ದಿ ಆರ್ಟ್ ಆಫ್ ಕಾಫಿ ಮೇಕಿಂಗ್

ಕಾಫಿ ಜಗತ್ತಿನಾದ್ಯಂತ ಜನಪ್ರಿಯ ಬಳಕೆಯ ಪೇಯ. ಅದರಲ್ಲೂ ನಮ್ಮ ದೇಶದ ಕಾಫಿ ಕೃಷಿ ಪದ್ದತಿ ಪರಿಸರಕ್ಕೆ ಪೂರಕ. ನಂದಿನಿ ಹೆದ್ದುರ್ಗ ಅವರು ಕಾಫಿ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ನಮ್ಮ ಬೆಂಗಳೂರಿನ ಕಾಫಿಗರು ಇನ್ಸ್ಟಂಟ್ ಕಾಫಿಯಿಂದ ಫಿಲ್ಟರ್ ಕಾಫಿಯ ಕಡೆಗೆ ವಾಲಿ ದಶಕಗಳೇ ಕಳೆದಿವೆ. ಬಹುತೇಕ ಸಣ್ಣ ಹೊಟೆಲ್ಗಳಿಂದ ಹಿಡಿದು ಸ್ಟಾರ್ ಹೊಟೆಲಿನವರೆಗೂ ಫಿಲ್ಟರ್ ಕಾಫಿ ಕಾಫಿಪ್ರಿಯರನ್ನು ತಣಿಸುತ್ತಿದೆ. ಪರಂಪರೆಯ ಕಾಫಿಯ ರೋಸ್ಟಿಂಗ್ ಬ್ರ್ಯೂವಿಂಗ್ ಜೊತೆಗೆ ಹೊಸ ಫ್ಲೇವರಿನ ಕಾಫಿ ಯುವಸಮುದಾಯವನ್ನು ಸೆಳೆಯುತ್ತಿದೆ. ನಾವು ಬಯಸಿದ ಪ್ರಮಾಣದ ಚಿಕೋರಿ ಬೆರೆಸಿದ ಕಾಫಿಪೌಡರ್ ಎಲ್ಲ ಕಡೆಯೂ ಸಿಕ್ಕುತ್ತಿರುವುದು ಕಾಫಿಯ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಕಾಫಿ ಬೆಳೆಗಾರರು ತಮ್ಮದೇ ಬ್ರ್ಯಾಂಡ್ ಮಾಡಿ ಕಾಫಿಯನ್ನು ಗ್ರಾಹಕರಿಗೆ ತಲುಪಿಸುತ್ತಿರುವುದರಿಂದ ಕೂಡ ಅತ್ಯುತ್ತಮ ಗುಣಮಟ್ಟದ ಕಾಫಿ ಸಮಂಜಸ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.ಹಾಗೆಯೇ ಕಾಫಿನಾಡಿನ ಸಂಘಸಂಸ್ಥೆಗಳು ಕಾಫಿಯ ಅಸಾಂಪ್ರದಾಯಿಕ ಪ್ರದೇಶಗಳಲ್ಲಿ ‌ಕಾಫಿಯ ಅನನ್ಯ ಸ್ವಾದವನ್ನು ತಲುಪಿಸುವ ಪ್ರಯತ್ನ ಮಾಡ್ತಿದ್ದಾರೆ.  ಕಾಫಿಯ ಪ್ರಾದೇಶಿಕ ಬಳಕೆ ಹೆಚ್ಚಿದಷ್ಟೂ ವಿದೇಶಿ ಮಾರುಕಟ್ಟೆಯ ಅವಲಂಬನೆ ಕಡಿಮೆಯಾಗುತ್ತದೆ ಎನ್ನುವುದು ಈ ಎಲ್ಲ ಪ್ರಯತ್ನಗಳ ಮೂಲ ಉದ್ದೇಶ.

ಕಾಫಿ ಪೌಡರ್ ಎಷ್ಟೇ ಉತ್ತಮವಾಗಿದ್ರೂ‌ ಕಾಫಿ ಮಾಡುವ ಕಲೆ ಗೊತ್ತಿರದಿದ್ದರೆ ಕಾಫಿ ಹದವಾಗುವುದಿಲ್ಲ. ಕಾಫಿಯ ಕೆಫಿನ್ ನಶೆ ಅಭ್ಯಾಸ (ಅಡಿಕ್ಷನ್)ಆಗುವುದಿಲ್ಲ. ಕೆಲವರು ಸ್ಟ್ರಾಂಗ್ ಕಾಫಿ ಪ್ರಿಯರು. ಕೆಲವರಿಗೆ ಹದವಾಗಿರಬೇಕು, ಕೆಲವರ ಕಾಫಿ ಲೈಟ್.. ಸಾದಾ. ಹಾಗೇ ಚಿಕೋರಿ ಬಳಕೆಯಲ್ಲೂ ಅವರವರ ರುಚಿಗೆ ತಕ್ಕಂತೆ ಆಯ್ಕೆಯ ಅವಕಾಶವಿದೆ.

ಹದಿನೈದು ಭಾಗ ಚಿಕೋರಿ ಎಂಬತೈದು ಭಾಗ ಕಾಫಿ ಇದೆ.ಇಪ್ಪತ್ತು ಎಂಬತ್ತರ ಅನುಪಾತ ಬಹಳ ಜನಪ್ರಿಯ.ಬಹಳ ಕಡುಕಾಫಿ ಪ್ರಿಯರು ಮುವ್ವತ್ತು ಎಪ್ಪತ್ತುಗಳ ಪ್ರಮಾಣದಲ್ಲಿ ಚಿಕೋರಿ ಬೆರೆಸಿದ ಕಾಫಿಯನ್ನು ಆಯ್ಕೆ ಮಾಡಿಕೊಳ್ತಾರೆ. ನಮ್ಮಲ್ಲಿ ಚಿಕೋರಿ ರಹಿತ ಶುದ್ಧ ಕಾಫಿಯ ಬಳಕೆ ಬಹಳ ಜನಪ್ರಿಯ.ಇದರ ಬ್ಲ್ಯಾಕ್ ಕಾಫಿ ಸೇವನೆಯಿಂದ ಕಾಫಿಯ ಯಥಾವತ್ ರುಚಿಯನ್ನು ಅಸ್ವಾದಿಸಬಹುದು.

ಫೋಟೋ ಕೃಪೆ : google

ಕಾಫಿಯಲ್ಲಿರುವ ಅ್ಯಂಟಿ ಅ್ಯಂಕ್ಸಿಡೆಂಟ್ ಗಳು ಆರೋಗ್ಯದ ಮೇಲೆ ಅತ್ಯುತ್ತಮ ಪರಿಣಾಮ ಬೀರುವುದು ಕೂಡ ಚಿಕೋರಿಯಿಲ್ಲದ ಕಾಫಿ ಸೇವನೆಯಿಂದ ದುಪ್ಪಟ್ಟಾಗುತ್ತದೆ ಅಂತ ಹೇಳಲಾಗ್ತಿದೆ. ಕಾಫಿ ಪ್ರಿಯರು ಮುಖ್ಯವಾಗಿ ಗಮನಿಸಬೇಕಾದ ಒಂದು ಅಂಶವಿದೆ. ಅದು ಕಾಫಿ ಮತ್ತು ಚಿಕೋರಿಯ ನೀರಿನಲ್ಲಿ ಕರಗುವ ಪ್ರಮಾಣದ ವ್ಯತ್ಯಾಸ.

ಕಾಫಿಗೆ ಡಿಕಾಕ್ಷನ್ ಹಾಕಿದಾಗ ಚಿಕೋರಿಯ ಎಂಬತ್ತು ಶೇಕಡಾ ಅಂಶ ಮತ್ತು ಕಾಫಿಯ ಮುವ್ವತ್ತರಿಂದ ನಲ್ವತ್ತು ಶೇಕಡಾ ಅಂಶ ಡಿಕಾಕ್ಶನ್ ರೂಪದಲ್ಲಿ ಸಂಗ್ರಹವಾಗಿರುತ್ತದೆ.coffee is less dissolving capacity than chicory.

ಹಾಗಾಗಿ ಕಾಫಿಯಲ್ಲಿ ಚಿಕೋರಿಯ ಅಂಶ ಹೆಚ್ಚಾದಷ್ಟೂ ಕಾಫಿ ತನ್ನ ಸಹಜ ಸ್ವಾದವನ್ನು ಕಳೆದು ಚಿಕೋರಿ ಪೇಯವಾಗುತ್ತದೆ. ಹಾಗಿದ್ರೆ ಒಂದೊಳ್ಳೆ ಕಾಫಿ ಮಾಡಬೇಕು ಅಂದರೆ ಏನೆಲ್ಲ ಮುಖ್ಯವಾಗ್ತದೆ? ಪುಡಿಯ ಆಯ್ಕೆ ,ಚಿಕೋರಿ ಬೆರೆಸಬೇಕಾದ ಅನುಪಾತ, ಅದನ್ನು ಸರಿಯಾಗಿ ಡಬ್ಬಿಯಲ್ಲಿ ಸಂಗ್ರಹಿಸುವುದು ಮತ್ತು ಕಾಫಿಯಲ್ಲಿ ಡಿಕಾಕ್ಶನ್ ಹಾಕುವ ವಿಧಾನ..

ಈ ಎಲ್ಲವೂ ಸರಿಯಾಗಿದ್ರೆ ಮಾತ್ರ ಕಾಪಿ ಹದವಾಗುತ್ತದೆ.ಅವರವರ ಆಯ್ಕೆಗನುಸಾರ ಸ್ಟ್ರಾಂಗ್ ಮೀಡಿಯಂ ಲೈಟ್ ಕಾಫಿ ಮಾಡಲು ಫಿಲ್ಟರಿಗೆ ಹಾಕುವ ಪುಡಿಯಲ್ಲಿ ವ್ಯತ್ಯಾಸ ಮಾಡಿಕೊಳ್ಳಬೇಕು. ಹದವಾದ ಪರಿಮಳ ಭರಿತ ಕಾಫಿಗೆ ಒಂದು ದೊಡ್ಡ ಕಾಫಿ ಕಪ್ ನೀರಿಗೆ ಮೂರು ಚಮಚ ಪುಡಿ ಬೇಕಾಗ್ತದೆ.ತಾಜಾ ಡಿಕಾಕ್ಶನ್ ಹಾಕಿ ಕಾಫಿ ಕುಡಿದರೆ ಮಾತ್ರ ಅದರ ಸಂಪೂರ್ಣ ಸ್ವಾದದ ಅನುಭವವಾಗ್ತದೆ.

ಮೊದಲಿಗೆ ನೀರು ಬಿಸಿಗಿಟ್ಟು ಕಾಫಿ ಪೌಡರನ್ನು ಫಿಲ್ಟರಿನ ಮೇಲಿನ ಡಬ್ಬಿಗೆ ಹಾಕಿ ಅದರ ಮೇಲಕ್ಕೆ ಪರ್ಕ್ಯುಲೇಟರ್ ಇಡಬೇಕು. ಬಿಸಿಗಿಟ್ಟ ನೀರಿನಲ್ಲಿ ಸಣ್ಣ ಪ್ರಮಾಣದ ಗುಳ್ಳೆಗಳು ಮೂಡಿ ಎಂಬತ್ತು ಡಿಗ್ರಿಗೆ ತಲುಪಿದಾಗ ನೀರನ್ನು ಮೆಲ್ಲಗೆ ಪರ್ಕ್ಯುಲೇಟರ್ ಮೇಲೆ ಸುರಿದು ಮೆಲ್ಲಗೆ ಒತ್ತಿ ಮುಚ್ಚಳವನ್ನು ಹಾಕಬೇಕು ಗಮನಿಸಿ. ನೂರು ಡಿಗ್ರಿ ಕುದಿಸಿದ ನೀರು ಕಾಫಿ ಪೌಡರನ್ನು ಬೇಯಿಸುವುದರಿಂದ ಡಿಕಾಕ್ಶನ್ ಗುಣಮಟ್ಟ ಹಾಳಾಗುತ್ತದೆ. ಎಂಬತ್ತು ಡಿಗ್ರಿ ಸರಿಯಾದ ಉಷ್ಣತೆ. ನೀರನ್ನು ಫಿಲ್ಟರಿಗೆ ಹಾಕುವಾಗ ಮೇಲಿನಿಂದ ರಭಸವಾಗಿ ಹಾಕದೆ ನಿಧಾನವಾಗಿ ಹಾಕಬೇಕು.

ಫೋಟೋ ಕೃಪೆ : google

ಮೂರುನಾಲ್ಕು ನಿಮಿಷದಲ್ಲಿ ಡಿಕಾಕ್ಶನ್ ಕೆಳಗಿನ ಡಬರಿಗೆ ಇಳಿಯುತ್ತದೆ.ಕಾಯಿಸದ ಹಸಿ ಹಾಲನ್ನು ಎಂಬತ್ತು ಡಿಗ್ರಿಗೆ ಕುದಿಸಿ ಸ್ವಲ್ಪ ಸಕ್ಕರೆ ಅಥವಾ ಬೆಲ್ಲ ಬೆರೆಸಿ ತಾಜಾ ಡಿಕಾಕ್ಶನ್ ಹಾಕಿ ಕಾಫಿಯನ್ನು ಕೇವಲ ಎರಡು ಬಾರಿ ಎತ್ತಿಸುರಿದು ಕುಡಿಯುವ ಕಪ್ಪಿಗೆ ವರ್ಗಾಯಿಸಿಕೊಳ್ಳಬೇಕು.

ಕಪ್ ಪಿಂಗಾಣಿ ಅಥವಾ ಗಾಜಿನದಾಗಿದ್ದರೆ ಅದನ್ನು ಮೊದಲು ಬಿಸಿನೀರಿನಲ್ಲಿ ಅದ್ದಿದರೆ ಮಾತ್ರ ಕಾಫಿಯ ಕೊನೆಯ ಗುಟುಕೂ ಹದಬಿಸಿಯಲ್ಲಿ ಉಳಿಯುತ್ತದೆ. ಸ್ಟೀಲ್ ಅಥವಾ ಹಿತ್ತಾಳೆ ಕಪ್ ನಲ್ಲಿ ಕಾಫಿಯ ಬಿಸಿ ಕೊನೆಯ ಸಿಪ್ಪಿನವರೆಗೂ ಇರುವುದರಿಂದ ಇದು ಕಾಫಿಸೇವನೆಗೆ ಹೆಚ್ಚು ಸೂಕ್ತ. ಸಕ್ಕರೆ ಬೆರೆಸದ ಕಾಫಿ ಈಚೆಗೆ ಜನಪ್ರಿಯ. ಒಮ್ಮೆ ಮಾಡಿದ ಕಾಫಿಯನ್ನು ಮತ್ತೆ ಬಿಸಿ ಮಾಡಿದಾಗ ಮತ್ತು ಡಿಕಾಕ್ಶನ್ ಹಳೆಯದಾದಾಗ ಕಾಫಿಯ ಸ್ವಾದ ಮತ್ತು ಅದರ ಉತ್ತೇಜಕ ಗುಣ ಕಳೆಯುತ್ತದೆ.

ಹಾಗಾಗಿ ತಾಜಾ ಡಿಕಾಕ್ಶನ್ ಉತ್ತಮ ಕಾಫಿಯ ಮೊದಲ ಹಂತ. ಕಾಫಿ ಜಗತ್ತಿನಾದ್ಯಂತ ಜನಪ್ರಿಯ ಬಳಕೆಯ ಪೇಯ. ಅದರಲ್ಲೂ ನಮ್ಮ ದೇಶದ ಕಾಫಿ ಕೃಷಿ ಪದ್ದತಿ ಪರಿಸರಕ್ಕೆ ಪೂರಕ.
ಶೇಡ್ ಗ್ರೋನ್ ಹ್ಯಾಂಡ್ ಪಿಕ್ಡ್ ಕಾಫಿ ಕೇವಲ ನಮ್ಮ ದೇಶದ ಹಿರಿಮೆ. ಹೀಗಾಗಿಯೇ ಕಾಫಿ ಪ್ರದೇಶಗಳಲ್ಲಿ ಹಸಿರು ಬೆಲ್ಟ್ ನಿರೀಕ್ಷಿತ ಮಟ್ಟಕ್ಕೆ ತಲುಪಿದೆ.ಕಾರ್ಬನ್ ಕ್ರೆಡಿಟ್ ಕಾಫಿ ಪರಿಸರದಲ್ಲಿ ಅತ್ಯುತ್ತಮವಾಗಿದೆ. ಲಕ್ಷಾಂತರ ಕುಟುಂಬಗಳಿಗೆ ಉದ್ಯೋಗ ಕೊಟ್ಟಿರುವ ಕಾಫಿ ದೇಶದ ವಿದೇಶಿ ವಿನಿಮಯದಲ್ಲಿ ದೊಡ್ಡ ಪಾತ್ರ ವಹಿಸಿದೆ.ಕಾಫಿ ಕೃಷಿ ಪದ್ದತಿಯಲ್ಲಿ ಕೆರೆ ಮತ್ತು ಇಂಗುಗುಂಡಿ ಅನಿವಾರ್ಯ.ಇದು ಸಹಜವಾಗಿ ಮಳೆನೀರು ಮರುಪೂರಣ ಮತ್ತು ಅಂತರ್ಜಲ ಏರಿಕೆಗೆ ಸಹಕಾರಿ. ಜೀವವೈವಿಧ್ಯತೆಯ ಉಳಿವಿನಲ್ಲಿ ಕಾಫಿಯದ್ದು ಗಮನಾರ್ಹ ಪಾತ್ರ.

ಕಾಫಿ ಪ್ರಿಯರು ಹೇಳುವ ಪ್ರಕಾರ ಕೈಯಲ್ಲಿ ಕಾಫಿಯಿದ್ದಾಗ ಜಗತ್ತು ಒಂದು ಕ್ಷಣ ನಿಂತು ಅದನ್ನು ಆಸ್ವಾದನೆಗೆ ಸಹಕರಿಸ್ತದೆಯಂತೆ. ಒಂದು ಕಪ್ ಕಾಫಿ ಒಂದು ಕವಿತೆ ಮತ್ತು ಕವಿದ ಮುಗಿಲು ಸ್ವರ್ಗ ಸೃಷ್ಟಿಸುತ್ತದೆ ಎನ್ನುವುದು ಎಷ್ಟು ಸತ್ಯವೋ , ಕಾಫಿ ಕೃಷಿಯಿಂದ ಹಕ್ಕಿ ಅಳಿಲು ಚಿಟ್ಟೆ ಜೇನು ಆನೆ ನವಿಲು ಮಂಗಗಳ ಹೊಟ್ಟೆ ತುಂಬುತ್ತಿದೆ ಎನ್ನುವುದೂ ಅಷ್ಟೇ ಸತ್ಯ.


  • ನಂದಿನಿ ಹೆದ್ದುರ್ಗ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW