ಪ್ರಾದೇಶಿಕ ಭಾಷೆಯಲ್ಲಿ ಸಿಆರ್‌ಪಿಎಫ್ ಪರೀಕ್ಷೆ ನಡೆಸದಿರುವುದಕ್ಕೆ ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ವಿವಾದ ತೀವ್ರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಗೃಹಸಚಿವಾಲಯವು ಕನ್ನಡ ಸೇರಿ ೧೩ ಪ್ರಾದೇಶಿಕ ಭಾಷೆಗಳಲ್ಲಿ ಸಿಆರ್‌ಪಿಎಫ್ ಪರೀಕ್ಷೆಗೆ ಅನುವು ಮಾಡಿಕೊಟ್ಟಿದೆ.
ಸಿಆರ್‌ಪಿಎಫ್ ನೇಮಕಾತಿ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನಡೆಸಲು ತಮಿಳುನಾಡು, ತೆಲಂಗಾಣ ಮತ್ತು ಕರ್ನಾಟಕದ ನಾಯಕರು ಆಕ್ಷೇಪಿಸಿದ ಬಳಿಕ ಗೃಹ ಸಚಿವಾಲಯವು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಕಾನ್‌ಸ್ಟೆಬಲ್ (ಸಾಮಾನ್ಯ ಕರ್ತವ್ಯ) ಪರೀಕ್ಷೆಯನ್ನು ೧೩ ಪ್ರಾದೇಶಿಕ ಭಾಷೆಯಲ್ಲಿ ಬರೆಯಲು ಒಪ್ಪಿಗೆ ನೀಡಿದೆ.
ಸಿಆರ್‌ಪಿಎಫ್‌ನಲ್ಲಿ ಸ್ಥಳೀಯ ಯುವಕರ ಭಾಗವಹಿಸುವಿಕೆಗೆ ಉತ್ತೇಜನ ನೀಡಲು ಮತ್ತು ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಲು ಕೇಂದ್ರ ಗೃಹ ಸಚಿವಾಲಯ ಐತಿಹಾಸಕ ನಿರ್ಣಯ ಕೈಗೊಂಡಿದೆ. ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ಮಲಯಾಳಂ, ಕನ್ನಡ, ತಮಿಳು, ತೆಲುಗು, ಒಡಿಯಾ, ಉರ್ದು, ಪಂಜಾಬಿ, ಮಣಿಪುರಿ ಮತ್ತು ಕೊಂಕಣಿ ಭಾಷೆಯಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಈ ನಿರ್ಧಾರವು ಲಕ್ಷಗಟ್ಟಲೆ ಆಕಾಂಕ್ಷಿಗಳಿಗೆ ಉಪಯೋಗವಾಗಲಿದೆ. ಪರೀಕ್ಷೆಯನ್ನು ಜನವರಿ ೧, ೨೦೨೪ ರಿಂದ ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ೧೩ ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುತ್ತದೆ.
ರಾಜ್ಯ ಸರ್ಕಾರಗಳು ಸ್ಥಳೀಯ ಯುವಕರು ತಮ್ಮ ಮಾತೃಭಾಷೆಯಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಈ ಅವಕಾಶವನ್ನು ಬಳಸಿಕೊಳ್ಳಲು ಮತ್ತು ದೇಶಕ್ಕೆ ಸೇವೆ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವ ವ್ಯಾಪಕ ಪ್ರಚಾರವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಪ್ರಾದೇಶಿಕ ಭಾಷೆಗಳ ಬಳಕೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಸಹಕಾರಿಯಾಗಲಿದೆ.
- ಆಕೃತಿ ನ್ಯೂಸ್