ಜೀವಂತವಿದ್ದಾಗ ಹೊಟ್ಟೆಗೆ ಅಂಬಲಿ ಕಾಣಲಿಲ್ಲ, ಹೆಣ ಹೂಳಲು ಹೂಗಳು ಹಾಸುತಿವೆ ಮಸಣದಲಿ….ಈ ಸಾಲಿನಲ್ಲಿ ಮನುಜನ ಬದುಕಿನ ರೀತಿಯನ್ನು ವಿವರಿಸುತ್ತಾರೆ. ಸುರೇಶ ಬಾಬು ಜಂಬಲದಿನ್ನಿ ಅವರ ‘ದಾರಿ ತೋರಿದ ಕಂದೀಲು’ ಕೃತಿಯ ಕುರಿತು ಗಝಲ್ ಕಾರ ನಾರಾಯಣಸ್ವಾಮಿ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಬರಹ ಸಮಾಜವನ್ನು ಪೂರ್ಣ ಪ್ರಮಾಣದಲ್ಲಿ ಬದಲಾಯಿಸಲಾಗದಿದ್ದರೂ, ಒಂದಷ್ಟು ಜನರ ಮನಸ್ಸಿನ ಮೇಲೆ ಪ್ರಭಾವ ಬೀರಬಹುದು. ಬರವಣಿಗೆಯ ಶಕ್ತಿಯಿಂದಲೇ ಸರ್ಕಾರಗಳು ಬದಲಾಗಿರುವ ಉದಾಹರಣೆ ನಮ್ಮ ಮುಂದೆ ಇವೆ, ಮನುಷ್ಯನಲ್ಲಿ ತುಂಬಿರುವ ಮೌಢ್ಯ, ಮೇಲು ಕೀಳು ಜಾತಿ ಧರ್ಮಗಳ ಅಂಧಾನುಕರಣೆ ಸ್ವಲ್ಪಮಟ್ಟಿಗಾದರೂ ಬದಲಾವಣೆಯಾಗಬಹುದು.
ತಾನು ವಾಸಿಸುತ್ತಿರುವ ಪ್ರದೇಶದಲ್ಲಿ ಇನ್ನೂ ಜೀವಾಂತವಾಗಿ ಉಳಿದಿರುವ ಜಾತಿ ವ್ಯವಸ್ಥೆ, ಅಸ್ಪೃಶ್ಯತೆಯ ಆಚರಣೆ, ರೈತರ ಬದುಕು, ತಾನು ಅನುಭವಿಸಿದ ನೋವು, ವೇದನೆ, ಮುಂತಾದ ಅನುಭವಗಳನ್ನು ಸಾಹಿತ್ಯದ ಬರವಣಿಗೆಯ ಮೂಲಕ ವಿರೋಧಿಸುತ್ತಾ, ಜನರ ಮನಸ್ಸಿನಲ್ಲಿ ಒಂದಷ್ಟು ಬದಲಾವಣೆಯನ್ನು ಕಾಣಲು ತಾನು ಪೋಲಿಸ್ ವೃತಿಯಲ್ಲಿ ಇದ್ದರೂ, ಪ್ರವೃತಿಯಾಗಿ ಕನ್ನಡ ಸಾಹಿತ್ಯದ ಬರವಣಿಗೆಯ ಲೋಕವನ್ನು ಪ್ರವೇಶಿಸಿದವರು ಶ್ರೀ ಸುರೇಶ ಬಾಬು ಜಂಬಲದಿನ್ನಿ.

ಬಾಲ್ಯದ ದಿನಗಳಲ್ಲಿ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಅನುಭವಿಸಿದ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಜಾತಿವಾರು ಸಂಘರ್ಷ, ನೋಡಿ ಅನುಭವಿಸಿದ ಮಾನಸಿಕ ಯಾತನೆ, ದೈಹಿಕ ಹಿಂಸೆ ಇವೆಲ್ಲವೂ ಸನ್ನಿವೇಶಗಳು, ಕಂಡ ಘಟನೆಗಳು ನನ್ನನ್ನು ಸಾಹಿತ್ಯ ಕ್ಷೇತ್ರಕ್ಕೆ ದೂಡಿದವು… ಗ್ರಾಮೀಣ ಪ್ರದೇಶದ ಜನರ ನೋವು, ರೈತರ ಬದುಕು ಸಮಾಜದೊಳಗಿನ ಅಸಮಾನತೆ ಇವೆಲ್ಲವನ್ನೂ ಬರಹ ರೂಪದಲ್ಲಿ ಸಮಾಜಕ್ಕೆ ಪರಿಚಯಿಸಿ, ಸಮಸ್ಯೆಗಳಿಗೆ ಒಂದಷ್ಟು ಪರಿಹಾರ ಕೊಡಿಸುವುದು ನನ್ನ ಬರಹದ ಉದ್ದೇಶ..ಆದರೆ ಪ್ರಸ್ತುತ ದಿನಗಳಲ್ಲಿ ರೈತರ ನೋವು, ಗ್ರಾಮೀಣ ಪ್ರದೇಶದ ಜನರ ಸ್ಥಿತಿಗತಿಗಳು, ಅವರ ಅಳಲು ಯಾರ ಕಿವಿಗೂ ಬೀಳುತ್ತಿಲ್ಲ ಎನಿಸುತ್ತದೆ. ಗಜಲ್ ಎಂದರೆ ಬರಿ ಪ್ರೀತಿ ಪ್ರೇಮ ಪ್ರಣಯಕ್ಕೆ ಸೀಮಿತಗೊಳಿಸಿದ್ದ ಕೆಲ ಬರಹಗಾರರನ್ನು ಓದಿದ ನಂತರ ಇದರ ಹೊರತಾಗಿ ಸಮಾಜದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ವರ್ಗ ಸಂಘರ್ಷ, ಹಸಿವು, ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುವ ರೈತರ ಬದುಕು ಬಡತನ ನಿರ್ಗತಿಕರ ಸಮಸ್ಯೆಗಳ ತಮ್ಮ ಗಜಲ್ ಕೃತಿಯ ಸಾಲುಗಳಾಗಿ ಬರೆದಿದ್ದಾರೆ.
ಸುರೇಶ ಬಾಬು ಜಂಬಲದಿನ್ನಿ ರವರ ಚೊಚ್ಚಲ ಗಜಲ್ ಕೃತಿಯಾಗಿ ಲೋಕಾರ್ಪಣೆಯಾಗಿರುವ “ದಾರಿ ತೋರಿದ ಕಂದೀಲು” ಕೃತಿಯ ಬಹುತೇಕ ಗಜಲ್ ಷೇರ್ ಗಳು ಅಸಮಾನತೆಯ ವಿರುದ್ದ, ಮನುಜ ಆಲದ ಮರದ ಬೇರುಗಳಂತೆ ಜೋತು ಬಿದ್ದಿರುವ ಮೌಢ್ಯದ ಆಚರಣೆಗಳ ವಿರುದ್ಧ, ಜಾತಿ ವ್ಯವಸ್ಥೆಯ ವಿರುದ್ದ, ಶೋಷಣೆಯಿಂದ ಅನುಭವಿಸಿದ ವ್ಯಕ್ತಿಯ ಅಂತರಂಗದ ಭಾವನೆಗಳು ಇಲ್ಲಿ ಗಜಲ್ ನ ಸಾಲುಗಳಾಗಿವೆ.
ದಾರಿ ತೋರಿದ ಕಂದೀಲು ಕೃತಿಗೆ ಗಜಲ್ ಕಾರರಾದ ನೂರ್ ಅಹಮದ್ ನಾಗನೂರ ರವರು ಸೊಗಸಾಗಿ ಮುನ್ನುಡಿ ಬರೆದಿದ್ದು, ಡಾ.ಶಿವಕುಮಾರ ದಂಡಿನ ಅಪರ ಪೋಲೀಸ್ ಅಧೀಕ್ಷಕರು ರಾಯಚೂರು ಇವರು ಬೆನ್ನುಡಿ ಬರೆದು ಹಾರೈಸಿದ್ದಾರೆ.
ಕಂದೀಲು ಎಂದರೆ ವಿದ್ಯುತ್ ದೀಪಗಳು ಇರದಿದ್ದ ಕಾಲದಲ್ಲಿ ಬೆಳಕಿಗಾಗಿ ಮಾನವ ಕಂಡುಹಿಡಿದ ಲಾಂದ್ರ ಅದರೆ ಅದೊಂದು ಬುಡ್ಡಿದೀಪ ಎಣ್ಣೆ, ಸೀಮೆಎಣ್ಣೆಯಿಂದ ಹರಿಯುತ್ತಿದ್ದ ದೀಪ. ಈ ಬಡ್ಡಿ ದೀಪ ಬಹಳಷ್ಟು ಜನರ ಮನೆಯನ್ನು ಬೆಳಗಿಸಿ, ಬದುಕನ್ನು ಬೆಳಗಿಸಿದೆ. ದಾರಿ ತೋರಿದ ಕಂದೀಲು ಕೃತಿಯ ಶೀರ್ಷಿಕೆಯೆ ಸೊಗಸಾಗಿದ್ದು ಅದಕ್ಕೆ ಹಾದಿಮನಿ ರವರು ಸೊಗಸಾದ ಮುಖಪುಟವನ್ನು ರಚಿಸಿದ್ದಾರೆ.
ದಾರಿ ತೋರಿದ ಕಂದೀಲು ಗಜಲ್ ಕೃತಿಯಲ್ಲಿ ಸುಮಾರು ಅರವತ್ತು ಗಜಲ್ ಗಳಿವೆ. ಪ್ರೀತಿ, ಪ್ರೇಮ, ವಿರಹದ ಗಜಲ್ ಗಳು ಬಹುತೇಕ ವಿರಳವಾಗಿವೆ. ಕೃತಿಯ ಕೆಲವು ಗಜಲ್ ಷೇರ್ ಗಳನ್ನು ನೋಡೋಣ.
ಜೀವಂತವಿದ್ದಾಗ ಹೊಟ್ಟೆಗೆ ಅಂಬಲಿ ಕಾಣಲಿಲ್ಲ
ಹೆಣ ಹೂಳಲು ಹೂಗಳು ಹಾಸುತಿವೆ ಮಸಣದಲಿ
ಈ ಗಜಲ್ ಷೇರ್ ನಲ್ಲಿ ಮನುಜನ ಬದುಕಿನ ರೀತಿಯನ್ನು ವಿವರಿಸುತ್ತಾರೆ ತಂದೆ ತಾಯಿಗಳು ಬಹಳಷ್ಟು ಕಷ್ಟಪಟ್ಟು ಕೂಲಿ ಮಾಡಿ ಕಡಗೆ ಭಿಕ್ಷೆಯನ್ನು ಬೇಡಿಯಾದರು ತಮ್ಮ ಮಕ್ಕಳನ್ನು ಸಾಕಿ ದೊಡ್ಡವರು ಮಾಡಿ ಅವರು ಉನ್ನತವಾದ ಸ್ಥಾನಕ್ಕೆ ಹೋಗುವಂತೆ ಮಾಡುತ್ತಾರೆ. ಅವರಿಗೆ ವಯಸ್ಸಾದ ಕಾಲದಲ್ಲಿ ಅವರು ಜೀವಂತವಾಗಿ ಇದ್ದಾಗ ಅವರ ಹಸಿವನ್ನು ನೀಗಿಸಲು ಅಂಬಲಿಯನ್ನು ಕೂಡ ನೀಡದ ಮಕ್ಕಳು ಅವರು ಸತ್ತಾಗ ವಿಜೃಂಭಣೆಯಿಂದ ಪಟಾಕಿ ಸಿಡಿಸುತ್ತಾ, ವಾದ್ಯ ಡಂಗೂರಗಳ ಮೂಲಕ ಹೆಣವನ್ನು ವಿವಿಧ ಅಲಂಕಾರಿಕ ಹೂಗಳನ್ನು ಹಾಸಿ ಮಸಣದಲಿ ಹೂಳುವ ನಿಜವಾದ ಚಿತ್ರಣವನ್ನು ಈ ಷೇರ್ ನಲ್ಲಿ ಚಿತ್ರಿಸಿದ್ದಾರೆ.
ದಾರಿ ತಪ್ಪಿಸಿ ಧರ್ಮದೆಂಜಲು ಬಡಿಸಲು ಹೊರಟಿದೆ
ಅಂಬೆಗಾಲುಗಳಿಗೆ ಮೌಡ್ಯತೆ ಉಣಿಸಲು ಹೊರಟಿದೆ
ಪ್ರಸ್ತುತ ದಿನಮಾನಗಳಲ್ಲಿ ಭಾರತದಂತಹ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಧರ್ಮದ ಮೋಹ ಹೆಚ್ಚಾಗಿ ಜನರನ್ನು ದಾರಿ ತಪ್ಪಿಸಿ ಅವರ ಮನದೊಳಗೆ ಜಾತಿ ಧರ್ಮ ವೆಂಬ ಭಾವನಾತ್ಮಕ ವಿಷಯವನ್ನು ತುಂಬಿ ಮನುಜ ಮನುಜರ ನಡುವೆ ದ್ವೇಷದ ಭಾವನೆಗಳನ್ನು ಬಿತ್ತಿ ಸಮಾಜದೊಳಗೆ ಅಶಾಂತಿಯನ್ನು ಉಂಟು ಮಾಡುತ್ತಿದ್ದಾರೆ. ಈ ದೇಶದಲ್ಲಿ ಹುಟ್ಟಿ ಅಂಬೆಗಾಲು ಇಡಲು ಪ್ರಯತ್ನ ಪಡುತ್ತಿರುವ ಎಳೆ ಮಕ್ಕಳ ಮನಸ್ಸಿನಲ್ಲಿ ಅವರಿಗೆ ಧರ್ಮ, ದೇವರು, ಜಾತಿ ಮತ ಮೇಲು ಕೀಳು ಮುಂತಾದ ವಿಷಯಗಳನ್ನು ಅಹಾರವಾಗಿ ಅವರಿಗೆ ಉಣಬಡಿಸುತ್ತಿದ್ದಾರೆ ಎಂಬ ಸೂಕ್ಷ್ಮ ವಿಚಾರಗಳನ್ನು ತಮ್ಮ ಗಜಲ್ ಸಾಲುಗಳಲ್ಲಿ ಮನೋಜ್ಞವಾಗಿ ಓದುಗರ ಮನಸ್ಸನ್ನು ಸೆಳೆಯುವ ಹಾಗೆ ಕಟ್ಟಿಕೊಟ್ಟಿದ್ದಾರೆ.
ಅಂಗುಲಿಮಾಲಾ ಬುದ್ಧನ ಸ್ಪರ್ಶಕ್ಕೆ ಮನುಷ್ಯನಾದ
ಬುದ್ಧನ ಬೋಧನೆಗೆ ಮಣ್ಣು ಎರಚಲು ಹೊರಟಿದ್ದಾರೆ
ಪ್ರಪಂಚದಲ್ಲಿ ಅದರ್ಶ ವ್ಯಕ್ತಿಯಾಗಿ ಉಳಿದವರು ಗೌತಮ ಬುದ್ದ, ಅವರ ಬೋಧನೆಗಳು ಅವರ ಆದರ್ಶಗಳು ಸಾವಿರಾರು ವರ್ಷಗಳು ಕಳೆದರೂ ಇಂದಿಗೂ ಕೂಡ ಇಂದಿಗೂ ಕೂಡ ಪ್ರಚಲಿತದಲ್ಲಿವೆ. ಬುದ್ದ ತನ್ನ ಅನುಯಾಯಿಗಳ ಜೊತೆಯಲ್ಲಿ ಮನುಜನ ಮನದಲ್ಲಿ ನೆಲೆಸಿರುವ ಅಸೆ ಆಂಧಕಾರಗಳನ್ನು ತೊಲಗಿಸುವ ಸಮಾಜದೊಳಗೆ ಶಾಂತಿಯನ್ನುಂಟು ಮಾಡುವ ಭೋಧನೆಯ ಪರ್ಯಟನೆಯಲ್ಲಿ ಇರುವಾಗ ಅಂಗುಲಿ ಮಾಲನಂತಹ ಒಬ್ನ ಕಟುಕ ಅವರ ಮಾತುಗಳಿಗೆ, ಅವರ ಅಪ್ಪುಗೆಯ ಸ್ವರ್ಶಕ್ಕೆ ತನ್ನ ಕೃತಿಯನ್ನು ಬಿಟ್ಟು ಮಾನವತ್ವ ಬೆಳೆಸಿಕೊಂಡು ಅವರ ಶಿಷ್ಟ ನಾಗುತ್ತಾನೆ. ಪ್ರಸ್ತುತ ದಿನಗಳಲ್ಲಿ ಬುದ್ದನ ಭೋಧನೆಗಳನ್ನು ಅವರ ನೀತಿಯುಕ್ತ ಸಂದೇಶಗಳ ಮೇಲೆ ಮಣ್ಣು ಎರಚಿ ನಾಶ ಮಾಡುವಂತಹ ಮನಸ್ಥಿತಿ ಈ ಸಮಾಜದಲ್ಲಿ ನಿರ್ಮಾಣವಾಗಿದೆ ಎಂದು ಇಂದಿನ ಸಮಾಜದಲ್ಲಿ ಘಟಿಸುತ್ತಿರುವ ಸನ್ನಿವೇಶಗಳನ್ನು ಮಾರ್ಮಿಕವಾಗಿ ಬರೆಯುತ್ತಾ ಮನುಜನ ಮನವನ್ನು ತಿದ್ದಲು ಪ್ರಯತ್ನ ಪಟ್ಟಿದ್ದಾರೆ.
ಚಪ್ಪಲಿ ಹೊಲೆಯುವವರು ನಾವು, ಮೆಟ್ಟಲು ಚಪ್ಪಲಿ ಬೇಕಾದವು ನಾವೇಕೆ ಬೇಡ
ಕುಣಿ ತೊಡುವ ನಾವು ಶವ ಹೂಳಲು ಕುಣಿಕೆಗಳು ಅಸನವಾದವು ನಾವೇಕೆ ಬೇಡ

ಈ ಗಜಲ್ ಷೇರ್ ಶ್ರೇಣೀಕೃತ ಸಮಾಜದಲ್ಲಿ ಇನ್ನೂ ತಾಂಡವಾಡುತ್ತಿರುವ ಜಾತಿ ವ್ಯವಸ್ಥೆಯ ಶೋಷಣೆಯನ್ನು ನೋವಿನ ಮೂಲಕ ಹೇಳುತ್ತಾರೆ. ಹಿಂದಿನ ಕಾಲದಲ್ಲಿ ಶ್ರೇಣಿಕೃತ ಜಾತಿಯ ವ್ಯವಸ್ಥೆಯು ಇತ್ತು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ಇವರ ಕೆಳಗೆ ಇದ್ದವರು ಪಂಚಮರು. ಇವರ ವೃತ್ತಿ ಸತ್ತ ಪ್ರಾಣಿಗಳನ್ನು ಎಳೆದು ಹಾಕುವು ಕಕ್ಕಸು ಗುಂಡಿಯನ್ನು ಸ್ಚಚಗೊಳಿಸುವುದು ಉಳ್ಳವರ ಮನೆಗಳಲ್ಲಿ ಜೀತದಾಳುಗಳಾಗಿ ಕೆಲಸ ಮಾಡುವುದು. ಊರಲ್ಲಿ ಸತ್ತ ಪ್ರಾಣಿಗಳನ್ನು ಊರ ಹೊರಗೆ ತಂದು ಅದನ್ನು ಸುಲಿದು ಹದ ಮಾಡಿ ಚಪ್ಪಲಿ ಹಲಗೆ ತಯಾರಿಸುವ ಕಾಯಕವಾಗಿತ್ತು ಪಂಚಮರದು. ನಾವು ಮುಟ್ಟಿ ಹದಗೊಳಿಸಿ ನಮ್ಮ ಕೈಯಿಂದಲೇ ತಯಾರಿಸುವ ಚಪ್ಪಲಿ ಬೇಕು ನಿಮಗೆ, ಅದರೆ ನಾವು ಬೇಕಾಗಿಲ್ಲ ಯಾಕೆಂದರೆ ನಾವು ನಮ್ಮ ಕೀಳು ಜಾತಿಯೆಂದು ಗುರುತಿಸಿರುವಿರಿ. ನಾವು ತಯಾರಿಸುವ ಚಪ್ಪಲಿಯನ್ನು ತೊಟ್ಟಾಗ ನಿಮ್ಮ ದೇಹ ಮೈಲಿಗೆಯಾಗುವುದಿಲ್ಲ, ಅದರೆ ನಿಮ್ಮಂತೆಯೆ ಇರುವ ಮನುಷ್ಯನನ್ನು ಮುಟ್ಟಿದಾಗ ನಿಮ್ಮ ದೇಹ ಮೈಲಿಗೆಯಾಗುತ್ತದೆ.ಅಲ್ಲವೇ? ನಿಮ್ಮಗಳ ಮನೆಯಲ್ಲಿ ಯಾರಾದರೂ ಸತ್ತಾಗ ಗುಳಿಯನ್ನು ತೊಡಲು ನಮ್ಮ ಜನ ಬೇಕು ಶವವನ್ನು ಊಳಲು ನಮ್ಮ ಸಲಕರಣೆಗಳು ಬೇಕು ಅದರೆ ನಾವು ಬೇಕಿಲ್ಲ ನಿಮಗೆ ಎಂದು ಅಂಧಕಾರದಲ್ಲಿ ಮುಳುಗಿರುವ ಮನುಷ್ಯನ ಮನಸ್ಥಿತಿಯನ್ನು ಸೂಕ್ಷ್ಮವಾಗಿ ಬಿಚ್ಚಿಡುತ್ತಾರೆ ಗಜಲ್ ಕಾರ ಜಂಬಲಗಿ.
ಭೇದ ಭಾವಗಳ ಕಿತ್ತೆಸೆದು ಭವದ ಬೇರು ಬಿತ್ತಬೇಕಾಗಿದೆ ಅಸಮಾನತೆಯ ಹಿರಿ ಕಿರಿದು ಎಸೆದು ಸುಡಬೇಕಿದೆ ನಾನು ಈ ಷೇರ್ ನಲ್ಲಿ ಗಜಲ್ ಕಾರ ಹೇಳುತ್ತಾರೆ ಮನುಷ್ಯನ ಮನುಷ್ಯರ ನಡುವೆ ಕೆಳೆಯಂತೆ ಬೆಳೆದು ಇಡೀ ದೇಶವನ್ನು ಅವರಿಸಿಕೊಂಡಿರುವ ಮೇಲು ಕೀಳು ಎಂಬ ಭೇದಭಾವವನ್ನು ಬಡವ ಶ್ರೀಮಂತನೆಂಬ ಅಸಮಾನತೆಯನ್ನು ಬುಡ ಮಟ್ಟ ಕಿತ್ತೆಸೆದು ಹೊಸ ಹುಟ್ಟನ್ನು ನೀಡುವ ಸಮಾನತೆಯ ಬೇರನ್ನು ಈ ದೇಶದಲ್ಲಿ ಬಿತ್ತಬೇಕಾಗಿದೆ. ಉಳ್ಳವರು ಇಲ್ಲದವರು ಎಂಬ ಅಸಮಾನತೆಯನ್ನು ಸುಡಬೇಕಾಗಿದೆ ಎಂದು ಬಹಳಷ್ಟು ಮಾರ್ಮಿಕವಾಗಿ ಈ ಗಜಲ್ ಷೇರುಗಳನ್ನು ಬರೆದಿದ್ದಾರೆ.
ಅವರು ದೇವಮಾನವರು ಕಾಲು ಚಾಚಿ ಕಾಮಕ್ಕೆ ಕರೆದರು
ಹೇಸಿಗೆಯ ಹಾಸಿಗೆಯಲಿ ಬಾಡಿದ ಹೂಗಳ ಸದ್ದು …
ಈ ಷೇರ್ ನಲ್ಲಿ ಖಾವಿ ಬಟ್ಟೆಯನ್ನು ಧರಿಸಿ ತಾವು ದೇವ ಮಾನವರೆಂದು ಹೇಳಿಕೊಳ್ಳುವ ಧಾರ್ಮಿಕ ಮುಖಂಡರು ಮಠಾಧಿಪತಿಗಳು ಜನರ ಮನಸ್ಸಿನಲ್ಲಿ ಪೂಜಿಸಲ್ಪಡುತ್ತಾರೆ ಮತ್ತು ಜನರು ಕೂಡ ಅವರನ್ನು ಭಕ್ತಿ ಭಾವದಿಂದ ಕಾಣುತ್ತಾರೆ. ಇಂದಿನ ಪ್ರಸ್ತುತ ದಿನಮಾನಗಳಲ್ಲಿ ಮಠಾಧೀಶರು ತಮ್ಮ ಮನದೊಳಗಿನ ಪ್ರೇಮ, ದೇಹದೊಳಗಿನ ಕಾಮವನ್ನು ನಿಯಂತ್ರಿಸಿಕೊಳ್ಳಲಾಗದ ನರಮನುಜನಂತೆ ಉಳಿದು ತಮ್ಮಕಾಮ ತೃಷೆಗಾಗಿ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಅವರ ಹೇಸಿಗೆ ಹಾಸಿಗೆಯಲ್ಲಿ ಸಣ್ಣಪುಟ್ಟ ಎಳೆ ಕಂದಮ್ಮ ಗಳು ಕೂಡ ಎಳೆ ಹೂವುಗಳಂತೆ ನಲುಗಿ ಹೋಗುತ್ತಿದ್ದಾರೆ.ಎಂದು ಇಂದಿನ ಸ್ವಾಮಿಜಿಗಳ ಮನಸ್ಥಿತಿಯನ್ನು ಈ ಸಾಲುಗಳಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ.
ಗುಡಿ ಗುಂಡಾರ ಅಲೆದರು ಕರ್ಮ ಕಳೆಯಲೆಂದು
ಹಣೆಗೆ ವಿಭೂತಿ ಲೇಪಿಸಿದರು ಶಾಪ ಅಳಿಯಲಿಲ್ಲ
ಭುವಿಯೊಳಗೆ ಹುಟ್ಟಿದ ಮನುಜ ಸ್ನೇಹ ಜೀವಿ ಪರೋಪಕಾರಿಯಾಗದೆ ತಂದೆತಾಯಿಗಳನು ಪೂಜಿಸದೆ ಪೋಷಿಸದೇ , ಬಡವರಿಗೆ ಮೋಸ ಮಾಡುತ್ತಾ, ಅನ್ಯಾಯದ ಹಾದಿಯನ್ನು ಹಿಡಿದು ತಾನು ಮಾಡಿದ ಕರ್ಮಗಳನ್ನು ಕಳೆಯಲು ವಿವಿಧ ಗುಡಿಗಳನ್ನು ಸುತ್ತುತ್ತಾ ದೇವರನ್ನು ಪ್ರಾರ್ಥನೆ ಸಲ್ಲಿಸುತ್ತಾರೆ ಅವರು ಮಾಡಿರುವ ಕರ್ಮವು ಕಳೆಯಲಿ ಎಂದು, ಹಣೆ ವಿಭೂತಿ ಧರಿಸಿ ತೀರ್ಥ ಯಾತ್ರೆ ಮಾಡಿದರು ಅವರು ಮಾಡಿದ ಶಾಪಗಳು ತೊರೆಯಲಿಲ್ಲ ಎಂದು ಮನುಜ ಪಾಪಕರ್ಮಗಳ ಬಗ್ಗೆ ಈ ಗಜಲ್ ನಲ್ಲಿ ತಿಳಿಸುತ್ತಾರೆ.
ಗುಡಿಸಲು ಗವಿಯಾದ ಅರುವಿನ ಗುಂಗು ಹಿಡಿಸ್ಯಾಳ ಅರಮನೆಯ ಆನಂದವ ಆಳ್ತlನ ಅಂದಾಳ ನನ್ನವ್ವ
ಹಸಿದವರಿಗೆ ಅಂಬಲಿ ನೀಡಿದ ರೈತರು ದೇವರಾಗಲಿಲ್ಲ ಉಪವಾಸದಿ ಹೊಟ್ಟೆ ಬಟ್ಟೆ ಕಟ್ಟಿದವರು ದೇವರಾಗಲಿಲ್ಲ
ಮುಂತಾದ ಷೇರ್ ಗಳು ಓದುಗ ಮನದಾಳವನ್ನು ತಲುಪುತ್ತವೆ. ಇಂತಹ ಯುವ ಗಜಲ್ ಕಾರನ್ನು ಪ್ರೋತ್ಸಾಹಯಿಸಬೇಕಾಗಿದೆ.
ಜಂಬದಿನ್ನಿ ರವರು ಮತ್ತಷ್ಟು ಗಜಲ್ ಕಾವ್ಯವನ್ನು ಅಧ್ಯಯನ ಮಾಡಿ, ಬರೆದು ಇನ್ನಷ್ಟು ಕೃತಿಗಳನ್ನು ಹೊರತಂದು ಯುವ ಗಜಲ್ ಕಾರರಿಗೆ ಮಾರ್ಗದರ್ಶನ ನೀಡಲಿ ಸಮಾಜದಲ್ಲಿ ಗೌರವ ಪುರಸ್ಕಾರಗಳು ಪ್ರಾಪ್ತಿಯಾಗಲಿ ಎಂದು ಪತ್ರಿಕೆಯ ಪರವಾಗಿ ಮತ್ತು ವೈಯಕ್ತಿಕವಾಗಿ ಹಾರೈಸುತ್ತೇನೆ.
- ನಾರಾಯಣಸ್ವಾಮಿ (ನಾನಿ) – ವಕೀಲರು ಮತ್ತು ಲೇಖಕರು, ಮಾಲೂರು ಕೋಲಾರ ಜಿಲ್ಲೆ
