ಧಾರ್ಮಿಕ ಹಾಗೂ ವೈಜ್ಞಾನಿಕ ವಿಭಿನ್ನ ದೃಷ್ಟಿಕೋನಗಳು : (ಭಾಗ-೨)

ಜನವರಿ 13ರಂದು ಧನುರ್ಮಾಸ ಮುಗಿದು ಜ. 14ರಿಂದ ಮಕರ ಮಾಸ ಆರಂಭವಾಗಲಿದೆ. ‘ಶೂನ್ಯಮಾಸ’ವೆಂದರೆ ಈ ಮಾಸದಲ್ಲಿ ವಿವಾಹ-ಉಪನಯನ-ಗೃಹಪ್ರವೇಶದಂತಹ ಕಾರ್ಯಕ್ರಮಗಳಿಗೆ ನಿಷಿದ್ಧಗೊಳಿಸಿದ್ದಾರೆ. ಅಂಕಣಕಾರ್ತಿ ಚಂಪಾ ಚಿನಿವಾರ್ ಅವರ ಹೊಸ ಅಂಕಣ ‘ಧಾರ್ಮಿಕ ಹಾಗೂ ವೈಜ್ಞಾನಿಕ ವಿಭಿನ್ನ ದೃಷ್ಟಿಕೋನಗಳು’ ದಲ್ಲಿ ‘ಧನುರ್ಮಾಸ ಮಹಿಮೆ’ ಯನ್ನು ತಪ್ಪದೆ ಮುಂದೆ ಓದಿ…

ಧನು ಇದು ಸೂರ್ಯನ ರಾಶಿ ಧನು ಮತ್ತು ಮಾಸ ಎಂದರೆ ತಿಂಗಳು. ಸೂರ್ಯನು ಧನು ರಾಶಿಯನ್ನು ಪ್ರವೇಶಿಸುವ ಮತ್ತು ಅವನೊಂದಿಗೆ ಇರುವ ಮಾಸವನ್ನು ಧನುರ್ಮಾಸ ಎಂದು ಪರಿಗಣಿಸಲಾಗುತ್ತದೆ. ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ಪ್ರತಿ ತಿಂಗಳು ಒಂದೊಂದು ರಾಶಿಯ ಚಿಹ್ನೆಯಲ್ಲಿರುತ್ತಾನೆ.

ಒಮ್ಮೆ ಸೃಷ್ಟಿಕರ್ತರಾದ ಬ್ರಹ್ಮದೇವರು ಹಂಸಪಕ್ಷಿಯ ಅವತಾರ ಮಾಡುತ್ತಾ ಲೋಕ ಸಂಚಾರ ಮಾಡುತ್ತಿರುವಾಗ ಸೂರ್ಯದೇವರು ಹಂಸರೂಪಿ ಬ್ರಹ್ಮದೇವರ ಮೇಲೆ ಒಮ್ಮಿಂದೊಮ್ಮೆಲೆ ಹೆಚ್ಚಿನ ಶಾಖ ಮತ್ತು ಬೆಳಕನ್ನು ಬೀರುತ್ತಾನೆ. ಇದರಿಂದ ಕೋಪಗೊಂಡ ಬ್ರಹ್ಮ ದೇವರು ಸೂರ್ಯದೇವರಿಗೆ ನಿನ್ನ ತೇಜಸ್ಸು ಕ್ಷೀಣಿಸಲಿ ಎಂಬ ಶಾಪವನ್ನು ಕೊಡುತ್ತಾರೆ. ಸೂರ್ಯದೇವನು ಕಾಂತಿಹೀನನಾಗಿ ತನ್ನ ಪ್ರಕಾಶವನ್ನು ಕಳೆದುಕೊಳ್ಳುತ್ತಾನೆ.

ಇದರಿಂದ ಇಡೀ ಭೂಮಂಡಲ ಅಲ್ಲೋಲ ಕಲ್ಲೋಲವಾಗುತ್ತದೆ. ಸೂರ್ಯದೇವನಿಲ್ಲದೆ ಋಷಿ-ಮುನಿಗಳಿಗೆ ನಿತ್ಯ-ಪೂಜೆ ಹಾಗೂ ಹೋಮ-ಹವನಗಳಿಗೆ ಬಹಳ ತೊಂದರೆಯಾಗಿ ಎಲ್ಲಾ ಪೂಜಾ ಕೈಂಕರ್ಯಗಳನ್ನು ನಿಲ್ಲಿಸುವಂತಾಗುತ್ತದೆ.

ಫೋಟೋ ಕೃಪೆ : ಅಂತರ್ಜಾಲ

ಆಗ ದೇವತೆಗಳು ಹಾಗೂ ಋಷಿಗಳು, ಬ್ರಹ್ಮದೇವರನ್ನು ಕುರಿತು ತಪಸ್ಸು ಆಚರಿಸುತ್ತಾರೆ.ಇವರ ತಪಸ್ಸಿಗೆ ಬ್ರಹ್ಮದೇವರು ಒಲಿದು ಪ್ರತ್ಯಕ್ಷರಾಗುತ್ತಾರೆ. ಆಗ ತಪಸ್ಸಿನ ಉದ್ದೇಶ ಏನು ಎಂಬ ಬ್ರಹ್ಮದೇವರ ಪ್ರಶ್ನೆಗೆ, ದೇವತೆಗಳು, ಋಷಿಗಳು ಸೂರ್ಯನ ಬೆಳಕಿಲ್ಲದೆ ಪೂಜೆ ಹೋಮಗಳು ಮಾಡಲು ಸಾಧ್ಯವಿಲ್ಲವಾಗಿದೆ ಎಂದು ಹೇಳಲು, ಆಗ ಬ್ರಹ್ಮ ದೇವರು ಒಂದು ಪರಿಹಾರ ಸೂಚಿಸುತ್ತಾರೆ. ಸೂರ್ಯದೇವ ಧನುರ್ಮಾಸದಲ್ಲಿ ಮೊದಲ ಜಾವದಲ್ಲಿ ಜಗದೊಡೆಯನಾದ ಶ್ರೀ ಮಹಾವಿಷ್ಣುವನ್ನು ಕುರಿತು ಪೂಜಿಸಿದರೆ ಆತನ ಶಾಪ ವಿಮೋಚನೆಯಾಗಲಿದೆ ಎಂದು ಹೇಳುತ್ತಾರೆ.

ಅಂತೆಯೇ ಶ್ರೀ ಸೂರ್ಯದೇವನು ಧನುರ್ಮಾಸದಲ್ಲಿ ವಿಷ್ಣು ದೇವನ ಪೂಜೆಯನ್ನು ಮೊದಲ ಜಾವದಲ್ಲಿ ಸತತವಾಗಿ ಹದಿನಾರು ವರುಷ ಮಾಡಿ, ಶ್ರೀ ಮಹಾವಿಷ್ಣುವಿನ ಪೂರ್ಣಾನುಗ್ರಹದಿಂದ ಎಂದಿನಂತೆಯೇ ತೇಜಸ್ಸು ಹಾಗೂ ಕಾಂತಿ ಹೊಂದಿ ಜಗತ್ತಿಗೆ ಬೆಳಕು ನೀಡಿದನು ಎಂದು ಪುರಾಣದಿಂದ ತಿಳಿದು ಬರುತ್ತದೆ.

ಸಾಕ್ಷಾತ್ ಸೂರ್ಯದೇವನೇ ಧನುರ್ಮಾಸ ಪೂಜೆ ಮಾಡಿ ಜಗತ್ತಿಗೆ ಈ ಆಚರಣೆಯ ಮಹತ್ವ ತಿಳಿಯುವಂತೆ ಮಾಡಿದನು. ಅಂತೆಯೇ ಭೂಲೋಕದ ಜನರು ಭಕ್ತಿ ಭಾವದಿಂದ ಧನುರ್ಮಾಸದ ಪೂಜೆಯನ್ನು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಧನುರ್ಮಾಸದಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ಬೆಳಗಿನ ಜಾವವೇ ಪೂಜೆ ಮುಗಿದು, ಬೇಗವೇ ಬಾಗಿಲು ಮುಚ್ಚಿಬಿಡುತ್ತಾರೆ.

ಈ ಧನುರ್ಮಾಸ ಆರಂಭ ಸೂರ್ಯದೇವರು ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಪ್ರವೇಶ ಮಾಡಿ ಒಂದು ತಿಂಗಳ ಕಾಲ ಅಲ್ಲಿರುವಾಗ ಈ ಪರ್ವಕಾಲವನ್ನು ಧನುರ್ಮಾಸವಾಗಿ ಆಚರಿಸುವಂತದ್ದಾಗಿದೆ. ಅಂದರೆ ಜನವರಿ 13ರಂದು ಧನುರ್ಮಾಸ ಮುಗಿದು ಜ. 14ರಿಂದ ಮಕರ ಮಾಸ ಆರಂಭ.

ಫೋಟೋ ಕೃಪೆ : ಅಂತರ್ಜಾಲ

ಶೂನ್ಯಮಾಸ

ಧನುರ್ಮಾಸವನ್ನು ‘ಶೂನ್ಯಮಾಸ’ ಎಂಬುದಾಗಿ ಶಾಸ್ತ್ರಕಾರರು ಹೇಳಿದ್ದು ಈ ಮಾಸದಲ್ಲಿ ವಿವಾಹ-ಉಪನಯನ-ಗೃಹಪ್ರವೇಶದಂತಹ ಕಾರ್ಯಕ್ರಮಗಳಿಗೆ ನಿಷಿದ್ಧಗೊಳಿಸಿದ್ದಾರೆ. ಇದೊಂದು ಪದ್ಧತಿಯಾಗಿ ಬಂದಿದೆ. ಆದರೆ ಮಾನವನಿಗೆ ಶ್ರೀ ಮಹಾವಿಷ್ಣು ಧನುರ್ಮಾಸ ಪೂಜೆ ಮಾಡುವ ಅವಕಾಶ ನೀಡಿದ್ದು ಈ ಪೂಜೆಯಿಂದ ಮಾನವನ ಜನ್ಮ ಜನ್ಮಾಂತರದ ಪಾಪಗಳು ನಾಶವಾಗಿ,ಇಹದಲ್ಲಿ ಸುಖ ಪರದಲ್ಲಿ ಮುಕ್ತಿ ಕರುಣಿಸಿ ಪೂರ್ಣಾನುಗ್ರಹ ಮಾಡುತ್ತಾನೆ.

ಧನುರ್ಮಾಸದಲ್ಲಿ ಪ್ರತಿ ನಿತ್ಯ ಒಂದು ತಿಂಗಳು ಸೂರ್ಯೋದಯದ ಮುಂಚೆ ಪೂಜೆ ಮಾಡುತ್ತಾರೆ ಮೊದಲ ಹದಿನೈದು ದಿನ ಮಹಾವಿಷ್ಣುವಿಗೆ ನೈವೇದ್ಯಕ್ಕೆ ಸಕ್ಕರೆ ಅಥವಾ ಬೆಲ್ಲ-ಅಕ್ಕಿ-ಹೆಸರು ಬೆಳೆ ಬೆರೆಸಿ ಬೇಯಿಸಿ ಹುಗ್ಗಿ ತಯಾರಿಸಿ ಶ್ರೀ ಮಹಾವಿಷ್ಣುವಿಗೆ ಅರ್ಪಿಸುತ್ತಾರೆ. ಉಳಿದ ಹದಿನೈದು ದಿನ ಖಾರದ ಹುಗ್ಗಿ ತಯಾರಿಸಿ ನೈವೇದ್ಯ ಮಾಡವ ಪದ್ಧತಿ ಇದೆ. ಈ ಧನುರ್ಮಾಸ ವ್ರತದ ಪೂಜೆಯನ್ನು ಋಷಿ ಶ್ರೇಷ್ಠರಾದ ವಿಶ್ವಾಮಿತ್ರರು-ಗೌತಮರು-ಅಗಸ್ತ್ಯರು ಹಾಗೂ ಭೃಗುಮುನಿಗಳ ಸಹಿತ ದೇವಾನುದೇವತೆಗಳು ಆಚರಿಸಿ ಶ್ರೀ ಮಹಾವಿಷ್ಣುವಿನ ಕೃಪೆಗೆ ಪಾತ್ರರಾಗುತ್ತಾರೆ ಎಂಬ ನಂಬಿಕೆ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಶಕ್ತಿ ಸ್ವರೂಪಿಣಿಯಾದ ಜಗನ್ಮಾತೆಯಾದ ಪಾರ್ವತಿದೇವಿಯೂ ಸಹ ಧನುರ್ಮಾಸ ಆಚರಿಸಿರುವುದಾಗಿ ಪುರಾಣಗಳಲ್ಲಿ ಉಲ್ಲೇಖವಿದೆ.

ಧನುರ್ಮಾಸವನ್ನು ಶೂನ್ಯ ಮಾಸ ಎಂದು ಪರಿಗಣಿಸಲಾಗುತ್ತದೆ. ಧನುರ್ ಮಾಸವನ್ನು ಕೆಲವು ಪ್ರದೇಶಗಳಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಕೇವಲ ಪ್ರಾರ್ಥನೆಗಳು ಮತ್ತು ದೈವಿಕ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ. ಧನುರ್ಮಾಸವು ಮೂಲತಃ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಸ್ಥಳಾಂತರಗೊಳ್ಳುವ ಅವಧಿಯಾಗಿದೆ ಮತ್ತು ಅದು ಮಕರ ಸಂಕ್ರಾಂತಿಯಂದು ಕೊನೆಗೊಳ್ಳುತ್ತದೆ.

ಧನುರ್ಮಾಸದಲ್ಲಿ ಬೆಳಗಿನ ಸಮಯದಲ್ಲಿ ವಿಷ್ಣುವಿನ ಆರಾಧನೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ವಿಷ್ಣು ಸಹಸ್ರನಾಮವನ್ನು ಪಠಿಸಲಾಗುತ್ತದೆ. ಪಠಿಸುವ ಇತರ ಪ್ರಮುಖ ಮಂತ್ರಗಳು ಲಕ್ಷ್ಮಿ ದೇವಿಗೆ ಸಮರ್ಪಿತವಾಗಿವೆ.

ಧನುರ್ಮಾಸದಲ್ಲಿ ಒಂದೇ ದಿನ ಭಗವಾನ್ ವಿಷ್ಣುವನ್ನು ಪೂಜಿಸಿದರೆ ಸಾವಿರಾರು ವರ್ಷಗಳ ಕಾಲ ಪೂಜಿಸಿದಂತೆ ಎಂಬ ನಂಬಿಕೆ ಇದೆ.

ಧನುರ್ಮಾಸದ ಅವಧಿಯಲ್ಲಿ ಬರುವ ಏಕಾದಶಿಯನ್ನು ವೈಕುಂಠ ಏಕಾದಶಿ ಎಂದು ಹಾಗು ಇದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವೈಕುಂಠ ಏಕಾದಶಿಯಂದು ವೈಕುಂಠ ದ್ವಾರ ತೆರೆದಿರುತ್ತದೆ ಹಾಗೆಯೇ ಅಂದಿನ ದಿನ ಯಾರು ಮರಣ ಹೊಂದುವರೋ ಜೀವನದಿಂದ ಮುಕ್ತಿ ಹೊಂದುತ್ತಾರೆ ಎಂಬ ನಂಬಿಕೆ ಇದೆ.


  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW