ದಕ್ಕಲ ಆದಿಜಾಂಬವ ಪುರಾಣವನ್ನು ಹಾಡುವ ಕಿನ್ನರಿ ಕಲಾವಿದ ದೊಡ್ಡಬಳ್ಳಾಪುರದ ಮುನಿಸ್ವಾಮಿ ಅವರಿಗೆ ಕರ್ನಾಟಕ ಸರ್ಕಾರ ಡಾ.ಬಾಬು ಜಗಜೀವನರಾಂ ಅವರ 115 ನೇ ಜಯಂತಿಯ ದಿನ, ₹.5, 00,000 ನಗದು, ಸ್ಮರಣಿಕೆಗಳೊಂದಿಗೆ ಡಾ.ಬಾಬು ಜಗಜೀವನರಾಂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅವರ ಕುರಿತು ಹಿರಿಯ ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಬರೆದ ಒಂದು ಲೇಖನ, ಮುಂದೆ ಓದಿ…
ದಕ್ಕಲ ಆದಿಜಾಂಬವ ಪುರಾಣವನ್ನು ಹಾಡುವ ಕಿನ್ನರಿ, ಅಪರೂಪದ ಏಕೈಕ ಕಲಾವಿದ ದೊಡ್ಡಬಳ್ಳಾಪುರದ ಮುನಿಸ್ವಾಮಿ. ಈ ಪರಂಪರೆಯನ್ನು ಉಳಿಸಿ ಬೆಳೆಸಬೇಕೆಂಬ ಹಂಬಲದಿಂದ ಮತ್ತು ಅಪರೂಪದ ಕಲಾವಿದ ಮುನಿಸ್ವಾಮಿಯವರ ಬದುಕನ್ನು ಕಟ್ಟಿಕೊಡಬೇಕೆಂಬ ಕಳಕಳಿಯಿಂದ ಪತ್ರಕರ್ತ ಮಿತ್ರ ಡಿ.ಎಂ.ಘನಶ್ಯಾಮ ಅವರು 13-11-2017 ರ ಪ್ರಜಾವಾಣಿ ಪತ್ರಿಕೆಯಲ್ಲಿ ಪರಿಚಯ ಲೇಖನ ಬರೆದು ಪ್ರಕಟಿಸಿದ್ದರು. ಇದಾದ ನಂತರದಲ್ಲಿ ಹಲವಾರು ಸಭೆ ಸಮಾರಂಭಗಳಲ್ಲಿ ವಿಚಾರ ಸಂಕಿರಣ ಹಾಗೂ ನಾಯಕತ್ವ ತರಬೇತಿ ಕಾರ್ಯಾಗಾರಗಳಲ್ಲಿ ನಾನು ದಕ್ಕಲ ಕಲಾವಿದ ಮುನಿಸ್ವಾಮಿಯನ್ನು ಕುರಿತು ಹಾಗೂ ಆದಿಜಾಂಬವ ಪುರಾಣವನ್ನು ಕುರಿತು ಚಿಂತನೆಗಳನ್ನು ಮಂಡಿಸಿರುತ್ತೇನೆ.
ಮಿತ್ರ ಡಿ.ಎಂ.ಘನಶ್ಯಾಮ್ (Ghanashyam Dm) ಅವರು, ಹಿರಿಯ ಜೀವ ಮುನಿಸ್ವಾಮಿ ಅವರಿಗೆ ದೊಡ್ಡಬಳ್ಳಾಪುರ ಪಟ್ಟಣದಲ್ಲಿ ನಾಗರಿಕ ಸನ್ಮಾನವನ್ನು ಆಯೋಜಿಸಬೇಕೆಂದು ಹಾಗೂ ಸದ್ಯದಲ್ಲಿ ಮುರುಕು ಗುಡಿಸಲಿನಲ್ಲಿ ವಾಸಿಸುತ್ತಿರುವ ಮುನಿಸ್ವಾಮಿ ಮತ್ತು ದಕ್ಕಲಿಗ ಬಂಧುಗಳ ವಸತಿಗಾಗಿ ಸ್ವಯಂಪ್ರೇರಣೆಯಿಂದ ಗೆಳೆಯರೆಲ್ಲರೂ ಚಂದಾ ಹಾಕಿ ಇಡುಗಂಟು ಸಮರ್ಪಿಸಬೇಕೆಂದು ತಮ್ಮ ಆಸೆಯನ್ನು ಪ್ರಕಟಿಸಿದ್ದಾರೆ. ಈ ಕಾರ್ಯದಲ್ಲಿ ಯಾವ ರಾಜಕೀಯವೂ ಇರದಂತೆ ದೊಡ್ಡಬಳ್ಳಾಪುರದ ಪುರಜನರು ಮುಂದಾಗಲಿ. ನಾನು ಈ ಕಾರ್ಯದಲ್ಲಿ ಕೈಜೋಡಿಸಲು ಸಿದ್ಧನಿದ್ದೇನೆ.
ಆದಿಜಾಂಬವ ಪುರಾಣ ಅತ್ಯಂತ ಅಗತ್ಯವಾಗಿ ಸಂಗ್ರಹವಾಗಿ ಪ್ರಕಟವಾಗಬೇಕಾದ ಜನಪದ ಮಹಾಕಾವ್ಯ. ಜಂಬೂದ್ವೀಪದ ಆದಿಮ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬರುತ್ತಿರುವವರು ಮುನಿಸ್ವಾಮಿಯಂತಹ ಅಸಲಿ ಜನಪದ ಕಲಾವಿದರು. ಈ ಕಾವ್ಯ ತುಂಬಾ ಮುಖ್ಯವಾದ ಹಾಗೂ ದಾಖಲಾಗಲೇಬೇಕಾದ ಮಹಾಕಾವ್ಯ, ಹಿಂದೆ ಪಿಚ್ಚಳ್ಳಿ ಶ್ರೀನಿವಾಸ ಅವರು ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಚಿಂತಕ ಕೋಲಾರ ಲಕ್ಷ್ಮೀಪತಿ ಅವರನ್ನು ಮತ್ತು ನನ್ನನ್ನೂ ಸಂಪರ್ಕಿಸಿ ಈ ಕಾವ್ಯದ ಸಂಶೋಧನೆಗೆ ಯೋಜನೆ ರೂಪಿಸಿದ್ದರು .ಪಿಚ್ಚಳ್ಳಿಯವರ ಅಧಿಕಾರದ ಅವಧಿಯಲ್ಲೇ ಈ ಕೆಲಸ ಕೈಗೂಡಬೇಕಿತ್ತು. ಇದು ಕಳೆದುಹೋಗುವ ಮುನ್ನವೇ ದಾಖಲಾಗಬೇಕಾದ ಅಗತ್ಯವಿದೆ. ಈಗ ಕಲಾವಿದ ಮುನಿಸ್ವಾಮಿಗೆ ವಾಸಿಸಲು ಮನೆ ಇರದೆ ನಿರ್ಗತಿಕ ಸ್ಥಿತಿಯಲ್ಲಿದ್ದಾರೆ.
ಆದಿ ಜಾಂಬವ ಅಥವಾ ಮಹಾ ಆದಿಗ: ಆದಿಜಾಂಬವನು ಮಾದಿಗರ ಮೂಲ ಪುರುಷ. ಜಾನಪದ ಮೌಖಿಕ ಪುರಾಣ ಕಾವ್ಯಗಳ ಪ್ರಕಾರ ಅವನು ವಿಶ್ವಸೃಷ್ಡಿಗೂ ಆರು ತಿಂಗಳು ಮೊದಲೇ ಹುಟ್ಟಿದ ಆದಿ ಪುರುಷ. ವಿಶ್ವವನ್ನು ತಾನೆ ಸೃಷ್ಟಿಸಿದ ಆದಿ ವ್ಯಕ್ತಿಯಾದ ಕಾರಣ “ಆದಿಗ”. ವಿಶ್ವಸೃಷ್ಟಿಗೂ ಮೊದಲೇ ಈತನಿದ್ದ ಕಾರಣ “ಮಹಾ ಆದಿಗ” ಆಗಿದ್ದಾನೆ. ಮಹಾಆದಿಗ ವ್ಯಕ್ತಿಯು ಮಾದಿಗ ಆಗಿ ಮತ್ತು ಅವನ ಸಂತತಿಯವರು ಮಾದಿಗರಾಗಿ ನಾಮಾಂಕಿತರಾಗಿದ್ದಾರೆ. ಆದಿಜಾಂಬವನೇ ಜಂಬೂದ್ವೀಪದ ಆದಿ ಮಾದಿಗ. ಭಾರತ ದೇಶದ ಪ್ರಾಚೀನ ಹೆಸರು ಜಂಬೂದ್ವೀಪ. ಜಂಬೂವ ಅರ್ಥಾತ್ ಜಾಂಬವನು ಭಾರತ ದೇಶದ ಎಲ್ಲಾ ಜೀವಿಗಳಿಗೆ ಮತ್ತು ಜನಾಂಗಗಳಿಗೆ ಹಿರಿಯವನಾಗಿ ಮೊದಲೇ ಹುಟ್ಟಿದ ಪಿತಾಮಹನಾದ್ದರಿಂದ ಇವನನ್ನು ‘ ಆದಿ ತಾತ ಅಥವಾ ತಾತ ಜಾಂಬವ’ ಎಂದು ಕರೆಯುತ್ತಾರೆ. ಎಮ್ಮಾ ರೋಶಾಂಬು ಕ್ಲೌ ಹೇಳುವಂತೆ “Aryans made their conquests, and this man Adi Jambava, who was ‘ the first Madiga’ was one of those who were in possessions of the soil when the invaders came”. ಅಂದರೆ ಆರ್ಯರು ಭಾರತದ ಮೇಲೆ ದಂಡೆಯಾತ್ರೆ ಮಾಡುವ ಮೊದಲೇ ಆದಿಜಾಂಬವನು ಈ ನೆಲದ ಒಡೆಯನಾಗಿದ್ದ ಕಾರಣ ಮಾದಿಗರ ವಶದಲ್ಲಿ ಇಡೀ ಭಾರತ ದೇಶವಿತ್ತು. ಆದಿಜಾಂಬವ ಪುರಾಣವು ಈ ಜಂಬೂದ್ವೀಪದ ಆದಿಭಾಗದ ಕಥನವನ್ನು ಮಂಡಿಸುತ್ತದೆ.
ನಾನು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡು “ಕರ್ನಾಟಕ ಆದಿಜಾಂಬವ ಮಾತಂಗ ಪರಂಪರೆ ; ಸಾಂಸ್ಕೃತಿಕ ವಿಶ್ಲೇಷಣೆ” ಎಂಬ ಪಿಎಚ್.ಡಿ ಮಹಾಪ್ರಬಂಧ ರೂಪಿಸಿಕೊಟ್ಟಿದ್ದು, ಇದರಲ್ಲಿ ಆದಿಜಾಂಬ ಪುರಾಣದ ಸಂಪೂರ್ಣವಾದ ಕಥನವನ್ನು ವಿಶ್ಲೇಷಿಸಿರುತ್ತೇನೆ. ಆದರೆ ಕಾವ್ಯದ Audio visual ದಾಖಲೀಖರಣ ಮತ್ತು ಕಾವ್ಯದ ಸಂಪಾದನೆ ಮತ್ತು ಪ್ರಕಟಣೆ ಆಗಬೇಕಾಗಿದೆ. ಇತ್ತ ಕಡೆಗೆ ನೆರವಿನ ಹಸ್ತ ಚಾಚಿದರೆ ನಾನು, ಲಕ್ಷ್ಮೀಪತಿ ಕೋಲಾರ, ಕೋಟಿಗಾನಹಳ್ಳಿ ರಾಮಯ್ಯ, ಡಾ.ಎ.ಎಸ್.ಪ್ರಭಾಕರ್, ಘನಶ್ಯಾಮ್ ಮುಂತಾದವರು ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಡಲು ಸಿದ್ಧರಿದ್ದೇವೆ.
- ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು, ಲೇಖಕರು)