ಮಲೆನಾಡೋ ಅಥವಾ ಕಸದ ಕಾಡೋ ತಿಳಿಯುತ್ತಿಲ್ಲ, ಆ ಕಸದ ಕಾಡಿನಲ್ಲಿ ಮೆಂದ ಗೋಮಾತೆಯೊಂದರ ಹೊಟ್ಟೆಯಲ್ಲಿ ಸಿಕ್ಕಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ನೋಡಿದರೆ ಎಂಥವರಿಗೂ ಹೃದಯವು ಬತ್ತಿಹೋಗುತ್ತದೆ.ಅದಕ್ಕೆ ಡಾ.ಯುವರಾಜ್ ಹೆಗಡೆ ಮೇಗರವಳ್ಳಿ ಅವರು ಚಿಕಿತ್ಸೆ ನೀಡಿದ್ದಾರೆ.ಪ್ಲಾಸ್ಟಿಕ್ ಎಸೆಯುವ ಮುನ್ನ ರಾಘವೇಂದ್ರ ಅವರ ಲೇಖನವನೊಮ್ಮೆ ಓದಿ…
ಹೌದು ಇದು ತೀರ್ಥಹಳ್ಳಿ ಸುತ್ತಮುತ್ತಲು ಬದುಕುಳಿದಿರುವ ಜಾನುವಾರುಗಳ ಚಿಂತಾಜನಕ ಪರಿಸ್ಥಿತಿ. ಹೆಸರಿಗೆ ಮಾತ್ರ ಮಲೆನಾಡು ಎಂಬ ಹಣೆಪಟ್ಟಿಯೊಂದಿಗೆ ಬದುಕುತ್ತಿರುವ ನಾವು ನಗರ ಜೀವನ
ಶೈಲಿಗೆ ಮಾರು ಹೋಗಿರುವುದಂತೂ ಸತ್ಯ. ಪರಿಸರದ ಬಗ್ಗೆ ಕಾಳಜಿ, ಬಾಂಧವ್ಯತೆ, ಜವಾಬ್ದಾರಿ ಎಲ್ಲವನ್ನು ಕಳೆದುಕೊಂಡು ಸದ್ಯಕ್ಕೆ ವಿನಾಶದ ಅಂಚಿನಲ್ಲಿದ್ದೇವೆ ಅನಿಸುತ್ತಿದೆ.
ನೋಡಿ ಈ ದನವು ಮೇ 11 ರಂದು ಪಟ್ಟಣದ ಕೊಪ್ಪ ಸರ್ಕಲ್ ಹತ್ತಿರ ಯಾರೋ ಬೆದರಿಸಿದ ಕಾರಣಕ್ಕೆ ಭಯದಿಂದ ಓಡಿ ಚರಂಡಿಗೆ ಮುಚ್ಚಿದ್ದ ಸ್ಲಾಬ್ ನಲ್ಲಿರುವ ರಂದ್ರದಲ್ಲಿ ಕಾಲು ಸಿಕ್ಕಿಹಾಕಿಕೊಂಡು ಗಾಯ ಮಾಡಿಕೊಂಡಿತ್ತು.

ಅನಾರೋಗ್ಯಕ್ಕೆ ತುತ್ತಾದ ಗೋವು
ಮಾರನೆಯ ದಿನ ಇದು ನಲ್ಲಿಸರ ಮೆಡಿಕಲ್ ಎದುರಿಗೆ ಇರುವುದನ್ನು ಗಮನಿಸಿದ ನಾವು ಗಾಯಗೊಂಡ ಕಾಲಿಗೆ ಚಿಕಿತ್ಸೆಯನ್ನು ನೀಡಿದ್ದೆವು. ನಂತರ ಎರಡು ಮೂರು ದಿನಗಳು ಅದೇ ಜಾಗದಲ್ಲೇ ಮಲಗಿತ್ತು. ಹಾಗಾಗಿ ಅದಕ್ಕೆ ಬೇಕಾದ ಆಹಾರವನ್ನು ಸಹ ಸ್ವಲ್ಪಮಟ್ಟಿಗೆ ವ್ಯವಸ್ಥೆ ಮಾಡಲಾಗಿತ್ತು ಆದರೆ ಈ ದನ ಯಾರದು ಎಂಬುದು ಮಾತ್ರ ತಿಳಿದಿರಲಿಲ್ಲ.
ನಾಲ್ಕನೇ ದಿನ ಈ ದನ ಅಲ್ಲಿ ಕಾಣುತ್ತಿರಲಿಲ್ಲ ನಾವೆಲ್ಲ ಕಾಲು ಸರಿಯಾಗಿ ಮನೆಗೆ ಹೋಗಿರಬೇಕೆಂದು ಅಂದುಕೊಂಡಿದ್ದೆವು. ಆದರೆ ಹದಿನೈದು ದಿನಗಳ ನಂತರ ರಥಬೀದಿಯ ಎಸ್ಬಿ ಕೋಲ್ಡ್ ಕಾಫೆ ಎದುರಿಗೆ ನಿತ್ರಾಣವಾಗಿ ಕೂತಿತ್ತು. ಅಲ್ಲಿರುವ ಸ್ಥಳೀಯರು ಇದು ಕುಂಟುತ್ತಾ ನಡೆಯುವುದನ್ನು ಗಮನಿಸಿ ನಮಗೆ ಫೋನ್ ಮಾಡಿದರು. ಡಾಕ್ಟರ್ ಯುವರಾಜ ಹೆಗಡೆ ಯವರ ಸಲಹೆಯಂತೆ ಆ ದನದ ಕಾಲಿಗೆ ಉತ್ತಮ ದರ್ಜೆಯ ಬ್ಯಾಂಡೇಜ್ ಹಾಕುವ ಬಗ್ಗೆ ತೀರ್ಮಾನಿಸಿದ್ದೆವು. ಆದರೆ ಬ್ಯಾಂಡೇಜ್ ಒಂದು ತಿಂಗಳವರೆಗೆ ಹಾಗೆ ಇರಬೇಕು ಅಲ್ಲಿಯವರೆಗೆ ದನದ ಆರೈಕೆ ಮಾಡುವುದು ಎಲ್ಲಿ ಹೇಗೆ ಎನ್ನುವ ಚಿಂತೆ ಶುರುವಾಯಿತು.(ಇಂತಹ ಪರಿಸ್ಥಿತಿ ಬಹಳಷ್ಟು ಸಾರಿ ಎದುರಿಸಿರುವುದರಿಂದಲೇ ತೀರ್ಥಹಳ್ಳಿಯಲ್ಲೊಂದು ಗೋಶಾಲೆ ಕಡ್ಡಾಯವಾಗಿ ಬೇಕೇ ಬೇಕು ಎಂದು ನಾವೆಲ್ಲ ಅಪೇಕ್ಷಿಸುತ್ತಿರುವುದು.)
ಅಷ್ಟರಲ್ಲೇ ಅ ದನವು ರಥಬೀದಿಯಲ್ಲಿರುವ ಸೋದೆ ಮಠದ 30 ರಿಂದ 35 ಹಸುಗಳನ್ನು ಸಲಹುತ್ತಿರುವ ಪ್ರಮೀಳಾ ಅಜ್ಜಿಯವರದೆಂದು ತಿಳಿಯಲಾಯಿತು. ಆದರೆ ಏನು ಮಾಡುವುದು ಆ ಮಠದಲ್ಲಿ ಕೊಟ್ಟಿಗೆಯು ನಿರ್ವಹಣೆ ಇಲ್ಲದೆ ತುಂಬಾ ಶೋಚನೀಯ ಸ್ಥಿತಿಯಲ್ಲಿದೆ ಹಾಗಾಗಿ ಅಲ್ಲಿರುವ ಜಾನುವಾರುಗಳು ಹೆಚ್ಚಾಗಿ ರಸ್ತೆಯ ಮೇಲೆ ಇರುತ್ತದೆ. ಹಲವಾರು ಬಾರಿ ಇವರ ಮನೆಯ ದನಗಳು ರಸ್ತೆಯಲ್ಲೇ ಕರು ಹಾಕಿರುವುದನ್ನು ನಾವು ತಂದು ತಲುಪಿಸಿದ್ದೇವೆ. ಗೂಳಿಗಳು ಗಾಯಮಾಡಿಕೊಂಡಗ ಚಿಕಿತ್ಸೆ ನೀಡಿದ್ದೇವೆ ಇನ್ನು ಕೆಲವು ಜಾನುವಾರುಗಳು ಹಾವು ಕಚ್ಚಿ ಅಥವಾ ರಸ್ತೆ ಅಪಘಾತದಲ್ಲಿ ಅಸುನೀಗಿದ್ದಾವೆ. ಇಲ್ಲಿಯ ವ್ಯವಸ್ಥೆಯ ಬಗ್ಗೆ ಬರೆಯಲು ಸಾಕಷ್ಟಿವೆ ಮುಂದೆ ನೋಡೋಣ.

ಇಂತಹ ಪರಿಸ್ಥಿತಿಯಲ್ಲಿ ಕಾಲಿಗೆ ಪೆಟ್ಟಾದ ಆ ದನವನ್ನು ಇದೇ ರಥಬೀದಿಯಲ್ಲಿರುವ ರಾಮಚಂದ್ರಪುರ ಮಠದ ಆವರಣದಲ್ಲಿ ಎಲ್ಲಾದರೂ ಚಿಕಿತ್ಸೆಗೆಂದು ಚಿಕ್ಕ ಸ್ಥಳವನ್ನು ನೀಡುವ ಬಗ್ಗೆ ಮಠದ ಅಧ್ಯಕ್ಷರನ್ನು ಸಂಪರ್ಕಿಸಿ ವಿನಂತಿಸಿ ಕೊಂಡಾಗ ಸ್ವಲ್ಪವೂ ಅನುಮಾನಿಸದೆ ಧಾರಾಳವಾಗಿ ಮಠದ ಕೊಟ್ಟಿಗೆಯನ್ನೇ ಉಪಯೋಗಿಸಿಕೊಳ್ಳಿ ಎಂದರು. ಆದರೆ ನೋಡಿಕೊಳ್ಳುವುದಕ್ಕೆ ಮಾತ್ರ ನಮ್ಮಲ್ಲಿ ಯಾರೂ ಜನ ಇರುವುದಿಲ್ಲ ನೀವೇ ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.ಸರಿಯೆಂದು ಚಿಕಿತ್ಸೆ ಪ್ರಾರಂಭಿಸಿದೆವು.
(ಅವರ ಈ ಮಾನವೀಯತೆಗೆ ತುಂಬು ಹೃದಯದ ಧನ್ಯವಾದಗಳನ್ನು ಈ ಸಂದರ್ಭದಲ್ಲಿ ಹೇಳಲೇಬೇಕು.)
ಹೀಗೆ ದನದ ಕಾಲಿಗೆ ಉತ್ತಮ ದರ್ಜೆಯ ಬ್ಯಾಂಡೇಜನ್ನು ಹಾಕಿಸಿ ಅದರ ಆರೈಕೆಯನ್ನು ಸುಮಾರು ಹದಿನೈದು ದಿನಗಳವರೆಗೆ ಮಾಡಿದೆವು.
ಆದರೆ ಯುವರಾಜ್ ಹೆಗಡೆ ಮೇಗರವಳ್ಳಿಯವರು ಮೊದಲೇ ಊಹಿಸಿದಂತೆ ಈ ದನದ ಹೊಟ್ಟೆಯಲ್ಲಿರುವ ಕೆಜಿಗಟ್ಟಲೆ ಪ್ಲಾಸ್ಟಿಕ್ ದನದ ಜೀರ್ಣಾಂಗ ಕ್ರಿಯೆಯನ್ನು ಹೈರಾಣಾಗಿಸಿ ಬಿಟ್ಟಿತ್ತು, ತನ್ನ ಅಂಗಾಂಗಗಳ ಸ್ವಾಧೀನ ಕಳೆದುಕೊಳ್ಳುವ ಹಂತಕ್ಕೆ ತಲುಪಿತ್ತು, ಆದರೂ ಸಹ ಇದನ್ನು ನೋಡಿಕೊಳ್ಳುತ್ತಿದ್ದ ಮಾತೃ ಹೃದಯದ ಕೆಲವು ಗೋಪ್ರೇಮಿಗಳ ಪ್ರೀತಿ ಇದನ್ನು ಸ್ವಲ್ಪ ದಿನದ ಮಟ್ಟಿಗೆ ಚೇತರಿಸಿಕೊಳ್ಳುವಲ್ಲಿ ಸಫಲವಾಗಿತ್ತು. ಆದರೆ ಏನು ಮಾಡುವುದು ಹೊಟ್ಟೆಯಲ್ಲಿರುವ ಪ್ಲಾಸ್ಟಿಕ್ ಎಂಬ ಮಹಾಮಾರಿ ಕೊನೆಗೂ ಆ ಜೀವವನ್ನು ದಿನಾಂಕ 11 ಜೂನ್2022 ರಂದು ಬಲಿ ತೆಗೆದುಕೊಂಡೇಬಿಟ್ಟಿತು.

ಗೋಮಾತೆ ಆಶೀರ್ವದಿಸು ಎಂದು ಪೂಜಿಸುತ್ತಿದ್ದ ನಾವುಗಳು, ಇಂದು ನಾವೇ ಎಸೆದ ತಿಂಡಿ ಪದಾರ್ಥಗಳ ಪ್ಲಾಸ್ಟಿಕ್ ತ್ಯಾಜ್ಯವನ್ನು ತಿಂದು ನರಳಿ ನರಳಿ ಸಾಯುವುದನ್ನು ನೋಡಬೇಕಾಗಿದೆ.
ಈ ರೀತಿಯ ಘಟನೆಗಳು ನಮಗೇನು ಹೊಸದಲ್ಲ ಈ ಹಿಂದೆಯೂ ಬಹಳಷ್ಟು ಬಾರಿ ಘಟಿಸಿದೆ. ನಾವು ಸಹ ಇಂತಹ ಘಟನೆಗಳಿಗೆ ಮೂಖ ಸಾಕ್ಷಿಯಾಗಿದ್ದೇವೆ. ಆದರೆ ಇಂತಹ ದುರ್ಘಟನೆಯ ಜವಾಬ್ದಾರಿ ಎಲ್ಲರದ್ದೂ ಆಗಿರುತ್ತದೆ, ಹಾಗಾಗಿ ಇಲ್ಲಿ ದನದ ಹೊಟ್ಟೆಯಲ್ಲಿ ಶೇಖರಣೆಯಾಗಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಶವಪರೀಕ್ಷೆಯ ಸಂದರ್ಭದಲ್ಲಿ ಹೊರತೆಗೆಯುತ್ತಿರುವ ದೃಶ್ಯವನ್ನು ಹಂಚಿಕೊಳ್ಳುತ್ತಿದ್ದೇವೆ. ಪ್ರತಿಯೊಬ್ಬರೂ ಗಮನವಿಟ್ಟು ನೋಡಿ ಮನುಷ್ಯನು ಮಾಡುತ್ತಿರುವ ಹೇಯ ಕೃತ್ಯಗಳಿಂದ ಬಲಿಯಾಗುತ್ತಿರುವ ನಮ್ಮ ಪರಿಸರ ಹಾಗೂ ಪರಿಸರದಲ್ಲಿ ವಾಸವಾಗಿರುವ ಮೂಕಪ್ರಾಣಿಗಳ ಪರಿಸ್ಥಿತಿಯನ್ನು.
ನಿಮಗೆ ಕೇವಲ ದೃಶ್ಯಮಾಧ್ಯಮದಲ್ಲಿ ನೋಡುವುದಕ್ಕೆ ಇಷ್ಟು ನೋವು ಆಗುತ್ತಿರುವುದಾದರೆ ಇನ್ನು ಪ್ರತ್ಯಕ್ಷವಾಗಿ ಇಂತಹ ಘಟನೆಗಳನ್ನು ನೋಡುತ್ತಿರುವ ನಮಗೆಲ್ಲಾ ಹೇಗೆ ಆಗಿರಬಹುದು.
ಇಷ್ಟೆಲ್ಲಾ ಅನಾಹುತಗಳನ್ನು ನೋಡಿದ ಮೇಲಾದರೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಸದ ಲಾರಿ ಬರುವವರೆಗೆ ಕಾದು ಸೂಕ್ತವಾದ ಕಸ ವಿಲೇವಾರಿಗೆ ಅನುಕೂಲ ಮಾಡಿಕೊಡಬಹುದಾ…?
ಖಾಲಿ ಜಾಗದಲ್ಲಿ ಚರಂಡಿಗಳಲ್ಲಿ ನಿರ್ಜನ ಪ್ರದೇಶಗಳಲ್ಲಿ ಕಸವನ್ನು ಗಂಟುಕಟ್ಟಿ ಎಸೆಯುವುದನ್ನು ನಿಲ್ಲಿಸಬಹುದಾ…?

(ಚಿಕಿತ್ಸೆಯಲ್ಲಿ ತೊಡಗಿರುವ ಡಾ.ಯುವರಾಜ್ ಹೆಗಡೆ ಮೇಗರವಳ್ಳಿ ಮತ್ತು ಅವರ ತಂಡ)
ನಿಮ್ಮ ಸುತ್ತಮುತ್ತಲ ಪರಿಸರದಲ್ಲಿ ಯಾರಾದರೂ ಕಸ ಎಸೆಯುತ್ತಿದ್ದರೆ ಅದನ್ನು ತಡೆಯಬಹುದಾ..?
ಸಾಧ್ಯವಾದಷ್ಟು ಈ ವಿಷಯವನ್ನು ಎಲ್ಲರಿಗೂ ತಿಳಿಸಿ, ಹಂಚಿಕೊಳ್ಳಿ ಎಂದು ಕಳಕಳಿಯಿಂದ ಪ್ರಾರ್ಥಿಸುತ್ತೇವೆ. ಯಾಕೆಂದರೆ ತೀರ್ಥಹಳ್ಳಿಯಲ್ಲಿ ಇದೇ ರೀತಿ ಪ್ಲಾಸ್ಟಿಕ್ ತ್ಯಾಜ್ಯವನ್ನು ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡು ಬಳಲುತ್ತಿರುವ ನೂರಾರು ದನಗಳಿವೆ ಇದಕ್ಕೆಲ್ಲಾ ನೇರ ಹೊಣೆ ನಮ್ಮೆಲ್ಲರ ಬೇಜವಾಬ್ದಾರಿಯೇ ಆಗಿರುತ್ತದೆ.
ಹಾದಿ ಬೀದಿಯಲ್ಲಿ ಕಸದ ಹುಲ್ಲನು ಮೈದು
ಬಂದು ಮನೆಗೆ ನಾನು ಅಮೃತವನೀವೆ
ಅದನುಂಡು ನನಗೆರಡು ಬಗೆವ ಮಾನವ ನೀನು
ನೀನಾರಿಗಾದೆಯೋ ಎಲೆ ಮಾನವಾ…?
ಎಂಬ ಎಸ್. ಜಿ. ನರಸಿಂಹಾಚಾರ್ ರ ಸಾಲುಗಳು ಈ ಸಂದರ್ಭದಲ್ಲಿ ಅರ್ಥಪೂರ್ಣ ವೆನಿಸುತ್ತದೆ..
- ರಾಘವೇಂದ್ರ ಸಿ (ಗೋಸಿರಿ ಪಂಚಗವ್ಯ ಹಾಗೂ ಸಾವಯವ ಉತ್ಪನ್ನ ಅಂಗಡಿ ಮಾಲೀಕರು, ಗೋಸಿರಿ ಸೇವಾ ಟ್ರಸ್ಟ್ ತಂಡದ ಆಯೋಜಕರು, ಮುಂದಿನ ದಿನಗಳಲ್ಲಿ ಗೋ ಸಂಪತ್ತನ್ನು ಈ ಟ್ರಸ್ಟ್ ಮೂಲಕ ಒಂದು ಮಾದರಿ ಗೋಶಾಲೆಯನ್ನು ನಿರ್ಮಿಸುವ ಮಹತ್ವಕಾಂಕ್ಷೆಯನ್ನು ಹೊಂದಿರುವ ಯುವ ಸಮಾಜಕಾರ್ಯಕರ್ತರು) ತೀರ್ಥಹಳ್ಳಿ.
