‘ಮನಸಿರಿ’ ಗಜಲ್ ಸಂಕಲನ ಕೃತಿ ಪರಿಚಯ

ಆಶಾ ಮಯ್ಯ ಅವರ ‘ಮನಸಿರಿ’ ಗಜಲ್ ಸಂಕಲನದಲ್ಲಿ ೮೫ ಗಜಲ್‌ಗಳಿವೆ.ಈ ಕುರಿತು ಗಜಲ್ ಸಂಕಲನದ ಕುರಿತು ಹಿರಿಯ ಸಾಹಿತಿ ಮಂಡಲಗಿರಿ ಪ್ರಸನ್ನ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ: ಮನಸಿರಿ (ಗಜಲ್ ಸಂಕಲನ)
ಲೇಖಕರು:  ಆಶಾ ಮಯ್ಯ
ಹೆಚ್ ಎಸ್ ಆರ್ ಎ ಪ್ರಕಾಶನ

ಕಾವ್ಯಲೋಕ ಒಂದು ರಮ್ಯ ಭಾವನಾ ಜಗತ್ತು. ಸುಪ್ತಾವಸ್ತೆಯಲ್ಲೂ, ಜಾಗೃತ ಅವಸ್ಥೆಯಲ್ಲೂ ಮನುಷ್ಯನನ್ನು ಅಭಿವ್ಯಕ್ತಿಯ ಆಲೋಚನೆಗಳಿಗೆ ಹಚ್ಚುವ ಕಾರಣದಿಂದಾಗಿ ಆತನ ಅಂತರಂಗ ಸದಾ ಜೀವಂತವಾಗಿರುವಂತೆ ಮಾಡಬಲ್ಲದು. ಯಾವುದು ಅವ್ಯಕ್ತ ಭಾವನೆಗಳೋ ಅವು ಕಾವ್ಯವಾಗಬಹುದು.

ಕನ್ನಡ ಕಾವ್ಯ ಜಗತ್ತು ಸೊರಗಿರುವ ಈ ಕಾಲದಲ್ಲಿ ಕನ್ನಡ ಗಜಲ್ ಕಾವ್ಯ ಈಗ ಗಡಿ ಮೀರಿ ಬೆಳೆಯುತ್ತಿದೆ. ಒಂದು ಕಾಲದಲ್ಲಿ ನಿಜಾಮರ ಅಂಕುಶದಲ್ಲಿದ್ದ ರಾಯಚೂರು, ಕೊಪ್ಪಳ, ಕಲಬುರ್ಗಿ ನಾಡಿನಲ್ಲಿ ಉರ್ದು ಪ್ರಭಾವದಿಂದ ಕನ್ನಡ ಗಜಲ್ ಸಾಹಿತ್ಯ ಬೆಳೆದರೂ ಹಲವು ಕಾರಣಗಳಿಂದಾಗಿ ಅದೀಗ ಹಳೆ ಮೈಸೂರು, ಕರಾವಳಿ ಭಾಗದಲ್ಲಿಯೂ ಜನಪ್ರಿಯತೆ ಗಳಿಸಿ, ಎಲ್ಲಾ ವಯೋಮಾನದ, ಲಿಂಗಭೇದ ಇಲ್ಲದೆ ಕನ್ನಡ ಗಜಲ್ ವ್ಯಾಮೋಹಕತೆ ಕುಡಿಯೊಡೆಯುತ್ತಿದೆ.

ಗೆಳೆಯ ಹರಿನರಸಿಂಹ ಉಪಾಧ್ಯಾಯರ ಮೂಲಕ ನನಗೆ ಲಭ್ಯವಾದ ಪುತ್ತೂರಿನ ಕವಯಿತ್ರಿ ಆಶಾ ಮಯ್ಯ ಅವರ ಗಜಲ್ ಸಂಕಲನ’ ನಾನು ಓದಿದ ಈಚಿನ ಕನ್ನಡ ಗಜಲ್ ಸಂಕಲನ.
ಆಶಾ ಮಯ್ಯ ಅವರ ಈ ಗಜಲ್ ಸಂಕಲನದಲ್ಲಿ ೮೫ ಗಜಲ್‌ಗಳಿವೆ. ಆಶಾ ಅವರಿಗೆ ಗಜಲ್ ರಚನೆಯ ಛಂದೋಬದ್ಧತೆಯ ಅರಿವಿದೆ. ಹಾಗಾಗೆ ಅವರು ತಮ್ಮ ಒಟ್ಟಾರೆ ಗಜಲ್‌ಗಳಲ್ಲಿ ಕಾಫಿಯಾ ಮತ್ತು ರದೀಫ್ ಗಳ ಆಯ್ಕೆ ಮತ್ತು ಜೋಡಣೆಯಲ್ಲಿ ಎಡವಿಲ್ಲ. ಆಶಾ ಅವರ ಕೆಲ ಗಜಲ್ ಗಳು ಅಂತರಾಳದ ಕದ ತಟ್ಟುತ್ತವೆ. ಗಜಲ್ ಕುರಿತು ಹೊಸ ಪ್ರಯೋಗಗಳತ್ತ ಆಶಾ ಭಾವನೆಯನ್ನು ಮೂಡಿಸುತ್ತಾರೆ.

‘ಮನದ ಕದ ತೆರೆದಿರುವೆ ಬರಲಾರೆಯಾ ನೀನು
ಬನದ ಹೂವ ಬಯಸಿರುವೆ ತರಲಾರೆಯಾ ನೀನು’ (ಗ-೬೨)

ಈ ಗಜಲ್ ನ ಮತ್ಲ ತುಂಬಾ ಆಕರ್ಷಕವಾಗಿದ್ದು ಸಹಜತೆಯ ಭಾವ ಇಲ್ಲಿದೆ.

ತೀರ ಸರಳವಾಗಿ ಬರೆದ ಗಜಲ್ಗಳು ಕನ್ನಡದ ಭಾವಗೀತೆಗಳಂತೆ ಆಗಿಬಿಡುವ ಅಪಾಯವಿದೆ ಎಂಬುದನ್ನು ಕನ್ನಡ ಗಜಲ್ ಕಾರರು ತಿಳಿಯಬೇಕಿದೆ. ಉರ್ದು ಹಾಗೂ ಹಿಂದಿಯಷ್ಟು ಸಶಕ್ತವಾಗಿ ಕನ್ನಡ ಗಜಲ್ ರಚನೆ ಆಗದಿದ್ದರೂ ಕಾವ್ಯದ ಒಂದು ಚೆಂದ ತೊಡಿಸದೆ ಕನ್ನಡ ಗಜಲ್ ರುಚಿಸುವುದಿಲ್ಲ. ಅಂತಹ ಕೆಲವು ಶೇರ್ ನೀಡುವಲ್ಲಿ ಆಶಾ ಯಶಸ್ವಿಯಾಗಿದ್ದಾರೆ.

‘ಒಲವ ತೋರಣದಲಿ ಭಾವದರಮನೆ ಸಿಂಗರಿಸಿ ಸನಿಹಕೆ ಕರೆದೆಯಲ್ಲ ಗೆಳೆಯಾ
ಹಲವು ರಾಗಗಳ ನುಡಿಸಿ ಮನದೊಳಗೆ ಹೊಸತು ಗೀತೆ ಬರೆದೆಯಲ್ಲ ಗೆಳೆಯಾ’ (ಗ-೯)

ಈ ಗಜಲ್‌ನಲ್ಲಿ ನಗುವಿನ ಅಲೆಯಲಿ ಮೆಲ್ಲನೆ ಸರಿದುಹೋಗುವ, ಅನುಮಾನಕೆ ಎಡೆಮಾಡದೆ ಪೊರೆವ, ಸಲಹೆಯಲಿ ಪ್ರೇಮ ಸುಧೆಯ ಸುರಿಸುವ, ನೈಜತೆಯಲಿ ದೀಪದಂತೆ ಬೆಳಗುವ ಗೆಳೆಯನ ವರ್ಣನೆ ಸೊಗಸಾಗಿದೆ.

ಆಶಾ ಅವರ ಕೆಲ ಗಜಲ್ ಗಳಲ್ಲಿ ಕಾಫಿಯಾಗಳು ತುಂಬಾ ಸೊಗಸಾಗಿವೆ. ಕಾಫಿಯಾ ಹಾಗೂ ರದೀಫ್‌ಗಳ ಆಯ್ಕೆ ಅನಿವಾರ್ಯ ಅನಿಸದೆ ಅದರ ಪ್ರಾಮುಖ್ಯತೆ ತಿಳಿದು ಬಳಸಬೇಕು. ಕಾಫಿಯಾ ರದೀಫ್ ಗಳು ಗಜಲ್ ರಚನೆಯ ಜೀವಾಳ ಅಲ್ಲದೆ ಅವು ಗಜಲ್ ಕಾವ್ಯಕ್ಕೆ ಒಂದು ಮೆರಗು ತರುತ್ತವೆ.

ರದೀಫ್‌ಗಳು ಮತ್ತೆ ಮತ್ತೆ ಅವೇ ಪುನರಾವರ್ತನೆ ಆಗದಂತೆ ಎಚ್ಚರವಹಿಸುವ ಅಗತ್ಯ ಇದೆ. ಕೆಲ ಗಜಲ್ ನಾ ಶೇರ್ ಮತ್ತೆ ಮತ್ತೆ ಮೆಲುಕು ಹಾಕುವಂತಿವೆ.

‘ನೆನಪಿನ ನೌಕೆಯ ತುಂಬಾ ಒಲವ ಸಂಚಾರವಿದೆ ಸರಿಯದಿರು ಗೆಳೆಯಾ
ಮನದ ಮಾಮರದಲ್ಲಿ ಸರಿಗಮದ ಸಂಗೀತವಿದೆ ಮರೆಯದಿರುವ ಗೆಳೆಯಾ’ (ಗ-೧೨)
*
‘ಸಹನೆಯಲಿ ಕಷ್ಟಗಳ ಸಹಿಸಿ ನಗುವುದೊಂದು ಕಲೆಯಲ್ಲವೇ
ಅಹಮಿಕೆಯ ಮಹಲನು ಬಿಟ್ಟು ಸರಳವಾಗಿ ಬೆಳೆದೆಯಾ ಗೆಳತಿ’ (ಗ- ೧೫)

ಮೌನ ಭಾಷೆಯ ಮೂಲಕ ಪದಗಳ ಅರ್ಥ ಹುಡುಕುವ ವೇದನೆ ಈ ಶೇರ್ ನಲ್ಲಿ ಸಶಕ್ತವಾಗಿ ಕಾಣುತ್ತದೆ.

‘ಕನಸುಗಳ ಕಟ್ಟುತ ನನಸಾಗಿಸುವ ಕಾಲ ಬರುವುದೆಂದು ನಿರೀಕ್ಷೆಯಿದೆ
ಮೌನ ಭಾಷೆಯ ಅರ್ಥೈಸಲು ಪದಗಳ ಕಲಿಯಬೇಕಿತ್ತು ಒಮ್ಮೆ’ (ಗ-೨೩)
*
‘ರಥ ಬೀದಿಯ ಹೂ ಗಂಧವು ಕಥೆಯ ಬರೆಸಿದೆ ಅಲ್ಲಿ
ಪಥವನರಿಯದ ಬಾಳ ನಡೆಯು ಸ್ಪಷ್ಟತೆ ಬೆರೆಸಿದೆ ಅಲ್ಲಿ’ (ಗ-೩೭)

ಕಾವ್ಯದ ಹಿತವಾದ ಮಿಶ್ರಣದ ಈ ಗಜಲ್  ಒಂದು ಅದ್ಭುತ ರಚನೆ, ವಸ್ತು ಹಾಗೂ ನಿರೂಪಣೆ ಸಮರ್ಪಕವಾಗಿದೆ.
*
‘ಭಾವಲೋಕದ ಬಾಗಿಲು ತೆರೆದಿದೆ ಕವಿತೆಯಾಗಿ ಬರಲೊಲ್ಲೆಯಾ ಸಖಾ’

‘ಒಲವ ಬಂಧನ ಬೆಸೆದು ಮುದದಿಂದ ನಗುವಿಯೇನು’

ಮುಂಜಾನೆಯ ಹಕ್ಕಿ ಕಲರವಕೆ ನೋವ ಮರೆಯುವೆ ನಾನು’

‘ಸುತ್ತಿ ಬರುವ ಮತ್ತದೇ ಕನಸುಗಳು ಮುತ್ತುತಿಹವು ಎದೆಯಾಳವನು’

‘ಮರಳಿ ಕಾಡುವ ನೆನಪೆಲ್ಲ ಮರುಜನ್ಮವ ಪಡೆದೀತೆ’

ಇಂತಹ ನವಿರಾದ ಸಾಲುಗಳು ಸಹಜತೆಯಲಿ ಆಶಾ ಮಯ್ಯ ಒಬ್ಬ ಭರವಸೆಯ ಗಜಲಕಾರ್ತಿಯಾಗಿ ಪ್ರಕಟಗೊಳ್ಳುವ ಸಾಧ್ಯತೆಯನ್ನು ‘ಮನಸಿರಿ’ ಗಜಲ್ ಸಂಕಲನದಲ್ಲಿ ಪ್ರಚುರಪಡಿಸಿದ್ದಾರೆ. ಅವರಿಗೆ ಶುಭ ಕೋರುವೆ.


  • ಮಂಡಲಗಿರಿ ಪ್ರಸನ್ನ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading