ಶಾರದಾ ಗಂಡನ ಮನೆಯಲ್ಲಿ ಸುಖ ಪಡಲಿಲ್ಲ, ಅಪ್ಪ ಅಮ್ಮನ ಕಷ್ಟ ನೋಡದೆ ಮನೆಯಿಂದ ಹೊರಕ್ಕೆ ಬಂದು ದುಡಿಯಲು ಶುರು ಮಾಡಿದಳು, ಹಿಡಿದ ಹಠ ಬಿಡಲಿಲ್ಲ, ಅವಳ ಭಾಗ್ಯ ಮರಳಿ ಬಂದಾಗ ಸಂತೋಷ ಪಟ್ಟಳು. ಮುಂದೇನಾಯಿತು ಸ್ವರ್ಣಲತಾ ಅವರ ಈ ಕತೆಯನ್ನು ತಪ್ಪದೆ ಮುಂದೆ ಓದಿ…
ರೀ ಶಾರದಾ ಸ್ಕೂಲ್ಗೆ ಬರಲ್ವೇನ್ರಿ ‘ ಎಂದು ಲಲಿತಾ ಕೆಳಗಿನಿಂದ ಕೂಗುತ್ತಿದ್ದಳು, ಒಳಗೆ ತಿಂಡಿ ಮಾಡಿಕೊಳ್ಳುತ್ತಿದ್ದ ಶಾರದಾ ಆಚೆ ಬಂದು ನೋಡಿ, ” ಇಲ್ಲಾರಿ ಇವತ್ತು ಯಾಕೋ ತಲೆ ನೋವು ಎಚ್ ಎಂಗೆ ರಜಾ ಚೀಟಿ ಕೊಟ್ಬಿಡಿ’ ಎಂದು ಒಳಹೋಗಿ ರಜೆ ಚೀಟಿ ತಂದು ಲಲಿತಾಳ ಕೈಗಿತ್ತಳು.’ಹುಷಾರಾಗಿದೀರಿ ತಾನೆ ‘ಎಂದು ಕೇಳಿದ ಲಲಿತಾ ಅವಳ ಪಾಡಿಗೆ ಅವಳು ಹೊರಟು ಹೋದಳು. ಚಿಲಕ ಹಾಕಿ, ತಿಂಡಿ ತಿಂದ ಶಾರದಾ ಹಾಗೇ ಆರಾಮ ಕುರ್ಚಿಗೆ ಒರಗಿದಳು. ಶಾರದಾಳ ಮನಸ್ಸು ಹದಿನೈದು ವರ್ಷಗಳ ಹಿಂದಕ್ಕೆ ಓಡಿತು. ಈ ಊರಿಗೆ ಬಂದ ಸಂದರ್ಭದ ನೆನಪಾಯಿತು. ಆಗ ನನಗಿನ್ನೂ ಮುವ್ವತ್ತರ ಪ್ರಾಯ, ನೋಡಲು ತಕ್ಕಮಟ್ಟಿಗೆ ಸುಂದರವಾಗೇ ಇದ್ದೆ, ಒಂಟಿ ಜೀವನ ತುಸು ಕಷ್ಟವೇ ಆಯಿತು. ತುಂಬು ಸಂಸಾರದಲ್ಲಿ ಅಪ್ಪ- ಅಮ್ಮನ ಅಕ್ಕರೆ, ಅಕ್ಕ-ತಂಗಿಯರ, ತಮ್ಮನ ಪ್ರೀತಿಯಲ್ಲಿ ಮೀಯುತ್ತಿದ್ದ ನಾನು , ಒಳ್ಳೆಯ ಸಮಯದಲ್ಲಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ಧೆ.
ಮದುವೆಯಾಗಿ ಹದಿಮೂರು ವರ್ಷವಾಗಿತ್ತು, ನನ್ನ ಮದುವೆಯಾದ ಮೇಲೆ ಇಬ್ಬರು ತಂಗಿಯರ, ಇದ್ದ ಒಬ್ಬ ತಮ್ಮನ ಮದುವೆಯೂ ಆಯಿತು, ಅಲ್ಲಿಯ ತನಕ ಕಾಡದಿದ್ದ ಒಂಟಿತನ ಅವರೆಲ್ಲರ ಮದುವೆಯಾದ ಮೇಲೆ ಎಡೆ ಬಿಡದಂತೆ ಕಾಡಲಾರಂಭಿಸಿತು. ಮನೆಯಲ್ಲಿ ನನ್ನ ಮಾತು ಕೇಳದೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುತ್ತಿರಲಿಲ್ಲ, ಅಪ್ಪ ದುಡ್ಡನ್ನೂ ನನ್ನ ಕೈಗೇ ತಂದುಕೊಡುತ್ತಿದ್ದುದು, ಆದರೇನು ಎಲ್ಲರಿಗೂ ಒಂದು ನೆಲೆಯಾಯಿತು, ನಾನು ಮಾತ್ರ ಸದಾ ಅಪ್ಪ,ಅಪ್ಪನ ಹಂಗಿನಲ್ಲೇ ಬದುಕಬೇಕು, ಇಂಥ ಸಮಯದಲ್ಲೇ ನಾನು ಮನೆ ಬಿಟ್ಟು ಹೊರಡುವ ನಿರ್ಧಾರ ಕೈಗೊಂಡಿದ್ದು. ಸರ್ಕಾರಿ ನೌಕರಿಯಲ್ಲಿದ್ದ ನನ್ನ ಅಪ್ಪ ಎಲ್ಲಾ ಮಕ್ಕಳನ್ನೂ ಹೆಣ್ಣು ಗಂಡೆಂಬ ಭೇದವಿಲ್ಲದೇ ಓದಿಸಿ, ಅವರ ಕಾಲಮೇಲೆ ಅವರು ನಿಲ್ಲುವಂತೆ ಮಾಡಿದ್ದರು. ಜೊತೆಗೆ ಒಳ್ಳೆಯ ಕಡೆ ಕೊಟ್ಟು ಮದುವೆಯನ್ನೂ ಮಾಡಿದ್ದರು, ನನ್ನನ್ನೂ ಪಿಯುಸಿವರೆಗೆ ಓದಿಸಿ ಒಳ್ಳೆಯ ವರನಿಗೆ ಕೊಟ್ಟು ಮದುವೆ ಮಾಡಿದ್ದರು. ನನ್ನ ದುರಾದೃಷ್ಟಕ್ಕೆ , ಗಂಡನಾದವನು ಒಂದು ದಿನವೂ ಸಂಸಾರ ಮಾಡಲಿಲ್ಲ, ಆಗಲೇ ನನ್ನ ಆಸೆ ಕನಸುಗಳೆಲ್ಲಾ ಕಮರಿಹೋದವು. ಚಿಕ್ಕ ವಯಸ್ಸಿನಲ್ಲಿ ಅಕಸ್ಮಾತ್ ಜಾರಿಬಿದ್ದು ಎಡಗೈ ಸ್ವಲ್ಪ ಊನವಾಗಿತ್ತು. ಅದನ್ನು ಸರಿಮಾಡಿಸಲು ಅಪ್ಪ ಒಂದು ಸಣ್ಣ ಆಪರೇಷನ್ ಕೂಡಾ ಮಾಡಿಸಿದ್ದರು, ಎಲ್ಲಾ ಸರಿಯಾಗಿತ್ತು, ಬಲಗೈನ ಸಮಕ್ಕೆ ಎಡಗೈ ಹೋಗುತ್ತಿರಲಿಲ್ಲ ಅಷ್ಟೆ. ತಂಗಿಯರೆಲ್ಲಾ ಓದಲು ಹೋಗುತ್ತಿದ್ದುದರಿಂದ ಮನೆ ಕೆಲಸವನ್ನೆಲ್ಲಾ ನಾನೊಬ್ಬಳೇ ಮಾಡುತ್ತಿದ್ದೆ, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಆಡುಗೆ ಮಾಡುವುದು , ಮನೆ ಸ್ವಚ್ಛ ಮಾಡುವುದು, ಕೈ ಊನವಾಗಿದ್ದರೆ ಇದನ್ನೆಲ್ಲಾ ಮಾಡಲಾಗುತ್ತಿತ್ತೆ. ಆದರೆ ನಾವು ಹೇಳುವುದನ್ನು ಕೇಳಿಸಿಕೊಳ್ಳಲು ಗಂಡನ ಮನೆಯವರು ತಯಾರಿರಲಿಲ್ಲ, ಕೈಊನವಾದ ಹುಡುಗಿಯನ್ನು ಕೊಟ್ಟು ಮದುವೆ ಮಾಡಿದರು ಎನ್ನುವುದೊಂದೇ ಅವರ ರಾಗ.
ಎಲ್ಲ ಹೆಣ್ಣುಮಕ್ಕಳು ಅವರವರ ಗಂಡನ ಮನೆಯಲ್ಲಿ ನೆಮ್ಮದಿಯಾಗಿರಬೇಕಾದರೆ ಇವಳೋಬ್ಬಳ ಜೀವನ ಹೀಗಾಯೀತಲ್ಲ ಎಂದು ಆಪ್ಪ ಅಮ್ಮ ಕೊರಗುತ್ತಿದ್ದರು.ನೆಂಟರಿಷ್ಟರಲ್ಲಿ ಕೆಲವರು ಕೆಲವರು ಕೋರ್ಟಿಗೆ ಹೋಗಿ ಪರಿಹಾರ ಪಡೇಯುವಂತೆ ಸಲಹೆ ನೀಡಿದರು, ಆದರೆ ಅಪ್ಪ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲಿಲ್ಲ. ಅವಳನ್ನು ಇನ್ನೊಬ್ಬ ಗಂಡುಮಗ ಎಂದುಕೊಳ್ಳುತ್ತೇನೆ ಎಂದರು. ಅಪ್ಪನ ಮಾತನ್ನು ನೆನೆಸಿಕೊಂಡರೆ ಈಗಲೂ ಮನಸ್ಸು ತುಂಬಿಬರುತ್ತದೆ.ನನ್ನನ್ನೇ ಮನೆ ಯಜಮಾನಿಯಂತೆ ಕಾಣುತ್ತಿದ್ದ ಅಪ್ಪ ಅಮ್ಮನನ್ನು ಬಿಟ್ಟು ಬಂದೆನಲ್ಲ ಎಂದು ಸಂಕಟವಾಗುತ್ತದೆ. ತಮ್ಮತಂಗಿಯರು ಕೆಲಸಕ್ಕೆ ಸೇರಿದ ಮೇಲೆ ಮನೆಗೆ ಬರುವಾಗ ಬರಿಗೈಯಲ್ಲಿ ಬರುತ್ತಲೇ ಇರಲಿಲ್ಲ, ನನಗಾಗಿ ಏನನ್ನಾದರೂ ತರುತ್ತಿದ್ದರು, ಎಲ್ಲರೂ ಸೇರಿಕೊಂಡು ಬೇಗಬೇಗನೆ ಕೆಲಸ ಮುಗಿಸಿ ಚೌಕಾಬಾರ ಆಡುತ್ತಿದ್ದುದು, ತಂಗಿಯರೊಡಗೂಡಿ ಚಿಲ್ಲರೆ ಕಾಸು ಹೊಂದಿಸಿಕೊಂಡು ಸಿನಿಮಾಕ್ಕೆ ಹೋಗುತ್ತಿದ್ದುದು ಇವೆಲ್ಲಾ ಮರಳಿಬರಲು ಸಾಧ್ಯವೇ.
ಇವರೆಲ್ಲರ ಪ್ರೀತಿಯಲ್ಲಿ ಮೀಯುತ್ತಿದ್ದ ನಾನು ಒಂದು ದಿನ ಮಬ್ಬುಗತ್ತಲಲ್ಲಿ ಮನೆಬಿಟ್ಟು ಹೊರಟುಬಿಟ್ಟೆ. ಅಪ್ಪ ಅಮ್ಮ ಗದ್ದೆಯ ಕಡೆ ಹೋದವರು ಇನ್ನೂ ಮನೆಗೆ ಬಂದಿರಲಿಲ್ಲ, ಮುಖ್ಯರಸ್ತೆಯಲ್ಲಿ ಹೋದರೆ ಯಾರಾದರೂ ನೋಡಬಹುದು ಎಂದು ಕಾಲುದಾರಿಯಲ್ಲಿ ಹೊರಟೆ. ಜ್ಯಾಸ್ತಿ ಲಗೇಜ್ ತೆಗೆದುಕೊಂಡರೆ ಅನುಮಾನ ಬರುತ್ತದೆ ಎಂದು ಸಣ್ಣ ಬ್ಯಾಗ್ ತೆಗೆದುಕೊಂಡು ಒಂದು ತಿಂಗಳಿಗಾಗುವಷ್ಟು ಖರ್ಚಿಗೆ ದುಡ್ಡು ಹೊಂದಿಸಿಕೊಂಡು ಹೊರಟುಬಿಟ್ಟೆ. ಎಲ್ಲಿಗೆ ಹೋಗುವುದು ಎಂದು ಮೊದಲೇ ನಿರ್ಧರಿಸಿದ್ದೆ. ಅಪ್ಪ ನೌಕರಿಯಲ್ಲಿದ್ದಾಗ ಜೊತೆಯಲ್ಲಿ ಓದುತ್ತಿದ್ದ ಗೆಳತಿ ಗೀತಾ ಸಂಪರ್ಕದಲ್ಲಿದ್ದಳು.ಆಗಾಗ ಪತ್ರ ಬರೆಯುತ್ತಿದ್ದ ಅವಳಿಗೆ ಮನೆ ಬಿಟ್ಟು ಹೊರಡುವ ನಿರ್ಧಾರ ತಿಳಿಸಿದೆ, ಮೊದಮೊದಲು ಹೆದರಿದ ಅವಳು , ನನ್ನ ನಿರ್ಧಾರ ಅಚಲವಾದದ್ದು ಎಂದು ತಿಳಿದು ಬೆಂಬಲ ನೀಡಿದಳು. ಅವಳ ಮನೆಯಲ್ಲಿ ಒಂದೆರಡು ದಿನ ಉಳಿದುಕೊಂಡೆ. ಪಿಯುಸಿ ತನಕ ಓದಿದ್ದರಿಂದ ಪ್ರೈಮರಿ ಶಾಲೆಯ ಕೆಲಸಕ್ಕೇನೂ ತೊಂದರೆಯಾಗಲಿಲ್ಲ.ಸಂಬಳ ಕಡಿಮೆಯೇ ಆದರೂ ಒಬ್ಬಳ ಜೀವನಕ್ಕೇನೂ ತೊಂದರೆಯಾಗಲಿಲ್ಲ. ಗೀತಾಳೆ ಮುಂದೆ ನಿಂತು ಕ್ಷೇಮವಾಗಿರುವಂಥ ವಠಾರದಲ್ಲಿ ಮನೆ ಮಾಡಿಕೊಟ್ಟಳು. ಅಪ್ಪ ಅಮ್ಮನನ್ನು ತೊರೆದು ಬಂದೆ ಎನ್ನುವುನ್ನು ಬಿಟ್ಟರೆ ಸ್ವತಂತ್ರ ಜೀವನ, ಹಂಗಿಲ್ಲದ ಜೀವನ ತುಂಬಾ ನೆಮ್ಮದಿ ನೀಡುತ್ತಿತ್ತು. ನನ್ನ ಪುಣ್ಯಕ್ಕೆ ಮನೆ ಮಾಲೀಕರು ಮಗಳಂತೆ ಕಾಣುತ್ತಿದ್ದರು. ಶಾಲೆಯಲ್ಲೂ ಅಷ್ಟೆ ನನ್ನ ಗಂಭೀರ ನಡವಳಿಕೆ ನೋಡಿ ತುಂಬಾ ಗೌರವದಿಂದ ಕಾಣುತ್ತಿದ್ದರು.ಪುರುಷ ಸಹೋದ್ಯೋಗಿಗಳೂ ಅಷ್ಟೆ ಎಷ್ಟು ಬೇಕೋ ಅಷ್ಟು ಮಾತ್ರ ಮಾತನಾಡುತ್ತಿದ್ದರು.
ನಾನು ಮನೆ ಬಿಟ್ಟು ಬಂದಮೇಲೆ ಅಪ್ಪ ಅಮ್ಮ ಖಂಡಿತಾ ಎಲ್ಲಾ ಕಡೆ ಹುಡುಕಿಸಿ ನಿರಾಶರಾಗಿರುತ್ತಾರೆ. ಅಕ್ಕ ತಂಗಿಯರು ಅದೆಷ್ಟು ಬೇಸರ ಮಾಡಿಕೊಂಡರೋ, ಅವರು ಯಾರೂ ನನಗೆ ಗೌರವ ಕಡಿಮೆಯಾಗುವಂತೆ ಎಂದೂ ನಡೆದುಕೊಂಡಿರಲಿಲ್ಲ, ಆದರೂ ನನ್ನ ದಾರಿ ನಾನು ಹುಡುಕಿಕೊಂಡು ಬಂದೆ.ಅಪ್ಪ ಎರಡನೇ ಮದುವೆಗೆ ಪ್ರಯತ್ನಪಟ್ಟರು. ಆದರೆ ನನಗೇ ಆಸಕ್ತಿ ಇರಲಿಲ್ಲ. ಯವ್ವನದ ಆಸೆಗಳೆಲ್ಲಾ ಕಮರಿಹೋದಮೇಲೆ ಇನ್ನೊಂದು ಮದುವೆಯ ಬಗ್ಗೆ ಆಸಕ್ತಿ ಉಳಿಯಲಿಲ್ಲ.ಇಲ್ಲಿಗೆ ಬಂದಮೇಲೂ ಒಂದಿಬ್ಬರು ಸಹೋದ್ಯೋಗಿಗಳು ಮದುವೆಯ ಪ್ರಸ್ತಾಪವನ್ನು ಮುಂದಿಟ್ಟರು, ನಾನೇ ನಯವಾಗಿ ತಿರಸ್ಕರಿಸಿದೆ. ಒಂಟಿಯಾಗಿ ಬದುಕಬೇಕು ಅನ್ನುವುದನ್ನು ಬಿಟ್ಟರೆ ನನಗೆ ಇನ್ನೊಂದು ಮದುವೆ ಅಂಥ ಅನಿವಾರ್ಯ ಎಂದು ಅನ್ನಿಸಲೇ ಇಲ್ಲ. ಆದರೂ ಅಕ್ಕ ತಂಗಿಯರ ಸಂಸಾರಗಳನ್ನು ನೋಡಿದಾಗ ಆ ದಿನಗಳಲ್ಲಿ ನನಗೂ ನನ್ನದೇ ಆದ ಸಂಸಾರವಿದ್ದರೆ ಚೆನ್ನಾಗಿರುತ್ತಿತ್ತು ಆನ್ನಿಸಿದ್ದು ಸುಳ್ಳಲ್ಲ. ಯವ್ವನದ ದಿನಗಳಲ್ಲಿ, ಆದು ಎಷ್ಟೇ ಆದರೂ ಕನಸುಗಳ ಕಾಲ ತಾನೇ ನಾನೂ ನನ್ನ ಸಂಸಾರದ ಕನಸು ಕಾಣುತ್ತಿದ್ದೆ, ಗಂಡನಾದವನು ಒಂದು ದಿನ ವೂ ನಗುನಗುತ್ತಾ ಮಾತನಾಡಿಸಲಿಲ್ಲ, ಅವನ ಮನೆಯಲ್ಲಿ ನಾಲ್ಕೇ ದಿನ ಇದ್ದದ್ದು, ಆ ನಾಲ್ಕು ದಿನಗಳಲ್ಲೇ ನರಕ ದರ್ಶನವಾಯಿತು. ಕೂಲಿಯಾಳಿನಂತೆ ಕೆಲಸಮಾಡಿಸುತ್ತಿದ್ದರು.ಮಾವ ಬಿಟ್ಟರೆ ಇನ್ಯಾರೂ ಪ್ರೀತಿಯಿಂದ ಮಾತನಾಡಿಸುತ್ತಿರಲಿಲ್ಲ. ನನ್ನನ್ನು ನೋಡಿಕೊಂಡು ಹೋಗಲು ಬಂದಿದ್ದ ತಮ್ಮ , ಮಮತೆಯ ಮೂರ್ತಿ, ನನ್ನ ಕಷ್ಟ ನೋಡಲಾಗದೇ ಜೊತೆಯಲ್ಲಿ ಕರೆದುಕೊಂಡು ಹೋಗಿಬಿಟ್ಟ. ಅದೇ ಕಡೆ ಗಂಡನೆಂಬ ಪ್ರಾಣಿ ಮತ್ತೆ ಮುಖ ತೋರಿಸಲಿಲ್ಲ. ನಂತರ ನನ್ನ ಆಸೆಗಳೆಲ್ಲಾ ಮುರುಟಿಹೋದವು.
ಹೊರಗೆ ಏನೋ ಸದ್ದು ಆದಂತಾಯಿತು, ಎದ್ದು ಬಾಗಿಲು ತೆಗೆದು ನೋಡಿದರೆ, ನೆನೆದವರ ಮನದಲ್ಲಿ ಎಂಬಂತೆ ತಮ್ಮ ‘ಶಾರದಾವರ ಮನೆ ಇದೇನಾ ‘ಎಂದು ತಮ್ಮ ಕೇಳುತ್ತಿದ್ದ. ನನಗೆ ಭಯ, ಆಶ್ಚರ್ಯ, ಸಂತೋಷ ಎಲ್ಲ ಒಟ್ಟಿಗೇ ಆದವು. ತಮ್ಮ ಬಂದವನೇ ಒಂದೇ ಸಮ ಅಳಲಾರಂಭಿಸಿದ, ನಾನೂ ಅಳುತ್ತಾ, ಅಳುತ್ತಲೇ ಅವನನ್ನು ಸಮಾಧಾನ ಮಾಡಿದೆ. ಹದಿನೈದು ವರ್ಷಗಳಾದರೂ ಅವನ ನಡವಳಿಕೆಯಲ್ಲಿ ಸ್ವಲ್ಪವೂ ಬದಲಾವಣೆ ಆಗಿರಲಿಲ್ಲ, ಅದೇ ತಾಯಿ ಮಮತೆ. ಅಪ್ಪ, ಆಮ್ಮ, ಅಕ್ಕ ತಂಗಿಯರ ಬಗ್ಗೆ ವಿಚಾರಿಸಿಕೊಂಡೆ.ಎಲ್ಲಾ ಮಾತಾಡಿದ ನಂತರ ತಮ್ಮ ‘ಬಾರೆ ಮನೇಗೆ ಹೋಗೋಣ’ ಎಂದ, ನಾನು ಈ ಸಮಯದಲ್ಲಿ ಬಲಹೀನಳಾಗಬಾರದು ಎಂದು ಗಟ್ಟಿಯಾಗಿ ನಿರ್ಧಾರ ಮಾಡಿಕೊಂಡು , ‘ಇಲ್ಲಕಣಪ್ಪಾ, ಬರಲ್ಲಾ ದಯವಿಟ್ಟು ಬೇಸರ ಮಾಡಿಕೊಳ್ಳಬೇಡ ನಾನು ಇಲ್ಲೇ ನೆಮ್ಮದಿಯಾಗಿದ್ದೇನೆ ‘ ಎಂದೆ.ತಮ್ಮ ನನ್ನ ಕಾಲು ಹಿಡಿಯುವುದೊಂದು ಬಾಕಿಇತ್ತು. ಕಡೆಗೂ ನಾನು ನನ್ನ ಪಟ್ಟುಬಿಡಲಿಲ್ಲ. ಅವನಿಗಾಗಿ ವಿಶೇಷವಾಗಿ ಮಾಡಿದ್ದ ಊಟವನ್ನೂ ಮಾಡಿಕೊಂಡು ಹೊರಟುಹೋದ.ಅದಾಗಿ ಸ್ವಲ್ಪ ದಿನಗಳತನಕ ಊರಿನಿಂದ ಯಾವ ಸುದ್ದಿಯೂ ಇರಲಿಲ್ಲ.ಆಮೇಲೆ ಇದ್ದಕ್ಕಿದ್ದಂತೆ ಒಂದು ದಿನ ಅಪ್ಪ ಅಮ್ಮ ಇಬ್ಬರೂ ಬಂದರು. ಇಬ್ಬರೂ ನೋಡಲು ತುಂಬಾ ಸೊರಗಿಹೋಗಿದ್ದರು. ನಾನು ನನ್ನ ಪಟ್ಟುಬಿಡಲಿಲ್ಲ.ಕಡೆಗೆ ಅಪ್ಪ ಅಮ್ಮ ‘ನಾವು ನಿನ್ನ ಜೊತೆಯಲ್ಲೇ ಇರುತ್ತೇವೆ, ಆಗುತ್ತದಾ ‘ ಎಂದರು. ಅದಕ್ಕಿಂತ ಬೇರೆ ಭಾಗ್ಯವೇನಿದೆ ಎಂದು ನಾನು ಸಂತೋಷದಿಂದ ಒಪ್ಪಿಕೊಂಡೆ. ನನ್ನ ಭಾಗ್ಯ ನನಗೆ ಮರಳಿಬಂದಂತಾಯ್ತು. ಆದರೆ ನಾನು ಕೆಲಸಕ್ಕೆ ಹೋಗುವುದನ್ನು ಮಾತ್ರ ನಿಲ್ಲಿಸಲಿಲ್ಲ.
- ಸ್ವರ್ಣಲತಾ
