ದಾಮೋದರ ಡಾಕ್ಟ್ರು ಈಗ ಇಲ್ಲ. ಆದರೆ ಅವರು ಕೊಡುತ್ತಿದ್ದ ಚಿಕಿತ್ಸೆ ಇಂದಿಗೂ ಅವರನನ್ನು ನೆನಪಿಸುತ್ತದೆ. ಡಾಕ್ಟ್ರು ಎಂದರೆ ದಾಮೋದರ ಡಾಕ್ಟ್ರು ತರ ಇರಬೇಕು ಎನ್ನುವಷ್ಟು ಸುತ್ತಮುತ್ತಲು ಅವರ ಕೈಗುಣ ಹೆಸರುವಾಸಿಯಾಗಿತ್ತು. ಅವರ ನೆನಪಿನಲ್ಲಿ ಕಿರಣ್ ಭಟ್ ಅವರು ಬರೆದ ಲೇಖನ.
ಅನೇಕ ದಶಕಗಳ ಹಿಂದೆಯೇ ಕೇರಳದಲ್ಲಿ ಆಯುರ್ವೇದ ಡಾಕ್ಟರಕಿ ಕಲಿತು ನಮ್ಮ ಕರಾವಳಿಯಲ್ಲಿ ನೆಲೆ ನಿಂತು ವೈದ್ಯಕೀಯ ಸೇವೆ ಮಾಡಿದ ಕುಟುಂಬವೊಂದಿದೆ. ಪಂಡಿತ ಡಾಕ್ಟ್ರುಗಳ ಕುಟುಂಬ. ಹೊನ್ನಾವರ, ಕುಮಟಾ, ಅಂಕೋಲೆ, ಸಿದ್ದಾಪುರ ಗಳಲ್ಲಿ ನೆಲೆ ನಿಂತ ಈ ಕುಟುಂಬ ನೀಡಿದ ಸೇವೆ ಅಗಾಧವಾದದ್ದು. ಒಂದು ತಲೆಮಾರಿನ ಗ್ರಾಮೀಣ ಜನರ ಆರೋಗ್ಯದ ರಕ್ಷಕರಾಗಿದ್ದ ಈ ಕುಟುಂಬದ ಕುಡಿಗಳು ಈಗಲೂ ಸೇವೆ ಮುಂದುವರಿಸಿವೆ.
ದಾಮೋದರ ಡಾಕ್ಟ್ರು ಇವರಲ್ಲೊಬ್ಬರು. ಹೊನ್ನಾವರದ ಪೇಟೆ ರಸ್ತೆಯಲ್ಲಿ ‘ಹತ್ತು ಮಂದಿ ಮಠ’ ದ ಹತ್ತಿರ ಒಂದಿಡೀ ಮನೆಯೇ ಇವರ ದವಾಖಾನೆ. ‘ಅಚ್ಯುತ ಪಂಡಿತ ಸ್ಮಾರಕ ಚಿಕಿತ್ಸಾಲಯ’. ಬಾಗಿಲು ಹೊಕ್ಕಿದ ಕೂಡ್ಲೆ ಬಲಕ್ಕೆ ಕಂಪೌಂಡರ್ ನ ಕೊಠಡಿ. ನೇರ ಎದುರು ತಿರುಗುವ ಖುರ್ಚಿಯಲ್ಲಿ ಡಾಕ್ಟ್ರು. ಅವರೆದುರು ದೊಡ್ಡ ಕಟ್ಟಿಗೆಯ ಪಾರಂಪರಿಕ ವಿನ್ಯಾಸದ ಬೆಂಚು. ಒಂದು ಪಕ್ಕ ಹೆಂಗಸರ ವೇಟಿಂಗ್ ರೂಮ್. ಡಾಕ್ಟ್ರ ಬಲಕ್ಕೆ ಹಿಂಬದಿಗೆ ಚೆಕಿಂಗ್ ರೂಮ್. ಇನ್ನೊಂದು ಕೋಣೆ ತುಂಬ ದೊಡ್ಡ ದೊಡ್ಡ ಕಟ್ಟಿಗೆಯ ರ್ಯಾಕ್ ಗಳು. ಅವುಗಳ ಮೇಲೆಲ್ಲ ದೊಡ್ಡ ದೊಡ್ಡ ಪಿಂಗಾಣಿ ಭರಣಿಗಳು. ಆ ಕೋಣೆಯ ಬಾಗಿಲು ಸದಾ ಮುಚ್ಚಿರ್ತಿತ್ತು.

(ಡಾಕ್ಟ್ರ ಹಿಂದುಗಡೆ ಗೋಡೆಯ ಮೇಲೆ ‘ಸುಶ್ರುತ’ ರೋಗಿಯೊಬ್ಬನನ್ನು ಪರೀಕ್ಷಿಸುತ್ತಿರೋ ಚಿತ್ರ.)
ನನ್ನ ಓರಗೆಯವರೆಲ್ಲ ಡಾಕ್ಟ್ರಿಗೆ ಹೆಸರಿಂದಲೇ ಪರಿಚಯ. ಯಾಕೆಂದರೆ ನನ್ನಂಥ ಹಲವರು ಹುಟ್ಟಿದ್ದೇ ಅವರ ಎದುರಿನಲ್ಲಿೆ ಹೆರಿಗೆ ಆಸ್ಪತ್ರೆಗಳಿರದಿದ್ದ ಆ ಕಾಲದಲ್ಲಿ ಸೂಲಗಿತ್ತಿಯರೇ ಹೆರಿಗೆ ಮಾಡಿಸೋದು. ‘ ತಮಾ, ನೀ ಹುಟ್ಟಕಾರೆ ದಾಮೋದರ ಡಾಕ್ಟ್ರು ಹೆರಿಗೆ ಆಗೋವರೆಗೂ ಕೂತ್ಕಂಡಿದ್ರಡಾ’ ಅಂತ ಆಯಿ ಯಾವಾಗೂ ಹೇಳ್ತಿದ್ರು. ಹಾಗಾಗಿ ಒಂದು ತಲೆಮಾರಿನ ಎಲ್ಲರ ವೈದ್ಯಕೀಯ ಜಾತ್ಕವೂ ಅವರ ಬಾಯಲ್ಲಿತ್ತು.
ನಾನು ಚಿಕ್ಕವನಿಂದಲೇ ಹೋಗ್ತಿದ್ದ ಆಸ್ಪತ್ರೆ ಅದು. ಮೊದಲು ಆಯಿ ಜೊತೆ ಲೇಡೀಸ್ ವೇಟಿಂಗ್ ರೂಮ್ ನಲ್ಲಿ ಕೂತ್ಕೊಳ್ತಿದ್ದ ನನಗೆ ನಂತರ ಡಾಕ್ಟ್ರ ಎದುರಿನ ಬೆಂಚ್ ಗೆ ಪ್ರಮೋಶನ್ ಆಯ್ತು.
ಬಾಗಿಲು ಮೆಟ್ಲು ಹತ್ತುವಾಗಲೇ ‘ ಏನಾ? ಎಂತಾ ಆಯ್ತಾ? ಅಂತ ಕೇಳ್ತಾ, ಬಾ..ಬಾ ಅಂತ ಪಕ್ಕದ ಸ್ಟೂಲ್ ಮೇಲೆ ಕೂರಿಸಿಕೊಳ್ತಿದ್ರು. ನಾವು ಹಿಡ್ಕೊಂಡು ಬಂದ ಬಾಟ್ಲಿ ಅವರೆದುರು ಟೇಬಲ್ ಮೇಲೆ ಇಟ್ಮೇಲೆ ಚೆಕಪ್.ಎದೆ, ಬೆನ್ನ ಮೇಲೆ ಸ್ಟೆತಾಸ್ಕೋಪ್ ಆಡಿಸಿ, ‘ಎಂತಾ ಆಗ್ಲಿಲ್ವೋ ಅಂತ ಬೆನ್ನು ತಟ್ಟಿ ಔಷಧಿ ಚೀಟಿ ಹುಡುಕ್ತಿದ್ರು. ಅದಕ್ಕೆ ರೆಫರೆನ್ಸ್ ಔಷಧ ಬಾಟ್ಲಿ ಮೇಲಿನ ನಂಬರ್. ಪ್ರತಿ ಪೇಷಂಟ್ ಗೂ ಒಂದೊಂದು ನಂಬರ್. ಅದೊಂಥರಾ ಕಡಿಮೆ ಅಗಲದ ಹೆಚ್ಚು ಉದ್ದದ ಚೀಟಿ. ದಪ್ಪ ಕಟ್ಟಿನೊಳಗಿಂದ ಅದನ್ನು ಹೇಗೋ ಹುಡುಕಿ ತೆಗೀತಿದ್ರು. ಅದು ಹೇಗೆ ಕಂಡುಹಿಡೀತಿದ್ರೋ ದೇವರೇ ಬಲ್ಲ. ರೋಗಿ ಹಳಬನಾದಂತೆ ಅದಕ್ಕೆ ಮತ್ತೆ ಮತ್ತೆ ಕಾಗದಗಳು ಸೇರಿ ಒಂದು ಸಣ್ಣ ಕಟ್ಟೇ ಆಗ್ತಿತ್ತ್ತು. ಈಗ ಚೀಟಿ ಮೇಲೆ ಪ್ರಿಸ್ಕ್ರಿಪ್ಷನ್ ಬರೆಯೋ ಸಮಯ. ಹಳೆಯ ಇಂಕ್ ಪೆನ್ನಿಂದ ಅವರು ಬರೆಯೋದನ್ನ ನೋಡೋದೇ ಒಂದು ಮಜಾ. ಇಷ್ಟಾಗಿ ಬಾಟ್ಲಿ ಸಹಿತ ಚೀಟಿ ನಮ್ಮ ಕೈಗೆ ಬರತಿತ್ತು.
ಮುಂದೆ ಕಂಪೌಂಡರ್ ಭೆಟ್ಟಿ. ಒಂದು ಸಣ್ಣ ಕೋಣೆಯೊಳಗೆ, ಬಾಗಿಲು ಹಾಕೊಕೊಂಡು ವೆಂಕಟೇಶ ಅಂತ ಕಂಪೌಂಡರ್ ನಿಂತಿರ್ತಿದ್ದ. ಆತನ ಸುತ್ತಲೂ ಗಾಜಿನ ಬಾಟಲಿಗಳು. ಅವುಗಳ ತುಂಬ ಬಣ್ಣ ಬಣ್ಣದ ಆಸವಗಳು. ಭರಣಿ ತುಂಬಿದ ಲೇಹ್ಯಗಳು. ಗುಳಿಗೆಗಳನ್ನ ಅರೆದು ಔಷಧಕ್ಕಿ ಸೇರಿಸುವದಕ್ಕೆ ಒಂದು ಪಿಂಗಾಣಿ ಹೂಜೆ. ಈ ವೇಕಟೇಶ ಅದ್ಭುತ ಶಿಸ್ತಿನವ. ಎಷ್ಟು ಚಂದ ಇಂಗ್ಲಿಷ್ ಬರೀತಿದ್ದ.ಔಷಧ ಬಾಟ್ಲಿಗೆ ಹಾಕಿ ಕುಡಿಯೋದಕ್ಕೆ ರೆಫರೆನ್ಸ್ ಗಾಗಿ ಸಪೂರ ಚೀಟಿ ಕಟ್ ಮಾಡಿ ಬಾಟಲಿ ಮೇಲೆ ಅಂಟಿಸ್ತಿದ್ದ. ಆ ಕಟಿಂಗ್ ಕೂಡ ನಾಜೂಕಾಗಿಯೆ ಇರ್ತಿತ್ತು.ಮೂರು ದಿನದ ಔಷಧಿಯಾದರೆ ಒಂಭತ್ತು ಕಟಿಂಗ್ ಮಾರ್ಕುಗಳು. ಹೊತ್ತಿಗೊಂದು ಮಾರ್ಕ್ ಔéಷಧ ತೆಗೆದಿಕೊಳ್ಳೋದು. ಗುಳಿಗೆ ಪೊಟ್ಲೆಯೂ ಅಷ್ಟೇ ನೀಟ್. ಆ ಚಿಕ್ಕ ಪೊಟ್ಲೆಯ ಮೇಲೂ ಚಂದವಾಗಿ ಬರೀತಿದ್ದ.
ನನಗೆ ಮೊದಮೊದಲು ಅವನ ಹತ್ತಿರ ಹೋಗೋಕೆ ಭಯವಾಗ್ತಿತ್ತು. ‘ ನೀನು ಅಮ್ಮಂಗೆ ಹುಟ್ಟಿದ್ದಲ್ವಂತೆ ಜಾತ್ರೇಲಿ ಸಿಕ್ಕಿದ್ದಂತೆ’ ಅಂತ ಹೇಳಿ ಗಲಿಬಿಲಿಗೊಳಿಸ್ತಿದ್ದ. ಗಾಬರಿಯಾದ ಮುಖ ನೋಡಿ
ನಕ್ಕು ಕೆನ್ನೆ ನೇವರಿಸಿ ಔಷಧ ಕೊಟ್ಟು ಕಳಿಸ್ತಿದ್ದ. ನಂತರ ಇದೆಲ್ಲ ಸುಳ್ಳು ಅಂತ ಗೊತ್ತಾದ್ಮೇಲೆ ಧೈರ್ಯದಿಂದ ಅವನತ್ರ ಹೋಗ್ತಿದ್ದೆ.
ಆಗೆಲ್ಲ ಡಾಕ್ಟ್ರು ಮನೆಗೆ ವಿಸಿಟ್ ಗೂ ಹೋಗ್ತಿದ್ರು. ಪಂಡಿತರ ಹತ್ರ ಒಂದು ಜೀಪ್ ಇತ್ತು. ಎಮರ್ಜನ್ಸಿ ಇದ್ದಾಗ ಜೀಪಲ್ಲಿ ಹಳ್ಳಿ ಹಳ್ಳಿಗೂ ಹೋಗಿ ಸೇವೆ ಮಾಡ್ತಿದ್ರು. ಜನರೊಡನೆ ಬೆರೆತೇ ಬದುಕ್ತಿದ್ರು. ಪೇಷಂಟ್ ಗಳನ್ನ ಮಕ್ಕಳ ಹಾಗೆ, ತಂದೆಯ ಹಾಗೆ, ಅಣ್ಣ ತಮ್ಮಂದಿರ ಹಾಗೆ ನೋಡ್ಕೊಳ್ತಿದ್ರು. ಮಾತಾಡಿಸ್ತಿದ್ರು. ಪ್ರೀತಿಯಿಂದ ಬೈತಿದ್ರು. ‘ ದಾಮೋದರ ಡಾಕಟರ್ ಹತ್ರ ಬೈಸ್ಕಂಡೇ ಗುಣ ಆಗೋತು ಮಾರಾಯಾ’ ಅನ್ನೋರು ಬಹಳ ಮಂದಿ ಇದ್ರು.
ಈಗ ದಾಮೋದರ ಡಾಕ್ಟ್ರು ಇಲ್ಲ. ಅವರ ದವಾಖಾನೆ ಮುಚ್ಚಿದೆ. ಆದರೆ ಆ ಹಾದಿಯಲ್ಲಿ ಓಡಾಡುವಾಗಲೆಲ್ಲ ಅವರು ನೆನಪಾಗ್ತಾರೆ. ಅವರ ಬೆಚ್ಚನೆಯ ಸ್ಪರ್ಷ ನೆನಪಾಗ್ತದೆ.
- ಕಿರಣ್ ಭಟ್ ಹೊನ್ನಾವರ (ನಾಟಕಕಾರರು, ರಂಗಭೂಮಿ ಕಲಾವಿದರು)
