ಲೇಖಕರಾದ ಮಾರುತಿ ಕೆ.ಪಿ. ಹರಗನಹಳ್ಳಿ ಅವರ ‘ಚಿಣ್ಣರ ತೋಟ’ ಶಿಶು ಮತ್ತು ಮಕ್ಕಳ ಗೀತೆ ಚೊಚ್ಚಲ ಕೃತಿಯ ಕುರಿತು ಲೇಖಕರಾದ ಹರಿನರಸಿಂಹ ಉಪಾಧ್ಯಾಯ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಕೃತಿ: ಚಿಣ್ಣರ ತೋಟ ( ಶಿಶು ಮತ್ತು ಮಕ್ಕಳ ಗೀತೆಗಳು)
ಕವಿ: ಮಾರುತಿ ಕೆ.ಪಿ. ಹರಗನಹಳ್ಳಿ
ಪ್ರಕಾಶನ : ಹೆಚ್ ಎಸ್ ಆರ್ ಎ ಪ್ರಕಾಶನ
ಸಾಹಿತ್ಯ ಪ್ರಕಾರಗಳಲ್ಲಿ ಅತ್ಯಂತ ವಿಶಿಷ್ಟ ಮತ್ತು ವಿಭಿನ್ನವಾದ ಶೈಲಿಯೇ ಶಿಶು ಮತ್ತು ಮಕ್ಕಳ ಸಾಹಿತ್ಯ ಎಂದು ಹೇಳಬಹುದು. ಕಾರಣ ಇಲ್ಲದಿಲ್ಲ. ಉಳಿದೆಲ್ಲ ಸಾಹಿತ್ಯಗಳು ವಯಸ್ಕರಿಂದ ರಚನೆಯಾಗಿ ಅವರಿಂದಲೇ ಓದಲ್ಪಡುವುದರಿಂದ ಅಲ್ಲಿ ವಯೋಮಾನದ ಅಂತರ ಕಾಡುವುದಿಲ್ಲ. ಭಾವಗಳ ಸಂಗಮಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಆದರೆ ಶಿಶು ಮತ್ತು ಮಕ್ಕಳ ಸಾಹಿತ್ಯ ಮಾತ್ರ ಹೆಚ್ಚಾಗಿ ವಯಸ್ಕರಿಂದ ರಚಿಸಲ್ಪಟ್ಟು, ಮಕ್ಕಳು ಓದಿ, ಅರ್ಥೈಸಿಕೊಂಡು ಸಂಭ್ರಮಿಸಲ್ಪಡುವಂತದ್ದು. ಇಲ್ಲಿ ವಯಸ್ಸಿನ ಅಂತರವಿದೆ, ಭಾವನೆಗಳು ಬೇರೆ ಬೇರೆಯಾಗಿರುತ್ತವೆ. ಇಂಥ ಸಂದರ್ಭದಲ್ಲಿ ಮಕ್ಕಳಿಗೆ ಒಪ್ಪುವಂತಹ, ಅವರನ್ನು ಸೆಳೆಯುವಂತಹ ಸಾಹಿತ್ಯವನ್ನು ಬರೆಯಬೇಕು ಎಂದರೆ ಬರೆಹಗಾರರು ಮಕ್ಕಳ ಸ್ಥರದಲ್ಲಿ ನಿಂತು, ಯೋಚಿಸಿ ಲೇಖನಿ ಹಿಡಿಯಬೇಕಾಗುತ್ತದೆ. ಹೀಗೆ ಬರೆಯ ತೊಡಗಿದವರು ಎಂದರೆ ಮಾರುತಿ ಕೆ. ಪಿ ಹರಗನಹಳ್ಳಿರವರು.
ಕಳೆದ 8 ವರ್ಷಗಳಿಂದ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಸಾಹಿತ್ಯದಲ್ಲೂ ತೊಡಗಿಸಿಕೊಂಡಿರುವುದು ಇವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ಇವೆಲ್ಲದರ ಫಲವಾಗಿ ಈಗ ಚೊಚ್ಚಲ ಕೃತಿ “ಚಿಣ್ಣರ ತೋಟ” ಮಕ್ಕಳ ಸಾಹಿತ್ಯವನ್ನು ಓದುಗರ ಕೈಗಿಟ್ಟಿದ್ದಾರೆ. ಹಾಗಿದ್ದ ಮೇಲೆ ಕೃತಿಯೊಳಗಡೆ ಏನೇನಿದೆ ಎಂದು ನೋಡೋಣ…

ಚಿಣ್ಣರ ತೋಟ ಶೀರ್ಷಿಕೆಯೇ ಮನಸ್ಸಿಗೆ ಮುದ ನೀಡುವಂತಿದೆ. ಈ ಮಕ್ಕಳ ಸಾಹಿತ್ಯದ ತೋಟದೊಳಗೆ ವೈವಿಧ್ಯಮಯ ಕವನಗಳು ಚಿಣ್ಣರಿಗೆ ಹಾಡಿ ನಲಿದು ಕಲಿಯಲು ಸಹಾಯವಾಗುವ ರೀತಿಯಲ್ಲಿವೆ.
ಆರಂಭದಲ್ಲಿ ಗಣಪನನ್ನು ನೆನೆಯುವುದು ನಮ್ಮ ಸಂಸ್ಕೃತಿ. ಅದರಂತೆ ಇಲ್ಲಿಯೂ ಮುದ್ದು ಗಣಪ ಪದ್ಯ ಮೊದಲಲ್ಲಿ ಸ್ಥಾನ ಪಡೆದು ಧನ್ಯತೆಯನ್ನು ಮೆರೆದಿದೆ.
ಬಂದನಮ್ಮ ಮುದ್ದು ಗಣಪ
ಇಳೆಯ ಸಗ್ಗ ಮಾಡಲು
ತಂದನಮ್ಮ ಸಕಲ ಸುಖವ
ಭಕ್ತ ಜನಕೆ ನೀಡಲು
ಮಕ್ಕಳಿಗೆ ಗಣಪನ ಬಗ್ಗೆ ಅತೀವ ಒಲವು ಇದೆ ಎಂಬುದನ್ನು ನಾವು ಮರೆಯಬಾರದು. ಹಾಗಿದ್ದ ಮೇಲೆ ಗಣಪನ ಕುರಿತು ಪದ್ಯ ಇರಲೇಬೇಕಲ್ಲ. ಇದರೊಂದಿಗೆ ಬಂದ ಗಣಪ ಎಂಬ ಮತ್ತೊಂದು ಕವನವನ್ನೂ ನಾವಿಲ್ಲಿ ಕಾಣುತ್ತೇವೆ.ಕನ್ನಡ ನಾಡಿನಲ್ಲಿ ಹುಟ್ಟಿದ ಮೇಲೆ ಕನ್ನಡದ ಕಿಚ್ಚು ನಮ್ಮಲ್ಲಿ ಇರದಿರಲು ಸಾಧ್ಯವೇ? ಕವಿಗಳು ಇಲ್ಲಿ ಮಕ್ಕಳಲ್ಲಿ ಕೂಡ ಕನ್ನಡದ ಕಿಚ್ಚು ಹಚ್ಚುವಲ್ಲಿ ಸಫಲರಾಗಿದ್ದಾರೆ.
ಪುಣ್ಯ ಪುರುಷರು ಮಾತೃ ಹೃದಯರು
ಕಾಣುವರು ಕರುನಾಡಲಿ
ಗಣ್ಯಮಾನ್ಯರು ಶೂರ ಕಲಿಗಳು
ಬಾಳಿಹರು ಸಿರಿಗೂಡಲಿ
ಎಂಬುದಾಗಿ ನನ್ನ ನಾಡು ನನ್ನ ನುಡಿ ಕವನದಲ್ಲಿ ಕನ್ನಡ ನಾಡಿನ ಶ್ರೇಷ್ಠರ ಕುರಿತಾಗಿ ವರ್ಣಿಸಿದ್ದಾರೆ. ಈ ರೀತಿಯ ಉಲ್ಲೇಖಗಳು ಮಕ್ಕಳಿಗೆ ನಾಡಿನ ಬಗ್ಗೆ ಗೌರವ ಭಾವ ತಳೆಯುವುದಕ್ಕೆ ತುಂಬಾ ಸಹಕಾರಿ. ಗುಬ್ಬಚ್ಚಿ ಎಂದರೆ ಮಕ್ಕಳೇಕೆ, ದೊಡ್ಡವರಿಗೂ ಒಂದು ರೀತಿಯ ಪ್ರೀತಿ.. ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಗುಬ್ಬಿ ಎಂದು ಹಾಡಿದ್ದಿಲ್ಲವೇ.. ಇಲ್ಲಿ ಕೂಡ ಒಂದು ರಚನೆ ಇದೆ ಗುಬ್ಬಿ ಬಗ್ಗೆ..
ಗುಬ್ಬಿಯ ಬಳಗವೆ ಗುಬ್ಬಿಯ ಬಳಗವೆ
ಎಲ್ಲಿಗೆ ಹೋದಿರಿ ನೀವುಗಳು
ಡಬ್ಬಿಯ ತುಂಬಾ ಕಾಳನು ತಂದಿಹೆ
ಬನ್ನಿರಿ ಬೇಗನೆ ನೀವುಗಳು
ಎಂದು ಕಣ್ಮರೆಯಾದ ಗುಬ್ಬಚ್ಚಿಗಳನ್ನು ಕರೆಯುವುದನ್ನು ನೋಡಿದಾಗ ಎಷ್ಟೊಂದು ಆನಂದವಾಗುತ್ತದೆ. ಅಮ್ಮ ಮಗುವಿನ ಸಂವಾದ ಪದ್ಯ ರೂಪದಲ್ಲಿದ್ದರೆ ಹಾಡುವುದಷ್ಟೇ ಅಲ್ಲದೆ ದೃಶ್ಯ ರೂಪಕದಲ್ಲೂ ಬಳಸಿಕೊಳ್ಳಬಹುದು. ಇದರಿಂದ ಮಕ್ಕಳು ಇನ್ನೂ ಹೆಚ್ಚು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲಿಯೂ ಅಂಥದ್ದೇ ರಚನೆಗಳು ಸ್ಥಾನ ಪಡೆದಿವೆ”ಅಮ್ಮ ಹೇಳಿದ ಪಾಠ” ಶೀರ್ಷಿಕೆಯು ಗ್ರಹಗಳ ಕುರಿತು ಮಾಹಿತಿಯನ್ನು ನೀಡುತ್ತದೆ. ಹಾಗೆಯೇ ಮತ್ತೊಂದು ರಚನೆ “ಬೆಳೆದು ಜಾಣನಾಗು” ಕೂಡಾ ಆಕಾಶದಲ್ಲಿರುವ ಸೂರ್ಯ, ಚಂದ್ರ, ನಕ್ಷತ್ರ, ಮೋಡಗಳ ಕುರಿತ ಮಾಹಿತಿ ಅಮ್ಮನೊಂದಿಗೆ ಸಂವಾದ ರೂಪ ಪಡೆದಿದೆ.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬಂತೆ ಮಕ್ಕಳು ದೇಶದ ನಾಳಿನ ಆಸ್ತಿ, ಹಾಗಾದರೆ ಮಕ್ಕಳು ಹೇಗಿರಬೇಕು ಎಂಬುದು ಕೂಡ ಅತೀ ಅಗತ್ಯ. ಇದನ್ನೇ ದೇಶದ ಆಸ್ತಿ ಕವನ ಸ್ಪಷ್ಟಪಡಿಸುತ್ತದೆ.
ಕೇಳಿ ನನ್ನಯ ಪುಟ್ಟ ಮಕ್ಕಳೆ
ನೀವೆ ದೇಶದ ಆಸ್ತಿಯು
ನಾಳೆ ಬೆಳಗುವ ಭವ್ಯ ನಾಡನು
ಕಟ್ಟುವಂತಹ ಶಕ್ತಿಯು…
ಭವ್ಯ ನಾಡನ್ನು ಕಟ್ಟುವ ಶಕ್ತಿ ಮಕ್ಕಳಲ್ಲಿದೆ. ಆದ್ದರಿಂದ ಆಲಸ್ಯ ತೊರೆದು ಹೊಸತನ್ನು ಸೃಜಿಸಬೇಕು, ಮನುಜ ಮತವನ್ನು ಸಾರಬೇಕು, ಜಾತಿ ದ್ವೇಷ ಅಳಿಸಬೇಕು ಎಂದು ಮಕ್ಕಳಿಗೆ ಕರೆ ಕೊಟ್ಟಿರುವುದನ್ನು ನೋಡಬಹುದು.

ಗಾದೆ ಮಾತುಗಳನ್ನು ಕಥೆಯ ಮೂಲಕ ತಿಳಿಸಿ ಹೇಳುವ ಹಾಗೂ ಅದರಲ್ಲಿರುವ ನೀತಿಯನ್ನು ಮನದಟ್ಟು ಮಾಡಿಸುವ ಕವನಗಳು ಮಕ್ಕಳಿಗೂ ಖುಷಿ ಕೊಡುತ್ತವೆ. ಅಂತೆಯೇ ಇಲ್ಲಿಯೂ ಜಾಣ ರಾಜು, ತಾಳಿದವನು ಬಾಳಿಯಾನು ಮೊದಲಾದ ರಚನೆಗಳು ಆ ದೃಷ್ಟಿಯಿಂದ ರಚಿಸಲ್ಪಟ್ಟಿವೆ.
ಪ್ರಾಣಿಗಳ ಮೇಲೆ ದಯೆ ತೋರಬೇಕು ಎಂಬ ಸಂದೇಶಕ್ಕೆ ಪೂರಕವಾಗುವಂತೆ ರಂಗ ಮತ್ತು ಜಿಂಕೆ ಕವನವೂ ಇಲ್ಲಿದೆ. ಪರೋಪಕಾರಂ ಇದಂ ಶರೀರಂ ಎಂಬುದಕ್ಕೆ ಸಾಕ್ಷಿಯಾಗಿ ಪರೋಪಕಾರ ಕವನ, ಹಳ್ಳಿಯ ಮನೆಗಳಲ್ಲಿರುವ ಸಂತಸ, ರೈತನ ಬದುಕಿನ ಚಿತ್ರಣ, ನಾಯಿಮರಿ, ಇರುವೆ ಇವುಗಳೆಲ್ಲವೂ ಮಕ್ಕಳಿಗೆ ಹಿತವೆನಿಸುವ ರಚನೆಗಳು. ಹಾಗೆಯೇ ಬಣ್ಣದ ಚಿಟ್ಟೆ, ಹುಣ್ಣಿಮೆ ರಾತ್ರಿ, ಮುದ್ದು ಕಂದ ಇತ್ಯಾದಿಗಳು ಶರ ಷಟ್ಪದಿ ಕಾವ್ಯ ಪ್ರಕಾರದಲ್ಲಿ ಸೊಗಸಾಗಿ ಮೂಡಿಬಂದಿವೆ.
ಇನ್ನು ಬಾಲ್ಯದ ದಿನಗಳಲ್ಲಿ ಆಡಿದ ಆಟಗಳು ಇಂದು ಮರೆಯಾಗುತ್ತಿವೆ, ಅವನ್ನೂ ಮತ್ತೆ ನೆನಪಿಸುವಂಥ ರಚನೆ ಒಮ್ಮೆ ಎಲ್ಲರನ್ನೂ ಬಾಲ್ಯದೆಡೆಗೆ ತಿರುಗಿ ನೋಡುವಂತೆ ಮಾಡಿದೆ. ಕಥನ ಕವನಗಳು ಕೂಡಾ ಇದರೊಳಗಿದ್ದು ಮಕ್ಕಳಿಗೆ ಒಂದು ಕಥೆಯನ್ನು ಹಾಡುವ ಮೂಲಕ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ.
ಕನ್ನಡಕ್ಕಾಗಿ ಕೈಯೆತ್ತು ಎಂಬ ಮಾತಿನಂತೆ ಕನ್ನಡ ಉಳಿಸಿ ಬೆಳೆಸುವುದು ಕರ್ತವ್ಯ ಎಂಬಂತೆ ಕನ್ನಡಕ್ಕಾಗಿ ಒಂದಾಗಿ ಕವನ ಮಕ್ಕಳಲ್ಲಿ ಕನ್ನಡವನ್ನು ಗೌರವಿಸಬೇಕು, ಕನ್ನಡ ತಾಯಿಗೆ ನಿತ್ಯ ನಮಿಸಬೇಕು ಎಂದು ಹೇಳುವ ಕವನದ ಸಾಲುಗಳು ಹೀಗಿವೆ..
ಕನ್ನಡ ನಾಡಿನ ಮುದ್ದಿನ ಮಕ್ಕಳೆ
ಮೊಳಗಿಸಿ ಕನ್ನಡ ಡಿಂಡಿಮವ
ಹೊನ್ನಿನ ಗರಿಯ ಹೊಂದಿದ ತಾಯಿಗೆ
ನಿತ್ಯವು ನಮನವ ಅರ್ಪಿಸುವ…
ಎಂದು ಹಾಡುವಾಗ ಕುವೆಂಪುರವರ ಬಾರಿಸು ಕನ್ನಡ ಡಿಂಡಿಮವ ಕವನ ಮನಃಪಟಲದಲ್ಲಿ ತೇಲಿ ಬರುತ್ತದೆ.
ಒಟ್ಟಿನಲ್ಲಿ ಚಿಣ್ಣರ ತೋಟವು ಶೀರ್ಷಿಕೆಗೆ ತಕ್ಕಂತೆ ವೈವಿಧ್ಯಮಯವಾದ ಮಕ್ಕಳ ರಚನೆಗಳ ಉದ್ಯಾನವನವೇ ಆಗಿದ್ದು ಪೋಷಕರು ಮಕ್ಕಳಿಗೆ ಇವುಗಳನ್ನು ಓದಿಸಿ ಅವರಲ್ಲಿ ಜ್ಞಾನವನ್ನು ಹೆಚ್ಚಿಸಲು ಉಪಯುಕ್ತ ಕೃತಿಯಾಗಿದೆ. ದೈವ ಭಕ್ತಿಯಿಂದ ದೇಶಭಕ್ತಿವರೆಗೆ, ಪ್ರಾಣಿ ಪಕ್ಷಿ, ಮಾನವೀಯ ಮೌಲ್ಯಗಳು, ನೀತಿ ಬೋಧನೆ ಮುಂತಾಗಿ ಎಲ್ಲ ದೃಷ್ಟಿಯಿಂದಲೂ ಮಕ್ಕಳಿಗೆ ಉಪಯೋಗವಾಗುತ್ತದೆ. ಶ್ರೀ ಮಾರುತಿ ಕೆ ಪಿ ರವರ ಈ ಕೃತಿ ಎಲ್ಲ ಮಕ್ಕಳಿಗೂ ಲಭ್ಯವಾಗಲಿ, ಕವಿಗಳಿಗೆ ಶುಭವಾಗಲಿ.
- ಹರಿನರಸಿಂಹ ಉಪಾಧ್ಯಾಯ
