ನನ್ನ ತಂದೆಯ ವಯಸ್ಸಿನ ಬುಡುಬುಡಿಕೆಯವನೊಬ್ಬ ಮನೆಯ ಮುಂದೆ ಬಂದು ನಿಂತು ತನ್ನ ಬುಡುಬುಡಿಕೆ ಬಾರಿಸುತ್ತ ನಿಂತು ಹಾಡು ಹೇಳಲು ಶುರುವಿಟ್ಟುಕೊಂಡ. ಡಾ.ಯಲ್ಲಮ್ಮ.ಕೆ ಅವರಿಗೆ ಏನು ಹೇಳಿದ ತಪ್ಪದೆ ಮುಂದೆ ಓದಿ…
ಮಹಾನವಮಿ ಅಮವಾಸ್ಯೆ ಮುಗಿಸಿಕೊಂಡು ಹಬ್ಬಕ್ಕೆಂದು ಅಮ್ಮನೂರಿಗೆ ಹೊರಟೆ, ಅಪ್ಪ-ಅಮ್ಮ, ಅಣ್ಣ-ತಂಗಿ, ಅಳಿಯ-ಸೊಸೆ, ಮನೆ-ಮಂದಿಯೆಲ್ಲ ನನ್ನ ಬರುವಿಕೆಯ ನಿರೀಕ್ಷೆಯಲ್ಲಿದ್ದರು. ಸಾಮಾಜಿಕ ಅಂತರದೊಂದಿಗೆ ಜೀವ ಕೈಯಲ್ಲಿ ಹಿಡಿದು ಸರ್ಕಾರಿ ಬಸ್ಸು ಹಿಡಿದು ಹೊರಟೆ. ಸರಿಸಮಯಕ್ಕಲ್ಲದಿದ್ದರೂ ಸ್ವಲ್ಪ ತಡವಾಗಿಯೇ ಮನೆ ಸೇರಿದೆ. ದೂರ ಪ್ರಯಾಣದ ಆಯಾಸ, ಬಳಲಿಕೆ, ಸುಸ್ತು ಎನಾದರೂ ಅನ್ನಿ ಯಾರೊಡನೆಯೂ ಮುಖಕ್ಕೆ ಮುಖಕೊಟ್ಟು ಮಾತನಾಡದಂತಹ ಸ್ಥಿತಿ, ಸುಮ್ಮನೆ ಹೊಟ್ಟೆಗಿಷ್ಟು ಇಳಿಸಿ, ನಿದ್ದೆಗೈದೆ. ಹೆಣ್ಣುಮಕ್ಕಳು ರಾತ್ರಿ ತಡವಾಗಿ ಮಲಗಿ, ನಸುಕಿನಲ್ಲಿಯೇ ಏಳಬೇಕು ಎಂಬ ಅಮ್ಮನಾಜ್ಞೆಯನ್ನು ಗಾಳಿಗೆ ತೂರದೆ, ಬೇಗ ಮಲಗಿದ್ದೆನಾದ್ದರಿಂದ ನಸುಕಿನ ಜಾವದಲ್ಲಿಯೇ ಎದ್ದು ಕಸ ಉಡುಗುತಲಿದ್ದೆ.
ಆಗ ನನ್ನ ತಂದೆಯ ವಯಸ್ಸಿನ ಬುಡುಬುಡಿಕೆಯವನೊಬ್ಬ ಮನೆಯ ಮುಂದೆ ಬಂದು ನಿಂತು ತನ್ನ ಬುಡುಬುಡಿಕೆ ಬಾರಿಸುತ್ತ ನಿಂತು ಹಾಡು ಹೇಳಲು ಶುರುವಿಟ್ಟುಕೊಂಡ.., ಆತನ ವೇಷಭೂಷಣ ಬಹು ಆಕರ್ಷಕವಾಗಿದ್ದವು, ಬಿಳಿ ಧೋತಿ, ಬಿಳಿ ಕಮೀಜ್ ಶರ್ಟ್ ಮೇಲೊಂದು ಕಪ್ಪು ಕೋಟು, ತಲೆಗೆ ಹದಿನಾರು ಮೊಳದ ಹಳದಿ ಬಣ್ಣದ ರುಂಬಾಲು ಸುತ್ತಿದ್ದ, ಅರವತ್ತರ ಇಳಿಪ್ರಾಯದಲ್ಲೂ ಮೈ-ಕೈತುಂಬಿಕೊಂಡು ಗಟ್ಟಿಪ್ರಾಯದ ಮನುಷ್ಯನಂತಿದ್ದ. ಕೈಯಲೊಂದು ಬುಡುಬುಡಿಕೆ,ಕಿರುಬೆರಳಿಗೆ ಕರವಸ್ತ್ರವೊಂದನ್ನು ಕಟ್ಟಿಕೊಂಡು ಹಾಡಿಗೆ ಲಯಬದ್ಧವಾಗಿ ನುಡಿಸುವುದರೊಂದಿಗೆ ಶಕುನ ನುಡಿದು, ಭಿಕ್ಷೆ ಬೇಡಿ ಹೊಟ್ಟೆಹೊರೆಯುವುದನ್ನೇ ಬದುಕಾಗಿಸಿಕೊಂಡ ಸಮುದಾಯದ ಪ್ರತಿನಿಧಿಯಂತಿದ್ದ.
ಶಕುನ ನುಡಿದೈತೀ ತಾಯಿ, ಶಕುನ ನುಡಿದೈತೀ ತಾಯೇ,
ಏನೋ ಕಾದೈತೀ ತಾಯೇ, ಏನೋ ಕಾದೈತೀ ತಾಯೇ,
ಯವ್ವ ಈ ಮನೆಗೆ ರಾಹು ಬಹಳ ಕಾಡೈತೀ ನೋಡವ್ವ ತಾಯೇ,
ಹೋದ ವರುಷ ಹಂಗಾತು, ಈ ವರುಷ ಹಿಂಗಾತು…
ನೋಡವ್ವ ತಾಯೇ…
ಒಬ್ಬ ಮಗನಿಂದ ಹಂಗಾತು, ಮತ್ತೊಬ್ಬನಿಂದ
ನಿಮ್ಮ ಮನೆ ಬೆಳಕಾಗತೈತೀ ಕೇಳವ್ವ ತಾಯೇ…
ಎನ್ನುವಷ್ಟರಲ್ಲಿ ನನ್ನಮ್ಮ ಒಂದು ಮೊರದ ತುಂಬ ಪಡಿಯನ್ನು ತುಂಬಿಕೊಂಡು ಭಿಕ್ಷೆ ನೀಡಲು ಮುಂದಾದಳು. ಆಗ ಆತ ನಾವು ದಿನಾಲೂ ಬರೋದಿಲ್ಲವ್ವಾ.., ವರುಷಕ್ಕೊಮ್ಮೆ ಬರುತೀವಿ, ಮನೆ ಯಜಮಾನನದ್ದು ಒಂದು ಹಳೆಯಂಗಿ ಇದ್ದರೆ ಕೊಡವ್ವಾ, ಯಜಮಾನತಿ ನೀನು ದೊಡ್ಡ ಗುಣದಾಕಿ ನಿಂದು ಹಳೆ ಸೀರೆ ಇದ್ದರೆ ಕೊಡವ್ವಾ.., ಒಂದು ಕುರಿ-ಮರಿನೋ, ದನ-ಕರನೋ ಇದ್ದರೆ ದಾನವಾಗಿ ಕೊಡವ್ವಾ, ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ ಅನ್ನೋಗಾದೆಮಾತೇ ಇದೆ ನೀ ಕೇಳವ್ವಾ ಎಂದು ತಮ್ಮ ಅಭಿಲಾಷೆಯನ್ನು ಜನರ ಮನೋಭೂಮಿಕೆಯಲ್ಲಿ ಬಿತ್ತುವುದು, ಅವರ ಮಾತು ಎಂಥವರನ್ನೂ ಮೋಡಿಮಾಡಿಬಿಡುತ್ತದೆ. ಒಂದು ತಮಾಷೆ ವಿಷಯ ಅಂದ್ರೆ ನೆರೆಮನೆಗೂ-ಸೆರೆಮನೆಗೂ ಹೋದರೂ ಅವರು ಇಂಥದ್ದೆ ಪದವನ್ನು ಕಟ್ಟಿಹಾಡುತ್ತಾರೆ. ಪಕ್ಕದ ಮನೆಯವರಿಗೆ ಇರೋನು ಒಬ್ಬನೇ ಮಗ, ಮತ್ತೊಂದು ಮನೆಯಲ್ಲಿ ಗಂಡು ಮಕ್ಕಳೇ ಇರಲಿಲ್ಲ, ಹಾಗಂತ ಅವರ ಎಲ್ಲ ಮಾತುಗಳೂ ಸುಳ್ಳೆಂದು ಸಾರಾಸಗಟಾಗಿ ತಿರಸ್ಕರಿಸಲು ಸಾಧ್ಯವೆ..? ಸತ್ಯ-ಅಸತ್ಯ ಏನೇ ಇರಲಿ ಅವರುಗಳ ಮಾತಿನಿಂದ ಹತಾಶೆಗೊಳಗಾದ, ದುರ್ಬಲ ಮನಸ್ಸುಗಳಿಗೆ ಒಂದಷ್ಟು ಸಮಾಧಾನ, ನೆಮ್ಮದಿ, ಬದುಕಿನ ಕುರಿತಾಗಿ ಭರವಸೆಯನ್ನು ಮೂಡಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರುಗಳು ಒಂದರ್ಥದಲ್ಲಿ ನಾಡಿಮಿಡಿತ ಅರಿತ-ನುರಿತ ವೈದ್ಯರೆನ್ನಬಹುದು, ಅವರ ಭಾಷಾಪ್ರೌಢಿಮೆಗೆ ಎಣೆಯುಂಟೆ..? ಬದುಕಂದ್ರೇನು..? ಗ್ರಾಮೀಣ ಭಾಗದ ಜನ-ಜೀವನ ಪ್ರಕೃತಿ ಮತ್ತು ಪ್ರಾಣಿ ಪ್ರಪಂಚದೊಂದಿಗೆ ಹಾಸುಹೊಕ್ಕಾಗಿ ಬೆರೆತ ಅವಿನಾಭಾವ ಸಂಬಂಧ ಏರ್ಪಟ್ಟಿರುತ್ತದೆ.
ಜೀವನ ನಿರ್ವಹಣೆಗಾಗಿ ಎತ್ತು-ಎಮ್ಮೆ, ಕುರಿ-ಕೋಳಿ, ಹಸು-ಕರುಗಳನ್ನು ಸಾಕಿಕೊಂಡಿದ್ದು, ತಮ್ಮ ಬದುಕಿಗೆ ಆಧಾರವಾದ ಪ್ರಾಣಿಗಳನ್ನು ತಮ್ಮ ಬದುಕು (ಸಂಪತ್ತು) ಎಂದೇ ನಂಬಿಕೊಂಡಿರುತ್ತಾರೆ, ಅಂತಹ ಬದುಕಿನ ಒಂದಂವನ್ನು ಬುಡುಬುಡಿಕೆಯವ ಬೇಡುವ ಪರಿಯು ಬೆರಗು ಮೂಡಿಸುವಂತದ್ದು.

ಫೋಟೋ ಕೃಪೆ : google
ಯಾರ ಬದುಕು ಸುಂದರವಲ್ಲ, ಸುಂದರವಾಗಿಟ್ಟುಕೊಳ್ಳಬೇಕು, ಯಾರ ಬದುಕು ಹಸನಾಗಿರುವುದಿಲ್ಲ, ಹಸನಾಗಿಟ್ಟುಕೊಳ್ಳುವುದು ಒಂದು ಕಲೆ. ಜೀನವನವೂ ಒಂದು ಕಲೆ. ಅದು ಎಲ್ಲರಿಗೂ ಸಿದ್ಧಿಸಿರುವುದಿಲ್ಲ. ಸುಖ-ದುಃಖ, ನೋವು-ನಲಿವು ಎಲ್ಲರಿಗೂ ಇದ್ದದ್ದೇ ತಾನೇ..? ಅದನ್ನೇ ಬಂಡವಾಳವನ್ನಾಗಿಸಿಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳುವವರ ಮಾತುಗಳು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಅಂತ ಎಲ್ಲೋ ಓದಿದ ನೆನಪು. ಬುಡುಬುಡಿಕೆಯವನ ಮಾತು ಕೇಳಿ ಅಚ್ಚರಿಯಾಯಿತು, ಅವನು ಯಾರ ಮನೆಗೆ ಹೋದರೂ ಅದೇ ಪದವನ್ನು ತಿರುವು-ಮುರುವು ಮಾಡಿ ಹಾಡುತ್ತಾನೆ, ಕೇಳುಗರಿಗೆ ಅದು ತಮ್ಮದೇ ನೋವು-ನಲಿವು, ಎಂದೆನಿಸದಿರದು, ಹಾಗಾಗಿ ಆ ಮಾತುಗಳು ಸಹಜವಾಗಿ ನಿಜವೆಂದೆ ನಂಬುತ್ತಾರೆ, ಮತ್ತೆ ಮುಂದುವರೆದು ಅವರೆದಿರು ತಮ್ಮ ದುಃಖ-ದುಗುಡ-ದುಮ್ಮಾನಗಳನ್ನು ಮನಃಬಿಚ್ಚಿ ಹೇಳಿಕೊಳ್ಳುತ್ತಾರೆ.
ಮೊನ್ನೆ ಎಮ್ಮೆ ಕಂದು ಹಾಕ್ತು, ಹಸು ಕರು ಹಾಕಿದ್ಕೂಡಲೇ ಸತ್ತೋಯ್ತು, ಮಗಳು ಅತ್ತೆ-ಮಾವನ ಜೋಡಿ ಜಗಳ ಮಾಡಿಕೊಂಡು ಬಂದು ಮೂಲೆಹಿಡಿದು ಕೂತಿದ್ದಾಳೆ, ನಮ್ಮ ಹಿರಿಸೊಸೆ ತವರುಮನೆ ಅಂದ್ರೆ ಎಲ್ಲಿಲ್ಲದ ಪ್ರೀತಿ, ಅಮವಾಸ್ಯೆ-ಹುಣ್ಣಿಮೆ ಅಂತ್ಹೇಳಿ ಹೋಗಿಬಂದು ಮಾಡ್ತಾಳೆ.., ಏನಂತ ಹೇಳ್ಲಿ ನಮ್ಮ ತಾಪತ್ರಯವಾ ಒಂದಾ.., ಎರಡಾ.., ಎಂದು ನಿಟ್ಟುಸಿರು ಬಿಡುವತ್ತಿಗೆ, ಎಳೆ ತೋರಿಸಿದರೆ ಹಚ್ಚಡ ನುಂಗುವವನ ತೆರದಿ, ಅವರ ಮಾತುಗಳಿಗನುಸಾರವಾಗಿ ಮತ್ತೇನೇನೋ ಕಟ್ಟೆಕಟ್ಟುತ್ತಾ, ಅದಕ್ಕೆ ತಕ್ಕ ಪರಿಹಾರಗಳನ್ನು ಸೂಚಿಸುತ್ತ, ಪೂಜೆ-ಪುನಸ್ಕಾರ ಮಾಡಿ, ಈ ಬೇರು ತಂದೀನಿ ಮನೆ ತಲಬಾಗಿಲಗೊಂದು – ಹಿತ್ತಲ ಬಾಗಿಲಿಗೊಂದು ಕಟ್ಟಿ, ಅದು ಇದು ಏನೇನೋ ಹೇಳಿ ೧೦೧ ರೂ ಕಾಣಿಕೆ ಪಡೆದು ಇಲ್ಲವೆ ದೊಡ್ಡ ಮೊತ್ತದ ದಾನದ ಉಡುಗೊರೆಯೊಂದಿಗೆ ಎಲ್ಲ ಒಳ್ಳೆಯದಾಗತೈತೀ ಎಂದು ಹರಸಿ ಮುಂದೆ ಸಾಗುತ್ತಾರೆ. ಹೀಗೆ ಮನೆಮನೆಗೆ ತೆರಳಿ ಅವರವರ ಮುಖಭಾವಕ್ಕೆ ತಕ್ಕಂತೆ ತಾಳ-ತಂತಿಕೂಡಿಸಿ ಹಾಡಿ-ಹೊಗಳಿ ತಮ್ಮ ಕರ‍್ಯಸಿದ್ಧಿಸಿಕೊಳ್ಳುತ್ತಾರೆ. ಇಂಥಹ ಸುಳ್ಳಿನ ಸರಮಾಲೆಯನ್ನು ಕಟ್ಟುವ ಬುಡುಬುಡಿಕೆಯವನ ಮಾತು ಬುಡತನ ಸುಳ್ಳು ಎಂಬು ನಾಡ-ನುಡಿಯನ್ನು ನಮ್ಮ ಜನಪದರು ಕಟ್ಟಿದ್ದಾರೆ.
ಸತ್ಯ-ಅಸತ್ಯ ಏನೇ ಇರಲಿ ಈ ರೀತಿಯಲ್ಲಿ ಒಂದು ಸಾಮುದಾಯಿಕವಾದ ಸಂಸ್ಕೃತಿ-ಪರಂಪರೆಯ ಜೀವಂತಿಕೆಯನ್ನು ಇಂದಿಗೂ ಗ್ರಾಮಗಳಲ್ಲಿ ಕಾಣಬಹುದಾಗಿದೆ.
- ಡಾ.ಯಲ್ಲಮ್ಮ.ಕೆ
