‘ಚೌಚೌ ಬಾತ್’ ಅಂಕಣ (ಭಾಗ – ೩೮)

ಜನರಲ್ ಮೆರಿಟ್ ನಲ್ಲಿ ಸೆಲೆಕ್ಟ್ ಆಗಿ ಕೌನ್ಸಿಲಿಂಗ್ ನಲ್ಲಿ ನಾನು ಆರಿಸಿಕೊಂಡಿದ್ದು ಗೌರಿಬಿದನೂರು ತಾಲೂಕಿನ ಒಂದು ಕುಗ್ರಾಮ. ಲೇಖಕಿ ಮತ್ತು ಶಿಕ್ಷಕಿಯಾದ ಸರ್ವಮಂಗಳ ಜಯರಾಮ್ ಅವರ ಶಿಕ್ಷಣ ವೃತ್ತಿ ಆರಂಭದ ದಿನಗಳನ್ನು ಮೆಲಕು ಹಾಕುವ ಇಂದಿನ ‘ಚೌಚೌ ಬಾತ್’ ಅಂಕಣದಲ್ಲಿ ‘ವೃತ್ತಿ ಜೀವನದ ಆರಂಭ’,ತಪ್ಪದೆ ಮುಂದೆ ಓದಿ…

ನಾನು ಶಿಕ್ಷಕ ವೃತ್ತಿಗೆ ಸೇರಿ ಸುಮಾರು ಇಪ್ಪತ್ತೈದು ವರ್ಷಗಳೇ ಕಳೆದಿವೆ. ಇನ್ನೂ ನೆನ್ನೆ ಮೊನ್ನೆ ಕೆಲಸಕ್ಕೆ ಸೇರಿದಂತೆ ಅನಿಸುತ್ತಿದೆ. ಆ ದಿನಗಳ ಮಕ್ಕಳೊಂದಿಗಿನ ಅನುಭವವಂತೂ ರೋಮಾಂಚನಕಾರಿ. ಮಕ್ಕಳೊಂದಿಗೆ ಮಕ್ಕಳಾಗಿ ನಡೆಯುತ್ತಾ, ಅವರಿಗೆ ಆಟದ ಜೊತೆ ಪಾಠ ಕಲಿಸುವುದು ತುಂಬಾ ಸವಾಲಿನ ಕೆಲಸ. ಹಾಗೆಯೇ ಮನಸ್ಸಿಗೆ ಮುದ, ಉಲ್ಲಾಸ, ತೃಪ್ತಿ ನೀಡುವಂತಹ ಕಾಯಕ. ಅದಕ್ಕೆಂತಲೇ ನಾನು ಶಿಕ್ಷಕಿಯಾಗಬೇಕೆಂದು ಮೊದಲಿನಿಂದಲೂ ಕನಸು ಕಾಣುತ್ತಿದ್ದೆ. ಕನಸಂತು ನಿಜವಾಯಿತು. ಕಡಿಮೆ ಸಂಬಳವಾದರೂ ಇಷ್ಟದ ಕೆಲಸವೇ ಅಲ್ಲವೇ. ಹಾಗಾಗಿ ಕೇವಲ ಮೂರು ಸಾವಿರದ ಮುನ್ನೂರು ರೂಪಾಯಿ ಬೇಸಿಕ್ ಪೇಮೆಂಟ್ ಗೆ ತೃಪ್ತಿಪಟ್ಟುಕೊಂಡಿದ್ದೆ.

ಜನರಲ್ ಮೆರಿಟ್ ನಲ್ಲಿ ಸೆಲೆಕ್ಟ್ ಆಗಿ ಕೌನ್ಸಿಲಿಂಗ್ ನಲ್ಲಿ ನಾನು ಆರಿಸಿಕೊಂಡಿದ್ದು ಗೌರಿಬಿದನೂರು ತಾಲೂಕಿನ ಒಂದು ಕುಗ್ರಾಮ. ಅಲ್ಲಿಗೆ ಹೋಗಿ ಬರಲು ಈಗಲೂ ವಾಹನದ ವ್ಯವಸ್ಥೆ ಇಲ್ಲ. ಮುಖ್ಯರಸ್ತೆಯಿಂದ ನಾಲ್ಕೈದು ಕಿಲೋಮೀಟರ್ ದೂರ ನಡೆದುಕೊಂಡು ಹೋಗಬೇಕು ಇಲ್ಲವೇ ಸಪರೇಟ್ ಆಟೋ ಮಾಡಿಕೊಂಡು ಹೋಗಬೇಕು. ಹಿಂದಿನ ಕಾಲದಲ್ಲೆಲ್ಲಾ ನಡೆದುಕೊಂಡೇ ಹೋಗುತ್ತಿದ್ದಿರಬೇಕು. ನಾನು ಕೂಡ ಮುಖ್ಯ ರಸ್ತೆಯಿಂದ ಎಷ್ಟೋ ಬಾರಿ ನಡೆದುಕೊಂಡೆ ಹೋಗಿದ್ದಿದೆ. ನಮ್ಮವರು ಶಾಲೆಗೆ ರಜಾ ಹಾಕಿದಾಗೆಲ್ಲ ನನಗೆ ನಡೆದುಕೊಂಡು ಹೋಗುವುದು ಅನಿವಾರ್ಯವಾಗಿತ್ತು. ಪಕ್ಕದ ಊರಿನ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅವರು ಪ್ರತಿದಿನ ಟು ವೀಲರ್ ನಲ್ಲಿ ಶಾಲೆವರೆಗೂ ಬಿಡುತ್ತಿದ್ದರು. ಈಗಿನ ಕಾಲದವರಂತೂ ಯಾರು ಅಷ್ಟು ದೂರ ನಡೆಯುವುದಿಲ್ಲ. ಎಲ್ಲರ ಮನೆಗಳಲ್ಲೂ ಟು ವೀಲರ್ ಕಾಮನ್ . ಹಿಂದಿನ ಕಾಲದಲ್ಲಿ ಮನೆಗೊಂದು ಸೈಕಲ್ ಇದ್ದಂತೆ ಈ ಕಾಲದಲ್ಲಿ ಮನೆಗೊಂದು ಬೈಕ್ , ಕಾರು ಸಾಮಾನ್ಯವಾಗಿದೆ.

ಆ ಹಳ್ಳಿಯಲ್ಲಿ ಕೇವಲ ಇಪ್ಪತ್ತು ಮನೆಗಳಿದ್ದವು. ಅದರಲ್ಲೂ ಎಲ್ಲರೂ ಮರಾಠ ಜನಾಂಗಕ್ಕೆ ಸೇರಿದವರಾಗಿದ್ದರು. ಅಲ್ಲಿನ ಜನರ ಮಕ್ಕಳ ಮಾತೃಭಾಷೆ ಮರಾಠಿ ಆಗಿತ್ತು. ನಾನಂತೂ ಮೊದಮೊದಲು ಕಕ್ಕಾಬಿಕ್ಕಿಯಾಗಿ ಹೋಗಿದ್ದೆ. ಯಾಕೆಂದರೆ ಚಿಕ್ಕ ಮಕ್ಕಳಿಗೆ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಇನ್ನೂ ಕನ್ನಡ ಅಕ್ಷರಗಳನ್ನು ಕಳಿಸುವುದು ಹೇಗೆ ? ಅವು ಬಾಯಿ ತೆರೆದರೆ ಮರಾಠಿ ಮಾತನಾಡುತ್ತಿದ್ದೆವು. ಅದನ್ನು ಅರ್ಥ ಮಾಡಿಕೊಳ್ಳದೆ ಸುಮಾರು ದಿನಗಳು ಕಳೆದವು. ಅದು ಅಲ್ಲದೆ ಅಲ್ಲಿನ ಮಕ್ಕಳ ಸಂಖ್ಯೆ ತುಂಬಾ ಕಡಿಮೆ. ಹೆಚ್ಚೆಂದರೆ ಹತ್ತು ಹನ್ನೆರಡು ಮಕ್ಕಳಷ್ಟೇ. ಹಾಗಾಗಿ ಏಕೋ ಪಾಧ್ಯಾಯ ಶಾಲೆ. ಆ ಶಾಲೆಗೆ ನಾನೊಬ್ಬಳೇ ಏಕೈಕ ಶಿಕ್ಷಕಿ. ಅಂತಹ ಇಂಟೀರಿಯರ್ ಗುಡ್ಡಗಾಡು ಪ್ರದೇಶಕ್ಕೆ ಅಧಿಕಾರಿಗಳು ಯಾರೂ ವಿಸಿಟ್ ಬರುತ್ತಿರಲಿಲ್ಲ. ಬಂದರೂ ವರ್ಷಕ್ಕೊಮ್ಮೆ ಬಂದರೆ ಹೆಚ್ಚು.

ಫೋಟೋ ಕೃಪೆ : google ಸಾಂದರ್ಭಿಕ ಚಿತ್ರ

ಆ ಊರಿಗೆ ಮೊದಲು ಯಾರೂ ಮಹಿಳಾ ಶಿಕ್ಷಕಿಯರೇ ಬಂದಿರಲಿಲ್ಲವಂತೆ. ಹಾಗಾಗಿ ಆ ಊರಿನ ಜನರಿಗೆ ನಾನೆಂದರೆ ತುಂಬಾ ಗೌರವ, ಸಾರಿಗೆ ಸೌಲಭ್ಯ ಸಮರ್ಪಕವಾಗಿ ಇಲ್ಲದ ಕಾಲದಲ್ಲಿ ಸಮಯಕ್ಕೆ ಸರಿಯಾಗಿ ಬಂದು ಪಾಠ ಹೇಳಿಕೊಡುತ್ತಿದ್ದ ಶಿಕ್ಷಕಿ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ನನ್ನ ಅದೃಷ್ಟಕ್ಕೆ ಮಕ್ಕಳ ಪೋಷಕರಿಗೆ ಕನ್ನಡ ಮಾತನಾಡಲು ಚೆನ್ನಾಗಿ ಬರುತ್ತಿತ್ತು. ಅವರು ಹೊರಗಡೆ ಓಡಾಡುತ್ತಿದ್ದರಿಂದ ಸಂತೆಪೇಟೆಯಲ್ಲಿ ತಿರುಗಾಡುತ್ತಿದ್ದರಿಂದ ವ್ಯವಹಾರಿಕವಾಗಿ ಕನ್ನಡ ಕಲಿತಿದ್ದರು. ಆದರೆ ಬೆಳಗ್ಗೆಯಿಂದ ಸಂಜೆವರೆಗೂ ಊದುಬತ್ತಿ ಹೊಸೆಯುತ್ತ ಬದುಕಿಗೆ ಆಧಾರವಾಗಿ ಅಷ್ಟೋ ಇಷ್ಟೋ ಸಂಪಾದಿಸುತ್ತಿದ್ದ ಹೆಂಗಸರಿಗೆ ಮರಾಠಿಯಲ್ಲದೆ ಬೇರೆ ಯಾವ ಭಾಷೆಯೂ ಬರುತ್ತಿರಲಿಲ್ಲ. ಅವರು ಊರು ದಾಟಿ ಹೊರಗೆ ಬಂದವರೇ ಅಲ್ಲ. ಅವರ ಭಾಷೆಯನ್ನೇ ಮಕ್ಕಳು ಸಹ ಆಡುತ್ತಿದ್ದರು. ನಾನು ಒಮ್ಮೆ ಪೋಷಕರ ಸಭೆ ಕರೆದು ಮಕ್ಕಳೊಂದಿಗೆ ಯಾವಾಗಲೂ ಕನ್ನಡವನ್ನೇ ಮಾತನಾಡಬೇಕೆಂದು ತಾಕೀತು ಮಾಡಿದೆ. ಹಾಗೆ ಮಾತನಾಡಿದಾಗ ಮಾತ್ರ ಮಕ್ಕಳು ಸುಲಭವಾಗಿ ಕನ್ನಡ ಕಲಿಯುತ್ತಾರೆ ಎಂದು ಅರ್ಥೈಸಿದೆ. ಅವರು ಮಕ್ಕಳೊಂದಿಗೆ ಮಾತ್ರವಲ್ಲದೆ ತಮ್ಮ ತಮ್ಮಲ್ಲೇ ಕೂಡ ಕನ್ನಡ ಮಾತಾಡಲು ಪ್ರಯತ್ನಿಸಿದರು. ಎಲ್ಲಾ ಹಳ್ಳಿಗಳ ಶಾಲೆಗಳಲ್ಲೂ ಮಕ್ಕಳು ಗಿಜಿಗುಡುತ್ತಿದ್ದರೆ ಅಲ್ಲಿ ಮಾತ್ರ ಮಕ್ಕಳ ಸಂಖ್ಯೆ ತೀರಾ ವಿರಳ. ಮೊದಮೊದಲು ಮಕ್ಕಳ ಸಂಖ್ಯೆ ಯಾಕೆ ಇಷ್ಟು ಕಡಿಮೆ ಎಂದು ಗೊತ್ತಾಗಲಿಲ್ಲ. ಐದಾರು ತಿಂಗಳ ನಂತರ ಜನಗಣತಿಗೆಂದು ಊರಿನಲ್ಲಿ ತಿರುಗಾಡಿ ಪ್ರತಿ ಮನೆಗೂ ಭೇಟಿ ನೀಡಿದೆ. ಆಗ ಸಿಕ್ಕಿತು ನನ್ನ ಪ್ರಶ್ನೆಗೆ ಉತ್ತರ. ಆ ಊರಿನಲ್ಲಿ ವಯಸ್ಸಿನಲ್ಲಿದ್ದ ದಂಪತಿಗಳು ಇದ್ದಿದ್ದೇ ಹತ್ತು ಹದಿನೈದು ಜನ. ಉಳಿದಂತೆ ಎಲ್ಲರೂ ವೃದ್ದರೇ. ಅವರ ಮಕ್ಕಳೆಲ್ಲರೂ ಜೀವನ ಬಂಡಿ ಸಾಗಿಸಲು ಬೆಂಗಳೂರಿಗೆ ವಲಸೆ ಹೋಗಿದ್ದರು.

ಅಳಿದುಳಿದ ಅವಶೇಷಗಳಂತೆ ಅಲ್ಲಲ್ಲಿ ಪಾಳು ಬಿದ್ದ ಮನೆಗಳು, ಕುರುಚಲು ಗಡ್ಡದ ಮುದುಕರು, ಬೊಜ್ಜು ಬಾಯಿಯ ಮುದುಕಿಯರು ಆ ಊರಿನ ಭಾಗವಾಗಿದ್ದರು. ಒಂದು ವರ್ಷಕ್ಕೆ ಒಂದು ಇಲ್ಲವೇ ಎರಡು ಮಕ್ಕಳ ಜನನವಾಗುತ್ತಿತ್ತಷ್ಟೇ, ನಾನು ಅಲ್ಲಿ ಕರ್ತವ್ಯ ನಿರ್ವಹಿಸಿದ ಹದಿನಾಲ್ಕು ವರ್ಷಗಳಲ್ಲಿ ಯಾವ ವರ್ಷವೂ ಮಕ್ಕಳ ಸಂಖ್ಯೆ ಇಪ್ಪತ್ತಕ್ಕೆ ಏರಲೇ ಇಲ್ಲ. ಯಾವುದೋ ಒಂದು ವರ್ಷದಲ್ಲಿ ಕೇವಲ ಹತ್ತು ಜನ ಮಕ್ಕಳಿದ್ದರು. ಈ ರೀತಿ ಮಕ್ಕಳ ಸಂಖ್ಯೆ ತೀರ ಕಡಿಮೆ ಇದ್ದಿದ್ದರಿಂದ ಆ ಊರಿನಲ್ಲಿ ಅಂಗನವಾಡಿ ಕೇಂದ್ರವು ಇರಲಿಲ್ಲ. ಎರಡು ಮೂರು ವರ್ಷದ ಚಿಕ್ಕ ಚಿಕ್ಕ ಮಕ್ಕಳನ್ನು ಕರೆತಂದು ನಮ್ಮ ಪ್ರಾಥಮಿಕ ಶಾಲೆಯಲ್ಲಿ ಬಿಡುತ್ತಿದ್ದರು. ಆ ಊರಿನಲ್ಲಿ ಪ್ರತ್ಯೇಕ ಅಂಗನವಾಡಿ ಇಲ್ಲದ್ದರಿಂದ ಹಾಗೂ ನಮ್ಮ ಶಾಲೆಯ ಮಕ್ಕಳ ಸಂಖ್ಯೆ ಕಡಿಮೆ ಇದ್ದಿದ್ದರಿಂದ ಅನಿವಾರ್ಯವಾಗಿ ಅವರನ್ನು ಬಿಟ್ಟುಕೊಳ್ಳಬೇಕಿತ್ತು. ಪಾಠ ಮಾಡುವಾಗ ಆ ಚಿಕ್ಕ ಮಕ್ಕಳ ಅಳು, ನಗು, ಗಲಾಟೆಯಿಂದ ತೊಂದರೆಯಾಗುತ್ತಿದ್ದರೂ ಸಹಿಸಿಕೊಳ್ಳಲೇ ಬೇಕಿತ್ತು. ಆ ಮುಗ್ಧ ಮಕ್ಕಳ ತುಂಟಾಟಗಳಿಂದ ಬೇಸರವೂ ಕಳೆಯುತ್ತಿತ್ತು.

ಹೀಗೇ ಒಂದು ದಿನ ಪಲ್ಲವಿ ಎಂಬ ಮೂರು ವರ್ಷದ ಬಾಲಕಿಯನ್ನು ಅವರಮ್ಮ ಶಾಲೆಗೆ ಕರೆ ತಂದರು. ಪಲ್ಲವಿ ಆ ಹಳ್ಳಿಯಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿ ವಾಸವಾಗಿದ್ದ ದಲಿತರ ಮನೆಯ ಹುಡುಗಿ. ಅವಳು ಕನ್ನಡದಲ್ಲಿ ಹಾಗೂ ತೆಲುಗಿನಲ್ಲಿ ಚೆನ್ನಾಗಿ ಮಾತನಾಡುತ್ತಿದ್ದಳು.ಅವಳ ಅಮ್ಮ ಹುಣಿಸೆಹಣ್ಣು ಕುಟ್ಟುವ ಕೆಲಸ ಮಾಡುತ್ತಿದ್ದರಿಂದ ಅವಳಿಗೆ ಆಟವಾಡುವುದಕ್ಕೆ ಹುಣಸೆ ಬೀಜಗಳು ಸುಲಭವಾಗಿ ಸಿಗುತ್ತಿದ್ದವು. ಅಂದು ಹಿಡಿ ತುಂಬಾ ಹುಣಸೆ ಬೀಜ ಹಿಡಿದುಕೊಂಡೇ ಶಾಲೆಗೆ ಬಂದಿದ್ದಳು.

ಸ್ವಲ್ಪ ಹೊತ್ತಿನ ಬಳಿಕ ಮಕ್ಕಳನ್ನೆಲ್ಲ ಪ್ರಾಕೃತಿಕ ಕರೆಗಾಗಿ ಆಚೆ ಹೋಗಿ ಬರಲು ಹೇಳಿದೆ. ಆಚೆ ಹೋಗಿ ಒಳಗೆ ಬರುವಷ್ಟರಲ್ಲಿ ಪಲ್ಲವಿ ಮೂಗಿನಲ್ಲಿ ಹುಣ್ಸೆ ಬೀಜ ಹಾಕಿಕೊಂಡಿದ್ದಳು. ಮಕ್ಕಳೆಲ್ಲರೂ ಓಡಿ ಬಂದು ವಿಷಯ ತಿಳಿಸಿದರು. ನನಗಂತೂ ಏನು ಮಾಡಬೇಕೆಂದು ದಿಕ್ಕು ತೋಚದಂತೆ ಆಯಿತು. ಅವಳನ್ನು ಹತ್ತಿರ ಕರೆದು ವಿಚಾರಿಸಿದೆ. ಅವಳಿಗೆ ಆಗ ನೆಗಡಿಯಾಗಿತ್ತು. ಸುಮ್ಮನೆ ಅಳುತ್ತಿದ್ದಳು, ಮೂಗನ್ನು ಮುಟ್ಟಲು ಬಿಡಲಿಲ್ಲ. ಮೂಗು ನೋಯ್ತಾ ಇದೆಯಾ ಎಂದು ಕೇಳಿದರೆ ಹು ಎಂದು ತಲೆಯಾಡಿಸುತ್ತ ಅಳುತ್ತಿದ್ದಳು. ಅಲ್ಲದೆ ಅವಳಿಗೆ ನೆಗಡಿ ಯಾಗಿದ್ದರಿಂದ ಹುಣಸೆಬೀಜ ನೆನೆದು ದಪ್ಪವಾಗಿ ಉಸಿರಾಟಕ್ಕೆ ತೊಂದರೆಯಾಗುವ ಸಂಭವ ಇತ್ತು. ಹೆಚ್ಚು ಸಮಯ ಕಾಯುವಂತಿರಲಿಲ್ಲ. ಆಗ ಮುಂಬರುವ ಅಪಾಯ ಊಹಿಸಿದ ನಾನು ಅವರ ಅಮ್ಮನಿಗೆ ಹೇಳಿ ಕಳಿಸಿದೆ.

ಆ ಹಳ್ಳಿಯಿಂದ ಎರಡು ಕಿಲೋಮೀಟರ್ ಮುಂದಕ್ಕೆ ಯಾರೋ ಬೆಂಗಳೂರಿನವರು ಒಂದು ಎಸ್ಟೇಟ್ ಮಾಡಿದ್ದರು. ಆ ಎಸ್ಟೇಟ್ ನಲ್ಲಿ ಕೆಲಸ ಮಾಡುವ ಆಳುಗಳಿಗೆ ಮದ್ಯಾನ್ಹದ ಊಟ ತರಲು ಒಂದಿಬ್ಬರು ಟೂ ವೀಲರ್ ನಲ್ಲಿ ಬಂದರು. ಆಗ ನಾನು ಮತ್ತು ಪಲ್ಲವಿಯ ಅಮ್ಮ ಅವಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು.

ಪಲ್ಲವಿಯ ಆಳು ಜೋರಾಗಿತ್ತು. ಅವಳಿಗೆ ನೆಗಡಿಯಾಗಿದ್ದರಿಂದ ಪದೇಪದೇ ಮೂಗೇರಿಸುತ್ತಿದ್ದಳು. ಅವಳು ಹಾಗೆ ಮಾಡಿದಾಗಲೆಲ್ಲ ಹುಣಿಸೆ ಬೀಜ ಮತ್ತಷ್ಟು ಮೇಲಕ್ಕೆ ಏರುವ ಅಪಾಯ ಎದುರಾಗಲಿತ್ತು. ವೈದ್ಯರು ಅವಳನ್ನು ಹತ್ತಿರ ಕರೆದು ತಲೆ ಎತ್ತಲು ಹೇಳಿದರು. ಹುಣಿಸೆ ಬೀಜ ಎಲ್ಲಿದೆ ಎಂದು ಅಂದಾಜು ಮಾಡಲು ಮೂಗನ್ನು ಕೆಳ ಮುಖವಾಗಿ ಒತ್ತುತ್ತಾ ಬಂದರು. ಆಗಂತೂ ಅವಳ ರಂಪಾಟ ಕೇಳಲಾಗಲಿಲ್ಲ. ಅವರ ಅಮ್ಮ ಒಂದು ಕೈ ನಾನೊಂದು ಕೈ ಹಿಡಿದುಕೊಂಡಿದ್ದೆವು. ಅವಳಂತೂ ಮೂಗು ಮುಟ್ಟಿ ದರೆ ಸಾಕು ಎಗರುತ್ತಿದ್ದಳು. ಪಾಪ ತುಂಬಾ ನೋವಾಗಿರುತ್ತದೆ. ಡಾಕ್ಟರ್ ಅಂತೂ ಹುಣಸೆ ಬೀಜ ತೆಗೆಯಲು ಹರಸಾಹಸ ಪಡುತ್ತಿದ್ದರು. ಅವಳು ಅತ್ತರೂ ಬಿಡಲಿಲ್ಲ. ಪಲ್ಲವಿಯ ತಲೆ ಬಗ್ಗಿಸಿ ಕುತ್ತಿಗೆಯ ಮೇಲೆ ಒಂದು ಗುದ್ದು ಗುದ್ದಿದರು. ನಂತರ ಹಲ್ಲು ಕೀಳಲು ಬಳಸುವ ಸಣ್ಣ ಇಕ್ಕಳವನ್ನು ಮೂಗಿನಲ್ಲಿ ತೂರಿಸಿದರು. ಆಗಲಂತೂ ಪಲ್ಲವಿ ” ಯಪ್ಪಾ ಬಿಡ್ರೋ ….ನೈತಾ ಐತೇ..” ಎನ್ನುತ್ತ ಕಿರುಚಾಡಿದಳು . ಆಗ ಅಲ್ಲಿದ್ದವರೆಲ್ಲರೂ ಗೊಳ್ಳನೆ ನಕ್ಕರು. ಅಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಡಾಕ್ಟರ್ ಗೂ ನಗು ಬಂತು. ಅವಳ ಮುಗ್ಧ ಮಾತು ಕೇಳಿ ನಮಗು ನಗು ಬಂತು.ಅಂತೂ ಇಂತೂ ಡಾಕ್ಟರ್ ಪಟ್ಟು ಬಿಡದೆ ಹುಣಿಸೆ ಬೀಜ ಹೊರತೆಗೆದರು. ಡಾಕ್ಟರ್ ಸಮೇತ ನಾವೂ ಕೂಡ ನಿಟ್ಟುಸಿರು ಬಿಟ್ಟೆವು. ಒಂದೇ ಸಮನೆ ಅಳುತ್ತಿದ್ದ ಪಲ್ಲವಿ ಕ್ಷಣದಲ್ಲಿ ಶಾಂತವಾದಳು. ಆ ಕ್ಷಣಕ್ಕೆ ಡಾಕ್ಟರ್ ಅವಳ ಜೀವ ಉಳಿಸಿದ ದೇವರಾಗಿದ್ದರು. ಅವರಿಗೆ ಧನ್ಯವಾದಗಳನ್ನು ಅರ್ಪಿಸಿದೆವು.

ಹೀಗೆ ನನ್ನ ಶಾಲಾ ದಿನಚರಿಯಲ್ಲಿ ಒಂದೊಂದು ದಿನಕ್ಕೆ ಒಂದೊಂದು ರೀತಿಯ ಹೊಸ ಹೊಸ ಅನುಭವ, ನಿತ್ಯವೂ ನವನೂತನ . ಕೆಲವೊಮ್ಮೆ ಸಂತಸ, ಕೆಲವೊಮ್ಮೆ ಆತಂಕ, ನೋವು ನಲಿವು, ಸುಖ,ದುಃಖ ಇವುಗಳ ಸಮ್ಮಿಶ್ರಣವೇ ಜೀವನ.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವಮಂಗಳ ಜಯರಾಮ್-  ಗೌರಿಬಿದನೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW