ಹಾರಿದ ಕಾಲದ ಹಕ್ಕಿ: ಡಿ.ಕೆ. ಶ್ಯಾಮಸುಂದರ ರಾವ್

ಶಾಸಕರ ಭವನದಲ್ಲಿ ಪುಸ್ತಕ ಮಳಿಗೆ ತೆರೆದು ಜನಪ್ರತಿನಿಧಿಗಳಿಗೆ ಅಕ್ಷರಶಃ ಅಕ್ಷರ ದಾಸೋಹ ನೀಡಿದ ಸಾಹಸಿ ಡಿಕೆ ಶ್ಯಾಮಸುಂದರ ರಾವ್ ಅವರು. ಗಳಿಸಿದ ಕಾಂಚಾಣವನ್ನೆಲ್ಲ ವನ್ನೂ ಪುಸ್ತಕೋದ್ಯಮದಲ್ಲೇ ಹೂಡಿದರು. ಈಗ ಅವರ ನೆನಪುಗಳು ಮಾತ್ರ, ಅವರ ಕುರಿತು ಖ್ಯಾತ ಲೇಖಕರಾದ ಕೆ. ರಾಜಕುಮಾರ್ ಅವರು ಬರೆದ ಈ ಲೇಖನವನ್ನು ತಪ್ಪದೆ ಓದಿ…

ಇವರು ಡಿಕೆ ಶ್ಯಾಮಸುಂದರ ರಾವ್ (ಡಿಕೆಎಸ್) . ಡಿಕೆಶಿ ಅಲ್ಲ. ಹಾಗಾಗಿ ಧೈರ್ಯವಾಗಿ ಒಡನಾಡಬಹುದಿತ್ತು. ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಆಡಳಿತಾಧಿಕಾರಿ. ಶಾಸಕರ ಭವನದಲ್ಲಿ ಪುಸ್ತಕ ಮಳಿಗೆ ತೆರೆದು ಜನಪ್ರತಿನಿಧಿಗಳಿಗೆ ಅಕ್ಷರಶಃ ಅಕ್ಷರ ದಾಸೋಹ ನೀಡಿದ ಸಾಹಸಿ. ‘ಇಂಗ್ಲಿಷ್ ಸಾಹಿತ್ಯ ಚರಿತ್ರೆ’ ಎಂಬ ಆಕರ ಗ್ರಂಥವನ್ನು ಎಲ್. ಎಸ್. ಶೇಷಗಿರಿ ರಾವ್ ಅವರಿಂದ ಬರೆಯಿಸಿದವರು. ಅದು ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರಕ್ಕೆ ಪಾತ್ರವಾಯಿತು. ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಮೊದಲ ಪ್ರಕಟಣೆ. 1990ರಲ್ಲಿ. ಶಿವರಾಮ ಕಾರಂತರ ಮುನ್ನುಡಿ. ಕೇಂದ್ರ ಸರ್ಕಾರದ ‘ಕಪ್ಪು ಹಲಗೆ ಕಾರ್ಯಾಚರಣೆ ಯೋಜನೆ’ಯಲ್ಲಿ ಸುಮಾರು 40,000 ಪ್ರತಿಗಳ ಮಾರಾಟ. ಶ್ಯಾಮಸುಂದರ ರಾವ್ ಗುರುಬಲದಲ್ಲಿ, ದೈವದಲ್ಲಿ ನಂಬಿಕೆ ನೆಟ್ಟಿದ್ದವರು. ಪ್ರಕಾಶಕರ ಸಂಘದ ಉಪಾಧ್ಯಕ್ಷರಾಗಿದ್ದರು. ಅಳೆದು, ತೂಗಿ ತೊನೆವ ಮಾತು. ಖಡಕ್ ವ್ಯಾಪಾರಿ ಗುಣ. ‘ಕಾಮಧೇನು ಪ್ರಕಾಶನ’ ಎಂಬುದು ಅವರ ಪಾಲಿಗೆ ಬೇಡಿದ ವರ ನೀಡುವ ಭಾಗ್ಶೇಶ್ವರಿಯಾಯಿತು. ಮೂಲತಃ ತಿಪಟೂರಿನವರಾದ ಶ್ಯಾಮಸುಂದರ ರಾವ್ ಅವರ ಪಾಲಿಗೆ ಕಲ್ಪವೃಕ್ಷವಾಯಿತು! ಯಶಸ್ವೀ ಪ್ರಕಾಶಕ. ಆರಂಭದ ದಿಸೆ-ದೆಸೆ ಎಲ್ಲವೂ ‘ನೀನು ಹೆಜ್ಜೆ ಇಟ್ಟಲ್ಲೆಲ್ಲ ಮರು ಮುದ್ರಣದಾರಂಭ’. ಅಂದುಕೊಂಡಿದ್ದೆಲ್ಲವೂ ಸಾಧ್ಯವಾಯಿತು. ಹಣ ಹಣ ಝಣ ಝಣ. ಗಳಿಸಿದ ಕಾಂಚಾಣವನ್ನೆಲ್ಲ ವನ್ನೂ ಪುಸ್ತಕೋದ್ಯಮದಲ್ಲೇ ಹೂಡಿದರು. ಕೆರೆಯ ನೀರನು ಕೆರೆಗೇ ಚೆಲ್ಲಿದರು. ಕ್ರಮೇಣ ಈ ಸಾಹಸಗಾಥೆಗೆ ತಡೆಯುಂಟಾಯಿತು. ವಿಧಿವಿಲಾಸದಲ್ಲಿ ವಿಪರೀತ ನಂಬಿಕೆಯಿಟ್ಟಿದ್ದ ರಾಯರ ಸೋಲಿನ ಪರ್ವ ಆರಂಭವಾಯಿತು.

ಈಗ ನಾಲ್ಕು ವರ್ಷದ ಹಿಂದೆ ವಸುಂಧರಾ ಭೂಪತಿ ಅವರ ಮಗ ಅಭಿಮನ್ಯುವಿನ ಪರಿಣಯದಂದು ಕಂಡಿದ್ದರು. ಅದೇ ಕಡೆಯ ನೋಟ. ಅಪರಿಮಿತ ವಿಶ್ವಾಸದೊಂದಿಗೆ ಮಾತನಾಡಿದರು. ಜೊತೆಗಿದ್ದ ನಮ್ಮ ತಾಯಿಯ ಬಳಿ ನನ್ನ ಕುರಿತು, ನನ್ನ ಬರವಣಿಗೆಯ ಶೈಲಿಯ ಕುರಿತು ತುಂಬು ಔದಾರ್ಯದ ಮಾತುಗಳನ್ನು ಆಡಿದರು.

ಅವರ ಮೊದಲ ಪರಿಚಯ ಆದದ್ದು ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದ ಮೆಟ್ಟಿಲ ಮೇಲೆ. 1990ರಲ್ಲಿ. 35 ವರ್ಷದ ಹಿಂದೆ. ಅದಾಗ ತಾನೆ ಶಿವರಾಮ ಕಾರಂತರು ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಕೃತಿಗೆ ಬರೆದ ಮುನ್ನುಡಿ ತೋರಿಸಿದರು. ನನಗೂ ಕಾರಂತರ ಪರಿಚಯ ಮತ್ತು ತುಸು ಒಡನಾಟ ಇದ್ದುದರಿಂದ ಅಲ್ಲೇ ಕಾರಂತರ ಮುನ್ನುಡಿ ಓದಿ ಸಂಭ್ರಮಿಸಿದರು. ಶುಭವಾಗುತೈತಣ್ಣೋ ಎಂದು ಹಾರೈಸಿದೆ.

ತಮ್ಮ ಪ್ರಕಾಶನದಿಂದ 300 ಪುಟಗಳಿಗೆ ಕಡಿಮೆಯಿಲ್ಲದ ನನ್ನ ಕೃತಿಯೊಂದನ್ನು ಪ್ರಕಟಿಸಲು ಬಯಸಿದ್ದರು. ನನ್ನ ಬರೆವಣಿಗೆಯ ಲಾಲಿತ್ಯ, ಭಾಷಾ ಪ್ರಯೋಗ, ಅದರ ಸೊಗಡು ತಮಗೆ ಬಲು ಇಷ್ಟವೆಂದರು. ನನ್ನ ಜಗಲಿ(ವಾಟ್ಸಪ್) ಲೇಖನಗಳ ಖಾಯಂ ಓದುಗ ತಾವೆಂದು ನುಡಿದರು. ಆಗಿನ್ನೂ ನಾನು ಮೊಗಸಾಲೆಯಲ್ಲಿ (ಫೇಸ್ಬುಕ್) ಬರೆಯುತ್ತಿರಲಿಲ್ಲ. ಅವರನ್ನು ಕಡೆಯದಾಗಿ ಮಾತನಾಡಿದ್ದು 13-3-2021ರಂದು.

ಅಂಕಿತ ಪ್ರಕಾಶನದ ಪ್ರಕಾಶ ಕಂಬತ್ತಳ್ಳಿ ಅವರಿಗೆ ಈ ಕುರಿತು ತಿಳಿಸಿದಾಗ ಅವರ ಅನಾರೋಗ್ಯ ಕುರಿತು ಹೇಳಿದರು. ಹೌಹಾರಿದೆ. ಮರಣ ಶಯ್ಯೆಯಲ್ಲಿದ್ದಾಗಲೂ ಧೃತಿಗೆಡದೆ, ಪ್ರಕಾಶನವನ್ನೇ ಧೇನಿಸುತ್ತಿದ್ದ ರಾಯರ ಪರಿ ಅರಿತು ತತ್ತರಿಸುವಂತಾಯಿತು. ತಮ್ಮ ಅನಾರೋಗ್ಯದ ಸುಳಿವೇ ನೀಡದೆ, ಅಂತಹ ವಿಷಮ ಸಂದರ್ಭದಲ್ಲೂ ಆ ಕುರಿತು ಒಂದಿನಿತೂ ಹಲುಬದೆ, ನನ್ನ ಬರೆಹ ಕುರಿತು ಮಾತನಾಡಿದ ಉದಾರಿ ಅವರು. ಮೂಲತಃ ಕನ್ನಡ ಉಪನ್ಯಾಸಕರು. ಬೆಂಗಳೂರಿನಂತಹ ಮಹಾನಗರದಲ್ಲಿದ್ದರೂ ಸಂಕ್ಷಿಪ್ತ ವಿಳಾಸಿಗರಾಗಿದ್ದವರು! ನೆನಪಿನ ಭಿತ್ತಿಯಲ್ಲಿ # 6, ನಾಗಪ್ಪ ರಸ್ತೆ, ಶೇಷಾದ್ರಿಪುರ, ಬೆಂಗಳೂರು ಎಂಬುದನ್ನು ಮಾಸದಂತೆ ಉಳಿಸಿ ಹೋಗಿದ್ದಾರೆ.


  • ಕೆ. ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW