ಮರಭೂಮಿಯಲ್ಲಿ ಅರಳಿದ ಕೃಷ್ಣಸುಂದರಿ ಕತೆ – ವೈಶಾಲಿ ನಾಯಕ್



ಆಫ್ರಿಕಾ ಖಂಡದ , ಸೋಮಾಲಿಯಾ ದೇಶದ, ಗಾಲಕೊಯಾದ ಒಂದು ಮುಸ್ಲಿಂ ಅಲೆಮಾರಿ ಬುಡಕಟ್ಟು ಜನಾಂಗದಿಂದ ಬಂದ ಅಪ್ಪಟ ಅನಕ್ಷರಸ್ಥೆ ವಾರಿಸ್ ಮರುಭೂಮಿಯಲ್ಲಿ ಅರಳಿದ ಹೂವು.  ತನಗೆ ತಾನೇ ಬದುಕು ಕಟ್ಟಿಕೊಂಡ ಕೃಷ್ಣಸುಂದರಿ ವಾರಿಸ್ ಡಿರಿ ಕುರಿತಾದ ಲೇಖನವನ್ನು ಡಾ.ವೈಶಾಲಿ ನಾಯಕ್ ಅವರು ಬರೆದಿದ್ದಾರೆ. ಮುಂದೆ ಓದಿ …

‘ಆಸೆ ಇದ್ದರಷ್ಟೇ ಸಾಕಾಗುವುದಿಲ್ಲ.ಆಸೆ ಮಹದಾಸೆಯಾಗಬೇಕು,ನಿರ್ಧಾರವಾಗಿ ರೂಪ ಪಡೆಯಬೇಕು. ಸಂಕಲ್ಪವಾಗಿ ಮನಸ್ಸಿನಲ್ಲಿ ನೆಲೆ ಯಾಗಬೇಕು.ಅದು ಮೊದಲ ಹೆಜ್ಜೆಯನ್ನು ಧೃಢವಾಗಿ ನೆಲದಲ್ಲಿ ಊರಲು ಮನಸ್ಸಿಗೆ ಪ್ರೇರಣೆ ಕೊಡಬೇಕು.ಹಾಗಿದ್ದಲ್ಲಿ ಗಮ್ಯ ತಲುಪಬಹುದು.’ ಆಪ್ತವೆನಿಸಿದ ವಾಕ್ಯಗಳು.ಚಿಕ್ಕೆ ಭರಿತ ಆಗಸದ ಗುರಿ ಮುಟ್ಟುವವರು ಒಬ್ಬಿಬ್ಬರಷ್ಟೇ. ಚಿಕ್ಕೆಗಳು ಒಂದೆರಡಾದರೂ ಕಾಣಲು ನಿಡಿದಾಗಿ ದಿಟ್ಟಿಸಬೇಕು .ಬದುಕು ಕಟ್ಟಿಕೊಳ್ಳುವ ಛಲದಿಂದ ಸಂಘರ್ಷದ ಬದುಕಿಗೆ ಸಾಕ್ಷಿಯಾಗಿ ,ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಪ್ರಶ್ನೆಯಾಗಿಯೇ ಸವೆದು ಹೋಗುವವರಿಗೆ ಉತ್ತರವಾದ ವಾರಿಸ್ ಡಿರಿಯ ಆತ್ಮಕಥೆಯ ಸುಂದರ , ಸರಳ ಅನುವಾದವನ್ನು ಡಾ.ಎನ್. ಜಗದೀಶ್ ಕೊಪ್ಪರ ‘ ಮರುಭೂಮಿಯ ಹೂವು’ ಓದುವಾಗ ದಕ್ಕಿದ ನಿರಾಳತೆ.

೧೯೬೫ ರಲ್ಲಿ ಆಫ್ರಿಕಾ ಖಂಡದ ,ಸೋಮಾಲಿಯಾ ದೇಶದ, ಗಾಲಕೊಯಾದ ಒಂದು ಮುಸ್ಲಿಂ ಅಲೆಮಾರಿ ಬುಡಕಟ್ಟು ಜನಾಂಗದಿಂದ ಬಂದ ಅಪ್ಪಟ ಅನಕ್ಷರಸ್ಥೆ ವಾರಿಸ್ ಮರುಭೂಮಿಯಲ್ಲಿ ಅರಳಿದ ಹೂವು. ಬಾಲ್ಯದಲ್ಲಿ ಎದುರಾದ ಸಂಘರ್ಷಗಳನ್ನು ಎದುರಿಸಿ, ಹಸಿವು, ಅಪಮಾನಗಳ ನಡುವೆಯೂ ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಂಡು, ಜಗತ್ಪ್ರಸಿದ್ಧ ರೂಪದರ್ಶಿಯಾಗಿ, ಜಾಹೀರಾತು ಜಗತ್ತನ್ನು ಆಳಿ,ಕೀರ್ತಿಯ ತುತ್ತ ತುದಿಗೆ ಗೇರಿ ಹಲವಾರು ವರ್ಷಗಳಿಂದ FGM (Female genital Mutilation) ವಿರುದ್ಧ ದನಿಯೆತ್ತಿ ,ಹೋರಾಟ ನಡೆಸುತ್ತಿರುವ ವಿಶ್ವಸಂಸ್ಥೆಯ ಮಹಿಳಾ ಹಕ್ಕುಗಳ ರಾಯಭಾರಿ.

ಫೋಟೋ ಕೃಪೆ : desertflowerfoundation (ತಾಯಿ ಜೊತೆಗೆ ವಾರಿಸ್ ಡಿರಿ)

ಸೋಮಾಲಿಯಾದ ಸಾವಿರಾರು ವರ್ಷಗಳ ಇತಿಹಾಸವಿರುವ, ಅಲೆಮಾರಿಯ ಬದುಕನ್ನು ವೃತ್ತಿಯಾಗಿಸಿಕೊಂಡ, ಬುಡಕಟ್ಟು ಜನಾಂಗಕ್ಕೆ ಸೇರಿದ ವಾರಿಸ್ ಓದು, ಬರಹವೆಂಬ ಅಕ್ಷರ ಲೋಕಕ್ಕೆ ಅಪರಿಚಿತಳಾಗಿ ಉಳಿದವಳು. ಸೋಮಾಲಿಯಾದ ಸಾಮಾಜಿಕ ಬದುಕಿನಲ್ಲಿ ಅವಿಭಕ್ತ ಕುಟುಂಬದ ಮಾದರಿಯ ಕೌಟುಂಬಿಕ ವ್ಯವಸ್ಥೆ, ಸ್ಥಳೀಯ ಬಂಡುಕೋರರ ನಡುವಿನ ನಿರಂತರ ಸಂಘರ್ಷಗಳ ನಡುವೆ, ತಮ್ಮನ್ನು ತಾವೇ ರಕ್ಷಿಸಿಕೊಳ್ಳುತ್ತಾ ಸಾವಿನ ನೆರಳಿನಲ್ಲಿ ಬದುಕಬೇಕಾದ ಅನಿವಾರ್ಯತೆ, ಇಂತಹ ವಾತಾವರಣದಲ್ಲಿ ಜನಿಸಿದ ವಾರಿಸ್, ವಾರಿಸ್ ಅಂದರೆ ಮರಳು ಗಾಡಿನಲ್ಲಿ ಪ್ರತಿವರ್ಷ ಮೊದಲ ಮಳೆಯ ನಂತರ, ಮರುಭೂಮಿಯಲ್ಲಿ ಅರಳಿ ನಿಲ್ಲುವ ಹಳದಿ, ಕೇಸರಿ ಬಣ್ಣದ ಮಿಶ್ರವರ್ಣದ ಹೂವು ಎಂದು ಅಮ್ಮ ಪ್ರೀತಿಯಿಂದ ತನಗಿಟ್ಟ ಹೆಸರಿನ ಅಸ್ತಿತ್ವವನ್ನು ಆಪ್ಯಾಯಮಾನವಾಗಿ ನೆನಪಿಸುತ್ತಾಳೆ. ತೀರಾ ಬಡತನ, ಅಪಮಾನ ಹಾಗೂ ಹಿಂಸೆಯ ನಡುವೆ ಬದುಕು ಕಟ್ಟಿಕೊಂಡ ಪರಿಯನ್ನು ಯಾವುದೇ ಮುಜುಗರ ,ಸಂಕೋಚವಿಲ್ಲದೆ ಹೋರಾಟದ ಬದುಕನ್ನು ಅನಾವರಣಗೊಳಿಸಿದ್ದಾಳೆ.

ತನ್ನ ಐದನೆಯ ವಯಸ್ಸಿನಲ್ಲಿಯೇ ಯೋನಿ ವಿಚ್ಛೇದನ ಕ್ರಿಯೆ ( FGM) ಎಂಬ ಅನಿಷ್ಟ ಪದ್ಧತಿಗೆ ಒಳಗಾಗುವ ವಾರಿಸ್ ದೇಹಕ್ಕೆ ಘಾಸಿ ಮಾಡುವ ಈ ಕ್ರಿಯೆ, ಮಾನಸಿಕವಾಗಿಯೂ ಯಾವತ್ತೂ ಕಾಡುವ ನೋವಾಗಿ ಜೀವನದುದ್ದಕ್ಕೂ ಜತೆಯಾದದ್ದನ್ನು ಅತಿಯಾದ ನೋವಿನಿಂದ ನೆನಪಿಸಿಕೊಳ್ಳುತ್ತಾಳೆ.

ಫೋಟೋ ಕೃಪೆ : The Atlantic (ಸಾಂದರ್ಭಿಕ ಚಿತ್ರ)

ಯೋನಿ ಛೇದನ ಕ್ರಿಯೆ( FGM) ಸೋಮಾಲಿಯದ ಕಡ್ಡಾಯ ಧಾರ್ಮಿಕ ಕ್ರಿಯೆಯಾಗಿದ್ದು, ಮುಂದಿನ ದಿನಗಳಲ್ಲಿ ವಿವಾಹಕ್ಕೆ ಮತ್ತು ತಾಯಾಗಲು ಅರ್ಹತೆ ಗಳಿಸಿಕೊಡುತ್ತದೆ. ಹೆಣ್ಣುಮಕ್ಕಳಿಗೆ ಋತುಮತಿಯಾಗುವ ಮುನ್ನ ಆಕೆಯ ಯೋನಿಯ ಹೊರಭಾಗದ ಕೆಲವು ಭಾಗ ಮತ್ತು ಗರ್ಭಾಶಯದ ಕೊರಳಿನ ತುದಿಯಲ್ಲಿರುವ ಅವರೆ ಕಾಳಿನ ಗಾತ್ರದ ಹಾಗೂ ಹೆಣ್ಣಿಗೆ ಲೈಂಗಿಕ ಸ್ಪರ್ಶ ಮತ್ತು ಸಂವೇದನೆಯ ಬಹುಮುಖ್ಯ ಭಾಗವನ್ನು ತೆಗೆದು ಹಾಕಿ ಯೋನಿಯನ್ನು ಹೊಲಿಯುವ ಕ್ರಿಯೆ. ಮೂತ್ರ ವಿಸರ್ಜನೆಗೆಂದು ಚಿಕ್ಕದಾದ ರಂಧ್ರವನ್ನು ಮಾತ್ರ ಉಳಿಸಿರುತ್ತಾರೆ. ಆಫ್ರಿಕಾದ ಪುರುಷ ಜಗತ್ತು ಮಹಿಳಾ ಸಮುದಾಯಕ್ಕೆ ವಿಧಿಸಿದ , ಈ ಅಮಾನುಷ ಕಟ್ಟುಪಾಡಿಗೆ ಒಳಗಾದ ಎಲ್ಲಾ ಮಹಿಳೆಯರೂ ಈ ನರಕದ ಬಾಗಿಲನ್ನು ಒಮ್ಮೆ ತಮ್ಮ ಬದುಕಿನಲ್ಲಿ ದಾಟಿ ಬರುವುದು ಅನಿವಾರ್ಯವಾಗಿದೆ. ಮತ್ತು ಸಮಾಜದ ದೃಷ್ಟಿಯಲ್ಲಿ ಇದು ಪವಿತ್ರತೆಯ ಸಂಕೇತ . ಈ ಕ್ರಿಯೆಯಿಂದ ಮುಂದೆ ಹಲವಾರು ವರ್ಷಗಳ ಕಾಲ ಮೂತ್ರ ವಿಸರ್ಜನೆಯ ಸಮಯದಲ್ಲಿ ತಾನು ಅನುಭವಿಸಿದ ಯಾತನೆ, ತೀವ್ರ ಮುಜುಗರ, ಋತಸ್ರಾವದ ಸಮಯದಲ್ಲಿ ಕಿಬ್ಬೊಟ್ಟೆ ನೋವು ತಾಳಲಾರದೆ ಹೆಣ್ಣುಮಕ್ಕಳು ಮರಳಿನಲ್ಲಿ ಗುಂಡಿ ತೆಗೆದು, ಸೊಂಟದವರೆಗೆ ಬೆತ್ತಲೆ ದೇಹಕ್ಕೆ ತಣ್ಣಗಿನ ಮರಳನ್ನು ಮುಚ್ಚಿಕೊಂಡು ದಿನಗಟ್ಟಲೆ ನಿಲ್ಲುತ್ತಿದ್ದ ನೆನಪುಗಳು ಆಫ್ರಿಕಾದ ಈ ಕ್ರೂರ ಸಂಪ್ರದಾಯಕ್ಕೆ ಸಾಕ್ಷಿಯಾಗಿದೆ.

ಫೋಟೋ ಕೃಪೆ : The Independent (ಸಾಂದರ್ಭಿಕ ಚಿತ್ರ)

ಬಡತನದಿಂದಾಗಿ ತಂದೆ ಹದಿಮೂರು ವರ್ಷದ ಹುಡುಗಿ ವಾರಿಸ್ ಳನ್ನು ಅರುವತ್ತರ ವೃದ್ಧನೊಂದಿಗೆ ವಿವಾಹ ಮಾಡುವ ನಿರ್ಧಾರಕ್ಕೆ ಸಿಡಿದೆದ್ದ ವಾರಿಸ್ ನಡುರಾತ್ರಿಯಲ್ಲಿ ಒಬ್ಬಂಟಿಯಾಗಿ, ಉಟ್ಟ ಉಡುಗೆಯಲ್ಲಿ ಮನೆ ಬಿಟ್ಟು, ಚಿಕ್ಕಮ್ಮನನ್ನು ಹುಡುಕುತ್ತಾ ಮೊಗದಿಶು ನಗರಕ್ಕೆ ಮರುಭೂಮಿಯಲ್ಲಿ ಕಾಲ್ನಡಿಗೆ ಪ್ರಯಾಣವನ್ನು ಪ್ರಾರಂಭಿಸುವ ವಾರಿಸಳ ಪಯಣ ಹಲವಾರು ತಿರುವುಗಳೊಂದಿಗೆ ಮುಂದೆ ಸಾಗುತ್ತಾ, ಲಂಡನ್ ನಲ್ಲಿ ಒಬ್ಬ ಫ್ಯಾಷನ್ ಫೋಟೋಗ್ರಾಫರನ ಪರಿಚಯದಿಂದ ಸಂಪೂರ್ಣವಾಗಿ ಬದಲಾಗುತ್ತದೆ. ಆಫ್ರಿಕನ್ ಹೆಣ್ಣುಮಕ್ಕಳ ಚಿತ್ರಕ್ಕಾಗಿ ಹುಡುಕುತ್ತಿದ್ದ ಆತನನ್ನು ಕಪ್ಪನೆಯ, ತೆಳ್ಳನೆಯ, ಪುಟ್ಟಬಾಯಿಯ ಕೃಷ್ಣಸುಂದರಿ ವಾರಿಸ್ ತೀವ್ರವಾಗಿ ಆಕರ್ಷಿಸುತ್ತಾಳೆ.

ಹೀಗೆ ನಿಧಾನವಾಗಿ ಮಾಡೆಲಿಂಗ್ ಜಗತ್ತಿಗೆ ಕಾಲಿರಿಸಿದ ವಾರಿಸ್ ಮುಂದೆ ಜಗತ್ಪ್ರಸಿದ್ಧ ರೂಪದರ್ಶಿಯಾಗಿ ವಿಖ್ಯಾತಿಯಾಗುತ್ತಾಳೆ. ಅಮೆರಿಕದ ಜಾಹೀರಾತು ಮಾರುಕಟ್ಟೆಯ ಅಚ್ಚು ಮೆಚ್ಚಿನ ರೂಪದರ್ಶಿಯಾಗುವ ವಾರಿಸ್ ಆಧುನಿಕ ಜಗತ್ತಿನ ನಾಡಿಮಿಡಿತಗಳನ್ನು ಯಶಸ್ವಿಯಾಗಿ ಅರ್ಥಮಾಡಿಕೊಂಡು ಫ್ಯಾಷನ್ ಹಾಗೂ ಜಾಹೀರಾತು ಲೋಕಕ್ಕೆ ಮೀಸಲಾದ ಎಲ್ಲೆ, ಗ್ಲಾಮರ್ ಮತ್ತು ವೋಗ್ ಪತ್ರಿಕೆಗಳ ಮುಖಪುಟ ಅಲಂಕರಿಸಿ, ಯುರೋಪಿನಾದ್ಯಂತ ಬಹುಬೇಡಿಕೆಯ ಆಫ್ರಿಕನ್ ಮಹಿಳೆ ಎಂಬ ಕೀರ್ತಿಗೆ ಪಾತ್ರಳಾಗುತ್ತಾಳೆ.

ಫೋಟೋ ಕೃಪೆ : celebrety photo

೧೯೯೫ ರಲ್ಲಿ ಬಿಬಿಸಿ ಚಾನೆಲ್ ವಾರಿಸ್ ಕುರಿತಾದ ಸಾಕ್ಷ್ಯ ಚಿತ್ರ (A Nomad in New York) ನಿರ್ಮಾಣಕ್ಕಾಗಿ ಸಂದರ್ಶಿಸಿದಾಗ, ಸುಮಾರು ಹದಿನೈದು ವರ್ಷಗಳ ನಂತರ ತನ್ನ ತಾಯ್ನಾಡಿಗೆ ಕಾಲಿಟ್ಟ ವಾರಿಸ್ ತನ್ನ ಮರಳುಗಾಡಿನ ನೆಲದ ಮಣ್ಣಿನ ವಾಸನೆ, ಸಂಸ್ಕೃತಿ ಗೆ ಭಾವುಕಳಾಗಿ, ವಿಸ್ಮೃತಿಯಲ್ಲಿ ಕಳೆದು ಹೋಗುತ್ತಾಳೆ.

೧೯೯೭ ರಲ್ಲಿ ಫ್ಯಾಷನ್ ಜಗತ್ತಿನ ಮೇರಿ ಕ್ಲೈರ್ ಪತ್ರಿಕೆಯಲ್ಲಿ ಫ್ಯಾಷನ್ ಜಗತ್ತಿನ ಮಾತುಗಳ ಅನುಭವಗಳ ಹೊರತಾಗಿ, ಮೊದಲ ಬಾರಿಗೆ ಬಾಲ್ಯದ ತನ್ನ ಯೋನಿ ಛೇದನ ಕ್ರಿಯೆಯ ಕ್ರೂರತೆಯನ್ನು ಅನಾವರಣಗೊಳಿಸಿದಾಗ, ಇಡೀ ಅಮೆರಿಕದ ನಾಗರಿಕ ಸಮಾಜ ಬೆಚ್ಚಿಬಿದ್ದಿತ್ತು. ಸ್ಪಂದಿಸಿದ ವಿಶ್ವಸಂಸ್ಥೆಯು ಈ ಕುರಿತು ಅರಿವು ಮೂಡಿಸಲು ಹಮ್ಮಿಕೊಂಡ ಜಾಗೃತಿ ಆಂದೋಲನದ ರಾಯಭಾರಿಯಾಗಿ ವಾರಿಸ್ ಳನ್ನು ನೇಮಿಸಿತು. ಸಂಸ್ಥೆಯ ಪ್ರತಿನಿಧಿಯಾಗಿ, ಜಗತ್ತಿನಾದ್ಯಂತ ಪ್ರವಾಸ ಮಾಡಿ, ಆಫ್ರಿಕಾ ಖಂಡದ ಅನಿಷ್ಟ ಪದ್ದತಿಯೊಂದರ ಅಮಾನುಷ ಆಚರಣೆಯ ಕುರಿತಂತೆ ಜಗತ್ತಿನ ಗಮನ ಸೆಳೆದಳು. ೧೯೯೮ ರಲ್ಲಿ ತನ್ನ ಮೊದಲ ಆತ್ಮಕಥನ Desert Flower ಪುಸ್ತಕವನ್ನು ಕ್ಯಾಥಲೀನ್ ಮಿಲ್ಲರ್ ಜತೆಗೂಡಿ ಬರೆದಳು. ಇದು international best seller ಕೀರ್ತಿಗೆ ಪಾತ್ರವಾಗಿದೆ.  ೨೦೦೨ ರಲ್ಲಿ ವಿಯೆನ್ನಾದಲ್ಲಿ desert flower ಸಂಸ್ಥೆ ಸ್ಥಾಪಿಸಿದ್ದು, ತನ್ನ ಸಂದರ್ಶನದ ಲೇಖನಗಳು ಹಾಗೂ ಇತರ ಚಟುವಟಿಕೆಗಳಿಂದ ಬರುತ್ತಿರುವ ಎಲ್ಲಾ ವಿಧವಾದ ಆದಾಯವನ್ನು ಈ ಸಂಸ್ಥೆಗೆ ಧಾರೆಯೆರೆಯುತ್ತಿದ್ದಾಳೆ. ತನ್ನ letter to my mother ಪುಸ್ತಕದಲ್ಲಿ ಅವಳು ಬರೆದ ‘ಕೆಲವೊಂದು ಗಾಯಗಳು ಯಾವತ್ತೂ ಎಷ್ಟು ಪ್ರಯತ್ನಪಟ್ಟರೂ ಮಾಯುವುದಿಲ್ಲ ‘ ಎಂಬ ಮಾತುಗಳು ಮತ್ತೆ ಮತ್ತೆ ಕಾಡುತ್ತವೆ.



ವಾರಿಸ್ ನ ಅರಿವು ಮೂಡಿಸುವ ಹಾಗೂ ಸುಧಾರಣಾ ಕಾರ್ಯಗಳಿಗಾಗಿ, ಮಾನವೀಯ ಕಾಳಜಿಗಾಗಿ ಹಲವಾರು ಪ್ರಶಸ್ತಿಗಳು ದೊರೆತರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದರೂ ‘ ನನ್ನೊಳಗೆ ಸೋಮಾಲಿಯಾದ ಮರುಭೂಮಿಯಲ್ಲಿ ಒಂಟೆ, ಕುರಿ, ಮೇಕೆ ಮೇಯಿಸುತ್ತಿದ್ದ ಅನಕ್ಷರಸ್ಥ #ಬುಡಕಟ್ಟು_ಜನಾಂಗದ ಹೆಣ್ಣುಮಗಳು ವಾರಿಸ್ ಸದಾ ಜೀವಂತಳಾಗಿದ್ದಳು ಎನ್ನುವ ವಾರಿಸ್ ನಕಾಬನ್ನು ಕಳಚಿಟ್ಟ ಮೇಲೆ ಗಾಢ ಪರಿಮಳದ ಒಂದು ಹೂವಿನಂತೆ ಬಿರಿಯುವ ಹೆಣ್ಣಾಗಿ ಕಾಡುತ್ತಾಳೆ.

ಕಷ್ಟಗಳಿಗೆ, ಸಂಘರ್ಷಗಳಿಗೆ ಒಡ್ಡಿಕೊಳ್ಳುವ ಮೂಲಕ ಮನುಷ್ಯರಿಗೆ ದಕ್ಕುವ ಹೊಸ ವ್ಯಕ್ತಿತ್ವದಲ್ಲಿ ವಿಶಿಷ್ಟವಾದ ನಮ್ರತೆಯಿರುತ್ತದೆ. ಆತ್ಮವಿಶ್ವಾಸವಿರುತ್ತದೆ. ನೆರಳು, ಕತ್ತಲು, ಗತಕಾಲದ ಪ್ರತಿಧ್ವನಿಗಳನ್ನು ಹಾಯುತ್ತಾ ನೀರವದಲ್ಲಿರುವ ಅಸಹಾಯಕತೆ, ಒಬ್ಬಂಟಿತನದ ಮೌನವಾದ ಮಾತುಗಳಿಗೆ ದನಿಯಾಗಿ, ಪ್ರಬುದ್ಧವಾಗಿ ಮಾಗುವ ನಿಲುವಿನ ವಾರಿಸ್ ಆತ್ಮಕಥನ ‘ ಮರುಭೂಮಿಯ ಹೂವು’ ಸರಳವಾಗಿ, ಗಾಢ ಜೀವಂತಿಕೆಯಿಂದ ನನ್ನೊಳಗೆ ವಾರಿಸ್ ಳನ್ನು ಅದೃಶ್ಯವಾಗಿ ಬೆಳೆಸುತ್ತಲೇ ಇದೆ…

  • ಡಾ. ವೈಶಾಲಿ ನಾಯಕ್ (ಆಯುರ್ವೇದ ವೈದ್ಯರು, ಲೇಖಕರು), ಮುಂಬೈ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW