ಪ್ರಸನ್ನಮೂರ್ತಿ ಗುರುವಿನಪುರ ಲೇಖಕರು ಚಾಮರಾಜನಗರದ ಭಾಷೆಯನ್ನು ಒಂದಿನಿತೂ ಗ್ರಾಂಥಿಕಗೊಳಿಸದೇ ಹೇಗಿದೆಯೋ ಹಾಗೆ ಬನಿಬನಿಯಾಗಿ ಮೊಗೆದು ಕೊಟ್ಟಿದ್ದಾರೆ. ಭಾಷೆಯ ಸೊಗಡು ಈ ‘ನಮ್ಮ ಕಾಡಿನ ಕಥೆಗಳು’ ಕಥಾಸಂಕಲನದ ಹೆಗ್ಗಳಿಕೆ. ಈ ಕೃತಿಯ ಕುರಿತು ಪಶುವೈದ್ಯರು, ಲೇಖಕರಾದ ಡಾ.ಗವಿಸ್ವಾಮಿ ವಡ್ಡಗೆರೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಈ ಸಂಕಲನಕ್ಕೆ ‘ನಮ್ಮ ಕಾಡಿನ ಕಥೆಗಳು’ ಎಂದು ಹೆಸರಿಟ್ಟಿರುವುದು ತುಂಬಾ ಸೂಕ್ತವಾಗಿದೆ. “ನಮ್ಮ ಕಾಡು” ಎಂದರೆ ನಮ್ಮ ನೆಲ ನಾಗರಿಕತೆಯ ದಾಳಿಗೆ ಸಿಲುಕಿ ಅಧ್ವಾನದ ಗೂಡಾಗುವ ಮುಂಚೆ ಎಷ್ಟು ಸೊಬಗಿನಿಂದ ಕೂಡಿತ್ತೆಂಬುದು ಈ ಸಂಕಲನದ ಕಥೆಗಳನ್ನು ಓದಿದಾಗ ತಿಳಿಯುತ್ತದೆ.

ಅವ್ವ – ಎಂಬ ಅಂತರಂಗದ “ಚೆಲುವಿ”ಯ ಕಥೆ ಸರಳವಾಗಿ ಆರಂಭವಾಗಿ ಹತ್ತು ಹಲವು ತಿರುವುಗಳನ್ನು ಪಡೆದು ಹೆಣ್ಣಿನ ಘನತೆ, ತ್ಯಾಗಮಯಿ ಗುಣಗಳನ್ನು ಎತ್ತಿ ಹಿಡಿಯುವುದರೊಂದಿಗೆ ಪ್ರಭಾವಶಾಲಿ ಅಂತ್ಯವನ್ನು ಪಡೆಯುತ್ತದೆ. ಅವಳ ಅನುಪಮ ವ್ಯಕ್ತಿತ್ವದ ಗಾಢ ಚೆಲುವು ಓದುಗರ ಎದೆಯನ್ನು ಅನವರತ ಆವರಿಸಿಕೊಳ್ಳುತ್ತದೆ. ಖಾಸಗಿ ಬದುಕಿನ ದುಃಖವನ್ನು ಮೆಟ್ಟಿ ನಿಂತು, ಇನ್ಯಾರದೋ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೆ ಬದುಕು ಕಟ್ಟಿಕೊಡಲು ಹಂಬಲಿಸುವ , ಗರ್ಭ ಧರಿಸದೆಯೂ ಮಹಾತಾಯಿಯಾಗಿ ಹೊರಹೊಮ್ಮುವ ಹೆಣ್ಣೊಬ್ಬಳ ಕೀರ್ತಿಯನ್ನು ಸಾರಿ ಹೇಳುವ ಕಥೆಯೇ – ಅವ್ವ.
ಈರಭದ್ರಬಸ್ಸು- ಇದು ಬಸ್ಸಿನ ರೂಪಕದ ಮೂಲಕ ಇಡೀ ಊರಿನ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಪ್ರಗತಿಯನ್ನು ಹೇಳಿರುವ ಕಥೆ. ಎಂಭತ್ತರ ದಶಕದಲ್ಲಿ ಒಂದು ಊರಿನ ಪಾಲಿಗೆ ಬಸ್ಸು ಕೇವಲ ಬಸ್ ಆಗಿರಲಿಲ್ಲ. ಅದು ಕುಗ್ರಾಮಕ್ಕೂ ನಗರಕ್ಕೂ ಸಂಪರ್ಕ ಸೇತುವೆಯಾಗಿತ್ತು. ಈಗ ಬಸ್ ಮಿಸ್ ಆದರೆ ಯಾರೂ ತಲೆ ಕೆಡಿಸಿಕೊಳ್ಳಲ್ಲ. ಅಥವಾ ಬಸ್ಸಿಗೆ ಕಾಯುವವರೂ ಅಪರೂಪ. ಅಂದಿನ ಕಾಲದಲ್ಲಿ ಬಸ್ ತಪ್ಪಿಸಿಕೊಂಡರೆ ಬದುಕಿನ ಲೆಕ್ಕಾಚಾರಗಳೇ ತಲೆಕೆಳಗಾಗುತ್ತಿದ್ದವು. ಒಬ್ಬ ವಿದ್ಯಾರ್ಥಿ ಪರೀಕ್ಷೆ ಬರೆಯಲಾಗದೇ ಅವನ ಭವಿಷ್ಯವೇ ಕಮರಿ ಹೋಗುತ್ತಿತ್ತು. ಅಥವಾ ಇನ್ಯಾರೋ ರೋಗಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪದೇ ಜೀವವನ್ನೇ ಕಳೆದುಕೊಳ್ಳುತ್ತಿದ್ದ . ಹಾಗಾಗಿ ಬೆಳಗಿಗೊಮ್ಮೆ ಸಂಜೆಗೊಮ್ಮೆ ವಿರಳವಾಗಿ ಬರುತ್ತಿದ್ದ ಬಸ್ಸುಗಳು ಅಂದಿನ ಗ್ರಾಮೀಣ ಜೀವನದ ಅವಿಭಾಜ್ಯ ಅಂಗಗಳಾಗಿದ್ದವು ಎಂಬುದನ್ನು ಈ ಕಥೆ ಮನಮುಟ್ಟುವಂತೆ ಹೇಳುತ್ತದೆ.

ಪೋಸ್ಟಾಫೀಸು- ಹಳ್ಳಿಯ ಪೋಸ್ಟಾಫೀಸಿಗೂ ಹದಿಹರೆಯದ ಪ್ರೇಮಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ ಎಂದು ಈಗಿನ ತಲೆಮಾರಿನವರು ಹುಬ್ಬೇರಿಸಬಹುದು. ಆದರೆ ವಾಟ್ಸೊಪ್ಪು ಇನಿಸ್ಟಾಗ್ರಾಮು ಇಲ್ಲದ ಆ ಕಾಲದಲ್ಲಿ “ಕೆಂಪು” ಬಣ್ಣದ ಪೋಸ್ಟಾಫೀಸು ಪ್ರೇಮಾಭಿವ್ಯಕ್ತಿಯ ಮಾಧ್ಯಮವಾಗಿತ್ತು. ಪ್ರೇಮಿಗಳಿಗಷ್ಟೇ ಅಲ್ಲ. ಹುಟ್ಟೂರನ್ನು ಬಿಟ್ಟು ಎಲ್ಲಿಯೋ ದೂರದ ಊರಿನಲ್ಲಿ ವಿದ್ಯಾಭಾಸ, ಉದ್ಯೋಗ ಮಾಡುತ್ತಿದ್ದ ಮಕ್ಕಳಿಗೆ ತಮ್ಮ ತಮ್ಮ ತಂದೆತಾಯಿಗಳ ದರ್ಶನ ದೊರಕುತ್ತಿದ್ದುದೇ ಅಂಚೆ ಪತ್ರಗಳ ಮೂಲಕ. ಅಂದಿನ ಕಾಲದ ಸಂವಹನದ ಆರ್ದ್ರತೆಯನ್ನು ಪೋಸ್ಟಾಫೀಸು ಕಥೆ ಕಟ್ಟಿಕೊಡುತ್ತದೆ.
ಲೇಖಕರಾದ ಪ್ರಸನ್ನಮೂರ್ತಿ ಗುರುವಿನಪುರ ಅವರ ಇನ್ನುಳಿದ ಬುಡುಬುಡಿಕೆ , ಮಹಾಮಜ್ಜನ, ಮೋಡಿ ಕಥೆಗಳನ್ನು ನೀವು ಓದಿ ಸವಿಯಲೇ ಬೇಕು. ವಿಷಯ ನಿಬಿಡತೆ, ದಟ್ಟವಾದ ವಿವರಣೆಗಳಿಂದ ಕೂಡಿರುವ ಮೌಖಿಕ ಶೈಲಿಯ ಕಥೆಗಳು ಓದುಗರಿಗೆ ರಸದೌತಣ ನೀಡುತ್ತವೆ. ಲೇಖಕರಿಗೆ ತುಂಬು ಹೃದಯದ ಅಭಿನಂದನೆಗಳು.
- ಡಾ.ಗವಿಸ್ವಾಮಿ ವಡ್ಡಗೆರೆ
