ನಾಯಿ ಸಾಕುವ ಕುರಿತು ಕೆಲವು ಪ್ರಶ್ನೆಗಳು

ಚಿಕ್ಕವನಿದ್ದಾಗ ನನಗೆ ನಾಯಿ ಸಾಕಬೇಕೆಂಬ ಆಸೆ ತುಂಬ ಇತ್ತು. ನಾನು ಎಷ್ಟೇ ಹಟ ಮಾಡಿದರೂ ನನ್ನ ತಾಯಿ ನಾಯಿ ಸಾಕಲು ಬಿಟ್ಟಿರಲಿಲ್ಲ. ಏಕೆ ಗೊತ್ತಾ? ಜಗದೀಶ ನಡನಳ್ಳಿ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ...

ನಾನು ದಿನಾ ಮುಂಜಾನೆ ವ್ಯಾಯಾಮ ಮಾಡುವಾಗ ನನ್ನ ರೋಮಿನಿಂದ ಕಾಣುವ ಈ ಎರಡು ನಾಯಿಗಳು ಆಗಾಗ ಬಾಲ್ಕನಿಗೆ ಬಂದು ಕೆಳಗೆ ಮುಖ ಹಾಕಿ ಬೇರೆ ನಾಯಿಗಳನ್ನು ಕಂಡರೆ ಕೆಲ ಸಮಯ ಬೊಗಳಿ ಮತ್ತೆ ಒಳಗೆ ಹೋಗುತ್ತವೆ. ನಾನು ಆಗಾಗ ಇವುಗಳನ್ನು ಕರೆದು ಅವುಗಳ ಜೊತೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತೇನೆ. ಈಗ ಸ್ವಲ್ಪ ಮಟ್ಟಿಗೆ ಅವು ನನ್ನ ಕರೆಗೆ ಓಗೊಟ್ಟು ಬೊಗಳಿಯೋ ಇಲ್ಲ ಬಾಲ ಅಲ್ಲಾಡಿಸಿ ಪ್ರತಿಕ್ರಿಸುತ್ತವೆ.

ಇಲ್ಲಿ ವಿಚಿತ್ರವೆಂದರೆ ಆ ಎರಡು ನಾಯಿಗಳಿಗಿರುವುದು ಬರಿ ಒಂದು ಎಳೆಂಟು ಮೀಟರ್‌ಗಳ ಜಾಗ. ಅವು ಎಂದೂ ನಾನು ಹೊರಗೆ ಬಂದಿರುವುದನ್ನ ನೋಡಿಲ್ಲ. ಕೆಲವು ಸಾರಿ ಅಲ್ಲೇ ಮಲ ಮೂತ್ರ ವಿಸರ್ಜನೆ ಮಾಡುವುದನ್ನು ನೋಡಿದ್ದೇನೆ. ಹಾಗೆ ಮಾಡಿದಾಗ ಅದರ ಯಜಮಾನರು ಅದನ್ನು ಬೈಯುತ್ತಿರುವುದನ್ನು ಗಮನಿಸಿದ್ದೇನೆ. ಇನ್ನೂ ಕೆಲವು ಸಾರಿ ಅವು ಹೊರಗೆ ಹೋಗಲು ಒದ್ದಾಡುತ್ತಿರುವ, ಚಡಪಡಿಸುತ್ತಿರುವ ವೇದನೆಯನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಿದ್ದೇನೆ. ಇವೆರಡು ನಾಯಿಗಳನ್ನು ಹೆಚ್ಚು ಹೊತ್ತು ನೋಡಿದಾಗೊಂದು ಸಲ ನಾನು ಚಿಕ್ಕವನಿದ್ದಾಗಿನ ಘಟನೆ ನನಗೆ ನೆನಪಿಗೆ ಬರುತ್ತದೆ. ಚಿಕ್ಕವನಿದ್ದಾಗ ನನಗೆ ನಾಯಿ ಸಾಕಬೇಕೆಂಬ ಆಸೆ ತುಂಬ ಇತ್ತು. ನಾನು ಎಷ್ಟೇ ಹಟ ಮಾಡಿದರೂ ನನ್ನ ತಾಯಿ ನಾಯಿ ಸಾಕಲು ಬಿಟ್ಟಿರಲಿಲ್ಲ. ಏಕೆ ಎಂದು ಕೇಳಿದಾಗ ನಾಯಿಗೆ ತುಂಬ ಎನರ್ಜಿ ಇರುತ್ತದೆ. ಅದರ ಎನರ್ಜಿಗೆ ಸಮನಾಗಿ ಸಾಕುವಷ್ಟು ಜಾಗ ನಮ್ಮ ಮನೆಯಲ್ಲಿಲ್ಲ. ನಮ್ಮ ಹಾಗೆ ಅದಕ್ಕೆ ಸ್ವಚ್ಛಂದವಾಗಿ ಓಡಾಡುವ ಆಸೆ ಇರುತ್ತದೆ. ಮನೆಯಲ್ಲಿ ಸಾಕಿದರೆ ಅದಕ್ಕೆ ಹೊರಗೆ ಓಡಾಡುವ ಸ್ವಾತಂತ್ರ್ಯ ಇರುವುದಿಲ್ಲ ಮನೆಯೇ ಅದರ ಪ್ರಪಂಚವಾಗಿ ಬಿಡುತ್ತದೆ ಅದು ಯಾಕೋ ನನಗೆ ಸರಿ ಕಾಣುವುದಿಲ್ಲ ಎಂದು ಹೇಳುತ್ತಿದ್ದಳು. ಆಗ ನಾನು ಅವಳ ಮಾತಿಗೆ ಕೋಪಗೊಳ್ಳುತ್ತಿದ್ದೆ ಹೊರತು ಅರ್ಥ ಮಾಡಿಕೊಳ್ಳುತ್ತಿರಲಿಲ್ಲ. ಈಗ ಈ ನಾಯಿಗಳನ್ನು ಹಾಗೂ ನನ್ನ ಬೀದಿಯಲ್ಲಿ ಹಲವಾರು ಮನೆಗಳಲ್ಲಿರುವ ನಾಯಿಗಳನ್ನು ಕಂಡಾಗ ನನ್ನ ತಾಯಿಯ ಮಾತು ನಿಜ ಅನಿಸುತ್ತದೆ. ಬರಿ ಇದಷ್ಟೇ ಅಲ್ಲ ನಾಯಿಗಳ ಸಾಕುವಿಕೆಯ ಬಗ್ಗೆ ನನ್ನಲ್ಲಿ ಹಲವಾರು ಪ್ರಶ್ನೇಗಳು ಉದ್ಭವಿಸುತ್ತವೆ. ಉದಾಹರಣೆಗೆ…

*ಜನ ಏಕೆ ಬರಿ ಜಾತಿ ನಾಯಿಗಳನ್ನು ಸಾಕಲು ಇಷ್ಟಪಡುತ್ತಾರೆ?… ಬೀದಿ ಅಥವಾ ದೇಸಿ ನಾಯಿಗಳನ್ನು ಸಾಕಲು ಏಕೆ ಇಷ್ಟಪಡುವುದಿಲ್ಲ?

*ಹೆಚ್ಚಾಗಿ ಬರಿ ಗಂಡು ನಾಯಿಗಳನ್ನೇ ಏಕೆ ಸಾಕುತ್ತಾರೆ?… ಹೆಣ್ಣು ನಾಯಿಗಳನ್ನು ಏಕೆ ಸಾಕುವುದಿಲ್ಲ?

*ನಾಯಿ ಮೂಲತ: ಮಾಂಸಾಹಾರಿಯಾಗಿದ್ದರು ಅವುಗಳಿಗೆ ಕೆಲವು ಮನೆಗಳಲ್ಲಿ ಬರಿ ಸಸ್ಯಾಹಾರ ಏಕೆ ಕೊಡುತ್ತಾರೆ?

*ತಮ್ಮ ಮನೆಯ ನಾಯಿಗಳನ್ನು ಪ್ರೀತಿಸುತ್ತಾರೆ ಆದರೆ ಬೀದಿ ನಾಯಿಗಳನ್ನು ಕಂಡರೆ ಏಕೆ ಅಸಹ್ಯ ಪಡುತ್ತಾರೆ?

ಹೀಗೆ ಹಲವಾರು ಪ್ರಶ್ನೇಗಳನ್ನು ನನ್ನನ್ನು ಕಾಡುತ್ತವೆ. ಹಾಗೆ ನೋಡಿದರೆ ಅನಾದಿ ಕಾಲದಿಂದ ಮನುಷ್ಯ ನಾಯಿ ಸಾಕುತ್ತಿದ್ದುದು ತನ್ನನ್ನು ಬೇರೆ ಕ್ರೂರ ಪ್ರಾಣಿಗಳು ಹಾಗೂ ಶತ್ರುಗಳಿಂದ ರಕ್ಷಿಸಿಕೊಳ್ಳಲು. ತನ್ನ ಗದ್ದೆ, ಹೊಲ ಹಾಗೂ ಮನೆಯಿಂದ ಕಳ್ಳರನ್ನು ದೂರವಿರಿಸಲು. ಈಗ ಈ ಕಾಂಕ್ರೀಟ್‌ ಕಾಡಿನಲ್ಲಿ, ತಂತ್ರಜ್ಞಾನ ಇಷ್ಟು ಮುಂದುವರೆದಿರುವಾಗ, ಇಕ್ಕಟ್ಟಾದ ಮನೆಗಳಲ್ಲಿ ನಾಯಿ ಸಾಕುವ ಅವಶ್ಯಕತೆ ಏನಿದೆ? ಬರಿ ತಮ್ಮ ಮನರಂಜನೆಗೊಸ್ಕರ ಬಿಟ್ಟರೆ ಅಲ್ಲಿ ಯಾವ ಅವಶ್ಯಕತೆ ಇದೆ? ಇನ್ನೂ ನಾಯಿಗಳ breeding industry ಕಡೆಗ ಒಂದು ಸಾರಿ ಗಮನ ಕೊಟ್ಟರಂತೂ ಬೆಚ್ಚಿ ಬಿಳುವ ಸಂಗತಿಗಳು ನಮಗೆ ಕಾಣುತ್ತವೆ. ಇದಲ್ಲದೆ ಮನುಷ್ಯರಿಗೆ ಬರುವ ರೋಗಗಳಾದ ಕ್ಯಾನ್ಸರ್‌, ಆತ್ರಟೀಸ್‌, ಚರ್ಮರೋಗಗಳು ಹೀಗೆ ಹಲವಾರು ರೋಗಗಳಿಗೆ ನಾಯಿಗಳು ಸಹ ತುತ್ತಾಗುತ್ತಿವೆ ಅದನ್ನ ತಕ್ಕ ಮಟ್ಟಿಗೆ ಚಾರ್ಲಿ ಚಿತ್ರದಲ್ಲಿ ತೋರಿಸಿದ್ದಾರೆಯೂ ಸಹ.

ಮನುಷ್ಯ ಎಲ್ಲ ರೀತಿಯ ಪ್ರಾಣಿಗಳ ದುರ್ಬಳಕೆ ಮಾಡುತ್ತಿದ್ದಾನೆ. ಮೊಟ್ಟೆ ಪಡೆಯಲು ಕೋಳಿಗಳು ಗರ್ಭ ಧರಿಸದ ಹಾಗೆ ನೋಡಿಕೊಳ್ಳುತ್ತಾನೆ ಅದೆ ಹಾಲು ಪಡೆಯಲು ಹಸುಗಳು ಸದಾ ಗರ್ಭಧರಿಸಿಯೇ ಇರುವಂತೆ ಎಚ್ಚರ ವಹಿಸುತ್ತಾನೆ. ಇದಕ್ಕೆ ಈ ನಾಯಿಗಳು ಹೊರತಾಗಿಲ್ಲ. ಇದು ನಿಲ್ಲಬೇಕೆಂದರೆ ಮನುಷ್ಯ ಪ್ರಾಣಿಗಳ ವಿಷಯದಲ್ಲಿ ಸ್ವಲ್ಪ ಸೂಕ್ಷ್ಮತೆಯಿಂದ ಯೋಚಿಸಬೇಕಾದ ಅವಶ್ಯಕತೆ ಇದೆ. ಆ ಸೂಕ್ಷ್ಮತೆ ಜ್ಞಾನದಿಂದ ಮಾತ್ರ ಬರಲು ಸಾಧ್ಯ ಅಷ್ಟೇ.


  • ಜಗದೀಶ ನಡನಳ್ಳಿ – ಬರಹಗಾರರು, ಸಾಹಿತ್ಯ ರಚನಾಕಾರರು, ಸಹ ನಿರ್ದೇಶಕರು ಕನ್ನಡ ಸಿನಿಮಾ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW