ಈ ಕೃತಿ ರಚಿಸಿದ್ದು ಮುಂಬಯಿನ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್,ಲಂಡನಿನ ಬ್ರಿಟಿಷ್ ರಾಯಲ್ ಸೊಸೈಟಿ ಆಫ್ ಆರ್ಟ್ಸ್ ನಲ್ಲಿ ಕಲಿತ ಎಸ್.ಎಲ್.ಹಲ್ದಂಕರ್ ಎಂಬ ಪ್ರಸಿದ್ಧ ಕಲಾವಿದರಾದರೂ, ಈಗಲೂ ಬಹಳಷ್ಟು ಮಂದಿ ತಪ್ಪಾಗಿ ತಿಳಿದುಕೊಂಡಿರುವುದು ರಾಜಾ ರವಿವರ್ಮ ಎಂಬುದಾಗಿಯೇ..!!
ಮೈಸೂರಿನ ಜಗನ್ಮೋಹನ ಅರಮನೆಯ ಆರ್ಟ್ ಗ್ಯಾಲರಿಯಲ್ಲಿರುವ ದೀಪಧಾರಿಣಿ ಕಲಾಕೃತಿಯ ರೂಪದರ್ಶಿಯ ನಿಧನದ ಬಗ್ಗೆ ಇವತ್ತು ಬೆಳಿಗ್ಗೆ ಒಂದು ಪೋಸ್ಟ್ ಹಾಕಿದ್ದೆ. ಅದನ್ನು ಹಾಕಿದಾಗ,ನಾನು ಹಾಕಿದ ಫೋಟೋ ಮೂಲಕೃತಿಯದಲ್ಲ ಎಂದು ಗೊತ್ತಿರಲಿಲ್ಲ. ತಕ್ಷಣ ಗೆಳೆಯ, ಸ್ವತಃ ಚಿತ್ರ ಕಲಾವಿದ,ಚಿತ್ರ ನಿರ್ದೇಶಕ ,”ಹರಿವು” ಖ್ಯಾತಿಯ ಮಂಸೋರೆ ಇದು ಜಲವರ್ಣದ ಮೂಲಕೃತಿಯ ಫೋಟೋ ಅಲ್ಲ ಅಂದರು.

ಅಸಲಿ ಕಲಾಕೃತಿಯ ಫೋಟೋ..

ನಕಲಿ ಆಯಿಲ್ ಪೈಂಟ್ ಕಲಾಕೃತಿ ಫೋಟೋ..
ನಂತರ ಮತ್ತೆ ಜಾಲತಾಣದಲ್ಲಿ ಜಾಲಾಡಿದಾಗ ಮೂಲ ಜಲವರ್ಣ ಕೃತಿಯ ಫೋಟೋ ಸಿಕ್ಕಿತು. ಅದನ್ನು ಬದಲಾಯಿಸಿ ಹಾಕಿದೆ..
ಆದರೆ ಹಾಗೆ ಜಾಲಾಡುವಾಗ ಇನ್ನಷ್ಟು ಕುತೂಹಲಕರ ಮಾಹಿತಿ ಸಿಕ್ಕಿತು. ಈ ಕೃತಿ ರಚಿಸಿದ್ದು ಮುಂಬಯಿನ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್,ಲಂಡನಿನ ಬ್ರಿಟಿಷ್ ರಾಯಲ್ ಸೊಸೈಟಿ ಆಫ್ ಆರ್ಟ್ಸ್ ನಲ್ಲಿ ಕಲಿತ ಎಸ್.ಎಲ್.ಹಲ್ದಂಕರ್ ಎಂಬ ಪ್ರಸಿದ್ಧ ಕಲಾವಿದರಾದರೂ, ಈಗಲೂ ಬಹಳಷ್ಟು ಮಂದಿ ತಪ್ಪಾಗಿ ತಿಳಿದುಕೊಂಡಿರುವುದು ರಾಜಾ ರವಿವರ್ಮ ಎಂಬುದಾಗಿಯೇ..!!

ಎಸ್.ಎಲ್.ಹಲ್ದಂಕರ್
ಈ ಜಗತ್ಪ್ರಸಿದ್ಧ ಕಲಾಕೃತಿಗೆ ರೂಪದರ್ಶಿಯಾದವರು ಮತ್ತಾರೂ ಅಲ್ಲ, ಹಲ್ದಂಕರರ ಮಗಳು ಗೀತಾ ಹಲ್ದಂಕರ್. ಆಗ ಆಕೆ ಹದಿನಾರರ ಹರೆಯದ ಷೋಡಶಿ ಚೆಲುವೆ. ಕೈಯಲ್ಲಿ ಹಿಡಿದಿರುವ ದೀಪದ ಬೆಳಕಿನ ಪ್ರಭೆಯಲ್ಲಿ ಉಜ್ವಲವಾಗಿ ಹೊಳೆಯುವ ಮಗಳ ಸ್ನಿಗ್ಧ ಸೌಂದರ್ಯವನ್ನು, ಹಲ್ದಂಕರ್ ತಮ್ಮ ಕಲಾಕೃತಿಯಲ್ಲಿ ಅದೆಷ್ಟು ಪರಿಣಾಮಕಾರಿಯಾಗಿ , ಸುಂದರವಾಗಿ ಚಿತ್ರಿಸಿದ್ದಾರೆ ನೋಡಿ.!! ಮದುವೆಯ ನಂತರ ಗೀತಾ ಕೃಷ್ಣಕಾಂತ್ ಉಪ್ಳೇಕರ್ ಆಗಿದ್ದ ಅವರು, ತಮ್ಮ 102 ನೇ ವಯಸ್ಸಿನಲ್ಲಿ ಈಚೆಗೆ ತೀರಿಕೊಂಡರು. ನೂರರ ಹರೆಯದಲ್ಲೂ ಮಾಸದ ಅವರ ಕಾಲಾತೀತ ಚೆಲುವಿನ ಸುಂದರ ಚಿತ್ರವನ್ನೂ ಅವರ ಕುಟುಂಬದ ಚಿತ್ರವನ್ನೂ ಇಲ್ಲಿ ಹಾಕಿದ್ದೇನೆ.!!
ಜಗನ್ಮೋಹನ ಅರಮನೆಯ ಆರ್ಟ್ ಗ್ಯಾಲರಿಯಲ್ಲಿ ರವಿವರ್ಮ ಕಲಾಕೃತಿಗಳನ್ನಿಟ್ಟ ಕೋಣೆಯ ಬದಿಯಲ್ಲೇ ಹಲ್ದಂಕರ್ ಕೃತಿ ಇಟ್ಟದ್ದು ಒಂದು ಕಾರಣವಾದರೆ, ಸ್ವಲ್ಪ ಮಟ್ಟಿಗೆ ರವಿವರ್ಮನ ಶೈಲಿಯನ್ನು ಈ ಕೃತಿ ಹೋಲುವುದೂ ಇದಕ್ಕೆ ಕಾರಣವಿರಬಹುದು..!!

ಇದೆಲ್ಲಕ್ಕಿಂತ ಮುಖ್ಯವಾಗಿ,ಜವಾಬ್ದಾರಿಯುಳ್ಳ ಮಾಧ್ಯಮಗಳೂ ಇದನ್ನು ರವಿವರ್ಮನ ಅದ್ಭುತ ಕಲಾಕೃತಿಯೆಂದು ಹಾಡಿ ಹೊಗಳಿದ್ದು..!! ಅದಕ್ಕೆ ಉದಾಹರಣೆಯಾಗಿ ಕೆಳಗೆ ಕೊಟ್ಟಿರುವ, The Hindu ಪತ್ರಿಕೆಯಲ್ಲಿ ಹಿಂದೊಮ್ಮೆ ಪ್ರಕಟವಾದ ಲೇಖನದ ಕುರಿತಾದ ತುಣುಕೊಂದನ್ನು ನೋಡಿ..
ಅದರಲ್ಲಿ,ದೀಪಧಾರಿಯಾದ ತಿರುವಾಂಕೂರಿನ ಮಹಿಳೆಯ ಚಿತ್ರ ರವಿವರ್ಮನ ಅದ್ಭುತ ಕೃತಿ ಎಂದೆಲ್ಲ ಬರೆದಿದ್ದಾರೆ. ಹಿಂದೂ ನಂತಹ ಪತ್ರಿಕೆಯೇ ಹೀಗೆ ಬರೆದರೆ ಏನು ಮಾಡೋಣ..!!
ಇದಕ್ಕಿಂತಲೂ ತಮಾಷೆಯ ಸಂಗತಿ ಎಂದರೆ ಅಮೆಜಾನ್ ನಲ್ಲಿ ರವಿವರ್ಮ ಮತ್ತು ಹಲ್ದಂಕರ್ ಇಬ್ಬರೂ ಬರೆದ Glow of Hope ಚಿತ್ರದ ಪ್ರತಿಕೃತಿ ಮಾರಾಟಕ್ಕಿದೆ ಎಂಬ ಜಾಹೀರಾತು ನೋಡಿ…
ಚಿತ್ರ ನೋಡಿದರೆ..
ಎರಡೂ ಒಂದೇ ಚಿತ್ರ..!!

ಮತ್ತೂ ತಮಾಷೆಯ ಸಂಗತಿ ಎಂದರೆ, ಅಮೆಜಾನ್ ನಲ್ಲಿ ಮಾರಾಟಕ್ಕಿರುವ ಅಥವಾ ಎಲ್ಲೆಡೆ ಜಾಲತಾಣದಲ್ಲಿ ಪ್ರಸಿದ್ಧವಾಗಿ ಜನಪ್ರಿಯಗೊಂಡಿರುವ ಕಲಾಕೃತಿ – ಹಲ್ದಂಕರ್ ದೂ ಅಲ್ಲ ರವಿವರ್ಮನದೂ ಅಲ್ಲ..!!
ಅಲ್ಲೆಲ್ಲ ಪ್ರಸಿದ್ಧವಾಗಿರುವುದು ಹಲ್ದಂಕರ್ ರ ಜಲವರ್ಣ ಮೂಲಕೃತಿಯನ್ನು , ಆಯಿಲ್ ಪೈಂಟ್ ನಲ್ಲಿ ಯಾರೋ ಅನಾಮಧೇಯ ಕಲಾವಿದ Re-Copy ಮಾಡಿರೋ ನಕಲೀ ಕೃತಿ..!
ಇಲ್ಲಿ ಜಲವರ್ಣದ ಅಸಲಿ, ಆಯಿಲ್ ಪೈಂಟಿನ ನಕಲಿ- ಎರಡೂ ಚಿತ್ರ ಹಾಕಿದ್ದೇನೆ. ಎರಡೂ ಚಿತ್ರ ನೋಡಿದರೆ- ಅಸಲೀ ಚಿತ್ರಕ್ಕಿಂತ ನಕಲಿ ಚಿತ್ರವೇ ತುಂಬಾ ಚೆನ್ನಾಗಿದೆ ಅಂತ ಖಂಡಿತವಾಗಿ ನೀವು ಕೆಲವರಾದರೂ ಹೇಳಿಯೇ ಹೇಳುತ್ತೀರಿ..!!
ಅದಕ್ಕೆ ಕಾರಣವೆಂದರೆ, ಆಯಿಲ್ ಪೈಂಟಿನಲ್ಲಿ ಆಕರ್ಷಕವಾಗಿ ಮಿರಿ ಮಿರಿ ಮಿಂಚುವಂತೆ ಹೊಳಪು ನೀಡಲು ಸಾಧ್ಯವಿದೆ..!! ಆದರೆ ಜಲವರ್ಣದ ಈ ಕಲಾಕೃತಿಯಲ್ಲಿ ಕಾಣಿಸುವಂತಹ ನೈಜತೆ,ನೈಪುಣ್ಯತೆ,3ಡಿ ಪರಿಣಾಮ – ಆಯಿಲ್ ಪೈಂಟಿನಲ್ಲಿ ಕಾಣಿಸುವುದಿಲ್ಲ..!! ಚಿತ್ರಕಲೆ ಬಲ್ಲವರಿಗೆ ಗೊತ್ತು -ಜಲವರ್ಣದಲ್ಲಿ ಅಂತಹ ಚಿತ್ರ ಬರೆಯಲು ಅದೆಷ್ಟು ಶೃದ್ಧೆ, ತಾಳ್ಮೆ, ನೈಪುಣ್ಯತೆ ಬೇಕೆಂಬುದು.ನಿಜಕ್ಕೂ ಇದೊಂದು Masterpiece. .!!
ಹಲ್ದಂಕರ್ 1946ರಲ್ಲಿ ಈ ಚಿತ್ರವನ್ನು ಮೈಸೂರು ದಸರಾ ವಸ್ತುಪ್ರದರ್ಶನ ಸ್ಫರ್ಧೆಗೆ ಕಳಿಸಿದ್ದರು.ಅದಕ್ಕೆ ಮೊದಲ ಬಹುಮಾನ ಬಂತು. ಮಹಾರಾಜರು ಈ ಕೃತಿಯನ್ನು 300 ರೂಪಾಯಿಗಳಿಗೆ ಕೊಂಡುಕೊಂಡು ಅರಮನೆಯಲ್ಲಿರಿಸಿಕೊಂಡಿದ್ದರಂತೆ.ನಂತರ ಜಗನ್ಮೋಹನ ಆರ್ಟ್ ಗ್ಯಾಲರಿಯಲ್ಲಿರಿಸಿದರು.!!
ಆದರೆ..ಅಲ್ಲಿಂದ ಇಲ್ಲೀ ವರೆಗೂ ನಕಲಿ ಶಾಮರು ಹಲ್ದಂಕರ್ ಕೃತಿಯನ್ನು ಕಾಪಿ ಮಾಡಿ,ಮಾರಿ ಬಾಚಿದ್ದು ಕೋಟಿ ಕೋಟಿ ರೂಪಾಯಿಗಳು..!!
- ಗಿರಿಧರ ಕಾರ್ಕಳ
