೆ. ’ಆಲ್ ಸೆಟ್ ಕಾಣಪ್ಪಾ…ನಾಳೆ ಮುಗಿಸ್ಬಿಡು’ ಎಂದು ಹಾರೈಸಿದರು.
ಮಾರನೆಯ ಮಧ್ಯಾಹ್ನ ಎನ್ ಎಮ್ ಕೆ ಆರ್ ವಿ ಯೊಳಗೆ ಕಾಲಿಟ್ಟೆ. ಸರಳ, ಸೌಜನ್ಯದ, ಮೆಲುಮಾತಿನ ಮಂಗಳಾ ರನ್ನು ಅವರ ಕೊಠಡಿಯಲ್ಲೇ ಭೇಟಿಯಾದೆ. ನನ್ನ ಪರಿಚಯ ಹೇಳಿಕೊಂಡೆ. ಆಕಾಶವಾಣಿಯಲ್ಲಿ ’ತಾತ್ಕಾಲಿಕ ಉದ್ಘೋಷಕ’ ನಾಗಿರುವುದಾಗಿ ಹೇಳಿದೆ. ಮಂಗಳಾ ಪ್ರಶ್ನಾರ್ಥಕವಾಗಿ ಒಮ್ಮೆ ನೋಡಿದರು. “ತಾತ್ಕಾಲಿಕ ಅಂದ್ರೆ ಟೆಂಪೊರರಿ ಅಂತ ತಿಳೀತು..ಆಮೇಲ್ ಏನ್ ಹೇಳಿದ್ರಿ” ಎಂದರು. “ಅಂದರೆ ಟೆಂಪೊರರಿ ಅನೌನ್ಸರ್ ಅಂತ ಮೇಡಂ” ಎಂದೆ. ಮಂಗಳಾ ನಕ್ಕರು..ಕಾಲೇಜಿನ ಇತಿಹಾಸದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದ ಮಂಗಳಾ, ಅಂದು ಐದಾರು ಜನ ಪೋಷಕರನ್ನು ಭೇಟಿಯಾಗಬೇಕಿದ್ದರಿಂದ, ನಾನು ಕಾಲೇಜಿನ ವಿದ್ಯಾರ್ಥಿನಿ-ಸಿಬ್ಬಂದಿಯನ್ನು ಮಾತನಾಡಿಸಲು ಹೋದೆ. ಶ್ರೀಮತಿ ಎಸ್.ಆರ್.ಲೀಲಾ (ವಿಧಾನ ಪರಿಷತ್ ಸದಸ್ಯರಾಗಿದ್ದರು), ಸಸ್ಯಶಾಸ್ತ್ರ ವಿಭಾಗದ ಮುರುಳೀಧರ್, ಅರ್ಥಶಾಸ್ತ್ರ ವಿಭಾಗದ ಶ್ರೀಮತಿ ವೈಜಯಂತಿ, ಕನ್ನಡ-ಇಂಗ್ಲೀಷ್ ವಿಭಾಗದ ಅಧ್ಯಾಪಕಿಯರು, ಕ್ರೀಡೆ-ದೈಹಿಕ ಶಿಕ್ಷಣದ ಜಾನ್ಸನ್(?) ಇವರನ್ನು ಮಾತನಾಡಿಸಿದೆ. ಪ್ರಥಮ ಪಿ ಯು ನಿಂದ ಕೊನೆಯ ಪದವಿಯ ವರೆಗಿನ ಆಯ್ದ ವಿದ್ಯಾರ್ಥಿನಿಯರು, ಕಾಲೇಜು ಸಿಬ್ಬಂದಿ ಕೂಡಾ ಸಂದರ್ಶನಕ್ಕೆ ’ಈಡಾ’ದರು. ಮೊದಲ ಸಂದರ್ಶನ…ಸಹಜ ಹುಮ್ಮಸ್ಸಿನಿಂದ ರೆಕಾರ್ಡ್ ಮಾಡಿಕೊಂಡೆ. ಸಂದರ್ಶಿಸಿದ ಬಹುತೇಕ ಎಲ್ಲರೂ, ಮಂಗಳಾ ಹೇಗೆ ಪ್ರೋತ್ಸಾಹದಾಯಕಿಯಾಗಿದ್ದಾರೆ ಎಂಬುದನ್ನು ನಿರ್ವಂಚನೆಯಿಂದ ಹೇಳಿಕೊಂಡರು. ಒಂದಿಬ್ಬರು ವಿದ್ಯಾರ್ಥಿನಿಯರಿಗೆ ರಾಜ್ಯ ಅಥ್ಲೆಟಿಕ್ಸ್ ಗೆ ಆಯ್ಕೆಯಾಗಿದ್ದರ ಖುಷಿ. ಕಾಲೇಜಿನ ಲೈಬ್ರರಿ, ಪ್ರಯೋಗಶಾಲೆ ಎಲ್ಲದರಲ್ಲೂ ಒಪ್ಪ-ಓರಣ.
ಮಂಗಳಾ ಬಿಡುವಾದರು. ಅದೇ ಮುಗುಳ್ನಗೆಯಿಂದ ತಮ್ಮ ಕೊಠಡಿಗೆ ಮತ್ತೆ ಕರೆದೊಯ್ದರು. ’ಪಕ್ಕದಲ್ಲೇ ಥಿಯೇಟರ್ ಇದೆಯಲ್ಲಾ ಮೇಡಮ್..ಕ್ಲಾಸ್ ನಡೆಸಕ್ಕೆ ತೊಂದರೆ ಅಲ್ವಾ? ಸಿನಿಮಾ ಆಕರ್ಷಣೆಯೇ ಹೆಚ್ಚಾದರೆ ಕಷ್ಟ ಅಲ್ಲವೇ’ ಎಂದೆ. ’ಹಾಗೇನಿಲ್ಲಾ…ಸಿನಿಮಾ ನೋಡಬೇಡಿ ಎಂದು ನಾವೆಲ್ಲಿಯೂ ಹೇಳಿಲ್ಲ…ಶಿಕ್ಷಕ/ಶಿಕ್ಷಕಿಯರು ತಾವು ಬೋಧಿಸುವ ವಿಷಯದ ಬಗ್ಗೆ ಆಸಕ್ತಿ-ಕುತೂಹಲ ಮೂಡಿಸುವಂತೆ ಮಾಡಬೇಕು..ಆಗ ವಿದ್ಯಾರ್ಥಿಗಳ ಗಮನ ಓದಿನ ಬಗ್ಗೆ ಕೇಂದ್ರೀಕೃತವಾಗುತ್ತದೆ. ಪುಣ್ಯವಶಾತ್ ನಮ್ಮಲ್ಲಿ ಅಂತಹ ಶಿಕ್ಷಕ ಸಿಬ್ಬಂದಿ ಇದ್ದಾರೆ…ಸಿನಿಮಾ ಹುಚ್ಚು ಇರೋರೂ ಇದ್ದರು…ಈಗಲೂ ಇದಾರೆ’ ಎನ್ನುತ್ತಾ ಮಂಗಳಾ, ಸಿನಿಮಾ ಹುಚ್ಚು ಹಿಡಿಸಿಕೊಂಡಿದ್ದ ಒಂದಿಬ್ಬರು ವಿದ್ಯಾರ್ಥಿನಿಯರ, ಅವರ ತಾಯಂದಿರ ಕುರಿತಾದ ಒಂದೆರೆಡು ಮೋಜಿನ ಪ್ರಸಂಗಗಳನ್ನು ತಿಳಿಸಿದರು. ನಂತರ ೭೦ರ ದಶಕದ ಆದಿಭಾಗದಿಂದ ಅಂದಿನವರೆಗೂ ಕಾಲೇಜು ನಡೆದು ಬಂದ ಬಗೆಯನ್ನು ಕ್ಷಿಪ್ರವಾಗಿ ವಿವರಿಸಿದರು. ’ಶಾಶ್ವತಿ’ಯ ಬಗ್ಗೆ ಮಾತನಾಡಿದೆ. ’ಶಾಶ್ವತಿ’ಯ ಯಶಸ್ಸಿಗೆ ಶ್ರಮಿಸಿದ ಮತ್ತಿಬ್ಬರು ಅಧ್ಯಾಪಕಿ-ಬೋಧಕೇತ್ತರ ಸಿಬ್ಬಂದಿಯನ್ನು ಕೊಠಡಿಗೆ ಕರೆಸಿಕೊಂಡ ಮಂಗಳಾ, ಅವರ ಪರಿಚಯವನ್ನೂ ಮಾಡಿಕೊಡುವ ಹಿರಿಮೆ ತೋರಿದರು. ತಮ್ಮ ಕಾಲೇಜಿನ ಅಟೆಂಡರ್ ರಂಗಸ್ವಾಮಿಯವರಲ್ಲಿದ್ದ ಸಾಹಿತ್ಯದ ಆಸಕ್ತಿ ಗುರುತಿಸಿದ್ದ ಮಂಗಳಾ ಸೂಕ್ತ ಪ್ರೋತ್ಸಾಹವಿತ್ತು. ಆತ ಒಂದು ಕವನಸಂಕಲವನ್ನು ಹೊರತರಲು ಸಹಕರಿಸಿದರು. (ಕವನ-ಸಂಕಲನದ ಹೆಸರು ನೆನಪಿಲ್ಲ)…ಅಂದಿನ ಸಂದರ್ಶನದಲ್ಲಿ ರಂಗಸ್ವಾಮಿ ಈ ವಿಚಾರವನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದರು. ’ನಿಮ್ಮನ್ನ, ನಿಮ್ಮ ಸಹೋದ್ಯೋಗಿಗಳನ್ನ ಕಂಡು ಮಾತನಾಡಿದ್ದು ಬಹಳ ಸಂತೋಷ ಆಯ್ತು ಮೇಡಮ್…ನಿಮ್ಮೆಲ್ಲಾ ಉತ್ತರ, ಸಮಯ, ಸಹಕಾರಕ್ಕೆ ಧನ್ಯವಾದಗಳು…ಮತ್ತೊಮ್ಮೆ ಮಾತನಾಡಿಸುವ ಸುಸಂದರ್ಭ ಬರಲಿ…’ ಎನ್ನುತ್ತಾ ಹೊರಡಲೆದ್ದೆ…”ಎಲಾದ್ರು ಉಂಟಾ…ಕಾಫಿ ಕುಡಿಯದೇ ಹೋಗುವಂತಿಲ್ಲ” ಎಂದು ಕಾಫಿ ತರಿಸಿದರು. ಹಾರ್ದಿಕವಾಗಿ ಬೀಳ್ಕೊಟ್ಟರು.

(ಫೋಟೋ ಕೃಪೆ : ಅಂತರ್ಜಾಲ) ಶಾಶ್ವತಿ ಸಂಗ್ರಹಾಲಯ (ಈಗ ನವೀಕರಣಗೊಳ್ಳುತ್ತಿದೆ)
ಈಗ ಮಂಗಳಾರ ಬಗ್ಗೆ ಹೇಳುವುದಿದೆ. ಆಕಾಶವಾಣಿಗೆ ನಂತರ ಹಿಂದಿರುಗೋಣ … ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಘನ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವದಿಂದಲೂ, ನಮ್ಮ ಜೀವನಕ್ಕೆ ಪೂರಕವಾದ ಓದು ಕಲಿಸಿದ, ಕಲಿಸುತ್ತಿರುವ ಹಲವು ಶಿಕ್ಷಣ ಸಂಸ್ಥೆಗಳಿವೆ. ಸಾಹಿತ್ಯ-ಸಂಸ್ಕೃತಿ-ಕ್ರೀಡೆ-ವಿಜ್ಞಾನ-ಸಿನಿಮಾ ರಂಗಗಳಿಗೆ ಅಪೂರ್ವ ಕೊಡುಗೆ ಇತ್ತ ಶಾಲಾ-ಕಾಲೇಜುಗಳಿವೆ. ಆದರೆ ಮಹಿಳೆಯೊಬ್ಬಳು ಸಭ್ಯ ಅಷ್ಟೇ ದಿಟ್ಟತನದಿಂದ ಮಹಿಳೆಯರಿಗಾಗಿಯೇ ಸ್ಥಾಪಿತವಾದ ಕಾಲೇಜನ್ನು ೨೩ ವರ್ಷ ಯಾವುದೇ ವಿವಾದ-ಕಲ್ಮಶಗಳಿಲ್ಲದೇ ಮುನ್ನಡೆಸಿದ ಉದಾಹರಣೆಗಳು ಕಡಿಮೆ. ಮಂಗಳಾ ವಿಶೇಷ ಅಥವಾ ವಿಶಿಷ್ಟ ಎನಿಸುವುದು ಈ ಕಾರಣಕ್ಕಾಗಿಯೇ.
ಸಿ.ನರಸಿಂಹಮೂರ್ತಿ ಮತ್ತು ರಾಜೇಶ್ವರಿ ದಂಪತಿಗಳ ಮಗಳಾಗಿ ೧೯೩೮ರ ಏಪ್ರಿಲ್ ೧೦ ರಂದು ಬೆಂಗಳೂರಿನಲ್ಲೇ ಜನಿಸಿದ ಮಂಗಳಾ ಮಂಡ್ಯ, ಮೈಸೂರು ಬೆಂಗಳೂರಿನಲ್ಲಿ ವಿದ್ಯಾರ್ಜನೆ ಮಾಡಿದರು. ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯದ ಎಂ.ಎ ಪದವಿ ಗಳಸಿ ಬೆಂಗಳೂರಿಗೆ ವಾಪಾಸಾಗಿ ಎ.ಪಿ.ಎಸ್ ಕಾಲೇಜಿನಲ್ಲಿ ಇಂಗ್ಲೀಷ್ ಅಧ್ಯಾಪಕಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ೧೯೫೯ರಲ್ಲಿ ಅಧ್ಯಾಪನ ಆರಂಭಿಸಿದ ಮಂಗಳಾ, ಕೇವಲ ಶಿಕ್ಷಕಿಯಾಗಿ ಮಾತ್ರ ಉಳಿಯಲಿಲ್ಲ. ಬರಹಗಾರ್ತಿ, ಸಂಶೋಧಕಿ, ಅನುವಾದಕಿ, ಆಡಳಿತಗಾರ್ತಿ ಎಲ್ಲವೂ ಆದರು. ಮಂಗಳಾರ ಅಧ್ಯಾಪನ ವೃತ್ತಿಯ ೨೫ ವರ್ಷಗಳ ಕಥನವೇ ’ಅಧ್ಯಾಪಕಿಯಾಗಿ ೨೫ ವರ್ಷ’ ಎಂಬ ಸಂಗ್ರಹಯೋಗ್ಯ ಕೃತಿ. (’ಕನ್ನಡಪ್ರಭ’ ದಲ್ಲಿ ಅಂಕಣವಾಗಿ ಬರುತ್ತಿತ್ತು). ಖಾದ್ರಿ ಶಾಮಣ್ಣ ಕೃತಿಗೆ ಒಂದು ಚೊಕ್ಕ ಮುನ್ನುಡಿ ಬರೆದಿದ್ದಾರೆ. ಅಲ್ಲದೇ ’ಪ್ರಾಧ್ಯಾಪಕಿಯಾಗಿ ೨೦ ವರ್ಷ’ ಎಂಬ ಮತ್ತೊದು ಕೃತಿಯನ್ನೂ ಮಂಗಳಾ ರಚಿಸಿದ್ದಾರೆ. ಇನ್ನೂ ಕೆಲವು ಕೃತಿಗಳಿವೆ. ವ್ಯಾಪಾರೀಕರಣಗೊಂಡಿರುವ, ಸಂವೇದನೆಗಳು ಅಪರೂಪವಾಗಿರುವ ಪ್ರಸಕ್ತ ಶೈಕ್ಷಣಿಕ ಪರಿಸ್ಥಿತಿಯಲ್ಲಿ ಮಂಗಳಾ ತಮ್ಮ ಈ ಎರಡು ಕೃತಿಗಳಲ್ಲಿ ಮಂಡಿಸಿರುವ ವಿಚಾರಗಳು ಬಹಳ ಪ್ರಸ್ತುತವೆನಿಸುತ್ತವೆ. ಉದ್ಯೋಗಸ್ಥ ಮಹಿಳೆಯ ಸ್ಥಾನ-ಸ್ಥಿತಿ-ಗತಿಗಳನ್ನು ಸೂಕ್ಷ್ಮವಾಗಿ ಬಿಡಿಸುತ್ತಾ, ಕೆಲವು ಸ್ವಾರಸ್ಯಕರ ಘಟನೆಗಳ ಬಗ್ಗೆಯೂ ಬರೆಯುತ್ತಾರೆ.
ಅಮೆರಿಕ ಶಿಕ್ಷಣ ಪ್ರತಿಷ್ಟಾನ ಹಾಗೂ ಬ್ರಿಟಿಷ್ ಕೌನ್ಸಿಲ್ ಗಳ ಸಹಯೋಗದೊಂದಿಗೆ ವಿದೇಶದಲ್ಲಿನ ವಿದ್ಯಾಭ್ಯಾಸ ಪದ್ಧತಿಯ ಅಧ್ಯಯನಕ್ಕಾಗಿ, ಮಂಗಳಾ ಅಮೆರಿಕದ ಹಲವು ವಿಶ್ವವಿದ್ಯಾಲಯಗಳಿಗೆ ಭೇಟಿ ಕೊಡುತ್ತಾರೆ. ತಾವು ಮಹಿಳಾ ಕಾಲೇಜಿನ ಪ್ರಾಂಶುಪಾಲಕಿಯೆಂದು ಪರಿಚಯಿಸಿಕೊಳ್ಳುವಾಗ, ಅಲ್ಲಿನ ಶಿಕ್ಷಕ/ಕಿ ಸಿಬ್ಬಂದಿ ಬೆರಗಾಗುತ್ತಾರೆ. ಕಾರಣ ಆಗ ಅಮೆರಿಕದ ಬಹುತೇಕ ಮಹಿಳಾ ಕಾಲೇಜಿನ ಪ್ರಾಂಶುಪಾಲಕರೆಲ್ಲಾ ಪುರುಷರೇ !! ಮಹಿಳೆಯರು ಇದಕ್ಕಾಗಿ ಹೋರಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಇದಕ್ಕೆ ಕಾರಣ, ಅಮೆರಿಕದಲ್ಲಿ ಪ್ರಾಂಶುಪಾಲರ ಅತಿ ಮುಖ್ಯ ಕರ್ತವ್ಯ ’ನಿಧಿ’ ಸಂಗ್ರಹಣೆ…ಕಾಲೇಜುಗಳಿಗೆ ಸರ್ಕಾರದ ಅನುದಾನ ಸಿಗುವುದಿಲ್ಲ. ತಮ್ಮ ಲೈಬ್ರರಿ, ಪ್ರಯೋಗಶಾಲೆ, ಕ್ರೀಡಾ ಸಂಬಂಧಿ ಚಟುವಟಿಕೆಗಳಿಗೆಲ್ಲಾ ಕಾಲೇಜಿನದ್ದೇ ಹಣ ವಿನಿಯೋಗವಾಗಬೇಕು…ಈ ’ನಿಧಿ’ಸಂಗ್ರಹಣೆ ’ಹೆಂಗಸರ ಕೈಯಲ್ಲಿ ಆಗುವುದಿಲ್ಲ’ ಎಂಬ ಅಲಿಖಿತ ವಿಧಿಯನ್ನು ಹೇರಿಕೊಂಡ ಅಲ್ಲಿನ ಶಿಕ್ಷಣ ಸಂಸ್ಥೆಗಳು, ಮಹಿಳೆಯರಿಗೆ ಪ್ರಾಂಶುಪಾಲಕಿ ಹುದ್ದೆ ಸಿಗದಂತೆ ’ಎಚ್ಚರ’ ವಹಿಸಿವೆ. ಭಾರತ’ದಂತಹ’ ದೇಶದಲ್ಲಿ ಮಹಿಳೆಯೇ, ಮಹಿಳಾ ಕಾಲೇಜಿನ ಪ್ರಾಂಶುಪಾಲಕಿ ಎಂಬ ’ಕಟು’ ಸತ್ಯವನ್ನು ಅಲ್ಲಿನ ಶಿಕ್ಷಕ-ಶಿಕ್ಷಕಿ ವೃಂದ ಅರೆಮನಸ್ಸಿಂದ ಅರಗಿಸಿಕೊಳ್ಳುತ್ತದೆ. ಪ್ರಶ್ನೆಗಳ ಸುರಿಮಳೆಯಾಗುತ್ತದೆ. ಮಂಗಳಾ ಶಾಂತಚಿತ್ತದಿಂದ ಉತ್ತರಿಸುತ್ತಾರೆ. ಹಾಗೆಂದು ಭಾರತೀಯರು ಸಭ್ಯಸ್ಥರೆಂದೇನೂ ಅಲ್ಲ. ಮಂಗಳಾರೊಂದಿಗೆ ಅಮೆರಿಕನ್ ಶಿಕ್ಷಣ ಪದ್ಧತಿಯನ್ನು ದೀರ್ಘವಾಗಿ ಚರ್ಚಿಸಿದ ಕೆಮಿಸ್ಟ್ರಿ ಪ್ರಾಧ್ಯಾಪಕಿಯಾಗಿದ್ದ ಮಾರ್ಜರಿ ಗಾರ್ಡನರ್ ಸಂದರ್ಶಕ ಪ್ರಾಧ್ಯಾಪಕಿ (ವಿಸಿಟಿಂಗ್ ಪ್ರೊಫೆಸರ್) ಆಗಿ ಸೆಂಟ್ರಲ್ ಕಾಲೇಜಿಗೆ ಬರುವ ಕಾರ್ಯಕ್ರಮ ಆಯೋಜನೆಯಾಗಿರುತ್ತದೆ. ಆದರೆ ನಮ್ಮ ಸೆಂಟ್ರಲ್ ಕಾಲೇಜಿನ ಬೃಹಸ್ಪತಿಗಳು-ಶುಕ್ರಾಚಾರ್ಯರುಗಳೆಲ್ಲಾ ’ಹೆಂಗಸರಾದ್ರೆ ಕಳಿಸ್ಬೇಡಿ’ ಎಂದು ಪಟ್ಟು ಹಿಡಿದದ್ದರಿಂದ, ಆಕೆಯ ಪ್ರಯಾಣ ರದ್ದಾಗುತ್ತದೆ..
ತಾವು ಇಂಗ್ಲೀಷ್ ಶಿಕ್ಷಕಿಯ ಮಟ್ಟದಿಂದ ಪ್ರಾಂಶುಪಾಲಕಿಯಾಗುವುದವರೆಗಿನ ’ಗಾಥೆ’ಯನ್ನು ಮಂಗಳಾ ಯಾವುದೇ ಉತ್ಪ್ರೇಕ್ಷೆಗಳಿಲ್ಲದೇ, ತೋರಿಕೆಯಿಲ್ಲದೇ ಹೇಳಿದ್ದಾರೆ. ಮೊದಲದಿನ ಮೊದಲ ತರಗತಿಯಲ್ಲಿ ತನಗಿಂತ ವಯಸಾದ ವಿದ್ಯಾರ್ಥಿಗಳನ್ನು ನೋಡಿ ತಬ್ಬಿಬ್ಬಾದ ಮಂಗಳಾರಿಗೆ, ಹಿರಿಯರಾದ ವಿದ್ಯಾರ್ಥಿಯೊಬ್ಬರು ಕುರ್ಚಿ ತೋರಿಸಿ, ’ಕುಳಿತುಕೊಳ್ಳಿ ಮೇಡಂ’ ಎನ್ನುತ್ತಾರೆ . ನಂತರ ಮಂಗಳಾ ಕ್ರಮೇಣ ಅಧ್ಯಾಪಕವೃತ್ತಿಗೆ ಹೊಂದಿಕೊಂಡರು. ಎಪಿಎಸ್ ಕಾಲೇಜಿನಲ್ಲಿ ತಮ್ಮ ವೃತ್ತಿಜೀವನ ಆರಂಭಿಸುವ ಮಂಗಳಾರಿಗೆ ಅಲ್ಲೇನೂ ಕೊರತೆಯಿರಲಿಲ್ಲ. ಶಿಕ್ಷಕರು-ಸಿಬ್ಬಂದಿ ಒಂದೇ ಸಂಸಾರದವರಂತೆ ಇದ್ದ ದಿನಗಳವು. ವಿದ್ಯಾರ್ಥಿ ವೃಂದದ ಪ್ರೀತಿ-ಗೌರವಗಳೂ ಹೇರಳವಾಗಿದ್ದವು. ಆದರೆ ಎಚ್ಚೆನ್ (ಎಚ್.ನರಸಿಂಹಯ್ಯ) ರ ಸರಳತೆ, ಆದರ್ಶದ ದೃಷ್ಟಾಂತಗಳಿಂದ ಆಕರ್ಷಿತರಾದ ಮಂಗಳಾ, ನ್ಯಾಷನಲ್ ಕಾಲೇಜಿಗೆ ಬರಬೇಕೆಂದು ಇಷ್ಟಪಟ್ಟರು. ಕಾಕತಾಳೀಯವೆಂಬಂತೆ, ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಒಂದು ಹುದ್ದೆ ಖಾಲಿಯಿದ್ದುದರಿಂದ, ಮಂಗಳಾ ಎಚ್ಚೆನ್ ರನ್ನೇ ನೇರವಾಗಿ ಸಂಪರ್ಕಿಸಿದರು. ಆಗಾಗಲೇ ಪತ್ರಿಕೆಗಳಲ್ಲಿ ಮಂಗಳಾ ಬರೆಯುತ್ತಿದ್ದುದರಿಂದ ಎಚ್ಚೆನ್ ಗೆ ಅವರ ಬಗ್ಗೆ ತಿಳಿದಿತ್ತು. ‘ಯಾವಾಗಿನಿಂದ ಕೆಲಸಕ್ಕೆ ಬರುತ್ತೀರಿ’ ಎಂದು ಎಚ್ಚೆನ್ ಕೇಳಿದಾಗ ಮಂಗಳಾಗೆ ಅಚ್ಚರಿ. ೧೯೬೩ ರಲ್ಲಿ ಹೀಗೆ ಮಂಗಳಾ ನ್ಯಾಷನಲ್ ಕಾಲೇಜಿಗೆ ಸೇರುತ್ತಾರೆ.
ಆದರೆ ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೇ ಮಂಗಳಾರಿಗೂ ವಿಭಾಗದ ಮುಖ್ಯಸ್ಥರಿಗೂ ಶೀತಲ ಸಮರವೇರ್ಪಟ್ಟಿತು. ತಾವು ಕಾಲೇಜಿಗೆ ಸೇರಿದ ದಿನ ವಿಭಾಗಕ್ಕೆ ಬಂದಾಗ, ಒಳಗೆಲ್ಲೋ ಇದ್ದ ವಿಭಾಗದ ಮುಖ್ಯಸ್ಥರು ಮಂಗಳಾರನ್ನು ಮಾತನಾಡಿಸಲು ಬರಲೇ ಇಲ್ಲ. ಸಹ ಅಧ್ಯಾಪಕರೊಬ್ಬರು ಮಾತ್ರ ’ಹಲೋ’ ಎಂದು ದೇಶಾವರಿ ನಗೆ ಬೀರಿದರು. ಮುಖ್ಯಸ್ಥ-ಮಂಗಳಾ ನಡುವೆ ಅಭಿಪ್ರಾಯಭೇದ ತಾರಕಕ್ಕೆ ಹೋದಾಗ ಆಗಮಿಸಿದ ಎಚ್ಚೆನ್ ಹೊಂದಾಣಿಕೆಗಾಗಿ ಬಹಳ ಹೆಣಗಾಡಿದರು. ಕೆಲವು ದಿನಗಳಲ್ಲಿ ಎಚ್ಚೆನ್ ಅಮೆರಿಕೆಗೆ ಸಂದರ್ಶನ ಪ್ರಾಧ್ಯಾಪಕರಾಗಿ ಹೋದಾಗ, ಮಂಗಳಾಗೆ ಮತ್ತಷ್ಟು ಕಷ್ಟವಾಯಿತು. ಅದೇ ಸಮಯದಲ್ಲಿ ಮಂಗಳಾರ ತಂದೆ ನಿಧನರಾದಾಗ ಇಡೀ ಕುಟುಂಬಕ್ಕೆ ವರ್ಣಿಸಲದಳವಾದ ಆಘಾತ. ಎಚ್ಚೆನ್ ಮರಳಿದೊಡನೆಯೇ ಮಂಗಳಾ ರಾಜೀನಾಮೆ ನೀಡಿ ತಾವು ಒಮ್ಮೆ ಅಪಾರವಾಗಿ ಮೆಚ್ಚಿದ್ದ ನ್ಯಾಷನಲ್ ಕಾಲೇಜಿನಿಂದ ಹೊರಬಂದರು. ಇದ್ಯಾವ ಘಟನೆಗಳನ್ನೂ ಎಳೆಯದೇ, ತಮ್ಮ ಮೇಲೆ ದೈನ್ಯತೆ ಹೇರಿಕೊಳ್ಳದೇ ಚೊಕ್ಕವಾಗಿ ಹೇಳುವ ಮಂಗಳಾರ ಸರಳ ಶೈಲಿ ಇಷ್ಟವಾಗುತ್ತದೆ. ಎಪಿಎಸ್ ಬಿಟ್ಟಿದ್ದಕಾಗಿ ಪರಿತಾಪ ಪಡದೇ, ಎಚ್ಚೆನ್ ರ ಸಂಸ್ಥೆ ಸೇರಿ ಶಿಕ್ಷಣಕ್ಷೇತ್ರದ ಹೊಸ ಆಯಾಮಗಳನ್ನು ಪರಿಚಯಿಸಿಕೊಂಡಿದ್ದನ್ನು ನಿರ್ವಂಚನೆಯಿಂದ ಒಪ್ಪಿಕೊಳ್ಳುತ್ತಾರೆ. ಎಚ್ಚೆನ್ ರ ಪ್ರಯೋಗಶೀಲತೆ, ಮೌಲ್ಯಮಾಪನ ವೇಳೆಯಲ್ಲಿ ತೋರುತ್ತಿದ್ದ ಶಿಸ್ತು, ನ್ಯಾಷನಲ್ ಕಾಲೇಜನ್ನು ಆ ಕಾಲದಲ್ಲೇ ಒಂದು ಮಿನಿ ವಿಶ್ವವಿದ್ಯಾಲಯವಾಗಿ ಪರಿವರ್ತಿಸಿದ ರೀತಿಗಳನ್ನು ಮಂಗಳಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕಪ್ಪಣ್ಣ ಖ್ಯಾತಿಯ ಜಿ.ಶ್ರೀನಿವಾಸ್ ಮಂಗಳಾರ ಪ್ರಿಯ ವಿದ್ಯಾರ್ಥಿ. ಅವರ ಪ್ರೀತಿಯ ಒತಾಯದ ಮೇರೆಗೆ ಮಂಗಳಾ ’ಎಲ್ಲರೂ ನನ್ನವರೆ’ (ಅರ್ಥತ್ ಮಿಲ್ಲರ್ ನಿಂದ ಪ್ರಭಾವಿತ) ನಾಟಕ ಬರೆದರು. ಕಪ್ಪಣ್ಣ ತಾವೇ ಅದನ್ನು ಸ್ವತಃ ನಿರ್ದೇಶಿಸಿದರು. ರಂಗದ ಮೇಲೆ ಅತ್ಯಂತ ಯಶಸ್ವಿಯಾದ ಈ ನಾಟಕದಲ್ಲಿ ಲೋಕನಾಥ್, ವೈಶಾಲಿ ಕಾಸರವಳ್ಳಿ, ಮಂಜುಳಾ ತರದ ಮೇರು ಕಲಾವಿದರು ಅಭಿನಯಿಸಿದ್ದರು. ನಾಟಕ ಬೆಳ್ಳಿಹಬ್ಬವನ್ನೂ ಆಚರಿಸಿತು. ಮಂಗಳಾ ಈ ನಾಟಕ ರಚಿಸುತ್ತಿದ್ದಾಗ, ಎಚ್ಚೆನ್ ಕೂಡಾ ಆಗಾಗ ವಿಚಾರಿಸಿ, ಪ್ರೋತ್ಸಾಹದ ಮಾತುಗಳಾಡಿ ಹೋಗುತ್ತಿದ್ದರು.

ರಾಜೀನಾಮೆ ಕೊಟ್ಟು ಮನೆಯಲ್ಲಿದ್ದ ಮಂಗಳಾ ನೆರವಿಗೆ ಬಂದವರು ನಿರಂಜನ. ಚರಿತ್ರಾರ್ಹವಾದ ’ಜ್ಞಾನಗಂಗೋತ್ರಿ’ ಕಿರಿಯರ ವಿಶ್ವಕೋಶವನ್ನು ಸಂಪಾದಿಸಿ ಕನ್ನಡಿಗರಿಗೆ ಒಪ್ಪಿಸಿದ ನಿರಂಜನ, ಮಂಗಳಾರಿಗೆ ತಮ್ಮ ತಂಡದಲ್ಲಿ ಪ್ರಮುಖ ಜವಾಬ್ದಾರಿಯೊಂದನ್ನು ನೀಡಿದರು. ಆದರೆ ಅದು ಒಂದು ವರ್ಷದ ಕೆಲಸ ಮಾತ್ರ. ವಿಶ್ವಕೋಶದ ಕೆಲಸ ಮುಗಿದ ನಂತರ ಮಂಗಳಾ ನಿರುದ್ಯೋಗ ಪರ್ವಕ್ಕೆ ವಾಪಸಾದರು. ನಿರುದ್ಯೋಗಿಯ ಪಾಡು, ಹತಾಶೆ, ಅಸಹಾಯಕತೆ ಗಳು ಮಂಗಳಾರಿಗೆ ಜೀವನದ ಹಲವು ಪಾಠ ಕಲಿಸಿದವು. ತಮ್ಮ ಮನಸ್ಸಿನಲ್ಲಿದ್ದ ಅಧ್ಯಾಪಕಿಯ ಚಿತ್ರವನ್ನು ಅಳಿಸಿಹಾಕಲು ಯತ್ನಿಸುತ್ತಿರುವಂತೆ ಒಂದು ದಿನ ಎಚ್ಚೆನ್ ರಿಂದ ಫೋನ್ ಬರುತ್ತದೆ. ’ ಕೂಡಲೇ ಬಂದು ಕಾಣುವಂತೆ’ ಹೇಳಿದಾಗ ಬಸವನಗುಡಿಯ ಕಾಲೇಜಿನಲ್ಲಿ ಮಂಗಳಾ ಎಚ್ಚೆನ್ ರನ್ನು ಭೇಟಿಯಾದರು. “ರಾಷ್ಟ್ರೀಯ ವಿದ್ಯಾಲಯದವರು ಮಹಿಳೆಯರಿಗಾಗಿಯೇ ಕಾಲೇಜು ಮಾಡ್ತಾ ಇದ್ದಾರಮ್ಮ..ಒಬ್ಬರು ಪ್ರಿನ್ಸಿಪಾಲ್ ಬೇಕು ಅಂತ ಕೇಳಿದ್ದಾರೆ..ನಿಮ್ಮ ಹೆಸರನ್ನು ಹೇಳಿದ್ದೇನೆ. ನೀವು ಒಪ್ಪಬೇಕು”…ಮಂಗಳಾ ಅವಾಕ್ಕಾದರು. ಎಚ್ಚೆನ್ ರ ಪ್ರೀತಿಯ ಒತ್ತಾಯಕ್ಕೆ ಮಂಗಳಾ ಬೇಡವೆನ್ನಲಾಗುವುದಿಲ್ಲ.
ಮಂಗಳಾ ಹೀಗೆ ೧೯೭೧ ರಲ್ಲಿ ಅರ್ಧಂಬರ್ಧವಾಗಿದ್ದ ಕಟ್ಟಡದ ಒಂದು ಸಣ್ಣ ಕೋಣೆಯಲ್ಲಿ ತಮ್ಮ ವೃತ್ತಿಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಾರೆ. ಯಾವ ಅನುಭವವಾಗಲೀ, ಆಡಳಿತ ವಿಚಾರವಾದ ಪರಿಶ್ರಮವಾಗಲೀ ಇಲ್ಲದ ಮಂಗಳಾ ಮೊದಲು ಗೊಂದಲ-ಗಲಿಬಿಲಿಗೆ ಒಳಗಾಗುತ್ತಾರೆ. ನಂತರ ಧೈರ್ಯದಿಂದ ಹೆಜ್ಜೆ ಇಡುತ್ತಾರೆ. ಸಂಸ್ಥೆಯ ಮುಖ್ಯಸ್ಥರಾದ ಕಸ್ತೂರಿರಂಗ ಶೆಟ್ಟರು, ಕಾರ್ಯದರ್ಶಿ ಪಾಂಡು ಮಂಗಳಾ ಆಡಳಿತ ನಿರ್ವಹಣೆಗೆ ಸಕಲ ಸಹಕಾರವನ್ನೂ ನೀಡುತ್ತಾರೆ.
೧೯೭೧ ರಿಂದ ತಮ್ಮ ನಿವೃತ್ತಿಯವರೆಗೂ ಮಂಗಳಾ, ಮಾದರಿಯಾಗುವಂತೆ ಕಾರ್ಯ ನಿರ್ವಹಿಸಿದರು. ’ಮೇನೇಜ್ ಮೆಂಟ್’ ಯಾವ ವಿಷಯಕ್ಕೂ ಬಾಯಿ ಹಾಕದಂತೆ ಎಚ್ಚರವಹಿಸಿದರು. ಒತ್ತಡ, ಪ್ರಭಾವ, ವಶೀಲಿ, ಕಾಲೆಳೆದಾಟಗಳನ್ನೆಲ್ಲಾ ಕ್ಯಾಂಪಸ್ ನ ಆಚೆ ಇಟ್ಟರು. ’ಮಹಿಳಾ ಕಾಲೇಜುಗಳು ಏಕೆ ಬೇಕು? ಇದು ಪ್ರತ್ಯೇಕತೆ ಅಲ್ಲವೇ?’ ಎಂದು ಪ್ರಶ್ನಿಸಿದವರಿಗೆ ಮಂಗಳಾ ದಿಟ್ಟ ಉತ್ತರ ಕೊಟ್ಟರು:
“ನಮ್ಮಲ್ಲಿ ಮಹಿಳೆಯರ ವಿಕಾಸಕ್ಕೆ ಸಹಶಿಕ್ಷಣ (ಕೊ-ಎಜುಕೇಷನ್) ಕ್ಷೇತ್ರದಲ್ಲಿ ಇನ್ನೂ ಭೂಮಿ ಹದವಾಗಿಲ್ಲ. ಅದಾಗುವವರೆಗೂ, ಮಹಿಳೆಯರ ಸಾಮೂಹಿಕ ವಿಕಾಸ ಪ್ರತ್ಯೇಕ ಮಹಿಳಾ ಸಂಸ್ಥೆಗಳಿಂದ ಸಂಘಟಿತ ಕಾರ್ಯಕ್ಷೇತ್ರಗಳಲ್ಲಿ ಮಾತ್ರ ಸಾಧ್ಯ. ಇಲ್ಲಿ ಒಂದು ತರಗತಿಯಲ್ಲಿರುವ ೧೦೦ ಹುಡುಗಿಯರಲ್ಲಿ, ಕನಿಷ್ಟ ೬೦ ಜನ ತಮ್ಮ ವ್ಯಕ್ತಿತ್ವವನ್ನು ಕಂಡುಕೊಳ್ಳಲು ಸಾಧ್ಯ. ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಮಹಿಳೆಯರಿಗಾಗಿಯೇ ಇರುವ ಶಾಲಾ-ಕಾಲೇಜುಗಳಲ್ಲಿನ ಮುಕ್ತ-ಶಕ್ತ-ಶಿಸ್ತು-ಶ್ರದ್ಧೆಯ ವಾತಾವರಣ ಮಹಿಳೆಯರ ಏಳಿಗೆಗೆ ಬಹುಮಟ್ಟಿಗೆ ಕಾರಣವಾಗುತ್ತದೆ. ಮಹಿಳೆಯ ದನಿ ಒಳಗೊಳಗೆ ಅಡಗಿಹೋಗದೇ ಮೂಡಿ ಮೊಳಗುವ ಮಾರ್ದನಿಯಾಗುತ್ತದೆ’.
ಹುಡುಗಿಯೊಬ್ಬಳು “ಅವಕಾಶ ಕೊಡಿ ಮೇಡಂ..ಪ್ಲೀಸ್” ಎನ್ನುತ್ತಾ ಅಸಹಕಾಯಳಾಗಿ ಸೀಟ್ ಗಾಗಿ ಬೇಡುತ್ತಾ ನಿಂತ ಸಂದರ್ಭ. ಮಂಗಳಾ ಮೂಕರಾಗುತ್ತಾರೆ. ಅವರ ಮನಸ್ಸು ಹದಿನೈದು ವರ್ಷ ಹಿಂದಕ್ಕೆ ಓಡುತ್ತದೆ. ಬಿ.ಎ. ಆನರ್ಸ್ ನಲ್ಲಿ ತೃತೀಯ ದರ್ಜೆ ಬಂದಿದ್ದರಿಂದ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸೀಟು ಸಿಗುವುದು ಸಂದೇಹವಾಗುತ್ತದೆ. ಮಂಗಳಾರ ಅಂಕಪಟ್ಟಿ ನೋಡಿದ ಆಗಿನ ಪ್ರಿನ್ಸಿಪಾಲ್ ಶ್ರೀಮತಿ ಸಬಾ ಪಾರ್ಥಸಾರಥಿ “ಯಕಮ್ಮಾ ಇಷ್ಟು ಕಡಿಮೆ ತೊಗೊಂಡಿದೀಯಾ?” ಎಂದಾಗ ಗದ್ಗತಿತರಾದ ಮಂಗಳಾ, ’ಚೆನ್ನಾಗೆ ಮಾಡ್ದೆ ಮೇಡಮ್…ಕಡಿಮೆ ಮಾರ್ಕ್ಸ್ ಯಾಕೆ ಬಂತು ಅಂತ ಗೊತ್ತಿಲ್ಲಾ’ ಎನ್ನುತ್ತಾರೆ. ಆಗ ಸಬಾ ’ಹಾಗಾದ್ರೆ ಒಂದ್ ಕೆಲ್ಸ ಮಾಡಮ್ಮ..ಲೈಬ್ರರಿಗೆ ಹೋಗು..ನಿನಗೆ ಬೇಕಾದ ಒಂದು ಪುಸ್ತಕ ತೆಗೆದುಕೊ. ಓದು… ಸಾಯಂಕಾಲ ನನ್ನ ರೂಮಿಗೆ ಬಂದು ವಿಮರ್ಶಾತ್ಮಕ ಪ್ರಬಂಧ ಬರಿ….ನಿನ್ನ ಪ್ರಬಂಧ ಓದಿದ ನಂತರ ನಿನ್ನನ್ನು ಸೇರಿಸಿಕೊಳ್ಳಬೇಕಾ ಅಂತ ನಿರ್ಧರಿಸೋಣವಂತೆ’ ಎನ್ನುತ್ತಾರೆ. ಮಂಗಳಾ ಅದರಂತೆ ಪುಸ್ತಕವೊಂದನ್ನು ಓದಿ ಸಂಜೆ ಸಬಾ ರ ಕೊಠಡಿಯಲ್ಲೇ ಕುಳಿತು ಪ್ರಬಂಧವೊಂದನ್ನು ಇಂಗ್ಲೀಷಿನಲ್ಲಿ ಬರೆದು ಒಪ್ಪಿಸುತ್ತಾರೆ. ಪ್ರಬಂಧ ಓದಿದ ಸಬಾ ’ಎಕ್ಸಲೆಂಟ್’ ಎಂದು ಉದ್ಗರಿಸುತ್ತಾ ’ನಾಳೆ ಕಾಲೇಜು ಸೇರಿಕೋ’ ಎನ್ನುತ್ತಾರೆ. ಮಂಗಳಾರ ಸಂತೋಷಕ್ಕೆ ಪಾರವೇ ಇರುವುದಿಲ್ಲ.
’ಅವಕಾಶ ಕೊಡಿ ಮೇಡಂ ಪ್ಲೀಸ್’ ಎಂದು ದೈನ್ಯಳಾಗಿ ನಿಂತ ಆ ಹುಡುಗಿಯನ್ನು ಕಂಡು ತಮ್ಮ ಜೀವನದ ಘಟನೆಯನ್ನು ನೆನೆದು ಮನಕಲಕಿದ ಮಂಗಳಾ ಹೇಳುತ್ತಾರೆ:’ಸರಿ ನಾಳೆ ಬಂದು ಸೇರಿಕೋ’. ಆ ಕ್ಷಣ, ಆ ಹುಡುಗಿಯ ಕಣ್ಣಲ್ಲಿ ಮಿಂಚಿದ ಹೊಂಬೆಳಕು, ಎಣೆಯಿಲ್ಲದ ಸಂತೋಷ ಮಂಗಳಾ ಪಾಲಿಗೆ ಅವಿಸ್ಮರಣೀಯವಾಗುತ್ತದೆ. ಆ ಹುಡುಗಿ ಎಸ್.ಎಸ್.ಎಲ್.ಸಿ ಯಲ್ಲಿ ಹಲವು ಬಾರಿ ನಪಾಸು. ಅಂಕಪಟ್ಟಿಯ ಒಂದು ಕಂತೆಯೇ ಅವಳ ಬಳಿ ಇದೆ.’ಆರು ಅಟೆಂಪ್ಟ್’ ಮಾಡಿದ ಆಕೆಗೆ ಸರ್ಕಾರಿ ಕಾಲೇಜಿನಲ್ಲೂ ಸೀಟು ಸಿಕ್ಕಿಲ್ಲ. ಸರಿ..ಮಂಗಳಾರಿಗೆ ದುಂಬಾಲು ಬೀಳುತ್ತಾಳೆ. ಮಂಗಳಾ ಮೊದಲು ತಿರಸ್ಕರಿಸುತ್ತಾರೆ. ತನ್ನ ಮನೆಯ ಪರಿಸ್ಥಿತಿ ವಿವರಿಸಿದ ಆ ಹುಡುಗಿ ಕೈ ಮುಗಿಯುತ್ತಾ ’ಮೇಡಂ…ನನ್ಗೆ ಸೀಟು ಕೊಡಿ ಮೇಡಂ…ನಾನು ಮೊದಲ ಸರ್ತಿಯೇ ಪಿ ಯು ಸಿ ಪಾಸ್ ಮಾಡ್ತೀನೋ ಇಲ್ವೋ ನೋಡಿ..ನಿಮ್ಮ ಕಾಲೇಜು ಪಕ್ಕದಲ್ಲೇ ನಮ್ಮನೆ ಮೇಡಂ..’ ಇತ್ಯಾದಿಯಾಗಿ ಗೋಗರೆಯುತ್ತಾ ನಿಂತಾಗ ಮಂಗಳಾ ಆ ’ಒಂದು ಅವಕಾಶ’ ನೀಡಿಯೇ ಬಿಡುತ್ತಾರೆ. ಅದೇ ವಿದ್ಯಾರ್ಥಿನಿ, ಪಿಯುಸಿ ಯನ್ನು ಮೊದಲ ಸಲವೇ ಪಾಸ್ ಮಾಡುತ್ತಾಳೆ..ಬಿ.ಎ.ಪ್ರಥಮ ದರ್ಜೆಯಲ್ಲಿ ಮಾಡಿದ ಆಕೆ ಎಮ್.ಎ. ಪರೀಕ್ಷೆಯಲ್ಲಿ ಸ್ವರ್ಣ ಪದಕವನ್ನೂ ಪಡೆಯುತ್ತಾಳೆ…
ಈ ಘಟನೆ ಮಂಗಳಾರಲ್ಲಿ ಪ್ರಸಕ್ತ ಶಿಕ್ಷಣ ವ್ಯವಸ್ಥೆಯ ಬಗ್ಗೆ ಚಿಂತಿಸುವಂತೆ ಮಾಡುತ್ತದೆ ಅಲ್ಲದೇ ತಾವು ಪ್ರಾಂಶುಪಾಲಕಿಯಾಗಿದಾಗ ಹಲವು ಬದಲಾವಣೆಗಳನ್ನು ಮಾಡಲು ಪ್ರೇರೇಪಿಸುತ್ತದೆ. ವಿದ್ಯಾರ್ಥಿ/ನಿ ಪಡೆಯುವ ಅಂಕಗಳೇ ಅವನ/ಳ ಪ್ರತಿಭೆ ಅಥವಾ ಯೋಗ್ಯತೆಯ ಮಾನದಂಡವಾಗಬಾರದು. ಅಂದಿನಿಂದ, ಮಂಗಳಾ ತಮ್ಮ ಕಾಲೇಜಿನಲ್ಲಿ ಕಡಿಮೆ ಅಂಕ ಬಂದವರಿಗೆ, ಆರ್ಥಿಕವಾಗಿ-ಬೌದ್ಧಿಕವಾಗಿ ಹಿಂದುಳಿದವರಿಗೆ, ಗ್ರಾಮಾಂತರ ಪ್ರದೇಶದಿಂದ ಬಂದವರಿಗೆ ಆದ್ಯತೆ ನೀಡಲಾರಂಭಿಸಿದರು. ಮಂಗಳಾ ನಿರ್ಧಾರಕ್ಕೆ ಹಲವು ’ದೊಡ್ಡ’ ಮನುಷ್ಯರ ಕಾಲೇಜುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದವು. ಮಂಗಳಾ ಗಟ್ಟಿ ಧ್ವನಿಯಲ್ಲಿ ಕೇಳಿದರು:”ಎಲ್ಲಾ ಕಾಲೇಜುಗಳು ಫಸ್ಟ್ ಕ್ಲಾಸ್ ಬಂದವರಿಗೆ, ನೈನ್ಟಿ ಪರ್ಸೆಂಟ್ ಬಂದವರಿಗೆ ಸೀಟು ಕೊಟ್ಟರೆ, ಕಡಿಮೆ ಮಾರ್ಕ್ಸ್ ಬಂದವರನ್ನು ಯಾರ್ರೀ ನೋಡ್ತಾರೆ? ಬಸವನಗುಡಿಯ ಭಾಮಾದೇವಿಗೆ ಎಲ್ಲಾ ಕಾಲೇಜ್ ನವರೂ ಕರೆದು ಸೀಟ್ ಕೊಟ್ಟರೆ..ಅಮ್ಮಸಂದ್ರದ ಅಂಬಕ್ಕನ್ನ ಕೇಳೋರ್ ಯಾರ್ರೀ”…ದೊಡ್ಡ ಮನುಷ್ಯರು ಸ್ವಲ್ಪ ತಣ್ಣಗಾದರು. ’ಸದ್ಯ..ಮಂಗಳಾ ಇಂಜಿನೀರಿಂಗ್ ಕಾಲೇಜ್ ಶುರು ಮಾಡಲಿಲ್ಲ’ ಎಂದು ಕೆಲವರು ನಿರಾಳರಾದರು. (ಸಂದರ್ಶನದ ಸಂದರ್ಭದಲ್ಲೂ ಮಂಗಳಾ ಇದನ್ನೇ ಹೇಳಿದ್ದರು).
ಮಹಿಳಾ ಅಧ್ಯಯನವೆಂಬ ವಿಷಯವನ್ನು ಪದವಿ ಹಾಗೂ ಸ್ನಾತಕ ಮಟ್ಟದಲ್ಲಿ ಪರಿಚಯಿಸಿ, ತಮ್ಮ ಕಾಲೇಜಿನಲ್ಲೇ ಅದಕ್ಕೊಂದು ವಿಭಾಗ ತೆರೆದ ಕೀರ್ತಿ ಮಂಗಳಾ ರಿಗೆ ಸಲ್ಲುತ್ತದೆ. ’ಶಾಶ್ವತಿ’ ಎಂಬ ಅಪರೂಪದ ಕಲಾಕೃತಿಗಳ ವಸ್ತುಸಂಗ್ರಹಾಲಯವನ್ನು ಕಾಲೇಜಿನ ಆವರಣದಲ್ಲೇ ಸ್ಥಾಪಿಸಿದಲ್ಲದೇ, ಕನ್ನಡದ ಪ್ರಥಮ ಮಹಿಳಾ ಬರಹಗಾರ್ತಿ ನಂಜನಗೂಡು ತಿರುಮಲಾಂಬಾ ಹೆಸರಿನ ವಾರ್ಷಿಕ ಸಾಹಿತ್ಯಕ ಪ್ರಶಸ್ತಿಯನ್ನೂ ಆರಂಭಿಸಿದರು. ೧೦ನೆಯ ವಯಸ್ಸಿಗೆ ಮದುವೆಯಾಗಿ ೧೪ರ ವಯಸ್ಸಿನಲ್ಲೇ ವಿಧವೆಯಾದ ತಿರುಮಲಾಂಬಾ, ಮದುವೆಯ ನಂತರ ತಮ್ಮ ಪತಿಯನ್ನು ಕಂಡದ್ದೇ ಅಪರೂಪ. ಸಂಪ್ರದಾಯಗಳಿಗೆ ಸಡ್ಡು ಹೊಡೆದು, ತಂದೆಯ ಸಹಕಾರದೊಂದಿಗೆ ವಿದ್ಯಾವಂತೆಯಾದರು. ರಾಮಾಯಣದಿಂದಾರಂಭಿಸಿ, ಶ್ರೇಷ್ಟ ಸಾಹಿತ್ಯಗಳನ್ನೆಲ್ಲಾ ಆಳವಾಗಿ ಅಭ್ಯಸಿಸಿದರು. ಸಾಹಿತ್ಯ ಕೃಷಿ ಮಾಡಿದರು. ’ಸನ್ಮಾರ್ಗ ದರ್ಶಿನಿ’ ಎಂಬ ಪತ್ರಿಕೆಯನ್ನೂ ಆರಂಭಿಸಿದರು. ಪುಸ್ತಕ ಪ್ರಕಾಶನಕ್ಕೂ ಇಳಿದರು. ’ವಿಧವಾ ಕರ್ತವ್ಯ’ ಎಂಬ ಕಥೆಯಲ್ಲಿ ಅಂದಿನ ಸಮಾಜದ ವಿಧವೆಯ ಸ್ಥಿತಿ-ಗತಿ, ಅವಮಾನಗಳನ್ನು ಸ್ಪಷ್ಟವಾಗಿ ಖಂಡಿಸಿದ್ದರು. ಸಂಪ್ರದಾಯಸ್ಥರ, ಹಲವು ಓದುಗ-ವಿಮರ್ಶಕರ ತೀವ್ರ ಟೀಕೆಗೆ ಒಳಗಾದರೂ ಕಂಗೆಡದೇ ತಮ್ಮ ಸಾಹಿತ್ಯ ಕೃಷಿ ಮುಂದುವರೆಸಿದರು. ತಿರುಮಲಾಂಬಾ ಬರೆದ ’ಸುಶೀಲೆ’ ಎಂಬ ಕಾದಂಬರಿ ೧೯೧೩ ರಲ್ಲಿ ಪ್ರಕಟವಾದಾಗ, ಆ ಕೃತಿ ನಾಲ್ಕು ಮುದ್ರಣಗಳನ್ನು ಕಂಡಿತು. ಸಾವಿರಾರು ಪ್ರತಿಗಳು ಆ ಕಾಲದಲ್ಲೇ ಮಾರಾಟವಾದವು.
ತಿರುಮಲಾಂಬಾರ ಜೀವನಗಾಥೆ ಮಂಗಳಾರನ್ನು ಅಪಾರವಾಗಿ ಕಾಡಿತ್ತು. ಅವರು ಬದುಕಿಲ್ಲ ಎಂದೇ ಎಣಿಸಿದ್ದ ಮಂಗಳಾ, ನಂತರ ಚೆನ್ನೈ ನಲ್ಲಿ ತಿರುಮಲಾಂಬಾ ನೆಲೆಸಿದ್ದಾರೆ ಎಂಬ ವಿಷಯ ತಿಳಿದು, ಕೊನೆಗೂ ಅವರನ್ನು ಭೇಟಿಯಾಗುವಲ್ಲಿ ಯಶಸ್ವಿಯಾದರು. ಅವರ ಹಸ್ತಾಕ್ಷರದಲ್ಲಿದ್ದ ಬರಹಗಳು, ಕಾದಂಬರಿಗಳನ್ನೆಲ್ಲಾ ತಂದು ವಸ್ತುಸಂಗ್ರಹಾಲಯವನ್ನು ಶ್ರೀಮಂತಗೊಳಿಸಿದರು. ತಿರುಮಲಾಂಬಾ ಅವರ ಕೃತಿಗಳು ’ಶಾಶ್ವತ’ವಾಗಿ ಉಳಿಯಲೆಂಬ ಇಚ್ಚೆ, ’ಶಾಶ್ವತಿ’ ಎಂಬ ಹೆಸರನ್ನಿಡಲು ಪ್ರೇರೇಪಿಸಿತು. ಅಲ್ಲದೇ ’ಶಾಶ್ವತಿ’ ಎಂಬುದು ವೇದಕಾಲದ ಬ್ರಹ್ಮವಾದಿನಿ (ವೇದ-ಪುರಾಣ-ವ್ಯಾಕರಣಗಳೇ ಮೊದಲಾದ ಶಾಸ್ತ್ರಗಳನ್ನು ಆಳವಾಗಿ ಅಭ್ಯಸಿಸಿದ ಅವಿವಾಹಿತ ಮಹಿಳೆ) ಯೊಬ್ಬಳ ಹೆಸರೂ ಕೂಡಾ. ತಿರುಮಲಾಂಬಾ ಹೆಸರಿನಲ್ಲೇ ದತ್ತಿ ನಿಧಿ ಸ್ಥಾಪಿಸಿದ ಮಂಗಳಾ ಪ್ರತಿವರ್ಷ ಗಮನಾರ್ಹ ಕೃತಿ ರಚಿಸಿದ ಮಹಿಳಾ ಸಾಹಿತಿಗೆ ಪ್ರಶಸ್ತಿ ಕೊಡಮಾಡುವ ವ್ಯವಸ್ಥೆಯನ್ನೂ ಜಾರಿಮಾಡಿದರು. ಮಂಗಳಾರ ಕರ್ತೃತ್ವಶಕ್ತಿಗೆ ’ಶಾಶ್ವತಿ’ ಒಂದು ಸಾಕ್ಷಿ.
ಆದರೂ ಮಂಗಳಾ, ಕಾಲೇಜಿನ ದಶಮಾನೋತ್ಸವಕ್ಕೆ ಸತ್ಯ ಸಾಯಿಬಾಬಾ ರನ್ನು ಆಹ್ವಾನಿಸಲು ಇಡೀ ಒಂದು ಬಸ್ ಪೂರ್ತಿ ತಮ್ಮ ಕಾಲೇಜು ಸಿಬ್ಬಂದಿಯನ್ನೆಲ್ಲಾ ಬಾಬಾ ಬಳಿ ಕರೆದೊಯ್ದಿದ್ದರ ಔಚಿತ್ಯ ಪ್ರಶ್ನಾರ್ಹವೆನಿಸುತ್ತದೆ. ಬಾಬಾರ ಅಂತರಂಗ ಭಕ್ತೆ (ಅವರ ಗುರು ಗೋಕಾಕ್ ಕೂಡಾ ಮಹಾನ್ ಬಾಬಾ ಭಕ್ತರಾಗಿದ್ದರು) ಮಂಗಳಾ ಬೇರೆ ಯಾವ ಸಂದರ್ಭದಲ್ಲೂ ತಮ್ಮ ಸಹೋದ್ಯೋಗಿ ಅಥವಾ ವಿದ್ಯಾರ್ಥಿ ವೃಂದದ ಮೇಲೆ ’ಬಾಬಾ ಹೇರಿಕೆ’ ಮಾಡಿದ್ದು ಕಂಡು ಬರುವುದಿಲ್ಲ. ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂದರ್ಭದಲ್ಲಿ ತಮ್ಮ ಕಾಲೇಜಿನಲ್ಲಿ ಗುಂಪೊಂದು ರಾಮ ಮಂದಿರ ನಿರ್ಮಾಣವಾಗಬೇಕೆಂಬ ಮನವಿಪತ್ರಕ್ಕೆ ಸಹಿ ಸಂಗ್ರಹಿಸಲು ಮುಂದಾದಾಗ, ಮಂಗಳಾ ಅವಕಾಶ ನೀಡಲೇ ಇಲ್ಲ. ’ಈ ಕಾಲೇಜು ಎಲ್ಲಾ ಧರ್ಮದವರಿಗಾಗಿ..ರಾಜಕೀಯ ಹಿನ್ನಲೆಯ ಅಥವಾ ರಾಜಕೀಯ ಪ್ರೇರೇಪಿತವಾದ ಯಾವುದೇ ಚಟುವಟಿಕೆಯಾಗಲೀ, ಸಹಿ ಸಂಗ್ರಹಣೆಯಾಗಲೀ ಇಲ್ಲಿ ನಡೆಯುವಂತಿಲ್ಲ. ಇದನ್ನು ಮೀರಿ ನಡೆಯುವಂತಿದ್ದರೆ ನಾನು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಮನವಿ-ಕಾರರ ಗುಂಪಿನ ಉತ್ಸಾಹಕ್ಕೆ ತಣ್ಣೀರು ಎರಚಿದರು. ’ಮಂದಿರದ ಪರ-ವಿರೋಧದ ಬಗ್ಗೆ ಸಾರ್ವಜನಿಕ ಅಭಿಪ್ರಾಯಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಅದನ್ನು ಕಾಲೇಜಿನ ಹೊರಗೆ ಇಟ್ಟುಕೊಳ್ಳಿ…ಕಾಲೇಜು ಕಾಂಪೌಂಡ್ ಒಳಗೆ ತರಲೇ ಬೇಡಿ’ ಎಂದು ಖಂಡ-ತುಂಡವಾಗಿ ಹೇಳಿ, ಸಹಿ ಸಂಗ್ರಹ ಮಾಡಲು ಬಿಡಲೇ ಇಲ್ಲ. ಹಲವರ ಕೆಂಗಣ್ಣಿಗೆ, ಕುಹುಕಕ್ಕೆ ಗುರಿಯಾದರೂ ಬೆದರಲಿಲ್ಲ. ಇಂದಿಗೂ ಅವರ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆ ಗಣನೀಯವಾಗಿದೆ.
ಕಾಲೇಜುಗಳಲ್ಲಿನ ಭ್ರಷ್ಟಾಚಾರ, ಮೌಲ್ಯಮಾಪನದ ವೇಳೆಯಲ್ಲಿ ನಡೆಯುವ ಬೇಜವಾಬ್ದಾರಿ ವರ್ತನೆ, ಪ್ರೈವೇಟ್ ಟ್ಯೂಷನ್ ಗಳ ಹಾವಳಿ, ಸೆನೆಟ್ ಸಭೆಗಳು ನಡೆಯುವ ’ಲಕ್ಷಣ’, ಯುಜಿಸಿ-ವಿಶ್ವವಿದ್ಯಾಲಗಳ ನಡುವಿನ ಸೌಹಾರ್ದದ ಕೊರತೆಯ ಬಗ್ಗೆಯೆಲ್ಲಾ ಮಂಗಳಾರ ಕೃತಿ ಬೆಳಕು ಚೆಲ್ಲುತ್ತದೆ. ವಿದ್ಯಾರ್ಥಿನಿಯರಲ್ಲಿ ಕುಸಿಯುತ್ತಿರುವ ನೈತಿಕಮಟ್ಟದ ಬಗ್ಗೆ ಆತಂಕದ, ಕಳಕಳಿಯ ಮಾತುಗಳಿವೆ. ಉಪದೇಶದ ಹೊರೆಯೂ ಕೆಲವೆಡೆ ಹೆಚ್ಚಿದೆ. ಅವರೇ ಒಪ್ಪಿಕೊಂಡಿರುವಂತೆ ಈ ಕೃತಿ ಶಿಕ್ಷಣ ಕ್ಷೇತ್ರದಲ್ಲಿನ ಅವ್ಯವಹಾರಗಳ ತನಿಖಾ ವರದಿಯೇನೂ ಅಲ್ಲ. ಮಂಗಳಾ ಹೆಚ್ಚು ಬರೆಯಲಿಲ್ಲ. ಬರೆದಿದ್ದನ್ನು ಸ್ಪಷ್ಟವಾಗಿ ಬರೆದರು. ನಿಷ್ಟುರತೆಯನ್ನೂ ವಿನಯದಿಂದ ತೋರ್ಪಡಿಸಿದರು. ಹಣತೆಯ ಮೇಲೆ ಕವಿತೆ ರಚಿಸಲು ಹೋಗದೇ, ಹಣತೆ ಹಚ್ಚಿಡುವ ಕಾಯಕಕ್ಕೆ ತೊಡಗಿಕೊಂಡರು.
**
ಮತ್ತೆ ಆಕಾಶವಾಣಿಗೆ:-)…ಸಂದರ್ಶನದ ಟೇಪ್ ಅನ್ನು ಪಾಟೀಲರಿಗೆ ತಲುಪಿಸಬೇಕಿತ್ತು. ಮಾರನೆಯ ದಿನ ಪಾಟೀಲ್ ರಜೆಯ ಮೇಲಿದ್ದರೆಂದು ನೆನಪು.
ಆ ಮಾರನೆಯ ದಿನವಿರಬೇಕು…..’ಕನ್ನಡ ರಣಧೀರರ ಪಡೆ’ ಎಂಬ ಕನ್ನಡಪರ ಸಂಘಟನೆಯ ಕೆಲವರು ಆಕಾಶವಾಣಿ ಕೇಂದ್ರವನ್ನು (ಅತಿಕ್ರಮವಾಗಿ) ಪ್ರವೇಶಿಸಿ, ಅನ್ನೌನ್ಸಿಂಗ್ ರೂಮಿಗೆ ನುಗ್ಗಿ ಘೊಷಣೆಗಳನ್ನು ಕೂಗಿದ್ದರು. ಆಕಾಶವಾಣಿ ಕೇಂದ್ರದ ರಕ್ಷಣಾ ಪಡೆ (ಸೆಕ್ಯೂರಿಟಿ) ಯ ಸಂಪೂರ್ಣ ವೈಫಲ್ಯ ಎದ್ದು ಕಾಣುತ್ತಿತ್ತು. ಅಧಿಕಾರಿಗಳು ತೀವ್ರ ಇರುಸು-ಮುರಿಸಿಗೆ ಒಳಗಾಗಿದ್ದರು. ಒಮ್ಮೆಲೇ ಆಕಾಶವಾಣಿ ಕೇಂದ್ರದ ರಕ್ಷಣಾ ಪಡೆ ಎಚ್ಚೆತ್ತುಕೊಂಡಿತು. ವಿಪರೀತ ತಪಾಸಣೆಗಳು ಆರಂಭವಾದವು. ನನಗಿದು ತಿಳಿದಿರಲಿಲ್ಲ. ಪಾಟೀಲರನ್ನು ಕಂಡು ಸಂದರ್ಶನದ ಮುಂದಿನ ನಡೆಗಳನ್ನು ಚರ್ಚಿಸಲು ಟೇಪ್ ತೆಗೆದುಕೊಂಡು ಕೇಂದ್ರದೊಳಗೆ ಕಾಲಿಟ್ಟೆ.
ಸೆಕ್ಯೂರಿಟಿ ಅಧಿಕಾರಿ ಇಳಂಗೋವನ್ ಥೇಟ್ ಎಮ್.ಆರ್.ರಾಧಾನ ಶೈಲಿಯಲ್ಲಿ ದಶದಿಕ್ಕುಗಳಿಗೂ ಕೈಕಾಲು ತೂರುತ್ತಾ ’ಒಲಕ್ಕೆ ಯಾರನ್ನೂಮ್ ಬಿಟುವಂತಿಲ್ಲ..ಆರ್ಡರ್ ಇತೆ..ನೀವು ಓಗಿಬಿಡಿ..’ ಎಂದು ತಮಿಳು ಸಿಂಪಡಿತ ಕನ್ನಡದಲ್ಲಿ ಹೇಳತೊಡಗಿದ. ಆತ ನನ್ನನ್ನು ಬಹಳ ಬಾರಿ ನೋಡಿದ್ದ. ನಾನು ಅಲ್ಲಿಗೆ ಹೋಗುವ ಕಾರಣ, ನನ್ನ ಕರ್ತವ್ಯದ ಬಗೆಗೆ ಚೆನ್ನಾಗಿಯೇ ತಿಳಿದಿತ್ತು. ಅಲ್ಲದೇ ಕೆಲವೇ ನಿಮಿಷಗಳ ಮುಂಚೆ ’ಹಿಂದಿ ವಿಶಾರದೆ’ ನನ್ನ ಮುಂದೆಯೇ ಯಾವುದೇ ಅಡೆ-ತಡೆಯಿಲ್ಲದೇ, ತಪಾಸಣೆಗಳಿಲ್ಲದೇ ಒಳ ಹೋಗಿದ್ದನ್ನು ನಾನು ಗಮನಿಸಿದ್ದೆ. ಸಹನೆಯಿಂದಲೇ ಹೇಳಿದೆ. “ಇಳಂಗೋವನ್…ಸುಮ್ಮನೆ ಹೋಗಿಬಿಡಲಾಗುವುದಿಲ್ಲ..ಪಾಟೀಲರ ಜೊತೆ ಮೀಟಿಂಗ್ ಇದೆ. ಈ ಟೇಪ್ ಅವರಿಗೆ ಕೊಡಬೇಕು’…ಆತನಿಗೆ ಅರ್ಥವಾಗುವಂತಿರಲಿಲ್ಲ..’ನಮಕ್ಕೇ ಕೊಡಿ…ನಾನೇ ಅವರಿಕೆ ಕೊಟ್ಟು ಬರುತ್ತೇನೆ’ ಎಂದು ಅರ್ಥಹೀನವಾಗಿ ಮಾತಾನಾಡತೊಡಗಿದ. ಹಿಂದಿನ ದಿನ ’ದೊಡ್ಡ’ ಅಟ್ಯಾಕ್ ಆಗಿತ್ತೆಂದೂ, ತನ್ನ ತಲೆಗೆ ಬಂದಿದೆಯೆಂದೂ ಕೂಗಾಡಲಾರಂಭಿಸಿದ. ಮಾತಿಗೆ ಮಾತು ಬೆಳೆಯಿತು. ನಾನೂ ಧ್ವನಿ ಎತ್ತರಿಸಿದೆ. ಇಳಂಗೋವನ್ ಉತ್ತರಕ್ಕಾಗಿ ತಡಕಾಡುತ್ತಿದ್ದಂತಯೇ ಪಾಟೀಲ್ ತಮ್ಮ ಕೊಠಡಿಯಿಂದ ಸೆಕ್ಯೂರಿಟಿಗೆ ಫೋನ್ ಮಾಡಿದರು. ’ರಾಘವನ್ ಬರಬೇಕಿತ್ತು..ಅಲ್ಲಿದಾರಾ’ ಎಂದರು. ಇಳಂಗೋವನ್ ಕಕ್ಕಾಬಿಕ್ಕಿಯಾದ. ನಾನೇ ಫೋನ್ತೆ ಗೆದುಕೊಂಡೆ..’ಯಾಕಪ್ಪಾ..ಇಂಟರ್ ವ್ಯೂ ಆಯ್ತು ತಾನೆ’ ಎಂದರು. ’ಚೆನ್ನಾಗಿ ಆಯ್ತು ಸರ್…ಇಲ್ಲಿ ಒಳಕ್ಕೆ ಬರಲು ಬಿಡ್ತಾ ಇಲ್ಲ…ನೆನ್ನೆ ದೊಡ್ಡ ಅಟ್ಯಾಕ್ ಆಗಿ ಎಲ್ಲ ಇಳಂಗೋವನ್ ತಲೆಗೆ ಬಂದಿದೆ..ಹಾಗಾಗಿ ಅವರು ತುಂಬಾ ಸ್ಟ್ರಿಕ್ಟ್ ಆಗಿದ್ದಾರೆ.’ ಎಂದೆ..ಇಳಂಗೋವನ್ ಗುರಾಯಿಸುತ್ತಿದ್ದದ್ದು ಕಂಡು ಬಂತು. ’ನೀನು ಬಾಪ್ಪಾ ಇಲ್ಲಿ ಕಾಯ್ತಾ ಇದ್ದೀನಿ..ಫೋನ್ ಅವರಿಗೆ ಕೊಡು’ ಎಂದರು. ಕ್ಷಣಾರ್ಧದಲ್ಲಿ ಇಳಂಗೋವನ್ ’ತಲೆಗೆ ಹತ್ತಿದ್ದು’ ಇಳಿದಿತ್ತು. ಪಾಟೀಲರನ್ನು ಭೇಟಿಯಾಗಿ ಸಂಪೂರ್ಣ ವರದಿ ಒಪ್ಪಿಸಿದೆ. ಟೇಪ್ ನಲ್ಲಿದ್ದ ಸಂದರ್ಶನ ಆಲಿಸಿದರು. ’ತುಂಬಾ ಚೆನ್ನಾಗಿ ಬಂದಿದೆ ಕಣಪ್ಪಾ..ವೆರಿ ಗುಡ್…ಮೇಡಂ ಗೆ ಒಂದು ಸಾರ್ತಿ ಕೇಳಿಸೋಣ ಬಾ’ ಎಂದು ದೊಡ್ಡಾಕೆಯ ಕೊಠಡಿಗೆ ಕರೆದೊಯ್ದರು.
ಸಂದರ್ಶನದ ಬಗ್ಗೆ ಪಾಟೀಲ್ ಒಳ್ಳೆಯ ಮಾತುಗಳಾಡಿದರು. ದೊಡ್ಡಾಕೆ ಕೇಳುವ ’ಮೂಡ್’ನಲ್ಲಿರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಮಾತಿನ ದಿಕ್ಕು ಬದಲಿಸಿದರು. ನನ್ನ ಕಡೆ ನೋಡಿ ಕೇಳಿದರು: ’ಹೌ ಈಸ್ ಮಂಗಳಾ..ನಾಟ್ ಮೆಟ್ ಹರ್ ಫಾರ್ ಲಾಂಗ್’….’ಕಾಲೇಜ್ ಕ್ಯಾಂಪಸ್ ತುಂಬಾ ದೊಡ್ದಾ??’..ವಿಷಯಾಂತರ ಮಾಡಿದರು..”ಡು ಯು ಹ್ಯಾವ್ ಎನಿ ಪ್ರಾಬ್ಲಮ್ ಇಫ್ ಅವರ್ ಸೆಕ್ಯೂರಿಟಿ ಪರ್ಸೊನೆಲ್ ಡು ದೈರ್ ಜಾಬ್?” …ಸಂದರ್ಶನ ಮಾಡಿಬಂದ ವ್ಯಕ್ತಿಯ ’ವಿಚಾರಣೆ’ ಆರಂಭವಾಗಿತ್ತು :-). ಇದು ಇಳಂಗೋವನ್ ಕಿತಾಪತಿ ಎಂದು ಅರ್ಥವಾಗಲು ತಡವಾಗಲಿಲ್ಲ. ’ಮೇಡಮ್, ನಮ್ಮ ಕೆಲಸ ನಾವು ಮಾಡಿಕೊಂಡು ಹೋಗಲು ನಿಮ್ಮ ಸೆಕ್ಯೂರಿಟಿ ಪರ್ಸೊನೆಲ್ ಗೆ ಏನಾದರೂ ತೊಂದರೆಯಾ?’ ಎಂದೆ. ’ಐ ವಾಂಟ್ ಅನ್ ಆನ್ಸರ್…ನಾಟ್ ಅ ಕೌಂಟರ್ ಕ್ವೆಶ್ಚನ್..’ ಧ್ವನಿ ಎತ್ತರಿಸಿದರು. ’ನಿನಗೇಕೆ ಕೊಡಬೇಕು ಕಪ್ಪಾ’ ಎಂದ ಸರೋಜಾದೇವಿಯ ಭೀಭತ್ಸ ಮುಖಮುದ್ರೆ..ಶಿಕ್ಷಣ ಇಲಾಖೆಯ ದೊಡ್ಡಪದವಿಯಲ್ಲಿದ್ದು ಕೆಲವು ಆಪಾದನೆಗಳನ್ನು ಹೊತ್ತ ಮಹಿಳೆಯೊಬ್ಬರನ್ನು ಲೇವಡಿ ಮಾಡಿ ಲಂಕೇಶ್ ತಮ್ಮ ’ಛೇ..ಛೇ’ ಯಲ್ಲಿ ಒಮ್ಮೆ ಬರೆದಿದ್ದರು:” ಆಕೆ ಮೂತಿಯನ್ನು ಅಪ್ಸರೆಯಂತೆ ಮಾಡಿಕೊಂಡರು..” ಅಪ್ರಯತ್ನಪೂರ್ವಕವಾಗಿ ಲಂಕೇಶರ ಸಾಲುಗಳು ಆ ಕ್ಷಣ ನೆನಪಾಗಿಬಿಟ್ಟವು. ಪಕ್ಕಕ್ಕೆ ತಿರುಗಿ ಅವರ ಮುಂದೆಯೇ ಕಿಸಕ್ಕನೆ ನಕ್ಕುಬಿಟ್ಟೆ. “ನನಗ್ಯಾಕೆ ಮೇಡಂ ಸಮಸ್ಯೆ?” ಎಂದೆ..ನನಗರಿವಿಲ್ಲದಂತೆ ಮತ್ತೊಂದು ’ಕೌಂಟರ್ ಕ್ವೆಶ್ಚನ್’ ಹಾಕಿದ್ದೆ. ಹೋಮಕ್ಕೆ ತುಪ್ಪ ಸುರಿದಂತಾಗಿತ್ತು, ಈಗ ಸಮಯವಿಲ್ಲವೆಂದು, ನಂತರ ಟೇಪ್ ಕೇಳುವೆನೆಂದೂ ದೊಡ್ಡಾಕೆ ಹೇಳಿದೊಡನೆ ಹೊರಬಂದೆ. ಬಹುಶಃ ಸಂದರ್ಶನ ಪ್ರಸಾರ ಮಾಡಲಾರರು ಎಂದೇ ಭಾವಿಸಿದೆ.
ಹೊರಬಂದಾಗ ಎಂ.ಟಿ.ಜಯಣ್ಣ ಸಿಕ್ಕರು. ’ಏನಪ್ಪಾ…ಇವತ್ತಿನ ಘೋಷಣೆಗಳೆಲ್ಲಾ ಮುಗೀತಾ’ ಎಂದು ನಕ್ಕರು. “ಇವತ್ತಿಗೆ ಮುಗೀತು ಸಾರ್” ಎಂದೆ. ಏಕೆಂದೆನೊ…ಮನೆಗೆ ಬಂದೆ. ಎರಡು ತಿಂಗಳ ಹಿಂದೆ ಹಾಜರಾಗಿದ್ದ ಮೈಸೂರಿನ ಬಳಿಯ ಕಂಪನಿಯೊಂದರ ಸಂದರ್ಶನದಲ್ಲಿ ಆಯ್ಕೆಯಾಗಿದ್ದರ ಒಕ್ಕಣೆ ಇದ್ದ ಟೆಲಿಗ್ರಾಂ ಬಂದಿತ್ತು. ’ನಾಳೆಯೇ ಹಾಜರಾಗಿ’ ಎಂದು ಆದೇಶಿಸಲಾಗಿತ್ತು. ನನಗಿಷ್ಟವಾದ ಇಲೆಕ್ಟ್ರಾನಿಕ್ಸ್ ವಿಭಾಗಕ್ಕೆ ಸಂಬಂಧಿಸಿದ ಕೆಲಸ. ಜಯಣ್ಣನವರಿಗೆ ಹೇಳಿದ್ದನ್ನೇ ಆಕಾಶವಾಣಿಗೂ ಹೇಳಬೇಕಾದ ಸಮಯ ಬಂದಿತ್ತು..ಹೇಳಿದೆ..
ದೊಡ್ಡಾಕೆಯ ಬಗ್ಗೆ ಇಂದಿಗೂ ಗೌರವವಿದೆ…ಇರುತ್ತದೆ. ಹಾಗೆಯೇ ನೆಚ್ಚಿನ ಪಾಟೀಲರು..ಈಗೆಲ್ಲಿದ್ದಾರೋ ತಿಳಿಯದು…ಅವರು ಚೆನ್ನಾಗಿರಲಿ.
ವಿಧಿ ನೋಡಿ…ಜನವರಿ ೯, ೧೯೮೯ ರಂದು ನಂಜನಗೂಡಿನಲ್ಲಿ ಕೆಲಸಕ್ಕೆ ಸೇರಿದ ದಿನ. ಅದೇ ರಾತ್ರಿ ’ಯುವವಾಣಿ’ಯಲ್ಲಿ ನಾನು ಮಾಡಿದ ಸಂದರ್ಶನ ಬಿತ್ತರವಾಯಿತು. ಐದೂವರೆಗೆ ಹೊಸ ಕೆಲಸ ಮುಗಿಸಿ, ಮೈಸೂರಿಗೆ ಹೊರಟೆ. ಕಾರ್ಯಕ್ರಮ ಕೇಳುವ ಸಡಗರ. ಊರು ತಲುಪಿದಾಗ ಒಂಬತ್ತಾಗಿತ್ತು..ನನ್ನ ಕಾರ್ಯಕ್ರಮ ನಾನೇ ಕೇಳಲಾಗಲಿಲ್ಲ.
ಒಂದೆರಡು ತಿಂಗಳ ನಂತರ ತಿಳಿಯಿತು…ಮಂಗಳಾ ಆಕಾಶವಾಣಿಗೆ ಫೋನ್ ಮಾಡಿ, ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿಬಂದಿತೆಂದೂ, ತಮ್ಮ ಧ್ವನಿಗಳನ್ನು ಮೊದಲಬಾರಿ ರೇಡಿಯೋದಲ್ಲಿ ಕೇಳಿದ ವಿದ್ಯಾರ್ಥಿನಿಯರು, ಅವರ ಪೊಷಕರು ಬಹಳ ಸಂತೋಷಗೊಂಡರೆಂದೂ ತಿಳಿಸಿದ್ದರು. ’ನಿಮ್ಮ ಸಂದರ್ಶನಕಾರರಿಗೊಂದು ಥ್ಯಾಂಕ್ಸ್ ತಿಳಿಸಿ’ ಎಂದ ಮಂಗಳಾರನ್ನು ಮತ್ತೆ ಭೇಟಿಯಾಗಲೇ ಇಲ್ಲ. ಡಯಾಬಿಟಿಕ್ ಆಗಿದ್ದ ಮಂಗಳಾ ಸ್ವಲ್ಪ ಆರೊಗ್ಯದ ಕಡೆ ಗಮನಕೊಡಬೇಕಿತ್ತು. ಅವಿವಾಹಿತೆಯಾಗಿಯೇ ಉಳಿದ ಮಂಗಳಾ, ನಿವೃತ್ತರಾದ ಮರುವರ್ಷವೇ (೧೯೯೭) ಇಹಲೋಕ ತ್ಯಜಿಸಿದರು. ಅವರ ಬರಹವೊಂದರ ಸಾಲು ಹೀಗಿದೆ:
“ಅಮೆರಿಕದ ಝಗಝಗಿಸುವ ದೀಪ ಅಮೆರಿಕೆಗಿರಲಿ. ನನ್ನ ದೇಶದ ಕತ್ತಲನ್ನು ಹೋಗಲಾಡಿಸುವ ಹಣತೆಗಳಾದರೂ ನಮ್ಮಲ್ಲಿ ಬೆಳಗಲಿ. ಆ ಹಣತೆಗಳಲ್ಲಿ ಒಂದು ಹಣತೆಯನ್ನದರೂ ಹಚ್ಚುವ ಭಾಗ್ಯವಾದರೂ ನನ್ನದಾಗಲಿ..”
ದುರದೃಷ್ಟವಶಾತ್ ಮಂಗಳಾರ ಬಹುತೇಕ ಯಾವ ಕೃತಿಯೂ ಲಭ್ಯವಿಲ್ಲ. ’ಶಾಶ್ವತಿ’ಯ ಕಪಾಟುಗಳಲ್ಲಿ ಭದ್ರವಾಗಿರುವ ಮಂಗಳಾರ ಕೃತಿಗಳ ಪುನರ್ಮುದ್ರಣ ಅಥವಾ ಪ್ರಕಾಶನದ ವ್ಯವಸ್ಥೆ ಆಗಬೇಕಿದೆ. ಎನ್ ಎಂ ಕೆ ಆರ್ ವಿ ಯ ಲೈಬ್ರರಿಯಲ್ಲಿದ್ದ ಕೃತಿಯ ಜ಼ೆರಾಕ್ಸ್ ತೆಗೆದುಕೊಳ್ಳಲು ಈಗಿನ ಪ್ರಾಂಶುಪಾಲಕಿ ಶ್ರೀಮತಿ ಸ್ನೇಹಲತಾ ನಾಡಿಗೇರ್, ಗ್ರಂಥಪಾಲಕಿ ಶ್ರೀಮತಿ ರಾಧಿಕಾ ಸಹಕರಿಸಿದರು. ಅವರಿಗೆ ಕೃತಜ್ಞ.
ಮಂಗಳಾ ತರದವರ ಸಂಖ್ಯೆ ಸಾವಿರವಾಗಲಿ…
- ರಾಘವನ್ ಚಕ್ರವರ್ತಿ
