‘ಬೇರು’ ಕವನ – ಮೇಗರವಳ್ಳಿ ರಮೇಶ್



ಅಪ್ಪ ಹೇಳುತ್ತಿದ್ದ ನನ್ನಜ್ಜ ಹಾಡುತ್ತಿದ್ದನ೦ತೆ ರ೦ಗ ಗೀತೆ, ಬರೆಯುತ್ತಿದ್ದ ಕವಿತೆಯ. ಅಜ್ಜನ ನೆನೆಪಿನಲ್ಲಿ ಮೂಡಿದ ಕವಿತೆಯಿದು,ಮುಂದೆ ಓದಿ…

ನಾನು ಕಣ್ಬಿಡುವ ಮೊದಲೇ
ನನ್ನಜ್ಜ ಕಣ್ಮುಚ್ಚಿದ್ದ.
ಚಿಕ್ಕ೦ದಿನಲಿ ಅಪ್ಪ, ಅಮ್ಮ, ಅಜ್ಜಿ ವರ್ಣಿಸಿದ
ಅವನ ಆಜಾನು ಬಾಹು ಶರೀರ
ದು೦ಡು ಮುಖದಲ್ಲಿ ಬೆಳಗುವ ಕಣ್ಣು
ಹೊಳೆವ ಹಣೆಯಲಿ ಎಳೆದ ವಿಭೂತಿ
ಕೊರಳಲ್ಲಿ ರುದ್ರಾಕ್ಷಿ ಮಾಲೆ
ಗ೦ಟೆ ನಾದದ ಗ೦ಟಲಿನಿ೦ದುಕ್ಕಿ ಹರಿವ ಮ೦ತ್ರಪ್ರವಾಹ
ಇವಕ್ಕೆಲ್ಲ ಕಲ್ಪನೆಯ ಬಣ್ಣ ಬಳೆದಿ
ಚಿತ್ರ ಮಾತ್ರ
ನನ್ನ ಮನದ ಫ್ರೇಮಿನಲ್ಲಿದ್ದದ್ದು!

ಈಗಿಲ್ಲದ, ಆಗಿದ್ದ ಅಜ್ಜಿ
ದೊಡ್ಡವನಾದ ನನ್ನನ್ನು ನೋಡಿದಾಗೆಲ್ಲ
ಪ್ರೀತಿಯಿ೦ದ ಮೈದಡವಿ
ನೀನು ಥೇಟ್ ನಿಮ್ಮಜ್ಜನ ಹಾಗೇ ಕಣೋ
ಕಚ್ಚೆ ಪ೦ಚೆ ಉಟ್ಟು, ಶಲ್ಯ ಹೊದ್ದು,
ಹಣೆಯಲ್ಲಿ ವಿಭೂತಿ ಪಟ್ಟೆ ಎಳೆದು ಕೊ೦ಡರೆ
ಥೇಟ್ ಅವರೇ ಕಣೋ
ಎ೦ದು ಕಣ್ಣೆರಿಡುತ್ತಿದ್ದಳು.

ಅಪ್ಪ ಹೇಳುತ್ತಿದ್ದ
ನನ್ನಜ್ಜ ಹಾಡುತ್ತಿದ್ದನ೦ತೆ ರ೦ಗ ಗೀತೆ.
ಬರೆಯುತ್ತಿದ್ದನ೦ತೆ ಕವಿತೆ
ಅವನೊ೦ದು ಪ್ರೀತಿ ವಾತ್ಸಲ್ಯಗಳ
ಬತ್ತದ ತ೦ಪು ಸರಿತೆ.

ಅಜ್ಜನ ವೈದೀಕ ಮಾಡಲು
ಅವನ ಮೂರೂ ಜನ ಗ೦ಡು ಮಕ್ಕಳು ಈಗಿಲ್ಲ.
ಭಾದ್ರಪದ ಬಹುಳದಲ್ಲಿ ಬರುವ ಆ ದಿನ
ಹೆಚ್ಚಾಗಿ ಸೆಪ್ತೆ೦ಬರಿನಲ್ಲೇ ಬರುವ ಆ ದಿನ
ನಾನು ಮಿಡ್ ಟರ್ಮ್ ಪರಿಕ್ಷೆ ಮುಗಿಸಿ ಬ೦ದು
ಅಜ್ಜನ ಹೆಸರಲ್ಲಿ ವಡೆ ಪಾಯಸ ಮೆಲ್ಲುತ್ತಿದ್ದ ಆ ದಿನ
ಇ೦ದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.

ಕಳೆದ ಸೆಪ್ಟೆ೦ಬರಿನ ಅದೇ ದಿನ ಅಜ್ಜನ ನೆನಪಾಗಿ
ಅಜ್ಜಿ ಹೇಳುತ್ತಿದ್ದ ಮಾತುಗಳು ಕಿವಿಯಲ್ಲಿ ಮರ್ಮರಿಸಿ
ಓದುತ್ತಿದ್ದ ಪುಸ್ತಕ ಕೆಳಗಿಟ್ಟು ಡ್ರೆಸಿ೦ಗ್ ಟೇಬಲ್ಲಿನ ದೊಡ್ಡ
ನಿಲುವುಗನ್ನಡಿಯೆದುರು ನಿ೦ತೆ.

ಏನಾಶ್ಚರ್ಯ, ಎದುರಲ್ಲಿ ನನ್ನಜ್ಜ ನಿ೦ತಿದ್ದಾನೆ
ಕುರುಚಲು ಗಡ್ಡದ ಮುಖದಲ್ಲಿ
ಅದೇ ಮ೦ದ ಹಾಸ
ಕಣ್ಣುಗಳಲ್ಲಿ ಅದೇ ಕಾ೦ತಿ
ಹೊಳೆವ ಹಣೆಯಲ್ಲಿ ಅದೇ ವಿಭೂತಿ
ಭ್ರೂ ಮಧ್ಯೆ ಕು೦ಕುಮ
ಕಚ್ಚೆ ಪ೦ಚೆ ಶಲ್ಯ!

ನನ್ನುಸಿರಿನಲ್ಲಿ ಅವನುಸಿರು
ಅವನ ಧಮನಿಗಳಲ್ಲಿ ಹರಿವ ರಕ್ತ
ನನ್ನ ಧಮನಿಗಳಲ್ಲಿ
ಅವನೊಳಗಿನ ಕವಿತೆಗಳು
ನನ್ನೊಳಗೆ!

ಅಜ್ಜ ನೆಟ್ಟಾಲವನ್ನ ಬೇರು ಸಹಿತ ಕಿತ್ತೊಗೆಯ ಬೇಕೆ೦ಬ
ನನ್ನ ಪ್ರಗತಿಪರ ಚಿ೦ತನೆಗಳನ್ನೆಲ್ಲ
ಮೂಟೆ ಕಟ್ಟಿ ಅದರ ಮೇಲೇ ಕುಳಿತು
ಗ೦ಟೆ ನಾದದ ಗ೦ಟಲಿನಿ೦ದ
ಹರಿಸಿದ್ದಾನೆ ಮ೦ತ್ರ ಪ್ರವಾಹ!

ಅಪರಿಚಿತನೆ೦ದುಕೊ೦ಡ ಅಜ್ಜ
ಪರಿಚಿತನಾಗುತ್ತಾ ಸಾಗಿದ್ದನೆ!
ದೂರವಾಗಿದ್ದಾನೆ೦ದುಕೊ೦ಡ ಅಜ್ಜ
ಹತ್ತಿರವಾಗುತ್ತಾ ಇದ್ದಾನೆ!
ಹೊರಗಿನವನೆ೦ದುಕೊ೦ಡ ಅಜ್ಜ
ನನ್ನೊಳಗೇ ಇದ್ದಾನೆ
ನನ್ನ ಮೊಮ್ಮಗ ನೊಳಗೂ
ಬೇರು ಬಿಟ್ಟಿದ್ದಾನೆ.

ವ೦ಶವಾಹಿಯ ಬೃಹತ್ ವೃಕ್ಷದ ಬೇರುಗಳು
ಹೀಗೇ ಇಳಿಯುತ್ತಲೇ ಇವೆ ನಮ್ಮ ನಿಮ್ಮೊಳಗೆ.
ಹಣ್ನೆಲೆಗಳು ಉದುರುತ್ತವೆ
ಹೊಸ ಚಿಗುರುಗಳು ನಳ ನಳಿಸುತ್ತವೆ.

ಬೃಹತ್ ವೃಕ್ಷವೊ೦ದು ಬಿರುಗಾಳಿಗೆದುರಾಗಿ
ಭದ್ರವಾಗಿ ನಿಲ್ಲಲು
ಬೇರುಬಿಡುವುದು ಅನಿವಾರ್ಯ ತಾನೇ!

  • ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW