“ದೇಜಪ್ಪಣ್ಣನ ಹಠಯೋಗ” ಕೃತಿ ಪರಿಚಯ

ಖ್ಯಾತ ಬರಹಗಾರರೂ, ವಿಮರ್ಶಕರೂ ಆದ ಡಾ. ಬಿ. ಜನಾರ್ದನ ಭಟ್ ಅವರ ಮುಖ್ಯ ಕಥೆಗಳ ಹೊಸ ಸಂಕಲನ “ದೇಜಪ್ಪಣ್ಣನ ಹಠಯೋಗ”. ಇದರಲ್ಲಿ ಅವರ ಸೊಗಸಾದ 21 ಕಥೆಗಳಿವೆ. ಈ ಕೃತಿಯ ಕುರಿತು ಲೇಖಕಿ ಕವಿತಾ ಹೆಗಡೆ ಅಭಯಂ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ,ತಪ್ಪದೆ ಮುಂದೆ ಓದಿ… 

ಪುಸ್ತಕ : “ದೇಜಪ್ಪಣ್ಣನ ಹಠಯೋಗ”
ಲೇಖಕರು : ಡಾ. ಬಿ. ಜನಾರ್ದನ ಭಟ್
ಪ್ರಕಾರ : ಸಣ್ಣಕತೆಗಳು

ಜೊತೆಗೆ ಡಾ. ನಾ. ಮೊಗಸಾಲೆ, ಡಾ. ಕೆ. ರಘುನಾಥ್ ಅವರ ಮುನ್ನುಡಿಗಳು, ಪ್ರೊ. ಜಿ. ಎನ್ ಉಪಾಧ್ಯ ಅವರುತುಷಾಕ್ಕಾಗಿ ನಡೆಸಿದ ಸಂದರ್ಶನದ ತುಣುಕು ಮತ್ತು ಸಣ್ಣ ಕಥೆಗಳ ಬಗ್ಗೆ ಜಯರಾಮ ಕಾರಂತ ಹಾಗೂ ನಾನು ಬರೆದ ಸಮೀಕ್ಷೆಗಳನ್ನು ಈ ಹೊಸ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ.

“ಎಚ್ಚೆ ಹೋಮೋ: ನೋಡಿ ಈ ಮನುಷ್ಯನನ್ನು”
ಪುಸ್ತಕದ ಬಗ್ಗೆ ನಾ ಬರೆದ ಸಮೀಕ್ಷೆ ಹೀಗಿದೆ.

ಡಾ. ಬಿ. ಜನಾರ್ದನ ಭಟ್ ಎಂಬ ಹೆಸರು ಕನ್ನಡ ಸಾಹಿತ್ಯ ಪ್ರೇಮಿಗಳ ಹೃದಯಕ್ಕೆ ಅತಿ ಆಪ್ತವಾದ ಒಂದು ಹೆಸರು. ಕತೆ, ಕಾದಂಬರಿ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು, ಅನುವಾದ ಹೀಗೆ ವಿವಿಧ ಪ್ರಕಾರಗಳಲ್ಲಿ ಸುಮಾರು 77 ಪ್ರಕಟಿತ ಕೃತಿಗಳು, ಹಲವು ಪ್ರಶಸ್ತಿಗಳ ಗರಿಮೆ ಎಲ್ಲವನ್ನೂ ಹೊತ್ತ ಅಸಾಧಾರಣ ಪ್ರತಿಭಾವಂತರಿವರು. ಅತ್ಯಂತ ಸರಳ ಹಾಗೂ ಸಜ್ಜನ ಸ್ವಭಾವದ ಭಟ್ಟರ ಹೊಸ ಕಥಾ ಸಂಕಲನ “ಎಚ್ಚೆ ಹೋಮೋ : ನೋಡಿ ಈ ಮನುಷ್ಯನನ್ನು” ಎಂಬ ವಿಶಿಷ್ಟ ಕೃತಿ.

ಯೇಸುಕ್ರಿಸ್ತನ ವಿಚಾರಣೆಯ ಸಮಯದಲ್ಲಿ ಪಿಲಾತನು ನುಡಿದ ಈ ಪದಪುಂಜ (ಲ್ಯಾಟಿನ್ನಿನಲ್ಲಿ ಎಕ್ಕೆ ಹೋಮೋ ) ಸಾಹಿತ್ಯದಲ್ಲಿ ಹಲವು ಬಾರಿ, ಹಲವು ಲೇಖಕರಿಂದ ಬಳಕೆಯಾಗಿದ್ದು ಒಂದು ಅಪ್ರತಿಮ ಪ್ರತಿಮೆಯಾಗಿ ನಿಲ್ಲುವ ಹೆಸರು. ಟೀಕೆ, ವಿಡಂಬನೆ, ವಿಷಾದ ಹೀಗೆ ಹಲವು ನೆಲೆಗಳಲ್ಲಿ ಅರ್ಥೈಸಿಕೊಳ್ಳಲು ನಿಮ್ಮನ್ನೇ ಪ್ರೆರೇಪಿಸುವ ಈ ನುಡಿಯ ಪರಿಣಾಮಕಾರಿಯಾದಂತಹ ಬಳಕೆಯನ್ನು ಭಟ್ಟರು ಮಾಡಿಕೊಂಡಿರುವುದು ಅವರ ಅಪಾರ ಅನುಭವ ಹಾಗೂ ಜಾಣ್ಮೆಗೆ ಸಾಕ್ಷಿ.

ಹತ್ತು ಮತ್ತೆ ಮೂರು ಕಥೆಗಳ ಈ ಸಂಕಲನದ ಶ್ರೇಷ್ಠ ಮುನ್ನುಡಿ ಹಿರಿಯ ಲೇಖಕರಾದ ಡಾ ನಾ ಮೊಗಸಾಲೆಯವರದ್ದು. ‘ಹೀಗೂ ಕತೆ ಬರೆಯಲು ಸಾಧ್ಯ’ ಎಂಬ ಹೊಸ ಸಾಧ್ಯತೆಗೆ ಬೆರಗಾಗಿದ್ದೇನೆ ಎಂಬ ಮೊಗಸಾಲೆಯವರು ಇಲ್ಲಿನ ಕತೆಗಳ ಭಾವ ಬಂಧಗಳ ಸೂಕ್ಷ್ಮ ಗೃಹಿಕೆಯನ್ನು ಮಾಡಿಕೊಂಡಿದ್ದಲ್ಲದೆ ಒಂದು ಉತ್ತಮ ಓದಿಗೂ ತಮ್ಮ ಬರವಣಿಗೆಯಿಂದ ನಮ್ಮನ್ನು ಪ್ರೆರೇಪಿಸುತ್ತಾರೆ. ಮುಂದಿನ ಪುಟದಲ್ಲಿ ಭಟ್ಟರ ಅರಿಕೆ ಕೂಡ ಓದಿಯೇ ಮುಂದುವರಿಯಬೇಕಾದ ಒಂದು ಸುಂದರ ಬರಹ. ಹಿನ್ನುಡಿ ಬರೆದ ಶ್ರೀನಿವಾಸ ಜೋಕಟ್ಟೆಯವರ ಮಾತುಗಳು ಬಹಳ ಆಪ್ತವೆನಿಸುತ್ತವೆ.

ವಿಶಿಷ್ಟ ತರ್ಕಕ್ಕೆ ಮನಸ್ಸನ್ನು ಒಳಪಡಿಸುವ “ದೂರು ದುರ್ಬಲ ಕುಮಾರ” ಎಂಬ ಕತೆ, ಈ ಕತೆಯ ನಾಯಕ ಇಂಥ ಹೆಸರನ್ನು ಪಡೆದ ಬಗೆಯನ್ನು ಅತ್ಯಂತ ವಿಡಂಬನಾತ್ಮಕವಾಗಿ ಹಾಗೂ ಅಷ್ಟೇ ಕುತೂಹಲಕಾರಿಯಾದ ನಿರೂಪಣಾ ಶೈಲಿಯಲ್ಲಿ ಹೇಳಿದ್ದು ವಿಶೇಷ. ” ಹತ್ತು ವರ್ಷಗಳ ಸಿಲಬಸ್ ಅವನ ಹೆಸರಿನ ಹತ್ತು ಮಾತ್ರೆಗಳಿಗೆ ಸರಿಯಾಗಿ ರೂಪಿತವಾಗಿತ್ತು…….” ಎಂಬ ಸಾಲುಗಳು ವಿನೂತನ ವೈಜ್ಞಾನಿಕ ಮಂಡನೆ. ಬಹುಶಃ ಇಂಥ ಕತೆಯನ್ನು ನಾವ್ಯಾರೂ ಎಲ್ಲಿಯೂ ಓದಿರಲಿಕ್ಕಿಲ್ಲ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಅಪ್ರಸ್ತುತೆಯನ್ನು ಬಹಳ ಸಮರ್ಥವಾಗಿ ಮನಗಾಣಿಸುವಲ್ಲಿ ಮಹತ್ತರ ಪಾತ್ರ ಬೀರುವ ಕತೆ.

ಮತ್ತೆ ಮುಂದಿನ ಕತೆ “ಕೊನೆಯ ಆಳುಪರಸ” ಇತಿಹಾಸದ ಘನತೆವೆತ್ತ ಜೀವನ ಸಮಕಾಲೀನ ಪರಿಸ್ಥಿತಿಯಲ್ಲಿ ದುಸ್ಥಿತಿಯೊಂದಿಗೆ ಮುಖಾಮುಖಿಯಾಗುವ ವೈಚಿತ್ರ್ಯವೊಂದರ ಅಪರೂಪದ ನಿರೂಪಣೆ.

ಮೂರನೆಯ ಕತೆ “ಮರವೆಗಳ ಕಥನಕಾರ”, ಇದುವರೆಗೂ ಯಾವುದೇ ಕಳಂಕವಿಲ್ಲದೆ ಪ್ರಭು ಎನಿಸಿಕೊಂಡವರ ಮೇಲೆ ಬಂದ ಆರೋಪದ ಮೊಕದ್ದಮೆ ನ್ಯಾಯಾಲಯದಲ್ಲಿ ಹೇಗೆ ಮುಕ್ತಾಯವಾಗುತ್ತದೆ ಎಂಬ ಮಹಾ ತಂತ್ರಗಾರಿಕೆ ಹೊಂದಿದ ಕತೆ.

“ಪುರುಷ ಮೃಗ” ಶಿವಶಂಕರ ಹಾಗೂ ರಶ್ಮಿ ಎಂಬ ಪಾತ್ರಗಳು, ಬಯಲುಮಾಡುವ ಬಹುತೇಕರು ಮಾನವ ರೂಪದಲ್ಲಿದ್ದೂ ಮೃಗರೂಪಿಯಾಗಿ ಇತರರನ್ನು ಶೋಷಿಸಲು ಹಿಂಜರಿಯದ ವಿಕ್ಷಿಪ್ತ ಮನೋಭಾವನೆಗೆ ಕನ್ನಡಿಯಾದ ಕತೆ.

“ನೋಡಿ ಈ ಮನುಷ್ಯನನ್ನು ” ಮರೆಯಲಾಗದ ಒಂದು ಕತೆ. ಎಲ್ಲ ಇದ್ದೂ ಏನೋ ಆಗಬಹುದಾಗಿದ್ದ ಮನುಷ್ಯ ಜೀಕೆಪಿ ಆಪಾದಿತನ ಸ್ಥಾನದಲ್ಲಿ ನಿಂತು ಅವಮಾನ ಎದುರಿಸಿ ಕಣ್ಮರೆಯಾಗುವ ಕಥನ ಎಷ್ಟು ಹೃದಯಸ್ಪರ್ಶಿ ಎಂದರೆ ಗೊತ್ತಿಲ್ಲದೇ “ಎಚ್ಚೆ ಹೋಮೋ…  ಎಚ್ಚೆ ಹೋಮೋ….” ಅಂತ ವಿಷಾದ ತುಂಬಿದ ದನಿಯಲ್ಲಿ ನಮಗೆ ನಾವೇ ಹೇಳುಕೊಳ್ಳುವಷ್ಟು.

ಕಳವಾದ ಕಥೆಯ ಬಗ್ಗೆ ಒಂದು ದೂರು, ಕೃಪೆ : ವಾಟ್ಸಪ್, ದೇಜಾಪ್ಪಣ್ಣನ ಹಠಯೋಗ, ಅನ್ವೇಷಣೆ, ಎರಡನೆಯ ಪೋಕ್ರಿ ಕುಟ್ಟಿ, ಚಪಡೇನ ಲಿಖಿತೇ, ಕಾಟಕಾಯಿ, ಪಂಜಣ್ಣ ಕುಕ್ಕಿನ ಚರಿತ್ರೆ ಹೀಗೆ ಇನ್ನಿತರ ಕತೆಗಳು ನಿಧಾನವಾಗಿ ಮನಸ್ಸನ್ನು ಅವರಿಸಿಕೊಳ್ಳುವ ಮಂದಗಾಮಿಗಳಾದರೂ ಪರಿಣಾಮದಲ್ಲಿ ತೀವ್ರಗಾಮಿಗಳು! ಮನುಷ್ಯನಲ್ಲಿ ಸುಪ್ತವಾಗಿರುವ ತಣ್ಣನೆಯ ಕ್ರೂರತನವನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಅವನು ಪ್ರಯೋಗಿಸಿ ತನ್ನ ಹಿತಾಸಕ್ತಿಯ ಸಾಧನೆಗೆಳಸುವ ಮನೋಜ್ಞ ಚಿತ್ರಣವನ್ನು ಇಲ್ಲಿಯ ಕಥೆಗಳು ಕಟ್ಟಿಕೊಡುತ್ತವೆ.

ವಯಸ್ಸು ಮೀರಿಯೂ ಮದುವೆಯಾಗದವ, ಇದ್ದೂ ಇಲ್ಲದಂತೆ ಬದುಕುವ ಅನಿವಾರ್ಯತೆಗೊಳಗಾದ, ಭೂಸುಧಾರಣೆ ಅಥವಾ ಮೋಸಕ್ಕೊಳಗಾಗಿ ಆಸ್ತಿ ಕಳೆದುಕೊಳ್ಳಬೇಕಾದವನ ಹಳಹಳಿ, ಸೇಡಿಗೆ ಬಿದ್ದವನ ಕಿಚ್ಚು, ಸಾಧನೆಗೆ ಅಥವಾ ಆ ಭ್ರಮೆಗೆ ತಣ್ಣೀರೆರಚುವ ಕ್ರೂರತನ, ಪ್ರೇಮ ವೈಫಲ್ಯ ನಡೆಸುವ ಬದುಕು, ಕತೆಯೊಂದಿಗೆ ಬೆಸೆದ ಇತಿಹಾಸ ಜ್ಞಾನ. ಹೀಗೆ ಏನುಂಟು ಏನಿಲ್ಲ! ಹೇಳುವುದನ್ನೆಲ್ಲ ನಯ ನಾಜೂಕಿನ ಆರ್ಭಟರಹಿತ ನಿರೂಪಣೆಯಲ್ಲೇ ಹೇಳುವ ಭಟ್ಟರನ್ನು ಒಬ್ಬ ಶ್ರೇಷ್ಠ ಕಥೆಗಾರನೆಂದು ಮತ್ತೊಮ್ಮೆ ತಲೆದೂಗುವಂತೆ ಮಾಡುತ್ತವೆ. ಒಬ್ಬ ಶ್ರೇಷ್ಠ ವಿಮರ್ಶಕನ ಕೈಲರಳಿದ ಈ “ಎಚ್ಚೆ ಹೋಮೋ” ಕಥಾಗುಚ್ಛ. ಬಲು ಸುಂದರ.


  • ಕವಿತಾ ಹೆಗಡೆ ಅಭಯಂ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading