ಎಲ್ಲಾ ಕಂಬಳಿ ಹುಳುಗಳಿಗಿಂತ ಈ ಕಂಬಳಿ ಹುಳು ಗಾತ್ರದಲ್ಲಿ ತುಂಬಾ ದೊಡ್ಡದಾಗಿದೆ. ಚಿದು ಯುವ ಸಂಚಲನ ಅವರು ಈ ಕಂಬಳಿ ಹುಳುವಿನ ಫೋಟೋ ಜೊತೆ ಅದರ ಕುರಿತು ಬರೆದ ಪುಟ್ಟ ಲೇಖನವನ್ನು ತಪ್ಪದೆ ಮುಂದೆ ಓದಿ…
ಇದನ್ನು ನಾನು ಕಂಡದ್ದು ಶೃಂಗೇರಿಯ ಗುರುಮೂರ್ತಿ ಸರ್ ಅವರ ಜೋಗಿಬೈಲಿನಲ್ಲಿ ಒಬ್ಬನೇ ಕಾಡನ್ನು ಸುತ್ತುವಾಗ. ಇದರಲ್ಲಿ ಕುತೂಹಲ ಕೆರಳಿಸುವ ವಿಚಾರಗಳನೆಂದರೆ ಈ ಕಂಬಳಿ ಹುಳು ನಾನು ನೋಡಿದ ಎಲ್ಲಾ ಕಂಬಳಿ ಹುಳುಗಳಿಗಿಂತ ಗಾತ್ರದಲ್ಲಿ ತುಂಬಾ ದೊಡ್ಡದಾಗಿದದ್ದು ಜೊತೆಗೆ ಇದರ ಮೈ ಮೇಲಿನ ರೋಮಗಳು ಸಹ ತುಂಬಾ ಉದ್ದವಾಗಿದ್ದವು.

ಇನ್ನೂ ಒಂದು ಗಮನಿಸಲೇಬೇಕಾದ ವಿಚಾರವೇನೆಂದರೆ, ಇದರ ಮೈಮೇಲೆ ಇರುವಂತಹ ಅಂಡಗಳು; ಕೆಲ ಜಾತಿಯ ಜೀವಿಗಳು ತಮ್ಮ ಮರಿಗಳನ್ನು ತಮ್ಮ ಮೈ ಮೇಲೆ ಮೊಟ್ಟೆ ಇಟ್ಟು ಮರಿ ಮಾಡಿಕೊಂಡು ದೊಡ್ಡದಾಗುವವರೆಗೂ ಲಾಲನೆ ಪಾಲನೆ ಮಾಡಿಕೊಂಡು ಬೆಳೆಸುತ್ತವೆ. ಆದರೆ ಈ ಕಂಬಳಿ ಹುಳು ವಿಚಾರವಾಗಿ ನಾವು ಹಾಗೆ ಯೋಚಿಸಲಾಗುವುದಿಲ್ಲ ಕಾರಣ..? ಚಿಟ್ಟೆ ಅಥವಾ ಪತಂಗದ ಜೀವನ ಕ್ರಮವೇ ಬೇರೆ.

ಮೊಟ್ಟೆ, ಲಾರ್ವಾ, ಪ್ಯೂಪಾ ಮತ್ತೆ ಚಿಟ್ಟೆ ಅಥವಾ ಪತಂಗವಾಗಿ ಹೊರಹೊಮ್ಮುತ್ತದೆ. ಹಾಗಿದ್ದಾಗ ಇದರದೇ ಮೊಟ್ಟೆಗಳನ್ನು ತನ್ನ ಮೈ ಮೇಲೆ ಇರಿಸಿಕೊಳ್ಳಲು ಸಾಧ್ಯವಿಲ್ಲ. ಇದು ಯಾವುದೋ ಬೇರೆಯ ಜೀವಿಯ ಮೊಟ್ಟೆಯಾಗಿರಬಹುದು. ಅದು ಮೊಟ್ಟೆಯಿಂದ ಹೊರಬಂದು ಈಗ ಮೊಟ್ಟೆಯ ಚಿಪ್ಪು ಮಾತ್ರ ನಮಗೆ ಅದರ ಮೈಮೇಲೆ ಕಾಣಿಸುತ್ತಿದೆ. ಪರಾವಲಂಬಿ ಸಸ್ಯಗಳ ರೀತಿ ( ಆರ್ಕಿಡ್ಗಳು) ಪರಾವಲಂಬಿ ಜೀವಿಗಳು ಸಹ ನಮ್ಮ ನಡುವೆಯೇ ಇದೇ ಮತ್ತು ಆಗಾಗ ಕೆಲ ಉದಾಹರಣೆಗಳು ನಮಗೆ ಕಾಣಸಿಗುತ್ತಿರುತ್ತವೆ ಗಮನಿಸುವ ಆಸಕ್ತಿ ನಮಗಿರಬೇಕಷ್ಟೆ. ಆದರೂ ಇದರ ಬಗ್ಗೆ ಕುತೂಹಲವಂತು ನನಗೆ ಹೆಚ್ಚಾಗಿದೆ. ನೀವು ಈ ರೀತಿ ಏನಾದರೂ ಗಮನಿಸಿದರೆ ಇದರ ಕುರಿತು ಇನ್ನು ಹೆಚ್ಚಿನ ಮಾಹಿತಿ ಇದ್ದರೆ ದಯಮಾಡಿ ಹಂಚಿಕೊಳ್ಳಿ.
- ಕ್ಯಾಮೆರಾ ಹಿಂದಿನ ಕಣ್ಣು : ಚಿದು ಯುವ ಸಂಚಲನ ( ಪರಿಸರವಾದಿ, ಲೇಖಕರು) ದೊಡ್ಡಬಳ್ಳಾಪುರ.
