ನಾ ಕಂಡಂತೆ ಜೆ ಪಿಯವರು ತುಂಬಾ ಆತ್ಮೀಯತೆಯಿಂದ ಸತ್ಯಾನ್ವೇಷಣೆಯ ಮಹಾನ್ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ (ಜೆ ಪಿ ). ಕನ್ನಡ ಅನುವಾದಕ್ಕೆ ಜೆ ಪಿಯವರು ತಂದ ಕೊಡುಗೆ ಅಪಾರ. ಅವರ ಕುರಿತು ಅವರ ವಿದ್ಯಾರ್ಥಿನಿ ಡಾ. ಕೃಷ್ಣವೇಣಿ. ಆರ್. ಗೌಡ ಅವರು ಬರೆದ ಒಂದು ಪರಿಚಯವನ್ನು ತಪ್ಪದೆ ಮುಂದೆ ಓದಿ…
2004, 2005 ರಲ್ಲಿ ಆಗಿನ್ನೂ ನಾನು ಸಂಶೋಧನಾ ವಿದ್ಯಾರ್ಥಿ. ನನಗೆ ಈಗಲೂ ನೆನಪಿದೆ ಅವರು ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದಾಗ ಜಾನಪದ ಅಧ್ಯಯನ ವಿಭಾಗದಲ್ಲಿ ನಮಗೆ 40 ನಿಮಿಷಗಳ ತರಗತಿ ಯಲ್ಲಿ ಸಂಶೋಧನೆ ಕ್ಲಾಸ್ ತೆಗೆದುಕೊಂಡಿದ್ದರು.
ಆವತ್ತು ಕೇಳಿಸಿಕೊಂಡ ಪಾಠ ನನ್ನ ಕಿವಿಯಲ್ಲಿ ಇಂದಿಗೂ ಗುಯ್ ಗುಡುತ್ತದೆ. ಬಾವಿಯಲ್ಲಿ ಒಂದು ಕಲ್ಲನ್ನು ಎಸೆದಾಗ ಅದು ಸುರುಳಿ ಸುತ್ತುತ್ತ ಮತ್ತದೇ ಸುರುಳಿಯತ್ತ ಬಂದು ನಿಲ್ಲುವುದು ಒಂದು ಜ್ಞಾನ ಎಂದಿದ್ದರು. ಅಂದಿನಿಂದ ಇಂದಿನವರೆಗೂ ನಾನವರ ಪುಸ್ತಕಗಳನ್ನು ಓದುತ್ತಾ ಬಂದೆ. ಭಾಷ ಸಾಹಿತ್ಯ ಎನ್ನುವುದು ಎಲ್ಲರ ಮನ ಮುಟ್ಟುವುದಿಲ್ಲ, ಇವರು ಅನುವಾದ ಮಾಡಿರುವ ತೆಲುಗು ಮೂಲದ “ಲಾಲ್ ಬನೋ ಗುಲಾಮಿ ಛೋಡೋ ಬೋಲೋ ವಂದೇ ಮಾತರಂ “ಈ ಪುಸ್ತಕ ನನ್ನ ಮನಸ್ಸಿಗೆ ಬಹಳ ಹತ್ತಿರವಾಯಿತು. ಇದು ನಾ ಓದಿದ ಇವರ ಮೊದಲ ಹೊತ್ತಿಗೆ. ಓದುವ ಗೀಳನ್ನು ಹೆಚ್ಚಿಸಿತು.

ಕನ್ನಡ ಅನುವಾದಕ್ಕೆ ಜೆ ಪಿಯವರು ತಂದ ಕೊಡುಗೆ ಅಪಾರ. ಬರವಣಿಗೆ ಭಾಷೆಯ ಹಿಡಿತ ಸಾಹಿತ್ಯದ ಮೇರುಗೈ ಎಲ್ಲ ಈ ಅನುವಾದದಲ್ಲಿ ಅಡಕವಾಗಿದ್ದವು. ಡಾ.ಬಂಜಗೆರೆಯವರನ್ನು ಗಮನಿಸುತ್ತಿದ್ದಂತೆ ಅವರು ಮಾತನಾಡುವ ಶೈಲಿ, ಬರೆಯುವ ಚೌಕಟ್ಟು, ವಿದ್ಯಾರ್ಥಿಗಳೊಡನೆ ಅವರ ಒಡನಾಟ ಸ್ನೇಹತ್ವದ ಕಿರುನಗೆ ಅವರು ಓದುವ ಕೌಶಲ್ಯತೆ, ಪ್ರೀತಿಯ ಮಾತುಗಳು ಎಲ್ಲವೂ ಮೆಚ್ಚುಗೆಯಾಗುತ್ತಿದ್ದವು. ಇಂತ ಮಹಾನ್ ಚಿಂತನೆಯ ವ್ಯಕ್ತಿಯನ್ನು ದೈವ.
ಪ್ರಕೃತಿ ನನಗೆ ಪರಿಚಯ ಮಾಡಿಸಿತಲ್ಲ ಎನ್ನುವ ಖುಷಿಯನ್ನು ನಾನು ಈ ಲೇಖನದಲ್ಲಿ ಹಂಚಿಕೊಳ್ಳಲು ಇಚ್ಚಿಸುವೆ. ಇವರು ನಮಗೆ ದಾರಿ ತೋರಿದ ಪ್ರತಿ ಹಾದಿ ಸಾಮಾಜಿಕವಾಗಿ ಪರಿವರ್ತನೆಯಾಗಲು ಸಹಾಯ ಮಾಡಿತು. ನಾನು ಕಾಲೇಜಿನ ವಿದ್ಯಾರ್ಥಿ ದೆಸೆಯಿಂದಲೂ ಯಾವ SFI, DYFI ಇಂತದರಲ್ಲಿ ಭಾಗಿಯಾದವಳಲ್ಲ. ಆದರೆ ಕನ್ನಡ ವಿ. ವಿ ಈ ವ್ಯಕ್ತಿಯ ಪರಿಚಯವನ್ನು ಮಾಡಿಕೊಟ್ಟು ಸಾಮಾಜಿಕ ಪ್ರಜ್ಞೆ ಅರಿಯುವುದನ್ನು ಕಲಿಸಿತು. ಡಾ. ಜೆಪಿಯವರು ಸದಾ ಹೋರಾಟ, ಸಮಾಜದ ಚಿಂತನೆ, ವಿಚಾರ ವೈಶಾಲ್ಯಾತೆ, ಆಲೋಚನಾ ಪ್ರಜ್ಞೆ, ಜಾತ್ಯತೀತದ ನಿಲುವನ್ನು ಹೆಕ್ಕಿ ತೆಗೆದವರು. ಸತತವಾಗಿ 40 ವರ್ಷಗಳಿಂದ ಈಗಿನ ತನಕ ಹೋರಾಟದ ಹಾದಿಯಲ್ಲಿದ್ದರು ಎಲ್ಲಾರೊಡನೆ ಒಂದಾಗಿ ಬೆರೆತು ಮಾತಾಡುವ ಪರಿ ನನಗೆ ತುಂಬಾ ಹಿಡಿಸಿತು. Dignified ಆಗಿ ವರ್ತಿಸುವ ಸ್ವಾರ್ಥ ಜಗದೊಳು ನಿಸ್ವಾರ್ಥ ಮತ್ತು ಸಹಾಯ ಗುಣವುಳ್ಳ ವ್ಯಕ್ತಿ.

ಡಾ. ಜೆಪಿ. ಕಳೆದ ಕಾಲದ ಪ್ರೇಯಸಿಯರು, ಉಲಿಯ ಉಯ್ಯಾಲೆ, ಬೇಗಂಪುರ, ಪಾಪ ನಿವೇದನೆ, ಲಾಲ್ ಬನೋ ಗುಲಾಮಿ ಛೋಡೋ ಬೋಲೋ ವಂದೇ ಮಾತರಂ, ಬಾಗ್ ಬಾಗ್ಬಹಾದೂರ ನ ಸಾವು, ಕೆಲವು ಅನುವಾದಿತ ಕಾದಂಬರಿಗಳು ಮಂಟೇಸ್ವಾಮಿಯ ಬಗ್ಗೆ ವಿಮರ್ಶೆ ಲೇಖನಗಳು ಹೀಗೆ ಮುಂತಾದವುಗಳನ್ನು ನೋಡಿದ್ದೇನೆ ಮತ್ತು ಓದಿದ್ದೇನೆ. ಕನ್ನಡ ಮತ್ತು ರಾಷ್ಟ್ರೀಯತೆಯಲ್ಲಿ ಕನ್ನಡ ವಿ. ವಿ ಯಿಂದ ಡಿಲಿಟ್ ಪಡೆದು ವಿದ್ಯಾರ್ಥಿಗಳ ಮನ ಗೆದ್ದ ವೈಚಾರಿಕ ಚಿನ್ಮಯಿ ಎಂದರು ತಪ್ಪಾಗಲಾರದು.
ಅವರು ಮೈಸೂರು ವಿವಿ ಯಲ್ಲಿ ಕುವೆಂಪು ರವರನ್ನು ಕಂಡಿದ್ದರಂತೆ, ನಾವು ವಿದ್ಯಾರ್ಥಿಯಾಗಿದ್ದಾಗ ನಮಗೆ ಕಾಣಿಸಿದ ಆಧುನಿಕ ಕುವೆಂಪು. ಇಂದು ಅವರು ಮಹಾನ್ ಚಿಂತನೆಯ ಮಾರ್ಗದರ್ಶಕರಾದರೂ ಈವತ್ತಿಗೂ ಅವರ ಸರಳ ಮನೋವೈಕಲ್ಯತೆ ನಾವೆಲ್ಲರೂ ಮೆಚ್ಚುವ ವಿಷಯ. “ಬಕೆಟ್ ರಾಜಕಾರಣದ ಯುಗದಲ್ಲಿ ಯಾವ ರಾಜಕೀಯ ಗೋಜಿಲ್ಲದೆ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದು, ಇಂಟರ್ನೆಟ್, ಮೊಬೈಲ್ ಯುಗದೊಳು ಪಠ್ಯ ಪುಸ್ತಕಗಳನ್ನು ತೆಗೆದು ಓದಿದಾಗ ಅದರೊಳು ಸಿಗುವ ಮಹತ್ಕಾರ್ಯದ ವಿಚಾರದ ಬಗ್ಗೆ ಪ್ರಚಾರ ಮಾಡಿದಾಗ ನನಗೆ ತುಂಬಾ ಸಂತೋಷವಾಯಿತು. ಇನ್ನೊಂದು ವಿಚಾರ ನಾನು ಇಲ್ಲಿ ಹಂಚಿ ಕೊಳ್ಳಲು ಇಚ್ಚಿಸುವೆ, ಸ್ನೇಹತ್ವವನ್ನು ಹಚ್ಚಿಕೊಳ್ಳುವ ಪರಿ ಸಂಪಾದಿಸಿದ ಸ್ನೇಹವನ್ನು ಕೊನೆತನಕ ಹೇಗೆ ಉಳಿಸಿಕೊಳ್ಳಬೇಕು ನಾನು ಇವರಿಂದ ಕಲಿತ ಪಾಠ.. ಇದು ನನ್ನ ಅನುಭವದ ನುಡಿ.

ಕನ್ನಡ ನಾಡು ನಿಜಕ್ಕೂ ಸಂಪತ್ಭರಿತವಾದದ್ದು, ಹಲವು ಕವಿವರ್ಯರನ್ನು, ವಿಮರ್ಶಕರನ್ನು, ಕಲಾವಿದರನ್ನು, ಕಲೆ ಸಾಹಿತ್ಯ, ಸಂಸ್ಕೃತಿ ಗೆ ಖ್ಯಾತವಾಗಿರುವ ಉಧಾರೀಕೃತ ನಾಡಿನಲ್ಲಿ ಉಧಾರ ಮನೋಭಾವನೆಯುಳ್ಳ ಜ್ಯಾತ್ಯತೀತ ಮನಸುಳ್ಳ ಮಾನವನನ್ನು ನಾನು ಹತ್ತಿರದಿಂದ ಕಂಡ ಶ್ರೇಷ್ಠ ಜ್ಞಾನಿ
ಡಾಕ್ಟರ್. ಬಂಜಗೆರೆ ಜಯ ಪ್ರಕಾಶ್. ಉತ್ತಮ ಸ್ನೇಹ ಜೀವಿ.
- ಡಾ. ಕೃಷ್ಣವೇಣಿ. ಆರ್. ಗೌಡ
