ಎರಡೂ ಕಣ್ಣುಗಳನ್ನು ಕಳೆದುಕೊಂಡಾಗ ಜೀವನದ ಕನಸುಗಳು ಕೂಡ ಕಣ್ಣುಗಳ ಜೊತೆಗೆ ಅಂಧಕಾರಕ್ಕೆ ಜಾರಿ ಹೋಗುವುದು ಸಾಮಾನ್ಯ. ಇದು ಸಿದ್ದೇಶ್ ರವರ ಆತ್ಮಕಥೆ ಕುರಿತಾದ “ಕೋಲುದಾರಿ” ಕೃತಿಯ ಕುರಿತು ಲೇಖಕರಾದ ಎನ್.ವಿ.ರಘುರಾಂ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ: ಕೋಲುದಾರಿ
ಪ್ರಕಾರ:ಆತ್ಮಕಥೆ
ಲೇಖಕ: ಸಿದ್ದೇಶ್.ಕೆ.
ಪ್ರಕಾಶನ: ಛಂದ ಪುಸ್ತಕ
ಪಂಚೇಂದ್ರಿಯಗಳಲ್ಲಿ ಯಾವುದಕ್ಕೆ ತೊಂದರೆಯಾದರೂ ಜೀವನ ನಡೆಸುವುದು ಕಷ್ಟವಾಗುತ್ತದೆ. ಅದರಲ್ಲೂ ಚೆನ್ನಾಗಿರುವ ಕಣ್ಣುಗಳು ಹದಿನೆಂಟನೇ ವರ್ಷದಲ್ಲಿ ನಿಧಾನವಾಗಿ ಮಂಕಾಗಿ ನಂತರ ಅಂಧಕಾರಕ್ಕೆ ಜಾರಿದರೆ ಜೀವನವೇ ಅಸಹನೀಯವಾಗುತ್ತದೆ. ಜೀವನದ ಬಗ್ಗೆ ಇರುವ ಕನಸುಗಳು ಅರಳಲು ಪ್ರಾರಂಭವಾಗುವ ಸಮಯದಲ್ಲಿ ಎರಡೂ ಕಣ್ಣುಗಳನ್ನು ಕಳೆದುಕೊಂಡಾಗ ಜೀವನದ ಕನಸುಗಳು ಕೂಡ ಕಣ್ಣುಗಳ ಜೊತೆಗೆ ಅಂಧಕಾರಕ್ಕೆ ಜಾರಿ ಹೋಗುವುದು ಸಾಮಾನ್ಯ. ಆಗ ಕೈಯಲ್ಲಿ ಬಿಳಿ ಮತ್ತು ಕೆಂಪುಬಣ್ಣಗಳಿರುವ ಕೋಲನ್ನು ಹಿಡಿದುಕೊಂಡು ಕನಸುಗಳಿಗೆ ರೂಪ ಕೊಡುತ್ತಾ ಜೀವನವನ್ನು ಎದುರಿಸಿದ ಸಿದ್ದೇಶ್ ರವರ ಆತ್ಮಕಥೆ “ಕೋಲುದಾರಿ” ಶೀರ್ಷಿಕೆಯೊಂದಿಗೆ ಪ್ರಕಟವಾಗಿದೆ.
ಎಸ್.ಎಸ್.ಎಲ್.ಸಿ.ಯಲ್ಲಿ ಒಂದು ಬಾರಿ ಎಡವಿದರೂ ದುಡಿಮೆ ಪ್ರಾರಂಭ ಮಾಡಬೇಕಾದ ಅನಿವಾರ್ಯತೆಯಿಂದ, ಪದವಿ ಪಡೆಯುವ ಆಸೆ ಹಿಂದಿಕ್ಕಿ, ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಕ್ಕೆ ಸೇರಿದ್ದಾಗ ಕಣ್ಣಿನ ಖಾಯಿಲೆಯಿಂದ ಕಣ್ಣು ಕಳೆದುಕೊಂಡ ಸಿದ್ದೇಶ್ ರವರು ಕೈಯಲ್ಲಿ ಕೋಲು ಹಿಡಿದು ನಡೆದ ದಾರಿಯ ಚಿತ್ರಣವೇ ಇಲ್ಲಿದೆ. ಆ ಕಣ್ಣಿನ ಕಾಯಿಲೆಯ ಹೆಸರೇನು? ಹೇಗೆ ಪ್ರಾರಂಭವಾಯಿತು, ಎಲ್ಲಿ ಪರೀಕ್ಷೆ ಮಾಡಿಸಿಕೊಂಡರು ಈ ಎಲ್ಲಾ ವಿಷಯಗಳನ್ನು ತಿಳಿಯಲು ಪುಸ್ತಕ ಓದಿದರೆ ಚೆನ್ನ.

ಕಷ್ಟ ಬಂದಾಗ ಕುಗ್ಗುವುದು ಸಾಮಾನ್ಯ. ಬೆಳಿಗ್ಗೆ ಆಸ್ಪತ್ರೆಗೆ ನೋಡಲು ಬಂದ ತಂದೆಗೆ ಮಗ ಹಿಂದಿನ ರಾತ್ರಿ ದೃಷ್ಟಿ ಕಳೆದುಕೊಂಡಿರುವ ವಿಷಯ ತಿಳಿದು ಹೇಗಾಗಿರಬೇಕು? ಆಗ “ಜೀವನದಲ್ಲಿ ನಾನ್ಯಾವತ್ತೂ ನಿಮಗೆ ಹೊರೆಯಾಗುವುದಿಲ್ಲ ಅಪ್ಪಾಜಿ, ನನ್ನ ಅನ್ನ ನಾನೇ ದುಡಿದು ತಿನ್ನುತ್ತೇನೆ” ಎಂದು ಕಣ್ಣನ್ನು ಕಳೆದುಕೊಂಡಿದ್ದ ಮಗ ಅಪ್ಪನಿಗೆ ಹೇಳುತ್ತಾನೆ. ಆ ಮಾತನ್ನು ಉಳಿಸಿಕೊಳ್ಳುವ ದಾರಿಯಲ್ಲಿ ಬಂದ ಎಡರು ತೊಡರುಗಳನ್ನು ಎದುರಿಸಿ ನಡೆದ ದಾರಿಯೇ ಈ “ಕೋಲುದಾರಿ”.
ಸಿದ್ದೇಶ್ ತಮ್ಮ ಜೀವನದಲ್ಲಿ ಆಕಸ್ಮಿಕವಾಗಿ ಬಂದ ಈ ದೈಹಿಕ ಆಶಕ್ತತೆಯನ್ನು ತಮ್ಮ ಬದುಕಿನ ಮಿತಿಯಾಗಿ ಒಪ್ಪಿಕೊಳ್ಳದೇ, ಅದನ್ನು ಸವಾಲಾಗಿ ಸ್ವೀಕರಿಸುತ್ತಾರೆ. ಕೈಯಲ್ಲಿ ಕೋಲನ್ನು ಹಿಡಿದುಕೊಂಡು ನಡೆಯಲು ಕಲಿಯುವುದರಿಂದ ಪ್ರಾರಂಭವಾದ ಅವರ ಹೊಸ ಜೀವನಯಾನ ಅವರನ್ನು ಕರ್ನಾಟಕದ ಉದ್ದಗಲಕ್ಕೂ ಕರೆದೊಯ್ಯುತ್ತದೆ. ಆಗ ನಡೆದ ಘಟನೆಗಳನ್ನು ಮತ್ತು ಸಂಗತಿಗಳನ್ನು ಅನಾವರಣ ಮಾಡುತ್ತಾ ಸಾಗುವ ಆತ್ಮಕಥೆ ಶ್ರಮದ ಮೂಲಕ ಬದುಕನ್ನು ಕಟ್ಟಿಕೊಂಡ ಲೇಖಕರ ವ್ಯಕ್ತಿತ್ವವನ್ನು ಅನಾವರಣ ಮಾಡುತ್ತದೆ. ಆ ದಾರಿಯಲ್ಲಿ ಕುಟುಂಬದ ಆತಂಕ, ಸಮಾಜದ ನೋಟ, ಕುಸಿದ ಕ್ಷಣಗಳು, ಮತ್ತೆ ಮತ್ತೆ ಎದ್ದು ನಿಲ್ಲುವ ಕ್ಷಣಗಳು ನೈಜವಾಗಿ ಚಿತ್ರಿತವಾಗಿದೆ. ಯಾವುದೇ ರೀತಿಯ ಅತಿಶಯೋಕ್ತಿ ಇಲ್ಲದೆ, ಸೋಲಿನ ಮತ್ತು ಅಸಹಾಯಕತೆಯ ಕ್ಷಣಗಳನ್ನು ಮುಚ್ಚಿಡದೆ, ಸರಳವಾದ ಭಾಷೆಯಲ್ಲಿ ಸಾಗುವ ಕಥೆಯಲ್ಲಿ ಬರುವ ಭಾವನೆಗಳು ಗಾಢವಾಗಿದ್ದು ಓದುಗರ ಹೃದಯವನ್ನು ನೇರವಾಗಿ ತಲುಪುತ್ತವೆ.
ಕೈಯಲ್ಲಿ ಕೋಲು ಹಿಡಿದುಕೊಂಡು ಹೋದ ತಕ್ಷಣ ನೋಡುವವರ ದೃಷ್ಟಿ ಕೂಡ ಬದಲಾಗುವುದು ಸಾಮಾನ್ಯ. “ಟೈಮ್ ಪಾಸಿಗಾಗಿ ಬರುತ್ತಾರೆ” ಎನ್ನುವ ಮಾತು ಕಾಲೇಜಿನಲ್ಲಿ ಮಾತ್ರವಲ್ಲದೇ ಕೆಲಸ ಮಾಡುವ ಸ್ಥಳಗಳಲ್ಲಿ ಕೂಡ ಕೇಳಿ ಬರುತ್ತದೆ. ಅದೆಲ್ಲವೂ ನಕಾರಾತ್ಮಕವಾಗಿ ಕಂಡರೂ ಅವರನ್ನು ಮತ್ತೆ ಕಾರ್ಯಶೀಲನನ್ನಾಗಿ ಮಾಡಲು ಸಹಾಯ ಮಾಡಿದ ಸಂಗತಿಗಳೆಂದು ಲೇಖಕರು ಹೇಳುತ್ತಾರೆ.

ಕೋಲು ನಡೆಯುವ ದಾರಿ ತೋರಿಸಿದರೆ, ತಲೆಗೆ ಬ್ರೈಲ್ ಲಿಪಿ ದಾರಿ ತೋರಿಸುತ್ತದೆ. ಬ್ರೈಲ್ ಲಿಪಿ ಕಲಿಯುವುದು ಅಷ್ಟೊಂದು ಸಲಭವೇನಲ್ಲ. ಬಲದಿಂದ ಎಡಕ್ಕೆ ಬರೆದು, ಓದುವಾಗ ಎಡದಿಂದ ಬಲಕ್ಕೆ ಓದಬೇಕು. ಇದಕ್ಕೆ ಬೌದ್ಧಿಕ ಮತ್ತು ದೈಹಿಕ ಶ್ರಮ ಕೂಡ ಬೇಕು. ಬ್ರೈಲ್ ಲಿಪಿಯಂತೆ ಅವರ ಬದುಕಿನ ದಾರಿಯೂ ವಿಭಿನ್ನ. ಬಲದಿಂದ ಎಡಕ್ಕೆ ಬರೆಯಲ್ಪಟ್ಟ ಸಂಕಷ್ಟಗಳು, ಎಡದಿಂದ ಬಲಕ್ಕೆ ಓದಿದಾಗ ಸಾಧನೆಯಾಗಿ ತೋರುತ್ತವೆ. ಹಾಗಾಗಿ ಬ್ರೈಲ್ ಲಿಪಿ ಅವರಿಗೆ ಬದುಕನ್ನು ಹೊಸ ದೃಷ್ಟಿಯಿಂದ ಓದಿಕೊಳ್ಳಲು ಕಲಿಸುತ್ತದೆ. ಅದರ ಫಲವಾಗಿ ಹಂತ, ಹಂತವಾಗಿ ಕನಸಿನ ಹಾದಿಯಲ್ಲಿ ನಡೆಯುತ್ತಾ ಸಾಗಿದಾಗ ಕೈಹಿಡಿದು ಸಹಾಯ ಮಾಡಿದವರು, ಆಡಿಕೊಂಡವರು, ಸಂಬಳ ಕೊಡದೆ ಕೆಲಸ ಮಾಡಿಸಿಕೊಂಡವರು ಕೂಡ ಬರುತ್ತಾರೆ. ಪ್ರಯಾಣ ಮಾಡುತ್ತಿದ್ದಾಗ ದಾರಿಯ ಮಧ್ಯದಲ್ಲಿ ಶೌಚಾಲಯಕ್ಕೆ ಹೋಗಿ ಬರುವಾಗ ಬಸ್ ಹೊರಟು ಹೋಗಿರುತ್ತದೆ. ಆಗ ಸಹಾಯಕ್ಕೆ ಬರುವ ಅಪರಿಚಿತರ ಚಿತ್ರಣ, ಪಾಠಗಳನ್ನು ಇವರಿಗೆ ಓದಿ ಹೇಳುವ ಸ್ನೇಹಿತರು, ಪಾಠಗಳನ್ನು ಧ್ವನಿ ಮುದ್ರಣ ಮಾಡಿ ಕೊಡುವವರು, ಸಹಾಯಕರಾಗಿ ಬಂದು ಪರೀಕ್ಷೆ ಬರೆದವರನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ಅಂಧ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಚಟುವಟಿಕೆಗಳಲ್ಲಿ ಇವರು ತೊಡಗಿಸಿಕೊಂಡಿದ್ದರು. ಮೊಬೈಲ್ ಇಲ್ಲದ ದಿನಗಳಲ್ಲಿ ಸಂಘದ ಜಂಟಿ ಕಾರ್ಯದರ್ಶಿಯಾಗಿದ್ದ ಇವರು, ಸಂಘದ ಸದಸ್ಯರಿಗೆ ವಿಷಯಗಳನ್ನು ತಿಳಿಸಲು ಬ್ರೈಲ್ ಲಿಪಿಯಲ್ಲಿ ಕಾಗದ ಬರೆದರೂ ಅದನ್ನು ಅಂಚೆ ಮೂಲಕ ಕಳುಹಿಸಲು ವಿಳಾಸ ಬರೆಯಲು ಹೆಣಗಾಡುತ್ತಿದ್ದರು ಎಂಬುದನ್ನು ಓದಿದಾಗ ಮನಸ್ಸಿಗೆ ಕಸಿವಿಸಿಯಾಗುತ್ತದೆ.
ಸರ್ಕಾರದ ವ್ಯವಸ್ಥೆ ಕೂಡ ಇಂಥವರ ಬಗ್ಗೆ ಸಹಾನುಭೂತಿ ಹೊಂದಿರಲಿಲ್ಲ. ೧೯೯೫ರ ವಿಶೇಷ ಕಾಯ್ದೆ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಧರಿಗೆ ಶೇಕಡಾ ಒಂದರಷ್ಟು ಮೀಸಲಾತಿ ನೀಡಿದರೂ, ಅದೆಲ್ಲವೂ ಶಾಸನದಲ್ಲಿ ಮಾತ್ರ ಉಳಿದಿತ್ತು. ಅಂಧರೆಂದರೆ ಸಂಗೀತ ಪಾಠ ಮಾಡಲು, ಕುರ್ಚಿಗೆ ಹೆಣಿಗೆ ಹಾಕುವವರಾಗಿ, ಲಿಫ್ಟ್ ಅಥವಾ ಟೆಲಿಫೋನ್ ಆಪರೇಟರ್ ಆಗಿ ಮಾತ್ರ ನೋಡುವ ಅಭ್ಯಾಸವಿತ್ತು. ದೃಷ್ಟಿ ಸವಾಲುಳ್ಳ ಶಿಕ್ಷಕರೂ ಸಾಮಾನ್ಯ ಮಕ್ಕಳಿಗೆ ವಿವಿಧ ವಿಷಯಗಳ ಬೋಧನೆ ಮಾಡಬಲ್ಲರು ಎಂದು ಮೈಸೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ವಿಶೇಷಜ್ಞರ ಎದುರು ಸಾಬೀತು ಮಾಡಿದ್ದು ಅವರ ಸಂಘದ ಒಂದು ದೊಡ್ಡ ಮೈಲಿಗಲ್ಲೇ ಸರಿ. ಇದೆಲ್ಲಾ ಒಂದುಕಡೆ ಆದರೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯಗಳಿಸಿ ಸರ್ಕಾರದ ಕೆಲಸಕ್ಕೆ ಸೇರಿದ ಮೇಲೂ ಎದುರಿಸಿದ ತಾರತಮ್ಯಗಳನ್ನು ಪುಸ್ತಕದಲ್ಲಿ ಓದಿದರೆ ಚೆನ್ನ.
ಕಣ್ಣಿದ್ದವರಿಗೆ ಮೊದಲ ನೋಟದಲ್ಲಿ ಪ್ರೇಮಾಂಕುರವಾಗುವ ವಿಷಯ ಎಲ್ಲರಿಗೂ ಗೊತ್ತಿದೆ. ಹಾಗಾದರೆ ಇವರಿಗೆ ಪ್ರೇಮಾಂಕುರ ಹೇಗೆ ಆಯಿತು? ವರ ಪರೀಕ್ಷೆಯಲ್ಲಿ ಇವರಿಗೆ ಯಾವ ಪ್ರಶ್ನೆ ಕೇಳಿದರು, ಪ್ರೇಮ ನಿವೇದನೆ ಹೇಗೆ ಮಾಡಿಕೊಂಡರು, ಮದುವೆ ಹೇಗೆ ನಡೆಯಿತು ತಿಳಿಯಲು ಪುಸ್ತಕ ಓದಬೇಕು. ಗಂಡ ಹೆಂಡತಿ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೀತಿ ಎಲ್ಲರಿಗೂ ಒಂದು ಪಾಠವೇ ಸರಿ ಎಂದು ಓದುಗರಿಗೆ ಅನಿಸಿದರೆ ಆಶ್ಚರ್ಯವಿಲ್ಲ.

ಒಂದು ಕಡೆ ಕೆಲಸ ಮಾಡುತ್ತಾ, ಪಾಠ ಓದುತ್ತಾ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಾ, ಸಂಸಾರವನ್ನು ನಡೆಸುತ್ತಾ ತಮ್ಮ ಗುರಿಯನ್ನು ಮುಟ್ಟಲು ಮೊದಲಿಗೆ ಧೈರ್ಯವಿರಬೇಕು. “ತಾಯಿ ಆಕೆಯ ಧೈರ್ಯವನ್ನು ಕೂಡ ತನ್ನ ರಕ್ತ ಮಾಂಸಗಳೊಂದಿಗೆ ಸೇರಿಸಿ ನನಗೂ ಧಾರೆ ಎರೆದಿದ್ದಾಳೆ” ಎಂದು ಹೇಳುವ ಲೇಖಕರು ಪುಸ್ತಕವನ್ನು ಅವರ ತಾಯಿಗೆ ಅರ್ಪಿಸಿದ್ದಾರೆ.
“ತಮಗಾದ ಅಪಮಾನಗಳನ್ನು ನುಂಗಿ ‘ನೀಲಕಂಠ’ರಾಗುವ ಪರಿ, ನಕಾರಾತ್ಮಕ ಅನುಭವಗಳಿಂದಲೂ ಬದುಕಿನ ಪಾಠವನ್ನು ಕಲಿತು ಮುನ್ನಡೆಯುವ ರೀತಿ ಜೀವನ ಕೌಶಲದ ಪಾಠಗಳನ್ನು ಓದುಗರಿಗೂ ತಲುಪಿಸುತ್ತದೆ” ಎಂದು ಮುನ್ನುಡಿಯಲ್ಲಿ ನೇಮಿಚಂದ್ರರವರು ಹೇಳಿರುವುದು ಅತಿಶಯೋಕ್ತಿಯಲ್ಲ.
ಇದೊಂದು ಧೈರ್ಯ, ಸಹನಶೀಲತೆ ಮತ್ತು ಅಜೇಯ ಮನೋಬಲದ ಜೀವನಗಾಥೆ. ಕಣ್ಣು ಕಾಣುವ ಅನೇಕರು ಜೀವನದ ಅರ್ಥವನ್ನು ತಿಳಿಯದೆ ಪರಿತಪಿಸುತ್ತಿರುವ ಈ ಕಾಲದಲ್ಲಿ, ಕಣ್ಣು ಕಾಣದ ವ್ಯಕ್ತಿಯೊಬ್ಬರು ಬದುಕನ್ನು ಹೇಗೆ ದೃಢವಾಗಿ ಹಿಡಿದಿಟ್ಟುಕೊಂಡಿದ್ದಾರೆ ಎಂಬ ಗಂಭೀರವಾದ ಪ್ರಶ್ನೆಯನ್ನು ನಮ್ಮ ಮುಂದೆ ಇಡುತ್ತದೆ. “ಅಸಾಧ್ಯ” ಎನ್ನುವ ಪದ ಮನುಷ್ಯನ ಮನಸ್ಸಿನಲ್ಲಿ ಮಾತ್ರ ಇದೆ ಎಂಬ ಸತ್ಯವನ್ನು ಈ ಕೃತಿ ನೆನಪಿಸುತ್ತದೆ. ಹಾಗಾಗಿ “ಕೋಲುದಾರಿ” ಓದುಗರಿಗೆ ಆತ್ಮಾವಲೋಕನದ ಮಾಡಿಕೊಳ್ಳುವಂತೆ ಮಾಡುತ್ತದೆ. ಇದೊಂದು ಪ್ರೇರಣಾತ್ಮಕ ಆತ್ಮಕಥೆಗಳ ಸಾಲಿನಲ್ಲಿ ಗಮನಾರ್ಹ ಸ್ಥಾನವನ್ನು ಪಡೆಯುವ ಕೃತಿ. ವಿದ್ಯಾರ್ಥಿಗಳು, ಶಿಕ್ಷಕರು, ಜೀವನದಲ್ಲಿ ಹತಾಶರಾಗಿರುವವರಿಗೂ ಈ ಪುಸ್ತಕ ಒಂದು ಬೆಳಕಿನ ದಾರಿ ತೋರಿಸುವ ಕೋಲಾಗುತ್ತದೆ.
“ಕೋಲುದಾರಿ” ಬದುಕನ್ನು ಕೈಯಿಂದ ಓದಿ ಗೆದ್ದ ಮನಸಿನ ಕಥೆಯೇ ಸರಿ.
ಉತ್ತಮ ಪುಸ್ತಕ ಕೊಟ್ಟ ಲೇಖಕ ಸಿದ್ದೇಶ್ ರವರಿಗೂ ಅದನ್ನು ಪ್ರಕಟಿಸಿದ ಛಂದ ಪುಸ್ತಕದವರಿಗೂ ಧನ್ಯವಾದಗಳು.
- ಎನ್.ವಿ.ರಘುರಾಂ
