ಧಾರ್ಮಿಕ ಹಾಗೂ ವೈಜ್ಞಾನಿಕ ವಿಭಿನ್ನ ದೃಷ್ಟಿಕೋನಗಳು : (ಭಾಗ-೪)

ತಮಿಳು ನಾಡುಗಳಲ್ಲಿ ಸಂಕ್ರಾಂತಿ, ಕನುಹಬ್ಬ, ಭೋಗಿಹಬ್ಬ ಎಂದು ಆಚರಿಸಲ್ಪಡುತ್ತದೆ. ಅಲಹಾಬಾದಿನಲ್ಲಿ ಈ ಸಂದರ್ಭದಲ್ಲಿ ಕುಂಭ ಮೇಳ ನಡೆಯುವುದನ್ನು ಕಾಣಬಹುದು. ಉತ್ತರ ಭಾರತದಲ್ಲಿಯೂ ಸಂಕ್ರಾಂತಿಯನ್ನು ಆಚರಿಸುವುದುಂಟು. ಸಂಕ್ರಾಂತಿ ಮಹತ್ವದ ಕುರಿತು ಅಂಕಣಕಾರ್ತಿ ಚಂಪಾ ಚಿನಿವಾರ್ ಅವರ ಹೊಸ ಅಂಕಣ ‘ಧಾರ್ಮಿಕ ಹಾಗೂ ವೈಜ್ಞಾನಿಕ ವಿಭಿನ್ನ ದೃಷ್ಟಿಕೋನಗಳು’ ದಲ್ಲಿ ‘ಸಂಕ್ರಾಂತಿ….ನಮ್ಮ ಸಂಸ್ಕೃತಿ…ನಮ್ಮ ಪದ್ಧತಿ.’ ತಪ್ಪದೆ ಮುಂದೆ ಓದಿ…

ಸಕಲ ಜೀವರಾಶಿಯ ಚೇತನಕ್ಕೆ ಆಧಾರವಾಗಿರುವ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲವನ್ನು “ಸಂಕ್ರಮಣ ಅಥವಾ ಸಂಕ್ರಾಂತಿ” ಎಂದು ಜ್ಯೋತಿಷ್ಯಾಧಾರದ ಮೇಲೆ ಪರಿಗಣಿಸಲಾಗುವುದು. ಸಂಕ್ರಾಂತಿಯು ಒಂದು ವಿಧದಲ್ಲಿ ಸೂರ್ಯನ ಆರಾಧನೆಯಾಗಿದೆ. ಸೂರ್ಯನು ತನ್ನ ಪಥವನ್ನು ಬದಲಾಯಿಸುವ ದಿನವಿದು. ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಬದಲಿಸಿ ತನ್ನ ಚಲನೆಯ ಪ್ರಾರಂಭದ ದಿನವಾದ್ದರಿಂದ ಸಂಕ್ರಾಂತಿಯ ದಿನ ಹೆಚ್ಚಿನ ಮಹತ್ವವನ್ನು ಪಡೆದಿದೆ.

ಸಾಮಾನ್ಯವಾಗಿ ಸುಗ್ಗಿಯ ಸಂದರ್ಭದಲ್ಲಿ ಆಚರಿಸುವ ಸಂಕ್ರಾಂತಿ ಹಬ್ಬವು ಭಾರತೀಯ ಕಾಲಮಾನ ’ಪುಷ್ಯಮಾಸದಲ್ಲಿ’ ಬರುವುದು. ಉತ್ತರಾಯಣದ ಪುಣ್ಯಕಾಲವೆಂದು ಕರೆಯಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಭಕ್ತರು ಪುಣ್ಯ ನದಿಗಳೆಂದು ಹೆಸರುವಾಸಿಯಾದ ಗಂಗಾ, ಕಾವೇರಿ ಮೊದಲಾದವುಗಳಲ್ಲಿ ಸ್ನಾನ ಮಾಡುವ ಪದ್ಧತಿ ಇದೆ. ಸೂರ್ಯನು ಈವರೆಗೆ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದು, ಸಂಕ್ರಾಂತಿಯ ದಿನದಂದು ಉತ್ತರದ ಕಡೆ ಪಥ ಬದಲಾಯಿಸುತ್ತಾನೆ. ಈ ರೀತಿ ಸೂರ್ಯನ ಪಥ ಬದಲಾವಣೆಯಿಂದ ಭಾರತದಲ್ಲಿ ಕೊರೆಯುವ ಚಳಿ ಕಡಿಮೆಯಾಗಿ ಹಗಲು ಹೆಚ್ಚು ಸಂಭವಿಸುತ್ತದೆ ಎಂಬ ಪ್ರತೀತಿ ಇದೆ.

ತಮಿಳು ನಾಡುಗಳಲ್ಲಿ ಸಂಕ್ರಾಂತಿ, ಕನುಹಬ್ಬ, ಭೋಗಿಹಬ್ಬ ಎಂದು ಆಚರಿಸಲ್ಪಡುತ್ತದೆ. ಅಲಹಾಬಾದಿನಲ್ಲಿ ಈ ಸಂದರ್ಭದಲ್ಲಿ ಕುಂಭ ಮೇಳ ನಡೆಯುವುದನ್ನು ಕಾಣಬಹುದು. ಉತ್ತರ ಭಾರತದಲ್ಲಿಯೂ ಸಂಕ್ರಾಂತಿಯನ್ನು ಆಚರಿಸುವುದುಂಟು.

ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆಯಿದೆ. ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಶ್ರೀಕೃಷ್ಣನು ಗೀತೆಯಲ್ಲಿ ಆಯನದಲ್ಲಿ ಉತ್ತರಾಯಣ ಅತಿ ಶ್ರೇಷ್ಠ ಎಂದು ಹೇಳಿರುವನು. ಭೀಷ್ಮ ಪಿತಾಮಹನು ಬಾಣಗಳ ಮಂಚದ ಮೇಲೆ ಮಲಗಿ ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ದಕ್ಷಿಣಾಯಣದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರ ಮಾಡಿಕೊಳ್ಳುತ್ತಾನೆ.

ಕೃತಯುಗದಲ್ಲಿ ಶಿವ ಮತ್ತು ಪಾರ್ವತಿಯರು ವಿವಾಹವಾಗಿದ್ದು ಈ ಉತ್ತರಾಯಣದಲ್ಲಿ, ಬ್ರಹ್ಮ ದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು ಇಂದ್ರನಿಗೆ ಗೌತಮರು ಶಾಪ ವಿಮೋಚನೆ ಮಾಡಿದ್ದು, ನಾರಾಯಣನು ವರಹಾ ಅವತಾರದಿಂದ ಭೂಮಿಯ ಮೇಲೆ ಪಾದ ಸ್ಪರ್ಶ ಮಾಡಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಹಾಗೂ ಋಷಿ ಮುನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದು ಸಹ ಈ ಉತ್ತರಾಯಣದಲ್ಲಿ. ಈ ಎಲ್ಲ ಕಾರಣಕ್ಕಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿವಾಹ, ನಾಮಕರಣ, ಗೃಹಪ್ರವೇಶಗಳಂತಹ ಶುಭ ಕಾರ್ಯಗಳನ್ನು ಉತ್ತರಾಯಣದಲ್ಲಿ ಮಾಡುತ್ತಾರೆ.

ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ವಿಷ್ಣುವನ್ನು ಪೂಜಿಸುವ ಕ್ರಮವಿದೆ. ಈ ದಿನದಂದು ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ನೋವುಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗುತ್ತದೆ. ಈ ದಿನ ಏನೇ ದಾನ ಮಾಡಿದರೂ ವಿಶೇಷ ಫಲವನ್ನು ಭಗವಂತ ಕೊಡುತ್ತಾನೆ ಎಂಬ ನಂಬಿಕೆ ಇದೆ.

ಸಂಕ್ರಾತಿಯ ಹಬ್ಬವು ಅವರವರ ಪದ್ಧತಿಯ ಅನುಸಾರ ಆಚರಿಸುತ್ತಾರೆ. ಸಂಕ್ರಾಂತಿ ಹಬ್ಬದ ದಿನ ಎಳ್ಳು ಬೀರುವ ಸಂಪ್ರದಾಯ ಇದೆ. ಎಳ್ಳಿನೊಂದಿಗೆ ಬೆಲ್ಲ, ಕೊಬ್ಬರಿ, ಕಡಲೆಬೀಜ, ಹುರಿಗಡಲೆ ಮಿಶ್ರಣ ಮಾಡಿ ಇದರ ಜೊತೆಗೆ ಸಕ್ಕರೆ ಅಚ್ಚನ್ನು, ಸ್ನೇಹಿತರಿಗೆ, ಬಂಧುಗಳಿಗೆ ಹಂಚುವ ಪದ್ಧತಿ ಇದೆ. “ಎಳ್ಳು ತಿಂದು ಒಳ್ಳೆ ಮಾತಾಡು” ಎಂದು ಹೇಳಿ ಮನೆ ಮನೆಗೂ ಹೋಗಿ ಎಳ್ಳು ಬೀರುವ ಪದ್ದತಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಈ ಕಾಲದಲ್ಲಿ ಹೊಸ ಫಸಲುಗಳು ಬಂದಿರುತ್ತದೆ. ರೈತಾಪಿ ಜನರು ತಾವು ಬೆಳೆದ ಫಸಲನ್ನು ಪೂಜೆ ಮಾಡಿ ಸಂಕ್ರಾಂತಿಯ ಹಬ್ಬ ಆಚರಿಸುತ್ತಾರೆ. ಹಾಗೆಯೇ ಪಿತೃಗಳಿಗೆ ತರ್ಪಣ ಬಿಡುವ ಪದ್ದತಿಯೂ ಇದೆ.

ಮದುವೆಯಾದ ಹೆಣ್ಣು ಮಕ್ಕಳು ಬಾಗಿನ ಕೊಡುವ ರೂಢಿ ಇದೆ. ಸಂಕ್ರಾಂತಿ ಹಬ್ಬದ ದಿನ ಸಂಜೆ ಮಕ್ಕಳಿಗೆ ಆರತಿ ಮಾಡಿ ಎಲಚಿಹಣ್ಣು, ಕಬ್ಬಿನ ಚೂರುಗಳು, ಕಾಸನ್ನು ಒಂದು ಬಟ್ಟಲಿಗೆ ಹಾಕಿ ಎರೆಯುವ ಸಂಪ್ರದಾಯ ಉಂಟು.

ಎತ್ತುಗಳಿಗೆ ಅಲಂಕಾರ ಮಾಡಿ ಕಿಚ್ಚು ಹಾಯಿಸುತ್ತಾರೆ. ಇದರ ಹಿಂದೆ ವೈಜ್ಞಾನಿಕವಾದ ಕಾರಣವಿದೆ. ಎತ್ತುಗಳ ಮೈ ಮೇಲೆ ಅದರ ಚರ್ಮಕ್ಕೆ ಚಿಗಟಗಳು ಅಂಟಿಕೊಂಡಿರುತ್ತದೆ, ಅದರ ರಕ್ತ ಹೀರುವ ಕಾರಣ ಪ್ರಾಣಿಗಳು ಭಾದೆ ಪಡುತ್ತಿರುತ್ತದೆ. ಬೆಂಕಿಯಲ್ಲಿ ಇವುಗಳನ್ನು ದಾಟಿಸಿದಾಗ ಚಿಗಟಗಳು ಬೆಂಕಿಯಲ್ಲಿ ಬಿದ್ದು ಹೋಗುತ್ತವೆ ಎಂದು ಊರಿನ ಒಂದು ಭಾಗದಲ್ಲಿ ಬೆಂಕಿ ಹಾಕಿ ಅದನ್ನು ದಾಟಿಸುತ್ತಾರೆ.

ಸಂಕ್ರಾಂತಿಯ ದಿನ ಗಾಳಿಪಟವನ್ನು ಹಾರಿಸುವ ಸಂಪ್ರದಾಯ ಉಂಟು. ಮನರಂಜನೆಗಾಗಿ ಗಾಳಿಪಟನ್ನು ಹಾರಿಸಿ ಹಿರಿಯರು, ಕಿರಿಯರು ಎಲ್ಲರೂ ಸಂಭ್ರಮ ಪಡುತ್ತಾರೆ. ಈ ದಿನಕ್ಕಾಗಿಯೇ ಕಾದಿದ್ದು ಮಕರ ಜ್ಯೋತಿಯ ಕಾಣಲು ತಂಡೋಪ ತಂಡವಾಗಿ ಅಯ್ಯಪ್ಪ ಸ್ವಾಮಿಯ ಭಕ್ತರು ಶಬರಿ ಮಲೆಗೆ ಹೋಗುತ್ತಾರೆ.

ಈ ರೀತಿ ನಮ್ಮ ಭಾರತದಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಧರ್ಮದ ಹಬ್ಬಕ್ಕೂ ತನ್ನದೇ ಆದ ಐತಿಹಾಸಿಕ, ಪೌರಾಣಿಕ, ವೈಜ್ಞಾನಿಕ ಮಹತ್ವಗಳಿವೆ. ಆದರೆ ಇತ್ತೀಚಿನ ಒತ್ತಡಯುಕ್ತ ಜೀವನದಲ್ಲಿ ಹಬ್ಬಗಳ ಆಚರಣೆಯೇ ಕಣ್ಮರೆಯಾಗುತ್ತಿರುವುದು ವಿಪರ್ಯಾಸ. ನಮ್ಮ ಇಂದಿನ ಪೀಳಿಗೆಯವರಿಗೆ ಪಾಶ್ಚಾತ್ಯೀಕರಣದ ಪ್ರಭಾವದಿಂದ ನಮ್ಮ ಸಂಸ್ಕೃತಿಕ ದ್ಯೋತಕವಾದ ಹಬ್ಬಗಳಾವುವಿದೆ ಎಂಬುದೇ ತಿಳಿಯದಂತಾಗಿದೆ. ಹೀಗಾಗಿ ಅನುಕರಣೆಯ ಜಾಡ್ಯವನ್ನು ತೊರೆದು ಪರಂಪರಾಗತವಾಗಿ ಆಚರಣೆಗೆ ಒಳಪಟ್ಟ ಹಬ್ಬ ಹರಿದಿನಗಳನ್ನು ಹಿರಿಯರು ಆಚರಿಸುವತ್ತಾ ಗಮನ ಹರಿಸಿ, ತಮ್ಮ ಮಕ್ಕಳಿಗೂ ಅದರ ಮಹತ್ವ, ಹಿನ್ನೆಲೆ ಬಗ್ಗೆ ತಿಳಿಸಿ, ಅದು ಮುಂದಿನ ಪೀಳಿಗೆಯವರೆಗೆ ಮುಂದುವರಿಯುವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು.

ಹಿಂದಿನ ಸಂಚಿಕೆಗಳು :


  • ಚಂಪಾ ಚಿನಿವಾರ್ – ಆಪ್ತ ಸಮಾಲೋಚಕಿ, ಬೆಂಗಳೂರು.

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW