ಕರೋನಾ ಸಂದರ್ಭದಲ್ಲಿ ನನ್ನ ಸ್ನೇಹಿತರು ಅನುಭವಿಸಿದ ಕಷ್ಟಗಳು ಮತ್ತು ಅದನ್ನು ಎದುರಿಸಿದ ರೀತಿ ಎಲ್ಲರಿಗೂ ಸ್ಪೂರ್ತಿಯಾಗಲಿ. ಕರೋನಾ ವಿರುದ್ಧ ಧೈರ್ಯವಾಗಿ ಹೋರಾಡೋಣ…
ಇತ್ತೀಚಿಗೆ ನನ್ನ ಮಾಧ್ಯಮ ಮಿತ್ರರಾದ ಉಮೇಶ್ ಮತ್ತು ಮುರಳಿ ಕುಟುಂಬಕ್ಕೆ ಕೊರೋನಾ ಬಂದಿತ್ತು ಮತ್ತು ಅದರಿಂದ ಗುಣ ಮುಖರಾಗಿ ಹೊರಗೆ ಬಂದರು. ಕೊರೋನಾದಿಂದ ಸಾವಿನ ಸುದ್ದಿ ಕೇಳಿ ಕೇಳಿ ಭಯದ ಜೊತೆಗೆ ಜೀವನದಲ್ಲಿ ಆಸೆಗಳೇ ಬತ್ತಿ ಹೋಗಿತ್ತು. ಇದರ ಮಧ್ಯೆ ಒಳ್ಳೆಯ ಸುದ್ದಿ ಕೇಳಿ ತುಂಬಾನೇ ಸಂತೋಷವಾಯಿತು. ಅವರೊಂದಿಗೆ ಒಳ್ಳೆಯ ಬಾಂಧವ್ಯವಿದ್ದರಿಂದ ಆ ಸಲುಗೆಯಲ್ಲಿ ಇಬ್ಬರಿಗೂ ನಾನು ಕೇಳಿದ ಮೊದಲು ಪ್ರಶ್ನೆ…. ನಿಮಗೆ ಕರೋನ ಹೇಗೆ ಬಂತು?.
ಉಮೇಶ್ , ‘ಪತ್ರಿಕೋದ್ಯಮವೆಂದರೆ ಜನ ಮಧ್ಯೆ ನಮ್ಮ ಕೆಲಸ. ಅಲ್ಲಿ ಹೇಗೆ ಬಂತು ಅಂತ ಗೊತ್ತಿಲ್ಲ.ಒಟ್ಟಿನಲ್ಲಿ ಬಂತು…ಹೋಯಿತು…’ ಅಂದ. ಅದೇ ಪ್ರಶ್ನೆ ಮುರಳಿಗೆ ಕೇಳಿದಾಗ ಉತ್ತರ ಬೇರೆಯೇ ಇತ್ತು. ನನ್ನ ಕುಟುಂಬಕ್ಕೆ ಕರೋನ ಬರಲು ಮುಖ್ಯ ಕಾರಣ ನನ್ನ ಮಗಳು ಅಂದ. ನನಗೆ ಅರ್ಥವಾಗಲಿಲ್ಲ. ಏನು? ಅಂದೇ. ನನ್ನ ಮಗಳಿಗೆ ಒಂದು ಅಪಘಾತವಾಯಿತು ಅವಳಿಗೆ ಆಸ್ಪತ್ರೆಗೆ ತೋರಿಸಲು ಓಡಾಡುತ್ತಿದ್ದಾಗ ಕರೋನ ಬಂದಿತು ಎಂದ.
ಮುರಳಿ ಮಗಳು ೫ ವರ್ಷದ ಪುಟ್ಟ ಹುಡುಗಿ, ತುಂಬಾ ಚೂಟಿ, ಫೇಸ್ಬುಕ್ ನಲ್ಲಿ ಸಾಕಷ್ಟು ಹಾಡು, ಡಾನ್ಸ್, ಸಿನಿಮಾ ಡೈಲಾಗ್ ಹೊಡೆದು ಎಲ್ಲರ ಪ್ರೀತಿ ಪಾತ್ರಳಾಗಿದ್ದಳು. ಅಪ್ಪನಂತೆ ಚಟ್ ಪಟ್ ಮಸಾಲೆ ಅವಳು…ಆಕೆಗೆ ಅಪಘಾತವೆಂದಾಗ ನಂಬಲಾಗಲಿಲ್ಲ, ಕಾಲ್ ಮಾಡಿ ಮುರಳಿ ಕೇಳಿದಾಗ ಹೇಳಿದ್ದು ಹೀಗೆ ಮಗಳು ಬಾಗಿಲಲ್ಲಿ ಆಡುವಾಗ ತಂಗಿನ ಗರಿ ತಲೆ ಮೇಲೆ ಬಿದ್ದು ತಲೆ ಫ್ರಾಕ್ಟ್ನರ್ ಆಗಿದೆ ಎಂದ. ನನಗೆ ಆಘಾತವೇ ಆಯಿತು. ಪುಟ್ಟ ಹುಡುಗಿಯ ತಲೆ ಮೇಲೆ ತಂಗಿನ ಗರಿ ಬಿದ್ದರೆ ಆ ನೋವನ್ನು ಹೇಗೆ ತಡೆದುಕೊಂಡಳು ಎಂದು ಆಕೆಯ ಪರಿಸ್ಥಿತಿ ನೆನೆದು ಒಂದು ಕ್ಷಣ ಭಾವುಕಳಾದೆ. ನಮ್ಮ ಟೈಮ್ ಸರಿ ಇಲ್ಲ ಅಂದರೆ ಸಣ್ಣ ಹುಲ್ಲು ಕೂಡ ಅಲ್ಲಾಡಿಸಿ ಬಿಡುತ್ತದೆ ಎಂದು ಮುರಳಿ ಹೇಳಿದಾಗ ಅದಕ್ಕೆ ಉತ್ತರ ನನ್ನಲ್ಲಿರಲಿಲ್ಲ.
ಆದರೆ ಈಗ ಹುಷಾರಾಗುತ್ತಿದ್ದಾಳೆ ಎನ್ನುವ ವಿಷಯ ಕೇಳಿ ಸ್ವಲ್ಪ ಸಮಾಧಾನವಂತೂ ಆಯಿತು.
ಎಷ್ಟೋ ಸಂದರ್ಭದಲ್ಲಿ ಅಮ್ಮನ ಕರುಳಿನ ಬಗ್ಗೆ ಮಾತ್ರ ಯೋಚಿಸುತ್ತೇವೆ. ಆದರೆ ಅಪ್ಪನ ನೋವು ಕಣ್ಣಿಗೆ ಕಾಣುವುದಿಲ್ಲ. ಅದರಂತೆ ಮುರಳಿ ಮಾತಾಡಿದ್ದು ನಾಲ್ಕೇ ಮಾತಾದರೂ ನೋವನ್ನು ನಾನು ಅರ್ಥೈಸಿಕೊಂಡೆ, ಏನು ಆಗಿಲ್ಲ ಎನ್ನುವಂತೆ ಅವನು ಕೂಡ ಮರೆಯಾಚಿಸುತ್ತಿದ್ದ. ಆದರೆ ಅವನ ಮನಸ್ಸಿನಲ್ಲಿ ಸಾಕಷ್ಟು ನೋವಿತ್ತು. ಒಂದು ವಾರಕ್ಕೆ ೧ ಲಕ್ಷ ರೂಪಾಯಿ, ಅದರಂತೆ ಇನ್ನು ಮೂರೂ ತಿಂಗಳ ಚಿಕಿತ್ಸೆ ಕೊಡಿಸಬೇಕೆಂದರೆ ಮಧ್ಯಮವರ್ಗದ ಜನರಿಗೆ ಅದು ಕಷ್ಟವೇ. ಜೊತೆಗೆ ಕುಟುಂಬಕ್ಕೆ ಕೊರೋನಾ ಅಂಟಿಕೊಂಡಿತು. ಪೆಟ್ಟಿನ ಮೇಲೆ ಪೆಟ್ಟು ಬಿದ್ದರು ಮುರಳಿ ಕುಗ್ಗಿರಲಿಲ್ಲ. ಎದ್ದು ನಿಲ್ಲುವ ಶಕ್ತಿ ಅವನಲ್ಲಿತ್ತು.
ನನ್ನ ಮಾತನ್ನು ಮುಂದೊರೆಸಿ ‘ನಿನ್ನ ಮಗಳಿಗೆ ಫೇಸ್ಬುಕ್ ನಲ್ಲಿ ಸಾಕಷ್ಟು ಫ್ಯಾನ್ಸ್ ಇದ್ರೂ. ದೃಷ್ಠಿ ಆಗಿರಬೇಕು’ ಅಂದೇ. ‘ಅದನ್ನೆಲ್ಲ ನಾನು ನಂಬೋಲ್ಲ, ಅತ್ತೆ ನೀನು, ನೀನೇ ದೃಷ್ಠಿ ತಗೆ’ ಅಂದ. ಕಷ್ಟ ಎಷ್ಟೇ ಬರಲಿ, ಎದ್ದು ನಿಲ್ಲುವ ಶಕ್ತಿಯನ್ನು ನಾವು ಬೆಳೆಸಿಕೊಂಡರೆ ಕೊರೋನಾ ಅಲ್ಲ, ಏನೇ ಬರಲಿ… ನಮ್ಮ ಕೂದಲನ್ನು ಕೂಡಾ ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಹೇಳಿಕೊಟ್ಟದ್ದು ಮುರಳಿಯ ಆತ್ಮವಿಶ್ವಾಸ.
ಧೈರ್ಯವಿಲ್ಲದಿದ್ದರೆ ಕರೋನಾ ಬರಲಿಲ್ಲವೆಂದರು ಮನೆಯಲ್ಲಿಯೇ ನನಗೆ ನಾಳೆ ಬರುತ್ತೆ…ಇಲ್ಲ… ನಾಡಿದ್ದುಬರಬಹುದು…ಎನ್ನುವ ಭಯದಲ್ಲಿ ದಿನೇ ದಿನೇ ಮಾನಸಿಕವಾಗಿ ಕುಗ್ಗಿ ಸಾಯಬಹುದು. ಕರೋನಾ ಬರುತ್ತೆ ಅಂತ ಹೆದರುವುದಕ್ಕಿಂತ, ಬಂದರೆ ಹೇಗೆ ಪಾರಾಗಬೇಕು ಎನ್ನುವ ಮನಸ್ಥಿತಿಯನ್ನು ಬೆಳೆಸಿಕೊಂಡರೆ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.
ಅಷ್ಟೇ ಅಲ್ಲ, ಮನೆಯಲ್ಲಿ ಯಾರಿಗಾದರೂ ಕರೋನಾ ಬಂದಾಗ ಅವರನ್ನು ಹೊರಗಿನವರಂತೆ ಕಾಣುವ ಅಥವಾ ಕೊರೋನಾ ದಿಂದ ಸತ್ತಾಗ ಮನೆಯವರು ನೋಡಲು ಕೂಡಾ ಹೋಗದೆ ಅಥವಾ ಕೊರೊನದಿಂದ ಗುಣಮುಖರಾಗಿ ಮನೆಗೆ ಮತ್ತೆ ಹೋದಾಗ ಮನೆಗೆ ಸೇರಿಸದೆ ಇರುವ ನೀಚ ಮನಸ್ಥಿತಿಯ ಜನರನ್ನು ನಾವು ಇಂದು ನೋಡುತ್ತಿದ್ದೇವೆ. ಇದಕ್ಕೆಲ್ಲ ಭಯವೇ ಮುಖ್ಯ ಕಾರಣ.
ಕರೋನ ಸಂದರ್ಭದಲ್ಲಿ ಬೇಕಿರುವುದು ಧೈರ್ಯ’ ಧೈರ್ಯಂ ಸರ್ವತ್ರ ಸಾಧನಂ’…
ಇಲ್ಲಿ ಮುರಳಿ ಎದುರಿಸಿದ ಕಷ್ಟದ ಸಮಯ ಒಂದು ಉದಾಹರಣೆಯಷ್ಟೇ. ಸಾಕಷ್ಟು ಜನ, ಸಾಕಷ್ಟು ರೀತಿಯಲ್ಲಿ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಈ ಕಷ್ಟದ ಸಮಯವನ್ನು ಧೈರ್ಯವಾಗಿ ಎದುರಿಸೋಣ ಎನ್ನುತ್ತಾ…ಮುರಳಿ ಮಗಳು ಆದಷ್ಟು ಬೇಗ ಮತ್ತೆ ಫೇಸ್ಬುಕ್ ನಲ್ಲಿ ಲೈವ್ PROGRAM ಕೊಡುತ್ತಾಳೆ. ಮುಂದೊಂದು ದಿನ ನಾನು ಆಕೆಯನ್ನು ಟಿವಿ ಪರದೆಯ ಮೇಲೆ ನೋಡುತ್ತೇನೆ. ಆಕೆಯ ಅತ್ತೆಯಾಗಿ ಹೆಮ್ಮೆ ಪಡುತ್ತೇನೆ ಎನ್ನುವ ವಿಶ್ವಾಸ ನನ್ನಗಿದೆ.
- ಶಾಲಿನಿ ಹೂಲಿ ಪ್ರದೀಪ್
