‘ಚಿಗುರಿದ ಕನಸು’ ಕೃತಿ ಪರಿಚಯ

ಕಾಸರಗೋಡಿನಲ್ಲಿ ನೆಲೆಸಿರುವ ಲೇಖಕಿ ಶ್ರೀಮತಿ ಭಾರತಿ ಪ್ರಸಾದ್ ಕೊಡ್ವಕೆರೆ ಅವರ ಮೊದಲ ಕಥಾ ಸಂಕಲನವಿದು ಚಿಗುರಿದ ಕನಸು. ಇದರಲ್ಲಿ ೩೬ ಸಣ್ಣ ಕಥೆಗಳು ಪರಿವಿಡಿಯಲ್ಲಿವೆ. ಆದರೆ ‘ಆಸರೆ’ ಎಂಬ ಕಥೆಯು ಎರಡು ಬಾರಿ ಇಲ್ಲಿ (ಕ್ರ.ಸಂ.೨& ೮) ಪ್ರಕಟವಾಗಿದ್ದರಿಂದ ಒಟ್ಟೂ ೩೫ ಕಥೆ ಎನ್ನಬಹುದು. ಈ ಕೃತಿಯ ಕುರಿತು ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ಕೃತಿ ಪರಿಚಯ ಮಾಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ  : ಚಿಗುರಿದ ಕನಸು.
ಲೇಖಕರು : ಭಾರತಿ ಪ್ರಸಾದ್ ಕೊಡ್ವಕೆರೆ.
ಸಾಹಿತ್ಯ ಸುಧೆ ಪ್ರಕಾಶನ ಮೈಸೂರು.
ಮುದ್ರಣದ ವರ್ಷ: ೨೦೨೧.
ಪುಟಗಳು: ೧೬೪.
ಬೆಲೆ: ರೂ. ೧೫೦.

*ಆಸರೆ
ಆಶ್ರಯ ನೀಡಿದ ಮಾವನ ಮನೆಯಲ್ಲಿ ಹಣ ಕಳ್ಳತನ ಮಾಡಿದ ಪಾಪದ ಜೊತೆ ಅಚ್ಯುತ ತನ್ನ ಮಾವನ ಮಗಳು ರೂಪಸಿ ತನುಜಳ ಹೃದಯವನ್ನೂ ಕದ್ದಿದ್ದ. ಕನಸು ತುಂಬಿ ಕೊಂಡ ಅವಳನ್ನು ಬಿಟ್ಟು ಹೇಳದೇ ಊರು ಬಿಟ್ಟು ಹೋಗಿದ್ದವನು ಹತ್ತು ವರ್ಷದ ನಂತರ ಮತ್ತೆ ಊರಿಗೆ ಮರಳಿದ್ದ. ಸಾಕಷ್ಟು ಬದಲಾದ ಊರಲ್ಲಿ ತನುಜಾ ಬೆಂಕಿ ಅವಘಡದಲ್ಲಿ ಅರ್ಧಮುಖ ಕತ್ತು ಸುಟ್ಟು ಕುರೂಪ ಗೊಂಡಿದ್ದಳು. ಈಗಾಗಲೇ ತಪ್ಪು ಮಾಡಿ ಪಶ್ಚಾತ್ತಾಪಪಟ್ಟ ಅಚ್ಯುತ ತನುಜಾಳನ್ನು ಮದುವೆಯಾಗಿ ಆಸರೆಯಾದನೆ?

*ಚಿಗುರಿದ ಕನಸು
ಬಾಲ್ಯದಲ್ಲಿ ಹೆತ್ತ ತಾಯಿಯ ಪ್ರೀತಿ ಕಾಣದೇ ಮಲತಾಯಿಯ ಕಿರುಕುಳದಲ್ಲಿ ಬೆಳೆದ ಅವಳು ಕ್ರಮೇಣ ತಂದೆಯನ್ನೂ ಕಳೆದುಕೊಂಡು ಅನಾಥಳಾದಳು. ಉದ್ಯೋಗ ಮಾಡುತ್ತಾ ತನ್ನ ಕಾಲ ಮೇಲೆ ನಿಂತು, ಮಲ ತಂಗಿಯರ ಮದುವೆ ಮಾಡಿ, ತಮ್ಮನ ಓದು, ಮನೆಯ ಜವಾಬ್ದಾರಿ ನಿಭಾಯಿಸ ಬೇಕಾಗಿ ಬಂತು. ಮದುವೆಯ ವಯಸ್ಸು ದಾಟಿ ನಿರಾಸೆಯಿಂದಿದ್ದವಳಿಗೆ ನೋಡಲು ಸುಂದರನಾದ ಆದರೆ ಬಲಗಾಲು ಕುಂಟುತ್ತಾ ಓಡಾಡುವ ನಲವತ್ತರ ವಯಸ್ಸಿನ ಗಂಡ ಸಿಕ್ಕಿದ್ದ. ಅವರ ದಾಂಪತ್ಯದ ಒಲುಮೆಯಲ್ಲಿ ಚಿಗುರಿದ ಕನಸು ಇಲ್ಲಿನ ಕಥಾವಸ್ತು.

 

* ಈಗೋ
ಪರಸ್ಪರ ಅರ್ಥ ಮಾಡಿಕೊಳ್ಳದೆ ಹಣಕಾಸಿನ ವಿಷಯಕ್ಕೆ ಜಗಳವಾಡಿಕೊಂಡು ದೂರವಾಗಿದ್ದ ಗಂಡ ಹೆಂಡತಿಯನ್ನು ಅವರ ಮಗಳು ಒಂದುಗೂಡಿಸಿದ ಕಥೆ. ಇಬ್ಬರೂ ಪಶ್ಚಾತ್ತಾಪಗೊಂಡು ಕ್ಷಮಿಸಿಕೊಂಡ ರೀತಿ ಇಲ್ಲಿ ಬಹಳ ಚೆನ್ನಾಗಿ ವ್ಯಕ್ತವಾಗಿದೆ.

*ಧೃತಿ
ಚಂದನ್ ಮದುವೆಯಾದ ಧರ್ಮಪತ್ನಿ. ಸದಾ ಕ್ಲಬ್, ಪಬ್ ಎಂದು ಹೊರಗಡೆ ಬಿಂದಾಸ್ ಆಗಿದ್ದ ಚಂದನ್ ಸುಂದರ ಪತ್ನಿ ಧೃತಿಯನ್ನು ದೂರವೇ ಇಟ್ಟಿದ್ದು ಅವಳಿಗೆ ನುಂಗಲಾರದ ತುತ್ತಾಗಿತ್ತು. ಅವನ ನಡವಳಿಕೆಗೆ ರೋಸಿ ಬೇಸತ್ತಿದ್ದ ಅವಳು ಗಂಡನಿಗೆ ಬುದ್ಧಿ ಕಲಿಸಿದ್ದು ಹೇಗೆ?….

* ಜೊತೆ ಜೊತೆಯಲಿ
ಶಾಲಿನಿ ೪೨ ರ ಪ್ರಾಯದ ವಿಧವೆ. ನೋಡಲು ಚೆನ್ನಾಗಿದ್ದ ಅವಳಿಗೆ ಪ್ರಾಯಕ್ಕೆ ಬಂದ ಮಗಳು ಪ್ರಜ್ವತಾ ಮರು ಮದುವೆಯಾಗಲು ಸಲಹೆಯಿತ್ತಿದ್ದಳು. ಜೊತೆಗೆ ತನ್ನ ಲೆಕ್ಚರರ್ ಶ್ರೀಕಾಂತ್ ಅವರನ್ನು ಮನೆಗೆ ಕರೆದು ಕೊಂಡು ಬಂದಿದ್ದಳು. ಇಪ್ಪತ್ತು ವರ್ಷದ ನಂತರ ಭೇಟಿಯಾದ ಆತ ಯಾರು?.. ಮರು ಮದುವೆಗೆ ಶಾಲಿನಿ ಒಪ್ಪಿದಳೆ?…

*ಕಂದ 
ಮದುವೆಯ ವಯಸ್ಸಿಗೆ ಬಂದ ಇಬ್ಬರು ಹೆಣ್ಣು ಮಕ್ಕಳ ತಾಯಿ ಗೀತಾ. ವಯಸ್ಸು ೪೫ ರ ಸಮೀಪ. ಈಗ ಮುಟ್ಟು ನಿಲ್ಲುವ ಸಮಯದಲ್ಲಿ ಅನಾರೋಗ್ಯವೆಂದು ಡಾಕ್ಟರ ಬಳಿ ತಪಾಸಣೆಗೆ ಹೋದಾಗ ಅವಳು ಗರ್ಭಿಣಿ ಎಂದು ಗೊತ್ತಾ ಗಿತ್ತು. ಇದೆಂತ ನಾಚಿಕೆಗೇಡು ಎಂದು ಚಿಂತಿಸಿದವಳಿಗೆ ಇಬ್ಬರು ಹೆಣ್ಣು ಮಕ್ಕಳು ಹೇಳಿದ್ದೇನು?.. ಕೊನೆಯಲ್ಲಿ ಗೀತಾಳ ನಿರ್ಧಾರವೇನು?

ಇಂತಹ ಇನ್ನಷ್ಟು ಸೊಗಸಾದ ಕಥೆಗಳಿಗಾಗಿ ಪುಸ್ತಕವನ್ನು ಓದಿ. ಸಶಕ್ತವಾಗಿ ಕಥೆಗಳನ್ನು ಬರೆಯ ಬಲ್ಲ ಶ್ರೀಮತಿ ಭಾರತಿ ಪ್ರಸಾದ್ ಕೊಡ್ವಕೆರೆ ಇವರಿಂದ ಇನ್ನಷ್ಟು ಒಳ್ಳೆಯ ಕಥೆಗಳು ಮೂಡಿ ಬರಲಿ ಎನ್ನುವ ಆಶಯ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading