ಜನ ಸಿನಿಮಾ ಸುಮ್ನ ನೋಡೂದಿಲ್ಲ.ಹಿಂದಿಯೊಳಗ ನೋಡ್ರಿ. ಏನ್ ಅವ್ರ ವೈಯ್ಯಾರ, ಏನ್ ಅವರ ಒನಪು.ಅವ್ರು ಒಮ್ಮೆ ಸೊಂಟಾ ಕುಣಿಸಿದ್ರ ಸಾಕು. ನಮ್ಮ ಪ್ರೇಕ್ಷಕ ಮಂದಿ ಮೂರ್ಛೆ ಹೋಗತಾರೀ ಯಪ್ಪಾ.
ಕೊಡಗಿನ ಮಾದಿಕ್ರಿಯ ಪ್ರತಿಷ್ಠಿತ ಹೋಟೆಲ್ಲಿನ ಮೂರನೇ ಮಹಡಿಯ ಕೋಣೆ. ಖ್ಯಾತ ಸಿನಿಮಾ ನಿರ್ದೇಶಕ ಐವತ್ತೆಂಟು ವರ್ಷದ ರಾಣಾ ಹನ್ನೆರಡನೇ ನಂಬರಿನ ಕೋಣೆಯಲ್ಲಿದ್ದಾರೆ. ಚಿತ್ರದ ನಿರ್ಮಾಪಕ ಚಂದೂ ಪಾಟೀಲರು ಯಾರಿಗೂ ಮುಜುಗರ ಆಗಬಾರದೆಂದು ತಮ್ಮ ಸಹಾಯಕರೊಂದಿಗೆ ಮೇಲೆ ನಾಲ್ಕನೆಯ ಮಹಡಿಯ ಕೊನೆಯಲ್ಲಿದ್ದಾರೆ.
ಚಿತ್ರ ತಂಡದ ತಾಂತ್ರಿಕ ವರ್ಗದವರನ್ನು ಇನ್ನೊಂದು ಸಣ್ಣ ಹೋಟೆಲ್ಲಿನಲ್ಲಿ ಉಳಿಸಲಾಗಿದೆ. ಛಾಯಾಗ್ರಾಹಕ ತಂಗಮಣಿ ಮತ್ತು ಪ್ರೊಡಕ್ಷನ್ ಮ್ಯಾನೇಜರ್ ರಘುರಾಮ್ ಅರ್ಥಾತ್ ಹೊಗೆ ರಾಮ್ ಅವರು ಜನರೇಟರ್ ಹಾಗು ಕೆಮರಾ ಹುಡುಗರ ಜತೆ ಅಲ್ಲಿಯೇ ಇದ್ದಾರೆ. ಪ್ರೊಡಕ್ಷನ್ ಬಾಯ್ಸ್ ಗಳಿಗೂ ಅಲ್ಲಿಯೇ ಬಿಡಾರ ಕಲ್ಪಿಸಲಾಗಿದೆ.
ಫೋಟೋ ಕೃಪೆ : The times of india
ಚಿತ್ರದ ಇತರ ನಟರು, ಸಹಾಯಕ ನಿರ್ದೇಶಕರು ಎಂದು ನಾಮಾಂಕಿತರಾದ ಹುಡುಗರು ಮೂರನೇ ಮಹಡಿಯ ಇನ್ನೊಂದು ಕಡೆ ಸಾಮಾನ್ಯ ರೂಮಿನಲ್ಲಿದ್ದಾರೆ. ಹುಡುಗಿಯರಿಗೆ ಪ್ರತ್ಯೇಕ ರೂಮುಗಳಿವೆ. ಇಡೀ ಚಿತ್ರತಂಡಕ್ಕೆಂದು ಹೋಟೆಲ್ಲಿನವರು ಹನ್ನೆರಡು ರೂಮುಗಳನ್ನು ಕಾದಿರಿಸಿ ನೀಡಿದ್ದಾರೆ. ಆದರೆ ಚಿತ್ರದ ಹೀರೋಯಿನ್ ಎಲ್ಲರ ಜೊತೆ ಒಂದೇ ಕಡೆ ಇರಲೊಪ್ಪದೆ ‘ಐ ವಾಂಟ್ ಸಪರೇಟ್ ಇನ್ ಸಪರೇಟ್ ಹೋಟೆಲ್’ ಎಂದು ಕಡ್ಡಿ ಮುರಿದಂತೆ ಹೇಳಿದ್ದರಿಂದ ನಿರ್ಮಾಪಕರು ಆಕೆಗೆ ಇನ್ನೊಂದು ಹೋಟೆಲ್ಲಿನಲ್ಲಿ ತಂಗುವ ವ್ಯವಸ್ಥೆ ಮಾಡಿದ್ದರು.
ಅದನ್ನು ಕಂಡ ನಾಯಕ ಶಯನಕುಮಾರ್ ತನಗೂ ಬೇರೆ ಕಡೆ ರೂಮ್ ಬೇಕೆಂದು ಮ್ಯಾನೇಜರ್ ಹತ್ತಿರ ತಕರಾರು ತೆಗೆದಿದ್ದ. ಮ್ಯಾನೇಜರ್ ರಘುರಾಮ್ ಅವನ ಮೇಲೆ ಉರಿದುಬಿದ್ದು-
‘ಹೀರೋಯಿನ್ ಬಾಂಬೆಯವ್ಳು, ಪಾಪ ಸಪರೇಟ್ ರೂಮು ಕೇಳ್ತಾರೆ, ಕೊಡೋಣ. ಆದ್ರೆ ಹಾರೋಗೇನ್ರಿ ಧಾಡಿ? ಚನ್ನಪಟ್ಟಣದಲ್ಲಿ ಮುದ್ದೆ ಮುರೀತಿದ್ದೋನು, ಕರೆದು ಚಾನ್ಸು ಕೊಟ್ರೆ ಹಿಂಗಾ ಆಡೋದು? ನೋಡಿ ನೋಡಿ ಹೊಗೆ ಹಾಕ್ಸಿ ಬಿಡ್ತೀನಿ ಅಷ್ಟೇಯಾ.ನೆಟ್ಟಿಗೆ ಒಂದೂ ಕಾಲು ಸಿನಿಮಾ ಮಾಡಿಲ್ಲ. ಆಗಲೇ ನನ್ಮುಂದೇನೆ ಪೊಗರು ಅದೂ ಇಂಡಸ್ಟ್ರಿಯಲ್ಲಿಮೂವತ್ತು ವರ್ಷ ಮಣ್ಣು ಹೊತ್ತೋನು ನಾನು.’
ಫೋಟೋ ಕೃಪೆ : The Hindu
ಹೊಗೆರಾಮ ಯೂನಿಟ್ ಹುಡುಗರ ಹತ್ತಿರ ತನ್ನ ಪ್ರತಾಪ ತೋರಿಸಿಕೊಂಡ- ಉತ್ತರ ಭೂಪನಂತೆ. ಬೆಂಗಳೂರಿನಿಂದ ಕೆಮರಾ, ಜಿಮ್ಮಿ, ಕ್ರೆನ್, ಲೈಟ್ಸ್ ಇತ್ಯಾದಿಗಳು ಸಂಜೆಯೆಂದರೆ ಬಂದಿದ್ದವು. ಮಡಿಕೇರಿಯಲ್ಲಿ ಆಗಲೇ ದೊಡ್ಡ ಸುದ್ದಿ. ಬೆಂಗಳೂರಿನಿಂದ ಸಿನಿಮಾ ತೆಗೆಯೋರು ಬಂದಿದ್ದಾರೆ. ಎರಡು ತಿಂಗಳು ಸಂಪೂರ್ಣವಾಗಿ ಕೊಡಗಿನಲ್ಲಿಯೇ ಶೂಟಿಂಗ್ ಮಾಡ್ತಾರಂತೆ. ಪುಟ್ಟಣ್ಣ ಕಣಗಾಲರಿದ್ದಾಗ ಸೋಮವಾರ ಪೇಟೆಯ ಸಾಕವ್ವನ ಬಂಗಲೆಯಲ್ಲಿ ಎಡಕಲ್ಲು ಗುಡ್ಡದ ಮೇಲೆ ಎಂಬ ಸಿನಿಮಾ ಶೂಟಿಂಗ್ ಮಾಡಿದ್ದರು. ಆದಾದ ಮೇಲೆ ಕೂರ್ಗ್ ನಲ್ಲಿದೊಡ್ಡ ಪ್ರಮಾಣದಲ್ಲಿ ತಯಾರಾಗುವ ಸಿನಿಮಾ ಅಂದರೆ ಇದೆ. ಹೀರೋಯಿನ್ ಹಿಂದಿಯವಳಂತೆ. ಶಯನಕುಮಾರ್ ನಾಯಕನಂತೆ. ಪ್ರಸಿದ್ಧ ನಿರ್ದೇಶಕ ರಾಣಾ ಈ ಸಿನಿಮಾ ಚಿತ್ರಿಸುತ್ತಾರಂತೆ. ಅಂದರೆ ಭಾರಿ ಬಜೆಟ್ಟಿನ ಸಿನಿಮಾನೇ ಇರಬೇಕು. ಸುದ್ದಿಯ ಮೇಲೆ ಸುದ್ದಿಗಳು ತೇಲಿದವು ಪಟ್ಟಣದ ತುಂಬಾ.
ರಾತ್ರಿಯಾಯಿತು ಯೂನಿಟ್ಟಿನ ಹುಡುಗರು ಕದ್ದು ಕುಡಿಯಲು ಹೋದರು. ನಾಳೆಯಿಂದ ಶೂಟಿಂಗ್ ಇರುತ್ತೆ, ಪ್ಯಾಕಪ್ ಆಗುವುದು ಎಷ್ಟು ಹೊತ್ತಿಗೋ.ಕೊಡಗಿಗೆ ಬಂದು ಕುಡಿಯದಿದ್ದರೆ ಹೇಗೆ? ಅವರ ಹಿಂದೆ ಇವರು, ಇವರ ಹಿಂದೆ ಅವರು ಬಾರು ಹೊಕ್ಕರು. ನಿರ್ಮಾಪಕ ಚಂದೂ ಪಾಟೀಲ ಅವತ್ತು ರಾತ್ರಿ ನಿರ್ದೇಶಕರಿಗೆ ಪ್ರೈವೇಟಾಗಿ ಗುಂಡು ಪಾರ್ಟಿ ಇಟ್ಟುಕೊಂಡರು. ಅದರ ಪೂರ್ಣ ವ್ಯವಸ್ಥೆ ಮಾಡಲು ಹೊಗೆ ರಾಮನಿಗೆ ವಹಿಸಲಾಗಿತ್ತು. ಹೊಗೆರಾಮ ಇಂಥದರಲ್ಲಿ ಎತ್ತಿದ ಕೈ..ಇಂಥ ಸಂದರ್ಭಗಳಲ್ಲಿಯೇ ಆತ ಗಾಂಧಿನಗರದಲ್ಲಿ ಎಷ್ಟೋ ಮಂದಿಗೆ ಹೊಗೆ ಹಾಕಿಸಿದ್ದಾನೆ.
ಫೋಟೋ ಕೃಪೆ : Depositephotos
ಇಡೀ ಮಡಿಕೇರಿ,ಕತ್ತಲೆಯ ತೆಕ್ಕೆಗೆ ಕರಾಗುತ್ತಿದ್ದಂತೆ ರಾಣಾರ ಕೋಣೆಯಲ್ಲಿ ಗುಂಡಿನ ಗಮ್ಮತ್ತು ಏರತೊಡಗಿತ್ತು. ಅಲ್ಲಿದ್ದವರು ನಿರ್ಮಾಪಕ ಚಂದೂ ಪಾಟೀಲ, ನಿರ್ದೇಶಕ ಮಿ. ರಾಣಾ,ಕೆಮರಾಮೆನ್ ತಂಗಮಣಿ ಮಾತ್ರ, ಹೊಗೆರಾಮ ಮತ್ತು ಅವನ ಸಹಾಯಕ ಸರಬರಾಜಿಗೆ ನಿಂತಿದ್ದರು ಅಷ್ಟೇ. ಏನೇ ಕುಡಿದರೂ ಮಿ.ರಾಣಾ ಸಮಯ ಸಂದರ್ಭ ನೋಡಿ ವರ್ತಿಸುತ್ತಾರೆ ಎಂಬುದು ಹೊಗೆರಾಮನಿಗೆ ಗೊತ್ತಿರುವ ವಿಷಯ. ಹಾಗಾಗಿ ಅವನಿಗೆ ಯೋಚನೆಯಿರಲಿಲ್ಲ. ಆದರೆ ಅವನಿಗೆ ಚಿಂತೆ ಇದ್ದದ್ದು ನಿರ್ಮಾಪಕ ಪಾಟೀಲನ ಬಗ್ಗೆ.ಯಾಕೆಂದರೆ ಸ್ವಲ್ಪ ಹೊತ್ತಿನಲ್ಲೇ ಅವನಿಗೆ ಏರತೊಡಗಿತ್ತು.
‘ಏಯ್ ಲಘುರಾಮಾ… ಭಾಳ ಪುರಮಾಸಿ ವ್ಯವಸ್ಥಾ ಮಾಡಿದಿ ನೋಡು. ಅಡ್ಡಿಯಿಲ್ಲಪ್ಪಾ,ಒಂದ್ ಕೆಲ್ಸ ಮಾಡು. ಒಂದ್ ವೈನ್ ತಗೊಂಡ್ ಹೋಗಿ ನಮ್ಮ ಹೀರೋಯಿನ್ ಖೋಲೆದಾಗ ಇಟ್ಟು ಬಾ. ಖುದ್ದು ನಾನ ಕಳಿಸೇನಿ ಅಂತ ಹೇಳ ಮತ್ತ…’
ನಿರ್ಮಾಪಕ ಹಾಗೆ ತೊದಲುತ್ತ ಹೇಳಿದಾಗ ಒಂದು ಕ್ಷಣ ನಿರ್ದೇಶಕ ರಾಣಾರಿಗೆ ಶಾಕ್ ಆಯಿತು. ತುಟಿಗೆ ಗ್ಲಾಸು ಹಿಡಿದವರು ಪಾಟೀಲರತ್ತ ನೋಡಿದರು.
ಹೊಗೆರಾಮನಿಗೂ ಸಿಟ್ಟು ಬಂದಿತ್ತು. ತಾನೊಬ್ಬ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಇಂಥ ಕೆಲಸ ಮಾಡುವುದೇ? ಯಾರು ಯಾರೋ ಇಂಡಸ್ಟ್ರಿಗೆ ಬಂದರೆ ಆಗುವುದೇ ಹೀಗೆ. ಆದರೆ ಅದನ್ನು ಹೊರಗೆ ತೋರಿಸಲಿಲ್ಲ.
ಆಯ್ತು ಸಾರ್. ಪ್ರೊಡಕ್ಷನ್ ಬಾಯ್ ನ ಕಳಿಸ್ತೀನಿ.ಡೋಂಟ್ ವರಿ…’ ಅಂದ ನಗುತ್ತ . ರಾಣಾರಿಗೆ ಸಿಟ್ಟು ಬಂತು. ತಡೆಯಲಾಗಲಿಲ್ಲ. ನಿರ್ಮಾಪಕ ಚಂದೂ ಪಾಟೀಲರಿಗೆ ನೇರವಾಗಿ ಹೇಳಿಯೇಬಿಟ್ಟರು.
ನೋಡಿ, ನೀವು ಇಂಡಸ್ಟ್ರಿಗೆ ಮೊದಲ ಬಾರಿ ಬಂದಿದ್ದೀರಾ. ನಾನು ಆಗಲೇ ನಲವತ್ತು ವರ್ಷ ಚಿತ್ರರಂಗದಲ್ಲಿ ಕಳೆದಿದ್ದೀನಿ. ಈ ರಂಗದಲ್ಲಿ ಯಾರು, ಯಾವಾಗ, ಹೇಗಿರ್ತಾರೆ ಅಂತ ಹೇಳೋಕ್ ಆಗೋಲ್ಲ. ಅದರಲ್ಲೂ ನಿರ್ಮಾಪಕ ಚಂದೂ ಪಾಟೀಲರಿಗೆ ನೇರವಾಗಿ ಹೇಳಿಯೆಯೇಬಿಟ್ಟರು.
ಫೋಟೋ ಕೃಪೆ : Deccan chronicle
‘ನೋಡಿ, ನೀವು ಇಂಡಸ್ಟ್ರಿಗೆ ಮೊದಲ ಬಾರಿ ಬಂದಿದ್ದೀರ. ನಾನು ಆಗಲೇ ನಲವತ್ತು ವರ್ಷ ಚಿತ್ರರಂಗದಲ್ಲಿ ಕಳೆದಿದ್ದೀನಿ. ಈ ರಂಗದಲ್ಲಿ ಯಾರು, ಯಾವಾಗ, ಹೇಗಿರ್ತಾರೆ ಅಂತ ಹೇಳೋಕ್ ಆಗೋಲ್ಲ. ಅದರಲ್ಲೂ ನಿರ್ಮಾಪಕರಾದವರಿಗೆ ಎಲ್ಲ ಕಡೆಯೂ ಗಮನವಿರಬೇಕಾಗುತ್ತದೆ. ಯಾಕಂದ್ರೆ ಸಿನಿಮಾ ತಯಾರಾಗೋದೆ ಅವರ ಹಣದ್ಮೇಲೆ ಅಲ್ವ? ನೀವು ಕಲಾವಿದರಿಗೆ ಗೌರವ ಕೊಡಿ. ಬೇಡಾ ಅನ್ನೋದಿಲ್ಲ. ಆದ್ರೆ ಹೀಗೆ ಅವರ ವೈಯಕ್ತಿಕ ತೀಟೆಗಳಿಗೆಲ್ಲ ಬಕೆಟ್ ಹಿಡೀಬೇಡಿ.ಆದ್ರಲ್ಲೂ ಹಿಂದಿ ಹುಡುಗೀರು ಸಡಿಲ ಸಿಕ್ಕಷ್ಟೂ ತಲೆ ಮೇಲೆ ಮೆಣಸು ಅರಿತಾರೆ. ನಾಳೆ ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುರು ನೀವೇ. ಒಬ್ಬ ನಿರ್ಮಾಪಕ ಹಣ ಕಳ್ಕೊಂಡು ಗಾಂಧೀನಗರದಲ್ಲಿ ಹುಚ್ಚನಂತೆ ತಿರುಗೋದು ಒಳ್ಳೆಯ ಬೆಳವಣಿಗೆ ಅಲ್ಲ’.
ಈ ಮಾತುಗಳು ನಿರ್ಮಾಪಕ ಚಂದೂ ಪಾಟೀಲರ ಸ್ವಾಭಿಮಾನ ಕೆರಳಿಸಿತೇನೋ ಕೈನಲ್ಲಿದ್ದ ಗ್ಲಾಸನ್ನು ಎತ್ತಿ ಒಂದೇ ಸಲಕ್ಕೆ ಗಟಗಟ ಕುಡಿದರು.
‘ಡೈರೆಕ್ಟರ್ ಸಾಹೇಬ್ರ. ರೊಕ್ಕದ ಚಿಂತಿ ನಿಮಗ ಬ್ಯಾಡ್ರಿ. ನಿಮಗ ಕನ್ನಡದ ಹುಡುಗಿನ ನಾಯಕಿ ಪಾತ್ರಕ್ಕ ಬೇಕು ಅನ್ನಸಿದ್ದರ ಅದು ಬರೋಬರಿ ಅಲ್ಲ ತಗೀರಿ.ಜನ ಸಿನಿಮಾ ಸುಮ್ನ ನೋಡೂದಿಲ್ಲ. ನೋಡತಿದ್ದರ ಮೈ ಬಿಸಿ ಆಗಬೇಕ್ರಪ್ಪಾ.ಹಂಗ ಕುಣಿಯುವಾಕಿ ಇರಬೇಕು. ಕನ್ನಡದ ಹುಡಿಗ್ಯಾರಿಗೆ ನೆಟ್ಟಗ ನಿಲ್ಲಕ ಬರೂದಿಲ್ಲ. ಆದರ ಹಿಂದಿಯೊಳಗ ನೋಡ್ರಿ. ಏನ್ ಅವ್ರ ವೈಯ್ಯಾರ, ಏನ್ ಅವರ ಒನಪು. ಅವ್ರು ಒಮ್ಮೆ ಸೊಂಟಾ ಕುಣಿಸಿದ್ರ ಸಾಕು. ನಮ್ಮ ಪ್ರೇಕ್ಷಕ ಮಂದಿ ಮೂರ್ಛೆ ಹೋಗತಾರೀ ಯಪ್ಪಾ, ನಾವು ನಿರ್ಮಾಪಕ ಮಂದಿ ರೊಕ್ಕಾ ಸುರಿಯೂದು ಅದಕ್ಕ ನೋಡ್ರಿ, ಇಂತಾ ಹುಡುಗ್ಯಾರಿಗೆ ಏನ್ ಕೊಟ್ರು ಕಡಿಮಿ ತಗೋರಿ.’
ನಿರ್ಮಾಪಕ ಚಂದೂ ಪಾಟೀಲ ಹಾಗಂದಾಗ ಮಿ.ರಾಣಾ ಇನ್ನೂ ಅಸಮಾಧಾನಗೊಂಡರು.
ಫೋಟೋ ಕೃಪೆ : Youtube (ಸಾಂದರ್ಭಿಕ ಚಿತ್ರ )
‘ಬೇರೆಯವರ ಸಿನಿಮಾಕ್ಕೂ ನನ್ನ ಸಿನಿಮಾಕ್ಕೂ ತುಂಬಾ ವ್ಯತ್ಯಾಸ ಇದೆ ಪಾಟೀಲ್ರೆ, ಹೆಣ್ಣಿನ ಸೊಂಟ ನೋಡೋದಕ್ಕೆ ಸಿನಿಮಾನೇ ಯಾಕೆ ಬೇಕು?ಕನ್ನಡ ಸಿನಿಮಾಕ್ಕೆ ಒಂದು ಘನತೆಯಿದೆ. ಅದನ್ನು ಉಳಿಸ್ಕೊಬೇಕು ಇವ್ರೇ, ಸಿನಿಮಾ ಅಂದ್ರೆ ಹಣ ಮಾಡೋ ದಂಧೆ ಅಲ್ಲ. ನನಗಿರೋ ಆಸಕ್ತಿ ಅಂದ್ರೆ ಕನ್ನಡ ಪ್ರತಿಭೆಗಳನ್ನು ಬಳಸ್ಕೊಂಡು ಸಿನಿಮಾ ಮಾಡಬೇಕು ಅನ್ನೋದು. ಕನ್ನಡದಲ್ಲಿ ಕಲಾವಿದೆಯರಿರೋವಾಗ ನಮ್ಮ ಸಿನಿಮಾಕ್ಕೆ ಹಿಂದಿಯಿಂದ ಹಿರೋಯಿನನ್ನ ತರಬೇಕಾಗಿರಲಿಲ್ಲ…’
‘ಹಂಗಂದ್ರ ಹೆಂಗರೀ… ಡೈರೆಕ್ಟರ್ ಸಾಹೇಬರ? ಸಿನಿಮಾ ಅಂದ್ರ ಮ್ಯೂಸಿಯಂನಾಗೆ ಇಡೋ ಪೀಸು ಅನ್ಕೊಂಡಿರಿ…? ರೊಕ್ಕಾ ಹಾಕಿ ರೊಕ್ಕಾ ತಗೀಬೇಕರೀ ಇದರಾಗ, ಇಲ್ಲದಿದ್ದರ ಅವನೌವ್ನ… ಇದಕ್ಯಾಕ ಇಂಡಸ್ಟ್ರಿ ಅನಬೇಕು ಹೇಳ್ರಿ? ಕನ್ನಡ ಹುಡುಗ್ಯಾರಿಗೆ ಗ್ಲಾಮರ್ ಇಲ್ಲ. ಮಾರ್ಕೆಟು ಇಲ್ಲ. ಓಡೋ ಕುದುರೀ ಬಾಲಕ್ಕಷ್ಟ ರೊಕ್ಕಾ ಕಟ್ಟಬೇಕರೀ…ಸಾಹೇಬರ.’
‘ಆದ್ರೆ ನೀವು ಆಯ್ಕೆ ಮಾಡಿರೋ ಈ ಮುಂಬಯಿ ಹುಡುಗಿ ಅನುಷ್ ಚಾವ್ಲಾ ಒಳ್ಳೆಯ ನಟಿಯಲ್ಲ.’
‘ಹಂಗನಬ್ಯಾಡ್ರಿ, ಮುಂದಿನ ದಿನ ನೋಡ್ರಿ. ಬೆಂಗಳೂರು ಮೆಜೆಸ್ಟ್ರೀಕ್ಕಿನಾಗ ಇದ ಅನಿಷ್ ಚಾವ್ಲಾಳ ಒಂದು ದೊಡ್ಡ ಪೋಸ್ಟರ್ ಹಾಕಿಸ್ತೀನಿ. ಆಗ ಗೊತ್ತಕೈತಿ ನಿಮಗ ನೋಡಿದ ಮಂದಿ ಹ್ಯಾಂಗ ಬಾಯಿ ಮ್ಯಾಲ ಕೈ ಇಟ್ಕೊಂಡು ನಿಲ್ತಾರಂತ. ಹರೇದ ಹುಡುಗೂರು ಬಾವುಲಿ ಬಂದು ಬೀಳದಿದ್ದರೆ ಕೇಳ್ರಿ ಇಕಿ ಚಿತ್ರಾ ನೋಡಿ ಸಿನಿಮಾ ರಿಲೀಜಿಗಿಂತ ಮದಲ ಮಂದೀಗೆ ಜ್ವರಾ ಬರದಿದ್ದರ ಕೇಳ್ರಿ…’
ಚಂದೂ ಪಾಟೀಲ ತುಟಿಯಲ್ಲಿ ನಕ್ಕರು. ಮುಂಬಯಿ ಹುಡುಗಿ ಅನುಷ್ ಚಾವ್ಲಾಳ ಮೇಲೆ ಅಷ್ಟು ನಂಬಿಕೆ ಇತ್ತು ಅವರಿಗೆ. ನಿರ್ದೇಶಕ ರಾಣಾರಿಗೆ ಅಸಮಾಧಾನ ಹೆಚ್ಚಾಯಿತು. ಮನುಷ್ಯನ ಸಹಜ ಅಭಿರುಚಿಗೂ ನಾವಾಗಲೇ ಹೆರುವ ಕೀಳು ಅಭಿರುಚಿಗೂ ಇರುವ ವ್ಯತ್ಯಾಸವನ್ನು ವಿವರಿಸಲು ಯತ್ನಿಸಿದರು. ಸಿನಿಮಾ ಜನರಲ್ಲಿ ಸಾಮಾಜಿಕ, ನೈತಿಕ ಜವಾಬ್ದಾರಿಯನ್ನು ಹೆಚ್ಚಿಸಬೇಕು. ಬರೀ ಮನರಂಜನೆಗಾಗಿಯೇ ಸಿನಿಮಾ ಅಲ್ಲ ಎಂಬುದು ಇವರ ವಾದ. ಆದರೆ ಎಲ್ಲವೂ ಬೋರ್ಗಲ್ಲು ಮೇಲೆ ನೀರು ಸುರಿದಂತೆ.ಮುಂಬಯಿ ಹುಡುಗಿ ಅನುಷ್ ಚಾವ್ಲಾ ಚಂದೂ ಪಾಟೀಲರಿಗೆ ಹುಚ್ಚು ಹಿಡಿಸಿಬಿಟ್ಟಿದ್ದಳು.
‘ನಾನು ಹೇಳ್ತಿರೋದು ಕನ್ನಡ ಇಂಡಸ್ಟ್ರಿಗೆ ಮಾರ್ಕೆಟ್ ವ್ಯಾಪ್ತಿ ದೊಡ್ಡದಿಲ್ಲ. ಹಿಂದಿಯ ಈ ಚಾವ್ಲಾಗೆ ಬರೋಬ್ಬರಿ ಒಂದು ಕೋಟಿ ಕೊಡ್ತಿದೀರಾ. ಆದ್ರೆ ಕನ್ನಡದ ಹುಡುಗಿಗೆ ಮೂವತ್ತು ಲಕ್ಷ ಕೊಟ್ಟಿದ್ರೆ ಸಾಕಿತ್ತು. ಮಾಡ್ತಿರೋದು ಕನ್ನಡ ಸಿನಿಮಾ. ನೋಡೋರು ಕನ್ನಡ ಜನ. ಹಂಗಿದ್ಮೇಲೆ ಕನ್ನಡ ಹುಡುಗಿ ಯಾಕ್ ಬೇಡ ಸ್ವಾಮಿ?’.
ಈಗ ಚಂದೂ ಪಾಟೀಲನಿಗೂ ಏರಿತು. ಈ ನಿರ್ದೇಶಕ ಗಾಂಧಿನಗರದ ಮಂದಿಗೆ ದೊಡ್ಡವನಿರಬಹುದು. ಆದರೆ ಹೀಗೆಲ್ಲ ಎಲ್ಲದರಲ್ಲೂ ಮೂಗು ತೊರಿಸಿದರೆ ಸರಿಯಾಗಿರೋದಿಲ್ಲಂತ ಹೇಳಬೇಕೆನಿತು.
(ಸೂಚನೆ : ಈ ಕತೆಯೂ ಈಗಾಗಲೇ ಪುಸ್ತಕರೂಪದಲ್ಲಿದ್ದು, ಆಕೃತಿಕನ್ನಡ ಮ್ಯಾಗಝಿನ್ ನಲ್ಲಿ ಪ್ರತಿ ಶನಿವಾರ ಪ್ರಕಟವಾಗುತ್ತದೆ. ಇತರೆ ಯಾರು ಕೂಡ ಈ ಕತೆಯನ್ನು ಪ್ರಕಟಿಸುವ ಹಾಗಿಲ್ಲ.ಹಾಗೂ ಕದಿಯುವಂತಿಲ್ಲ.)
[ ಮತ್ತೆ ಮುಂದಿನ ಶನಿವಾರ ಓದಿರಿ. ಇದೊಂದು ಕುತೂಹಲಕಾರಿ ಕತೆ. ತಪ್ಪದೆ ಓದಿರಿ. ]
- ಹೂಲಿಶೇಖರ್ (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)