ದಾಸಪುರಂದರ (ಭಾಮಿನಿಯಲ್ಲಿ)

ವಿಠಲನೆಂದ ಪುರಂದರಾ ಗಢ ಸಟೆಯಿದಲ್ಲವು ನೀವು ಬಲ್ಲಿರೆ, ದಿಟವ ಪೇಳಿದ ವಿಪ್ರನವ ತಾ ಕುರುಹನರುಹಿದನು…ಛಂದಸ್ಸು ಕವಿಯತ್ರಿ ಬಿಟ್ಟೀರ ಚೋಂದಮ್ಮ ಶಂಭು ಅವರ ಈ ಕವನವನ್ನು ತಪ್ಪದೆ ಮುಂದೆ ಓದಿ…

ಬಡ ಶರೀರವ ತುಂಡು ಬಟ್ಟೆಯೊ-
ಳಡಗಿಸುತ್ತಲಿ ಮಗನ ಜೊತೆಯಲಿ
ನಡೆದು ಬಂದನು ಬಿಕ್ಕೆಯಾಚಿಸೆ ವಣಿಕನಂಗಡಿಗೆ
ಕೊಡದೆ ಹಣವನು ಕಳುಹಿಬಿಟ್ಟನು
ಮಡದಿ ಮೂಗುತಿ ಬೇಡಿ ತಂದನು
ಬಡವನಾ ಬ್ರಾಹ್ಮಣನು ಬಂದನು ಮಾರಲಂಗಡಿಗೆ

ಪೆತ್ತ ಮಗನಿಗೆ ಮುಂಜಿಯೆಂದನು
ನತ್ತು ಮಾರಲಿಕಿಲ್ಲಿ ಬಂದನು
ಸೊತ್ತುಯೆನ್ನದೆ ತಿಳಿಯಬಂದನು ಜಡಿದು ಬೀಗವನ
ಎತ್ತ ಪೋದನೆ ವಿಪ್ರನವ ತಾ –
ನೆತ್ತ ಪೋದನು ಕಾಣದಂತೆಯೆ
ಸುತ್ತ ಹುಡುಕಲು ಕುರುಹು ಕಾಣದಿರರಸಲೆಲ್ಲವನ

ವಿಠಲನೆಂದ ಪುರಂದರಾ ಗಢ
ಸಟೆಯಿದಲ್ಲವು ನೀವು ಬಲ್ಲಿರೆ
ದಿಟವ ಪೇಳಿದ ವಿಪ್ರನವ ತಾ ಕುರುಹನರುಹಿದನು
ಘಟದ ಮತಿಯೊಳಗಿಟ್ಟು ಜಾನವ
ನೆಟ್ಟನಾವೈರಾಗ್ಯ ಬೀಜವ
ಬಿಟ್ಟು ಪೋದವು ತನುವನಡರಿದ ಮೋಹ ಧನಮದವು

ಸಿರಿನಿವಾಸನು ದಾನ ಮಾಡುತ
ಕರೆದು ನೀಡಿದ ಸಕಲ ಸಂಪದ
ಸಿರಿಯ ತೊರೆಯುತ ಪಿಡಿದು ದಂಡಿಗೆ ದಾಸ ತಾನಾದ
ಅರಸುತಲೆದನು ಹಾದಿಬೀದಿಯ
ಹರಿಯ ಕಾಣುವ ಛಲದಿ ಹಾಡುತ
ಕರೆಯುತಿದ್ದನು ಪಲವು ನಾಮವ ಪದ್ಯ ರಚಿಸುತಲಿ


  •   ಬಿಟ್ಟೀರ ಚೋಂದಮ್ಮ ಶಂಭು, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading