
ದೀಪಾವಳಿ ಹಾಗೂ ರೈತಾಪಿಗೂ ಈ ಪ್ರಮಾಣದ ಅವಿನಾಭಾವ ಸಂಬಂಧವಿದ್ದರೂ ದೇಶವಿದೇಶಗಳಲ್ಲಿ ಪ್ರಚಲಿತವಾಗಿರುವುದು ಬೆಳಕಿನ ಹಬ್ಬವೆಂತಲೇ. ಈ ಬೆಳಕು ಪ್ರಸಿದ್ದಿಗೆ ಬಂದಿರುವುದು ರೈತ ತನ್ನ ಗದ್ದೆಗೆ ಹಚ್ಚುವ ಬೆಳಕಿನ ಮೂಲಕವಲ್ಲ. ಮತ್ಯಾವುದು ಎನ್ನುವುದನ್ನುಲೇಖಕ ನೆಂಪೆ ದೇವರಾಜ್ ಅವರು ಅರ್ಥಪೂರ್ಣವಾಗಿ ವಿವರಿಸಿದ್ದಾರೆ, ತಪ್ಪದೆ ಓದಿ…
ಬೆಳಕಿನ ಹಬ್ಬವೆನ್ನುತ್ತೇವೆ. ಈ ಭರ್ಜರಿ ಬೆಳಕು ಭರ್ಜರಿಯಾಗಿ ಅನಾವರಣವಾಗುವುದು ಬಂಗಾರದ ಅಂಗಡಿ, ದೊಡ್ಡ ಹೋಟೆಲು,ಕಿರಾಣಿ ಅಂಗಡಿಗಳಲ್ಲಿ ಹಚ್ಚುವ ಝಗ ಝಗಿಸುವ ದೀಪಗಳ ಮೂಲಕ ಮಾತ್ರ. ಕಿವಿ ಕೆಪ್ಪಾಗುವಂತಹ ಪಟಾಕಿಗಳ ಸದ್ದು. ಕಣ್ಣು ಕೋರೈಸುವ ವಿವಿಧ ಚಿತ್ತಾರದ ಕೃತಕ ಬೆಳಕು.
ದೀಪಾವಳಿ ಎಂಬುದು ಅಂಗಡಿ ಮುಂಗಟ್ಟುಗಳ,ವ್ಯಾಪಾರ ವ್ಯವಹಾರಸ್ಥರ ಹಬ್ಬವಾಗಿ ಮಾರ್ಪಟ್ಟಿದೆಯೇ ವಿನಃ ಇದು ವ್ಯವಸಾಯಗಾರರ ಹಬ್ಬವೆಂಬುದೇ ಮರೆತು ಹೋಗುವ ಮಟ್ಟಕ್ಕೆ ತಂದಿಡುವಲ್ಲಿ ನಮ್ಮ ಎಲೆಕ್ಟ್ರಾನಿಕ್ ಮಾಧ್ಯಮಗಳು ಯಶಸ್ವಿಯಾಗಿವೆ..ಇಡೀ ದೀಪಾವಳಿಯನ್ನು ನಗರಗಳಿಗೆ ಸೀಮಿತಗೊಳಿಸಿ ಅಲ್ಲಿ ಸುಡುವ ಲಕ್ಷಾಂತರ ರೂಪಾಯಿಗಳ ಪಟಾಕಿಗಳನ್ನು ಹಾಗೂ ಅದು ಹೊರಹೊಮ್ಮಿಸುವ ಬೆಳಕನ್ನು ದೀಪಾವಳಿ ಎಂದು ಬಿಂಬಿಸುವ ಮುನ್ನ ನಾವೆಲ್ಲ ಯೋಚಿಸಬೇಕಾದ್ದು ಏನು? ಬಲಿಪಾಡ್ಯಮಿಯ ದಿನ ಬಲೀಂಧ್ರನ ಪೂಜೆ, ತುಳಸಿ ದೀಪ, ಗೋಪೂಜೆ ಹೀಗೆ ಎಡೆ ಬಿಡದೆ ನಡೆವ ಕೆಲಸದಲ್ಲಿ ನಮ್ಮ ಹಳ್ಳಿಯಲ್ಲಿ ರಾತ್ರಿ ಅಂದರೆ ಸೂರ್ಯ ಮರೆಯಾಗುವ ಹೊತ್ತಿಗೆ ಒಂದೊಂದೇ ಪ್ರಜ್ವಲಿಸುವ ದೊಂದಿಗಳು ಹೊಬರಲಾರಂಭಿಸುತ್ತವೆ, ತಲೆಗೆ ಮುಂಡಾಸು ಸುತ್ತಿಕೊಂಡು ಹೊರ ಬರುವ ರೈತರ ಉಮ್ಮಸ್ಸಿನ ದೃಶ್ಯವೇ ಮನೋಹರ.ದೂರ ದೂರದ ಗದ್ದೆಗಳಿಗೆ ಧಾವಿಸುವ ಮುಸ್ಸಂಜೆಯಲ್ಲಿ ಪ್ರಜ್ವಲಿಸುವ ದೊಂದಿಗಳು ನೀಡುವ ಮುದಕ್ಕೆ ಸರಿಸಾಟಿಯಾದುದು ಯಾವುದಿದೆ.ಪ್ರತಿ ಮನೆಯ ಯಜಮಾನರುಗಳ ಕೈಯಲ್ಲಿ ಎರಡು ಉರಿವ ಕೆಂಪಗಿನ ದೊಂದಿಗಳು,ಕೈಚೀಲದಲ್ಲಿ ಪರಿಮಳಯುಕ್ತ ಹೂವುಗಳನ್ನು ಕಟ್ಟಿಕೊಂಡ ಚೀಲಗಳು.ಮುಂಡಾಸು ಸುತ್ತಿಕೊಂಡ ಮಕ್ಕಳು ಮರಿಗಳ ಉತ್ಸಾಹ ಮೇರೆ ಮೀರುವಂತದ್ದು.

ಫೋಟೋ ಕೃಪೆ : youtube
ಘಮ ಘಮಿಸುವ ಪರಿಮಳದ ಮುಂಡುಗ ಎಂಬ ಉದ್ದವಾದ ದೊಡ್ಡ ಹೂವುಗಳ ಮಧ್ಯೆ ಒಟ್ಟು ಒಂಭತ್ತು ಬಗೆಯ ಸಣ್ಣ ಪುಟ್ಟ ಹೂವು ,ಕಾಯಿ, ಹಣ್ಣುಗಳನ್ನು ಸೇರಿಸಿ ನಾರಿನಲ್ಲಿ ಕಟ್ಟಲಾಗುತ್ತದೆ. ಪ್ರತಿ ಗದ್ದೆ, ಗೊಬ್ಬರಗುಂಡಿ,ನಾಗರ ಬನ, ತೋಟ, ದೇವರ ಬನ,ತಮ್ಮಪ್ರೀತಿಯ ಎಲ್ಲ ಸ್ಥಳಗಳಿಗೂ ಬಂದು ಪುಂಡಿಯ ಕೋಲನ್ನು ಹುಗಿದು ಧಗ ಧಗಿಸುವ ದೊಂದಿಯಿಂದ ತುದಿಯಲ್ಲಿ ಬಿಳಿಯ ಬಟ್ಟೆಯಿಂದ ಲೇಪಿತವಾದ ಬತ್ತಿಗೆ ಬೆಂಕಿ ಹಚ್ಚಲಾಗುತ್ತದೆ, ಹಸುರಿನಿಂದ ಕಂಗೊಳಿಸುವ ನೂರಾರು ಎಕರೆ ಗದ್ದೆಯ ಕೋಡಿಯ ತುಂಬಾ ಪುಂಡಿಯ ಕೋಲಗಳು ಉರಿಯಲಾರಂಭಿಸುತ್ತವೆ, ಅಲ್ಪ ಸ್ವಲ್ಪ ಕತ್ತಲೆಯ ಸಂದರ್ಭದಲ್ಲಿ ಹೊರ ಹೊಮ್ಮುವ ಬೆಳಕು ಅದ್ಭುತ ಲೋಕವನ್ನೇ ಸೃಷ್ಟಿಸುತ್ತದೆ.ಪ್ರತಿ ಗದ್ದೆಗೆ ಒಂದು ಪುಂಡಿ ಕೋಲಿನ ದೀಪ, ಒಂದು ಹೂ ಗುಚ್ಚ ಹಾಕಿದ ಕೂಡಲೆ” ಹಂಡೋಳಿಗೆ ಹುಂಡೋಳಿಗೆ ಲಕ್ಷ ಕೋಲು ದೀಪೋಳಿಗೆ” ಎಂದು ಜೋರಾಗಿಗೆ ಕೂಗು ಹಾಕಲಾಗುತ್ತದೆ.ಪ್ರತಿ ಗದ್ದೆ ಬನ,ತೋಟದಲ್ಲೂ ಕೂಗು ಮೊಳಗುತ್ತದೆ.

ಪ್ರತಿ ಗದ್ದೆಗೆ ಪ್ರತಿ ಕೋಲು ಹಚ್ಚುವಾಗಲೂ ನೂರಾರು ಹುಡುಗರು ದೊಡ್ಡವರ ಜೊತೆ ಸೇರಿ ಗದ್ದೆ ಕೋಡಿಯಲ್ಲೆಲ್ಲ ಕುಶಿಯಿಂದ ‘ದೀಪೋಳಿಗೆ’ ಹೊಡೆವ ಹಬ್ಬದ ಮುಂದೆ ಇತರೆ ಯಾವ ಕುಷಿಯೂ ನಗಣ್ಯ.ಈ ರೀತಿ ತಾವು ಬೆಳೆವ ಗದ್ದೆಗೆ ದೀಪ ಹಚ್ಚುವುದರ ಹಿಂದೆ ಒಂದು ತರ್ಕವೂ ಇದೆ. ಸರಿಯಾಗಿ ದೀಪಾವಳಿಗಿಂತ ಹದಿನೈದು ದಿನ ಮುಂಚೆ ನಡೆವ ಭೂಮಿ ಹುಣ್ಣಿಮೆ ಹಬ್ಬದಂದು ಭೂಮಿ ತಾಯಿಗೆ ನಸುಹಕಿನಲ್ಲಿ ಎದ್ದು ನೂರಾರು ತರಹದ ಪಲ್ಯಗಳ ಅಡುಗೆಯ ಅನ್ನವನ್ನು “ಅಚ್ಚಂಬಲಿ ಹಾಲಂಬಲಿ .. ಬೂಮಿ ಉಂಡು ಹೋಗು”ಎಂದು ಹೇಳಿ ಪ್ರತಿ ಗದ್ದೆಗೂ ಹಾಕಿ ಬಂದಿರುತ್ತಾರೆ. ಆದರೆ ಭೂಮಿ ತಾಯಿ ಆ ದಿನ ಊಟ ಮಾಡಿರುವುದಿಲ್ಲವಂತೆ.ದೀಪಾವಳಿಯ ಗೋ ಪೂಜೆ ಮಾಡಿದ ನಂತರ ಆಕೆಯ ಊಟ. ಆಕೆ ಊಟ ಮಾಡಲು ಅನುಕೂಲವಾಗಲು ಅಂದರೆ ಕೋಲುಗಳಿಗೆ ಹಚ್ಚಿದ ಬೆಳಕಿನಲ್ಲಿ ಈಕೆಯ ಊಟ.

ಫೋಟೋ ಕೃಪೆ : hindustantimes
ದೀಪಾವಳಿ ಹಾಗೂ ರೈತಾಪಿಗೂ ಈ ಪ್ರಮಾಣದ ಅವಿನಾಭಾವ ಸಂಬಂಧವಿದ್ದರೂ ದೇಶವಿದೇಶಗಳಲ್ಲಿ ಪ್ರಚಲಿತವಾಗಿರುವುದು ಬೆಳಕಿನ ಹಬ್ಬವೆಂತಲೇ. ಆದರೆ ಈ ಬೆಳಕು ಪ್ರಸಿದ್ದಿಗೆ ಬಂದಿರುವುದು ರೈತ ತನ್ನ ಗದ್ದೆಗೆ ಹಚ್ಚುವ ಬೆಳಕಿನ ಮೂಲಕವಲ್ಲ.ದೊಡ್ಡ ದೊಡ್ಡ ಕಾರ್ಖಾನೆಯ ಮಾಲೀಕರು, ಬಡ್ಡಿ ವ್ಯವಹಾರಸ್ಥರು,ರಿಯಲ್ ಎಸ್ಟೇಟ್ ಧಣಿಗಳು,ಗುತ್ತಿದಾರ ಕಂಪೆನಿಗಳು ಮಾಡುವ ಲಕ್ಷ್ಮೀ ಪೂಜೆ ಪೂಲಕ ಇಂದು ಇದು ಝಗಝಗಿಸಸುತ್ತಿದೆ.ಅಂದು ಹಚ್ಚುವ ಪಟಾಕಿಗಳಿ,ದೀಪಗಳಿಗೆ, ದುಡ್ಡಿನ ಪೂಜೆಗಾಗಿಯೇ ದೀಪಾವಳಿ ನಡೆಯುತ್ತಿದೆ ಎಂದು ಬಿಂಬಿಸುವ ಮೂಲಕ ದೀಪಾವಳಿಯನ್ನು ಸಂಪೂರ್ಣ ಕುಬ್ಕಗೊಳಿಸಲಾಗಿದೆ. ನಮ್ಮ ಮಾಧ್ಯಮಗಳು ಹೇಳಿದ್ದನ್ನೇ ಹತ್ತಾರು ಸಲ ಹೇಳುತ್ತಾ ದೂರದರ್ಶನವನ್ನು ಬಂದ್ ಮಾಡುವಂತೆ ಒತ್ತಾಯಿಸುತ್ತವೆ. ಆದರೆ ಇನ್ನೂ ಹೇಳಲು ಸಾಧ್ಯವಾಗದ ವಿಷಯಗಳು ವಿಶಾಲ ಭಾರತದಲ್ಲಿ ತುಂಬಿವೆ ಎಂಬುದು ತಿಳಿದಾಗ ಮಾಧ್ಯಮಗಳ ಬಾಲ್ಯಾವಸ್ಥೆ ಕಮ್ಮಿಯಾಗಬಹುದು.
- ನೆಂಪೆ ದೇವರಾಜ್ (ಲೇಖಕರು, ಪತ್ರಕರ್ತರು), ತೀರ್ಥಹಳ್ಳಿ
