ನಿಮ್ಮೆಲ್ಲರ ಪ್ರೀತಿ, ಹಾರೈಕೆಯಿಂದ ಹೂಲಿಶೇಖರ್ ಅವರು ಆರೋಗ್ಯವಾಗಿದ್ದಾರೆ. ಆದರೆ ‘ಕಾಳಿ ಕಣಿವೆ ಕತೆಗಳು’ ಮುಂದೊರೆಯಲು ಸಮಯ ತಗೆದುಕೊಳ್ಳುತ್ತದೆ. ಅಲ್ಲಿಯವರೆಗೂ ಹೂಲಿಶೇಖರ್ ಅವರ ಸ್ವರಚಿತ ಕಾದಂಬರಿ ‘ಜನುಮ ಜನುಮಕೂ’ ನಿಮ್ಮ ಮುಂದೆ ಪ್ರತಿ ಶನಿವಾರ ಬರಲಿದೆ. ‘ಕಾಳಿ ಕಣಿವೆ ಕತೆ’ಯನ್ನು ನೀವೆಲ್ಲ ಪ್ರೀತಿಯಿಂದ ಸ್ವೀಕರಿಸಿದ್ದೀರಿ. ಅದರಂತೆ ಈ ಕಾದಂಬರಿಯನ್ನು ಕೂಡ ಅಷ್ಟೇ ಪ್ರೀತಿಯಿಂದ ಸ್ವೀಕರಿಸುತ್ತಿರಿ ಎನ್ನುವ ಭರವಸೆಯೊಂದಿಗೆ ಹೊಸ ಕಾದಂಬರಿ ಆಕೃತಿಕನ್ನಡದಲ್ಲಿ ಪ್ರಕಟವಾಗಲು ಸಿದ್ಧವಾಗಿದೆ. ಓದಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.
ಕಾದಂಬರಿ ಬಗ್ಗೆ ಖ್ಯಾತ ಲೇಖಕ ಹೂಲಿಶೇಖರ್ ಅವರ ಮಾತು
‘ಜನುಮ ಜನುಮಕೂ’ ಕಾದಂಬರಿಯು ಕನ್ನಡದ ಪ್ರಮುಖ ವಾರಪತ್ರಿಕೆ ಸುಧಾದಲ್ಲಿ ಹದಿಮೂರು ಕಂತುಗಳಲ್ಲಿ ಪ್ರಕಟವಾಯಿತು. ಧಾರಾವಾಹಿಯನ್ನು ಓದಿದ ನೂರಾರು ಸಹೃದಯರು ತಮ್ಮ ಮೆಚ್ಚುಗೆಯ ಪತ್ರಗಳನ್ನು ಪತ್ರಿಕೆಗೆ ಬರೆದಿದ್ದಾರೆ. ಸಾಕಷ್ಟು ಜನ ನನಗೂ ಪತ್ರಿಸಿ, ಇದು ನಿಜವಾಗಲೂ ನಡೆದ ಸತ್ಯ ಕಥೆಯೇ? ಎಂದು ಪ್ರಶ್ನಿಸಿದ್ದಾರೆ. ಒಂದು ಜನ್ಮದಲ್ಲಿ ಕಳೆದುಕೊಂಡ ಪ್ರೀತಿಯನ್ನು ಇನ್ನೊಂದು ಜನ್ಮದಲ್ಲಿ ಪಡೆಯುವ ಛಲತೊಟ್ಟ ಒಂದು ಹೆಣ್ಣು ಆತ್ಮದ ಕತೆಯಿದು.
ರೋಜಿ ಎಂಬ ಹುಡುಗಿ ಬೆಳಗಾವಿಯಲ್ಲಿ ಹೈಸ್ಕೂಲು ಓದುವಾಗಲೇ ತನ್ನ ಸಹಪಾಠಿ ಪಪ್ಪು ರಾಣಾ ಎಂಬ ಹುಗುಗನನ್ನು ಗಾಢವಾಗಿ ಪ್ರೀತಿಸುತ್ತಾಳೆ. ಕಾಲೇಜು ಓದುವಾಗಲೂ ಅವರಿಬ್ಬರೂ ಪ್ರೇಮಿಗಳೇ. ಆದರೆ ಕಾರಣಾಂತರದಿಂದ ಮದುವೆ ಸಾಧ್ಯವಾಗುವುದಿಲ್ಲ.ಇಬ್ಬರ ಜೀವನದ ದಾರಿ ಬೇರೆ ಬೇರೆಯಾಗುತ್ತದೆ. ಪಪ್ಪು ಹಿರಿಯರು ತೋರಿಸಿದ ಹುಡುಗಿಯನ್ನು ಮದುವೆಯಾಗಿ ದೂರ ಹೋದರೆ , ರೋಜಿ ಜಿಗುಪ್ಸೆಗೊಂಡು ಕ್ರೈಸ್ತ ಸನ್ಯಾಸಿನಿಯಾಗಿ ಇನ್ನೆಲ್ಲೋ ಹೋಗಿತ್ತಾಳೆ. ಏನಿದ್ದರೂ ರೋಜಿಗೆ ಪಪ್ಪುನ ಅಗಲುವಿಕೆಯನ್ನು ಸಹಿಸಲಾಗುವುದಿಲ್ಲ. ಅವನಿಲ್ಲದ ಬದುಕು ಬದುಕೇ ಅಲ್ಲ ಎಂದು ನೊಂದ ರೋಜಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆದರೆ ಅವಳ ಪ್ರೀತಿಗೆ ಅದೇನು ಶಕ್ತಿ ಇರುತ್ತದೋ.ಸತ್ತು ಹೋದ ರೋಜಿ ಕೊಡಗಿನಲ್ಲಿ ಸುಮಾ ಅಪ್ಪಚ್ಚುವಾಗಿ ಮರುಜನ್ಮ ಪಡೆಯುತ್ತಾಳೆ. ಸುಮಾ ಮತ್ತು ರಾಣಾರ ಭೇಟಿಯಾದಾಗ ಅವನಿಗೆ ಐವತ್ತೆಂಟು ವರುಷ. ಇವಳಿಗೆ ಇಪ್ಪತ್ಮೂರು ವರುಷ. ಆಗ ರಾಣಾ ಪ್ರಸಿದ್ಧ ಸಿನಿಮಾ ನಿರ್ದೇಶಕ. ಸುಮಾ ಕಾಫಿ ಎಸ್ಟೇಟು ನೋಡಿಕೊಳ್ಳುವ ಹುಡುಗಿ.
ಆತ್ಮಹತ್ಯೆ ಮಾಡಿಕೊಂಡ ರೋಜಿ ತನ್ನ ಪ್ರೇಮಿಯನ್ನು ಪಡೆಯಲು ಸುಮಾ ಆಗಿ ಮತ್ತೆ ಹುಟ್ಟಿರುವುದು ರಾಣಾಗೆ ತಿಳಿದಾಗ ಏನಾಗುತ್ತದೆ? ಏನೇನು ಸಂಗತಿಗಳು ಘಟಿಸುತ್ತದೆ? ಅಷ್ಟಕ್ಕೂ ರೋಜಿಗೆ ಮರುಜನ್ಮವಾಗಿರುವುದು ನಿಜವೇ? ಆಗಲೇ ಮದುವೆಯಾಗಿ ಸುಮಾಳ ವಯಸ್ಸಿನ ಮಗಳಿಗೆ ತಂದೆಯು ಆಗಿರುವ ರಾಣಾನ ಮನಸ್ಥಿಯೇನು? ಒಂದು ಕಡೆ ಹೆಂಡತಿ ಶಾಂತಾ, ಇನ್ನೊಂದು ಕಡೆ ಸುಮಾಳ ಛಾಯೆಯಲ್ಲಿ ಬಂದಿರುವ ರೋಜಿ. ಏನಾಗುತ್ತದೆ ಬದುಕು? ದೇಹಕ್ಕೆ ಮಾತ್ರ ಸಾವು. ಪ್ರೀತಿಗೆ ಅಲ್ಲ ಎನ್ನುವುದು ನಿಜವೇ? ಸುಮಾ ರೂಪದ ರೋಜಿಗೆ ಎರಡನೇ ಜನ್ಮದಲ್ಲಿಯಾದರೂ ಪಪ್ಪು ರಾಣಾ ಸಿಗುತ್ತಾನೆಯೇ?
ಅನೇಕ ಕುತೂಹಲಗಳಿಗೆ ಈ ಕಾದಂಬರಿಯನ್ನು ಓದಿ,ವಾಸ್ತವದಲ್ಲಿ ರೋಜಿ ಆಗ ಸತ್ತಿದ್ದಾಳೆ. ಆದರೆ ಸುಮಾ ಈಗಲೂ ಜೀವಂತವಾಗಿದ್ದಾಳೆ. ಕಥೆಯ ಕ್ಲಿಮ್ಯಾಕ್ಸ್ ಗಾಗಿ ಕಾದಂಬರಿಯಲ್ಲಿ ಆಕೆಯನ್ನು ಸಾಯಿಸಿದ್ದೇನಷ್ಟೆ. ಅದರರ್ಥ ಇದೊಂದು ಸತ್ಯ ಕತೆ. ಕಾದಂಬರಿಯನ್ನು ಓದಿದ ನಂತರ ಆಗ ಸತ್ತುಹೋದ ರೋಜಿ ಮತ್ತು ಈಗ ಬದುಕಿರುವ ಸುಮಾಳ ಆತ್ಮ ಒಂದೇ ಎಂದು ನಿಮಗೆ ಅನ್ನಿಸದೆ ಇರದು.
ಈ ಕಾದಂಬರಿಯನ್ನು ಹದಿಮೂರು ಕಂತುಗಳಲ್ಲಿ ಜನಪ್ರಿಯ ಸುಧಾ ವಾರಪತ್ರಿಕೆಯಲ್ಲಿ ಪ್ರಕಟಿಸಿದ ಪತ್ರಿಕೆಯ ಸಂಪಾದಕ ಬಳಗಕ್ಕೆ ನನ್ನ ಕೃತಜ್ಞತೆಗಳು. ವಿಶೇಷವಾಗಿ ಶ್ರೀ ಗುಡಿಹಳ್ಳಿ ನಾಗರಾಜ್ ಅವರಿಗೆ ವಂದನೆಗಳು.
- ಹೂಲಿಶೇಖರ್ (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)