ನಂದಿನಿ ಮತ್ತು ಅಮುಲ್

ನಂದಿನಿಗೆ ಹೋಲಿಸಿದರೆ ಅಮುಲ್ ಭಾರಿ ದೊಡ್ಡ ಬ್ರಾಂಡ್. ೭೬ ವರ್ಷಗಳ ಹಿಂದೆ ಗುಜರಾತಿನ ಕೈರಾನಲ್ಲಿ ೧೯-೧೨-೧೯೪೬ ರಂದು ಸಣ್ಣ ಸಂಘವಾಗಿ ಸ್ಥಾಪನೆಯಾಯಿತು. ಇದರ ಉತ್ಪನ್ನಗಳು ತಯಾರಾಗಿದ್ದು ಗುಜರಾತಿನ ಅನಂದ್ ನಲ್ಲಿ, ಪಶುವೈದ್ಯರಾದ ಡಾ.ಎನ್.ಬಿ.ಶ್ರೀಧರ ಅವರ ಲೇಖನಿಯಲ್ಲಿ ಒಂದು ಸುದೀರ್ಘ ಚಿಂತನ ಲೇಖನ ತಪ್ಪದೆ ಮುಂದೆ ಓದಿ…

ಇಂದು ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಕರ್ನಾಟಕ ಹಾಲು ಮಹಾಮಂಡಳಿ (ಕಹಾಮ) ಇದರ ನಂದಿನಿ ಮತ್ತು ಗುಜರಾತಿನ ಹಾಲು ಉತ್ಪಾದನಾ ಸಂಸ್ಥೆ ಅಮುಲ್ ಇದರ ಬಗ್ಗೆ ಚರ್ಚೆಯಾಗುತ್ತಿದೆ.

ಕರ್ನಾಟಕ ರಾಜ್ಯದ ಹೈನುಗಾರರಿಂದ ಯಶಸ್ವಿಯಾಗಿ ನಿರ್ವಹಣೆಯಾಗುತ್ತಿರುವ ಕರ್ನಾಟಕ ಹಾಲು ಮಹಾಮಂಡಳಿ (ಕಹಾಮ) ಇಡೀ ದಕ್ಷಿಣ ಭಾರತದಲ್ಲಿನ ಸಹಕಾರಿ ಹಾಲು ಮಹಾಮಂಡಳಿಗಳಲ್ಲಿ ಅಗ್ರಸ್ಥಾನದಲ್ಲಿರುತ್ತದೆ. ರಾಜ್ಯದ 16 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳಡಿಯಲ್ಲಿ, ಗ್ರಾಮೀಣ ಮಟ್ಟದಲ್ಲಿ ಕಾರ್ಯಾಚರಣೆಯಲ್ಲಿರುವ 15, 043 ಕ್ಕೂ ಹೆಚ್ಚಿನ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯು 26.38 ಲಕ್ಷ ಹಾಲು ಉತ್ಪಾದಕರನ್ನು ಹೊಂದಿದೆ.

ಹೈನು ಅಭಿವೃದ್ಧಿಯ ಮುಖೇನ ಗ್ರಾಮೀಣ ಪ್ರದೇಶಗಳ ಶ್ರೇಯೋಭಿವೃದ್ಧಿಯೇ ಮಹಾಮಂಡಳಿಯ ಧ್ಯೇಯೋದ್ದೇಶವಾಗಿದೆ. ಕಹಾಮವು ಹಾಲು (ಶೇಖರಣೆ – ಸಂಸ್ಕರಣೆ – ಮಾರುಕಟ್ಟೆ) ಮೂಲಕ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಲು ‘ಗೋವಿನಿಂದ ಗ್ರಾಹಕರವರೆಗೆ ಗುಣಮಟ್ಟದ ಶ್ರೇಷ್ಠತೆ’ ಎಂಬ ಧ್ಯೇಯವಾಕ್ಯ ಹೊಂದಿ ನಿರಂತರವಾಗಿ ಈ ನಿಟ್ಟಿನಲ್ಲಿ ಪರಿಶ್ರಮಿಸುತ್ತದೆ. ಸರಿಸಾಟಿಯಿಲ್ಲದ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ‘ನಂದಿನಿ’ ಬ್ರಾಂಡ್ ಹೆಸರಿನಲ್ಲಿ ಅತ್ಯಂತ ಸ್ಪರ್ಧಾತ್ಮಕ ಬೆಲೆಗಳಲ್ಲಿ ಗ್ರಾಹಕರಿಗೆ ಒದಗಿಸಿ ‘ಸಮೃದ್ಧ ಆರೋಗ್ಯವನ್ನು ಹರಡುತ್ತಿದೆ’ ಎಂದು ಅದರ ಜಾಲತಾಣದಲ್ಲಿ ಹೇಳಿಕೊಂಡಿದೆ.

ರಾಜ್ಯದ ರೈತರ ಉಪ ಕಸುಬಾಗಿದ್ದ ಹೈನುಗಾರಿಕೆಯನ್ನು ಇಂದು ಒಂದು ಪ್ರಮುಖ ಉದ್ಯಮವಾಗಿ ಪರಿವರ್ತನೆ ಮಾಡಿಕೊಂಡಿರುವ ಕೆ ಎಂ ಎಫ್ ದೇಶದಲ್ಲಿಯೇ ಕೆಲವು ಸಂಘ ಸಂಸ್ಥೆಗಳಲ್ಲಿ ಒಂದಾಗಿದೆ. ಆಯಾ ಸದಸ್ಯ ಹಾಲು ಒಕ್ಕೂಟಗಳು ತಮ್ಮ ವ್ಯಾಪ್ತಿ ಕಾರ್ಯಕ್ಷೇತ್ರದಲ್ಲಿ ಹಾಲಿನ ಮಾರಾಟವನ್ನು ವ್ಯವಸ್ಥೆಗೊಳಿಸುತ್ತವೆ. ಮಹಾಮಂಡಳಿಯು ಈ ಹಾಲು ಒಕ್ಕೂಟಗಳಲ್ಲಿನ ಹಾಲಿನ ಹೆಚ್ಚುವರಿ ಅಥವಾ ಕೊರತೆಯನ್ನು ಆಧರಿಸಿ ಹಾಲಿನ ವಿಲೇವಾರಿಗೆ ಸಮರ್ಪಕ ಮಾರ್ಗೋಪಾಯಗಳನ್ನು ಒಕ್ಕೂಟಗಳ ಸಮನ್ವಯದೊಂದಿಗೆ ರೂಪಿಸುತ್ತದೆ. ಕರ್ನಾಟಕ ರಾಜ್ಯವಲ್ಲದೆ ಹೊರರಾಜ್ಯಗಳಿಗೆ ಹಾಲು ಉತ್ಪನ್ನಗಳ ಮಾರಾಟವನ್ನು ಸ್ವತ: ಮಹಾಮಂಡಳಿಯೇ ವ್ಯವಸ್ಥೆ ಮಾಡುತ್ತದೆ. ಎಲ್ಲಾ ಹಾಲು ಮತ್ತು ಹಾಲಿನ ಉತ್ಪನ್ನಗಳು ಪ್ರತಿಷ್ಟಿತ ‘ನಂದಿನಿ’ ಬ್ರಾಡ್ ಹೆಸರಿನಲ್ಲಿ ಮಾರಾಟಗೊಳ್ಳುತ್ತಿವೆ.

ಒಂದಿಷ್ಟು ಅಂಕಿಅಂಶಗಳನ್ನು ಗಮನಿಸುವುದಾದರೆ ಇದರಲ್ಲಿ ೨೦೨೧-೨೨ ನೇ ಸಾಲಿನ ಅಂತ್ಯದಲ್ಲಿ ಗ್ರಾಮೀಣ ಭಾಗದಲ್ಲಿ ಕಾರ್ಯಾಚರಣೆಯಲ್ಲಿರುವ ನೋಂದಾಯಿತ ಸಂಘಗಳು ೧೫೦೦೫,ಇವುಗಳಲ್ಲಿ ಮಹಿಳೆಯರಿಂದಲೇ ನಡೆಯುವ ಮಹಿಳಾ ಸಂಘಗಳು, ೪೧೪೩, ಮತ್ತು ಇದರಲ್ಲಿ ೨೫.೯ ಲಕ್ಷ ಹಾಲು ಉತ್ಪಾದಕರು ಇರುತ್ತಾರೆ. ಪ್ರತಿ ದಿನ ವಿವಿಧ ಸಂಘಗಳ ಮೂಲಕ ಇದು ೮೧.೬೬ ಲಕ್ಷ ಕೆಜಿ ಹಾಲು ಸಂಗ್ರಹಿಸಿದರೆ ಉತ್ಪಾದಕರಿಗೆ ರೂ ೨೨.೫೨ ಕೋಟಿಯಷ್ಟು ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡುತ್ತದೆ. ಇದರಿಂದ ಒಬ್ಬ ಹಾಲು ಉತ್ಪಾದಕನಿಗೆ ದಿನಕ್ಕೆ ರೂ ೮೮ ನೀಡಿದಂತಾಗುತ್ತದೆ. ಇನ್ನು ಮಾರಾಟದ ವಿಷಯಕ್ಕೆ ಬಂದರೆ ಗ್ರಾಹಕರಿಗೆ ೩೭೩೧೭ ಲಕ್ಷ ಲೀಟರ್ ಹಾಲು, ೫.೯೨ ಲಕ್ಷ ಕೆಜಿ ಮೊಸರು, ಬೆಣ್ಣೆ, ಸಿಹಿ ವಸ್ತುಗಳಂತ ಉತ್ಪನ್ನಗಳನ್ನು ಸಹ ಮಾರಾಟ ಮಾಡುತ್ತದೆ. ರಾಜ್ಯದ ಹೈನು ಉತ್ಪನ್ನಗಳಲ್ಲಿ ಕೆ ಎಂ ಎಫ್ ಪಾಲು ಶೇ ೮೮.೧೫ ಆದರೆ ಉಳಿದವುಗಳ ಪಾಲು ಕೇವಲ ಶೇ ೧೨ ರಷ್ಟು ಮಾತ್ರ. ಸರ್ಕಾರವು ಪ್ರತಿ ದಿನ ಹಾಲಿಗೆ ಪ್ರೋತ್ಸಾಹ ಧನವಾಗಿ ಪ್ರತಿ ಲೀಟರಿಗೆ ರೂ ೫ ರಂತೆ ೪೦೦ ಲಕ್ಷಗಳಷ್ಟು ಹಣವನ್ನು ಬೊಕ್ಕಸದಿಂದ ನೀಡುತ್ತಿದೆ. ಇಷ್ಟೆಲ್ಲಾ ಇದ್ದರೂ ಸಹ ರಾಜ್ಯದ ೧೬ ಹಾಲು ಒಕ್ಕೂಟಗಳಲ್ಲಿ ಸರಾಸರಿ ರೈತರಿಗೆ ಸಿಗುವ ಹಾಲಿನ ಬೆಲೆ ರೂ: ೩೧ ಮಾತ್ರ.

ಇದಲ್ಲದೇ ಪ್ರತಿ ಒಕ್ಕೂಟದಿಂದ ರೈತರಿಗೆ ತಕ್ಕ ಮಟ್ಟಿಗೆ ಪಶು ವೈದ್ಯಕೀಯ ಸೇವೆ, ಹಸುಗಳಿಗೆ ಕೃತಕ ಗರ್ಭಧಾರಣಾ ಸೇವೆ, ವಿವಿಧ ರೋಗ ನಿಯಂತ್ರಣಗಳ ಬಗ್ಗೆ ಇತ್ಯಾದಿ ಅರಿವು ಮೂಡಿಸುತ್ತದೆ. ಇದಲ್ಲದೇ ಪಶುಪಾಲಕರಿಗೆ ಪಶು ಆಹಾರ ಮತ್ತು ಖನಿಜ ಮಿಶ್ರಣಗಳನ್ನು ಸಹ ಉತ್ತಮ ಎನ್ನಬಹುದಾದ ದರಗಳಲ್ಲಿ ಪೂರೈಸುತ್ತಿದೆ.

ಹಾಲಿಗೆ ಸಿಗುವ ದರ ಹಾಲಿನಲ್ಲಿರುವ ಎಸ್ ಎನ್ ಎಫ್ ಮತ್ತು ಕೊಬ್ಬಿನಂಶದ ಮೇಲೆ ಅವಲಂಬಿತವಾಗಿದೆ. ಗುಣಮಟ್ಟದ ಹಾಲಿಗೆ ಮಾತ್ರ ಪೂರ್ಣದರ ದೊರೆಯುತ್ತದೆ. ಕಲಬೆರಕೆ, ಗುಣಮಟ್ಟದಲ್ಲಿರದ ಹಾಲಿನ ಪರೀಕ್ಷೆ ಮಾಡಿ ಅದನ್ನು ನಿರಾಕರಿಸಲಾಗುತ್ತದೆ.

ಇಷ್ಟೆಲ್ಲಾ ಇದ್ದರೂ ಬೆಳಿಗ್ಗೆ ಮತ್ತು ಸಂಜೆ 15, 043 ಸಹಕಾರ ಸಂಘಗಳಿಂದ 26.38 ಲಕ್ಷ ಜನ ರೈತರಿಂದ ೮೧.೬೬ ಲಕ್ಷ ಕೆಜಿ ಹಾಲನ್ನು ಬೆಳಿಗ್ಗೆ ಮತ್ತು ಸಂಜೆ ಒಂದು ದಿನವೂ ಬಿಡದೇ ವರ್ಷದ ೩೬೫ ದಿನವೂ ಸಂಗ್ರಹಿಸಿ ಅವರಿಗೆ ೨೨.೫೨ ಕೋಟಿಯಷ್ಟು ಹಣವನ್ನು ಪ್ರತಿ ದಿನ ನೇರವಾಗಿ ಅವರ ಖಾತೆಗೆ ಸಂದಾಯಬಲ್ಲ ಸಂಸ್ಥೆ ಕರ್ನಾಟಕದಲ್ಲಿ ಮತ್ತೊಂದು ಇಲ್ಲವೇ ಇಲ್ಲ. ಅದರಲ್ಲಿಯೂ ಸಹ ಹಾಲು ೨-೩ ತಾಸಿನೊಳಗೆ ಹಾಳಾಗಿ ಹೋಗುವ ವಸ್ತು. ತರಕಾರಿಗಳಾದರೆ ೪-೫ ದಿನ ಸಂಗ್ರಹಿಸಿ ಇಡಬಹುದು. ಈ ತರಕಾರಿಗಳನ್ನು ಅನೇಕ ಸಲ ರೈತರು ಬೆಲೆ ಸಿಗದೇ ಬೀದಿಗೆ ಚೆಲ್ಲುವುದನ್ನು ನಾವು ನೋಡಬಹುದು. ಆದರೆ ರಾಜ್ಯದ ಲಕ್ಷಾಂತರ ಜನ ರೈತರು ಅದರಲ್ಲಿಯೂ ಭೂರಹಿತ ಕೃಷಿ ಕಾರ್ಮಿಕರು ಕೆ ಎಂ ಎಫ್ ವ್ಯವಸ್ಥೆಯನ್ನು ನಂಬಿದ್ದಾರೆ. ಗ್ರಾಹಕರೂ ಸಹ ಉತ್ತಮ ಗುಣಮಟ್ಟದ ನಂದಿನಿಯನ್ನು ನಂಬುತ್ತಾರೆ ಮತ್ತು ಅವರ ಹಣ ಬಡ ರೈತರಿಗೆ ಹೋಗುತ್ತದೆಯೆಂಬ ಭಾವನಾತ್ಮಕ ವಿಷಯದ ಮೇಲೆ ಈವತ್ತಿಗೂ ಸಹ ನಂದಿನಿ ಖರೀದಿಸುತ್ತಾರೆ.

ನಂದಿನಿಗೆ ಹೋಲಿಸಿದರೆ ಅಮುಲ್ ಭಾರಿ ದೊಡ್ಡ ಬ್ರಾಂಡ್. ೭೬ ವರ್ಷಗಳ ಹಿಂದೆ ಗುಜರಾತಿನ ಕೈರಾನಲ್ಲಿ ೧೯-೧೨-೧೯೪೬ ರಂದು ಸಣ್ಣ ಸಂಘವಾಗಿ ಸ್ಥಾಪನೆಯಾಯಿತು. ಇದರ ಉತ್ಪನ್ನಗಳು ತಯಾರಾಗಿದ್ದು ಗುಜರಾತಿನ ಅನಂದ್ ನಲ್ಲಿ. ೧೯೭೩ ರಲ್ಲಿ ಇದು ಇಡೀ ರಾಜ್ಯಕ್ಕೆ ಹಬ್ಬಲು ಕಾರಣರಾದವರು ವರ್ಗೀಸ್ ಕುರಿಯನ್. ಕೇವಲ ೨೪೭ ಲೀಟರ್ ಉತ್ಪನ್ನದೊಂದಿಗೆ ಪ್ರಾರಂಭವಾದ ಅಮುಲ್ ಇಂದಿಗೆ ೩೦ ಲಕ್ಷ ಉತ್ಪಾದಕರು ಮತ್ತು ೧೩ ಹಾಲು ಒಕ್ಕೂಟಗಳಿವೆ. ಇದರ ವಹಿವಾಟು ೬೦ ಸಾವಿರಕೋಟಿಗಿಂತಲೂ ಅಧಿಕ ವಹಿವಾಟು ನಡೆಸಿ ಜಗತ್ತಿನ ೮ ದೊಡ್ಡ ಹೈನು ಸಂಸ್ಥೆ. ಸಧ್ಯ ೨೦ಕ್ಕೂ ಹೆಚ್ಚಿನ ದೇಶಗಳಿಗೆ ಇದರ ೨೦ ಕ್ಕೂ ಹೆಚ್ಚು ಉತ್ಪನ್ನಗಳು ರಪ್ತಾಗುತ್ತವೆ. ಇದರ ನಿರಂತರ ಯಶಕ್ಕೆ ಕಾರಣ ಅದರ ವಿವಿಧ ಉತ್ಪನ್ನಗಳು ಮತ್ತು ಅದರ ಗುಣಮಟ್ಟ, ಇದರ ಮಜಬೂತಾದ ಮಾರಾಟ ಸರಪಳಿ, ಹೊಸ ಹೊಸ ಸಂಶೋಧನೆಗಳು ಮತ್ತು ಅತ್ಯಂತ ಹೆಚ್ಚಿನ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಇದರ ಯಶಸ್ಸಿಗೆ ಕಾರಣ. ಕರ್ನಾಟಕದಲ್ಲಿ ಯಥಾವತ್ತಾಗಿ ಇದೇ ಮಾದರಿಯನ್ನು ಅನುಕರಿಸಲಾಗಿದೆ.

ಇದೆಷ್ಟು ದಿನ? ಎಷ್ಟೇ ತಡೆದರೂ ಖಾಸಗಿಯವರೊಡನೆ ಕೆ ಎಂ ಎಫ್ ಪೈಪೋಟಿ ನೀಡಲೇ ಬೇಕು. ಈವತ್ತು ಅಮುಲ್ ನಾಳೆ ಮತ್ತೊಂದು. ಇನ್ನು ವಿದೇಶದ ಉತ್ಪನ್ನಗಳು ನಮ್ಮಲ್ಲಿ ಮಾರಾಟವಾಗಲು ಸದ್ಯ ಆಮದಿಗೆ ಅನುಮತಿ ಇಲ್ಲ. ಇದ್ದರೆ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಜೀವನಿರೋಧಕ ರಹಿತ, ಕ್ರಿಮಿನಾಶಕ ರಹಿತ ಹಾಲು ಕಡಿಮೆ ಬೆಲೆಯಲ್ಲಿ ದೊರೆತರೆ ನಂದಿನಿ ಹಾಲು ಯಾರು ಕೊಳ್ಳಬಹುದು? ನಮ್ಮದು ಎಂಬ ಭಾವನೆ ಎಷ್ಟು ದಿನ ನಡೆದೀತು? ಹಾಲು ಹಾಕುವವರು ರೈತರು, ಮಾರುವವರು ಕೆ ಎಂ ಎಫ್ ನವರು, ಬೆಲೆ ನಿಗದಿಪಡಿಸುವವರು
ಯಾರೋ.. ಅವರ ಕೈ ಸಹ ಕಟ್ಟಿದೆ. ಹಾಲು ಉತ್ಪಾದಿಸುವವರು ಗುಣಮಟ್ಟದ ಹಾಲನ್ನು ಗ್ರಾಹಕರಿಗಾಗಿ ಉತ್ಪಾದಿಸುವ ಅವಶ್ಯಕತೆ ಇದೆ. ಎಲ್ಲಿದೆ ಗುಣಮಟ್ಟ?.

ಹಾಲು ಹೆಚ್ಚಾದ ಸಮಯದಲ್ಲಿ ಅದನ್ನು ಮಾರಾಟ ಮಾಡುವ ಚಾಕಚಕ್ಯತೆ, ಮಾರಾಟ ಚಾಣಾಕ್ಷತೆಯನ್ನು ಕರಗತಗೊಳಿಸಿಕೊಳ್ಳುವ ಇರಾದೆ ಅಲ್ಲಿ ಇಲ್ಲ. ಅಲ್ಲಿನ ನೌಕರರ ಅಥವಾ ಅಧಿಕಾರಿಗಳ ಉಳಿವು ಹಾಗೂ ವೇತನ ಹಾಲು ನೀಡುವವರು ಮತ್ತು ಆಕಳು ಸರಿಯಾಗಿ ಬದುಕಿದರೆ ಮಾತ್ರ ಎನ್ನುವ ಭಾವನೆ ಇಲ್ಲವೇ ಇಲ್ಲ. ಹಾಗಿದ್ದಾಗ ದಕ್ಷತೆ ಹೇಗೆ ಬಂದೀತು? ಸಂಸ್ಥೆಯ ನಿರ್ದೇಶಕರಾಗಲು ಲಕ್ಷಗಟ್ಟಲೆ ಖರ್ಚು ಮಾಡುವವರು ಅಧ್ಯಕ್ಷರಾಗಲು ಸುಪ್ರೀಮ್ ಕೋರ್ಟಿನ ವರೆಗೆ ಹೋಗಬಲ್ಲ ಶಕ್ತಿವಂತರು, ವಿವಿಧ ಪಕ್ಷಗಳಿಗೆ ನಿಷ್ಟರಾಗಿ ಮೂಲ ಉದ್ದೇಶ ಮರೆಯುವವರು, ಹಣವಂತರು ಮಾತ್ರ ಉನ್ನತ ಪಟ್ಟಕ್ಕೆ ಏರಬಲ್ಲರು ಎಂಬ ಪರಿಸ್ಥಿತಿ ಇದೆ. ಸಾಮಾನ್ಯ ಹಾಲು ಉತ್ಪಾದಕರಿಗೆ ಅದು ಸಾಧ್ಯವಿಲ್ಲವೆಂದಾರೆ ಇವರೆಲ್ಲಾ ಪಾರದರ್ಶಕ ಆಡಳಿತಕ್ಕೆ ಇಂಬು ನೀಡಿಯಾರೆ? ಸದ್ಯ ಬೆಳಿಗ್ಗೆ ಮತ್ತು ಸಂಜೆ ಸರಿಯಾದ ಸಮಯದಲ್ಲಿ ಬೆಲೆ ಕಡಿಮೆಯಾದರೂ ಸಹ ಅದನ್ನು ನೇರ ಖಾತೆಗೆ ವರ್ಗಾವಣೆ ಮಾಡಿ ರಾಜ್ಯದ ಲಕ್ಷಗಟ್ಟಲೆ ರೈತರ ಆರ್ಥಿಕತೆಗೆ ಇರುವ ಏಕೈಕ ವ್ಯವಸ್ಥೆ ಈ ಸಹಕಾರ ಸಂಘಗಳ ಒಕ್ಕೂಟ. ಟೊಮ್ಯಾಟೆ..ಈರುಳ್ಳಿ ಇತ್ಯಾದಿ ಹಾಳಾಗಬಲ್ಲ ತರಕಾರಿಗಳಿಗೆ ಸಹಕಾರ ವ್ಯವಸ್ಥೆಯಲ್ಲಿ ಮಾರಾಟ ಮಾಡಲು ಈ ವ್ಯವಸ್ಥೆಯನ್ನು ಅನ್ವಯಿಸಲು ಈಗಲೂ ಸಾಧ್ಯವಾಗುತ್ತಿಲ್ಲ. ಇಷ್ಟೆಲ್ಲಾ ಒರ‍ೆಕೋರೆಗಳಿದ್ದರೂ ಸಹ ಈಗಲೂ ಸಹ ಯಾವುದೋ ಶಕ್ತಿಯ ಮೇಲೆ, ಕೆಲವೇ ಕೆಲವು ಪ್ರಾಮಾಣಿಕರ ಬಲದ ಮೇಲೆ ಆಶ್ಚರ್ಯಗೊಳ್ಳುವಂತೆ ಈ ಸಂಸ್ಥೆ ನಡೆಯುತ್ತಿದೆ. ಆದರೆ ಇದೆಲ್ಲಾ ಇನ್ನೆಷ್ಟು ದಿನ? ಈವತ್ತು ಅಮುಲ್ ಉತ್ಪನ್ನ ಬರುತ್ತದೆ, ನಂತರ ಡೆನ್ಮಾರ್ಕ್, ಹಾಲೆಂಡುಗಳ ಹಾಲು ಬರುತ್ತದೆ. ಗ್ರಾಹಕ ಕ್ರಮೇಣ ಆ ಕಡೆ ವಾಲುತ್ತಾನೆ. ನಂತರ ಸಂಸ್ಥೆ ಕುಸಿಯುತ್ತದೆ… ಗ್ರಾಮ ಮಟ್ಟದ ಸಹಕಾರ ಸಂಘ ಸಹಕಾರ ವ್ಯವಸ್ಥೆಯಲ್ಲಿ ಎಲ್ಲರ ಪಾಲ್ಗೊಳ್ಳುವಿಕೆಯೊಂದಿಗೆ ಅದ್ಭುತ ಎನ್ನುವಂತೆ ಸದ್ಯ ಸಂಸ್ಥೆ ನಡೆಯುತ್ತಿದೆ. ಆದರೆ ಮೇಲ್ಮಟ್ಟದಲ್ಲಿ?? ಈವತ್ತಿಗೂ ಗ್ರಾಮೀಣ ಮಟ್ಟದ ಸಹಕಾರ ಸಂಘಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಸಹ ನಮ್ಮೂರಿನ ಸಂಘ ಎಂಬ ಏಕತೆ ಇದೆ. ಈ ಸಹಕಾರ ವ್ಯವಸ್ಥೆಯನ್ನು ರಾಷ್ಟ್ರ‍ೀಯ ಮಟ್ಟಕ್ಕೆ ವಿಸ್ತರಿಸಿ ಭಾರತ ಹಾಲು ಉತ್ಪಾದಕರ ಮಹಾಮಂಡಲವನ್ನೂ ಸಹ ಮಾಡಬಹುದು. ಆಗ ಅಮುಲ್. ಕಹಾಮ ಮತ್ತು ಇತರ ರಾಜ್ಯಗಳಲ್ಲಿನ ಹಾಲು ಉತ್ಪಾದಕರ ಸಂಸ್ಥೆಗಳಿಗೆ ಇಡೀ ದೇಶದ ಗ್ರಾಹಕರು ದೊರಕಿ ಹಾಲಿನ ಕೊಳ್ಳುವಿಕೆಯ ಬೆಲೆ ಜಾಸ್ತಿಯಾಗಬಹುದು.
ಇದು ಮೇಲ್ಮಟ್ಟದಲ್ಲಿ ಇದ್ದರೆ ಮಾತ್ರ ಪ್ರಸಕ್ತ ಕಾಲದ ಪೈಪೋಟಿ, ಗುಣಮಟ್ಟ, ಉತ್ಪನ್ನಗಳ ವೈವಿಧ್ಯತೆ ಎಲ್ಲಾ ಹೆಚ್ಚಿಸಿಕೊಳ್ಳದೇ ಇದ್ದರೆ ಮುಂದೊಂದು ದಿನ “ನಂದಿನಿ” ಕಣ್ಮರೆಯಾಗುವುದರೆ ಆಶ್ಚರ್ಯವಿಲ್ಲ. ಈಗಲಾದರೂ ಅವರು ಎಚ್ಚತ್ತುಕೊಳ್ಳಬಹುದೇ?


  • ಡಾ.ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW