‘ದೀಡೆಕರೆ ಜಮೀನು’ ನನ್ನ ನೋಟ

ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ಸರಳ ಕಥಾತಂತ್ರದಿಂದ ‘ದೀಡೆಕರೆ ಜಮೀನು’ ಕತೆಗಳು ಓದುಗರಿಗೆ ಹತ್ತಿರವಾಗುತ್ತದೆ. ಉತ್ತರ ಕರ್ನಾಟಕ ಭಾಷೆ, ಪದಬಳಕೆ ಕತೆಯನ್ನು ವಿಶೇಷವಾಗಿಸಿದೆ. ಪುಸ್ತಕದ ಕುರಿತು ನನ್ನ ಅಭಿಪ್ರಾಯವನ್ನು ಓದುಗರ ಮುಂದಿಟ್ಟಿದ್ದೇನೆ, ತಪ್ಪದೆ ಮುಂದೆ ಓದಿ…

ಪುಸ್ತಕ : ದೀಡೆಕರೆ ಜಮೀನು
ಲೇಖಕರು : ಮಲ್ಲಿಕಾರ್ಜುನ ಶೆಲ್ಲಿಕೇರಿ
ಪ್ರಕಾಶನ : ಕಾಚಕ್ಕಿ ಪ್ರಕಾಶನ
ಬೆಲೆ : 150.00

ಬಾಗಲಕೋಟೆಯ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಿ ಎ ಓ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ “ದೀಡೆಕೆರೆ ಜಮೀನು” ಮೊದಲ ಕೃತಿಯಾಗಿದ್ದು, ಇದರಲ್ಲಿ ಒಟ್ಟು ಎಂಟು ಕತೆಗಳಿವೆ. ಪುಸ್ತಕದ ಬಗ್ಗೆ ನನ್ನ ಅನ್ನಿಸಿಕೆಯನ್ನು ಹಂಚಿಕೊಳ್ಳುವುದು ತಡವಾದರೂ ಮೊದಲ ಕತೆ “ಆಲದ ಮರ” ದಿಂದ “ಋಣ ಮುಕ್ತ” ಕೊನೆಯ ಕತೆಯವರೆಗೂ ಒಂದೇ ಸಮನೇ ಬಿಡದೆ ಓದಿದ್ದೇನೆ. ಯಾಕೆಂದರೆ ಕತೆಯಲ್ಲಿ ಬಳಸಿದಂತಹ ಉತ್ತರ ಕರ್ನಾಟಕ ಭಾಷೆ, ಗ್ರಾಮೀಣ್ಯ ಸೊಗಡು ಓದುಗರನ್ನು ಹಿಡಿದಿಡುತ್ತದೆ.

ದೀಡೆಕರೆ ಜಮೀನು ಲೇಖಕ ಮಲ್ಲಿಕಾರ್ಜುನ ಶೆಲ್ಲಿಕೇರಿ ಮತ್ತು ಅವರ ಪತ್ನಿ ತ್ರಿವೇಣಿ 

ಕರೋನ ಮಹಾಮಾರಿ ಬಂದಾಗ ದೇಶ ದೇಶವೇ “ತಲ್ಲಣ”ಗೊಂಡಿತ್ತು. ಆ ತಲ್ಲಣವನ್ನು ಕಥಾವಸ್ತುವನ್ನಾಗಿಸಿಕೊಂಡು ಮಲ್ಲಿಕಾರ್ಜುನ ಅವರು ಕರೋನ ದುರಂತಕತೆಯನ್ನು ಮನಮುಟ್ಟುವಂತೆ ಓದುಗರ ಮುಂದೆ ತಂದಿಡುವಲ್ಲಿ ಯಶಸ್ವಿಯಾಗಿದ್ದಾರೆ. ವೀರಭದ್ರ- ಗಿರಿಜಾ ದಂಪತಿಯ ಹಿರಿಯ ಮಗ ಬಸಲಿಂಗ ಮತ್ತು ಕಿರಿಯ ಮಗ ಶಿವಲಿಂಗ ತಲ್ಲಣ ಕತೆಯಲ್ಲಿ ಬರುವ ಮುಖ್ಯ ಪಾತ್ರಧಾರಿಗಳು. ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಆಸೆಗೆ ಹಳ್ಳಿಯನ್ನು ಬಿಟ್ಟು ದೂರದ ರತ್ನಾಗಿರಿಗೆ ಈ ಕುಟುಂಬ ಬರುತ್ತಾರೆ. ಆದರೆ ಕರೋನ ಅವರ ಬದುಕಿಗೆ ಕೊಳ್ಳಿ ಇಡುತ್ತದೆ. ಇದ್ದ ಕೆಲಸ ಹೋಗುತ್ತದೆ, ಕಿರಿಯ ಮಗ ಜ್ವರದಲ್ಲಿ ಮಲಗುತ್ತಾನೆ. ಕೊನೆಗೆ ಸತ್ತರೆ ನಮ್ಮ ಹಳ್ಳಿಯಲ್ಲಿಯೇ ಸಾಯೋಣ ಎಂದು ಹಿರಿಯ ಮಗ ಬಸಲಿಂಗನ ಮಾತಿಗೆ ಕುಟುಂಬ ಸಿದ್ದವಾಗುತ್ತೆ. ಕರೋನ ಆರ್ಭಟ ಹೆಚ್ಚಾದಾಗ ಲಾಕ್ ಡೌನ್ ಆಗುತ್ತದೆ. ಬಸ್, ವಾಹನಗಳಿಲ್ಲದೆ ದೂರದ ಊರಿಗೆ ಕುಟುಂಬ ಕಾಲು ನಡಿಗೆಯಲ್ಲಿಯೇ ಸಾಗುತ್ತದೆ. ಕಷ್ಟ, ಆಯಾಸ, ಹಸಿವೆ ಎಲ್ಲದರ ಮಧ್ಯೆ ಶಿವಲಿಂಗುವಿಗೆ ಜ್ವರ ಹೆಚ್ಚಾಗಿ ಮಾರ್ಗ ಮಧ್ಯೆದಲ್ಲಿಯೇ ಅಸುನಿಗುತ್ತಾನೆ. ಅವನ ಮೃತ ದೇಹವನ್ನು ಮಾರ್ಗ ಮಧ್ಯೆದಲ್ಲಿ ಎಲ್ಲೋ ಒಂದು ಕಡೆ ಹುಗಿದು ಕುಟುಂಬ ಸಾಗುವ ಅನಿವಾರ್ಯ ಪರಿಸ್ಥಿತಿ, ಹೆತ್ತ ಕರಳು ಗಿರಿಜಾ ಮಗನನ್ನು ಕಳೆದುಕೊಂಡ ಸಂಕಟ, ಮುಂದೆ ಊರು ತಲುಪಿದಾಗ ಅಲ್ಲಿ ಮತ್ತೊಂದು ದೊಡ್ಡ ಆಘಾತ ಎಲ್ಲವೂ ಮನಸ್ಸನ್ನು ಭಾರವಾಗಿಸುತ್ತದೆ. ಈ ಕತೆ ಓದುವಾಗ ದಂಪತಿಗಳ ನೋವು ನ್ಯಾಯವೇ?… ಎನ್ನಿಸುವಷ್ಟು ಓದುಗರ ಕರಳು ಹಿಂಡುತ್ತದೆ.

“ಭಜಿ ಅಂಗಡಿ ಮಲ್ಲಕ್ಕ” ಕತೆಯಲ್ಲಿ ಒಂಟಿ ಮಹಿಳೆಯ ಅಸಹಾಯತೆ, ಕಾಮುಕನ ಕೆಟ್ಟ ದೃಷ್ಠಿ, ಒಳ್ಳೆ ಮನಸ್ಸಿನ ಶ್ರೀರಕ್ಷೆ ಎಲ್ಲವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ಪ್ರತಿ ಕತೆಗಳು ಗ್ರಾಮೀಣ ಪ್ರದೇಶಗಳ ಕುಟುಂಬದ ಸುತ್ತಲೂ ಹೆಣೆಯಲಾಗಿದ್ದು, ಓದುವಾಗ ಆತ್ಮೀಯವಾಗುತ್ತದೆ.

ಮಲ್ಲಿಕಾರ್ಜುನ ಅವರು ಒಂದು ಕಡೆ ಹೇಳುತ್ತಾರೆ ಅವ್ವ ಮಾಡಿದ ಬಿಸಿ ರೊಟ್ಟಿ, ಖಾರದ ಮುಟಿಗಿ ತಿಂದಷ್ಟೇ ಕತೆ ಬರೆಯುವಾಗ ಖುಷಿಕೊಟ್ಟಿತು ಎಂದು. ನಮಗೂ ಕೂಡಾ ಅವರ ಪ್ರತಿ ಕತೆಯನ್ನು ಓದುವಾಗ ಪಕ್ಕಾ ರೊಟ್ಟಿ ಖಾನಾವಳಿ ಊಟ ಸವಿದಷ್ಟೇ ಆನಂದವಾಗುತ್ತದೆ. ಭಾಷೆ ಮೇಲಿನ ಹಿಡಿತ, ನಿರೂಪಣೆಯ ಶೈಲಿ ಕತೆಗಾರನ ಮೊದಲ ಕತೆ ಅನಿಸುವುದಿಲ್ಲ. “ದೀಡೆಕೆರೆ ಜಮೀನು” ಪುಸ್ತಕದ ಮುಖಪುಟ ವಿನ್ಯಾಸ, ಗುಣಮಟ್ಟ ಕತೆಯ ಜೊತೆಗೆ ಪುಸ್ತಕದ ತೂಕವನ್ನು ಹೆಚ್ಚಿಸಿದೆ.

ಮಲ್ಲಿಕಾರ್ಜುನ ಅವರ ಕತೆಗಳು ಪುಸ್ತಕರೂಪ ತಾಳಬೇಕು ಎನ್ನುವುದು ಅವರ ಮುದ್ದಿನ ಮಡದಿ ತ್ರಿವೇಣಿ ಅವರ ಆಸೆಯಾಗಿತ್ತು. ಹಾಗಾಗಿ ಈ ಪುಸ್ತಕ ತ್ರಿವೇಣಿ ಅವರಿಗೆ ಅರ್ಪಣೆ ಮಾಡಲಾಗಿದೆ. “ದೀಡೆಕೆರೆ ಜಮೀನು” ಕೃತಿಯ ಮೂಲಕ ಮಲ್ಲಿಕಾರ್ಜುನ ಶೆಲ್ಲಿಕೇರೆ ಅವರು ಓದುಗರಲ್ಲಿ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದ್ದಾರೆ. ಈ ಕತೆ ಈಗ ದ್ವಿತೀಯ ಮುದ್ರಣಕ್ಕೆ ಸಿದ್ಧವಾಗಿರುವುದು ಸಂತೋಷ ಮತ್ತು ಪುಸ್ತಕ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ.

ಮಲ್ಲಿಕಾರ್ಜುನ ಅವರ ಬರಹಗಳು ಒಂದೇ ಪುಸ್ತಕಕ್ಕೆ ಸೀಮಿತವಾಗದೆ, ಪ್ರತಿ ವರ್ಷವು ಹೊಸ ಪುಸ್ತಕಗಳು ಅವರಿಂದ ಬರಲಿ. ಅವರ ಪುಸ್ತಕಗಳು ಮುಂಗಾರು ಮಳೆಯಂತೆ ಓದುಗರ ಮನಸ್ಸಿಗೆ ಮುದನೀಡಲಿ ಎಂದು ಶುಭ ಹಾರೈಸುತ್ತೇನೆ.


  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW