ಭೂಮಿಯ ಬಗ್ಗೆ ಮಾಹಿತಿ ಸಿಗದೆ ಅಸ್ವಸ್ಥತೆ ಕಾಡಿತು.ಇನ್ನು ಕಾಯುವುದರಲ್ಲಿ ಯಾವ ಅರ್ಥವೂ ಇಲ್ಲ ಎನ್ನಿಸಿ ಒದ್ದಾಡಿದೆ. ಅವಳ ಅಣ್ಣಂದಿರನ್ನು ವಿಚಾರಿಸಿಬಿಡಬೇಕು ಎಂದು ಧೈರ್ಯ ತಂದುಕೊಳ್ಳುವ ಪ್ರಯತ್ನದಲ್ಲಿರುವಾಗಲೇ ಅಂದಿನಂತೆ ಭೂಮಿ ಮತ್ತೆ ಧುತ್ತೆಂತು ಪ್ರತ್ಯಕ್ಷಳಾದಳು. ಭೂಮಿ ಅಂದಿನ ಭೂಮಿಯಾಗಿರಲಿಲ್ಲ. ಮುಂದೇನಾಯಿತು ಎನ್.ಶೈಲಜಾ ಹಾಸನ ಅವರ ಈ ಕತೆಯನ್ನು ಪೂರ್ತಿಯಾಗಿ ಓದಿ…
ಬ್ಯಾಂಕ್ ಮ್ಯಾನೇಜರ್ ಬಳಿ ಲೋನ್ ಬಗ್ಗೆ ವಿಚಾರಿಸಿ, ಅದಕ್ಕೆ ಬೇಕಾದ ದಾಖಲೆಗಳನ್ನೆಲ್ಲ ಇನ್ನೊಂದು ವಾರದೊಳಗೆ ತಂದು ಕೊಡುವುದಾಗಿ ಹೇಳಿ ಅಲ್ಲಿಂದ ವಿಕ್ಕಿ ಹೊರಬಂದ. ಮ್ಯಾನೇಜರ್ ಮನೆಗೆ ಬಂದಿದ್ದು ಒಳ್ಳೆಯದಾಯ್ತು. ಅಪ್ಪನ ಪರಿಚಯಸ್ಥರಾದ್ದರಿಂದ ಎಲ್ಲವನ್ನೂ ವಿವರವಾಗಿ ಹೇಳಿ, ಆದಷ್ಟು ಬೇಗ ಲೋನ್ ಮಾಡಿಸುವ ಆಶ್ವಾಸನೆ ನೀಡಿದರು. ಇವತ್ತು ರಜೆ ಇದ್ದುದರಿಂದ ಮ್ಯಾನೇಜರ್ ಮನೆಯಲ್ಲಿ ಸಿಕ್ಕಿದರು. ಇಲ್ಲದೆ ಹೋಗಿದ್ದರೆ ಬ್ಯಾಂಕಿಗೆ ಹೋಗಿ ಪರದಾಡ ಬೇಕಿತ್ತು. ದಾಖಲೆಗಳನ್ನು ತರಬೇಕು ಅಂದ್ರೆ ನಾಳೆನೂ ಪಟ್ಟಣಕ್ಕೆ ಬರಬೇಕು. ಆ ಪಾಣಿ ತಗೊಳ್ಳೋದಕ್ಕೆ ಎಷ್ಟು ಸಾರಿ ತಾಲ್ಲೂಕು ಆಫೀಸಿಗೆ ಸುತ್ತಬೇಕೋ, ಎಷ್ಟೇ ಕಷ್ಟವಾದ್ರೂ ಪರವಾಗಿಲ್ಲ. ಆದಷ್ಟು ಬೇಗ ಲೋನ್ ಸಿಕ್ಕಿಬಿಟ್ರೆ ತೋಟಾನ ಚಿನ್ನದ ಗಣಿ ಮಾಡಿಬಿಡ್ತೀನಿ, ಹೊಸ ಹುರುಪು ಬಂದಂತಾಗಿ ವಿಕ್ಕಿ ವೇಗವಾಗಿ ಹೆಜ್ಜೆ ಹಾಕಿದ. ತಟ್ಟನೆ ಅಡ್ಡಬಂದ ಆತ ‘ವಿಕ್ಕಿ’ ಎನ್ನುತ್ತ ಹೆಚ್ಚು ಕಡಿಮೆ ಎಳೆದುಕೊಂಡೇ ಮನೆಯೊಂದರೊಳಗೆ ನುಗ್ಗಿ ಬಾಗಿಲು ಹಾಕಿದಾಗ ವಿಕ್ಕಿ ಬೆಚ್ಚಿದನು. ಹಣೆಯ ಮೇಲೆ ಬೆವರು ಸಾಲು ಚಿಮ್ಮಿ ಎದೆ ಡವಡವನೆ ಹೊಡೆದುಕೊಳ್ಳಲಾರಂಭಿಸಿತು. ಈ ಅನಿರೀಕ್ಷಿತ ಘಟನೆಯಿಂದ ತತ್ತರಿಸಿದ ವಿಕ್ಕಿ ‘ಅರೆ ಈತ ಭೂಮಿಯ ತಂದೆ ಅಲ್ವೆ? ಎಲ್ಲೊ ಒಮ್ಮೆ ನೋಡಿದ ನೆನಪು. ನನ್ನನ್ನಾಕೆ ಈತ ಹೀಗೆ ದರದರನೆ ಎಳ್ಕೊಂಡು ಬಂದಿದ್ದಾನೆ. ಬಾಗಿಲು ಬೇರೆ ಹಾಕಿದನಲಪ್ಪ, ಏನು ವಿಷ್ಯ ಇರಬಹುದು. ನಾನೇನು ತಪ್ಪು ಮಾಡಿದೆ. ಹೋದ ವಾರ ಭೂಮಿ ನಮ್ಮ ಮನೆಗೆ ಬಂದಿದ್ದು, ಒಂದೆರಡು ದಿನ ಉಳಿದಿದ್ದು ನಿಜಾ, ಆದರೆ ಅದನ್ನೇ ಈತ ತಪ್ಪಾಗಿ ಭಾವಿಸಿರಬಹುದೆ, ನಾನು ಇಲ್ಲಿಗೆ ಬರ್ತಿನಿ ಅಂತಾ ತಿಳ್ಕೊಂಡು ಎಳ್ಕೊಂಡು ಬಂದನೆ’ – ಊಹಾಸರಣಿ ಮುಂದುವರಿತಾ ಇತ್ತೇನೋ, ಅಷ್ಟರಲ್ಲಿ ‘ವಿಕ್ಕಿ, ನೀವು ಸಿಕ್ಕಿದ್ದು ತುಂಬಾ ಒಳ್ಳೆಯದಾಯ್ತು. ಯಾರಾದ್ರೂ ನೋಡ್ತಾರೇನೋ, ಅಂತ ಎಳೆದುಕೊಂಡೇ ಬಂದೆ. ಕೂತೊಳ್ಳಿ’, ಎಂದೊಡನೆ ಧಸಕ್ಕನೇ ಕುರ್ಚಿ ಮೇಲೆ ಕುಕ್ಕರಿಸಿದ ವಿಕ್ಕಿ. ಹಣೆಯ ಮೇಲಿನ ಬೆವರಸಾಲು ಒರೆಸಿಕೊಂಡು ‘ಅಬ್ಬಾ’ ಎಂದು ಉಸಿರುಬಿಟ್ಟು ಸುತ್ತಲೂ ಕಣ್ಣಾಡಿಸಿದ ಮನೆ ಭವ್ಯವಾಗಿತ್ತು.
