ದೇವಕುಸುಮ ‘ಲವಂಗ’ದ ಸಕಲೋಪಯೋಗ

ಹಲ್ಲುನೋವಿಗೆ, ಕಜ್ಜಿ, ತುರಿಕೆಗಳಂತಹ ಜಾಗಕ್ಕೆ ಲವಂಗ ಎಣ್ಣೆಯನ್ನು ಹಚ್ಚಿದರೆ ಬೇಗ ಗುಣವಾಗುತ್ತದೆ. ಈ ಲವಂಗವನ್ನು ವಿಶ್ವದಲ್ಲಿ ಅತಿ ಹೆಚ್ಚು ಉತ್ಪಾದಿಸುವ ದೇಶ ಇಂಡೋನೇಷಿಯಾ ಆಗಿದೆ.

ಲವಂಗ (Clove) ಇದು ಹೆಚ್ಚಿನದಾಗಿ ಪ್ರತಿಯೊಬ್ಬರಿಗೂ ತಿಳಿದೆ ಇದೆ. ಹಲ್ಲು ನೋವಿಗಂತು ರಾಮಬಾಣ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಾಂಬಾರ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುವ ವಸ್ತು ಕೂಡ ಇದಾಗಿದೆ. ಇದರ ಬಗ್ಗೆ ನಾವುಗಳು ತಿಳಿಯದ ಬಹಳಷ್ಟು ವಿಷಯಗಳು ಕೂಡ ಅಡಗಿದೆ. ಲವಂಗ ಎಂದಾಕ್ಷಣ ಬಹಳಷ್ಟು ಜನಕ್ಕೆ ನೆನಪಾಗುವುದು ಸಾಂಬಾರ ಪದಾರ್ಥಕ್ಕೆ ಮತ್ತು ಹಲ್ಲು ನೋವಿನ ಉಪಶಮನಕ್ಕೆ ಅಷ್ಟೆ ಅಂದುಕೊಂಡಿದ್ದಾರೆ. ಆದರೆ ಸಕಲ ವಿಧದಲ್ಲಿ ಇದು ಉಪಯುಕ್ತ ಎನ್ನುವುದು ತುಂಬಾ ಜನಕ್ಕೆ ಗೊತ್ತಿಲ್ಲಾ.

ಲವಂಗ ಇಂಡೋನೆಷ್ಯಾ ಮೂಲದ ಸಾಂಬಾರ ಬೆಳೆಯಾಗಿದ್ದು, ಭಾರತಕ್ಕೆ ಸಾಂಬಾರ ಪದಾರ್ಥವಾಗಿ ಬಂದ ಆಮದು ಬೆಳೆಯಾಗಿದೆ. ಇದು ಸರ್ವಕಾಲೀಕ ಬೆಳೆಗಳಲ್ಲೊಂದಾಗಿದೆ. ನಮ್ಮ ಭಾರತದಲ್ಲಿ ಇತರ ಬೆಳೆಗಳೊಂದಿಗೆ ಮಿಶ್ರ ಬೆಳೆಯಾಗಿ ಇದನ್ನು ಬೆಳೆಯುತ್ತಾರೆ. ನೈಸರ್ಗೀಕವಾಗಿ ಸಿಗುವ ಮಳೆ ನೀರು ಇದರ ಬೆಳವಣೆಗೆಗೆ ಸಾಕಾಗುತ್ತದೆ. ಇದಕ್ಕೆ ಮನುಷ್ಯನಿಂದ ಬಿಟ್ಟರೆ ಇತರ ಪ್ರಾಣಿಗಳಿಂದ ಹಾನಿಯಿಲ್ಲ.ಇದರ ಎಲೆಗಳಿಗೆ ಆಗಾಗ ಹುಳುಗಳಿಂದ ಚುಕ್ಕೆ ರೋಗ ಬರುತ್ತಿರುತ್ತದೆ ಅಷ್ಟೆ. ಔಷಧ ಸಿಂಪಡಿಸಿದರೆ ಅದನ್ನು ತಡೆಯಬಹುದು. ಲವಂಗ ಹೆಚ್ಚು ಉಷ್ಣವಲಯಕ್ಕೆ ವಿರೋಧವಾಗಿದ್ದು, ಹೆಚ್ಚಾಗಿ ಮಳೆ ಪ್ರದೇಶಗಳಲ್ಲಿ ಮತ್ತು ಮರಳು ಮಿಶ್ರಿತ ಕೆಂಪು ಮಣ್ಣಿನಲ್ಲಿ ಬೆಳೆಯುತ್ತದೆ. ಮಲೆನಾಡು ಪ್ರದೇಶಗಳು ಇದರ ಬೆಳವಣೆಗೆಗೆ ಸೂಕ್ತವಾಗಿದೆ. ಇಂದಿಗೂ ಸಹ ಮಲೆನಾಡು ಕಾಡುಗಳಲ್ಲಿ ಲವಂಗ ಕಾಡು ಮರವಾಗಿ ಬೆಳೆದಿರುವುದನ್ನು ಕಾಣಬಹುದು.

ಫೋಟೋ ಕೃಪೆ : molon.de (ಲವಂಗದ ಮರ)

ಲವಂಗದ ಮರಗಳು ಸದಾ ಕಾಲ ಹಸಿರಿನಿಂದಲೆ ಕೂಡಿರುತ್ತದೆ. ೨೦ ರಿಂದ ೩೦ ಅಡಿ ಎತ್ತರದವರೆಗೂ ಬೆಳೆಯುತ್ತದೆ. ಎಲೆಗಳು ನೋಡೋಕೆ ಉದ್ದವಾಗಿ ಸುಂದರವಾಗಿದ್ದು, ಚಿಕ್ಕ-ಚಿಕ್ಕ ಗೆರೆಗಳು ಇರುತ್ತವೆ. ಇದರ ಹೂವಿನ ಮೊಗ್ಗನ್ನೆ ‘ಲವಂಗ’ ಎಂದು ಕರೆಯುವುದು. ಮೊಗ್ಗು ಹೂವಾಗುವ ಮುಂಚೆಯೇ ಕೊಯ್ದು ಒಣಗಿಸುತ್ತಾರೆ. ಅದೇ ಲವಂಗವಾಗುತ್ತದೆ. ಮೊಗ್ಗಿನ ಪುಷ್ಪಪಾತ್ರೆ ಉದ್ದವಾಗಿರುತ್ತದೆ.

ಫೋಟೋ ಕೃಪೆ : pinterest

ನಾಲ್ಕು ದಳಗಳನ್ನು ಹೊಂದಿರುತ್ತದೆ. ಮೊಗ್ಗುಗಳು ತಾವಾಗಿಯೆ ಮಣ್ಣಿನಲ್ಲಿ ಬಿದ್ದಾಗ ಹೊಸ ಗಿಡಗಳು ಮೊಳಕೆಯೊಡಲು ಪ್ರಾರಂಭಿಸುತ್ತವೆ. ಕೈಯಿಂದ ಕಿತ್ತು ಬಿಸಿಲಿನಲ್ಲಿ ಒಣಗಿಸಿ ಕೂಡ ಮಣ್ಣಿನಲ್ಲಿ ನೆಡಬಹುದು. ಮೊಳಕೆಯೊಡೆದ ನಾಲ್ಕರಿಂದ ಐದು ವರ್ಷಗಳಲ್ಲಿ ಮತ್ತೆ ಮೊಗ್ಗುಗಳಾಗಲು ಶುರುವಾಗುತ್ತವೆ. ಇದರ ರುಚಿಯು ಕಾರವಾಗಿದ್ದು, ಸುವಾಸನೆ ಸುಗಂಧವಾಗಿರುತ್ತದೆ. ಇದನ್ನು “ದೇವಕುಸುಮ” ಎಂತಲೂ ಕರೆಯುತ್ತಾರೆ. ವಿಶ್ವದಲ್ಲಿ ಅತಿ ಹೆಚ್ಚು ಲವಂಗವನ್ನು ಉತ್ಪಾದಿಸುವ ದೇಶ ಕೂಡ ಇಂಡೋನೇಷಿಯಾವೆ ಆಗಿದೆ. ನಮ್ಮ ಕರ್ನಾಟಕದಲ್ಲಿ ಕಾರವಾರ, ಶಿವಮೊಗ್ಗ, ಕುಮಟಾ, ಹೊನ್ನಾವರ, ಶಿರಸಿ, ಆಗುಂಬೆ ಕಾಡುಗಳಲ್ಲಿ ಹೆಚ್ಚಾಗಿ ಲವಂಗದ ಮರಗಳು ಕಾಣಸಿಗುತ್ತವೆ. ಲವಂಗಕ್ಕೆ ಆಯುರ್ವೇದ ಶಾಸ್ತ್ರದಲ್ಲಿ, ಸಾಂಬಾರ ಪದಾರ್ಥಗಳಲ್ಲಿ ಅಗ್ರ ಸ್ಥಾನವಿದೆ. ಹಲವಾರು ಔಷಧೀಯ ಗುಣಗಳನ್ನು ಲವಂಗ ಹೊಂದಿದೆ. ಇದರ ಬಹಳಷ್ಟು ಉಪಯೋಗ ತಿಳಿಯದ ಮನುಷ್ಯ ಇಂದು ಮರವನ್ನು ತನ್ನ ಸ್ವಾರ್ಥಕ್ಕೆ ಕಡಿದು ನಾಶ ಮಾಡುತ್ತಿದ್ದಾನೆ. ಇದರ ಬಗ್ಗೆಯೂ ಅರಣ್ಯ ಇಲಾಖೆಯ ಕಾಳಜಿ ಅವಶ್ಯಕತೆಯಿದೆ.

ಫೋಟೋ ಕೃಪೆ : NetureBring

ಲವಂಗದ ಉಪಯೋಗಗಳು:

 • ಲವಂಗದಲ್ಲಿ ಹೆಚ್ಚಾಗಿ ನೋವನ್ನು ಗುಣಪಡಿಸುವ ಗುಣವಿದ್ದು ಹಲ್ಲುನೋವಿಗೆ ಮುಖ್ಯವಾಗಿ ರಾಮಬಾಣವಾಗಿದೆ.
 • ಲವಂಗದಿಂದ ಎಣ್ಣೆಯನ್ನು ತಯಾರಿಸುತ್ತಾರೆ. ಈ ಎಣ್ಣೆಯನ್ನು ಕಜ್ಜಿ,ತುರಿಕೆಗಳಂತಹ ಜಾಗಕ್ಕೆ ಹಚ್ಚಿದರೆ ಬೇಗ ಗುಣವಾಗುತ್ತದೆ.
 • ಗಾಯದ ನೋವನ್ನು ಕಡಿಮೆ ಮಾಡಲು ಲವಂಗದ ಎಣ್ಣೆ ಉತ್ತಮ ಔಷಧ.
 • ಟೂಥ್‌ ಪೇಸ್ಟ್‌, ಹಲ್ಲುಪುಡಿ, ಮಸಲಾಪುಡಿ, ಅಡುಗೆ ತಯಾರಿಕೆಯಲ್ಲಿಯೂ ಹೆಚ್ಚಾಗಿ ಬಳಸುತ್ತಾರೆ.ಇದು ಎಲ್ಲರೂ ನೋಡಿರಬಹುದು.
 • ಬೇಕರಿ ತಿನಿಸುಗಳಲ್ಲಿ ರುಚಿಗೆ ಸುವಾಸನೆಗೆ ಲವಂಗವನ್ನು ಬಳಸುತ್ತಾರೆ.ಬೂಂದಿಲಡ್ಡುಗಳಲ್ಲಿ ಲವಂಗವನ್ನು ನೋಡಿರುತ್ತೀರಾ.
 • ಅಡಿಕೆ ಬೀಡಾಗಳಲ್ಲು ಲವಂಗದ ಪುಡಿಯನ್ನು ಹಾಕುತ್ತಾರೆ.
 • ಮನೆಯಲ್ಲಿ ಕೀಟಗಳ ಕಡಿತ,ಗಾಯದ ಉರಿಯನ್ನು ಶಮನ ಮಾಡಲು ಲವಂಗದ ಎಣ್ಣೆ ಉತ್ತಮ ಪರಿಹಾರಕ.
 • ಬಾಯಿಹುಣ್ಣು,ಹಲ್ಲಿನ ವಸಡುಗಳ ಸಮಸ್ಯೆಗಳನ್ನು ನಿವಾರಿಸಲು ಉಪಯುಕ್ತವಾಗಿದೆ.
 • ಮಲೆನಾಡಿನ ಕಡೇಗಳಲ್ಲಿ ಲವಂಗದ ಎಲೆಯನ್ನು ಉಪಯೋಗಿಸಿ ಅದರೊಳಗೆ ಸಿಹಿಯನ್ನು ಹಾಕಿ ಎಲೆಯೊಂದಿಗೆ ಮಡಿಸಿ ರೊಟ್ಟಿಯನ್ನು ಮಾಡುತ್ತಾರೆ.ನಾಗರ ಪಂಚಮಿ ಹಬ್ಬಗಳಲ್ಲಿ ಹೆಚ್ಚಾಗಿ ಇದನ್ನು ತಯಾರಿಸುತ್ತಾರೆ.
 • ಜೀರ್ಣಕ್ರಿಯೆ ಉತ್ತಮಗೊಳಿಸಲು ಲವಂಗ ಉಪಯುಕ್ತವಾಗಿದೆ.
 • ಮುಖ್ಯವಾಗಿ ʼಶ್ವಾಸಕೋಶದ ಕ್ಯಾನ್ಸರ್‌ʼ ಪ್ರಾರಂಭಿಕ ಹಂತದಲ್ಲಿದ್ದರೆ,ಇದನ್ನು ನಿಯಂತ್ರಿಸುವ ಶಕ್ತಿ ಲವಂಗದಲ್ಲಿದೆ ಎಂದು ವೈದ್ಯ ತಜ್ಞರು ಹೇಳುತ್ತಾರೆ.
 • ಲವಂಗ, ಪುದೀನಾ, ಶುಂಠಿ, ಏಲಕ್ಕಿ ಸೇರಿಸಿ ಚಹಾ ಮಾಡಿ ಕೂಡಿದರೆ ತಲೆಯಲ್ಲಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ.12.ವೈದ್ಯರ ಪ್ರಕಾರ ಸೂಕ್ಷ್ಮಾಣುಗಳನ್ನು ವಿರೋಧಿಸುವ ಗುಣ ಲವಂಗದಲ್ಲಿರುವುದರಿಂದ,ಇದು ಭೇದಿ, ಅವಶಕ್ತಿ, ಸೆಳೆತ ಉಂಟು ಮಾಡುವ ಸೂಕ್ಷ್ಮ ಜೀವಿಗಳನ್ನು ತಡೆಯುತ್ತದೆ.
 • ಲವಂಗದಲ್ಲಿ ಮ್ಯಾಂಗ್ನೀಸ್‌,ವಿಟಮಿನ್‌ ಕೆ,ವಿಟಮಿನ್‌ ಸಿ,ವಿಟಮಿನ್‌ ಇ, ಕ್ಯಾಲ್ಸಿಯಂ, ನಾರಿನಾಂಶ, ಖನಿಜಾಂಶಗಳು ಇರುವುದರಿಂದ ಮೂಳೆಗಳ ಆರೋಗ್ಯಕ್ಕೆ,ಮೆದುಳಿನ ಕ್ರಿಯೆ ಚಟುವಟಿಕೆಯಿಂದರಲು ಲವಂಗದ ಸೇವನೆ ತುಂಬಾ ಒಳ್ಳೇಯದು ಎಂದು ಹೇಳುತ್ತಾರೆ.
 • ಮಧುಮೇಹ ಖಾಯಿಲೆ ಇದ್ದವರಿಗು ಇದರ ಉಪಯೋಗ ಬಹಳ ಅಗತ್ಯ. ನಿತ್ಯ ೫-೬ ಲವಂಗಗಳನ್ನು ಬಿಸಿ ನೀರಿನಲ್ಲಿ ಲೋಟಕ್ಕೆ ಹಾಕಿ ೧೫ ನಿಮಿಷ ಬಿಟ್ಟು ನೀರನ್ನು ಸೂಸಿ ಕುಡಿದರೆ ಮಧುಮೇಹ ನಿಯಂತ್ರಣ ದಲ್ಲಿರುತ್ತದೆ. ಲವಂಗದಲ್ಲಿರುವ ಅಂಶಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದು.

ಫೋಟೋ ಕೃಪೆ : Times Of India

ಹೀಗೆ ಲವಂಗವು ಬರಿ ಮಸಾಲೆ ಪದಾರ್ಥವಷ್ಟೆ ಅಲ್ಲದೆ ಆರೋಗ್ಯ ವೃದ್ಧಿಯಾಗಿಯೂ ಉಪಯೋಗವಾಗುತ್ತದೆ. ಹಾಗೆಯೇ ಲವಂಗದ ಬಗ್ಗೆ ಮುಖ್ಯವಾಗಿ ತಿಳಿಯಬೇಕಾಗಿರುವುದೇನೆಂದರೆ ಲವಂಗವು ಪ್ರಾರಂಭಿಕ ಹಂತದ ರೋಗಗಳಿಗೆ ಹಾಗೂ ಚಿಕ್ಕ-ಪುಟ್ಟ ಖಾಯಿಲೆಗೆ ಮನೆ ಮದ್ದಾಗಿದೆಯೆ ಹೊರತು ಯಾವುದೇ ಭಯಂಕರ ಖಾಯಿಲೆಗಳನ್ನು ಗುಣಪಡಿಸುವಂತಹ ಔಷಧೀಯಾಗಿ ಇನ್ನೂ ಗುರುತಿಸಿಕೊಂಡಿಲ್ಲಾ. ಅದರ ಬಗ್ಗೆ ವೈದ್ಯರ ತಂಡ ಸಂಶೋಧನೆಯಲ್ಲಿದೆ.

ಆದರಿಂದ ಯಾವುದೇ ಸಮಸ್ಯೆಗಾದರೂ ಉಪಯೋಗಿಸುವ ಮುನ್ನ ಆಯುರ್ವೇದ ತಜ್ಞರ ಸಲಹೆ ಒಮ್ಮೆ ಪಡೆದರೆ ತುಂಬಾ ಒಳ್ಳೇಯದು. ಗಿಡಮೂಲಿಕೆ ಔಷಧೀಯಾಗಿ ಲವಂಗವು ಆಯುರ್ವೇದದಲ್ಲಿ ತುಂಬಾ ಹೆಸರು ಮಾಡಿದೆ. ಅಷ್ಟೆ ಅಲ್ಲದೆ ಕರುಳು ನೋವು, ಲೀವರ್‌ ಸಮಸ್ಯೆ,ಕಿಡ್ನೀ ತೊಂದರೆಯಿಂದ ಬಳಲುತ್ತಿರುವವರು, ಹೊಟ್ಟೆ ಸಂಬಂಧಿತ ಭಾದೆಯಿರುವವರು, ಇತರೆ ಕೆಲವು ಗಂಭೀರವಾದ ಖಾಯಿಲೆಯಿಂದ ಬಳಲುತ್ತಿರುವವರು ಲವಂಗದ ಸೇವನೆ ಮಾಡುವುದು ಅಷ್ಟೊಂದು ಹಿತಕರವಲ್ಲ ಎಂಬುವುದು ಆಯುರ್ವೇದ ತಜ್ಞರ ಅಭಿಪ್ರಾಯ. ಅದಕ್ಕಾಗಿ ಲವಂಗದ ಉತ್ಪನ್ನಗಳನ್ನು ಉಪಯೋಗಿಸುವ ಮುನ್ನ ಅದರ ಗುಣಮಟ್ಟದ ಬಗ್ಗೆ ಹಾಗೂ ನಿಮ್ಮ ʼವೈದ್ಯತಜ್ಞರʼ ಸಲಹೆಯನ್ನು ಪಡೆದು ಉಪಯೋಗಿಸಿ.


 • ನಾಗರಾಜ್‌ ಲೇಖನ್ (ಹರಡಸೆ, ಹೊನ್ನಾವರ)

 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW