‘ಚೌಚೌ ಬಾತ್’ ಅಂಕಣ (ಭಾಗ – ೪೮)

ಪೀಪಿ ಸದ್ದಿಗೆ ಹಳೆ ಪ್ಲಾಸ್ಟಿಕ್ ಬಕೆಟ್, ಬಿಂದಿಗೆ ಟಬ್ ಎಷ್ಟೆಲ್ಲಾ ಸಾಮಗ್ರಿ ತಂದು ಅವನ ಮುಂದೆ ಗುಡ್ಡೆ ಹಾಕುತ್ತಿದ್ದೆವು. ನಿಮಿಷಾರ್ಧದಲ್ಲಿ ಮುರಿದು ಪುಡಿ ಮಾಡಿ ತೂಕ ಹಾಕಿಕೊಂಡು ಗಡ್ಡಸಾಬಿ ಒಂದೋ ಎರಡೋ ಪಾಕಂ ಪಪ್ಪಿನ ಬಿಲ್ಲೆ ಕೊಡುತ್ತಿದ್ದ. ಬಾಲ್ಯದ ನೆನಪುಗಳು ಮಧುರ, ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಹಳೆ ಪಾತ್ರೆ ಹಳೆ ಕಬ್ಣ’. ತಪ್ಪದೆ ಮುಂದೆ ಓದಿ…

ಒಮ್ಮೊಮ್ಮೆ ಬಾಲ್ಯಕಾಲದ ನೆನಪಿನ ಸುರುಳಿ ಹೀಗೆ ಬಿಚ್ಚಿಕೊಳ್ಳುತ್ತದೆ. ಪೀಮ್ …..ಪೀಮ್ ….ಎಂಬ ಪೀಪಿ ಸದ್ದಿನೊಂದಿಗೆ ಊರೊಳಕ್ಕೆ ಸೈಕಲ್ ನಲ್ಲಿ ಗಡ್ಡಸಾಬಿ ಬಂದವನೇ ಅಂದ್ರೆ ಹಳ್ಳಿಯಲ್ಲಿರುವ ಎಲ್ಲಾ ಮಕ್ಕಳು ಎಲ್ಲೇ ಇದ್ದರೂ ತಕ್ಷಣ ತಮ್ಮ ಮನೆಗೆ ಓಡಿ ಬಂದು ಬಾಟಲಿ ಹುಡುಕ್ರೋ ಎಂದು ಕೊಳ್ಳುತ್ತಾ ಮನೆಯ ಮೂಲೆ ಮುಡುಕಿನಲ್ಲಿ, ಹಿತ್ತಲಿನಲ್ಲಿ ಮನೆಯ ಮೇಲೆ, ಅಟ್ಟದ ಮೇಲೆ ತಡಕಾಡುತ್ತಿದ್ದರು. ಕೈಗೆ ಸಿಕ್ಕ ಹಳೆ ಪಾತ್ರೆ, ಮುರಿದ ಪ್ಲಾಸ್ಟಿಕ್ ಬಿಂದಿಗೆ, ಟಬ್ಬು, ಜಗ್, ಬಕೆಟ್ ಇನ್ನೂ ಮುಂತಾದ ವಸ್ತುಗಳನ್ನು ತಂದು ಗಡ್ಡ ಸಾಬಿಯ ಮುಂದೆ ಗುಡ್ಡೆ ಹಾಕುತ್ತಿದ್ದೆವು. ಕೆಲವರು ಹಳೆಯದಾದ ಒಡೆದು ಹೋದ ಸೀಮೆಎಣ್ಣೆ ಬಾಟ್ಲಿಗಳನ್ನು ತಂದು ಹಾಕುತ್ತಿದ್ದರು. ನಮ್ಮ ಅಣ್ಣಂದಿರು ಅದೆಲ್ಲಿ ಬಚ್ಚಿಟ್ಟುಕೊಂಡಿರುತ್ತಿದ್ದರೋ ಏನೋ ಸಾಬಿ ಬಂದವನೇ ಅಂದ್ರೆ ಸಾಕು ಓಡಿಹೋಗಿ ಖಾಲಿ ಬಿಯರ್ ಬಾಟಲಿಗಳನ್ನು, ಯಾರೋ ಕುಡಿದು ಬಿಸಾಕಿದ ದೊಡ್ಡ ದೊಡ್ಡ ಬಿಯರ್ ಬಾಟಲಿಗಳನ್ನು ಎಲ್ಲಿಂದಲೋ ಹೆಕ್ಕಿ ತಂದು ಗಡ್ಡಸಾಬಿಯ ಮುಂದೆ ನಿಲ್ಲಿಸುತ್ತಿದ್ದರು . ಬಿಯರ್ ಬಾಟಲಿಗಳಿಗೆ ಸ್ವಲ್ಪ ಬೇಡಿಕೆ ಹೆಚ್ಚು . ಹಾಗಾಗಿ ಅವುಗಳಿಗೆ ಹಣವನ್ನು ಕೊಟ್ಟು, ಸ್ವಲ್ಪ ಪಾಕಂಪಪ್ಪನ್ನೂ ಕೊಡುತ್ತಿದ್ದ.( ಕಡಲೆ ಪಪ್ಪು, ಕಡಲೆ ಬೀಜ ಮತ್ತು ಬೆಲ್ಲ ದಿಂದ ಮಾಡಿದ ಸಿಹಿ ತಿಂಡಿ) ನಾವು ಕೊಡುವ ಹಳೇ ಪ್ಲಾಸ್ಟಿಕ್, ಹಳೇ ಕಬ್ಣಕ್ಕೆ ಸ್ವಲ್ಪ ಪಾಕಂ ಪಪ್ಪು ಅಷ್ಟೇ ಸಿಗುತ್ತಿತ್ತು. ಆ ಕಾಲಕ್ಕೆ ನಮಗೆ ಅದೇ ದೊಡ್ಡ ತಿಂಡಿ.

ಹಳೆ ಪ್ಲಾಸ್ಟಿಕ್ ಬಕೆಟ್ ಬಿಂದಿಗೆ ಟಬ್ ಎಷ್ಟೆಲ್ಲಾ ಸಾಮಗ್ರಿ ತಂದು ಗುಡ್ಡೆ ಹಾಕಿದರೂ ಅವನ್ನೆಲ್ಲ ನಿಮಿಷಾರ್ಧದಲ್ಲಿ ಮುರಿದು ಪುಡಿ ಮಾಡಿ ತೂಕ ಹಾಕಿಕೊಂಡು ಗಡ್ಡಸಾಬಿ ಒಂದೋ ಎರಡೋ ಪಾಕಂ ಪಪ್ಪಿನ ಬಿಲ್ಲೆ ಕೊಡುತ್ತಿದ್ದ. ಇಷ್ಟೇನಾ ಸಾಬೀ ಎಂದು ಕೊಸರಾಡಿದರೆ ಒಂದಿಷ್ಟು ಕಲ್ಲು ಸಕ್ಕರೆಯನ್ನೂ ಕೊಡುತ್ತಿದ್ದ. ಗಡ್ಡ ಸಾಬಿ ಭಾರೀ ಬುದ್ಧಿವಂತ. ಅವನು ವರ್ಷದಲ್ಲಿ ಮೂರ್ನಾಲ್ಕು ಬಾರಿ ಮಾತ್ರ ನಮ್ಮ ಹಳ್ಳಿಯಲ್ಲಿ ಅಡ್ಡಾಡುತ್ತಿದ್ದ. ಅದರಲ್ಲೂ ಬೇಸಿಗೆ ರಜದಲ್ಲಿ ಕಾಯಮ್ಮಾಗಿ ಬರುತ್ತಿದ್ದ. ಯಾಕೆಂದರೆ ಆಗ ಶಾಲೆಗೆ ಹೋಗುವ ಮಕ್ಕಳಿಗೆಲ್ಲ ರಜೆ ಇರುತ್ತದೆ. ಅವರ ಬಳಿ ಹಳೆಯ ಪುಸ್ತಕಗಳು, ಬರೆದು ಮುಗಿಸಿದ ನೋಟ್ ಪುಸ್ತಕಗಳು, ಹಳೆಯ ದಿನಪತ್ರಿಕೆಗಳು ಮುಂತಾದ ರದ್ದಿ ಕಾಗದಗಳು ಹೇರಳವಾಗಿ ಸಿಗುತ್ತಿದ್ದವು. ಇನ್ನು ದಿನ ಪತ್ರಿಕೆ ಎಂದರೆ ಎಲ್ಲರ ಮನೆಯಲ್ಲೂ ಆಗ ತರಿಸುತ್ತಿರಲಿಲ್ಲ. ಕೇವಲ ಅನುಕೂಲಸ್ಥರ ಮನೆಗಳಲ್ಲಿ ಮಾತ್ರ ದಿನಪತ್ರಿಕೆ, ವಾರಪತ್ರಿಕೆ ತರಿಸುತ್ತಿದ್ದರು. ನಮ್ಮ ಅಪ್ಪ ಸುಮ್ಮನೆ ಪ್ರತಿಷ್ಠೆಗೆಂದು ಇಂಗ್ಲಿಷ್ ನ್ಯೂಸ್ ಪೇಪರ್ ಕೂಡ ತರಿಸುತ್ತಿದ್ದರು. ಅದು ಸೋವಿಯತ್ ರಷ್ಯಾ ನ್ಯೂಸ್ ಪೇಪರ್ . ತುಂಬಾ ಮಂದವಾಗಿ ಅಂದರೆ ದಪ್ಪವಾಗಿ ಬಣ್ಣ ಬಣ್ಣದಿಂದ ಕೂಡಿರುತ್ತಿತ್ತು. ಅದರಲ್ಲಿ ಪ್ರಕೃತಿಕ ಚಿತ್ರಗಳು,ಹಣ್ಣುಗಳು,ವಿದೇಶೀ ಹುಡುಗ ಹುಡುಗಿಯರ ಚಿತ್ರಗಳು ನಮ್ಮನ್ನು ಆಕರ್ಷಿಸುತ್ತಿದ್ದವು. ನಮಗೆಲ್ಲ ಇಂಗ್ಲಿಷ್ ಸರಿಯಾಗಿ ಓದಲು ಬರುತ್ತಿರಲಿಲ್ಲ. ನಾನಿನ್ನು ಆಗ ಚಿಕ್ಕವಳು.ಅದರಲ್ಲಿ ಎ.ಬಿ.ಸಿ.ಡಿ ಅಕ್ಷರಗಳನ್ನು ಮಾತ್ರ ಗುರುತಿಸುತ್ತಿದ್ದೆ. ಅದು ವಾರಪತ್ರಿಕೆಯೋ ದಿನಪತ್ರಿಕೆಯೋ ಸರಿಯಾಗಿ ನೆನಪಿಲ್ಲ. ನಮ್ಮ ಹೊಸಕೆರೆ ಗ್ರಾಮ ಮಧುಗಿರಿ ಇಂದ ಪಾವಗಡ ಮುಖ್ಯರಸ್ತೆಯಲ್ಲಿ ಇದ್ದಿದ್ದರಿಂದ ಸಂಚಾರ ವ್ಯವಸ್ಥೆ ತಕ್ಕಮಟ್ಟಿಗೆ ಉತ್ತಮವಾಗಿತ್ತು. ಆದ್ದರಿಂದ ನ್ಯೂಸ್ ಪೇಪರ್ ಗಳು, ಸುಧಾ ವಾರಪತ್ರಿಕೆಗಳು ಸಲೀಸಾಗಿ ಬಂದು ತಲುಪುತ್ತಿದ್ದವು.ಇಡೀ ಊರಿಗೆ ಪೇಪರ್ ಸಪ್ಲೈ ಮಾಡುತ್ತಿದ್ದ ನಂಜಪ್ಪನನ್ನು ಪೇಪರ್ ನಂಜಪ್ಪ ಎಂದೇ ಕರೆಯುತ್ತಿದ್ದರು. ಆಗ ಊರಿಗೆಲ್ಲಾ ಆತನೊಬ್ಬನೇ ಪೇಪರ್ ಹಾಕುತ್ತಿದ್ದ. ಈಗ ಗಲ್ಲಿಗೆ ಒಬ್ಬ ಪೇಪರ್ ಬಾಯ್ ಬರುತ್ತಾನೆ .

ಏಳನೇ ತರಗತಿಯವರೆಗೆ ಮಾತ್ರ ಓದಿದ್ದ ನಮ್ಮ ಅಪ್ಪ ಇಂಗ್ಲಿಷ್ ಓದಲು ಸುಮಾರಾಗಿ ಬರುತ್ತಿತ್ತು. ಬೆಳಗ್ಗೆ ಎದ್ದರೆ ಅಪ್ಪನಿಗೆ ನ್ಯೂಸ್ ಪೇಪರ್ ಇರಲೇಬೇಕಿತ್ತು. ಜೊತೆಗೆ ಪ್ರಜಾವಾಣಿಯನ್ನು ತರಿಸುತ್ತಿದ್ದರು. ನಮ್ಮ ಪುಸ್ತಕಗಳಿಗೆ ಹಾಕುತ್ತಿದ್ದ ಬಣ್ಣ ಬಣ್ಣದ ಮರಾಳೆಯನ್ನು (ಬುಕ್ ಬೈಂಡಿಂಗ್) ಆಸೆಯಿಂದ ನೋಡುತ್ತಿದ್ದ ನನ್ನ ಗೆಳತಿಯರಿಗೆ ಬೈಂಡ್ ಹಾಕಿಕೊಳ್ಳಲು ಪತ್ರಿಕೆಯ ಹಾಳೆಗಳನ್ನು ಕೊಡುತ್ತಿದ್ದೆ. ಅವರಿಗಂತು ಆಗ ತುಂಬಾ ಖುಷಿಯಾಗುತ್ತಿತ್ತು. ಇನ್ನು ಬಳಸಿ ಮಿಕ್ಕಿದ ಪತ್ರಿಕೆಯ ಹಾಳೆಗಳು ಸುಧಾ ವಾರಪತ್ರಿಕೆಗಳು ಗಡ್ಡಸಾಬಿಯ ಚೀಲ ಸೇರುತ್ತಿದ್ದವು. ಗಡ್ಡ ಸಾಬಿಗೆ ಹಾಕಿ ಪಾಕಂ ಪಪ್ಪು ತಿನ್ನಲು ನಾವೆಲ್ಲ ಪೇಪರ್ ಗಳನ್ನು ಕೂಡಿಟ್ಟುಕೊಂಡು ಕಾಯುತ್ತಿದ್ದೆವು. ಇಂಗ್ಲಿಷ್ ಪೇಪರ್ ನೋಡಿ ಓದಿ ಬರೆಯಲು ಕಲಿಯಲಿ ಎಂದು ನಮ್ಮ ಅಪ್ಪ ಪತ್ರಿಕೆ ತರಿಸುತ್ತಿದ್ದರು.ಆದರೆ ನಾವು ಪತ್ರಿಕೆ ಓದಿದ್ದಕ್ಕಿಂತ ಮಾರಿ ಬಂದ ಹಣದಿಂದ ಕಲ್ಲು ಸಕ್ಕರೆ ಮೆದ್ದಿದ್ದೇ ಹೆಚ್ಚು.

ನಾನಾಗ 2ನೇ ತರಗತಿ ಇರಬಹುದು.ನಮ್ಮ ಊರಿನಲ್ಲಿ ಮೊದಲಿಗೆ ಟಿ. ವಿ. ಬಂದದ್ದು ನಮ್ಮ ಮನೆಗೇ. ಟಿವಿಯನ್ನು ನಮ್ಮ ಮನೆಯಲ್ಲಿ (ಹಾಲ್) ನಡುಮನೆಯಲ್ಲಿ ಇರಿಸಿದ್ದರು. ಆಗ ಆ ಊರಿನ ಜನರಿಗೆಲ್ಲ ಟಿವಿ ಎಂಬುದು ಒಂದು ಸೋಜಿಗ ಮತ್ತು ಕುತೂಹಲದ ವಸ್ತುವಾಗಿತ್ತು. ಒಂದು ಸಣ್ಣ ಪೆಟ್ಟಿಗೆಯಲ್ಲಿ ಮನುಷ್ಯನ ಚಿತ್ರಗಳು ಮೂಡಿ ಬರುತ್ತಿದ್ದುದನ್ನು ಜನರು ಬೆರಗು ಗಣ್ಣಿನಿಂದ ನೋಡುತ್ತಿದ್ದರು. ಆಗ ಕೇವಲ ಕಪ್ಪು ಬಿಳುಪು ಪ್ರಸಾರ.ಅಂದರೆ ಕೇವಲ ಕಪ್ಪು ಬಿಳುಪು ಬಣ್ಣಗಳಲ್ಲಿ ಮಾತ್ರ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು.ಆಗ ಕೇವಲ ಚಂದನ ಟಿವಿ ಮಾತ್ರ. ಜಾಸ್ತಿ ಹಿಂದಿ ಕಾರ್ಯಕ್ರಮಗಳೇ ಹೆಚ್ಚಾಗಿ ಪ್ರಸಾರವಾಗುತ್ತಿದ್ದವು. ಯಾವುದೇ ಕಾರ್ಯಕ್ರಮವಾದರೂ ಜನರು ಟಿವಿ ನೋಡಲು ಮುಗಿ ಬೀಳುತ್ತಿದ್ದರು. ಸಂಜೆ ಆದರೆ ಸಾಕು ನಡುಮನೆ ತುಂಬೆಲ್ಲ ಜನವೋ ಜನ. ಸಿನಿಮಾ ಟೆಂಟಿನಲ್ಲಿ ಇದ್ದಂತೆ ಜನ ಗಿಜಿ ಗುಡುತ್ತಿದ್ದರು. ಇನ್ನು ನನ್ನ ಅಪ್ಪನಿಗೆ ಊರಿನ ಜನರೆಲ್ಲ ನಮ್ಮ ಮನೆಗೆ ಬಂದು ಟಿವಿ ನೋಡುತ್ತಿದ್ದಾರೆ ಎಂಬ ಹೆಮ್ಮೆ, ಜನ ಹೆಚ್ಚಾದಷ್ಟು ಅವರಿಗೆ ಖುಷಿ ಹೆಚ್ಚಾಗುತ್ತಿತ್ತು. ರಾತ್ರಿ 12 ಗಂಟೆ ಆದರೂ ಜನ ಕದಲುತ್ತಿರಲಿಲ್ಲ. ಅಪ್ಪನಿಗೆ ಸಾಕಾಗಿ ” ಇನ್ನು ಹೋಗ್ರಲೇ ಮನೆಗೆ ಮಲಿಕಳ್ರಿ “ಅಂತ ಟಿವಿ ಆಫ್ ಮಾಡಿದರೆ ಮಾತ್ರ ಜಾಗ ಖಾಲಿ ಮಾಡುತ್ತಿದ್ದರು. ಬುಧವಾರ ಹಿಂದಿ ಹಾಡುಗಳ ಚಿತ್ರಹಾರ್, ಗುರುವಾರ ಚಿತ್ರಮಂಜರಿ,ವಾರದ ಕಾರ್ಯಕ್ರಮಗಳನ್ನು ಭಿತ್ತರಿಸುತ್ತಿದ್ದ ಮುನ್ನೋಟ ಮುಂತಾದ ಕಾರ್ಯಕ್ರಮಗಳು ಇಂದಿಗೂ ನೆನಪಿನಲ್ಲಿ ಉಳಿದಿವೆ. ಇಡೀ ತಾಲೂಕಿನಲ್ಲಿ ಮೊದಲು ನಮ್ಮ ಮನೆಗೆ ಟಿವಿ ಬರಲು ಕಾರಣವೂ ಇತ್ತು ನಮ್ಮ ಚಿಕ್ಕಪ್ಪನಿಗೆ ಬೆಂಗಳೂರು ನಗರದಿಂದ ಹೆಣ್ಣು ತಂದಿದ್ದರು.

ಇನ್ನು ಹಳೆ ಪಾತ್ರೆಯ ಬಗ್ಗೆ ಹೇಳುವುದಾದರೆ ಆಗಿನ ಕಾಲದಲ್ಲಿ ಎಲ್ಲರ ಮನೆಗಳಲ್ಲೂ ಅಲ್ಯುಮಿನಿಯಂ ಪಾತ್ರೆಗಳೆ ಹೆಚ್ಚು ಸದ್ದು ಮಾಡುತ್ತಿದ್ದವು. ಸಿಲ್ವರ್ ಪಾತ್ರೆಗಳೆಂತಲೂ ಕರೆಯುತ್ತಿದ್ದರು. ಅಂದರೆ ಬೆಳ್ಳಿ ಪಾತ್ರೆಗಳಲ್ಲ ಅಲ್ಯೂಮಿನಿಯಂ ಮತ್ತು ಇಂಡೋಲಿಯಂ ಪಾತ್ರೆಗಳನ್ನು ಹಳ್ಳಿ ಕಡೆ ಆ ರೀತಿ ಕರೆಯುತ್ತಿದ್ದರು. ಹುಡುಕಿದರೂ ಯಾರ ಮನೆಯಲ್ಲೂ ಒಂದು ಸ್ಟೀಲ್ ಪಾತ್ರೆ ಸಿಕ್ಕುತಿರಲಿಲ್ಲ. ಅಡಿಗೆ ಮಾಡಲು ಮಣ್ಣಿನ ಪಾತ್ರೆಗಳು ಮತ್ತು ಅಲ್ಯೂಮಿನಿಯಂ ಪಾತ್ರೆಗಳು ಹೆಚ್ಚಾಗಿ ಬಳಕೆಯಾಗುತ್ತಿದ್ದವು. ನಮ್ಮ ಅಮ್ಮ ತಟ್ಟೆ ಇಡ್ಲಿಗಳನ್ನು ಸಿಲ್ವರ್ ಪ್ಲೇಟ್ ಗಳಲ್ಲಿ ಬೇಯಿಸುತ್ತಿದ್ದಳು. ನಮ್ಮ ಮನೆಯಲ್ಲಿ ಊಟ ಮಾಡಲು ಮಾತ್ರ ಸ್ಟೀಲ್ ತಟ್ಟೆಗಳಿರುತ್ತಿದ್ದವು. ಹಳೆಯ ತೂತು ಹೋದ ಅಲ್ಯೂಮಿನಿಯಂ ಬಾಣಲೆ ತಪ್ಪಲೆಗಳನ್ನು ಗಡ್ಡ ಸಾಬೀಗೆ ತೂಕಕ್ಕೆ ಹಾಕಿ ಒಂದೋ ಎರಡೋ ರೂಪಾಯಿಗಳನ್ನು ಪಡೆಯುತ್ತಿದ್ದರು. ಆಗಿನ ಒಂದು ರೂಪಾಯಿ ಈಗಿನ ಇಪ್ಪತ್ತು ಇಪ್ಪತ್ತೈದು ರೂಪಾಯಿಗಳಿಗೆ ಸಮನಾಗಿತ್ತು . ಐವತ್ತು ಪೈಸೆ ನಾಣ್ಯಕ್ಕೆ ಹತ್ತು ಐಸ್ ಕ್ಯಾಂಡಿಗಳು ಬರುತ್ತಿದ್ದವು. ಹೀಗೆ ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಬಾಲ್ಯಕಾಲದ ನೆನಪು ಸುರಳಿ ಬಿಚ್ಚಿಕೊಳ್ಳುತ್ತದೆ.


  • ಸರ್ವಮಂಗಳ ಜಯರಾಂ. ಶಿಕ್ಷಕಿ ಗೌರಿಬಿದನೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading