‘ಚಿಂತೆ ಬಿಡಿ chill ಮಾಡಿ’ ಪುಸ್ತಕ ಪರಿಚಯ

ಶ್ವೇತಾ ಭಿಡೆ ಅವರ ‘ಚಿಂತೆ ಬಿಡಿ chill ಮಾಡಿ’ ದಲ್ಲಿ 60 ಲೇಖನಗಳಿವೆ. ಪ್ರತಿ ಕಥೆಗಳು ಎಲ್ಲಿಯೂ ಬೇಸರವಾಗದಂತೆ ಓದಿಸಿಕೊಂಡು ಹೋಗುತ್ತದೆ. 25 ವರುಷ ಮೇಲ್ಪಟ್ಟವರಲ್ಲಿ ಯಾಕೆ ಏನು ನನಗೇ ಯಾಕೆ ಹೀಗೆ ಎಂದು ಸಾಮಾನ್ಯವಾಗಿ ಹುಟ್ಟುವ ಪ್ರಶ್ನೆಗಳ ಸುತ್ತ ನಡೆಸುವ ಜೀವನವನ್ನು ಹೇಗೆ ಸಂಬಾಳಿಸಬಹುದು ಎನ್ನುವ ವಿಚಾರಗಳನ್ನು ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಲಾಗಿದೆ. ಈ ಕೃತಿಯ ಕುರಿತು ಆಶ್ರಿತ ಕಿರಣ್ ಅವರು ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ…

ಪುಸ್ತಕದ ಹೆಸರು : ಚಿಂತೆ ಬಿಡಿ chill ಮಾಡಿ
ಲೇಖಕರು : ಶ್ವೇತಾ ಭಿಡೆ
ಪ್ರಕಾಶಕರು : ಸಾವಣ್ಣ ಎಂಟರ್ ಪ್ರೈಸಸ್
ಪುಟಗಳ ಸಂಖ್ಯೆ: 160
ಪುಸ್ತಕದ ಬೆಲೆ : 180.00

ಚಿಗುರೊಡೆದ ಗಿಡದ ಎಲೆಯ ಬಣ್ಣ ಕಣ್ಮನ ತುಂಬುವಂತೆ ಈ ಪುಸ್ತಕದ ಮುಖಪುಟದ ಬಣ್ಣ ಮನಸ್ಸಿಗೆ ಹಿತವೆನಿಸುತ್ತದೆ. ಹಸಿರು ಬಣ್ಣವು ಸಂತೋಷ, ಶಾಂತಿ ಮತ್ತು ಸಾಮರಸ್ಯದಂತಹ ಸಕಾರಾತ್ಮಕ ಭಾವನೆಗಳನ್ನು ಪ್ರತಿನಿಧಿಸುತ್ತದೆ.ಪುಸ್ತಕದ ಆಶಯವು ಅದೇ..” ಚಿಂತೆ ಬಿಡಿ chill ಮಾಡಿ “.ಇದು ಲೇಖಕಿ ಶ್ವೇತಾ ಭಿಡೆ ಅವರ ಮೊದಲ ಪುಸ್ತಕ.

“ಎಲ್ಲರೂ ಸ್ಪೂರ್ತಿದಾಯಕ ಬರಹಗಳನ್ನೇ ಬರೆಯುತ್ತಾರಾದರೆ ಈ ಪುಸ್ತಕವೇಕೆ ಬೇಕು ? ಅಂಥದ್ದೇನಿದೆ ವಿಶೇಷ ಎಂದು ಕೇಳಿಕೊಂಡು ಈ ಪುಸ್ತಕದ ಬೆನ್ನುಡಿ ನೋಡುತ್ತಿದ್ದರೆ ಪೂರ್ತಿ ಓದಿ ! ” ಎಂಬ ಬೆನ್ನುಡಿಯ ಸಾಲುಗಳು ಪುಸ್ತಕ ಓದುಗರನ್ನು ಒಂದೆರೆಡು ಪುಟ ಓದುವಂತೆ ಮಾಡುತ್ತದೆ.ಓದಲು ಆರಂಭಿಸಿದಾಗ ಪುಸ್ತಕ ಕೆಳಗಿಡುವ ಯೋಚನೆ ಬರಲಾರದು. 60 ಲೇಖನ ಇದ್ಯಾ ? ಎಂದು ಪರಿವಿಡಿ ನೋಡಿ ಪುಸ್ತಕ ಬದಿಗಿಟ್ಟರೆ ಖಂಡಿತ ನೀವು ಮುಖ್ಯವಾದದ್ದು ಕಳೆದುಕೊಳ್ಳುತ್ತೀರಿ.

ಹೌದು. ಇಲ್ಲಿ 60 ಲೇಖನಗಳಿವೆ. ಆದರೆ ಯಾವುದೂ ಕೂಡ ಎರಡು ಪುಟಕ್ಕಿಂತ ಹೆಚ್ಚಿಲ್ಲ. ಆ ಎರಡು ಪುಟದಲ್ಲಿ ಹೇಳಬೇಕಾಗಿರುವ ವಿಷಯಕ್ಕೆ ಸಂಬಂಧಿಸಿದ ಒಂದು ಚಿಕ್ಕ ಕಥೆಯೂ ಇದೆ. ಆ ಕಥೆಗಳು ಎಲ್ಲಿಯೂ ಬೇಸರವಾಗದಂತೆ ಓದಿಸಿಕೊಂಡು ಹೋಗುತ್ತದೆ.

ಈ ಓದು ನಮ್ಮ ಬದುಕಿನ ಆಗುಹೋಗುಗಳ ಸುತ್ತ ಯೋಚಿಸುವಂತೆ ಮಾಡುತ್ತದೆ. 16-25 ವರುಷದವರು ಓದಿದರೆ ಬದುಕಿನಲ್ಲಿ ಹೇಗಿರಬೇಕು ಹೇಗಿರಬಾರದು ಎಂಬ ಪಾಠವನ್ನು ಕಲಿಸುತ್ತದೆ. 25 ವರುಷ ಮೇಲ್ಪಟ್ಟವರಲ್ಲಿ ಯಾಕೆ ಏನು ನನಗೇ ಯಾಕೆ ಹೀಗೆ ಎಂದು ಸಾಮಾನ್ಯವಾಗಿ ಹುಟ್ಟುವ ಪ್ರಶ್ನೆಗಳ ಸುತ್ತ ನಡೆಸುವ ಜೀವನವನ್ನು ಹೇಗೆ ಸಂಬಾಳಿಸಬಹುದು ಎನ್ನುವ ವಿಚಾರಗಳನ್ನು ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಲಾಗಿದೆ.

ಒಂದೊಂದು ಪುಟ ತಿರುಗಿಸಿ ಓದುತ್ತಾ ಹೋದಾಗ ನಾನು ಹೀಗೆ ಮಾಡಿದ್ದೆ…ಛೇ ಹಾಗೆ ಮಾಡಬಾರದಿತ್ತು..”ಅರೇ ಇದು ನನಗೂ ಆಗಿತ್ತಲ್ಲ.. ನಾನು ಇದನ್ನು ಪ್ರಯತ್ನ ಮಾಡ್ಬೇಕು ಎಂದು ಅನಿಸದೆ ಇರದು. ಇನ್ನೊಂದು ವಿಶೇಷ ಏನೆಂದರೆ ಒಂದು ಲೇಖನದ ಅಂತ್ಯದಲ್ಲಿ ಸ್ಪೂರ್ತಿದಾಯಕ ವಿಚಾರಗಳಿದ್ದರೆ ಇನ್ನೊಂದು ಲೇಖನದ ಆರಂಭ ಒಂದು ಕಥೆಯ ಮೂಲಕ ಮಾಡಲಾಗಿದೆ. ಇದು ಇನಷ್ಟು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ.

ಇನ್ನು ಲೇಖನದ ಶೀರ್ಷಿಕೆ ನೋಡುತ್ತಲೇ ಒಳಗೇನಿದೆ ಎಂಬ ಕುತೂಹಲ ಹೆಚ್ಚಾಗುತ್ತದೆ. ಒಂದೆರೆಡು ಇಲ್ಲಿ ಉಲ್ಲೇಖಿಸುವೆ.”ತಪ್ಪು ಯಾರದ್ದು? “ನಾನು” ಸರಿಯಿರುವುದಿಲ್ಲ,ಇದೊಂದು ಅದ್ಭುತ ಕಥೆ , ವಿರಾಮದಲ್ಲೂ ಇದೆ ಆರಾಮ, ಇದು ಖಂಡಿತ ನಿಮಗೆ” ಹೀಗೆ ಇನ್ನು ಹಲವಿದೆ. ಇಲ್ಲಿನ ಅನೇಕ ಲೇಖನಗಳನ್ನು ಓದಿದಾಗ ಮೊದಲು ಮೂಡುವುದೇ ಪ್ರಶ್ನೆಗಳು. ಆ ಪ್ರಶ್ನೆಗೆ ಉತ್ತರವು ಅದೇ ಪುಟದಲ್ಲಿ ದೊರೆಯುತ್ತದೆ.

ಬದುಕನ್ನು ಅವಲೋಕಿಸಿಕೊಳ್ಳಲು ಈ ಓದು ದಾರಿ ಮಾಡಿಕೊಡುತ್ತದೆ. ಕಳೆದು ಹೋದ ಅದೆಷ್ಟೋ ಕ್ಷಣಗಳನ್ನು ಮೆಲುಕು ಹಾಕುವಂತೆ ಮಾಡುತ್ತದೆ. ಜಂಜಾಟದ ಈ ಬದುಕಿನಲ್ಲಿ ನಾವು ಗಳಿಸಿರುವುದೇನು ಕಳೆದುಕೊಳ್ಳುತ್ತಿರುವುದೇನು ಎನ್ನುವುದನ್ನು ಯೋಚಿಸುವಂತೆ ಮಾಡುತ್ತದೆ.

ಈ ಪುಸ್ತಕ ಕೈಗಿತ್ತಿಕೊಂಡಾಗ ಸಾಕಷ್ಟು ನಿರೀಕ್ಷೆ ಇತ್ತು.ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ಬರಹದಲ್ಲಿ ಒಂದು ತೂಕವಿದೆ. ನಿರೂಪಿಸಿರುವ ಶೈಲಿ ಮನಮುಟ್ಟುತ್ತದೆ. ಕಳೆದ ಎರಡು ವರುಷಗಳಿಂದ ಇವರ ಬರವಣೆಗೆಯ ಅಭಿಮಾನಿ ನಾನು.ನನ್ನಂತ ಅನೇಕರನ್ನು ಬರವಣಿಗೆಯ ಹಾದಿಗೆ ಕರೆತಂದು ಪ್ರೋತ್ಸಾಹಿಸುತ್ತಾ ಬಂದವರು ಇವರು.ಈ ಪುಸ್ತಕದ ಓದು ನನ್ನಲ್ಲಿ ಹೊಸ ಕನಸುಗಳಿಗೆ ದಾರಿ ಮಾಡಿಕೊಟ್ಟಿದೆ.ಅಳುಕನ್ನು ದೂರ ಮಾಡಿಸಿದೆ.ಯಾವಾಗಲು ನಾನೇ‌ ಯಾಕೆ ಕರೆ ಮಾಡಬೇಕು ಎಂಬ ಸಣ್ಣದೊಂದು ಅಹಂಕಾರದ ಆಲೋಚನೆಯನ್ನು ಬಡಿದೋಡಿಸಿದೆ.

ಕೆಲವು ಸಾಲುಗಳು ಮನದಲ್ಲಿ ಭದ್ರವಾದವು.”ಬಲಕ್ಕಿಂತ ಬೇರೆಯವರ ಬಗ್ಗೆ ಯೋಚಿಸುತ್ತಲೇ ಸಿಗಬಹುದಾದ ಒಳ್ಳೆಯದನ್ನು ಕಳೆದುಕೊಳ್ಳುತ್ತೇವೆ..” ಎಷ್ಟು ಸತ್ಯ ಅಲ್ವಾ..ಇನ್ನು ಸಣ್ಣದೊಂದು ಸಮಸ್ಯೆ ಬಂದ ಕೂಡಲೆ ದೇವರೆ ನನಗೇ ಯಾಕೆ ಹೀಗೆ ಕಷ್ಟ ಕೊಡ್ತೀಯಾ ಅಂತ ಕೇಳೋದು ಕಾಮನ್.ಇನ್ನು ಖಂಡಿತ ಕೇಳಲ್ಲ.ಏಕೆಂದರೆ ಕೇಳುವ ಮೊದಲು ಪುಸ್ತಕದಲ್ಲಿರುವ ಕೆಳಗಿನ ಸಾಲುಗಳು ನೆನಪಾಗುತ್ತದೆ.

“ದೇವರು ಯಾರಿಗೂ ಹುಡುಕಿ ಹುಡುಕಿ ಕಷ್ಟವನ್ನು ನೀಡುವುದಿಲ್ಲ. ಬದುಕಲ್ಲಿ ಒಂದು ಹಂತ ದಾಟಿದ ಬಳಿಕ ಅದನ್ನು ಬೇಕಾದ ರೀತಿ ರೂಪಿಸಿಕೊಳ್ಳುವ ಜಾಣ್ಮೆ ನಾವು ಗಳಿಸದೆ ಅಥವಾ ಆ ನಿಟ್ಟಿನಲ್ಲಿ ಪ್ರಯತ್ನಿಸದೆ ಹುಟ್ಟಿಸಿದವರನ್ನು, ಜೊತೆ ಇರುವವರನ್ನು ಕಡೆಗೆ ದೇವರನ್ನು ದುಷಿಸುತ್ತಾ ಉಳಿದರೆ ಉದ್ಧಾರವಾಗುವುದಾದರೂ ಹೇಗೆ?” ಇದು ಯೋಚಿಸಬೇಕಾಗಿರುವುದೆ ಅಲ್ವಾ..

ಇನ್ನು ಹೆಚ್ಚು ಹೇಳಲ್ಲ.. ತುಂಬಾ ಬೋರ್ ಆದ್ರೆ ಬುಕ್ ಓದ್ಬೇಕೋ ಬೇಡ್ವೋ ಅನ್ನೋ ಗೊಂದಲ ಹುಟ್ಟಿ ಪುಸ್ತಕದ ಹೆಸರು ಮರೆತು ಹೋಗಬಹುದು. ಒಂದೊಳ್ಳೆ ಪುಸ್ತಕ ನಮ್ಮ ಮುಂದೆ ಇರಿಸಿದ್ದಾರೆ.ತಡ ಮಾಡಬೇಡಿ.


  • ಆಶ್ರಿತ ಕಿರಣ್ ( ಆಕೆ)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW