ಮಧ್ಯ ವಯಸ್ಕರ ಸಮಸ್ಯೆಗಳು – ವಸಂತ ಗಣೇಶ್



ಮಧ್ಯವಯಸ್ಸಿನವರ ಬದುಕು ಬರ್ಗರ್ ನಲ್ಲಿನ ತರಕಾರಿಯಂತೆ, ಮಕ್ಕಳ ಹಾಗೂ ಹಿರಿ ವಯಸ್ಸಿನವರ ನಡುವೆ ಮಧ್ಯವಯಸ್ಸಿನವರ ತೊಳಲಾಟವನ್ನು ಈ ಲೇಖನದ ಮೂಲಕ ಸುಂದರವಾಗಿ ಲೇಖಕಿ ವಸಂತ ಗಣೇಶ ಅವರು ವಿಶ್ಲೇಷಿಸಿದ್ದಾರೆ. ಓದಿ ನಿಮ್ಮ ವಿಚಾರವನ್ನು ಹಂಚಿಕೊಳ್ಳಿ ….

ಈ ‘ಮಧ್ಯ’ ಅನ್ನೋ ಪದದಲ್ಲಿಯೆ ಸಮಸ್ಯೆ ಇದೆ ಅನಿಸುತ್ತೆ ಅಲ್ಲವೇ? ಈ ಬರ್ಗರ್ ಮಧ್ಯೆ ತರಕಾರಿ, ಎಲೆ ಎಲ್ಲ ಇಟ್ಟು ಕೊಡುತ್ತಾರಲ್ಲ ಅದು ಎರಡು ಬ್ರೆಡ್ಗಳ ನಡುವೆ ಅಪ್ಪಚ್ಚಿ ಆಗಿರುತ್ತೆ, ಬೀಸುವ ಕಲ್ಲಿನಲ್ಲಿ ಹಾಕಿದ ಧಾನ್ಯದ ಹಾಗೆ ಈ ಮಧ್ಯ ಅನ್ನೋದು. ಎರಡು ಕಲ್ಲುಗಳ ನಡುವಿನ ತಿಕ್ಕಾಟದಲ್ಲಿ ಧಾನ್ಯಗಳು ಹೇಗೆ ಪುಡಿ ಪುಡಿ ಆಗುತ್ತದೆಯೋ ಅದೇ ಕಥೆ ಈ ಮಧ್ಯವಯಸ್ಸಿನವರದು.

ಫೋಟೋ ಕೃಪೆ : HungryForever

#ಮಧ್ಯ_ವಯಸ್ಕರ_ಸಮಸ್ಯೆಗಳು

ಇದಕ್ಕೆ ಮತ್ತೊಂದು ಅತ್ಯುತ್ತಮ ಉದಾಹರಣೆ ತ್ರಿಶಂಕು ಸ್ಥಿತಿ, ಅತ್ತ ಸ್ವರ್ಗಕ್ಕೆ ಹೋಗಲು ಆಗದೆ ಇತ್ತ ಭೂಮಿಗೂ ಬಾರದ ತ್ರಿಶಂಕುವಿನ ಸ್ಥಿತಿ ಯಾರಿಗೂ ಬೇಡ.

ಈ ಮಧ್ಯ ವಯಸ್ಸು ಅನ್ನುವುದು ಹೀಗೆ ಅಲ್ಲವೇ? ಇತ್ತ ಚಿಕ್ಕವರೂ ಅಲ್ಲ, ಅತ್ತ ಹಿರಿಯರೂ ಅಲ್ಲ. ಮನುಷ್ಯ ಏನಾದರೂ ತಪ್ಪು ಮಾಡಿದಾಗ ಚಿಕ್ಕವರಾದರೆ ಗೊತ್ತಾಗಲಿಲ್ಲ, ಕ್ಷಮಿಸಿ ಎಂದರೆ ಮುಗಿದು ಹೋಯಿತು. ಅದೇ ಹಿರಿಯರಾದರೆ ವಯಸ್ಸಾಗಿದೆ ಅರುಳೋ- ಮರುಳೋ ಅನ್ನೋ ವಯಸ್ಸು ಹೋಗ್ಲಿ ಬಿಡಿ ಅಂದು ಬಿಡ್ತಾರೆ. ಯುವಕ ಯುವತಿಯರಿಗೂ ರಿಯಾಯಿತಿ ಇರುತ್ತೆ, ಹುಡುಗು ಬುದ್ದಿ ಮುಂದೆ ತಿಳಿದುಕೊಳ್ಳುತ್ತಾರೆ ಅಂತ ಸುಮ್ಮನಾಗುತ್ತಾರೆ.

ಅದೇ ಈ ಮಧ್ಯ ವಯಸ್ಸಿನ ವ್ಯಕ್ತಿಗಳು ತಪ್ಪು ಮಾಡಿದರೆ “ಛೇ ಅಷ್ಟು ವಯಸ್ಸಾಗಿದೆ ಬುದ್ದಿ ಬೇಡವಾ, ಹಿಂದೂ ಮುಂದೂ ಯೋಚಿಸದೆ ಅಂತ ಕೆಲಸ ಮಾಡುವುದಾ/ಅಂತ ಮಾತು ಆಡುವುದಾ? ಅನ್ನೋದರ ಜೊತೆಗೆ ಅವರನ್ನು ಹಿಗ್ಗಾ ಮುಗ್ಗಾ ಬೈಯೋದು ಶತಸಿದ್ಧ. ಅವರಿಗೆ ಬೈಗುಳದಲ್ಲಿ ಆಗಲಿ ಬೇರೆ ಯಾವುದೇ ವಿಷಯದಲ್ಲಿ ಆಗಲಿ ರಿಯಾಯಿತಿ ಖಂಡಿತಾ ಇಲ್ಲ.

ಮನೆಯಲ್ಲಿ ಬಡತನವಿದ್ದರೆ ಅದಕ್ಕೆ ಹೊಣೆ ಆಗುವುದೂ ಇದೇ ಮಧ್ಯ ವಯಸ್ಸಿನ ವ್ಯಕ್ತಿಗಳು. ದುಡಿಯಲಾಗದವ, ಸೋಂಬೇರಿ ಇನ್ನೂ ಏನೇನೋ. ಕೆಲವರು ಹಾಗೆ ಸೊಂಬೇರಿಗಳು ಇರಬಹುದಾದರೂ ಹೆಚ್ಚಿನವರು ಅವರ ಕೈಯಲ್ಲಿ ದುಡಿಯಲು ಸಾಧ್ಯವಿರುವ ಎಲ್ಲ ದಾರಿಗಳಲ್ಲೂ ಪ್ರಯತ್ನಿಸಿ ವಿಫಲರಾಗಿ ಕೈ ಚೆಲ್ಲಿ ಕುಳಿತಿರುತ್ತಾರೆ ವಿನಃ ಬೇಕೆಂದು ಹಾಗೆ ಮಾಡುವುದಿಲ್ಲ.

ಫೋಟೋ ಕೃಪೆ : BBC

ಬಡತನದಲ್ಲಿ ಅಲ್ಪ ಸ್ವಲ್ಪ ದುಡಿಮೆ ಇದ್ದಾಗ ದುಡಿದು ಬರುವವರು ಮಧ್ಯ ವಯಸ್ಸಿನವರಾದರೂ ತಿನ್ನುವಾಗ ಅವರು ಹಿಂದೇ ಉಳಿಯುತ್ತಾರೆ. ವಯಸ್ಸಾದ ಹಿರಿಯರಿಗೆ, ಚಿಕ್ಕ ಮಕ್ಕಳಿಗೆ ಊಟ ಬಡಿಸಿ ಇವರು ಉಳಿದ ಸ್ವಲ್ಪವನ್ನೇ ತಿಂದು ಹೊಟ್ಟೆ ತುಂಬ ನೀರು ಕುಡಿದು ನಗುತ್ತಾ ಬದುಕು ಸವೆಸುತ್ತಾರೆ. ಊಟ ಒಂದೇ ಅಲ್ಲ, ಬಟ್ಟೆ ಬರೆ, ಮಿಕ್ಕೆಲ್ಲ ಅವಶ್ಯಕ ವಸ್ತುಗಳ ವಿಷಯ ಬಂದಾಗಲೂ ಹೀಗೆ ಆಗೋದು. ಹಿರಿಯರ ಅವಶ್ಯಕತೆ, ಕಿರಿಯರ ಆಕಾಂಕ್ಷೆಗಳನ್ನು ಪೂರೈಸಲು ಹೆಣಗುವ ಇವರು ತಮಗೂ ಆಸೆಗಳು ಇವೆ ಅನ್ನುವುದನ್ನೆ ಮರೆತು ಬಿಟ್ಟಿರುತ್ತಾರೆ.

ಮನೆಯಲ್ಲಿ ವಯಸ್ಸಾದ ಹಿರಿಯರು, ಇತ್ತೀಚಿನ ಮಕ್ಕಳು ಹಾಗೂ ಈ ಮಧ್ಯ ವಯಸ್ಸಿನವರು ಮೂರೂ ತಲೆಮಾರಿನವರು ಇರುವಾಗ ಇವರ ಪರಿಸ್ಥಿತಿ ದೇವರಿಗೆ ಪ್ರೀತಿ. ಮಕ್ಕಳಿಗೆ ಅಜ್ಜ ಅಜ್ಜಿ ಹೇಳಿದ್ದು ಯಾವುದೂ ಇಷ್ಟ ಆಗಲ್ಲ, ವಯಸ್ಸಾದವರಿಗೆ ಚಿಕ್ಕ ಮಕ್ಕಳು ಮಾಡಿದ್ದೆಲ್ಲ ತಪ್ಪು. ಚಿಕ್ಕ ಮಕ್ಕಳು ಅಜ್ಜ ಅಜ್ಜಿಯರಿಗೆ ಎದುರು ಏನೂ ಹೇಳುವುದಿಲ್ಲ, ಅಜ್ಜಿ ಅಜ್ಜಂದಿರು ಮೊಮ್ಮಕ್ಕಳಿಗೆ ಮುಖಾ ಮುಖಿ ಏನೂ ಹೇಳುವುದಿಲ್ಲ. ಮಕ್ಕಳಿಗೆ ಇದೇ ಕಲಿಸಿ, ಹಿರಿಯರು ಎನ್ನುವ ಮರ್ಯಾದೆ ಇಲ್ಲ, ಹೇಳಿದ್ದು ಕೇಳಿಸಿಕೊಳ್ಳುವ ವ್ಯವಧಾನ ಇಲ್ಲ, ವಯಸ್ಸಾದವರಿಗೆ ಒಂದು ಬೆಲೆ ಕೊಡುವುದಿಲ್ಲ ಹೀಗೆ ಆದರೆ ಮುಂದೆ ಇದೆ ನಿಮಗೆ, ಆಗ ಗೊತ್ತಾಗುತ್ತೆ ನಾವು ಯಾಕೆ ಹೇಳುತ್ತಾ ಇದ್ವಿ ಅನ್ನೋದು ಅಂತ ಹಿರಿಯರು ಅನ್ನುತ್ತಾರೆ.

ಮಕ್ಕಳು ಅಮ್ಮನ ಎದುರೋ ಅಪ್ಪನ ಎದುರೋ ನಿಂತು ಅಜ್ಜಿ ತಾತ ಎಲ್ಲದಕ್ಕೂ ಮಧ್ಯ ಮೂಗು ತೂರಿಸಿ ಬರ್ತಾರೆ, ಅವರಿಗೆ ಸುಮ್ಮನೆ ಇರಲು ಹೇಳಿ. ನಮಗೂ ಎಲ್ಲ ಗೊತ್ತಾಗುತ್ತೆ ನಾವೇನೂ ದಡ್ಡರಲ್ಲ. ಅವರ ಕಾಲದಂತೆ ಈಗ ನಾವು ಇರಲು ಸಾಧ್ಯವಿಲ್ಲ ಅಂತ ಗೊಣಗುತ್ತಾ ಇರುತ್ತಾರೆ. ಇವರು ಮಾತ್ರ ಯಾರಿಗೂ ಏನೂ ಹೇಳಲಾದ ಸ್ಥಿತಿ. ಹೇಳಿದರೂ ಎರಡೂ ತಲೆಮಾರಿನವರಿಗೆ ಅರ್ಥ ಆಗಲ್ಲ. ಅವರವರ ಮಟ್ಟಿಗೆ ಅವರವರೇ ಸರಿ. ಇದಕ್ಕೆ ಕಾರಣ ಹಿರಿಯರು ಬದುಕುತ್ತಿದ್ದ ಕಾಲಕ್ಕೂ ಈಗಿನ ಮಕ್ಕಳ ಕಾಲಕ್ಕೂ ಇರುವ ವ್ಯತ್ಯಾಸ. ಎರಡನ್ನೂ ಕಂಡ ಮಧ್ಯ ವಯಸ್ಸಿನವರಿಗೆ ಇಬ್ಬರ ಮನೋಭಾವನೆಗಳೂ ಅರ್ಥವಾದರೂ ಯಾರಿಗೂ ಏನೂ ಹೇಳಲಾಗದ ಸಂದಿಗ್ಧತೆ.



ಇಷ್ಟಾದರೂ ಕೊನೆಗೆ ಮನೆಯಲ್ಲಿ ಏನಾದರೂ ಸಣ್ಣ ಪುಟ್ಟ ಜಗಳ ಅದಾಗ ಇದೇ ಅಜ್ಜಿ_ತಾತ, ಮೊಮ್ಮಕ್ಕಳು ಇಬ್ಬರೂ ಸೇರಿ ಅನ್ನೋದು ಮಧ್ಯ ವಯಸ್ಸಿನವರನ್ನೇ.

ಇವೆಲ್ಲ ಹೆಣ್ಣು ಗಂಡು ಎನ್ನುವ ಭೇದವಿಲ್ಲದೇ ಕಾಡುವ ಮಧ್ಯ ವಯಸ್ಸಿನವರ ಸಮಸ್ಯೆಗಳು ಆದರೆ, ಮಧ್ಯ ವಯಸ್ಸಿನ ಗಂಡಸರ ಕಥೆ ಬೇರೆಯೇ ಇರುತ್ತದೆ.

ಇದುವರೆಗೆ ವಯಸ್ಸು ಇತ್ತು ಹೇಗಾದರೂ ದುಡಿದು ಸಂಸಾರ ಸಾಗಿಸುವೆ ಎನ್ನುವ ಹುರುಪು, ಆಶಾಭಾವನೆ ಇರುತ್ತದೆ. ಆದರೆ ಮಧ್ಯ ವಯಸ್ಸಿಗೆ ಬರುವ ವೇಳೆಗೆ ಈ ಮನಸ್ಥಿತಿ ಕುಂದುತ್ತ ಬರುತ್ತದೆ, ಇರುವ ಕೆಲಸದಲ್ಲಿ ತೊಂದರೆ ಆದರೆ ಹೇಗೆ? ಈ ವಯಸ್ಸಿನಲ್ಲಿ ಮತ್ತೆಲ್ಲಿ ಕೆಲಸ ಹುಡುಕುವುದು? ಹುಡುಕಿದರೆ ಸಿಗುವ ಸಾಧ್ಯತೆ ಇದೆಯೇ ಎನ್ನುವ ಯೋಚನೆಯೇ ವ್ಯಕ್ತಿಯನ್ನ ಅರ್ಧ ನಿತ್ರಾಣ ಮಾಡುತ್ತದೆ. ಅಕಸ್ಮಾತ್ ಕೆಲಸದಲ್ಲಿ ತೊಂದರೆ ಆಗಿಯೇ ಬಿಟ್ಟರೆ ಅವರ ಸ್ಥಿತಿ ಯಾರಿಗೂ ಬೇಡ. ಮಕ್ಕಳ ಓದು, ವಯಸ್ಸಾದ ಹಿರಿಯರ ಆರೋಗ್ಯ ಸಮಸ್ಯೆಗಳು, ಮನೆ ಕೊಂಡಿದ್ದರೆ ಅದರ ಸಾಲದ ಕಂತು‌, ಇಲ್ಲವೇ ಮನೆಯ ಬಾಡಿಗೆ ಇದನ್ನೆಲ್ಲ ಕೆಲಸ ಇಲ್ಲದೇ ನಿಭಾಯಿಸುವ ದಾರಿ ಕಾಣದೇ ಎಷ್ಟೋ ಜನ ಆತ್ಮಹತ್ಯೆಯಂಥ ಕೆಲಸಕ್ಕೆ ಕೈ ಹಾಕುತ್ತಾರೆ. ಇನ್ನು ಕೆಲವರಿಗೆ ಇದೇ ಚಿಂತೆಯಲ್ಲಿ ರಕ್ತದ ಒತ್ತಡ, ಸಕ್ಕರೆ ಖಾಯಿಲೆ ಬರಬಹುದು. ಮತ್ತೆ ಕೆಲವರು ಹೃದಯಾಘಾತಕ್ಕೆ ಒಳಗಾಗಿ ಬದುಕಿ ಉಳಿದರೆ, ಮತ್ತೆ ಕೆಲವರು ತಮ್ಮ ಜೀವನದ ಪಯಣವನ್ನೆ ಮುಗಿಸಿಬಿಡುತ್ತಾರೆ. ಎಲ್ಲವೂ ಸರಿಯಿದ್ದರೂ ಬೆಳೆದ ಮಕ್ಕಳ ಓದು, ಮದುವೆ ಹಿರಿಯರ ಆರೈಕೆ ಇದರಲ್ಲಿ ಸೋತು ಸುಣ್ಣವಾಗುವುದು ಸುಳ್ಳಲ್ಲ.

ಇದೆಲ್ಲದರ ಜೊತೆಗೆ ಮನೆಯಲ್ಲಿ ಹೆಂಡತಿ ಇದುವರೆಗೆ ಚಿಗುರೆಯಂತೆ ಓಡಾಡುತ್ತಾ ಮನೆ ಕೆಲಸ, ಮಕ್ಕಳ, ಅತ್ತೆಮಾವಂದಿರ ಎಲ್ಲ ಅವಶ್ಯಕತೆಗಳನ್ನು ಪೂರೈಸುತ್ತಾ ಮನೆಯ ಜವಾಬ್ದಾರಿ ಪೂರ್ಣವಾಗಿ ಹೊತ್ತಿದ್ದವಳು, ಈಗ ಸಮಯಕ್ಕೆ ಸರಿಯಾಗಿ ಯಾವ ಕೆಲಸ ಮಾಡುತ್ತಾ ಇಲ್ಲ, ಚೂರು ಹೆಚ್ಚು ಕಡಿಮೆ ಆದರೆ ಸುಸ್ತು ಸುಸ್ತು ಅನ್ನುತ್ತಾಳೆ. ಮನೆಯಲ್ಲಿ ಐದು ನಿಮಿಷ ಕುಳಿತರೆ ಸಾಕು, ಮನೆಗೆಲಸದಲ್ಲಿ ಸಹಾಯಕ್ಕೆ ಕರೆಯುತ್ತಾಳೆ. ಮನೆಯಿಂದ ಹೊರಗಿನ, ದುಡಿಮೆಯ ವಿಷಯದಲ್ಲಿಯೇ ತಲೆ ಕೆಟ್ಟಿದ್ದ ಮಧ್ಯ ವಯಸ್ಸಿನ ಗಂಡಸಿಗೆ ಇದೆಲ್ಲ ಕೇಳಿದಾಗ ಇನ್ನಷ್ಟು ಗೋಜಲು.

ಮೊದಲು ಇವಳು ಹೀಗೆ ಇರಲಿಲ್ಲ, ಇಗ್ಯಾಕೆ ಹೀಗೆಲ್ಲ ಅಡ್ತಾಳೆ ಅಂತ ಯೋಚಿಸುವ ತಾಳ್ಮೆ ಇರುವುದಿಲ್ಲ. ಹಾಗಾಗಿ ರಕ್ತದೊತ್ತಡ ಜಾಸ್ತಿಯಾಗಿ ರೇಗಾಟ ಕೂಗಾಟ ಮನೆಯಲ್ಲಿ ಶಾಂತಿ ಮಾಯವಾಗಿ ಅಶಾಂತಿ ತಲೆದೋರುವುದು ಖಂಡಿತಾ.

ಫೋಟೋ ಕೃಪೆ : medimall

ಅದೇ ಹೆಂಗಸರು ಆದರೆ ತೆಳ್ಳಗೆ ಇದ್ದವಳು, ಮನೆಯನ್ನೆಲ್ಲ ಸಂಭಾಳಿಸುತ್ತ ನಗು ನಗುತ್ತಾ ಬರುವ ಹೋಗುವ ಎಲ್ಲರನ್ನೂ ನೋಡಿಕೊಳ್ಳುತ್ತಾ ಮನೆಯ ಜೀವವಾಗಿದ್ದವಳು ಇದ್ದಕ್ಕಿದ್ದ ಹಾಗೆ ದಪ್ಪವಾಗುತ್ತಿದ್ದಾಳೆ, ವಾಕಿಂಗ್, ವ್ಯಾಯಾಮ ಯಾವುದೂ ಮಾಡುವುದಕ್ಕೆ ಆಗುತ್ತಾ ಇಲ್ಲ, ಮನೆಯ ಕೆಲಸ ಮಾಡುವುದರಲ್ಲೇ ಸುಸ್ತಾಗಿ ಹೋಗುತ್ತದೆ. ಈ ಅತ್ತೆ ಮಾವ ಮೊನ್ನೆ ಮೊನ್ನೆ ತನಕ ಅವರ ಕೆಲಸ ಅವರೇ ಮಾಡಿಕೊಳ್ಳುತ್ತ ಇದ್ದವರು ಇತ್ತೀಚೆಗೆ ಸಣ್ಣ ಪುಟ್ಟ ಕೆಲಸವನ್ನು ನನ್ನನ್ನೇ ಕರೀತಾರೆ. ಕುಳಿತರೆ ಸೊಂಟ ನೋವು, ಎದ್ದರೆ ಮಂಡಿ ನೋವು, ತಿಂಗಳ ಅ ಮೂರು ದಿನಗಳ ಹಿಂಸೆ ತಡೆಯಲು ಆಗುವುದಿಲ್ಲ. ಇದೆಲ್ಲ ಯಾರಿಗೆ ಹೇಳಿದರೂ ಅರ್ಥ ಮಾಡಿಕೊಳ್ಳುವುದೇ ಇಲ್ಲ. ಮಕ್ಕಳೂ ತಾವಾಯಿತು ತಮ್ಮ ಕಾಲೇಜು, ಆಫೀಸು ಕೆಲಸ ಆಯಿತು ಹೇಗಿದ್ದೀಯ ಅಂತ ಕೇಳುವುದಿಲ್ಲ . ಈ ಗಂಡ ಅನ್ನೋ ಪ್ರಾಣಿ ಆದ್ರೂ ನನ್ನ ಅರ್ಥ ಮಾಡಿಕೊಳ್ಳಬಾರದಾ ಎನ್ನಿಸುವುದು ಸಹಜ.

ಆದ್ರೆ ಒಮ್ಮೆ ಯೋಚಿಸಿ ಅತ್ತೆ ಮಾವ ಮೊನ್ನೆ ಮೊನ್ನೆ ವರೆಗೆ ಗಟ್ಟಿಯಾಗಿದ್ದರು, ಮೈಯಲ್ಲಿ ಶಕ್ತಿ ಇತ್ತು ಅವರ ಕೆಲಸ ಅವರೇ ಮಾಡಿಕೊಳ್ಳುತ್ತ ಇದ್ದರು. ಈಗ ನಿಶಕ್ತರಾಗಿದ್ದಾರೆ, ಕೆಲಸ ಮಾಡಲು ಆಗ್ತಾ ಇಲ್ಲ. ಇನ್ನು ಮಕ್ಕಳು ನಾವೇ ಕಲಿಸಿದ್ದು, ನೀನು ಓದೋ ಹುಡುಗ/ಹುಡುಗಿ ನಿಮ್ಮ ಓದು ಬರಹದಲ್ಲಿ ಗಮನ ಹರಿಸಿ, ಮೇಲೆ ಬನ್ನಿ, ಏನಾದರೂ ಸಾಧಿಸಿ. ಮನೆ ಕೆಲಸ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದವರು ನಾವೇ. ಈಗ ಅವರಿಗೆ ಅರ್ಥ ಮಾಡಿಸಿ ಹೇಳಬೇಕು,ನೀವು ಬೆಳೆದಂತೆ ನಮಗೂ ವಯಸ್ಸು ಆಗ್ತಾ ಇದೆ. ಹಾರ್ಮೋನ್ ಗಳ ವ್ಯತ್ಯಾಸ ನಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಹಿಂದಿನ ಹಾಗೆ ಮನೆಯೆಲ್ಲ ನಿಭಾಯಿಸುವ ಶಕ್ತಿ ಕುಂದುತ್ತ ಇದೆ ಎನ್ನುವುದನ್ನು. ಸಾಧವಿದ್ದಾಗ ಮನೆಗೆಲಸದಲ್ಲಿ ಸಹಾಯ ಮಾಡಿಕೊಡಲು ತಿಳಿಸಬೇಕು.

ಇವೆಲ್ಲ ಸಮಸ್ಯೆಗಳೂ ಪ್ರತಿ ಮನೆಯಲ್ಲೂ ಪ್ರತಿಯೊಬ್ಬರ ಜೀವನದಲ್ಲೂ ಪ್ರತಿ ದಿನವೂ ಘಟಿಸುವುದೆ ಆಗಿದೆ. ಆಗೆಲ್ಲ ಮಾಡಬೇಕಾಗಿರುವುದು ಮನೆಯ ಎಲ್ಲ ಸದಸ್ಯರೂ ಒಟ್ಟಿಗೆ ಕುಳಿತು #ಶಾಂತ_ಮನಸ್ಥಿತಿಯಿಂದ ಮಾತನಾಡಿ ಒಬ್ಬರಿಗೊಬ್ಬರು ಅಸರೆ, ಸಾಂತ್ವನ ನೀಡುವುದು ಒಂದೇ ಪರಿಹಾರ.

  • ವಸಂತ ಗಣೇಶ್ (ಸಾಹಿತಿಗಳು, ಲೇಖಕರು,ಚಿಂತಕರು)

5 1 vote
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW