ಈಗಾಗಲೇ ಕನ್ನಡದಲ್ಲಿ ಕೆಲವು ಚಲನಚಿತ್ರಕ್ಕೆ ಸಂಬಂಧಿಸಿದಂತೆ ಕೆಲವು ಪುಸ್ತಕಗಳು ಬಂದಿವೆ ಆದರೆ ಪರಮೇಶ್ವರ ಗುರುಸ್ವಾಮಿ ಅವರ ‘ಚಿತ್ರ ಬಿಂಬ’ ಕೃತಿಯು ಭಿನ್ನವಾಗಿದ್ದು, ಆ ಕೃತಿಯ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಚಿತ್ರ ಬಿಂಬ
ಲೇಖಕರು : ಪರಮೇಶ್ವರ ಗುರುಸ್ವಾಮಿ
ಪ್ರಕಾಶನ : ಪರಮನಲ ಪುಸ್ತಕಗಳು
ಬೆಲೆ : ೧೭೦.೦೦
ಜಾಗತಿಕ ಚಲನಚಿತ್ರ ಸಮೀಕ್ಷೆಗೆ ಒಂದು ಹೊಸ ಸೇರ್ಪಡೆ. ಈಗಾಗಲೇ ಕನ್ನಡದಲ್ಲಿ ಕೆಲವು ಚಲನಚಿತ್ರಕ್ಕೆ ಸಂಬಂಧಿಸಿದಂತೆ ಕೆಲವು ಪುಸ್ತಕಗಳು ಬಂದಿವೆ. ಆದರೆ ಇದನ್ನು ಅವುಗಳಿಂದ ಬೇರ್ಪಡಿಸುವುದು ಈ ಲೇಖಕರ ಚಲನಚಿತ್ರ ತಯಾರಿಸುವ ತಂತ್ರಜ್ಞಾನದ ಪರಿಣತಿ ಮತ್ತು ಸಂವೇದನಾಶೀಲ ಗ್ರಹಿಕೆ. ಇದಕ್ಕೆ ನಿದರ್ಶನಗಳಾಗಿ ಅವರು ಬರೆದಿರುವ ಬೆಂಗಾಲಿ ಸಿನಿಮಾ ನಿರ್ದೇಶಕರಾದ ಪ್ರಸಿದ್ಧ ಸತ್ಯಜಿತ್ ರೇ ಮತ್ತು ಘಟಕ್ ಅವರ ಚಿತ್ರಗಳನ್ನು ಕುರಿತ ಬರಹಗಳು. ಅವರಿಬ್ಬರ ಚಿತ್ರಗಳ ನಡುವೆ ಇರುವ ವ್ಯತ್ಯಾಸಗಳ ಮೇಲೆ ಬೆಳಕು ಚೆಲ್ಲುತ್ತದೆ. ಅದರಂತೆ ಅಂತರ ರಾಷ್ಟ್ರೀಯ ಪ್ರಸಿದ್ಧ ಮೌಂಟೇನ್ ಪೋಸ್ಟ್ ಮ್ಯಾನ್ ಕುರಿತ ಬರಹ.
ನಿವೃತ್ತಿ ಹೊಂದುತ್ತಿರುವ ಅಂಚೆಯಣ್ಣ ತನ್ನ ಮಗನನ್ನು ಆ ಕೆಲಸದ ಪರಿಚಯ ಮಾಡಿ ಕೊಡಲು, ಅವನನ್ನು ಜೊತೆಗೆ ಕರೆದುಕೊಂಡು ಹೋಗುವಾಗ, ಅವನ ಸಂಗಾತಿಯಾದ ನಾಯಿ ಕೂಡಾ ಜತೆಯಾಗುತ್ತದೆ. ಮೂವರೂ ಬೆಟ್ಟ ಗುಡ್ಡ ಕಣಿವೆಗಳಲ್ಲಿ ಇಳಿದು ಹತ್ತುವಾಗ ಒಮ್ಮೆ ದಣಿವಾರಿಸಿಕೊಳ್ಳಲು ಒಂದು ಕಡೆ ಕೂತು ಪತ್ರಗಳನ್ನು ಇಟ್ಟರೆ ಗಾಳಿ ಬೀಸಿ ಕೆಲವು ಪತ್ರಗಳು ಹಾರಿ ಹೋದಾಗ ಆ ಪತ್ರಗಳನ್ನು ತಂದೆ ತಂದು ಕೊಟ್ಟರೆ , ನಾಯಿ ಕೂಡಾ ಪತ್ರವನ್ನು ಬಾಯಲ್ಲಿ ಕಚ್ಚಿಕೊಂಡು ಬರುತ್ತದೆ. ಆಗ ಲೇಖಕರಿಗೆ ನೆನಪು ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಬರುವ ನಾಯಿಗುತ್ತಿಯದು. ಒಬ್ಬ ಅಜ್ಜಿಗೆ ದೂರದ ಪಟ್ಟಣದಲ್ಲಿ ಇರುವ ಮೊಮ್ಮಗ ಮನಿಯಾರ್ಡರ್ ಕಳುಹಿಸಿರುತ್ತಾನೆ. ಆದರೆ ಅದರಲ್ಲಿ ಯಾವ ಪತ್ರವು ಇರುವುದಿಲ್ಲ. ಆದರೂ ಅಂಚೆಯಣ್ಣ ತಾನು ಓದಿದಂತೆ ಮಾಡುವುದಲ್ಲದೆ ತನ್ನ ಮಗನನ್ನು ಕೂಡಾ ಓದುವಂತೆ ಮಾಡುವುದು ಅದನ್ನು ಲೇಖಕರು ಗುರುತಿಸಿರವುದು ಕೂಡಾ ಅವರ ಸಂವೇದನಾಶೀಲತೆಗೆ ಸಾಕ್ಷಿ. ತಂದೆ ಮಗ ಎರಡು ದಿನಗಳ ಕಾಲ ಜತೆಗೆ ಹೋಗಿ ಬರುವಷ್ಟರಲ್ಲಿ ಪರಸ್ವರ ಹೆಚ್ಚು ಅರ್ಥ ಮಾಡಿ ಕೊಳ್ಳುವುದು ಸಾಧ್ಯವಾಗುತ್ತದೆ.

ಬೆಟ್ಟ ಹತ್ತಿ ಇಳಿಯುವಾಗಿನ ಸಂವೇದನೆಯನ್ನು ಪ್ರೇಕ್ಷಕರಿಗೆ ಉಂಟು ಮಾಡುವಲ್ಲಿ ಹೇಗೆ ನಿರ್ದೇಶಕರು ಸಫಲರಾಗಿದ್ದಾರೆ ಎಂದು ನಿರೂಪಿಸುವಲ್ಲಿ ಲೇಖಕರ ಸಿನೆಮಾ ಗ್ರಹಿಕೆಯ ತಾಂತ್ರಿಕ ಪರಿಣತಿ ಎದ್ದು ಕಾಣುತ್ತದೆ. ಇದಲ್ಲದೆ ಅಮೇರಿಕಾ ಜರ್ಮನಿ ಫ್ರಾನ್ಸ್ ರಷ್ಯಾ ಮುಂತಾದ ದೇಶಗಳಲ್ಲಿ ಚಲನಚಿತ್ರ ಇತಿಹಾಸದ ಮೇಲೆ ಬೆಳಕು ಚೆಲ್ಲಿದ್ದಾರೆ. ಅಲ್ಲದೆ ಡೇವಿಡ್ ಗ್ರಿಫಿತ್ ಕುರೊಸಾವಾ ಮುಂತಾದವರು ಸಿನೆಮಾ ರಂಗಕ್ಕೆ ಕೊಟ್ಟ ಕೊಡುಗೆಯನ್ನು ಸಾಧಾರವಾಗಿ ಮಂಡಿಸಿದ್ದಾರೆ. ಇವುಗಳ ಹಿನ್ನೆಲೆಯಲ್ಲಿ ಕನ್ನಡ ಸಿನೆಮಾ ರಂಗದ ಏಳಿಗೆಯನ್ನು , ಅದರಲ್ಲಿ ನಿರ್ದೇಶಕರು ಮತ್ತು ತಾರಾ ಮೌಲ್ಯದ ಚಿತ್ರಗಳ ನಡುವೆ ಇರುವ ಅಂತರವನ್ನು ದಾಖಲಿಸಿದ್ದಾರೆ. ವಸಂತ ಸೇನಾ ಮೂಕಿ ಚಿತ್ರದಿಂದ ಪ್ರಾರಂಭವಾಗುವ ಕನ್ನಡ ಸಿನೆಮಾ, ಬೇಡರ ಕಣ್ಣಪ್ಪನ ಮೂಲಕ ಪ್ರವೇಶ ಮಾಡಿದ ರಾಜಕುಮಾರ ಯುಗದ ಅವನಿಗೆ ಸರಿಸಾಟಿಯಾದ ಇನ್ನೊಬ್ಬ ನಾಯನಟನನ್ನು ಕನ್ನಡ ಚಿತ್ರ ರಂಗ ಕಾಣಲಿಲ್ಲ ಎಂದು ಸ್ಪಷ್ಟವಾಗಿ ಸ್ಥಾಪಿಸಿದ್ದಾರೆ , ( ನನ್ನ ಮೇಷ್ಟ್ರು ಬರಗೂರು ರಾಮಚಂದ್ರಪ್ಪ ರಾಜಕುಮಾರ್ ಅವರನ್ನು ಬೆವರಿನ ಮನುಷ್ಯ ಎಂದು ಕರೆದರೆ) ಪುಟ್ಟಣ್ಣ ಕಣಗಾಲ್, ಲಕ್ಷ್ಮೀನಾರಾಯಣ ಜೀವಿ ಅಯ್ಯರ್ ಗಿರೀಶ್ ಕಾಸರವಳ್ಳಿ ಪಿ.ಶೇಷಾದ್ರಿ ಮುಂತಾದವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ( ವಂಶವೃಕ್ಷ, ಗೃಹಭಂಗ ) ಸಮೀಕ್ಷೆ ಮಾಡಿದ್ದಾರೆ. ಅಲ್ಲದೇ ತೇಜಸ್ವಿಯವರ ಅಬಚೂರಿನ ಪೋಸ್ಟ್ ಆಫೀಸ್ ಕತೆಗೂ ಚಿತ್ರಕ್ಕೆ ಇರುವ ಅಂತರವನ್ನು ದಾಖಲಿಸಿದ್ದಾರೆ. ಅಪ್ಪು ಆವರ ಅಪ್ಪನ ನೆರಳಿನಲ್ಲಿ ಬೆಳೆದರೂ ಸ್ವೋಪಜ್ಞತೆ ಗಳಿಸಿದ ಬಗೆಯನ್ನು ಕುರಿತು ಆಪ್ತವಾಗಿ ಬರೆದಿದ್ದಾರೆ.


ದಕ್ಷಿಣ ಭಾರತದ ಇತರ ಭಾಷೆಗಳಲ್ಲಿನ ಚಿತ್ರಗಳ ಕುರಿತು ಇಲ್ಲಿ ಒಂದೂ ಲೇಖನ ಇಲ್ಲದೆ ಇರುವುದು ಇದರ ಪ್ರಧಾನ ಮಿತಿ . ಅಲ್ಲದೇ ದುರ್ಮಹತ್ವಾಕಾಂಷೆ ಯಂತಹ ವಿಚಿತ್ರ ಪದ ಪ್ರಯೋಗವನ್ನೂ ಇಲ್ಲಿ ಬಳಸಲಾಗಿದೆ. ಸಂಕಲ್ಪ , ಸಂಸ್ಕಾರ ಹೆಸರುಗಳು ಇದ್ದರೂ ಅವುಗಳ ಕುರಿತು ಬರಹವಿಲ್ಲದಿರುವುದು.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
