ಲೇಖಕರ ಬಸವರಾಜು ಮೇಗಲಕೇರಿ ಅವರ ‘ಸಿನೆಮಾ ಬಂಡಿ’ ಕೃತಿಯನ್ನು ತೆರೆದಾಗ ಬಸೂ ಅವರ ಶಿಸ್ತು, ಒಪ್ಪ – ಓರಣಗಳು ಅನಾವರಣಗೊಳ್ಳುತ್ತವೆ. ಈ ಕೃತಿಯ ಕುರಿತು ರಾಘವನ್ ಚಕ್ರವರ್ತಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ: ಸಿನೆಮಾ ಬಂಡಿ
ಲೇಖಕರು: ಬಸವರಾಜು ಮೇಗಲಕೇರಿ
ಪ್ರಕಾಶಕರು: ಪಲ್ಲವರು ಪ್ರಕಾಶನ
ಸಿನೆಮಾ ಬಂಡಿಯಲ್ಲೊಂದು ಸಿನಿಮಾ ಟೂರ್
೯೦ರ ದಶಕದಲ್ಲಿ ‘ ಪತ್ರಿಕೆ ’ಯ ಮೂಲಕ ಪರಿಚಿತರಾದ, ಒಂದೆರೆಡು ವರ್ಷಗಳ ಹಿಂದೆ ಫೇಸ್‍ಬುಕ್ ಮೂಲಕವೂ ಆಪ್ತರಾದ (ನಾನು ಒಮ್ಮೆಯೂ ಭೇಟಿಯಾಗದ) ಬಸವರಾಜು ಮೇಗಲಕೇರಿ (ಬಸೂ), ತಾವು ಸುಮಾರು ಎರಡು ದಶಕಗಳಿಂದ ಅಪಾರ ಆಸ್ಥೆ, ಆಸಕ್ತಿ, ವಸ್ತುನಿಷ್ಠತೆ ಯಿಂದ ಬರೆದ ಸಿನೆಮಾ ಕುರಿತಾದ ಬರಹಗಳನ್ನು ಸಂಗ್ರಹಿಸಿ ‘ಸಿನೆಮಾ ಬಂಡಿ’ ಎಂಬ ಕೃತಿಯನ್ನು ಇತ್ತೀಚೆಗೆ ಪ್ರಕಟಿಸಿದ್ದಾರೆ. ಕೃತಿಯು ಬಸು ಅವರ ಅಪರಿಮಿತ ಸಿನಿಮಾ ಆಸಕ್ತಿ, ಓದು, ಸೂಕ್ಷ್ಮ ಗ್ರಹಿಕೆಗಳ ದ್ಯೋತಕವಾಗಿದೆ.
‘ಸಿನಿಮಾಯಾನ’ ಎಂಬ ಕನ್ನಡ ಸಿನಿಮಾದ ಆಳ-ಅಗಲ-ಎತ್ತರಗಳ ಸಪೂರ ಚಿತ್ರಣ ನೀಡಿದ ಶ್ರೀ.ಕೆ.ಪುಟ್ಟಸ್ವಾಮಿಯವರ (Puttaswamy K) ಮುನ್ನುಡಿ, ಬಸೂ ಅವರ ಈ ಕೃತಿಯನ್ನು ಸಮಗ್ರವಾಗಿ ಪರಿಚಯಿಸುತ್ತದೆ. ಪುಟ್ಟಸ್ವಾಮಿಯವರು ಹೇಳಿರುವ “ಬಸೂ ಯಾವುದೇ ಕ್ಷೇತ್ರವನ್ನು ಬರವಣಿಗೆಗೆ ಆಯ್ದುಕೊಂಡರೂ, ಅದನ್ನು ಸಾಮಾಜಿಕ ಮತ್ತು ಸಮಕಾಲೀನ ಸಂದರ್ಭದಲ್ಲಿ ಒರೆಗೆ ಹಚ್ಚಿ ವಿಶ್ಲೇಷಿಸುವ ಪ್ರತಿಭೆ ಅವರಿಗಿದೆ” ಎಂಬ ಮಾತಿಗೆ ಇಡೀ ಕೃತಿಯಲ್ಲಿ ಪುಷ್ಟಿ ಸಿಗುತ್ತದೆ.

ಕೃತಿಯನ್ನು ತೆರೆಯುತ್ತಿದಂತೆಯೇ ಬಸೂ ಅವರ ಶಿಸ್ತು, ಒಪ್ಪ-ಓರಣಗಳು ಅನಾವರಣಗೊಳ್ಳುತ್ತವೆ. ತಮ್ಮ ಈವರೆಗಿನ ಲೇಖನಗಳನ್ನು ಮೂರು ಅರ್ಥಪೂರ್ಣ ಶೀರ್ಷಿಕೆಗಳಲ್ಲಿ (ವ್ಯಕ್ತಿಗಳು, ಚಿತ್ರಗಳು, ಬೆಳ್ಳಿಹೆಜ್ಜೆಗಳು) ವಿಂಗಡಿಸಿದ್ದಾರೆ. ಇಲ್ಲಿ ಸಂಗ್ರಹವಾದ ಬರಹಗಳು ಶೀರ್ಷಿಕೆಗೆ ಬದ್ಧವಾಗಿವೆ.
ನಾವು ಪಿಯುನಲ್ಲಿದ್ದಾಗ ಕೆವಿ ಜಯರಾಂರನ್ನು ಕುತೂಹಲದಿಂದ ಗಮನಿಸುತ್ತಿದ್ದೆವು. ಒಂಥರಾ ಪುಟ್ಟಣ್ಣರನ್ನು ಹೋಲುತ್ತಿದ್ದಾರೆ ಎನಿಸುತ್ತಿತ್ತು. ಕಾದಂಬರಿಗಳನ್ನು ಆಧರಿಸಿ ಚಿತ್ರಮಾಡುತ್ತಿದ್ದರು. ‘ಹೊಸನೀರು’ ಎಂಬ ವಿಭಿನ್ನ-ಅರ್ಥಪೂರ್ಣ ಚಿತ್ರ ನೀಡಿದ್ದರು. ಅಲ್ಲದೇ ‘ಬೆತ್ತಲೆ ಸೇವೆ’ ಎಂಬ ಪ್ರಯೋಗವನ್ನೂ ಮಾಡಿದ್ದರು (ಈ ಚಿತ್ರಕ್ಕೆ ವಜ್ರಮುನಿಯವರಿಗೆ ರಾಜ್ಯ ಪ್ರಶಸ್ತಿಯೂ ಬಂದಿತ್ತು) . ಆದರೆ ಕಾದಂಬರಿಗಳ ಆಯ್ಕೆಯಲ್ಲಿ ಪ್ರಯೋಗಾತ್ಮಕತೆ ತೋರಲಿಲ್ಲ. ಸಿನಿಮಾ ಮಾಡಲೆಂದೇ ಬರೆದರೇನೋ ಎನಿಸುವ ಕಾದಂಬರಿಗಳನ್ನೇ ಹೆಚ್ಚಾಗಿ ಅವಲಂಬಿಸಿದರು. ಬಹಳಷ್ಟು ನಿರ್ದೇಶಕರು ಮಾಡಿದ್ದು /ಮಾಡುವುದೂ ಇದನ್ನೇ. ತ್ರಿವೇಣಿಯವರ ‘ ಬೆಳ್ಳಿಮೋಡ’, ’ಶರಪಂಜರ’, ’ಹೂವು-ಹಣ್ಣು’ ಬೆಳ್ಳಿ ತೆರೆಯ ಮೇಲೆ ವಿಜೃಂಭಿಸಿದವು. ಆದರೆ ಸಿನಿಮಾಗೆ ಅಳವಡಿಸಲು ಸವಾಲೆಸೆಗುವ ’ಮುಚ್ಚಿದಬಾಗಿಲು’, ನಿರ್ದೇಶಕರನ್ನು ಸೆಳೆಯಲಿಲ್ಲ. ’ಕಥಾಸಂಗಮ’ (ಪುಟ್ಟಣ್ಣ) ಅಥವಾ ’ಒರು ವೀಡು ಇರುವಾಸಲ್’
(ಕೆ ಬಾಲಚಂದರ್) ತರಹದ ಕಥಾನಿರೂಪಣೆ ಬೇಡುವ ’ಮುಚ್ಚಿದಬಾಗಿಲು’ ತರದ ಕೃತಿಗಳು, ನಿರ್ದೇಶಕರ ನಿರೂಪಣಾ ಸಾಮರ್ಥ್ಯವನ್ನು ನಿಕಷಕ್ಕೆ ಒಡ್ಡಬಲ್ಲವು. ವಿಠಲ್ ಗರಡಿಯಲ್ಲಿ ಬೆಳೆದ, ಅವರ ಹಲವು ಸೂಕ್ಷ್ಮಗಳನ್ನು ಕರಗತ ಮಾಡಿಕೊಂಡಿದ್ದ ಜಯರಾಂ ಸ್ವಲ್ಪ ಹೆಚ್ಚು ಪ್ರಯೋಗಗಳಿಗೆ ಒಡ್ಡಿಕೊಳ್ಳಬಹುದಿತ್ತೇನೋ. ಆ ಕಾಲದಲ್ಲಿ ಜಯರಾಂರನ್ನು ಪುಟ್ಟಣ್ಣ ಜೊತಿಗಿಟ್ಟು ಕುತೂಹಲದಿಂದ ನೋಡುತ್ತಿದ್ದ ನಮ್ಮ ಪೀಳಿಗೆಯವರಿಗೆ ಈ ಕೊರೆಯೊಂದು ಇರುತ್ತದೆ. ತನ್ಮಯತೆಯಿಂದ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿಟ್ಟು, ಅರವತ್ತರ ವಯಸ್ಸನ್ನೂ ತಲುಪದೇ ನಿರ್ಗಮಿಸಿದ ಜಯರಾಂ ಬಗ್ಗೆ ಬಸೂ ಹೇಳುವಂತೆ ’ ಅವರ ಚಿತ್ರಗಳೇ ಅವರನ್ನು ಚಿರಕಾಲ ಉಳಿಸುತ್ತದೆ, ನೆನಪಿನಲ್ಲಿಟ್ಟುರುತ್ತದೆ’.
ಎಮ್‍ಟಿ (ವಾಸುದೇವನ್ ನಾಯರ್) ಎಂಬ ಸಾಹಿತ್ಯ-ಸಿನಿಮಾ ಲೋಕದ ಮಾಂತ್ರಿಕನ ಬಗ್ಗೆ ಬರೆಯುತ್ತಾ, ಮಲಯಾಳಮ್ ಚಿತ್ರರಂಗ ಹೇಗೆ ಅವರ ಪ್ರತಿಭೆಯನ್ನು ಸಮರ್ಥವಾಗಿ ದುಡಿಸಿಕೊಂಡಿತು ಎಂಬುದನ್ನು ಬಸೂ ಮನದಟ್ಟುಮಾಡಿಸುತ್ತಾರೆ. ಎಂಟಿ ಯವರ ೭೦ ರ ದಶಕದಲ್ಲಿ ಚಿತ್ರಿತವಾದ (ಅವರೇ ನಿರ್ದೇಶಿಸಿದ) ’ನಿರ್ಮಾಲ್ಯಂ’, ಅವರ ಸಾಹಿತ್ಯ ಕೃತಿಗಳಷ್ಟೇ ಚರ್ಚಿತವಾಗಿದೆ. ಕೇರಳದ ಹಾಗೂ ಅಂತರರಾಷ್ಟ್ರೀಯ ಮಟ್ಟದ ಹಲವು ಚಿತ್ರೋತ್ಸವಗಳಲ್ಲಿಯೂ ’ನಿರ್ಮಾಲ್ಯಂ’ ಚರ್ಚಿತವಾಗುತ್ತಿದೆ. ನಟಿ ಗೀತಾರನ್ನು ಕೇರಳದ ಹೊರಗೂ ಪರಿಚಯಿಸಿದ ’ಪಂಚಾಗ್ನಿ’ ಯ ಕಥೆ ಎಂಟಿಯವರದ್ದೇ. ಮಲಯಾಳಮ್ ಚಿತ್ರಗಳನ್ನು ದೇಶದ ಗಡಿಯಾಚೆ ಕೊಂಡೊಯ್ದ ಆಡೂರ್-ಅರವಿಂದನ್-ಕರುಣ್ ರಷ್ಟೇ, ಎಂಟಿ ಕೂಡಾ ಕಾರಣೀಭೂತರು. ಈ ಬರಹದ ಕೊನೆಯಲ್ಲಿ ಬಸೂ ಅವರ ’ಕನ್ನಡದ ಕಸುವನ್ನು ಕಡೆದಿಟ್ಟ, ಬದುಕನ್ನು ಬಸಿದಿಟ್ಟ ಕಥೆಗಳಿವೆ. ಬಳಸಿಕೊಳ್ಳುವ ಮನಸ್ಸುಗಳು ಬೇಕಷ್ಟೇ.’ ಎಂಬ ಕಳಕಳಿ ನಮ್ಮೆಲ್ಲದರದ್ದೂ ಆಗಿದೆ. ಹೀಗೆಯೇ ಹಲವೆಡೆ ಬಸೂ ನಮ್ಮ ಕಾಳಜಿ-ಕಳಕಳಿಯನ್ನು ಧ್ವನಿಸಿದ್ದಾರೆ.
ಮನ್ನಾಡೆ ಕುರಿತ ಬರಹ ಆರ್ದ್ರವೆನಿಸುತ್ತದೆ. ಅವರು ಹಾಡಿದ ಕೆಲವೇ ಗೀತೆಗಳಲ್ಲಿ, ಎಂಆರ್ ವಿಠಲ್ ನಿರ್ದೇಶನದ ’ಮಾರ್ಗದರ್ಶಿ’ ಯ, ಎಂ ರಂಗರಾವ್ ಸಂಯೋಜಿಸಿದ ’ಇದೇ ಮಣ್ಣ ಈ ದೇಹ’, ’ಅಣುಅಣುವಿನಲ್ಲಿ’ ಕೂಡಾ ಸೇರಿವೆ. ಎರಡೂ ಗೀತೆಗಳ ರಚನೆ ವಿಜಯನಾರಸಿಂಹ ಅವರದ್ದು. ಇಂದಿಗೂ ಗುನುವಂತಿವೆ.
‘ಹೊಡಿ-ಬಡಿ-ಕಟ್ಟು-ಕೊಲ್ಲು’ ತರದ ಚಿತ್ರಗಳಿಗೆ ಸೀಮಿತವಾಗಿಬಿಡಬಹುದಾಗಿದ್ದ ’ಬಾಲಿವುಡ್’ ಖ್ಯಾತಿಯ ಹಿಂದಿ ಚಿತ್ರರಂಗಕ್ಕೆ ಸರಿಯಾದ ದಿಕ್ಕು-ದೆಸೆ ತೋರಿದವರಲ್ಲಿ ಬಂಗಾಳಿ ಹಿನ್ನಲೆಯ ನಿರ್ದೇಶಕ-ತಂತ್ರಜ್ಞರ ಕೊಡುಗೆ ಅಪಾರವಾಗಿದೆ. ಸತ್ಯಜಿತ್ ರೇ- ಮೃಣಾಲ್ ಸೇನ್-ರಿತ್ವಿಕ್ ಘಟಕ್ ಕೊಲ್ಕೊತ್ತೆಗೆ ಸೀಮಿತವಾಗಿಬಿಟ್ಟಾಗ, ಹಿಂದಿ ಚಿತ್ರರಂಗವನ್ನು ಏಕತಾನತೆಯಿಂದ ಬಿಡಿಸುವ ಗಮನಾರ್ಹ ಪ್ರಯತ್ನಗಳನ್ನು ಮಾಡಿದವರು, ಬಿಮಲ್ ರಾಯ್, ಹೃಷಿ ದಾ, ತಪನ್ ಸಿನ್ಹಾ ಇತರರು. ಈ ಪ್ರವೃತ್ತಿಯನ್ನು ಶೂಜಿತ್ ಸರ್ಕಾರ್ ಮುಂದುವರೆಸಿದ್ದಾರೆ. ಹೃಷಿ ದಾ (ಹೃಷಿಕೇಶ್ ಮುಖರ್ಜೀ) ಬಗ್ಗೆ ಬರೆಯುತ್ತಾ, ಲಂಕೇಶ್ ರೊಡಗಿನ ಅವರ ಒಡನಾಟದ ಬಗ್ಗೆ ಸ್ವಾರಸ್ಯಕರ ಅಂಶಗಳನ್ನು ಬಸೂ ದಾಖಲಿಸುತ್ತಾರೆ. ಸಿನಿಮಾ ಮಾಧ್ಯಮದ ಮೇಲೆ ತಮ್ಮ ಹಿಡಿತ ಸಡಿಲವಾಗುತ್ತಿದೆ ಎಂಬುದು ಅರಿವಿಗೆ ಬರುತ್ತಿದಂತೆಯೇ, ಹೃಷಿ ದಾ, ದೂರದರ್ಶನಕ್ಕೆ ಹೊರಳಿದರು. ಹಲವು ಮನನೀಯ ಟೀವಿ ಧಾರಾವಾಹಿಗಳನ್ನು ತಂದರು. ತಮಿಳಿನಲ್ಲಿ ಕೆ.ಬಾಲಚಂದರ್ (ಕೆಬಿ) ಕೂಡಾ, ಹೃಷಿ ದಾ ಹಾದಿಯನ್ನೇ ಹಿಡಿದರು. ಕೆ.ಬಿ ಹಲವು ಸ್ಮರಣೀಯ, ಮನೋಜ್ಞ ಟೀವಿ ಸರಣಿಗಳನ್ನು ತಂದರು.
’ಕನ್ನಡದ ಮಂದಹಾಸ-ರಾಜ್’ ಎಂಬ ಅಣ್ಣಾವ್ರ ಬರಹ, ಕೃತಿಯ ‘ವ್ಯಕ್ತಿಗಳು’ ವಿಭಾಗದಲ್ಲಿನ ಹೈಲೈಟ್. ಅಣ್ಣಾವ್ರನ್ನು ಅವರ ಅಭಿನಯ ಶ್ರೀಮಂತಿಕೆಗೆ ಮೀಸಲಾಗಿಸದೇ, ತೆರೆಯಿಂದಾಚೆಯ ಅವರ ಜೀವಪರತೆಯನ್ನು ಬಸೂ ಬಿಚ್ಚಿಡುತ್ತಾರೆ.
ಪಕ್ಕದ ಪಾಕೀಸ್ಥಾನದಲ್ಲಿ ಹುಟ್ಟಿ, ದೇಶ ವಿಭಜನೆಯಾದಾಗ ಬರಿಗೈ ದಾಸನಾಗಿ ಅಮೃತಸರ ತಲುಪಿ, ಮಲತಾಯಿಯ ಧೋರಣೆ ಸಹಿಸಲಾಸಾಧ್ಯವಾಗಿ ಮುಂಬೈಗೆ ಓಡಿಬಂದು ಕಾರ್ ಗೆರಾಜ್ ಒಂದರಲ್ಲಿ ಬಣ್ಣ ಬಳಿಯುವ ಕಾಯಕಕ್ಕಿಳಿದ ಸಂಪೂರಣ್ ಸಿಂಗ್ ಕಾಲ್ರಾ ಎಂಬ ಹುಡುಗ, ’ಗುಲ್ಜ಼ಾರ್’ ಆಗಿ ಹಿಂದಿ ಚಿತ್ರರಂಗವನ್ನು ಅಚ್ಚರಿಗೊಳಿಸುವ ಸಾಧನೆಮಾಡಿದ ಕಥೆಯನ್ನು ಬಸೂ ನವಿರಾಗಿ ಹೇಳಿದ್ದಾರೆ. ಈ ಸಾಧನೆಯ ಹಿಂದೆ ಬಹುತ್ವ ಭಾರಯದ ಪಾತ್ರವನ್ನು ಎತ್ತಿ ತೋರುವ ಸೂಕ್ಷ್ಮತೆಯೂ ಇಲ್ಲಿದೆ.
ಬರಿಯ ಸ್ಟಾರ್ ಅಥವಾ ಸ್ಟಾರ್ ಮೇಕರ್ಸ್ ಗೆ ತಮ್ಮ ಬರಹ ಸೀಮಿತಗೊಳಿಸದೇ, ಸಿನಿಮಾದ ಹಿಂದೆ ಎಲೆಮರೆಯ ಕಾಯಿಯಂತೆ ನಿಸ್ಪೃಹವಾಗಿ ದುಡಿಯುವ ಶ್ರಮಜೀವಿಗಳನ್ನೂ ಬಸೂ ನೆನೆಯುತ್ತಾರೆ. ಪೋಸ್ಟರ್ ಡಿಸೈನ್ ಮಾಡುವ ಮಣಿಯ ಬಗ್ಗೆ ಅಷ್ಟೇ ಕಾಳಜಿಯಿಂದ ಚಿತ್ರಿಸುತ್ತಾರೆ.
ಬಾಲಣ್ಣ ನ ಬಗೆಗಿನ ಬರಹ ಬಹಳ ಆಪ್ತವೆನಿಸುತ್ತದೆ. ಶ್ರವಣಸಮಸ್ಯೆಯಿಂದ ಅಕ್ಕ-ಪಕ್ಕದವರ, ಸಹೋದ್ಯೋಗಿಗಳ ಅವಹೇಳನಕ್ಕೊಳಗಾಗಿ ಝರ್ಝರಿತರಾಗುತ್ತಿದ್ದ ಬಾಲಣ್ಣ, ಮೂಲತಃ ಮಹಾ ಸ್ವಾಭಿಮಾನಿ. ಮದರಾಸಿನ ಸ್ಟುಡಿಯೋ ಒಂದರಲ್ಲಿ ಶೂಟಿಂಗ್ ಸಂದರ್ಭ. ಬಾಲಣ್ಣ ನಟನೆಯ ದೃಶ್ಯವೊಂದು ಹಲವು ರೀಟೇಕ್ ಗಳಾದವು. ಸರಿಬರಲಿಲ್ಲ. ಊಟದ ಸಮಯವಾಯಿತು. “ಹೋಗಪ್ಪಾ… ರೀಲ್ ತಿಂದಿದ್ದು ಸಾಕು… ಅನ್ನ ತಿಂದು ಬಾ’ ಎಂಬ ನಿರ್ಮಾಪಕನೋ, ನಿರ್ದೇಶಕನೋ ಹೇಳಿದ ಅವಹೇಳನಕಾರಿ ಮಾತು, ಬಾಲಣ್ಣನವರನ್ನು ನೋಯಿಸಿತು. ಆ ಘಟನೆಯೇ ಬೆಂಗಳೂರಿನಲ್ಲಿ ಅವರು ಸ್ಟುಡಿಯೋ ತರಲು ಪ್ರೇರೇಪಿಸಿತು. ’ಅಭಿಮಾನ್’ ಹೆಸರಿನ ಆ ಸ್ಟುಡಿಯೋ, ಕನ್ನಡಿಗರ ಅಭಿಮಾನದ ಪ್ರತೀಕವಾಗಬೇಕಿತ್ತು. ನಡೆದದ್ದೇ ಬೇರೆ. ಸ್ವಾಭಿಮಾನ, ಸ್ವಪ್ರಯತ್ನದ ಸಂಕೇತವಾಗಬೇಕಿದ್ದ ಶಂಕರ್‌ನಾಗ್ ಸ್ಥಾಪಿಸಿದ ’ಸಂಕೇತ್’ ಕೂಡಾ ಇತಿಹಾಸದ ಬುಟ್ಟಿ ಸೇರಿತು.

ಕೆ.ಬಾಲಚಂದರ್ ಅವರಿಗೆ ಬರೆದ ಶ್ರದ್ಧಾಂಜಲಿಯಲ್ಲಿ, ಕೆಲವೇ ವಾಕ್ಯಗಳಲ್ಲಿ ಅವರ ಸಮಗ್ರ ಪ್ರತಿಭೆ ಮತ್ತು ವ್ಯಕ್ತಿತ್ವವನ್ನು ಬಸೂ ಹಿಡಿದಿಟ್ಟಿದ್ದಾರೆ.ಈ ಲೇಖನ ನವಿರಾಗಿ ಸಂಕಲನಗೊಂಡ ಕೆ.ಬಿಯವರ ಧಾರಾವಾಹಿಯಂತೆಯೇ ಇದೆ. ಅಪಾರ ಶಿಸ್ತು-ಗತ್ತು-ಬೌದ್ಧಿಕ ಅಹಂ ನ ಕೆ.ಬಿ.ಸಾರ್, ಅಷ್ಟೇ ಆರ್ದ್ರ ಹೃದಯಿ ಕೂಡಾ. ತಮ್ಮ ಸ್ಕ್ರಿಪ್ಟ್ ಬಗ್ಗೆ ಯಾವ ಕಲಾವಿದರೂ ತುಟಕ್-ಪಿಟಕ್ ಎನ್ನಬಾರದು ಎಂಬ ಧೋರಣೆಯ ಕೆ.ಬಿ. ’ಸಿಂಧು-ಭೈರವಿ’ ಯ ಚಿತ್ರೀಕರಣದ ಸಂದರ್ಭದಲ್ಲಿ, ತಮ್ಮ ಪಾತ್ರದ ಬಗ್ಗೆ ಕೆಲವು ಅಭಿಪ್ರಾಯಗಳನ್ನು ಹೇಳಲು ಹೋದ ಹಿರಿಯ ನಟ ಡೆಲ್ಲಿ ಗಣೇಶ್ ರನ್ನು”ನಾ ಸೊನ್ನದು ನೀ ಸೆಯಿಂಜಾಲ್ ಪೋದುಮ್. ಪುರೀದಾ??’ (ನಾನು ಹೇಳಿದ್ದನ್ನಷ್ಟೇ ನೀನು ಮಾಡಿದ್ರೆ ಸಾಕು…ಗೊತ್ತಾಯ್ತಾ?’ ) ಎಂದು ಸೆಟ್ ನಲ್ಲಿಯೇ ಗದರಿದ್ದರು. ನಂತರದ ದಿನಗಳಲ್ಲಿ ಕೆ.ಬಿ ಚಿತ್ರಗಳಲ್ಲೆಲ್ಲೋ ಡೆಲ್ಲಿ ಗಣೇಶ್ ಕಾಣಿಸಲಿಲ್ಲ.
‘ಸಿಂಧು-ಭೈರವಿ’ ಯ ಯಶಸ್ಸಿನಲ್ಲಿ ದೊಡ್ಡ ಪಾಲು ಇಳಯರಾಜಾ (ರಾಜಾ) ರವದು. ಆದರೆ ಕೆ.ಬಿ ಏಕೋ ಯಶಸ್ಸನ್ನು ಹಂಚಿಕೊಳ್ಳದಾದರು. ಇದು ಕೆ.ಬಿ ಘನತೆಗೆ ತಕ್ಕುದ್ದಾಗಿರಲಿಲ್ಲ. ಅಲ್ಲದೇ ’ಸಿಂಧು-ಭೈರವಿ’ ಯಲ್ಲಿ ರಾಜಾ ಕೆಲವು ಗಮನಾರ್ಹ-ಪ್ರಶಂಸಾರ್ಹ ಪ್ರಯೋಗಗಳನ್ನು ಮಾಡಿದ್ದರು. ಗ್ರಾಮೀಣ ಹಿನ್ನಲೆಯ ಅಥವಾ ಜನಪದ ಸಂಗೀತವನ್ನು. ಕರ್ನಾಟಕ ಸಂಗೀತದೊಂದಿಗೆ ಬೆಸೆಯುವ ‘ಪಾಡರಿಯೇನ್, ಪಡಿಪ್ಪರಿಯೇನ್’ ಎಂಬ ಹಾಡಿನ ಸಂಯೋಜನೆ ಅಪಾರ ಪ್ರಶಂಸೆಗೆ ಒಳಗಾದರೂ, ಸಂಗೀತ ವಿದ್ವಾಂಸರಿಂದ ತೀವ್ರ ಟೀಕೆಗೆ ಒಳಗಾಯ್ತು. ರಾಜಾ ಪರ ನಿಲ್ಲಬೇಕಿದ್ದ ಕೆ.ಬಿ ತೆಪ್ಪಗಾಗಿಬಿಟ್ಟರು. ರಾಜಾ ಅಪಮಾನಿತಗೊಂಡರು. ತಾವೇ ಕ್ರುದ್ಧರಾಗಿ ಹೇಳಿಕೆಗಳನ್ನೂ ಕೊಟ್ಟರು. ಕೆ.ಬಿ-ರಾಜಾ ಸಂಬಂಧ ಹಳಸಲು ಈ ಘಟನೆಯೇ ಬುನಾದಿಯಾಯ್ತು. ತಮ್ಮ ನಿರ್ಮಾಣದ ಮಣಿರತ್ನಂ ನಿರ್ದೇಶನದ ’ರೋಜಾ’ ಗೆ ಎ.ಆರ್.ರಹಮಾನ್ ಎಂಬ ’ಹೊಸ ಹುಡುಗ’ ನನ್ನು ಕೆ.ಬಿ.ಪರಿಚಯಿಸಿದರು. ನಂತರ ನಡೆದದ್ದು ಇತಿಹಾಸ.
ಅದೇನೇ ಇರಲಿ. ಕೆ.ಬಿ. ಚಿತ್ರಗಳಲ್ಲೆಲ್ಲಾ ‘ಸಿಂಧು-ಭೈರವಿ’ಯದೇ ಒಂದು ತೂಕ. ‘ಇಯಕ್ಕುನರ್ ಸಿಗರಮ್ ’ (ನಿರ್ದೇಶಕರಲ್ಲಿ ಶಿಖರಪ್ರಾಯ) ಎಂಬ ಬಿರುದಿಗೆ ಕೆ.ಬಿ. ನ್ಯಾಯ ಒದಗಿಸಿದರು. ತಾವೇ ಒಂದು ಶಾಲೆಯಾದರು.
ದೇಶ – ಕಾಲ -ಗಡಿಮೀರಿ, ಸಿನಿಮಾಗಳನ್ನು, ಕಲಾವಿದರನ್ನು ಬಸೂ ಪರಿಚಯಿಸುತ್ತಾರೆ. ನಾನು ಒಂದುಕಾಲದಲ್ಲಿ ಬಹುವಾಗಿ ಮೆಚ್ಚಿದ್ದ ನಟ ಜೀನ್ ಹ್ಯಾಕ್‍ಮನ್. ಯಾವುದೇ ತಯಾರಿ-ಪೂರ್ವಸಿದ್ಧತೆಯಿಲ್ಲದೇ ತಮ್ಮ ಸಹಜಾಭಿನಯ-ಆಂಗಿಕ ಅಭಿನಯವನ್ನೇ ನೆಚ್ಚಿಕೊಂಡಿದ್ದ ಜೀನ್ ಹ್ಯಾಕ್‍ಮನ್ ಬಗ್ಗೆ ಬರೆಯುತ್ತಾ ಬಸೂ, ಮಿಲಿಟರಿ ಯೋಧನೊಬ್ಬ ಶತ್ರುಪ್ರದೇಶದಿಂದ ಬಚಾವಾಗಿ ಬರುವ ರೋಚಕ ಕಥೆಯಿರುವ ಚಿತ್ರದ ಬಗ್ಗೆ ಹೇಳುತ್ತಾರೆ. ಅದು ‘ಎನೆಮಿ ಆಫ್ ದಿ ಸ್ಟೇಟ್’ ಎಂದು ದಾಖಲಾಗಿದೆ. ಆದರೆ ವಾಸ್ತವದಲ್ಲಿ ಆ ಚಿತ್ರ ‘ಬಿಹೈಂಡ್ ಎನೆಮಿ ಲೈನ್ಸ್’. ಎರಡೂ ಚಿತ್ರಗಳಲ್ಲಿ ಜೀನ್ ಹ್ಯಾಕ್‍ಮನ್ ಅಭಿನಯ ಮನಸೂರೆಗೊಳ್ಳುತ್ತದೆ. ಎರಡೂ ಚಿತ್ರಗಳೂ ಪ್ರೇಕ್ಷಕನನ್ನು ಕುರ್ಚಿಯ ತುದಿಗೆ ತಂದು ಕೂರಿಸುತ್ತದೆ.
೨೦೨೪ ರ ಮಾರ್ಚ್ ನಲ್ಲಿ ಜೀನ್ ಈ ಲೋಕ ತ್ಯಜಿಸಿದರು. ಸಾವು ಬಹುತೇಕ ಅಸ್ವಾಭಾವಿಕವೆನಿಸಿದರೂ, ಆಟೊಪ್ಸಿ ವರದಿ ಪ್ರಕಾರ ಜೀನ್ ’ಆಲ್ಜ಼ಿಮೀರ್’ ನಿಂದ ಬಳಲುತ್ತಿದ್ದರು.
’ಕಬಡ್ಡಿ’ ಎಂಬ ಈ ನೆಲದ ಮಣ್ಣಿನ ಸಿನಿಮಾ ಬಗೆಗಿನ ಬಸೂ ವಿಮರ್ಶೆ ಗಮನಾರ್ಹ. ಚಿತ್ರದ ಓರೆ-ಕೋರೆಗಳನ್ನೂ ಬಹಳ ಆಪ್ತವಾಗಿಯೇ, ಯಾವುದೇ ಕೊಂಕುಗಳಿಲ್ಲದೇ ಹೊರಹಾಕುತ್ತಾರೆ. ಹಂಸಲೇಖ, ಸಂಕಲನಕಾರ ನಾಗೇಂದ್ರ ಅರಸ್ ಒಮ್ಮೆ ಈ ಬರಹ ಗಮನಿಸಬೇಕು. ’ಪ್ರಕಾಶ್ ರೈ ಮತ್ತವರ ಕನಸು’ ಬರಹದಲ್ಲಿ, ಪ್ರಕಾಶ್ ರೈ ನಿರ್ದೇಶಿಸಿದ ’ನಾನು ನನ್ನ ಕನಸು’ ಚಿತ್ರವನ್ನು ಮುಖ್ಯವಾಗಿಟ್ಟುಕೊಂಡು, ಅವರ ವ್ಯಕ್ತಿತ್ವದ ಅನಾವರಣ ಮಾಡಿರುವ ಬಗೆಯೂ ಗಮನಾರ್ಹ.
ಹಲವು ನೋಡಲೇಬೇಕಾದ ಚಿತ್ರಗಳನ್ನು ಬಸೂ ಮನಮುಟ್ಟುವಂತೆ ಪರಿಚಯಿಸುತ್ತಾರೆ. ’ಹರ್ಟ್ ಲಾಕರ್’ (ಕಾಥರೀನ್ ಬಿಗೆಲೋ), ’ಬೇಕಾಸ್’(ಕರ್ಜ಼ನ್ ಖಾದಿರ್) ಚಿತ್ರಗಳ ವಿಮರ್ಶೆ, ಆ ಎರಡೂ ಚಿತ್ರಗಳನ್ನು ಒಮ್ಮೆ (ನೋಡಿದ್ದರೆ ಮತ್ತೊಮ್ಮೆ) ನೋಡುವಂತೆ ಪ್ರೇರೇಪಿಸುತ್ತದೆ.
‘ದೋ ಆಂಖೆ ಬಾರಾ ಹಾತ್’ ಚಿತ್ರ, ಅದು ಸಕಾರಾತ್ಮಕವಾಗಿ ಮಾಡಿದ ಸಾಮಾಜಿಕ ಪರಿಣಾಮ ಮೂಕವಾಗಿಸುತ್ತದೆ. ಬದುಕಿನ ಪ್ರತಿಬಿಂಬವಾದ ’ಬಸೇಲ್ ಆಂಡ್ ಆಡಮ್’ ಚಿತ್ರದ ವಿಮರ್ಶೆ ಕೂಡಾ.
‘ವೀರಪ್ಪನ್-ಒಂದು ಕ್ರೈಮ್ ಕಥಾನಕ’ ದಲ್ಲಿ ಕ್ಷ-ಕಿರಣ(ಎಕ್ಸ್-ರೇ)ದ ವಿಶ್ಲೇಷಣವಿದೆ. ಆದರೆ ’ಕಿಸಾನ್ ಸತ್ಯಾಗ್ರಹ’ (ಕೇಸರಿ ಹರವೂ) ಮತ್ತು ’ಫೋಟೋ’(ಉತ್ಸವ್ ಗೊನಾವರ್) ಚಿತ್ರಗಳ ಬಗ್ಗೆ ಬಸೂ ಬರೆದಿದ್ದಾರೆ ಎನ್ನುವುದಕ್ಕಿಂತ ’ಅಂತಃಕರಣದಿಂದ ಮಾತನಾಡಿದ್ದಾರೆ’ ಎನ್ನುವುದೇ ಹೆಚ್ಚು ಸೂಕ್ತ.
ಡೇನಿಯಲ್ ಡೇ-ಲೆವಿಸ್ ಎಂಬ ಕಲಾವಿದ, ಅಬ್ರಹಾಂ ಲಿಂಕನ್ ಆಗಿ ಪರಕಾಯ ಪ್ರವೇಶ ಮಾಡಿರುವ ಸ್ಟೀವನ್ ಸ್ಪೀಲ್‍ಬರ್ಗ್ ನಿರ್ದೇಶನದ ‘ಲಿಂಕನ್’, ಆತ್ಮಚರಿತ್ರಾತ್ಮಕ ಚಿತ್ರಗಳಲ್ಲಿ ಅಗ್ರಮಾನ್ಯ. (ಕ್ರಿಸ್ಟೋಫರ್ ನೊಲನ್ ರ ‘ಒಪನ್‍ಹೈಮರ್’ ಇದೇ ವರ್ಗದ ಮತ್ತೊಂದು ಸ್ಮರಣೀಯ ಚಿತ್ರ). ಸ್ಪೀಲ್‍ಬರ್ಗ್ ಇಲ್ಲಿಯವರೆಗೂ ನಿರ್ದೇಶಿಸಿದ ಚಿತ್ರಗಳಲ್ಲೇ ‘ಲಿಂಕನ್’ ದೇ ಒಂದು ತೂಕ. ಅಮೆರಿಕದ ‘ಬಿಳಿಯ’ ನಿರ್ದೇಶಕರು ಸಂಕೋಚಿಸುವ ಅಥವಾ ತಾತ್ಸಾರ ತೋರುವ ’ಗುಲಾಮಗಿರಿ’ಯ ವಿಷಯಕ್ಕೆ ಸ್ಪೀಲ್‍ಬರ್ಗ್, ನೇರವಾಗಿಯೇ ಮುಖಾಮುಖಿಯಾಗಿದ್ದಾರೆ. ಈ ಇಳಿವಯಸ್ಸಿನಲ್ಲೂ, ಸ್ಕ್ರಿಪ್ಟ್ ನಲ್ಲಿ ಅವರು ತೋರುವ ಸ್ಪಷ್ಟತೆ, ನಿಖರತೆ, ಇತಿಹಾಸ ಅಥವಾ ನೈಜ ಘಟನೆಗಳಿಗೆ ಚ್ಯುತಿಯಾಗದಂತೆ ತೋರುವ ಎಚ್ಚರ, ನೆರಳು-ಬೆಳಕಿನ ವಿನ್ಯಾಸ, ಕೆಮೆರಾ ಕೋನಗಳಲ್ಲಿ ತೋರುವ ಸೂಕ್ಷ್ಮತೆ..ಅಚ್ಚರಿಯಾಗಿಸುತ್ತದೆ. ಲಿಂಕನ್ ರೊಂದಿಗೆ ಅವರ ಛೇಂಬರ್‌ನಲ್ಲಿ ಕುಳಿತಿದ್ದೇವೆಯಾ ಎಂದು ಭಾಸವಾಗುವಷ್ಟು ನೈಜತೆ-ಸಹಜತೆ ಸ್ಪೀಲ್‍ಬರ್ಗ್‍ರ ನಿರೂಪಣೆಯಲ್ಲಿದೆ. ಅಮೆರಿಕನ್ ಸಂವಿಧಾನದ ೧೩ನೇ ತಿದ್ದುಪಡಿ, ಮತದಾನಕ್ಕೆ ಹೋಗುವ ದೃಶ್ಯ, ಪ್ರೇಕ್ಷಕನನ್ನು ಸೀಟಿನ ತುದಿಗೆ ತಂದು ಕೂರಿಸುತ್ತದೆಯೆಂದರೆ, ಚಿತ್ರ ಎಷ್ಟು ಸಶಕ್ತವಾಗಿ ಕಟ್ಟಲ್ಪಟ್ಟಿದೆ ಎಂಬುದಕ್ಕೆ ಸಾಕ್ಷಿ. ಇದೆಲ್ಲಾ ಅಂಶಗಳನ್ನು ಬಸೂ ಅವರ ಲೇಖನಿ ಇಡಿಯಾಗಿ ಗಮನಿಸಿದೆ.
‘ಬೆಳ್ಳಿತೆರೆ’ ವಿಭಾಗದ ಲೇಖನಗಳು, ನಮ್ಮ ಚಿತ್ರರಂಗಕ್ಕೆ ಅಂಟಿಕೊಂಡಿರುವ ಆಲಸಿಕೆ, ತಾತ್ಸಾರ, ಅರ್ಥಹೀನ, ಅಸಮರ್ಥನೀಯ ಮೌನವನ್ನು ಅನಾವರಣಗೊಳಿಸುತ್ತದೆ. ಚಿತ್ರರಂಗದ ಹಲವು ಹಿರಿಯರ-ಪ್ರಸಿದ್ಧರ ನೇರ ಸಂದರ್ಶನ ಆಧರಿಸಿದ ಈ ವಿಭಾಗದ ಬರಹಗಳು ನಮ್ಮ ಚಿತ್ರರಂಗದ ಕಣ್ಣು ತೆರೆಸಬೇಕಿದೆ. ಬಂದ-ಬರುತ್ತಿರುವ ಚಿತ್ರಗಳೆಲ್ಲಾ ಕೆಜಿಎಫ್ ಅಥವಾ ಕಾಂತಾರಾ ಆಗಲಾರದು. ಕೆಲವು ಹಿರಿಯ ಕಲಾವಿದ-ಕಲಾವಿದೆಯರು ಕೇಲಿದ ಪ್ರಶ್ನೆಗಳಿಗೆ ಜಾಣ ಮೌನ ವಹಿಸುವುದು, ’ಯವಾಗ ಮುಗಿಯುತ್ತೊ’ ಎಂಬ ಆಲಸಿಕೆ ತೋರಿರುವಿದು ಅಚ್ಚರಿಗೊಳಿಸುತ್ತದೆ. ಅನುಭವಗಳ ಹಂಚಿಕೆಯೂ ಉತ್ತಮ ಪಾಠ ಎಂಬ ಸರಳ ಪಾಠ ಮಾಡುವ ಅಗತ್ಯವಿದೆ.
ಚಿತ್ರಗಳ ಆಳಕ್ಕೆ ಇಳಿದು ಅದರೆಲ್ಲಾ ವಿಭಾಗ (ಅಭಿನಯ, ಸಂಭಾಷಣೆ, ಕೆಮೆರಾ ಕುಸುರಿ, ಸಂಕಲನ) ಗಳನ್ನು ಕ್ಷ-ಕಿರಣದ ನಿಖರತೆಯಲ್ಲಿ ಗ್ರಹಿಸುತ್ತಾ, ತಮ್ಮ ಗ್ರಹಿಕೆಯನ್ನು ಸ್ಪಷ್ಟವಾಗಿ, ಅಷ್ಟೇ ಆಪ್ತವಾಗಿ ಅಕ್ಷರಗಳಿಗೆ ಇಳಿಸುವ ಬಸೂ ಅವರ ಈ ಕೃತಿ ಹೀಗೆಯೇ ಹಲವು ಕಾರಣಗಳಿಗೆ ಇಷ್ಟವಾಗುತ್ತದೆ. ಯಾವುದೇ ಕ್ಲೀಷೆಗಳಿಲ್ಲದೇ, ಶಬ್ದಗಳ ಹಾರಾಟವಿಲ್ಲದೇ, ತಾವು ಕಂಡು ಗ್ರಹಿಸಿದ ಸಿನಿಮಾಗಳನ್ನು ಸ್ಪಷ್ಟವಾಗಿ ಹೇಳುವ ಈ ಕೃತಿ, ಚಿತ್ರ ನಿರ್ದೇಶಕರು, ಚಿತ್ರ ವಿಮರ್ಶಕರು ಒಮ್ಮೆ ಓದಬೇಕು.
ಪ್ರೇಕ್ಷಕ ಮೆಚ್ಚುವ/ಮೆಚ್ಚಿದ ಮಣಿರತ್ನಂ, ಶಂಕರ್, ರಾಜಮೌಳಿ, ಕರಣ್ ಜೋಹರ್ ಗಳ ದೊಂಭಿಯಿಲ್ಲದ, ಸದಭಿರುಚಿ-ಪ್ರಯೋಗಶೀಲತೆಗಳೆರೆಡೂ ಹಿತಮಿತವಾಗಿ ಬೆರೆತ, ದೇಶ-ಧರ್ಮಗಳ ಕಟ್ಟುಪಾಡಿಲ್ಲದ ಚಿತ್ರಗಳ ಆಯ್ಕೆಯೂ ಒಂದು ಸವಾಲಿನ ಕೆಲಸ. ಜನಪ್ರಿಯತೆ – ದಾಕ್ಷಿಣ್ಯಗಳು ಮಾನದಂಡವಾದಾಗ, ‘ಬೇಕಾಸ್’, ’ಲಿಂಕನ್’, ’ಮಿ ಯೂ ಥೆಮ್’, ’ಫೋಟೋ’ ತರದ ಚಿತ್ರಗಳು ಗಮನಕ್ಕೂ ಬಾರದೇ ಹೋಗುತ್ತವೆ. ದಶಕಗಳ ಇತಿಹಾಸವಿರುವ ಚಿತ್ರರಂಗ, ವರ್ಷಗಟ್ಟಲೇ ಸೀನಿಯಾರಿಟಿ ಇರುವ ನಿರ್ದೇಶಕರ ಪ್ರತಿಭೆ, ಹಿರಿತನಗಳನ್ನು ನಿಕಷಕ್ಕೆ ಒಡ್ಡಲಿಕ್ಕಾದರೂ, ಪ್ರಯೋಗಕ್ಕೆ ತೆರೆದು ಕೊಳ್ಳಬೇಕಾಗುತ್ತದೆ.
ಲಂಕೇಶರ ‘ಪಲ್ಲವಿ’ ಇಲ್ಲಿಲ್ಲದಿರುವುದು ಸೊಜಿಗವೆಸುತ್ತದೆ. ಬಸೂ ಈ ಕೃತಿಯ ಮುಂದುವರೆದ ಭಾಗ ತರಲಿ. ಭಾರತಿರಾಜಾ ರ ’ಮೊದಲ್ ಮರಿಯಾದೈ’, ಷಾಜಿ ಕರುಣ್ ರ ‘ವಾನಪ್ರಸ್ಥಮ್ ’, ನಾರ್ಮನ್ ಜೆವಿಸನ್ ನಿರ್ದೇಶನದ ‘ಫಿಡ್ಲರ್ ಆನ್ ದ ರೂಫ಼್ ಟಾಪ್’, ಅಲನ್ ಪಾರ್ಕರ್ ನಿರ್ದೇಶನದ ‘ಮಿಸ್ಸಿಸ್ಸಿಪ್ಪಿ ಬರ್ನಿಂಗ್’ (ನೆಚ್ಚಿನ ಜೀನ್ ಹ್ಯಾಕ್‍ಮನ್ ನಟಿಸಿದ್ದಾರೆ), ಅಲ್ಲದೇ ಸಿನಿಮಾ ಪರಿಕಲ್ಪನೆಯನ್ನು ಮರುವ್ಯಾಖ್ಯೆಗೆ ಒಳಪಡಿಸುತ್ತಾ ಸಾಗುತ್ತಿರುವ ಪ.ರಂಜಿತ್, ಮಾರಿ ಸೆಲ್ವರಾಜ್, ಮಂಜುಳೆ ಚಿತ್ರಗಳು. ಬಸೂ ಅವರಿಂದ ಸೂಕ್ಷ್ಮ ಒಳನೋಟಗಳ ಮತ್ತಷ್ಟು ವಿಮರ್ಶೆ ಬರಲೆಂದು ಆಶಯ.
- ರಾಘವನ್ ಚಕ್ರವರ್ತಿ – ಪತ್ರಕರ್ತರು
