ಸಿನಿಮಾ ಇಷ್ಟ ಆದರೆ ಗೆಲ್ಲುತ್ತದೆ ಇಲ್ಲವೇ ಬೀಳುತ್ತದೆ. ಕೋಟಿಕೋಟಿ ದುಡ್ಡು ಸುರಿದು ಎರಡು ಮೂರು ವರ್ಷ ಹಲವರ ಶ್ರಮದಿಂದ ನಿರ್ಮಿಸಿದ ಒಂದು ಸಿನಿಮಾ ಎರಡು ನಿಮಿಷದಲ್ಲೇ ಜಾಲಾಡುವ ವಿಕೃತ ವಿಮರ್ಶಕರು. ಹಿರಿಯೂರು ಪ್ರಕಾಶ್ ಅವರ ಈ ಲೇಖನವನ್ನು ತಪ್ಪದೆ ಓದಿ…
ಈದಿನ ಎರಡು ದೊಡ್ಡ ಬಜೆಟ್ ನ ಕನ್ನಡದ ದೊಡ್ಡ ಸ್ಟಾರ್ ಗಳ ಸಿನಿಮಾ ಬಿಡುಗಡೆಯಾಗಿವೆ. ಒಂದು ಕಿಚ್ಚ ಸುದೀಪ್ ಅಭಿನಯದ “ಮಾರ್ಕ್” ಆದರೆ ಮತ್ತೊಂದು ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಇರುವ ಮಲ್ಟಿ ಸ್ಟಾರರ್ ಸಿನಿಮಾ ” 45 “.
ಈ ಸಿನಿಮಾಗಳು ಬಿಡುಗಡೆಯಾಗಿ ಇನ್ನೂ ಅರ್ಧ ದಿನ ಕಳೆದಿಲ್ಲ. ಆಗಲೇ ಸಿನಿಮಾಗಳನ್ನು ಅಕ್ಷರಗಳ ಮೂಲಕ, ರಿವ್ಯೂ ಮೂಲಕ ಸೋಲಿಸುವ ದರಿದ್ರ ಮನಃಸ್ಥಿತಿಗಳು ಸೋಷಿಯಲ್ ಮೀಶಿಯಾಗಳಲ್ಲಿ ಚುರುಕಾಗಿ ಕಾರ್ಯೋನ್ಮುಖವಾಗಿವೆ. ಅಂಥವರಲ್ಲೊಬ್ಬ ಬುದ್ದಿವಂತ ತನ್ನ ಫ಼ೇಸ್ ಬುಕ್ ಪೇಜಿನಲ್ಲಿ ಯಾವ ರೇಂಜಿಗೆ ನೆಗೆಟೀವ್ ಆಗಿ ಅನಲೈಸ್ ಮಾಡಿದ್ದಾರೆಂದರೆ.

ಫೋಟೋ ಕೃಪೆ : ಅಂತರ್ಜಾಲ
” ಕ್ರಿಸ್‌ಮಸ್ ರಜೆ ಇದ್ದರೂ ಮಾರ್ಕ್ ಮತ್ತು 45 ಚಿತ್ರಗಳಿಗೆ ಒಳ್ಳೆಯ ಓಪನಿಂಗ್ ಸಿಕ್ಕಿಲ್ಲ, ಬುಕ್ ಮೈ ಷೋ ನಲ್ಲಿ ಬಹುತೇಕ ಸ್ಕ್ರೀನ್ ಗಳು ಇನ್ನೂ ಹಸಿರಿನಲ್ಲಿವೆ. ರಜಾದಿನವೇ ಹೀಗಾದರೆ ಇನ್ನು ನಾಳೆ ಇಷ್ಟೂ ಇರೋಲ್ಲ” ಎಂದು ಅಸಹನೆಯ ವಾಂತಿ ಮಾಡಿಕೊಂಡಿದ್ದಲ್ಲದೇ, ಹಿಂದಿಯ ದುರಂದರ್ ಸಿನಿಮಾ ಮೂರನೇ ವಾರದಲ್ಲೂ ಹೌಸ್ ಫ಼ುಲ್ ಷೋ ಕಾಣುತ್ತಿದೆ ಎಂದೂ ಸೇರಿಸಿ ತನ್ನ ಅತೀ ಬುದ್ದಿವಂತಿಕೆಯ ದುರುದ್ದೇಶವನ್ನು, ಅನ್ಯಭಾಷೆ ಸಿನಿಮಾಗಳಿಗೆ ಕನ್ನಡವನ್ನು ಹೋಲಿಸಿ ಹೀಯಾಳಿಸುವ ಚಾಳಿಯನ್ನೂ ಅನಾವರಣ ಮಾಡಿಕೊಂಡಿದ್ದಾರೆ.
ಈತ ಹೇಳಿದ ಹಾಗೆ ಜನಕ್ಕೆ ಸ್ಟಾರ್ ಡಂ, ವಿವಾದ, ಬಿಲ್ಡಪ್ಪು ಯಾವುದೂ ಬೇಕಿಲ್ಲ ಆದರೆ ಒಳ್ಳೆಯ ಮನರಂಜನೆ ಬೇಕು… ಎಂಬ ಮಾತು ನಿಜ- ಒಪ್ಪೋಣ. ಆದರೆ ಸಿನಿಮಾ ಬಿಡುಗಡೆಯಾಗಿ ಅರ್ಧ ದಿನವೂ ಆಗಿರದ ಈ ಹೊತ್ತಲ್ಲಿ ಹೀಗೆ ಸಿನಿಮಾ ನೋಡದೆಯೇ ಅವಸರವಾಗಿ ನಿರಾಶಾದಾಯಕ ಎಂದು ನೆಗೆಟೀವ್ ರಿಪೋರ್ಟ್ ಕೊಡುವ ಉದ್ದೇಶವಾದರೂ ಏನು.?
ಸಿನಿಮಾ ನೋಡಿ ಆ ಬಗ್ಗೆ ಏನು ಬೇಕಾದರೂ ವಿಮರ್ಶೆ ಬರೆಯಲಿ. ! ಆದರೆ ಕನ್ನಡ ಸಿನಿಮಾಗಳು ಬಿಡುಗಡೆಯಾಗಿ ಕೆಲವೇ ಘಂಟೆಗಳಲ್ಲಿ ಬೆಂಗಳೂರಿನ ಬುಕ್‌ಮೈಷೋನಲ್ಲಿ ಮಲ್ಟಿಸ್ಕ್ರೀನ್‌ಗಳಲ್ಲಿ ಸೀಟುಗಳು ತುಂಬಿಲ್ಲ ( ಈತ ನೋಡಿದ ಸಮಯದಲ್ಲಿ ) ಎಂಬ ಒಂದು ಎಳೆಯನ್ನು ಹಿಡಿದು ಇದು ನಿರಾಶಾದಾಯಕ ಓಪನಿಂಗು, ನಾಳೆ ಮುಗ್ಗರಿಸುವ ಸಾಧ್ಯತೆ ಇದೆ ಎಂದು ನೆಗೆಟೀವ್ ಶೇಡ್ ನಲ್ಲೇ ಇಷ್ಟು ಅವಸರದಲ್ಲಿ ರಿವ್ಯೂ ಕೊಡುವ ಮನೋಭಾವವನ್ನಷ್ಟೇ ಪ್ರಶ್ನಿಸುತ್ತಿದ್ದೇನೆ.
ಇಂತಹ ಅವಸರದ ಕಿಡಿಗೇಡಿಗಳಿಗೆ ಒಂದು ಕಿವಿಮಾತು. ಯಾವುದೇ ಒಂದು ಸಿನಿಮಾವನ್ನು ಗೆಲ್ಲಿಸುವುದು ಸೋಲಿಸುವುದು ದುಡ್ಡುಕೊಟ್ಟು ಥಿಯೇಟರ್ ಗೆ ಬಂದು ಸಿನಿಮಾ ನೋಡುವ ಪ್ರೇಕ್ಷಕ ಪ್ರಭು. ಒಂದು ಸಿನಿಮಾ ಜನಕ್ಕೆ ಇಷ್ಟ ಆದ್ರೆ ಗೆಲ್ಲಿಸ್ತಾರೆ, ಇಲ್ಲಾಂದ್ರೆ ಮಕಾಡೆ ಮಲಗಿಸ್ತಾರೆ. ಸಿಂಪಲ್ಲಾಗಿ ಹೇಳೋದಾದ್ರೆ ಯಾವುದೇ ಸಿನಿಮಾದ ಭವಿಷ್ಯ ಅನ್ನೋದು ಕಾಸು ಕೊಟ್ಟು ನೋಡೋ ಪ್ರೇಕ್ಷಕರ ಕೈಲಿದೆಯೇ ವಿನಃ ಸಿನಿಮಾ ನೋಡದೇ ಆಫ಼ೀಸಲ್ಲೋ, ರೂಮಲ್ಲೋ ಕೂತು ಕೈಯಲ್ಲಿ ಮೊಬೈಲು ಇದೆ ಎಂದು ಬಾಯಿಗೆ ಬಂದಂತೆ ರಿವ್ಯೂಗಳನ್ನು ಕುಟ್ಟೋ ಘನ ವಿದ್ವಾಂಸರ ಬರಹಗಳಲ್ಲಿ ಅಲ್ಲ.

ಫೋಟೋ ಕೃಪೆ : ಅಂತರ್ಜಾಲ
ಆಯ್ತು….ಈ ಸಿನಿಮಾಗಳಿಗೆ ಬುಕ್ ಮೈ ಷೋನಲ್ಲಿ ಇವರು ನೋಡಿದ್ದ ಸಮಯಕ್ಕೆ ಸೀಟುಗಳ ಫ಼ಿಲ್ಲಿಂಗ್ ಹಸಿರಿನಲ್ಲೇ ಇತ್ತು ಎಂದುಕೊಳ್ಳೋಣ. ಅಂದ ಮಾತ್ರಕ್ಕೇ ಈ ರೇಂಜಿನ ನೆಗೆಟೀವ್ ಪ್ರಿಡಿಕ್ಷನ್ ರಿಪೋರ್ಟಾ…? ಕೇವಲ ಬೆಂಗಳೂರಿನ ಥಿಯೇಟರ್ ಗಳ ಬುಕ್‌ಮೈಷೋ ಗಳ ರಿಪೋರ್ಟ್ ಗಳಿಂದ ಮಾತ್ರವೇ ಎಲ್ಲ ಕನ್ನಡ ಸಿನಿಮಾಗಳ ಹಣೆಬರಹ ನಿಂತಿರೋದಾ…? ಹಾಗಾದ್ರೆ ಇಡೀ ಕರ್ನಾಟಕದ ಇತರೆ ಊರುಗಳಲ್ಲಿ ಸಿನಿಮಾ ನೋಡೋ ಜನ ಬುಕ್‌ಮೈ ಷೋನಲ್ಲಿಮಾತ್ರವೇ ಟಿಕೆಟ್ ಕೊಟ್ಟು ಸಿನಿಮಾ ನೋಡುತ್ತಾರಾ..? ಅಥವಾ ಈತ ನೋಡಿದ ಸಮಯಕ್ಕೆ ಜನ ಇನ್ನೂ ಬುಕ್ ಮಾಡಿಲ್ಲ ಅಂದರೆ ಅರ್ಥ ಅವರು ಸಿನಿಮಾ ನೋಡೋಲ್ಲಾ ಅಂತಾನಾ.?
ಎಂಥಾ ಲಾಜಿಕ್ಕು ಈ ಜನಗಳದ್ದು….?
ವಿಪರ್ಯಾಸವೆಂದರೆ ಅನ್ಯ ಭಾಷೆಗಳ ಸಿನಿಮಾಗಳು ಅರ್ಥವಾಗದಿದ್ರೂ ಹಾಗೇ ಹೀಗೇ ಎಂಬ ಬಿಲ್ಡಪ್ ಕೊಟ್ಟು ಮೆರೆಸೋ ಕನ್ನಡದವರೇ ಆದ ಇಂಥಾ ಮೀಡಿಯಾ ಬುದ್ದಿವಂತರು ಕನ್ನಡ ಸಿನಿಮಾಗಳಿಗೆ ನೆಗೆಟೀವ್ ರಿವ್ಯೂ ಕೊಡೋಕೆ ಅಂತಾನೇ ಡಿಸೈಡ್ ಮಾಡಿದ ಮೇಲೆ ಕೊಡಲಿ ಬಿಡಿ .! ಆದರೆ ಕೊನೇಪಕ್ಷ ಸಿನಿಮಾ ರಿಲೀಸ್ ಆಗಿ ಎರಡು ದಿನ ಕಾಯೋವರೆಗೂ ಇಂಥವರಲ್ಲಿ ಸಹನೆ ಇರೋಲ್ಲವಲ್ಲ ಅನ್ನೋದೇ ಬೇಜಾರು..! ಅದಾವ ದುರುದ್ದೇಶ ಇಟ್ಕೊಂಡು ಹೀಗೆಲ್ಲಾ ಕಾರುತ್ತಾರೋ ಗೊತ್ತಿಲ್ಲ.
ಕೋಟಿಕೋಟಿ ದುಡ್ಡು ಸುರಿದು ಎರಡು ಮೂರು ವರ್ಷ ಹಲವರ ಶ್ರಮದಿಂದ ನಿರ್ಮಿಸಿದ ಒಂದು ಸಿನಿಮಾದ ಬಾಕ್ಸ್ ಆಫ಼ೀಸ್ ಹಣೆಬರಹವನ್ನು ಸಿನಿಮಾ ಬಿಡುಗಡೆಯಾದ ಕೇವಲ ಹತ್ತಾರು ನಿಮಿಷಗಳಲ್ಲಿ ಸಿನಿಮಾ ನೋಡದೇ ನೆಗೆಟೀವ್ ಆಗಿ ಬರೆದು ಇಸುಬು ಕೆರೆದುಕೊಳ್ಳುವಂತಹ ವಿಕೃತ ಸಂತಸ ಅನುಭವಿಸುತ್ತಾ ಬಂದಿರುವ ಕೆಲವು ” ಕ್ಯಾತೆ ” ವಿಮರ್ಶಕರ ಇಂಥಾ ವಿಕೃತಿಗಳಿಗೆ ಪರಂಪರೆಯೇ ಇದೆ. ಆದರೆ ಇಂಥವರ ಸಿನಿಕತನದ ಅನಿಸಿಕೆಗಳಿಗೆ ಎಂದೂ ತಲೆಕೆಡಿಸಿಕೊಳ್ಳದ ಕನ್ನಡದ ಪ್ರೇಕ್ಷಕ, ಕೇವಲ ಸ್ಟಾರ್ ಸಿನಿಮಾ ಎಂಬಕಾರಣಕ್ಕೆ ಗೆಲ್ಲಿಸಿಯೂ ಇಲ್ಲ. ಆದರೆ ಒಂದು ಸದಭಿರುಚಿಯ ಸಿನಿಮಾವನ್ನು ಕನ್ನಡದ ಪ್ರೇಕ್ಷಕ ಎಂದೂ ಕೈಬಿಟ್ಟಿಲ್ಲ
ಇಷ್ಟೆಲ್ಲಾ ಎಲ್ಲದರೂ ಹಾಳಾಗಿ ಹೋಗಲೀ ! ಆದರೆ ಹೀಗೆ ತಮ್ಮೆಲ್ಲಾ ಅಸಹನೆ ವಾಂತಿ ಮಾಡಿಕೊಳ್ಳುವ ಮಾಧ್ಯಮದಲ್ಲಿರುವ ಕೆಲವು ಅಕ್ಷರ ಪಂಡಿತರಿಗೆ ಕೊನೇಪಕ್ಷ ಕನ್ನಡ ಸಿನಿಮಾಗಳೆಂಬ ಕನಿಷ್ಠ ಪ್ರೀತಿ ನಾಲ್ಕುದಿನದ ಮಟ್ಟಿಗಾದ್ರೂ ಇಲ್ಲವಾಯಿತಲ್ಲವೆಂಬುದೇ ನೋವಿನ ಸಂಗತಿ..!
* ಮರೆಯುವ ಮುನ್ನ *
ಕೆಲವು ಹೀರೋಗಳ ಸಿನಿಮಾಗಳಿಗೆ ಒಳ್ಳೆಯ ರಿವ್ಯೂ ಬರಲಿ ಎಂದು ಹೇಗೆ ಕೆಲವು ಪೇಯ್ಡ್ ಬರಹಗಾರರು ಇರುತ್ತಾರೋ ಹಾಗೆಯೇ ಕೆಲವು ನಟರ ಸಿನಿಮಾಗಳನ್ನು ತುಳಿಯಲೆಂದೇ ಮತ್ತೇ ಕೆಲವು ಪೇಯ್ಡ್ ವಿಮರ್ಶಕರೂ ಇರುತ್ತಾರೆ. ಇತರೆ ಭಾಷೆ ಸಿನಿಮಾಗಳ ಕೆಟ್ಟ ಹೂಸುಗಳನ್ನೂ ಆಹ್ಲಾದಕರ ಪರಿಮಳದಂತೆ ಆಸ್ವಾದಿಸಿ ಮೆರೆಸುವ ಕೆಲ ವಿಕೃತ ವಿಮರ್ಶಕರ ಪಾಲಿಗೆ ಕನ್ನಡ ಸಿನಿಮಾಗಳೆಂದರೆ ಅದೇಕೆ ಇಷ್ಟು ಅಲರ್ಜಿಯೋ…!
ಆದರೆ ಇವರ ದುರುದ್ದೇಶಪೂರಿತ, ದುರ್ಗಂಧ ತುಂಬಿದ ರಿವ್ಯೂ ರಾಜಕೀಯಗಳಿಗೆ ಕನ್ನಡ ಸಿನಿಮಾಗಳು ಬಲಿಯಾಗಲು ಕನ್ನಡ ಪ್ರೇಕ್ಷಕ ಎಂದೂ ಬಿಟ್ಟಿಲ್ಲ. ಅವನಿಗೆ ಸಿನಿಮಾ ಇಷ್ಟ ಆದರೆ ಗೆಲ್ಲುತ್ತದೆ ಇಲ್ಲವೇ ಬೀಳುತ್ತದೆ. ಎಲ್ಲವೂ ಕಾಸುಕೊಟ್ಟು ಚಿತ್ರನೋಡುವ ನೋಡುಗನ ಕೈಲಿದೆ. ಆದರೆ ಒಂದು ಸಿನಿಮಾವನ್ನು ಗೆಲ್ಲಿಸುವ ಅಥವಾ ಸೋಲಿಸುವ ತಾಕತ್ತು ವಿಮರ್ಶೆ/ ರಿವ್ಯೂ ಮೂಲಕ ತಮ್ಮ ರಾಜಕೀಯ ವರಸೆ ತೋರಿಸುವ ಮೂರ್ಖರ ಕೈಯಲ್ಲಂತೂ ಇಲ್ಲ .
ಪ್ರೀತಿಯಿಂದ….
- ಹಿರಿಯೂರು ಪ್ರಕಾಶ್