‘ಮನೆ ಚೆನ್ನಾಗಿದ್ಯಾ, ನಾನೇ ಕೊಂಡುಕೊಂಡೆ’ ಎಂದ.
‘ಮನೇನಾ ಇದು, ಅರಮನೆ’ ಅಂದ ವಿಕ್ಕಿ.
‘ವಿಕ್ಕಿ, ಈ ಮನೇನಾ ಯಾಕೆ ಕೊಂಡ್ಕೊಂಡೆ ಅಂತಾ ಗೊತ್ತಾ, ಪಾಪ ನಿಮಗೆ ಹ್ಯಾಗೆ ಗೊತ್ತಾಗಬೇಕು. ನಾನು ಇನ್ನೊಂದು ಮದ್ವೆ ಮಾಡಿಕೊಂಡೆ ವಿಕ್ಕಿ, ನಮ್ಮ ಮನೆ ಕೆಲ್ಸಕ್ಕೆ ಬರ್ತಾ ಇದ್ದಳು. ನನ್ನ ಒಪ್ಪಿಕೊಂಡಳು. ಮದ್ದೆ ಮಾಡಿಕೊಂಡ್ವಿ, ಇದೇ ಮನೇಲಿ ಅವಳನ್ನ ಇಡೋಣ ಅಂತ ಮಾಡಿದ್ದೆ, ಆದ್ರೆ ನನ್ನ ಮಕ್ಕಳು ಇದ್ದಾರಲ್ಲ ರೌಡಿಗಳು, ದೊಡ್ಡ ರೌಡಿಗಳು, ನಮ್ಮನ್ನು ಕೊಲ್ಲೋಕೂ ಹೇಸೋರಲ್ಲ. ಅದಕ್ಕೆ ನನ್ನ ಆಸ್ತಿ, ಮನೆ ಎಲ್ಲಾ ಬಿಟ್ಟು ಬೇರೆ ಊರಿಗೆ ಹೋಗ್ತಾ ಇದ್ದೀನಿ. ಯಾರಿಗೂ ಗೊತ್ತಾಗದ ಹಾಗೆ. ನಂಗೆ ಭೂಮಿದೇ ಯೋಚನೆ, ಗಂಡು ಮಕ್ಕಳಿಗೂ ಹೇಗೂ ಆಸ್ತಿ ಹಂಚಿ ಆಗಿದೆ. ಈಗ ಈ ಮನೆ, ಬ್ಯಾಂಕಿನಲ್ಲಿರೋ ಹಣ, ಎಲ್ಲವನ್ನೂ ಭೂಮಿಗೆ ಬಿಟ್ಟು ಹೋಗ್ತಾ ಇದ್ದೀನಿ, ನಿಮ್ಮಂಥ ಒಬ್ಬ ಹುಡುಗ ಅವಳಿಗೆ ಸಿಕ್ಕಿ ಅವಳ ಬದುಕು ನೇರವಾಗಿಬಿಟ್ರೆ ಸಾಕು.’ ಒಂದೇ ಉಸಿರಿಗೆ ಬಡಬಡಿಸಿದ ಆತನನ್ನು ನೋಡುತ್ತ ದಂಗುಬಡಿದು ಹೋದ ವಿಕ್ಕಿ.
‘ಮತ್ತೇ ನಿಮ್ಮ ಮುಂದಿನ ಜೀವನ ಹೇಗೆ?’ ಗೊಂದಲದಲ್ಲಿ ಬಿದ್ದ.
‘ಸಾಕಷ್ಟು ಹಣ ತಗೊಂಡಿದ್ದೇನೆ, ಅಲ್ಲಿ ಹೊಸ ಬಿಸಿನೆಸ್ ಶುರು ಮಾಡ್ತೀನಿ, ನಂದೇನೋ ಹೇಗೋ ಆಗುತ್ತೆ. ಆದ್ರೆ ಭೂಮಿ ಬಗ್ಗೆ ತುಂಬಾ ಆತಂಕವಾಗ್ತಾ ಇದೆ. ಇದನ್ನು ಹೇಗೆ ತಗೊಳ್ತಾಳೊ. ನೀವೇ ಅವಳಿಗೆ ಸಮಾಧಾನ ಮಾಡಬೇಕು, ಅವಳೇನಾದರೂ ನನ್ನ ಹತ್ರ ಬರ್ತಿನಿ ಅಂದ್ರೆ ನಂಗೆ ದಯವಿಟ್ಟು ತಿಳಿಸಿ. ಈಗಿರೋ ಪರಿಸ್ಥಿತಿಲಿ ನಾನು ಅವಳಿಗೆ ಹೇಳದೆ ಹೋಗ್ತಾ ಇದ್ದೀನಿ, ಬೆಳಗಾಗುವುದರೊಳಗೆ ಏನೋ, ಎಂತೋ, ಇಂದು ರಾತ್ರೀನೇ ಗುಟ್ಟಾಗಿ ಊರು ಬಿಡ್ತಾ ಇದ್ದೀನಿ. ನಿಮ್ಮನ್ನೆ ನಂಬಿದ್ದೀನಿ’ ಹೀಗೆ ಏನೇನೋ ಹೇಳುತ್ತಾ ಚಡಪಡಿಕೆ, ದುಗುಡ, ಹುರುಪು ಹೀಗೆ ಎಲ್ಲವನ್ನೂ ಒಗ್ಗೂಡಿಸಿಕೊಂಡಿದ್ದ ಆತನ ಬಗ್ಗೆ ತಮಾಷೆ ಎನಿಸಿತು.
ಅಲ್ಲಾ ಈತ ಹೇಳ್ತಾ ಇರೋದೆಲ್ಲ ಸತ್ಯನಾ, ಇವನ ಮಕ್ಕಳೇ ಇವನನ್ನು ಕೊಲ್ಲೋಕೆ ಹೊರಟಿದ್ದಾರಾ, ಹೀಗೆ ನನ್ನ ಹತ್ರ ಎಲ್ಲವನ್ನೂ ಹೇಳ್ತಾ ಇದ್ದಾನಲ್ಲ? ನಾನು ಹೋಗಿ ಭೂಮಿಗೆ, ಅವಳ ಅಣ್ಣಂದಿರಿಗೆ ಹೇಳಿಬಿಟ್ಟರೆ, ಇವನು, ಇವನ ಹೊಸ ಹೆಂಡತಿನೂ ಇಲ್ಲೇ ಸಮಾಧಿ. ನಾನು ಭೂಮಿಯ ಗೆಳೆಯನೇನೋ ಹೌದು, ಹಾಗಂತ ನನ್ನನ್ನು ಇಷ್ಟೊಂದು ನಂಬಿ ಬಿಡುವುದೇ?
“ವಿಕ್ಕಿ ಈ ವಿಷಯ ನಾನು ಊರು ಬಿಡೋತನಕ ಗುಟ್ಟಾಗಿರಲಿ,’ ಪೇಚಾಡಿಕೊಳ್ಳುತ್ತಿದ್ದವನನ್ನು ನೋಡಿ ವಿಕ್ಕಿಗೆ ನಗು ಬಂದಿತು. ಪ್ರಪಂಚದಲ್ಲಿ ಮಗಳೋ, ಮಗನೋ ಓಡಿಹೋಗೋದು ನೋಡಿದ್ದೀವಿ, ಆದರೆ ಹೀಗೆ ತಂದೆ ಓಡಿ ಹೋಗೋದು ಅಂದ್ರೆ… ಛೇ, ಛೇ, ಬೆಳೆದು ನಿಂತಿರೋ ಮಗಳಿಗೆ ಮದುವೆ ಮಾಡೋದು ಬಿಟ್ಟು ಏನಿದು ಈ ಹುಚ್ಚಾಟ? ನಾನೇಕೆ ಇವನಿಗೆ ಸಿಕ್ಕಿಬಿದ್ದೆ? ‘ಪಾಪ ಭೂಮಿ’ ಕನಿಕರಿಸಿದ. ಸ್ವಲ್ಪವೇ ಬಾಗಿಲು ತೆರೆದು ಅವನನ್ನು ಹೊರಬಿಟ್ಟು ಮತ್ತೇ ತಟ್ಟನೆ ಬಾಗಿಲು ಹಾಕಿಕೊಂಡುಬಿಟ್ಟ ಆತ. ಎಲ್ಲೋ ಹೋಗಿ ಸುಖವಾಗಿ ಇರಿ ಎಂದು ಹಾರೈಸಿದ ವಿಕ್ಕಿ.
ಆವತ್ತು ಬೆಳಿಗ್ಗೆ ತೋಟಕ್ಕೆ ಹೊರಟು ನಿಂತಿದ್ದವನಿಗೆ ಕಾರು ಮನೆ ಮುಂದೆ ನಿಂತಾಗ ಆಶ್ಚರ್ಯವಾಗಿತ್ತು. ಕಾರಿನ ಡೋರ್ ತೆಗೆದು ಹೊರಗಿಳಿದ ಭೂಮಿಯನ್ನು ಕಂಡು ಅಚ್ಚರಿಯಿಂದಲೇ ಸ್ವಾಗತಿಸಿದ್ದ. ಜೊತೆಯಲ್ಲಿ ಓದಿದ್ದೇನೋ ಹೌದು, ಆದ್ರೆ ಆ ದಿನಗಳಲ್ಲಿ ಅವಳ ಬಗ್ಗೆ ಸಲುಗೆ ಏನೂ ಬೆಳೆಸಿಕೊಂಡವನಲ್ಲ. ಅವಳ ಗಂಭೀರತನ ಯಾರೊಂದಿಗೂ ಬೆರೆಯದ ಅವಳ ಸ್ವಭಾವವನ್ನು ಶ್ರೀಮಂತಿಕೆಯ ಅಹಂ ಎಂದೇ ನಿರ್ಲಕ್ಷಿಸಿದ್ದ. ಸಹಪಾಠಿಗಳ ಕಾಟಕ್ಕೆ ಒಮ್ಮೆ ಎಲ್ಲರನ್ನು ತೋಟಕ್ಕೆ ಕರೆತಂದು, ಅವರ ಮಂಗಾಟಗಳಿಗೆ ರೋಸಿ ಹೋದರೂ ಸಹಿಸಿಕೊಂಡಿದ್ದ. ಇಡೀ ತೋಟದಲ್ಲಿ ಅವಳು ಒಂಟಿಯಾಗಿಯೇ ಇರಲು ಬಯಸುತ್ತಿದ್ದುದನ್ನು ಗಮನಿಸಿ ಸೋಜಿಗಗೊಂಡಿದ್ದ.
ಯಾರೊಂದಿಗೂ ಬೆರೆಯದೆ ತನ್ನದೇ ಲೋಕದಲ್ಲಿ ಮುಳುಗಿ ಹೋಗಿರುತ್ತಿದ್ದ ಭೂಮಿಯ ಮನದಾಳದಲ್ಲೆಲ್ಲೋ ನೋವಿನಲೆ ಕಂಡಂತಾಗಿ ಬೆಚ್ಚಿದ್ದ. ಛೇ, ತನ್ನ ಕಲ್ಪನೆ ಇದೆಲ್ಲ ಎಂದು ತಲೆ ಕೊಡಹಿ ಸುಮ್ಮನಾಗಿದ್ದ. ಆದರೆ ಕಾಲೇಜಿನ ದಿನಗಳು ಮುಗಿದು ಎಲ್ಲರೂ ತಮ್ಮ ತಮ್ಮ ಹಾದಿ ಹಿಡಿದು ಚದುರಿ ಹೋದ ಮೇಲೂ, ತಾನೂ ಉದ್ಯೋಗದ ಗೊಡವೆಯೇ ಬೇಡವೆಂದು, ಭೂತಾಯಿ ಸೇವೆಯೇ ಇರಲಿ ಎಂದಾರಿಸಿಕೊಂಡು ತೋಟದಲ್ಲಿ ಮುಳುಗಿ ಹೋಗಿರುವಾಗ ಹೀಗೆ ಧುತ್ತೆಂದು ಭೂಮಿ ಪ್ರತ್ಯಕ್ಷಳಾಗುವಳೆಂದು ಕನಸು ಮನಸ್ಸಿನಲ್ಲಿಯೂ ಭಾವಿಸಿರದ ವಿಕ್ಕಿಗೆ ಭೂಮಿ ಒಂದು ಒಗಟಾದಳು. ತನ್ನೆಲ್ಲಾ ಭಾವನೆಗಳಿಗೂ ತೆರೆ ಹಾಕಿ, ಯಾವ ಕುತೂಹಲವನ್ನು ತೋರದೆ, ಸಹಜವಾಗಿ ಬರಮಾಡಿಕೊಂಡಿದ್ದ. ಮನೆಯವರ ಅನುಮಾನ, ಸಂದೇಹಗಳ ನಡುವೆಯೂ ಉಪಚರಿಸಿದ್ದ.
ಒಂದೆರಡು ಗಂಟೆಗಳಲ್ಲಿಯೇ ಭೂಮಿ ಮನೆಯವರೊಂದಿಗೆ ಹೊಂದಿಕೊಂಡು ಬಿಟ್ಟಳು. ಶ್ರೀಮಂತೆ ಎಂಬ ಯಾವ ಬಿಗುಮಾನವೂ ತೋರದೆ ಬೆರೆತು ಹೋದವಳನ್ನು ಕಂಡು ಅಚ್ಚರಿಯಾದರೂ ಗಳಿಗೆ ಗಳಿಗೆಗೂ ಕಳೆದು ಹೋಗುವ ಅವಳನ್ನು ಈ ಬಾರಿ ಹಿಡಿಯಲೇಬೇಕೆಂದು ಪಣತೊಟ್ಟ. ಅಂದು ಕಂಡಿದ್ದ ನೋವಿನೆಳೆ ಕಲ್ಪನೆಯಲ್ಲವೆಂದು ಮನವರಿಕೆ ಆಗಿತ್ತು. ಆ ನೋವ ಹೊರಗೆಳೆದು ಸಂತೈಸುವ ಬಯಕೆಯೂ ತೀವ್ರವಾಯಿತು.
ತೋಟದೊಳಗೆ ವಿಕ್ಕಿಯೊಂದಿಗೆ ಹೆಜ್ಜೆ ಹಾಕುತ್ತಿದ್ದ ಭೂಮಿ, ಹಿಂದೆ ಮುಂದೆ ಆಲೋಚಿಸದೆ ಇಲ್ಲಿಗೆ ಬಂದು ಇರಿಸು ಮುರಿಸು ಉಂಟು ಮಾಡಿದ್ದಕ್ಕೆ ಕ್ಷಮೆ ಯಾಚಿಸಿದಳು. ತನ್ನಿಂದ ತೊಂದರೆಯಾಯಿತೇನೋ ಎಂಬ ಔಪಚಾರಿಕ ಮಾತನಾಡುತ್ತಾ, ವಿಕ್ಕಿ ಕೇಳುವ ಮೊದಲೇ ಮನದಾಳದ ಭಾವನೆಗಳನ್ನು ತೆರೆದಿಟ್ಟಳು. ತಾಯಿ, ತಂದೆ, ಅಣ್ಣಂದಿರು, ಒಬ್ಬಳೆ ಮಗಳು ಈ ಸಂಸಾರ ನೋಡುಗರ ಕಣ್ಣಿಗೆ ಸುಂದರ ಚಿತ್ರಣ. ಆದರೆ ತನ್ನ ಮನೆಯೋ ಎನ್ನುತ್ತ ನಿಡುಸುಯ್ದಳು. ಅಮ್ಮನಿಗೆ ಸಂಸಾರ ಬಂಧನವಾದರೆ, ಅಪ್ಪನಿಗೆ ತೀರದ ದಾಹ, ಸದಾ ಸುಖವನ್ನು ಅರಸಿ ಹೋಗುವ ವಿಲಾಸವಂತ. ಪ್ರಾಪಂಚಿಕ ಸುಖಗಳನ್ನೆಲ್ಲ ತ್ಯಜಿಸಿದ ಅಮ್ಮ ಬ್ರಹ್ಮ ಕುಮಾರಿ ಆಶ್ರಮದ ನಂಟು ಬೆಳೆಸಿ, ಸದ್ಗತಿ ಪಡೆಯುವ ದಿಸೆಯಲಿ ತಾವರೆ ಮೇಲಿನ ಹನಿಯಂತೆ ಸಂಸಾರದಲಿ ಅಂಟಿಯೂ ಅಂಟದಂತಿದ್ದಾಳೆ. ಅಪ್ಪನಿಗೊ ಯಯಾತಿಯಂತೆ ಸದಾ ಭೋಗದ ಹೊಳೆಯಲಿ ಮೀಯುವ ಉತ್ಸಾಹ. ಮನೆಯೊಳಗೆ ಸಿಗದ ಸುಖವನ್ನು ಮನೆಯಿಂದ ಹೊರಗಾದರೂ ಹುಡುಕಿ ದಕ್ಕಿಸಿಕೊಳ್ಳುವ ನಿಸ್ಸಿಮ. ಹೀಗಾಗಿ ಮಕ್ಕಳ ದೃಷ್ಟಿಯಲ್ಲೂ ಕೆಳಗಿಳಿದು ಗಂಡು ಮಕ್ಕಳಿಗೆ ಆಸ್ತಿ ಹಂಚಿ ಹೊರಗಟ್ಟಿದ್ದ.
ಹೆಂಡತಿ ಗಂಡನ ಬೇಕು ಬೇಡಗಳನ್ನು ಪೂರೈಸದಿದ್ದರೂ, ಆತನ ಹೊರ ಚಾಳಿಯ ಬಗ್ಗೆ ತಿರಸ್ಕಾರ. ಪ್ರತಿದಿನ ಜಗಳ, ಕೊನೆಗೆ ಮನಶ್ಯಾಂತಿ ಅರಸಿ, ಹೆಂಡತಿ ಮಗುವನ್ನು ಬಿಟ್ಟು ಮುಕ್ತಿ ಮಾರ್ಗ ಹಿಡಿದ ಬುದ್ಧನಂತೆ, ಬದುಕಿನ ಸಂಕೀರ್ಣತೆಯಿಂದ ವಿಮುಖಳಾದ ತಾಯಿ ಅರ್ಧರಾತ್ರಿಯಲಿ ಮನೆ ಬಿಟ್ಟು ಆಶ್ರಮವನ್ನು ಸೇರಿದಳು. ದೂರದ ಮೌಂಟ್ ಅಬುವಿನಲ್ಲಿ ಸಂಸಾರದ ಎಲ್ಲ ಚಿಂತೆಯನ್ನು ಬಿಟ್ಟು ಮುಕ್ತಿಗಾಗಿ ಕಾದಿರುವ ಅಮ್ಮ, ಇತ್ತ ತನ್ನದೆ ವಯಸ್ಸಿನ ಕೆಲಸದವಳನ್ನು ಮದುವೆಯಾಗಿ, ಗುಟ್ಟಾಗಿಡುವ ಯತ್ನ ನಡೆಸಿರುವ ಅಪ್ಪ, ಅಪ್ಪನ ಬಗ್ಗೆ ಹೀನಾಯಗೊಂಡಿರುವ ಅಣ್ಣಂದಿರು. ಇದೆಲ್ಲದರ ಮಧ್ಯೆ ನೆಮ್ಮದಿಯ ಹುಡುಕಾಟದಲ್ಲಿರುವಾಗಲೇ ಈ ಪ್ರಕೃತಿಯ ಮಡಿಲು ನೆನಪಾಗಿ, ಅಪ್ಪನಿಗೆ ಹೇಳಿ ಹೊರಟು ಬಂದುಬಿಟ್ಟೆ ಎಂದು ಹೇಳಿ ಮಾತು ನಿಲ್ಲಿಸಿದಾಗ ಪ್ರತಿಕ್ರಿಯಿಸಲು ಪದಗಳಿಗಾಗಿ ಹುಡುಕಾಡಿದ.
‘ಇಲ್ಲಿನ ಪ್ರಶಾಂತ ಹಸಿರು, ಮನೆಯವರ ಆದರ, ನಿನ್ನ ಸ್ನೇಹ ಇವೆಲ್ಲ ಮನಸ್ಸಿನ ನೋವು ಮರೆಯಲು ಸಹಕರಿಸಿದೆ. ಮುಂದೇನು ಅಂತ ಗೊತ್ತಾಗ್ತಾ ಇಲ್ಲ. ಅಪ್ಪನಿಗೆ ನನಗೊಂದು ಮದುವೆ ಮಾಡುವ ಧಾವಂತ. ನಮ್ಮ ಮನೆ ಬಗ್ಗೆ ತಿಳಿದವರಾರು ಮದ್ದೆಗೆ ಒಪ್ಪೋತಾರೆ ಹೇಳು, ಸದ್ಯಕ್ಕೆ ಮದುವೆ ಬಗ್ಗೆ ಯೋಚನೆಯೇ ಇಲ್ಲ, ಎಲ್ಲಾನೂ ಅರ್ಥ ಮಾಡಿಕೊಂಡು ನನಗೊಂದು ಬದುಕು ನೀಡುವ ಮನಸ್ಸಿನವನು ಸಿಕ್ಕಾಗ ನೋಡೋಣ ಎಂದು ಅಪ್ಪನಿಗೆ ಹೇಳಿಬಿಟ್ಟಿದ್ದೇನೆ.’ ಇಷ್ಟೆಲ್ಲಾ ಹೇಳುವಾಗಲೂ ನಿರ್ಲಿಪ್ತಳಾಗಿದ್ದಳು. ತಾನೀಗ ಏನು ಮಾತನಾಡಿದರೂ ಅದು ಔಪಚಾರಿಕವಷ್ಟೆ ಆಗುತ್ತದೆ. ತನ್ನ ಸಮಸ್ಯೆಗೆ ತಾನೇ ಪರಿಹಾರ ಕಂಡುಕೊಳ್ಳಲಿ ಎಂದು ಕೊಂಡು ಮಾತು ಬದಲಿಸಲು,
‘ಭೂಮಿ, ಗೇರುಹಣ್ಣು ತಿಂದಿದ್ದೀಯಾ, ತುಂಬಾ ರುಚಿಯಾಗಿರುತ್ತೆ. ಇರು ಕೊಡ್ತೀನಿ’ ಅಂತ ಕೆಂಪಾಗಿದ್ದ ಗೇರುಹಣ್ಣನ್ನು ಗೇರುಕಾಯಿಯಿಂದ ಬೇರ್ಪಡಿಸಿ ನೀಡಿದ. ಮನಸ್ಸು ಅನುಕಂಪದಿಂದ ತುಂಬಿ ಹೋಗಿದ್ದರೂ ಅದು ಹೊರ ತೋರದಂತೆ ಎಚ್ಚರಿಕೆ ವಹಿಸಿದ. ಅವಳಿಗೆ ಬೇಸರವಾಗದಂತೆ ಕಟ್ಟೆಚ್ಚರ ವಹಿಸಿ ಮನೆಯವರಿಗೂ ತಿಳಿಸಿ ಮತ್ತಷ್ಟು ಕಾಳಜಿಯಿಂದ, ಪ್ರೀತಿಯಿಂದ ಅವಳನ್ನು ನೋಡಿಕೊಂಡ. ಎರಡು ದಿನ ಕಳೆದ ಮೇಲೆ ಯಾರೆಷ್ಟು ಹೇಳಿದರೂ ಕೇಳದೆ ಹೊರಟುಬಿಟ್ಟಿದ್ದಳು. ಅವಳನ್ನು ಚೆನ್ನಾಗಿ ನೋಡಿಕೊಂಡೆ ಎಂಬ ತೃಪ್ತಿಯಂತೂ ಅವನಿಗೆ ಸಿಕ್ಕಿತ್ತು. ಅವಳು ಹೋಗಿ ವಾರವಷ್ಟೇ ಆಗಿತ್ತು. ಅಷ್ಟರೊಳಗೆ ಈ ಕಥೆ ನಡೆದು ಹೋಯಿತು.
ಪಾಪ, ಭೂಮಿ ಜಗತ್ತಿನಲ್ಲಿ ಏಕಾಂಗಿಯಾಗಿ ಹೋದಳಲ್ಲ. ಅವಳ ಅಣ್ಣಂದಿರಿಗೋ ಈ ಭೂಮಿಯ ಮೇಲೆ ತಂಗಿಯೊಬ್ಬಳಿದ್ದಾಳೆ ಅಂತ ನೆನಪಾಗಲಿಲ್ಲವೇನೋ, ಇನ್ನು ಆ ಹೆತ್ತ ತಾಯಿಯೋ, ಅಕ್ಕಮಹಾದೇವಿಯಂತೆ, ಕೌಶಿಕನ ಬಿಟ್ಟು, ಚೆನ್ನಮಲ್ಲಿಕಾರ್ಜುನನನ್ನು ಹುಡುಕಿಕೊಂಡು ಮೌಂಟ್ ಅಬುವಿನಲ್ಲಿಯೇ ಕದಳಿವನವನ್ನು ಕಾಣುತ್ತಿದ್ದಾಳೆ. ಮಗಳಿಗೆ ಮದುವೆ ಮಾಡಿ ಮೊಮ್ಮಕ್ಕಳನ್ನು ಆಡಿಸಿಕೊಂಡಿರಬೇಕಾದ ವಯಸ್ಸಿನಲ್ಲಿ, ಮಗಳ ವಯಸ್ಸಿನವಳನ್ನು ಕಟ್ಟಿಕೊಂಡು ಮತ್ತೆ ಯೌವನ ಪಡೆದ ಯಯಾತಿಯಂತೆ ಸುಖವನ್ನು ಅರಸಿ, ಮಕ್ಕಳಿಗೆ ಹೆದರಿ ಪಲಾಯನ ಮಾಡಿದ್ದಾನೆ. ಇವರೆಲ್ಲರ ಮಧ್ಯೆ ಭೂಮಿ ದ್ವೀಪವಾಗಿಬಿಟ್ಟಿದ್ದಾಳೆ. ಸುತ್ತಲೂ ನೀರು, ಹೋಗುವುದೆಲ್ಲಿ? ತಾನೀಗ ಭೂಮಿಯನ್ನು ಕಂಡು ಸಮಾಧಾನಿಸಿ ಬರಲೇಬೇಕು ಎಂದುಕೊಂಡವನು, ಒಡನೆಯೇ ಬೇಡ, ಬೇಡ, ಈ ಪರಿಸ್ಥಿತಿಯಲ್ಲಿ ಬೇಡ, ತಾನೀಗ ಹೋಗುವುದು. ಮುಚ್ಚಿಟ್ಟುಕೊಳ್ಳಲಾರದೆ, ಎಲ್ಲವನ್ನೂ ಹೇಳಿ ಮುಜುಗರ ಹುಟ್ಟಿಸುವುದು, ಬೇಡವೇ ಬೇಡ, ಪರಿಸ್ಥಿತಿ ತಿಳಿಯಾಗಲಿ, ಎಂದು ಎಲ್ಲಿಗೂ ಹೋಗಲು ಮನಸ್ಸಾಗದೆ ಬಸ್ಸು ಹತ್ತಿದೆ.
ತೋಟದಲ್ಲಿ ಕೆಲಸವೇ ಕೆಲಸ, ಚಿಗುರು ಕಡಿದು, ಮರಗಸಿ ಮಾಡಿಸಿ, .ಕಳೆ ಕೊಚ್ಚಿಸಿದ್ದಾಯ್ತು. ಉಸಿರಾಡಲು ಬಿಡುವಿಲ್ಲದಷ್ಟು ಕೆಲಸ. ಗಿಡಗಳಿಗೆಲ್ಲ ನಾಳೆಯಿಂದಲೇ ಔಷಧಿ ಸ್ಪ್ರೇ ಮಾಡಿಸಬೇಕು ಎಂದುಕೊಂಡ. ಮಳೆ ಶುರುವಾಗುವುದರೊಳಗೆ ಎಲ್ಲಾ ಕೆಲಸ ಮುಗಿಸಿಬಿಡಬೇಕು. ಬ್ಯಾಂಕ್ ಕಡೆ ಹೋಗೋಕೆ ಆಗಿಲ್ಲ. ಲೋನ್ ಆಯ್ತೋ ಇಲ್ವೋ ಗೊತ್ತಾಗಲೇ ಇಲ್ಲ. ಫೋನ್ ಮಾಡೋಣವೆಂದರೆ ಫೋನ್ ಕೆಟ್ಟು ಹೋಗಿದೆ. ಕಾಡು ಕಡಿದು ಭೂಮಿನೆಲ್ಲ ಹದ ಮಾಡಬೇಕು. ಈ ಬಾರಿ ಕಾವೇರಿ ಗಿಡ ಹಾಕಿಸಬೇಕು. ಆದಾದ್ರೆ ಬೇಗ ಫಸಲು ಕೊಡುತ್ತೆ. ರೇಟು ಚೆನ್ನಾಗಿದೆ. ಕಾಫಿ ಜೊತೆ ಏಲಕ್ಕಿ, ಮೆಣಸು ಹಾಕಬೇಕು. ಬಾಳೆ ಹಾಕಿದ್ರೆ ಖರ್ಚಿಗಾಗುತ್ತೆ. ಅಪ್ಪನಿಗೆ ಸಿಟ್ಟು ಬಂದ್ರೂ ಸರಿ ಶುಂಠಿ ಮಾತ್ರ ಹಾಕೋಲ್ಲ. ಈ ಶುಂಠಿ ಹುಚ್ಚು ಹಿಡಿದೇ ಅಪ್ಪ ಲಕ್ಷಕ್ಕೂ ಮಿಕ್ಕಿ ಸಾಲಗಾರನಾಗಿರೋದು. ಈ ಲಾಟರಿ ಬೆಳೆ ಸಹವಾಸವೇ ಬೇಡ. ನಾನು ಅಂದುಕೊಂಡ ಹಾಗೆ ತೋಟದಲ್ಲಿ ಕೆಲಸ ಮಾಡಿಸಿದ್ರೆ ಚಿನ್ನ, ಚಿನ್ನಾನೇ ತೆಗೀಬಹುದು. ಈ ಅಪ್ಪನಿಗೆ ಇದೆಲ್ಲ ಗೊತ್ತಾಗೋಲ್ಲ. ಒಂದೆ ಸಲಕ್ಕೆ ಶ್ರೀಮಂತನಾಗೋ ಆಸೆ ಅವನಿಗೆ. ನಾನಂತೂ ಒಂದೊಂದೇ ಮೆಟ್ಟಿಲು ಏರುವಾತ, ಇನ್ನೆರಡು ವರ್ಷದಲ್ಲಿ ಅಪ್ಪನನ್ನು ಕಾರಿನಲ್ಲಿ ಓಡಾಡಿಸುತ್ತೇನೆ. ಕಾರು ಅಂದ ಕೂಡಲೇ ಭೂಮಿ ನೆನಪಾದಳು. ಅಯ್ಯೋ ಭೂಮೀನ ನೋಡೋಕೆ ಹೋಗಲೇ ಇಲ್ಲವಲ್ಲ. ಈ ಕೆಲಸಗಳ ನಡುವೆ ಭೂಮಿ ಹೆಚ್ಚು ಕಡಿಮೆ ಮರೆಯಾಗಿಯೇ ಹೋಗಿಬಿಟ್ಟಿದ್ದಳು.
ಅಪ್ಪನ ಪಲಾಯನದ ನಂತರ ಭೂಮಿಯ ಮನಸ್ಥಿತಿ ಹೇಗಿದೆಯೋ, ಅಲ್ಲಿನ ಪರಿಸ್ಥಿತಿ ಕಂಡು ಒಂದಿಷ್ಟು ಸಾಂತ್ವನ ನೀಡಬೇಕು ಎಂದುಕೊಂಡಿದ್ದೆಲ್ಲ ನೆನಪಾಗಿ ತಕ್ಷಣವೇ ಪಟ್ಟಣಕ್ಕೆ ಹೊರಟು ನಿಂತ. ಭೂಮಿ ಈಗೇನು ಮಾಡುತ್ತಿರಬಹುದು. ಒಂಟಿಯಾಗಿ ಈ ದೆವ್ವದಂತಹ ಮನೆಯಲ್ಲಿ ಕುಳಿತು ಚಿಂತಿಸುತ್ತ ಕಳೆದು ಹೋಗಿರಬಹುದೇ, ತನ್ನಂತಹ ಗೆಳೆಯನಿದ್ದು ಆಕೆಯ ನೋವಿನಲ್ಲಿ ಒಂದೆರಡು ಸಮಾಧಾನದ ಮಾತುಗಳನ್ನು ಆಡದಿದ್ದರೇ ತಾನಿದ್ದು ಪ್ರಯೋಜನವೇನು? ಈ ಆಲೋಚನೆ ಬಂದೊಡನೆ ತನ್ನ ಬಗ್ಗೆ ತಾನೇ ಹೀನಾಯಗೊಂಡ. ತನಗೆ ತನ್ನ ಕೆಲಸವೇ ಹೆಚ್ಚಾಗಿ ಹೋಯಿತೇ, ತಾನು ಎಂಥ ಸ್ವಾರ್ಥಿಯಾಗಿಬಿಟ್ಟೆ.
ದಾರಿಯುದ್ದಕ್ಕೂ ಹಳಹಳಿಸಿಕೊಳ್ಳುತ್ತಲೇ ಭೂಮಿ ಮನೆಯ ಹಾದಿ ಹಿಡಿದ. ಭೂಮಿಯನ್ನು ಅಲ್ಲಿ ಒಂಟಿಯಾಗಿ ಬಿಡದೆ ತನ್ನೊಂದಿಗೆ ಕರೆದುಕೊಂಡು ಬಂದು ಬಿಡಬೇಕೆಂದು ನಿರ್ಧರಿಸಿಕೊಂಡ. ಅವಳ ಮನಸ್ಸು ಸಮಾಧಾನ ಹೊಂದುವ ತನಕ ನಮ್ಮ ಮನೆಯಲ್ಲಿಯೇ ಇದ್ದುಬಿಡಲಿ. ಯಾವುದೇ ಸಂಬಂಧಗಳಿಲ್ಲದೆ ಒಂದು ಹೆಣ್ಣು
ಯಾರದೋ ಮನೆಯಲ್ಲಿ ಇರಲು ಸಾಧ್ಯವೇ ? ಮನೆಯವರು ತಾನೇ ಏನು ಅಂದುಕೊಂಡಾರು, ಏನಾದರೂ ಅಂದುಕೊಳ್ಳಲಿ ಭೂಮಿ ಮಾತ್ರ ಒಂಟಿಯಾಗಿರಬಾರದು. ಅವನೆದೆ ಮಧುರವಾಗಿ ಕಂಪಿಸಿತು. ತಾನು ಭೂಮಿನಾ ಪ್ರೀತಿಸುತ್ತಾ ಇದ್ದೀನಾ, ಅನುಕಂಪ ಮಾತ್ರವೆ, ತನಗೇಕೆ ಅವಳ ಮೇಲೆ ಇಷ್ಟೊಂದು ಕಾಳಜಿ, ಇದು ಬರೀ ಅನುಕಂಪವೇ, ಅಥವಾ… ಪ್ರೀತಿಯಾಗಿ ಬದಲಾಗಿದೆಯೋ, ಹಾಗೊಂದು ವೇಳೆ ಆಗಿದ್ರೆ ಇದಕ್ಕೆ ಭೂಮಿ ಪ್ರತಿಕ್ರಿಯೆ ಏನು ? ನನ್ನಂಥವನನ್ನು ಭೂಮಿ ಪ್ರೀತಿಸಲು ಸಾಧ್ಯವೇ, ನಾನೆಲ್ಲಿ, ಅವಳೆಲ್ಲಿ?
ಆದರೆ ಅವಳೇ ಅವತ್ತು ಹೇಳಿಬಿಟ್ಟಳಲ್ಲ, ನನ್ನ ಮನಸ್ಸನ್ನು ಅರ್ಥ ಮಾಡಿಕೊಂಡವನು ಸಿಕ್ಕರೆ ಅಂತ, ನಾನು ಅರ್ಥ ಮಾಡಿಕೊಳ್ಳಲಿ ಎಂದು ಪರೋಕ್ಷವಾಗಿ ಸೂಚಿಸಿದ್ದಳೇ, ಅವಳ ಅಪ್ಪ ಕೂಡ ನಿನ್ನಂಥವನೊಬ್ಬ ಸಿಕ್ಕಿ ಅವಳ ಬದುಕು ಹಸನಾದರೆ ಸಾಕು ಎಂದಿರಲಿಲ್ಲವೇ ? ಮನಸ್ಸು ಕನಸುಗಳನ್ನು ಕಟ್ಟಿ ಹಾರಾಡತೊಡಗಿತು. ಅದೇ ಉತ್ಸಾಹದಲ್ಲಿ ಭೂಮಿಯನ್ನು ನೋಡುವ ಕಾತುರ ಹೆಚ್ಚಾಯಿತು.
ಮುಚ್ಚಿದ ಬಾಗಿಲು ವಿಕ್ಕಿಯನ್ನು ಅಣಕಿಸಿ ಅವನ ಉತ್ಸಾಹವೆಲ್ಲ ಇಳಿದು ಹೋಯಿತು. ಭೂಮಿ ಎಲ್ಲಿ ಹೋಗಿರಬಹುದು, ಅಣ್ಣಂದಿರ ಮನೆಗೆ ಹೋಗಿರಬಹುದೇ, ಅಲ್ಲಿ ಹೋಗುವ ಧೈರ್ಯ ಸಾಲದೆ ಸೋತ ಹೆಜ್ಜೆ ಹಾಕುತ್ತ ಹಿಂತಿರುಗಿದ. ಅವಳ ಬಗ್ಗೆ ಮಾಹಿತಿ ಸಿಗದೆ ಅಸ್ವಸ್ಥತೆ ಕಾಡಿ ದುಗುಡಗೊಂಡ. ದಿನಗಳು ಕಳೆದುವೇ ವಿನಃ ಭೂಮಿ ಬಗ್ಗೆ ತಿಳಿಯಲೇ ಇಲ್ಲ.
ಇನ್ನು ಕಾಯುವುದರಲ್ಲಿ ಯಾವ ಅರ್ಥವೂ ಇಲ್ಲ ಎನ್ನಿಸಿ ವಿವ್ಹಲನಾದ. ಅವಳ ಅಣ್ಣಂದಿರನ್ನು ವಿಚಾರಿಸಿಬಿಡಬೇಕು ಎಂದು ಧೈರ್ಯ ತಂದುಕೊಳ್ಳುವ ಪ್ರಯತ್ನದಲ್ಲಿರುವಾಗಲೇ ಅಂದಿನಂತೆ ಭೂಮಿ ಮತ್ತೆ ಧುತ್ತೆಂತು ಪ್ರತ್ಯಕ್ಷಳಾದಳು. ಭೂಮಿ ಅಂದಿನ ಭೂಮಿಯಾಗಿರಲಿಲ್ಲ. ಅಂದಿನ ಹತಾಶೆ, ಚಿಂತೆ, ನೋವು, ಅನಾಸಕ್ತಿ ಇದ್ಯಾವುದೂ ಅವಳಲ್ಲಿರಲಿಲ್ಲ. ಭೂಮಿ ಹೊಸ ಭೂಮಿಯಾಗಿದ್ದಳು. ಬಂದವಳೇ ಅತ್ಯುತ್ಸಾಹದಿಂದ ಅವನೊಂದಿಗೆ ಹರಟಿ ಸೋಜಿಗ ಹುಟ್ಟಿಸಿದಳು.
‘ಅದೆಲ್ಲಿ ಮಾಯವಾಗಿದ್ದೇ ಮಹರಾಯ್ತಿ. ಜಾದು ಏನಾದ್ರೂ ಕಲಿತುಕೊಂಡ್ಯಾ. ಆಗ ಮಾಯ ಆಗಿದ್ದೆ. ಈಗ ಪ್ರತ್ಯಕ್ಷ ಆಗಿದ್ದೀಯಾ. ಏನು ಕಥೆ ನಿಂದು’ ವಿವರ ಕೇಳಿದ.
‘ವಿಕ್ಕಿ ಅದೊಂದು ದೊಡ್ಡ ಕಥೆ. ಅಪ್ಪ ಊರು ಬಿಟ್ಟುಹೋದ ಮೇಲೆ ನನಗೆ ಈ ಪ್ರಪಂಚನೇ ಬೇಡ ಅನ್ನಿಸೋಕೆ ಶುರು ಆಯ್ತು. ಯಾರಿಗೂ ಹೇಳದೆ ಹೊರಟುಬಿಟ್ಟೆ. ಯಾರಿಗಾದ್ರೂ ಮುಖ ತೋರಿಸೋಕೆ ನಾಚಿಕೆ ಎನಿಸಿ ಎಲ್ಲಾದರೂ ದೂರ ಯಾರೂ ಗೊತ್ತಿಲ್ಲದ ಜಾಗಕ್ಕೆ ಹೋಗಬೇಕು ಅಂತ ಹೊರಟಾಗ ನನಗೊಂದು ಜಾಗ ಸಿಕ್ತು. ಅಲ್ಲಿಗೆ ಹೋದ ಮೇಲೆ ಗೊತ್ತಾಯ್ತು ನಾನೆಂಥ ಸಣ್ಣ ಮನಸ್ಸಿನವಳು ಅಂತ. ನನ್ನ ನೋವೇ ಹೆಚ್ಚು ಅಂತ ತಿಳ್ಕೊಂಡು ಆಕಾಶನೇ ಕಳಚಿಬಿತ್ತು ಅನ್ನೋ ಮನಸ್ಥಿತಿಯಲ್ಲಿದ್ದ ನನಗೆ ನನಗಿಂತಲೂ ಹೆಚ್ಚಿನ ನೋವಿನಲ್ಲಿರುವವರು ಇದ್ದಾರೆ ಅಂತ ಗೊತ್ತಾದ ಮೇಲೆ ನಾಚಿಕೆ ಆಗೋಯ್ತು. ಈ ಜಗತ್ತಿನಲ್ಲಿ ಬದುಕೋಕೆ ಬೇರೆ ವಿಧಾನಗಳೂ ಇವೆ ಅಂತ ತಿಳ್ಕೊಂಡ ಮೇಲೆ ಬದುಕಿನಲ್ಲಿ ಆಸಕ್ತಿ ಬಂದಿದೆ ವಿಕ್ಕಿ. ಅಪ್ಪನ ಥರಾ ವಿಲಾಸಿ ಆಗದೆ, ಅಮ್ಮನ ಥರಾ ವಿರಾಗಿ ಆಗದೆನೂ ಮನ:ಶಾಂತಿ ಹೊಂದೋ ದಾರಿ ಕಂಡುಕೊಂಡೆ. ಅದೇ ದಾರೀಲಿ ಹೋಗೋ ನಿರ್ಧಾರಾನೂ ಮಾಡಿದ್ದೀನಿ. ಬಸವಣ್ಣನವರಂತೆ ಕಾಯಕವೇ ಕೈಲಾಸ ಅಂತ ತಿಳ್ಕೊಂಡು, ಸಂಸಾರದಲ್ಲಿ ಇದ್ದೂ ಕೂಡ ಜನಸೇವೆ ಮಾಡೊ ಮನಸ್ಸಿರೋ ಒಂದು ಒಳ್ಳೆ ಹೃದಯ ನನ್ನ ಜೊತೆ ಹೆಜ್ಜೆ ಹಾಕೋಕೆ ಸಿದ್ಧವಾಗಿದೆ. ಆ ಸಂತೋಷನಾ ನಿನ್ನೊಂದಿಗೆ ಹಂಚಿಕೊಳ್ಳೋಕೆ ಬಂದಿದ್ದೀನಿ ವಿಕ್ಕಿ. ಸರಳವಾಗಿ ಬದುಕಬೇಕು, ನಾಲ್ಕು ಜನರ ನೋವನ್ನು ಹಂಚಿಕೊಳ್ಳಬೇಕು. ಆ ನೋವನ್ನು ನಿವಾರಿಸೋ ಪ್ರಯತ್ನಪಡಬೇಕು ಅನ್ನೋ ಆದರ್ಶ ಇರೋ ವಿವೇಕ್‌ನ ಮದ್ದೆ ಮಾಡ್ಕೊತೀನಿ. ಅಪ್ಪ ಬಿಟ್ಟು ಹೋಗಿರೋದನ್ನೆಲ್ಲಾ ನನ್ನ ಕನಸಿಗಾಗಿ, ಆದರ್ಶಕ್ಕಾಗಿ, ಜನಸೇವೆಗಾಗಿ ಬಳಸಿ ನೆಮ್ಮದಿ ಪಡಬೇಕು ಅಂತ ಇದ್ದೀನಿ ವಿಕ್ಕಿ. ನನ್ನ ಕನಸು, ಆದರ್ಶ ಸಾಕಾರವಾಗಲಿ ಅಂತ ಹರಸು ವಿಕ್ಕಿ. ಬದುಕು ಬೇಡವೆನಿಸಿದಾಗ ಜನಸೇವೆ ನನ್ನ ಕೈಬೀಸಿ ಕರೆದಿದೆ. ನೊಂದ ಮನಗಳಿಗೆ ತಂಪೆರೆಯುವ ಮನಸ್ಸುಗಳ ಜೊತೆ ಹೆಜ್ಜೆ ಹಾಕುವ ನಿರ್ಧಾರ ಮಾಡಿದ್ದೀನೆ’ ಎಂದವಳ ಕಣ್ಣುಗಳಲ್ಲಿ ಕಾಂತಿ ಹೊಳೆಯುತ್ತಿತ್ತು. ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಹೋಗುವವಳಿದ್ದ ಭೂಮಿಯ ಮಾತುಗಳಿಂದ ಮನಸ್ಸು ನಿರಾಶೆಯಿಂದ ತಪ್ತವಾದರೂ, ಎಲ್ಲವನ್ನೂ ಮೀರಿ ನಿಂತ ಅವಳಿಗೆ ಒಳ್ಳೆಯದಾಲೆಂದು ಹಾರೈಸಿದ.
‘ನೀನಿಟ್ಟ ಹೆಜ್ಜೆ ಹಸಿರಾಗಲಿ, ಎಂದಾದರೊಮ್ಮೆ ನೀ ಒಂಟಿ ಎನಿಸಿದರೆ ಈ ಬಡ ಗೆಳೆಯನನ್ನು ನೆನೆದು ಬಂದುಬಿಡು’ ಎಂದು ವಿದಾಯ ಹಾಡಿದ.
- ಎನ್.ಶೈಲಜಾ ಹಾಸನ.
