‘ಹರಿವ ನಿಲ್ಲಿಸದಿರುತಾಯೇ’ ಕೃತಿ ಪರಿಚಯ

ಎಂ ಮನೋಹರ ಪೈ ಅವರ  ‘ಹರಿವನಿಲ್ಲಿಸದಿರು ತಾಯೇ’… ಎಂಬ ಪ್ರಭಾವಿ ಶೀರ್ಷಿಕೆಯೇ ಈ ಕಾದಂಬರಿಯತ್ತ ಸೆಳೆದದ್ದು. ಕಾದಂಬರಿಯೂ ಸಹ ಆ ಪ್ರಭಾವವನ್ನು ತನ್ನೊಳಗೆ ಉಳಿಸಿಕೊಂಡಿದೆ. ಈ ಕೃತಿಯ ಕುರಿತು ಗಣೇಶ್ ಪ್ರಸಾದ್ ಮಂಜೇಶ್ವರ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕಾದಂಬರಿ: ಹರಿವ ನಿಲ್ಲಿಸದಿರುತಾಯೇ
ಲೇಖಕರು : ಎಂ ಮನೋಹರ ಪೈ
ಪ್ರಕಾಶನ : ಸಾಹಿತ್ಯ ಸುಧೆ ಪ್ರಕಾಶನ

ಉತ್ತರದಲ್ಲಿ ಹರಿಯುತ್ತಿದ್ದ ಸರಸ್ವತಿ ನದಿಯು ಕಾಲ ಚಕ್ರದ ಉರುಳುವಿಕೆಯ ನಡುವೆ ತನ್ನ ಹರಿವನ್ನು ಅಂತರ್ಮುಖಿಯಾಗಿಸಿ ಗುಪ್ತಗಾಮಿನಿಯಾಗಿ ಹೋದಳು. ಆದರೆ ಈ ನದಿ ತೀರದಲ್ಲಿ ಬೆಳೆದ ಸಾರಸ್ವತ ಜನಾಂಗವು ಮಾತ್ರ ಐತಿಹ್ಯವನ್ನು ಕೆದಕಿ ನೋಡಿದಾಗಲೂ ಚರಿತ್ರೆಯ ಪುಟ ತಿರುವಿ ನೋಡಿದಾಗಲೂ ನಿರಂತರ ಚಲನಶೀಲವಾಗಿ ಬೆಳೆದು ಬಂದದ್ದು ಕಾಣಿಸುತ್ತದೆ.

ತಮ್ಮ ಧರ್ಮ, ಸಂಸ್ಕೃತಿ ಮತ್ತು ಆಚಾರಗಳನ್ನು ಪರಕೀಯರಾದ ಪೋರ್ಚುಗೀಸರ ಧಾಳಿಯಿಂದ ರಕ್ಷಿಸಿಕೊಳ್ಳಲು ಇವರು ಕೈಗೊಂಡ ದಕ್ಷಿಣದತ್ತಲಿನ ಪಯಣ ಮತ್ತು ಅನುಭವಿಸಿದ ಕಷ್ಟನಷ್ಟಗಳು ಮತ್ತು ಮಾಡಿದ ಹೋರಾಟ, ಇವರ ಕುಲಧರ್ಮ ಉಳಿಸಿದ್ದು ಮಾತ್ರವಲ್ಲ ಎಲ್ಲೇ ನೆಲೆಸಿದರೂ ಅಲ್ಲಿಗೆ ಬೇಗನೆ ಒಗ್ಗಿಕೊಂಡು ಮುಂಚೂಣಿಗೆ ಬಂದು ಎಲ್ಲದರಲ್ಲೂ ಮುಂದಿರುವ ಚಾಕಚಕ್ಯತೆಯನ್ನು ವಂಶವಾಹಿಯಲ್ಲೇ ಉದ್ಭವಿಸುವ ಹಾಗೆ ಮಾಡಿದೆ ಎಂಬುದು ನನ್ನ ಅಭಿಪ್ರಾಯ.

ಗೋಪಾಲ ಕೃಷ್ಣ ಪೈಗಳ ಸ್ವಪ್ನ ಸಾರಸ್ವತ ಕೃತಿಯು ಸಾರಸ್ವತರ ಕರ್ಮ ಕಥೆಯನ್ನು ಐತಿಹ್ಯ ಮತ್ತು ಚರಿತ್ರೆಗಳಿಗೆ ಇಳಿದು ನಾಜೂಕಿನಿಂದಲೇ ಪರೀಕ್ಷಿಸಿ ಪ್ರಕಾಶಿಸಿದೆ. ಆ ಕೃತಿಗೆ ಒಂದು ಗದ್ಯ ಮಹಾ ಕಾವ್ಯದ ಹರಹೇ ಇದೆ. ಮನೋಹರ ಪೈಗಳು ಕಾದಂಬರಿಗಾಗಿ ಇದೇ ವಸ್ತುವನ್ನು ಬೇರೊಂದು ಕಾಲಘಟ್ಟದಲ್ಲಿ ಎತ್ತಿ ಕೊಳ್ಳುತ್ತಾರೆ. ಸ್ವಪ್ನ ಸಾರಸ್ವತವೇ ಅವರಿಗೆ ಈ ಕೃತಿಗೆ ಪ್ರೇರಣೆಯಾಗಿರಬಹುದು. ಸ್ವಪ್ನ ಸಾರಸ್ವತವು ಒಂದು ಸ್ಥೂಲ ಅಧ್ಯಯನವಾದರೆ ಹರಿವನಿಲ್ಲಿಸದಿರುತಾಯೇ ಒಂದು ಊರು, ಒಂದು ಕಾಲ ಘಟ್ಟ, ಒಂದಷ್ಟು ಪಾತ್ರಗಳ ಸುತ್ತ ಸುತ್ತುತ್ತ ಸೂಕ್ಷ್ಮಕ್ಕೆ ಇಳಿಯುತ್ತದೆ. ಆದರೂ ಇದು ಸ್ವಪ್ನ ಸಾರಸ್ವತದ ಕಾದಂಬರಿಯಲ್ಲಿ ಹೇಳಲಾದ ಮೌಲ್ಯಗಳನ್ನೇ ಆಧುನಿಕ ಕಾಲದಲ್ಲಿ ಪರೀಕ್ಷಿಸುತ್ತದೆ.

ಎಲ್ಲರ ಮನೆಯ ದೋಸೆಯೂ ತೂತೇ ಎಂಬಂಥ ಕಥೆ ಇಲ್ಲಿ ಇದೆಯಾದರೂ ನಿಜಕ್ಕೂ ಅಂಥಾ ಕಥೆಗಳಿಗೆ ನಾವು ಬೇಗ ಬೆಸೆದು ಕೊಳ್ಳುವುದು ಮತ್ತು ಸ್ಪಂದಿಸುವುದು. ಜಿ ಎಸ್ ಬಿ ಶೈಲಿಯಲ್ಲಿಯೇ ಪೈಗಳು ದೋಸೆ ತಿರುವಿ ಹಾಕಿರುವುದರಿಂದ ಅನೇಕರಿಗೆ ಇದು ಹೊಸ ರುಚಿಯೇ ಆಗುತ್ತದೆ. ಇದಕ್ಕೊಂದು ಕೊಂಕಣಿ ಘಮಲಿದೆ. ಗೌಡಸಾರಸ್ವತ ಸಮುದಾಯದ ದೇವಾಲಯ ಸಂಸ್ಕೃತಿ, ಆಹಾರ ಪದ್ಧತಿ, ಆಚಾರವಿಚಾರಗಳು, ಚಿಂತನಾ ಕ್ರಮಗಳನ್ನು ಸಾದರ ಪಡಿಸಿದ ಶೈಲಿ ಅತ್ಯುತ್ತಮವಾಗಿದೆ. ಇದು ಅರಿಯದ ಇತರರಿಗೆ ಪರಿಚಯದಂತಿದ್ದರೆ ಅರಿತೂ ಮರೆತ ಅಥವಾ ಮರೆಯುವ ಸಾಧ್ಯತೆಯಿರುವ ಹೊಸ ತಲೆಮಾರಿಗೆ ಎಷ್ಟೋ ಜನರ ತ್ಯಾಗ ಬಲಿದಾನಗಳಿಂದ ಉಳಿದುಕೊಂಡ ನಮ್ಮ ಈ ಸಂಸ್ಕೃತಿಯಿಂದ ದೂರವಾಗದಿರಿ ಎಂಬ ನಿವೇದನೆಯೂ ಇದೆ.

ನನಗಂತೂ ಈ ಕಾದಂಬರಿಯ ಪಾತ್ರಗಳು ನನ್ನ ಸುತ್ತಮುತ್ತಲೇ ಇರುವಂಥವು ಎಂದು ಅನ್ನಿಸಿದೆ. ಕಾಡುವಂಥ ಪಾತ್ರಗಳು ಹಲವಾರಿವೆ. ಈ ಕಥೆಯಲ್ಲಿ ಬರುವ ಜಗ್ಗಣ್ಣ, ಅರುಂಧತಿ, ಮಾನ್ವಿ, ಗೋಪಿ ಭಟ್ಟಮಾಮರಂಥ ಪಾತ್ರಗಳು ನಿತ್ಯ ನೋಡುವಂಥವೇ. ಜಾಗತೀಕರಣದ ಉತ್ತುಂಗದಲ್ಲಿ ನಾವಿರುವಾಗ ಚಿಕ್ಕ ಊರೊಂದರ ಕೌಟುಂಬಿಕ ಕಥೆಗೂ ಸಹ ಜಾಗತಿಕ ಹರಹು ಸಿಕ್ಕಿ ಬಿಡುವುದರಲ್ಲಿ ಆಶ್ಚರ್ಯವೇನಿಲ್ಲ. ಬೆಳೆಯುವ ಜಾಗತೀಕರಣದ ಪ್ರವಾಹದಲ್ಲಿ ಮದುವೆ, ಕುಟುಂಬವ್ಯವಸ್ಥೆ, ಆಚರಣೆಗಳು ದಿಕ್ಕು ಬದಲಾಯಿಸಿ ಹರಿಯುತ್ತಿವೆ. ಅಥವಾ ದಿಕ್ಕಾಪಾಲಾಗಿವೆ. ಗಂಭೀರ ಕಾರಣಗಳು ಇಲ್ಲದೇ ಇದ್ದರೂ ಹೆಚ್ಚುತ್ತಿರುವ ವಿವಾಹ ವಿಚ್ಛೆದನಗಳು, ಲಿವ್ ಇನ್ ಸಂಬಂಧಗಳು, ಜಾತಿಯಿಂದ ಹೊರಕ್ಕೆ ನಡೆಯುವ ಮದುವೆಗಳು ಈ ಕಥೆಯಲ್ಲಿ ಬರುವ ಹಿರಿಯ ತಲೆ ಮಾರಿನ ಪಾತ್ರಗಳ ಮನಸ್ಸಲ್ಲಿ ತಲ್ಲಣವನ್ನು ಸೃಷ್ಟಿಸಿದರೆ ಈ ತಲೆಮಾರಿನ ಪಾತ್ರಗಳು ಅವುಗಳನ್ನು ಸಹಜವಾಗಿ ಸ್ವೀಕರಿಸುವ ಮನೋಸ್ಥಿತಿಯನ್ನು ಸಾಧಿಸಿದ್ದಾರೆ. ಹಿರಿ ತಲೆಮಾರಿಗೆ ಕರ್ಮಠ ಚಿಂತನೆಗಳು ಇರುವುದು ಸಹಜ. ಅದು ಸಂಸ್ಕೃತಿಯ ಅಸ್ತಿತ್ವದ ಪ್ರಶ್ನೆ. ಹೊಸ ತಲೆಮಾರಿಗೆ ಬದಲಾವಣೆಗಳಿಗೆ ಒಗ್ಗಿ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆಯಿದೆ. ಹೀಗಿರುವಾಗ ಯಾರು ಸರಿ? ಎಂಬ ಪ್ರಶ್ನೆ ಹುಟ್ಟುತ್ತದಾದರೂ ಇದರ ಉತ್ತರವು ಸಂಕೀರ್ಣವಾಗುತ್ತಾ ಹೋಗುತ್ತದೆ.

ಪತ್ತೋಳಿ, ಪತ್ರೊಡೆ, ಗುಜ್ಜೆ ಫೋಡಿ, ಗಜ್ ಬಜೆ, ಆಳವತಿ, ಗುಳ್ಳಾ ಕೊಳಂಬೆ ಜೇವಣ, ದಾಳಿ ತೋಯ ಮುಗಾ ಗಶಿಗಳು ಇಲ್ಲದಿದ್ದರೆ ನಾಗರ ಪಂಚಮಿಯ ತನು, ಕಾಡು ಹೂಗಳಿಂದ ಚಂದವಾಗುವ ಚೂಡಿ ಪೂಜೆ, ಕುಟುಂಬವು ಎಲ್ಲ ಮರೆತು ಒಂದಾಗುವ ಚೌತಿ, ತೇರು, ಕಾರ್ತಿಕ ಹುಣ್ಣಿಮೆಗಳಿಗೆ ಕಳೆ ಬರಲು ಸಾಧ್ಯವಿಲ್ಲ. ಇಂಥಾ ಆಚರಣೆಗಳೇ ಊರಿಗೆ ಸಿಂಗಾರ. ಬೆಳಗ್ಗೆ ಆರು ಘಂಟೆಗೆಲ್ಲ ಜಿ ಎಸ್ ಬಿ ಹೋಟೆಲುಗಳಲ್ಲಿ ಫಿಲ್ಟರ್ ಕಾಫಿಯ ಜೊತೆ ಬಿಸಿ ಬಿಸಿ ತಿಂಡಿಯ ಪರಿಮಳವು ಲವಲವಿಕೆಯನ್ನು ಹುಟ್ಟುಹಾಕಲೇ ಬೇಕು. ಊರಲ್ಲಿ ಜನವಿಲ್ಲವಾದರೂ ಈ ಜೀವನ ಕ್ರಮವನ್ನು ನಮ್ಮವರು ಇನ್ನೂ ಬಿಟ್ಟಿಲ್ಲ. ಇದಕ್ಕೆಲ್ಲ ಪೆಟ್ಟು ಬೀಳುವ ಭಯವೊಂದು ಈ ಕಾದಂಬರಿಯಲ್ಲಿ ನಿಟ್ಟುಸಿರಾಗಿ ಕಾಡುವುದನ್ನು ನಾನು ಗಮನಿಸಿದ್ದೇನೆ.

ಸರಳ ಕಥನ ಶೈಲಿ, ಸಾತ್ವಿಕವಾದ ಉದ್ದೇಶ ಹೆಚ್ಚು ಅಮೂರ್ತತೆಗೆ ಹೋಗದ ನೇರ ನಿರೂಪಣೆ ಕಾದಂಬರಿಯನ್ನು ಗೆಲ್ಲಿಸುತ್ತವೆ. ಮನೋಹರ ಪೈ ಗಳು ಈಗಾಗಲೇ ಮೂರು ನಾಲ್ಕು ಪುಸ್ತಕಗಳನ್ನು ಪ್ರಕಟಿಸಿರುವ ನುರಿತ ಬರಹಗಾರರು. ಹುಟ್ಟಿ ಬೆಳೆದ ಸಮುದಾಯವನ್ನೇ ಕಥೆಗೆ ಆರಿಸಿ ಕೊಂಡದ್ದು ಮಾತ್ರವಲ್ಲ ಅಲ್ಲಿ ಆಗುತ್ತಿರುವ ಸ್ಥಿತ್ಯಂತರಗಳ ಕುರಿತು ಇವರಿಗಿರುವ ಗಾಬರಿ ನನಗೂ ಪ್ರೇರಣೆಯಾಗುತ್ತದೆ. ಮುಂದಿನ ಬರವಣಿಗೆಗಳಿಗೆ ಶುಭವಾಗಲಿ ಮನೋಹರ ಪೈ ಮಾಮ್…


  • ಗಣೇಶ್ ಪ್ರಸಾದ್ ಮಂಜೇಶ್ವರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading