ಶ್ರೀ ಅನುಬೆಳ್ಳಿ (ರಾಘವೇಂದ್ರ ಬಿ. ರಾವ್) ಅವರ ‘ನಯನ ನಕ್ಷತ್ರ’ ಪತ್ತೇದಾರಿ ಕಾದಂಬರಿಯ ಕುರಿತು ಪತ್ತೇದಾರಿ ಕಾದಂಬರಿಗಾರ್ತಿ ಹೆಚ್ ವಿ ಮೀನಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ‘ನಯನ ನಕ್ಷತ್ರ’ ಪತ್ತೇದಾರಿ ಕಾದಂಬರಿ
ಲೇಖಕರು : ಶ್ರೀ ಅನುಬೆಳ್ಳಿ (ರಾಘವೇಂದ್ರ ಬಿ. ರಾವ್)
ಪ್ರಕಾಶನ : ಅನು ಕ್ರಿಯೇಷನ್ಸ್
ಬೆಲೆ : 230/-
ಮೊಬೈಲ್ ಸಂಖ್ಯೆ : 9880258933
‘ನಯನ ನಕ್ಷತ್ರ’ ಪತ್ತೇದಾರಿ ಕಾದಂಬರಿಯು ತರಂಗ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗಿ ಓದುಗರ ಅಪಾರ ಮೆಚ್ಚುಗೆಯನ್ನು ಪಡೆದಿದೆ. ಇಂತಹ ರೋಚಕ ಕಥೆಯು ಪುಸ್ತಕ ರೂಪದಲ್ಲಿ ಇದೇ ವರುಷ ಲೋಕಾರ್ಪಣೆ ಗೊಂಡಿರುವುದು ಹೆಮ್ಮೆಯ ವಿಷಯ. ಲೇಖಕರಾದ ಶ್ರೀಯುತ ರಾಘವೇಂದ್ರ.ಬಿ. ರಾವ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

ಗೌತಮ ರೆಡ್ಡಿಯನ್ನು ಭೇಟಿ ಮಾಡಿದ ನಂತರ ಸಿಟ್ಟಿನಿಂದ ವೇಗವಾಗಿ ತನ್ನ ಕಾರನ್ನು ಚಲಾಯಿಸುತ್ತಿದ್ದ ಶೇಷಪ್ಪನ ಕಣ್ಣಿಗೆ ಮುಂದೆ ಬರುತ್ತಿದ್ದ ಕಾರಿನ ತೀಕ್ಷ್ಣವಾದ ಬೆಳಕು ಕುಕ್ಕಿ ನಂತರ ಕರ್ಕಶ ಶಬ್ದದೊಂದಿಗೆ ಶೇಷಪ್ಪನ ಗಾಡಿಯ ಬಂಪರನ್ನು ಉಜ್ಜಿಕೊಂಡು ಹೋದ ಆ ಗಾಡಿ ದಟ್ಟ ಗಿಡಗಳ ಮಧ್ಯೆ ತಲೆ ಕೆಳಗಾಗಿ ಬೀಳುತ್ತದೆ. ಹೆದರಿದ ಶೇಷಪ್ಪ ತನ್ನ ಕಾರನ್ನು ನ್ಯೂಟ್ರಲ್ ಗೆ ತಂದು ರಸ್ತೆಯoಚಿಗೆ ನಿಲ್ಲಿಸಿ ಕಾರಿನಿಂದ ಜಿಗಿಯುತ್ತಾನೆ. ಮೌನ ಆವರಿಸಿದ್ದ ಮರ ಗಿಡಗಳ ದಟ್ಟ ಕತ್ತಲಲ್ಲಿ ತನ್ನ ಬಳಿಯಲ್ಲಿದ್ದ ಚಾರ್ಜರ್ ಲೈಟ್ ನ ಬೆಳಕಿನಿಂದ ಸುತ್ತಲೂ ಒಮ್ಮೆ ನೋಡುತ್ತಾನೆ. ದಟ್ಟ ಮರಗಳ ನಡುವೆ ತಲೆ ಕೆಳಗಾಗಿ ಬಿದ್ದಿದ್ದ ಕಾರಿನ ಬಳಿ ಹುಲ್ಲಿನ ಮೇಲೆ ಬಿದ್ದಿದ್ದ ಓರ್ವ ಹುಡುಗಿಯ ಕಾಲು, ಮೊಣಗಂಟುಗಳು ಕಣ್ಣಿಗೆ ಬೀಳುತ್ತದೆ. ನಂತರ ಏನಾಯಿತು.

ಸ್ವಲ್ಪ ದಿನಗಳಲ್ಲಿ ಗೌತಮ ರೆಡ್ಡಿಯ ಕೊಲೆ ಸಂಭವಿಸುತ್ತದೆ. ನನಗೆ ಲೇಖಕರ ಪರಿಚಯವಾದ ನಂತರ ಅವರ ಈ ಪುಸ್ತಕವನ್ನು ಓದಬೇಕೆಂಬ ಕುತೂಹಲ ಮೂಡಿ ಪುಸ್ತಕವನ್ನು ಕೊಂಡು ತಂದು ಓದಲು ಪ್ರಾರಂಭಿಸಿದೆ. ಕಥೆಯಲ್ಲಿ ನಿಗೂಢ ಕೊಲೆ, ಕೊಲೆಯ ಅಪರಾಧಿ, ಅನುಮಾನಿತರು ಹಾಗೂ ತನಿಖೆಯ ವೈಖರಿಗಳನ್ನು ಓದುಗರ ಮನ ಸೆಳೆಯುವಂತೆ ಹೆಣೆದಿದ್ದಾರೆ. ನ್ಯಾಯಾಲಯದಲ್ಲಿ ಅನುಮಾನಿತರ ವಿಚಾರಣೆಯನ್ನು ಬಹಳ ಸೊಗಸಾಗಿ ಪೋಣಿಸಿದ್ದಾರೆ. ಕಥೆ ಕುತೂಹಲದಿಂದ ಮುಂದುವರೆದಿದ್ದು ಪ್ರಮುಖವಾಗಿ ಫೋಟೋಗ್ರಾಫಿಯ ಬಗ್ಗೆ ಹಾಗೂ ಗೌತಮರೆಡ್ಡಿಯ ಕೊಲೆಯ ಪ್ರಕರಣದಲ್ಲಿ ನಿಪುಣ ಫೋಟೋಗ್ರಾಫರ್ ತನ್ನ ಚಾಕಚಕ್ಯತೆಯಿಂದ ಕೊಲೆಗಾರನ್ಯಾರೆಂದು ಪತ್ತೆಹಚ್ಚಲು ಸಹಾಯಕನಾಗುವ ಸನ್ನಿವೇಶಗಳನ್ನು ಖಾಸಗಿ ಪತ್ತೇದಾರನಾದ ಸಂಪತ್ ಕುಮಾರ್ ಹಾಗೂ ಅವನ ಪರ್ಸನಲ್ ಸೆಕ್ರೆಟರಿ ವೀಣಾರವರ ಮೂಲಕ ಕೊಲೆಯನ್ನು ರೋಚಕಭರಿತವಾಗಿ ಭೇದಿಸಲಾಯಿದೆ. ನ್ಯಾಯಾಲಯದಲ್ಲಿ ನಡೆಯುವ ವಾದ ಪ್ರತಿವಾದಗಳ ಬಗ್ಗೆ ಅನೇಕ ವಿಚಾರಗಳನ್ನು ನಾನು ಅರಿತುಕೊಂಡೆ. ಸರ್ ನಿಮಗೆ ನನ್ನ ಧನ್ಯವಾದಗಳು.
- ಹೆಚ್ ವಿ ಮೀನಾ – ಬೆಂಗಳೂರು.
