ಸಾಹಿತ್ಯದ ಹೂ ಅರಳಿಸಿದ ಡಾ. ಬಿ.ಎಲ್.ವೇಣು



ಎಪ್ಪತ್ತಾರರಲ್ಲೂ ಇಪ್ಪತ್ತಾರರ ಉತ್ಸಾಹ ತುಂಬಿಕೊಂಡಿರುವ ‘ದುರ್ಗಾಯಣ’ ದಲ್ಲಿ ಸಕ್ರಿಯರಾಗಿರುವ #ಡಾ_ಬಿ_ಎಲ್_ವೇಣು ಅವರ ನಟನೆಯನ್ನು ಎಂದಿಗೂ ಮರೆಯುವಂತಿಲ್ಲ. ಇಂದಿಗೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಅವರಿಗೆ ಆ ಭಗವಂತ ಆಯಸ್ಸು, ಆರೋಗ್ಯ ಕೊಡಲಿ ಎಂದು ಆಶಿಸೋಣ…

ತಮ್ಮ ಅಸೀಮ ಶೌರ್ಯ ಸಾಹಸ ಸ್ವಾಭಿಮಾನಗಳಿಂದ ಶತ್ರುಗಳೆದೆಯಲ್ಲಿ ನಡುಕ ಹುಟ್ಟಿಸಿ ಕೋಟೆನಾಡಿನ ಹೊಸಿಲು ಮೆಟ್ಟಲು ಬಂದ ಶತ್ರುಗಳನ್ನು ಹೆಡೆಮುರಿ ಕಟ್ಟಿ ಹಿಮ್ಮೆಟ್ಟಿಸಿ ದುರ್ಗದ ಕೋಟೆಯನ್ನು ರಕ್ಷಿಸಿ ಅಂಜದೇ ಅಳುಕದೇ, ಬಗ್ಗದೇ, ಕೆಚ್ಚೆದೆಯ ಗಂಡುಗಲಿಗಳಂತೆ ಶತಮಾನಗಳ ಕಾಲ ಆಡಳಿತ ನೆಡೆಸಿದ ವೀರ ಪಾಳೆಯಗಾರಾದ ರಾಜಾವೀರ ಮದಕರಿನಾಯಕ, ಬಿಚ್ಚುಗತ್ತಿ ಭರಮಣ್ಣ ನಾಯಕ, ಹಗಲು ಕಗ್ಗೊಲೆ ಮಾನ್ಯ ಮತ್ತಿ ತಿಮ್ಮಣ್ಣ ನಾಯಕ , ವೀರ ವನಿತೆ ಓಬವ್ವ ಮುಂತಾದವರು ಜನಿಸಿದ ಪುಣ್ಯಭೂಮಿ, ಗಂಡುಭೂಮಿ , ವೀರಭೂಮಿ, ತ್ಯಾಗಭೂಮಿ ಈ ದುರ್ಗ …..!
ಶತ್ರುವಿಗೆಂದೂ ಬೆನ್ನು ತೋರಿಸದ, ಸ್ವಚ್ಛ ಗುಂಡಿಗೆಯ ಕೆಚ್ಚೆದೆಯ ಅಚ್ಚ ಗಂಡುಗಲಿಗಳಿಗೆ ಜನ್ಮನೀಡಿದ ದುರ್ಗದ ನಾಡು ಕೇವಲ ಶೌರ್ಯ ಸಾಹಸಗಳಿಗೆ ಮಾತ್ರವಲ್ಲದೇ ಕಲೆ, ಸಂಸ್ಕೃತಿ ಸಾಹಿತ್ಯ, ಸಂಸ್ಕಾರಗಳಿಗೂ ಫಲವತ್ತಾದ ಸಾಹಿತ್ಯ ಕಣಜವಾಗಿ ಕರುನಾಡಿನ‌ ಭೂಪಟದಲ್ಲಿ ಅಚ್ಚಳಿಯದೇ ಉಳಿದಿದೆ.

ಇಂತಹಾ ಗಂಡುಮೆಟ್ಟಿದ ಭೂಮಿಯ ಕಲ್ಲು ಕಲ್ಲಿನಲೂ ಸಾಹಿತ್ಯದ ಸುಗಂಧದ ಹೂ ಅರಳಿಸುತ್ತಾ ಅಂದು ಕಾಲೇಜು ದಿನಗಳ ಹರೆಯದಲ್ಲಿ ಕೈಗೆತ್ತಿದ ಲೇಖನಿಯನ್ನು ಇಂದು ಮಾಗುತ್ತಿರುವ ವಯಸ್ಸಿನಲ್ಲೂ ಕೆಳಗಿಳಿಸದೇ, ದಣಿವು ಎಂಬ ಪದವನ್ನರಿಯದೇ , ಸರಿ ಎನಿಸಿದ ಹಾದಿಯಲ್ಲಿ ಯಾರಿಗೂ ಕೇರ್ ಮಾಡದೇ , ನಿರ್ಭಯವಾಗಿ, ನಿರಾತಂಕವಾಗಿ , ನಿರಂತರವಾಗಿ, ನಿರ್ಮಲ ಚಿತ್ತದಿಂದ ಸಾಹಿತ್ಯ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಕೋಟೆನಾಡಿನ ಹೆಮ್ಮೆಯ ಸಾಹಿತಿ, ಕಥೆಗಾರ, ಕಾದಂಬರಿಕಾರ , ಬರಹಗಾರ ಡಾ. ಬಿ‌.ಎಲ್.ವೇಣು ರವರು ನಿಜಾರ್ಥದಲ್ಲಿ ಚಿನ್ಮೂಲಾದ್ರಿಯ ಸಿರಿಯೇ ಹೌದು , ಬಂಡಾಯದಲ್ಲಿ “ಸಾಹಿತ್ಯ ಮದಕರಿ” ಯೂ ಹೌದು !

#ಕಥೆ_ಕಥಾ_ಸಂಕಲನ_ನಾಟಕ_ಕಾದಂಬರಿ_ಆತ್ಮಕಥನ_ಲೇಖನ.…. ಇವುಗಳ ಜೊತೆಗೆ ಹಲವಾರು ಚಲನಚಿತ್ರಗಳಿಗೆ ಕಥೆ ,ಚಿತ್ರಕಥೆ- ಸಂಭಾಷಣೆಯನ್ನು ತಮ್ಮ ಶಕ್ತ ಲೇಖನಿಯಿಂದ ಮೂಡಿಸಿರುವ ಡಾ. ವೇಣುರವರ ಬರಹದ ತಾಕತ್ತು ಸಿಡಿಲಿಗು ಬೆಚ್ಚದ ದುರ್ಗದ ಉಕ್ಕಿನ ಕೋಟೆಯಂತೆಯೇ ಬಲಿಷ್ಠ… ಆದರೆ ಅದ ಸವಿಯಲು ಸ್ವಾದಿಷ್ಠ ! ಐದು ದಶಕಗಳಿಗೂ ಹೆಚ್ಚುಕಾಲದಿಂದಲೂ ಬರಹವನ್ನು‌ ಬಹುವಾಗಿ ಪ್ರೀತಿಸುತ್ತಾ ಅದರಲ್ಲೇ ಅದಮ್ಯ ಸಾರ್ಥಕ್ಯವನ್ನು ಕಂಡುಕೊಂಡಿರುವ ಡಾ.ವೇಣುರವರದ್ದು ಬಹುಮುಖ ಪ್ರತಿಭೆಯ ಜೀವನೋತ್ಸಾಹ ತುಂಬಿದ ಚಂದದ ಬದುಕು. ಬದುಕಿನ ಎಪ್ಪತ್ತೈದು ವಸಂತಗಳನ್ನು ಯಶಸ್ವಿಯಾಗಿ ಪೂರೈಸಿರುವ ವೇಣುರವರಿಗೆ ಸಾಹಿತ್ಯದ ಕೌಟುಂಬಿಕ ಹಿನ್ನೆಲೆಯಿರಲಿಲ್ಲ. ಆದರೆ ಅವರ ತಂದೆ ಶ್ರೀ ಲಕ್ಷ್ಮಯ್ಯನವರು ‌ವೃತ್ತಿರಂಗಭೂಮಿಯ ಕಲಾವಿದರಾಗಿದ್ದರೆ ತಾಯಿ ಶ್ರೀಮತಿ ಸುಶೀಲಮ್ಮ ಗೃಹಿಣಿಯಾಗಿದ್ದವರು . ಇವರೊಂದಿಗೆ ತಮ್ಮ ಸಹೋದರ ಹಾಗೂ ತಂಗಿಯೊಂದಿಗೆ ಬಾಲ್ಯವನ್ನು ದುರ್ಗದ ಕರುವಿನಕಟ್ಟೆಯ ಚಿಕ್ಕ ಮನೆಯಲ್ಲಿಯೇ ಕಳೆದು ಬಡತನದೊಂದಿಗೇ ಬಂಧುತ್ವ ಬೆಳೆಸಿಕೊಂಡೇ ಖುಷಿಯಾಗಿ ಬೆಳೆದವರು. ರಂಗಭೂಮಿಯ‌ ಕಲೆಯ ಕಮಟು ಸಾಹಿತ್ಯದ ರೂಪದಲ್ಲಿ ವೇಣುರವರಲ್ಲಿ ರೂಪಾಂತರಗೊಂಡಿದ್ದು ಬಹುಶಃ ಅವರ ಕಾಲೇಜು‌ ದಿನಗಳಲ್ಲೇ ! ಅವರಿಗೆ ಬರಹವೆನ್ನುವುದು ಸಹಜವಾಗಿಯೇ ಸಿದ್ದಿಸಿದ್ದ ಕಲೆಯಾಗಿತ್ತು. ಕಾಲೇಜು ದಿನಗಳಲ್ಲಿ ತಾನು ಬಹುವಾಗಿ ಪ್ರೀತಿಸಿದ್ದ, ತನಗಿಂತ ಮೇಲುಜಾತಿಯ ಹುಡುಗಿಯೊಬ್ಬಳಿಗೆ ಸುಂದರವಾಗಿ ಕಾವ್ಯಾತ್ಮಕವಾಗಿ ಪ್ರೇಮಪತ್ರಗಳನ್ನು ಬರೆಯುತ್ತಿದ್ದ ವೇಣುರವರಿಗೆ ಆ ಹುಡುಗಿ ಪ್ರೇಮದಲ್ಲಿ ಕೈಕೊಟ್ಟರೂ ಅವರ ಪ್ರೇಮಪತ್ರಗಳಿಗೆ ಶೀರ್ಷಿಕೆ ಕೊಟ್ಟರೆ ಅವು ಕಥೆಯಾಗಬಲ್ಲವು ಎಂದು ಇವರಿಗೆ ಹೇಳಿದ್ದಳಂತೆ ! ಅವಳ‌ ಭಗ್ನ ಪ್ರೇಮದ ಭಾವನೆಗಳ ಬಿಸಿಯ ಶಾಖದಲ್ಲೇ ತಮ್ಮ ಆರಂಭದ ಬರಹಗಳನ್ನು ಹದವಾಗಿ ಬೇಯಿಸಿ ಇನ್ನಷ್ಟು ಪರಿಣಾಮಕಾರಿಯಾಗಿ ಬರೆಯಲಾರಂಭಿಸಿದ ವೇಣುರವರಿಗೆ ಮುಂದೆ ತಾನೊಬ್ಬ ಜನಪ್ರಿಯ ಕಾದಂಬರಿಕಾರನಾಗಬಹುದೆಂಬ ಕಲ್ಪನೆ ಆ ಕ್ಷಣಕ್ಕೆ ಇರಲಿಲ್ಲ. ಭಗ್ನಪ್ರೇಮದ ಪಾಸಿಟಿವಿಟಿಯೆಂದರೆ ಅವರು ತಮ್ಮ ಬರಹವನ್ನು‌ ಗಂಭೀರವಾಗಿ ತೆಗೆದುಕೊಳ್ಳಲು ಅದು ಸಹಾಯವಾಗಿದ್ದು ! ಹೀಗಾಗಿಯೇ ಕನ್ನಡಕ್ಕೊಬ್ಬ ಅದ್ಭುತ ಕಥೆಗಾರ ಕಾದಂಬರಿಕಾರ ದೊರಕಲು ಸಾಧ್ಯವಾಗಿದ್ದು. ಬಿ.ಎಲ್ ಎಂದರೆ ಬ್ಯಾಚುಲರ್ ಆಫ಼್ ಲವ್ ಎಂದು ಅನ್ವರ್ಥವಾಗಿದ್ದು !

ಹಾಗೆ ನೋಡಿದಲ್ಲಿ ಆಗ ವೇಣುರವರೇನೂ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ಬರಹದಲ್ಲಿ ತೊಡಗಿಸಿಕೊಂಡಿರಲಿಲ್ಲ ! ಬದುಕನ್ನು ಕಟ್ಟಿಕೊಳ್ಳಲು, ಜೀವನವನ್ನು ರೂಪಿಸಿಕೊಳ್ಳಲು ಅವರು ತೊಟ್ಟ ವೇಷಗಳು, ಧರಿಸಿದ ಪಾತ್ರಗಳು ವೈವಿಧ್ಯಮಯ ! ರಂಗಭೂಮಿ ಪಾತ್ರ , ಮೇಸ್ತ್ರಿ, ಗುಮಾಸ್ತ , ಉಸ್ತುವಾರಿ , ವಾದ್ಯ ಗೋಷ್ಠಿಯ ಗಾಯಕ, ಆರೋಗ್ಯ ಇಲಾಖೆಯ ಸರ್ಕಾರಿ ನೌಕರಿ….ಇತ್ಯಾದಿ.
ಆರಂಭದಲ್ಲಿ ವೇಣುರವರು ಕಥೆಗಳನ್ನು ಬರೆದು ಸುಧಾ, ಮಯೂರ, ಪ್ರಜಾಮತ ಪ್ರಜಾವಾಣಿ, ಕನ್ನಡಪ್ರಭ ಗಳಿಗೆ ಕಳಿಸುತ್ತಿದ್ದರು. ಅವರ ಮೊದಲ ಕಥೆ “ನನ್ನತನ ಕುಗ್ಗಿದಾಗ ” ಕನ್ನಡಪ್ರಭದಲ್ಲಿ ಪ್ರಕಟವಾದಾಗ ಅವರ ಬರಹದ “ದೊಡ್ಡತನ” ಓದುಗರಿಗೆ ಪರಿಚಯವಾಗಿತ್ತು.! ಅಲ್ಲಿಂದ ವೇಣುರವರು ತಿರುಗಿ ನೋಡಲೇ ಇಲ್ಲ. ಹಲವು ಗುಣಮಟ್ಟದ ಪತ್ರಿಕೆಗಳ ನಿಯತಕಾಲಿಕೆಗಳಲ್ಲಿ ಕಥೆಗಳನ್ನು‌ ಬರೆಯುತ್ತಲೇ ಹೋಗುತ್ತಾ ತಮ್ಮದೇ ಆದ ಅಭಿಮಾನಿ‌ ಬಳಗವನ್ನು ಸೃಷ್ಟಿಸಿಕೊಂಡರು. ಅವರ‌ ಬರಹಗಳಲ್ಲಿ ಪ್ರೀತಿ, ಪ್ರೇಮ, ಬಂಡಾಯ, ಪ್ರಗತಿಪರ ಮುಂತಾದ ವಸ್ತು ವಿಷಯಗಳು ಲೀಲಾಜಾಲವಾಗಿ ಧ್ವನಿಸತೊಡಗಿದವು.

ಬರಹದಲ್ಲಿ ಓದುಗರೆದೆಗೆ ನೇರವಾಗಿ ತಟ್ಟುವಂತಹಾ ಆಕರ್ಷಣೆ, ಮೊನಚು ಅಂತರ್ಗತವಾಗಿತ್ತು. ಅಂದಿನಿಂದ ಇಂದಿನವರೆಗೆ ಸುಮಾರು ಅರವತ್ತಕ್ಕೂ ಹೆಚ್ಚು ಕೃತಿಗಳನ್ನು, ಅಸಂಖ್ಯಾತ ಕಥೆಗಳನ್ನೂ ಬರೆದಿರುವ ವೇಣುರವರು ಇಡೀ ರಾಜ್ಯಾದ್ಯಂತ ಮನೆ ಮಾತಾಗಿದ್ದು ಎರಡು ಮುಖ್ಯ‌ ವಾಹಿನಿಗಳ ಮುಖೇನ…! ಅದರಲ್ಲಿ ಒಂದು, ಸುಮಾರು ಇಪ್ಪತ್ತೇಳು ತಮ್ಮ ಅಮೋಘ ಕಾದಂಬರಿಗಳ ಮೂಲಕ , ಅದರಲ್ಲಿಯೂ ಅವರ ಐದಾರು ಐತಿಹಾಸಿಕ ಶಕ್ತಯುತ ಕಾದಂಬರಿಗಳು ಸಾಹಿತ್ಯ ಲೋಕದಲ್ಲಿ ಸದ್ದು ಮಾಡಿದ್ದಾದರೆ, ಮತ್ತೊಂದು ಸುಮಾರು ಎಪ್ಪತ್ತಕ್ಕೂ ಹೆಚ್ಚಿನ‌ ಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದರ ಮೂಲಕ ಕನ್ನಡ ಚಿತ್ರರಂಗದಲ್ಲೂ ಹೆಜ್ಜೆಗುರುತು ಮೂಡಿಸಿದ್ದರು ! ಅವರ ಕಾದಂಬರಿಗಳಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಕಾದಂಬರಿಗಳು ಚಲನ ಚಿತ್ರಗಳಾಗಿರುವುದು‌ ವಿಶೇಷ ಹಾಗೂ ಕನ್ನಡ ಸಿನಿಮಾಲೋಕದಲ್ಲಿ ಇದೊಂದು ವಿಶಿಷ್ಠವಾದ ದಾಖಲೆ ! ಇನ್ನೂ ವಿಶೇಷವೆಂದರೆ ಅವರ ಕಾದಂಬರಿ ಆಧಾರಿತ ಸಿನಿಮಾಗಳೆಲ್ಲವೂ ಬಹುತೇಕ ಯಶಸ್ವಿ ಚಿತ್ರಗಳಾಗಿರುವುದು. ಹೀಗೆ ವೇಣುರವರದ್ದು ಸಾಹಿತ್ಯ ಹಾಗೂ ಸಿನಿಮಾರಂಗಗಳೆಂಬ ಎರಡು ದೋಣಿಗಳಲ್ಲಿ ಯಶಸ್ವಿ ಪಯಣ ನೆಡೆಸಿದ ಹೆಗ್ಗಳಿಕೆ.

೧೯೮೨  ರಲ್ಲಿ ಬಿಡುಗಡೆಯಾದ ಪರಾಜಿತ ಚಿತ್ರ ಇವರ ಮೊದಲ ಕಾದಂಬರಿಯಾಧಾರಿತ ಚಿತ್ರವಾದರೂ ಅದಕ್ಕೂ ಎರಡು ವರ್ಷ ಮೊದಲೇ ಇವರ ಆರನೇ ಕಾದಂಬರಿ ದೊಡ್ಮನೆ ಎಸ್ಟೇಟ್ ಚಿತ್ರವಾಗಿ ಮೂಡಿಬಂದಿತ್ತು. ಬಿ.ಎಲ್ ವೇಣು ಎಂಬ ಕಥೆಗಾರ ಕರುನಾಡಿನಾದ್ಯಂತ ಜನಪ್ರಿಯವಾಗಿದ್ದು ತಮ್ಮ “ಪ್ರೇಮಪರ್ವ” ಕಾದಂಬರಿ ಸಿದ್ದಲಿಂಗಯ್ಯನವರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಬೆಳ್ಳಿಪರದೆಯ ಮೇಲೆ ಅದ್ಭುತವಾಗಿ ಮೂಡಿಬಂದಾಗ. ಈ ಚಿತ್ರ ಅಂದು ತಮಿಳಿನಲ್ಲೂ ‘ಪೂವಿಳಂಗು’ ಎಂಬ ಹೆಸರಿನಿಂದ ರಿಮೇಕ್ ಆಗಿ ಅದ್ಭುತ ಯಶಸ್ಸನ್ನು ಗಳಿಸಿತ್ತು. ಅಲ್ಲಿಂದ ತಿರುಗಿ ನೋಡದ ವೇಣುರವರು ಕನ್ನಡ ಸಿನಿಮಾ ರಂಗದಲ್ಲಿ ಅತ್ಯಂತ ಬೇಡಿಕೆಯ ಕಥೆಗಾರರಾಗಿ, ಸಂಭಾಷಣಾಕಾರರಾಗಿ ಹೊರಹೊಮ್ಮಿದರು‌. ಬೆತ್ತಲೆಸೇವೆ ( ಈ ಚಿತ್ರಕ್ಕಾಗಿ ವಜ್ರಮುನಿಗೆ ಶ್ರೇಷ್ಠ ಖಳನಟ ಪ್ರಶಸ್ತಿ ಬಂದಿತ್ತು ) , ನಾಗಾಭರಣರ ಪ್ರಾಯ ಪ್ರಾಯ ಪ್ರಾಯ, ಕಲ್ಲರಳಿ ಹೂವಾಗಿ, ಪುಟ್ಟಣ್ಣನವರ ‘ಅಮೃತಘಳಿಗೆ’ ಡಿ.ರಾಜೇಂದ್ರ ಬಾಬುರವರ ‘ಒಲವಿನ ಉಡುಗೊರೆ’ , ಭಾರ್ಗವ ರವರ “ಪ್ರೀತಿ‌ವಾತ್ಸಲ್ಯ” ಹಾಗೆಯೇ ವಿಷ್ಣುವರ್ಧನ್ ಅಭಿನಯದ , ಕೃಷ್ಣ ರುಕ್ಮಿಣಿ, ದೇವ, ಜನನಾಯಕ, ವೀರಪ್ಪನಾಯ್ಕ, ಒಂದಾಗಿ ಬಾಳು …..ಮುಂತಾದ ಹಿಟ್‌ ಚಿತ್ರಗಳೂ ಸೇರಿದಂತೆ ಸುಮಾರು ಅರವತ್ತೇಳು ಚಿತ್ರಗಳಿಗೆ ಕಥೆ, ಚಿತ್ರಕಥೆ ,ಸಂಭಾಷಣೆ ಕೊಟ್ಟು ಎರಡು ಬಾರಿ ಅತ್ಯುತ್ತಮ ಸಂಭಾಷಣೆಗಾಗಿ ( ಅಪರಂಜಿ ಹಾಗೂ ತಿಪ್ಪಜ್ಜಿ ಸರ್ಕಲ್ ) ರಾಜ್ಯ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ವಿಷ್ಣು, ಅಂಬರೀಶ್, ಅನಂತನಾಗ್ ರ ಹಲವು ಚಿತ್ರಗಳಿಗೆ ಹೆಚ್ಚಾಗಿ ಕೆಲಸ ಮಾಡಿದ ಶ್ರೇಯಸ್ಸು ವೇಣುರವರದು.



ಸದ್ಯಕ್ಕೆ ನಟ ದರ್ಶನ್ ಮದಕರಿನಾಯಕನಾಗಿ ಅಭಿನಯಿಸಲಿರುವ, ರಾಜೇಂದ್ರ ಸಿಂಗ್ ಬಾಬು‌ ನಿರ್ದೇಶನದ ತಮ್ಮದೇ ಆದ “ರಾಜಾ ವೀರ ಮದಕರಿ ನಾಯಕ‌ ” ಚಿತ್ರಕ್ಕಾಗಿ ಸಂಭಾಷಣೆ ರಚನೆಯಲ್ಲಿ ತೊಡಗಿಸಿಕೊಂಡಿರುವ ವೇಣುರವರಿಗೆ ಇದು ತಮ್ಮ ಬದುಕಿನ ಮಹತ್ವಾಕಾಂಕ್ಷೆಯ ಚಿತ್ರವಾಗಲಿದೆ . ಕನ್ನಡದ‌ ಬಹುತೇಕ ಎಲ್ಲಾ ಖ್ಯಾತ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ವೇಣುರವರದ್ದು ಚಿತ್ರರಂಗದಲ್ಲಿ ಎಲ್ಲರಿಗೂ ಇಷ್ಟವಾಗಿದ್ದ ವ್ಯಕ್ತಿತ್ವ …ಏಕೆಂದರೆ ಅವರದ್ದು ಖಾಲಿ ಡಬ್ಬದಂತೆ ಸದ್ದು ಮಾಡುವ ಒಣ ಯಾನವಲ್ಲ…. ಬದಲಿಗೆ ಸಾಧನೆಗಾಗಿ ಕಷ್ಟಪಡುವ ಜಾಯಮಾನ !
ವೇಣುರವರ ಅಭಿಜಾತ ಪ್ರತಿಭೆಗೆ ಅವರು ಬರೆದಿರುವ ಐತಿಹಾಸಿಕ ಕಾದಂಬರಿಗಳು ಕನ್ನಡಿ ಹಿಡಿಯುತ್ತವೆ. ಗಂಡುಗಲಿ ಮದಕರಿ ನಾಯಕ, ಮತ್ತಿ ತಿಮ್ಮಣ್ಣ ನಾಯಕ, ಓಬಳವ್ವ ನಾಗತಿ, ಚಿತ್ರದುರ್ಗದ ಪಾಳೆಯಗಾರರ ಕಥೆಗಳು, ವೀರ ವನಿತೆ ಓಬವ್ವ , ಹೆಬ್ಬುಲಿ ಹಿರೇ ಮದಕರಿನಾಯಕ…. ಕಾದಂಬರಿಗಳಲ್ಲಿ ದುರ್ಗದ ಮಣ್ಣಿನ ಸಾಹಿತ್ಯದ ಲಾಲಿತ್ಯ, ಸೊಗಡು , ದುರ್ಗದ ಐಸಿರಿ ಪುಟಪುಟದಲ್ಲೂ ಮೈದಾಳಿವೆ. ಚಿತ್ರದುರ್ಗದ ಹಿರಿಮೆ ಗರಿಮೆಗಳನ್ನು , ಬುಡಕಟ್ಟು ಸಂಸ್ಕೃತಿಯನ್ನು, ಪರಿಸರವನ್ನೂ ತಮ್ಮ ಬರಹಗಳ ಮೂಲಕ ಅದ್ಭುತವಾಗಿ ಕಟ್ಟಿಕೊಟ್ಟ ವೇಣುರವರ ಕೊಡುಗೆ ಈ ಮಣ್ಣಿನ ಮತ್ತೊಬ್ಬ ಹಿರಿಯ ಸಾಹಿತಿ ಮಾನ್ಯ ತರಾಸು ರವರಂತೆಯೇ ಅಪರೂಪವಾದದ್ದು, ಅಮೂಲ್ಯವಾದದ್ದು ಹಾಗೂ ಅಜರಾಮರವಾದದ್ದು..!

2013 ರಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ವೇಣುರವರ ಸಾಧನೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅರಸಿ‌ ಬಂದಿವೆ. ೨೦೦೫ ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸಂಭಾಷಣೆಗಾಗಿ ಎರಡು ಬಾರಿ ಚಲನಚಿತ್ರ ರಾಜ್ಯ ಪ್ರಶಸ್ತಿ, ಕನ್ನಡ ಚಲನಚಿತ್ರ ಅಕಾಡೆಮಿಯ ಜೀವಮಾನದ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿಯ ಗೌರವ ಪುರಸ್ಕಾರ, ರನ್ನ ಸಾಹಿತ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಅನಕೃ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಬರಗೂರು ಪ್ರಶಸ್ತಿ, ಸರ್.ಎಂ.ವಿ ಪ್ರಶಸ್ತಿ, ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ದುರ್ಗದ ನಗರಸಭೆಯಿಂದ ಪೌರ ಸನ್ಮಾನ…. ಇತ್ಯಾದಿಗಳೊಂದಿಗೆ ತಮ್ಮದೇ ಆದ “ಕಲ್ಲರಳಿ ಹೂವಾಗಿ” ಚಿತ್ರಕ್ಕೆ ರಾಷ್ಟ್ರೀಯ ಭಾವೈಕ್ಯತೆ ಸಾರುವ ಚಿತ್ರವೆಂದು ರಾಷ್ಟ್ರಪ್ರಶಸ್ತಿ ಸಹಾ ಲಭಿಸಿರುವುದು ಅವರ ಕಥನಾ ಶಕ್ತಿಗೆ ಸಂದ ಅತ್ಯುನ್ನತ ಪುರಸ್ಕಾರ ಹಾಗೂ ಸಹೃದಯ ಕನ್ನಡಿಗರ ಪಾಲಿಗೆ ಹೆಮ್ಮೆಯ ವಿಚಾರ.

ಸಾಮಾಜಿಕ ಅನಿಷ್ಟಗಳು, ಅಸಮಾನತೆ, ಜಾತಿ ಪದ್ದತಿ, ಖಾವಿಗಳ ಡಂಭಾಚಾರ, ಮೂಢನಂಬಿಕೆ ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ಧ ಗಟ್ಟಿದನಿಯಲ್ಲಿ ಮಾತನಾಡುವ ಗುಂಡಿಗೆಯನ್ನು ಈಗಲೂ ಕಾಪಿಟ್ಟುಕೊಂಡೇ ಬಂದಿರುವ ವೇಣುರವರು ಅನ್ಯಾಯದ ವಿರುದ್ಧ ಸದಾ ಬಂಡಾಯವೇಳುವ ತಮ್ಮ ಗುಣವನ್ನು ತಮ್ಮ ಸಾಹಿತ್ಯ ಹಾಗೂ ಬರಹಗಳಲ್ಲೂ ಸಶಕ್ತವಾಗಿ ಧ್ವನಿಸುತ್ತಲೇ ಬಂದವರು. ಮಹಾನಗರದ ಸ್ಟಾರ್ ಹೋಟೆಲ್ ಗಳಲ್ಲಿ ಕುಳಿತು ಸಾಹಿತ್ಯ- ಸಂಭಾಷಣೆ ಬರೆಯುವುದಕ್ಕಿಂತ ದುರ್ಗದ ಕೆಳಗೋಟೆಯ ತಮ್ಮ ಮನೆಯಲ್ಲಿ ಕುಳಿತು ಬರೆಯುವುದೇ ವೇಣುರವರಿಗೆ ಹೆಚ್ಚಿನ ಆನಂದ ನೀಡುವ ಸಂಗತಿ. ಇದನ್ನು ಅಂದಿನಿಂದ ಇಂದಿನವರೆಗೂ ಬದ್ದತೆಯಿಂದ ಪಾಲಿಸಿಕೊಂಡು ಬಂದಿದ್ದಾರೆ. ಅಪಘಾತದಲ್ಲಿ ತಮ್ಮ ಬಲಗೈಗೆ ತೀವ್ರ ಪೆಟ್ಟಾಗಿ ಬರೆಯುವುದಕ್ಕೆ ಅಶಕ್ತರಾಗಿದ್ದ ಸಂಧರ್ಭದಲ್ಲೂ ಅನ್ಯರನ್ನು ಆಶ್ರಯಿಸದೇ ಎಡಗೈನಲ್ಲಿ ಬರೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಸ್ವಾಭಿಮಾನಿ ಛಲಗಾರ.

ಡಾ. ಬಿ.ಎಲ್.ವೇಣುರವರ ಸಾಹಿತ್ಯ ಕುರಿತಂತೆ ಪ್ರಬಂಧ ಮಂಡಿಸಿದ್ದ ಏಳು ಮಂದಿ ಪಿ‌.ಹೆಚ್.ಡಿ. ಕೂಡಾ ಗಳಿಸಿದ್ದಾರೆ. ಅನೇಕರ ಒತ್ತಾಯಕ್ಕೆ ಮಣಿದು ತಮ್ಮ ಆತ್ಮಕಥೆಯನ್ನು ” ಲೋಕದಲ್ಲಿ ಜನಿಸಿದಾ ಬಳಿಕ ” ದಲ್ಲಿ ಅದ್ಭುತವಾಗಿ ಅಚ್ಚೊತ್ತಿದ್ದಾರೆ .



** ಮರೆಯುವ ಮುನ್ನ **

ಬದುಕಿನುದ್ದಕ್ಕೂ ಬರಹದಲ್ಲಿ ತಾದಾತ್ಮ್ಯತೆಯಿಂದ ಕೃಷಿ ಮಾಡಿ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಪರಿಪಕ್ವತೆಯನ್ನು ಜಿದ್ದು ಹಿಡಿದು ಸಾಧಿಸಿ ತಮ್ಮ ಎಪ್ಪತ್ತಾರನೇ ವಯಸ್ಸಿನಲ್ಲೂ ಲೇಖನಿಗೆ ವಿಶ್ರಾಂತಿ ಕೊಡದೇ ಕಾಯಕಯೋಗಿಯಂತೆ ಬರಹಗಳ ಧ್ಯಾನದಲ್ಲಿ ತಪಸ್ವಿಯಾಗಿರುವ‌ ಡಾ. ಬಿ.ಎಲ್ ವೇಣುರವರನ್ನು ದುರ್ಗದ ಸಾಂಸ್ಕೃತಿಕ ಸಂಪತ್ತು, ಚಿನ್ಮೂಲಾದ್ರಿ ಸಿರಿ ಎನ್ನುವುದರಲ್ಲಿ ನೈಜಾರ್ಥವಿದೆ. ಇಷ್ಟೆಲ್ಲಾ ಇದ್ದರೂ ಅತ್ಯಂತ ನೋವಿನ ಸಂಗತಿಯೆಂದರೆ ವೇಣುರವರ ಸಾಹಿತ್ಯ ಸಾಧನೆಗೆ ಸಿಗಬೇಕಾದ ತಕ್ಕ ಮನ್ನಣೆ , ಅರ್ಹ ಪುರಸ್ಕಾರ, ಪ್ರಚಾರ ಸಿಗದಿರುವುದು!
ಜನಪ್ರಿಯವಾದ ಒಂದೆರೆಡು ಕೃತಿಗಳು ಅಥವಾ ಎರಡು ಸಿನಿಮಾಗಳಲ್ಲಿ ಕೆಲಸ ಮಾಡಿದಾಕ್ಷಣ ಅವನನ್ನು ರಾತ್ರೋರಾತ್ರಿ ಸೆಲೆಬ್ರಿಟಿ ಮಾಡುವ‌ ನಮ್ಮ ಸಮಾಜ ಹಾಗೂ ಮಾಧ್ಯಮಗಳು , ವೇಣುರವರ ಸಾಹಿತ್ಯಿಕ ಹಾಗೂ ಸಾಂಸ್ಕ್ರತಿಕ ಕೊಡುಗೆಯನ್ನು ಸರಿಯಾಗಿ ಗುರುತಿಸಿಲ್ಲವೆಂದೇ ಅನಿಸುತ್ತದೆ. ಬಹುಶಃ ವೇಣುರವರು ಈ ವಿಚಾರದಲ್ಲಿ ತಮ್ಮ ಬರಹದ ಮೂಲಕ ಸಾಹಿತ್ಯ ಲೋಕಕ್ಕೆ ಕೊಟ್ಟ ಅದ್ಭುತ ಕೊಡುಗೆಯ ಸರಿಸಮಕ್ಕೆ ತಮ್ಮ ವೈಯುಕ್ತಿಕ ಬದುಕಿನಲ್ಲಿ ಬಿಲ್ಡಪ್ ಕೊಟ್ಟಿಲ್ಲದಿರುವುದು ಅಥವಾ ಎಲ್ಲರಿಗೂ ಸುಲಭವಾಗಿ Approachable ಆಗಿರುವುದು , ಸೆಲೆಬ್ರಿಟಿಯ ಹೊರಪ್ರದರ್ಶನದ ನಖರಾಗಳನ್ನು ಮಾಡದಿರುವುದು… ಇವೆಲ್ಲಕ್ಕೂ ಕಾರಣವಿದ್ದೀತು.!

ಬಿಗ್ ಬಾಸ್ ಎಂಬ ಕೆಲಸಕ್ಕೆ ಬಾರದ ಯಾವುದೋ ಒಂದು ತಗಡು ಕಾರ್ಯಕ್ರಮದಲ್ಲಿ ಹೆಚ್ಚು ಹುಚ್ಚಾಟ ಆಡಿ ವಿನ್ನರ್ ಆದವರನ್ನು ಕಾರ್ಗಿಲ್ ವೀರರಂತೆ ಬಿಂಬಿಸುವ ಬೌದ್ದಿಕ ದಾರಿದ್ರ್ಯ ಹೊಂದಿದ ಮನಸುಗಳಿಗೆ, ಬೊಗಳೆ ಸಾಹಿತ್ಯ ಬರೆದು, ರೀಲು ಸುತ್ತುತ್ತಾ ಅಕ್ಷರಗಳ ಮೇಲೆ ಅತ್ಯಾಚಾರವೆಸಗುವವರನ್ನು ಅಕ್ಷರಬ್ರಹ್ಮನೆಂದು ಬಿಂಬಿಸಿ ಅನೈತಿಕ ಪ್ರಚಾರ ಕೊಡುವ ನೈತಿಕ ದಿವಾಳಿತನದ ಗಿರಾಕಿಗಳಿಗೆ, ಕನ್ನಡ ಸಾರಸ್ವತ ಲೋಕಕ್ಕೆ, ಚಿತ್ರರಂಗಕ್ಕೆ, ಸಾಂಸ್ಕ್ರತಿಕ ರಂಗಕ್ಕೆ ಗುಣಮಟ್ಟದ ಬದ್ದತೆಯ ಸೇವೆ ಸಲ್ಲಿಸುತ್ತಿರುವ ಹಿರಿಯ ಕಾದಂಬರಿಕಾರ ವೇಣುರಂಥವರು ಮಾತ್ರ ಕಣ್ಣಿಗೆ ಬೀಳುವುದೇ ಇಲ್ಲ…! ಬಹುಶಃ ಜಾತಿಯೆನ್ನುವ ಹೊಲಸು ವಿಚಾರಗಳು, ಸಾಹಿತ್ಯ ಮಡಿವಂತಿಕೆಯ ಬಿಲ್ಡಪ್ ಗಳು ಇಲ್ಲಿಯೂ ವ್ಯವಸ್ಥಿತವಾಗಿ ಕೆಲಸ ಮಾಡುವುದರಿಂದಲೇ ವೇಣುರವರು ಅಬ್ಬರದ ಪ್ರಚಾರದ ಪರಿಧಿಯೊಳಗೆ ಪ್ರವೇಶ ಪಡೆಯಲಾರರು… ಆದರೆ‌ ನೆನಪಿರಲಿ… ಸಹೃದಯ ಕನ್ನಡಿಗರ ಪ್ರೀತಿ ವಿಶ್ವಾಸವೆಂಬ ಸರೋವರದಲ್ಲಿ ಅವರು ಈಗಾಗಲೇ ‌ಮಿಂದು ಧನ್ಯರಾಗಿದ್ದಾರೆ. ಕನ್ನಡಿಗರು ಅವರಿಗೆಂದೇ ತಮ್ಮ ಹೃದಯಗಳಲ್ಲಿ ಸ್ಥಾನ ಕೊಟ್ಟಿದ್ದಾರೆ. ಕನ್ನಡ ಸಾಹಿತ್ಯ ಪ್ರಿಯರ ಪ್ರೀತಿ, ದುರ್ಗದ ಮಣ್ಣಿನ ವಾಂಛಲ್ಯ, ಸ್ವತಂತ್ರವಾಗಿ ಹಕ್ಕಿಯಂತೆ ತನ್ನ ಲೋಕದಲ್ಲಿ ವಿಹರಿಸುವ ಸೌಭಾಗ್ಯ… ಇವುಗಳ ಮುಂದೆ ಮತ್ತಾವುದೇ ಪುರಸ್ಕಾರವೂ ಹೆಚ್ಚು ಮೌಲ್ಯಯುತವಾದದ್ದಲ್ಲ !

ಎಪ್ಪತ್ತಾರರಲ್ಲೂ ಇಪ್ಪತ್ತಾರರ ಉತ್ಸಾಹ ತುಂಬಿಕೊಂಡು‌ ಸಾಹಿತ್ಯ ಪ್ರೀತಿಯನ್ನು ಅನುಭವಿಸುತ್ತಾ ಇಂದಿಗೂ ಸಮಾಜಮುಖಿಯಾಗಿ, ‘ದುರ್ಗಾಯಣ’ ದಲ್ಲಿ ಸಕ್ರಿಯರಾಗಿರುವ ಡಾ. ಬಿ.ಎಲ್.ವೇಣುರವರಿಗೆ , ದುರ್ಗದ ತಾಯಿ ಉತ್ಸವಾಂಬೆ ಇನ್ನೂ ಹೆಚ್ಚಿನ ಆರೋಗ್ಯ ಕೊಟ್ಟು ಅವರಿಂದ ಮತ್ತಷ್ಟು ಶಕ್ತಯುತ ಬರಹಗಳು ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಪಣೆಯಾಗುವಂತೆ ಆಶೀರ್ವದಿಸಲಿ…


  • ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW