‘ತುಂಟ ಗೋಪಿಯ ಅದ್ಭುತ ಯಾತ್ರೆ’ ಕೃತಿ ಪರಿಚಯ

ವಾಸುಮೂರ್ತಿ ಅವರ ಮೂಲ ಕೃತಿಯನ್ನು ಕನ್ನಡಕ್ಕೆ ‘ತುಂಟ ಗೋಪಿಯ ಅದ್ಭುತ ಯಾತ್ರೆ’ ಹೆಸರಿನಲ್ಲಿ ಎಂ. ಆರ್. ಗುರುಪ್ರಸಾದ್ ಅವರು ಅನುವಾದಿಸಿದ್ದಾರೆ. ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯ ಮಕ್ಕಳ ಸಾಹಿತ್ಯ ಸ್ಪರ್ಧೆಯಲ್ಲಿ ‘ತುಂಟ ಗೋಪಿಯ ಅದ್ಭುತ ಯಾತ್ರೆ’ ಬಹುಮಾನಿತ ಕತೆಯಾಗಿದೆ. ಈ ಕೃತಿಯ ಕುರಿತು ವಾಣಿ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ: ತುಂಟ ಗೋಪಿಯ ಅದ್ಭುತ ಯಾತ್ರೆ
ಮೂಲ: ವಾಸುಮೂರ್ತಿ
ಕನ್ನಡ ವಿಸ್ತರಣೆ: ಎಂ. ಆರ್. ಗುರುಪ್ರಸಾದ್
ಚಿತ್ರಗಳು: ಬಾಪು
ಮೊದಲ ಮುದ್ರಣ: ೨೦೨೫
ಪುಟಗಳು: ೬೪
ಬೆಲೆ: ₹೮೦/-
ಪ್ರಕಾಶಕರು: ಅಮೂಲ್ಯ ಪುಸ್ತಕ

ಇನ್ನೇನು ಪರೀಕ್ಷೆಗಳ ಸಮಯ. ಅದು ಮುಗಿದರೆ ಮಕ್ಕಳಿಗೆ ಬೇಸಿಗೆ ರಜೆ. ಆಗ ಮಕ್ಕಳ ಸಮಯವನ್ನು ಸದುಪಯೋಗಪಡಿಸುವಂತಹ ಚಂದದ ಪುಸ್ತಕವೊಂದರ ಬಗ್ಗೆ ಹೇಳಲು ಬಯಸುವೆ.

ಹೆಸರೇ ಸೂಚಿಸುವಂತೆ ಈ ಮಕ್ಕಳ ಕಾದಂಬರಿಯ ನಾಯಕನಾದ ಗೋಪಿ ಒಬ್ಬ ತುಂಟ ಹುಡುಗ. ತುಂಟ ಮಾತ್ರವಲ್ಲ, ಪುಂಡ ಪೋಕರಿ. ಎಲ್ಲರನ್ನೂ ಒಂದಿಲ್ಲೊಂದು ರೀತಿಯಲ್ಲಿ ಗೋಳು ಹೊಯ್ದುಕೊಂಡು ಕೋಪ ತರಿಸುತ್ತಿದ್ದ. ಈ ತುಂಟನ ಕಣ್ಣಿಗೆ ಒಮ್ಮೆ ಸುಂದರ ರೆಕ್ಕೆಗಳ ಚಿಟ್ಟೆಯೊಂದು ಕಣ್ಣಿಗೆ ಬಿತ್ತು. ಅದನ್ನು ಹಿಡಿಯಲು ಹೋದಾಗ ಆ ಚಿಟ್ಟೆ ಮಾತನಾಡಿತು!
“ಏಯ್ ಹುಡುಗಾ, ನನ್ನನ್ನು ಹಿಡಿಯಬೇಡಾ… ನಮ್ಮಂತಹ ಚಿಕ್ಕ ಜೀವಿಗಳ ಬದುಕು ಅದೆಷ್ಟು ಕಷ್ಟವೆಂದು ನಿನಗೆ ಗೊತ್ತೇ?” ಎಂದು ಚಿಟ್ಟೆ ಪ್ರಶ್ನಿಸಿತು.

ಗೋಪಿಗೋ ಚಿಟ್ಟೆಯೊಂದು ಮಾತನಾಡುತ್ತಿರುವುದು ಬಲು ಅಚ್ಚರಿಯಾಯ್ತು. ಆದರೂ ತಿರುಗಿ ಹೇಳಿದ “ಓ… ಅದೇನು ಕಷ್ಟ? ನಾನೂ ನಿನ್ನಂತಹ ಚಿಟ್ಟೆಯಾಗಿದ್ದರೆ… ರೆಕ್ಕೆಗಳ ಸಹಾಯದಿಂದ ಹಾರುತ್ತಿದ್ದೆ.. ಎಷ್ಟು ಚೆನ್ನ” ಎಂದುತ್ತರಿಸಿದ. ನನ್ನನ್ನು ನಿನ್ನಂತೆಯೇ ಚಿಕ್ಕ ಜೀವಿಯಾಗಿಸು ಎಂದ. ಅಗೋ ಆ ಚಿಟ್ಟೆ ಹಾಗೆ ಮಾಡಿಯೇಬಿಟ್ಟಿತು. ಮಜವೆಂದರೆ ಚಿಟ್ಟೆ ಮಂತ್ರ ಹೇಳಿ ಮೂರು ಸುತ್ತು ಬಂದಾಗ ಗೋಪಿಯ ದೇಹವಷ್ಟೇ ಚಿಕ್ಕದಾಯ್ತು. ಅವನು ಧರಿಸಿದ್ದ ಬಟ್ಟೆ ಚಿಕ್ಕದಾಗಲೇ ಇಲ್ಲ! ಅವನ ಅಂಗಿಯೊಳಗೇ ಅವನು ಕಳೆದು ಹೋದ. ಅದೊಂದು ದೊಡ್ಡ ಬಟ್ಟೆಯ ಗುಡಾರದಂತೆ ಅವನಿಗೆ ಭಾಸವಾಯ್ತು. ಈಗ ಅವನ ಚಡ್ಡಿಯ ಕಿಸೆಯಲ್ಲಿದ್ದ ಚಿಕ್ಕ ಪೆನ್ಸಿಲ್ ದೊಡ್ಡ ಕಂಬದಂತೆ ಕಂಡರೆ, ನಾಣ್ಯದ ಕೆಳಗೆ ಅವನ ಕಾಲು ಸಿಕ್ಕಿಹಾಕಿಕೊಂಡಿತ್ತು!
(ಈ ಕಥೆಯನ್ನು ನನ್ನ ಮಗನಿಗೆ ಹೇಳುವಾಗ ಗೋಪಿಯ ಗಾತ್ರ ಚಿಕ್ಕದಾದದ್ದು ಅವನಿಗೆ ವಿಶೇಷ ಅನ್ನಿಸಲಿಲ್ಲ. ಅಂತಹ ಕಾರ್ಟೂನು ಅವನು ನೋಡಿದ್ದ. ಆದರೆ ಗೋಪಿ ಬಟ್ಟೆಯೇ ಗುಡಾರದಂತೆ ಭಾಸವಾದದ್ದು ಅವನಿಗೆ ಬಹಳ ಮೋಜೆನಿಸಿತು)

ಈಗ ಗೋಪಿಯನ್ನು ಅವನ ಮನೆಯ ಬೆಕ್ಕೇ ಅಟ್ಟಿಸಿಕೊಂಡು ಬಂತು. ಈಗ ಚಿಟ್ಟೆರಾಣಿ ಅವನನ್ನು ಬೆನ್ನ ಮೇಲೆ ಕೂರಿಸಿಕೊಂಡು ಅದರ ಊರಿಗೆ ಕರೆದುಕೊಂಡು ಹೋಯ್ತು. ಹೂ ಗಿಡದ ಮೇಲೆ ಮಲಗಲು ಹೇಳಿತು. ಹೂವಿನ ಮೇಲೆ ಕೂರಿಸಿ ಜೇನು ಕುಡಿಯಲು ಕೊಟ್ಟಿತು. ಚಿಟ್ಟೆಗಳ ಜೀವನ, ಕಂಬಳಿಹುಳ ಚಿಟ್ಟೆಯಾಗಿ ಪರಿವರ್ತನೆಯಾಗುವ ಪರಿ ಎಲ್ಲಾ ವಿವರಿಸಿತು. ಸೊಳ್ಳೆ, ಹಕ್ಕಿ ಇತ್ಯಾದಿ ಜೀವಿಗಳಿಂದ ರಕ್ಷಿಸಿತು. ಈ ಹಂತದಲ್ಲಿ ಗೋಪಿಗೆ ಕೀಟಗಳ ಬದುಕು ಎಷ್ಟು ಕಷ್ಟ ಎಂಬ ಅರಿವಾಯ್ತು. ಮುಂದೆ ಗೋಪಿಯದೇ ಸ್ನೇಹಿತರ ಗುಂಪೊಂದು ತೋಟದಲ್ಲಿ ಆಡಲು ಬಂದು, ಅವರ ದಾಂದಲೆ ಹಾಗೂ ತುಂಟಾಟದಲ್ಲಿ ಗೋಪಿಯನ್ನು ಕರೆತಂದ ಚಿಟ್ಟೆಯೇ ಮರಣಿಸಿತು! ಆದರೆ ಕೊನೆ ಕ್ಷಣದಲ್ಲೂ ಅದು ಗೋಪಿಯನ್ನು ರಕ್ಷಿಸಿತು. ಗೋಪಿ ಚಿಟ್ಟೆ ತನ್ನ ಕಣ್ಣೆದುರೇ ಸಾಯುವುದನ್ನು ಕಂಡು ಅಸಹಾಯಕನಾಗಿ ನೋಡುತ್ತಿದ್ದ. ದುಃಖಿಸಿದ… ಇಲ್ಲಿಂದ ಮುಂದೆ ಗೋಪಿಯ ಯಾತ್ರೆ ಮತ್ತಷ್ಟು ರೋಚಕ ತಿರುವು ಪಡೆಯುವುದು.

ಏಕೆಂದರೆ, ಅವನನ್ನು ಕರೆತಂದ ಚಿಟ್ಟೆ ಈಗ ಬದುಕಿಲ್ಲ! ಅವನು ಮೊದಲಿನಂತಾಗುವುದು ಹೇಗೆ? ಮನೆಗೆ ಹಿಂದಿರುಗಿ ಹೋಗುವುದು ಹೇಗೆ? ಹೆಜ್ಜೆ ಹೆಜ್ಜೆಗೂ ಎದುರಾಗುವ ಅಪಾಯಗಳು, ಅದನ್ನು ಗೋಪಿ ಏಕಾಂಗಿಯಾಗಿ ಹೇಗೆ ಎದುರಿಸಿದ? ಹಕ್ಕಿಯ ರೂಪದಲ್ಲಿ, ಜೇಡದ ರೂಪದಲ್ಲಿ, ಇರುವೆಯ ರೂಪದಲ್ಲಿ ಬಂದೆರಗಿದ ಸಾವನ್ನು ಗೆದ್ದು ಪುನಃ ಮನಗೆ ತಲುಪುವ ಕಥೆ ತುಂಬಾ ರೋಚಕವಾಗಿದೆ. ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ನಿರೂಪಿಸಲ್ಪಟ್ಟ, ಪ್ರತೀ ಹೆಜ್ಜೆಗೂ ಹೊಸತೊಂದು ತಿರುವು ಇರುವ ಕಥೆ ನಿಮ್ಮ ಮಕ್ಕಳಿಗೂ ಇಷ್ಟವಾಗಬಹುದು.ನನ್ನ ಮಗನಿಗಂತೂ ತುಂಬ ಇಷ್ಟವಾಯ್ತು.

(ಚಿಟ್ಟೆ ಸತ್ತಾಗ ಮಾತ್ರ ಬಹಳ ಬೇಸರವಾಗಿ, ಮುಂದೆ ಕಥೆಯನ್ನು ಕೇಳಲೂ ಅವನು ಸಿದ್ಧನಿರಲಿಲ್ಲ! ನಾನು ಸ್ವಲ್ಪ ಮೊದಲೇ ಯೋಚಿಸಿ ಗೋಪಿ ಮತ್ತು ಚಿಟ್ಟೆ ಕಳೆದು ಹೋಗಿ, ಒಬ್ಬರನ್ನೊಬ್ಬರು ಹುಡುಕುತ್ತಿರುವಂತೆ, ಆಗ ಅಪಾಯ ಎದುರಾದಂತೆ ಕಥೆಯನ್ನು ಬದಲಿಸಬಹುದಿತ್ತು, ನನಗದು ಆಗ ಹೊಳೆಯಲೇ ಇಲ್ಲ)

ಬಹುಶಃ ಲೇಖಕರು ಪ್ರಕೃತಿಯ ವಾಸ್ತವವನ್ನು, ಪುಟಾಣಿ ಜೀವಿಗಳ ಕ್ಷಣಿಕ ಬದುಕನ್ನು ಮಕ್ಕಳಿಗೆ ತಿಳಿ ಹೇಳುವುದಕ್ಕೋಸ್ಕರ ಕಥೆಯನ್ನು ಹೀಗೆ ಬರೆದಿರಬಹುದು. ಅದೊಂದು ತಿರುವ ಕಾದಂಬರಿಗೆ ರೋಚಕತೆ ತಂದುಕೊಟ್ಟದ್ದೂ ಹೌದು. ಮಕ್ಕಳ ಮನಸ್ಸಿಗೆ ಖುಷಿಯಾಗುವಂತೆ ಇದನ್ನು ಹೇಳುವುದು ಮುಖ್ಯ. ಅದೇ ಕಾರಣಕ್ಕೆ ಕಥೆಯ ಅಂತ್ಯವನ್ನು ಅನುವಾದಕರು ಕೊಂಚ ಬದಲಾಯಿಸಿರುವುದಾಗಿ ಹೇಳಿದ್ದಾರೆ. ಅದಕ್ಕಾಗಿಯೇ ಇದು ಕನ್ನಡಾನುವಾದ ಮಾತ್ರವಲ್ಲ “ಕನ್ನಡ ವಿಸ್ತರಣೆ” ಎಂದು ನಮೂದಿಸಲಾಗಿದೆ. ಕಥೆ ಕೇಳಲು ಇಷ್ಟ ಪಡುವ ಮಕ್ಕಳ ತಾಯಂದಿರು ಇದನ್ನೊಮ್ಮೆ ಓದಲೇಬೇಕು.

[ತುಂಟ ಗೋಪಿಯ ಅದ್ಭುತ ಯಾತ್ರೆ” ಮೂಲ ಕಥೆ ೧೯೫೮ ರಲ್ಲಿ ಪ್ರಕಟವಾಗಿ, ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯ ಮಕ್ಕಳ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನಿತ ಕತೆ. ಒಳಚಿತ್ರಗಳು ಬಣ್ಣದಲ್ಲಿದ್ದರೆ ಇನ್ನಷ್ಟು ಆಕರ್ಷಕವಾಗಿ ಕಾಣುತ್ತಿತ್ತು ಎನ್ನಿಸಿದ್ದು ನಿಜ. ಆದರೆ ಹೆಸರಾಂತ ಮಕ್ಕಳ ಚಿತ್ರ ಕಲಾವಿದ #ಬಾಪು” ಅವರು ರಚಿಸಿರುವ ಕಥೆಗೆ ಪೂರಕವಾದ ಕಪ್ಪು ಬಿಳುಪಿನ ಚಿತ್ರಗಳೂ ಕೂಡ ಮಕ್ಕಳಲ್ಲಿ ಕುತೂಹಲ ಹುಟ್ಟಿಸುತ್ತವೆ]


  • ವಾಣಿ ಭಟ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading